ಈಗ ಎಲ್ಲರ ಬಾಯಿಯಲ್ಲೂ ಒಂದೇ ಮಾತು, ಟಿಕೆಟ್ ಸಿಕ್ತಾ? ರಾಜಕಾರಣಿಗೆ ಚುನಾವಣೆಯಲ್ಲಿ ಸ್ಪರ್ಥಿಸಲು ಟಿಕೆಟ್ ಚಿಂತೆಯಾದರೆ, ಕ್ರಿಕೆಟ್ ಪ್ರೇಮಿಗಳಿಗೆ, IPL ಟಿಕೆಟ್ ಚಿಂತೆ. ಕರೋನ ಮಹಾಮಾರಿ ಎಲ್ಲವೂ ಕಳೆದು, ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ರೋಚಕ ಸೆಣಸಾಟದ ಇಂಡಿಯನ್ ಪ್ರೀಮಿಯಂ ಲೀಗ್ ಈ ಬಾರೀ ಆಯಾಯಾ ತಂಡದ ತವರು ಮೈದಾನಗಳಲ್ಲಿಯೇ ಮಾರ್ಚ್ ನಿಂದ ಮೇ ವರೆಗೂ ಸುಮಾರು ಒಂದೂವರೆ ತಿಂಗಳಗಳ ಕಾಲ ಐಪಿಎಲ್ ಜ್ವರ ದೇಶದ್ಯಂತ ಶುರುವಾಗಿದೆ.
ಪ್ರತೀ ಬಾರಿ ಈ ಸಮಯದಲ್ಲಿ ಪಂದ್ಯಗಳ ಟಿಕೆಟ್ ಸಿಕ್ಕವರು ಹೆಮ್ಮೆಯಿಂದ ಬೀಗುತ್ತಿದ್ದರೆ, ಟಿಕೆಟ್ ಸಿಗದಿದ್ದವರು ಟಿಕೆಟ್ ಗಳಿಗಾಗಿ ಪರೆದಾಡುತ್ತಿದ್ದ ಪರಿ ಕಣ್ಣ ಮುಂದೆ ಬರುತ್ತಿದೆ. ಇದೇ ರೀತಿಯಾಗಿ ಟಿಕೆಟ್ಗಾಗಿ ಪರದಾಡಿ ಸಿಕ್ಕ ಟಿಕೆಟ್ ಕೈ ತಪ್ಪಿ ಹೋಗಿ ಮತ್ತೆ ಫೀನಿಕ್ಸ್ ನಂತೆ ಸಿಕ್ಕಿ, ಮತ್ತೆ ಗೋಜಲಿಗೆ ಸಿಕ್ಕಿಕೊಂಡ ನಮ್ಮ ರೋಚಕತೆಯೇ ಇಂದಿನ ಕಥಾವಸ್ತು.
ಐದು ವರ್ಷದ ಹಿಂದೆ ಅಂದರೆ ಏಪ್ರಿಲ್ 25, 2018 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಮತ್ತು CSK ತಂಡಗಳ ನಡುವಿನ ಪಂದ್ಯ ರಾತ್ರಿ 8.00 ಘಂಟೆಗೆ ನಿಗಧಿಯಾಗಿತ್ತು. ಕರ್ನಾಟಕ ಮತ್ತು ತಮಿಳುನಾಡು ಪಂದ್ಯವೆಂದರೆ, ಭಾರತ ಮತ್ತು ಪಾಕೀಸ್ಥಾನಗಳ ನಡುವಿನ ಸಾಂಪ್ರದಾಯಕ ಎದುರಾಳಿಗಳ ಹಾಗೆ ಕಾದಾಡುವ ಹಾಗೆ ಎಂಬುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪ್ರತೀತಿ. ಕರ್ನಾಟಕ ಮತ್ತು ತಮಿಳುನಾಡಿನ ಯಾವುದೇ ಆಟಗಾರರು ತಂಡದಲ್ಲಿ ಇಲ್ಲದಿದ್ದರೂ ಬೆಂಗಳೂರು ಮತ್ತು ಚೆನ್ನೈ ಎಂಬ ಹೆಸರಿನಿಂದಲೇ ಜಿದ್ದಾ ಜಿದ್ದಿಯ ಪಂದ್ಯಗಳು ನಡೆಯುತ್ತವೆ. ಪಂದ್ಯದ ದಿನದ ವರೆಗೂ ಎಷ್ಟೇ ಪ್ರಯತ್ನಿಸಿದರೂ ನಮಗೆ ಟಿಕೆಟ್ ಸಿಕ್ಕಿರಲಿಲ್ಲ. ಬ್ಲಾಕ್ ಟಿಕೆಟ್ ಮೊತ್ತ ತುಂಬಾ ಹೆಚ್ಚಾಗಿದ್ದರಿಂದ ಕೊಳ್ಳಲು ಮನಸ್ಸಾಗಿರಲಿಲ್ಲ. ಕೆಲವೊಂದು ಸ್ನೇಹಿತರಿಗೆ ಹೇಳಿ ಕಡೆಯ ಕ್ಷಣದವರೆಗೂ ಜಾತಕ ಪಕ್ಷಿಯಂತೆ ಕಾಯುವುದು. ಸಿಕ್ಕರೆ ಮೈದಾನದಲ್ಲಿ ಪಂದ್ಯ ಇಲ್ಲದಿದ್ದರೆ ಹೇಗೂ ಮನೆಯಲ್ಲಿಯೇ ಎಲ್ಲರೊಟ್ಟಿಗೆ ಟಿವಿಯಲ್ಲೇ ವೀಕ್ಷಿಸುವುದೆಂದು ತೀರ್ಮಾನಕ್ಕೆ ಬಂದಿದ್ದೆವು.
ನಮ್ಮ ಮನೆಯಲ್ಲಿ ಮೊದಲ ಪ್ರಾಶಸ್ತ್ಯ ಕನ್ನಡ ಭಾಷೆಗಾದರೆ ಎರಡನೇ ಪ್ರಾಶಸ್ತ್ಯ ಕ್ರಿಕೆಟ್ ಆಟಕ್ಕೆ. ಮನೆಯಲ್ಲಿ ಎಲ್ಲರೂ ಕ್ರಿಕೆಟ್ ಪ್ರೇಮಿಗಳೇ. ಅಗಲಿದ ನಮ್ಮ ತಂದೆ ತಾಯಿ ನಾನು ನನ್ನ ಮಡದಿ ಮತ್ತು ನನ್ನ ಮಗ RCB ಆಭಿಮಾನಿಗಳಾದರೆ ನನ್ನ ಮಗಳು ದೋನಿ ಮತ್ತು ಸುರೇಶ್ ರೈನಾರ ಆಭಿಮಾನದ ಕುರುಹಾಗಿ CSK ತಂಡದ ಪರಮ ಆಭಿಮಾನಿ. RCB ಮತ್ತು CSK ತಂಡಗಳ ನಡುವಿನ ಪಂದ್ಯವೆಂದರೆ ನಮ್ಮ ಮನೆಯಲ್ಲಿ ಅಕ್ಷರಶಃ ಜಿದ್ದಾ ಜಿದ್ದಿ ಕಾದಾಟ. ಈ ನಾಲ್ಕೂ ಜನರನ್ನು ಎದಿರು ಹಾಕಿಕೊಂಡು ಸಮರ್ಥವಾಗಿಯೇ CSK ತಂಡವನ್ನು ಸಂಭಾಳಿಸುವಷ್ಟು ಗಟ್ಟಿಗಿತ್ತಿ ನನ್ನ ಮಗಳು. ಸಂಜೆ ಐದು ಗಂಟೆಯವರೆಗೂ ಟಿಕೆಟ್ ಸಿಗುವ ಲಕ್ಷಣ ಕಾಣಲಿಲ್ಲವಾದ್ದರಿಂದ ಮನೆಯಲ್ಲಿಯೇ ಕುಳಿತು ಪಂದ್ಯವನ್ನು ವೀಕ್ಷಿಸಲು ಮಾನಸಿಕವಾಗಿ ಸಿದ್ಧರಾಗಿದ್ದೆವು. ಸಂಜೆ ಸುಮಾರು ಆರು ಗಂಟೆಗೆ ನಮ್ಮ ಸ್ನೇಹಿತ ಸುಧಾಕರ್ ಕರೆ ಮಾಡಿ ಸರ್ ಶಾಸಕರ ಕೋಟಾದ ಅಡಿಯಲ್ಲಿ ಎರಡು ವಿವಿಐಪಿ ಪಾಸ್ ಸಿಕ್ಕಿದೆ. ಮಾಮೂಲಿ ಹೈಕೋರ್ಟ್ ಬಳಿ ಬನ್ನಿ ಪಾಸ್ ಕೊಡ್ತೀನಿ ಅಂದಾಗ ಒಂದು ಕಡೆ ಖುಷಿ. ಮತ್ತೊಂದು ಕಡೆ ಬೇಸರ. . ನಾವು ನಾಲ್ಕು ಟಿಕೆಟ್ ಕೇಳಿದ್ದೆವು. ಈಗ ಸಿಕ್ಕಿರುವುದು ಕೇವಲ ಎರಡು. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬಂತೆ, ಈಗ ಆ ಎರಡು ಟಿಕೆಟ್ಟಿನಲ್ಲಿ ಹೋಗುಔರು ಯಾರು? ನಾನಂತೂ ಖಾಯಂ. ಮಗಳೋ ಇಲ್ಲವೇ ಮಗನನ್ನೋ ಕರೆದುಕೊಂಡು ಹೋಗ ಬೇಕು. ಹೇಳಿ ಕೇಳಿ ಇದು RCB ಮತ್ತು CSK ನಡುವಿನ ಪಂದ್ಯ. CSK ಮಗಳ ಅಚ್ಚು ಮೆಚ್ಚಿನ ತಂಡ. ಮಗಳನ್ನೇ ಕರೆದು ಕೊಂಡು ಹೋಗೋಣ. ಮಗನನ್ನು ಮುಂದೆ ಯಾವುದಾದರೂ RCB ಪಂದ್ಯಕ್ಕೆ ಕರೆದು ಕೊಂಡು ಹೋದರೆ ಆಯ್ತು ಎಂದು ನಿರ್ಧರಿಸಿ ಮಗಳಿಗೆ ಸಿದ್ಧವಾಗಲು ಹೇಳಿದರೆ, ಮಗ ಉಪ್ ಎಂದು ಮುಖ ಊದಿಸಿಕೊಂಡು ಮೂಲೆ ಸೇರಿದ. ಸರಿ ನಾನಾಗಲೇ ಕಛೇರಿಯಿಂದ ಸ್ನೇಹಿತರ ಜೊತೆ ಬೆಂಗಳೂರು ಮತ್ತು ಡೆಲ್ಲಿ ಪಂದ್ಯವನ್ನು ನೋಡಿದ್ದರಿಂದ, ಅಮ್ಮಾ-ಮಗಳು, ಅಮ್ಮಾ-ಮಗ, ಇಲ್ಲವೇ ಅಕ್ಕ-ತಮ್ಮಾ ಹೋಗಿ ಎಂದು ಹೇಳಿದರೆ ಅಷ್ಟು ಹೊತ್ತಿನಲ್ಲಿ ಹೆಣ್ಣು ಮಕ್ಕಳನ್ನಾಗಲೀ ಇಲ್ಲವೇ ಕೇವಲ ಮಕ್ಕಳನ್ನಾಗಲೀ ಕಳುಹಿಸುವುದು ಸರಿ ಅಲ್ಲ ಎಂಬ ವಾದ. ಕಡೆಗೆ ಅತ್ತೂ ಕರೆದು ಮಗಳು ಮನೆಯಲ್ಲಿಯೇ ನೋಡುತ್ತೇನೆಂದು ತಮ್ಮನಿಗಾಗಿ ಟಿಕೆಟ್ ತ್ಯಾಗ ಮಾಡಿದಾಗ, ನನ್ನ ಮಗನ ಮುಖ ಪಾಪ್ ಕಾರ್ನ್ ಅರಳುವಂತೆ ಅರಳಿತ್ತು.
ಸರ ಸರನೆ ನಾನೂ ಮತ್ತು ನನ್ನ ಮಗ ಸಿದ್ಧವಾಗಿ ವಾಹನವನ್ನೇರಿ ನಮ್ಮ ಖಾಯಂ ಪಾರ್ಕಿಂಗ್ ತಾಣವಾದ ಹೈಕೋರ್ಟ್ ಬಳಿ ಬರುವಷ್ಟರಲ್ಲಿಯೇ ನನ್ನ ಸ್ನೇಹಿತರು ನಮಗಾಗಿ ಅಲ್ಲಿ ಬಹಳ ಸಮಯದಿಂದ ಕಾಯುತ್ತಿದ್ದರು. ಅದಾಗಲೇ ಗಂಟೆ ಏಳು ಆಗಿದ್ದರಿಂದ ಪಟ ಪಟನೆ ಪಾಸ್ ಪಡೆದು ಭದ್ರವಾಗಿ ಹಿಂದಿನ ಜೋಬಿನಲ್ಲಿ ಇಟ್ಟು ಕೊಂಡು ಅವರಿಗೆ ಧನ್ಯವಾದಗಳನ್ನು ತಿಳಿಸಿ ಅಲ್ಲಿಯೇ ವಾಹವನ್ನು ನಿಲ್ಲಿಸಿ ಸರ ಸರನೆ ಕ್ರೀಡಾಂಗಣದತ್ತ ಧಾಪುಗಾಲು ಹಾಕುತ್ತಾ ಆಗ್ಗಿಂದ್ದಾಗ್ಗೆ ಹಿಂದಿನ ಜೋಬಿನಲ್ಲಿ ಟಿಕೆಟ್ ಇದೆಯೇ ಎಂದು ಮುಟ್ಟಿ ನೋಡಿಕೊಳ್ಳುತ್ತಾ, ಕಬ್ಬನ್ ಪಾರ್ಕ್ ದಾಟಿ ಮೆಟ್ರೋ ಸ್ಟೇಷನ್ ಬಳಿ ಬರುತ್ತಿದ್ದಂತೆಯೇ ಅಲ್ಲಿ ಹಬ್ಬದ ವಾತಾವರಣ.
RCB ಮತ್ತು CSK ಟಿ-ಶರ್ಟ್ಗಳು, ಟೋಪಿಗಳು ಮುಖಕ್ಕೆ ಬಣ್ಣ ಬಳಿಯುವವರು, ಸಾರ್ ಎಕ್ಸ್ಟ್ರಾ ಟಿಕೆಟ್ ಇದ್ಯಾ ಎಂದು ಕೇಳುವವರಿಂದ ತುಂಬಿ ಹೋಗಿತ್ತು. ಮಗ, ಅಪ್ಪಾ RCB ಟಿ-ಶರ್ಟ್ ಕೊಡಿಸಿ ಎಂದು ಕೇಳಿದ. ಸರಿ ಟಿಕೆಟ್ ಹೇಗೂ ಬಿಟ್ಟಿ ಸಿಕ್ಕಿದೆ. ಅದೇ ದುಡ್ಡನ್ನು ಮಜಾ ಮಾಡುವ ಎಂದು ನಾನು ಮತ್ತು ನನ್ನ ಮಗ ನಮ್ಮ ಅಳತೆಯ ಟಿ-ಶರ್ಟ್ ತೆಗೆದು ಕೊಂಡು ಅಲ್ಲಿಯೇ ಧರಿಸಿ ನಮ್ಮ ಪ್ರವೇಶ ದ್ವಾರದ ಬಳಿಗೆ ಓಡುತ್ತಾ ಹೋಗಿ ದ್ವಾರಪಾಲಕ ಟಿಕೆಟ್ ತೋರಿಸಿ ಎಂದಾಗ ಹೆಮ್ಮೆಯಿಂದ ಹಿಂದಿನ ಜೋಬಿಗೆ ಕೈಹಾಕಿದರೆ, ಟಿಕೆಟ್ ಮಂಗ ಮಾಯ. ಒಮ್ಮೆಲೆ ಎದೆ ಧಸಕ್ ಎಂದಿತು. ಆಕಾಶವೇ ಮೈಮೇಲೆ ಕಳಚಿಬಿದ್ದ ಅನುಭವ.
ಮಗೂ ಟಿಕೆಟ್ ನಿನ್ನ ಕೈಗೆ ಕೊಟ್ನಾ? ಎಂದರೆ ಇಲ್ಲಾಪ್ಪಾ ನೀವೇ ಮಾವನ ಬಳಿ ಪಡೆದುಕೊಂಡು ಹಿಂದಿನ ಜೋಬಿನಲ್ಲಿ ಇಟ್ಟು ಕೊಂಡ್ರಲ್ಲಾ ! ಸ್ವಲ್ಪ ಸರಿಯಾಗಿ ನೋಡಿ ಅಂದ. ಸರಿ ಎಲ್ಲಾ ಜೋಬುಗಳನ್ನೂ ತಡಕಾಡಿದರೂ ಸಿಕ್ಕದಿದ್ದಾಗ ನಿರಾಶೆಗೊಂಡು ಅಯ್ಯೋ ದುರ್ವಿಧಿಯೇ! ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲಾ ಎಂದು ಟಿ-ಶರ್ಟ್ ಕೊಂಡು ಕೊಳ್ಳುವಾಗ ಎಲ್ಲಿಯಾದರೂ ಬೀಳಿಸಿಕೊಂಡಿರಬಹುದಾ ಎಂದು ಯೋಚಿಸಿ ಮತ್ತೆ ಶರವೇಗದಲ್ಲಿ ಅಲ್ಲಿಗೆ ಓಡಿ ಹೋಗಿ ಕೇಳಿದರೆ, ಇಲ್ಲಾ ಸಾರ್. ನಮಗೆ ಇಲ್ಲಿ ಯಾವುದೇ ಟಿಕೆಟ್ ಸಿಗಲಿಲ್ಲ ಎಂದಾಗ ಮನಸ್ಸಿಗೆ ಮತ್ತಷ್ಟೂ ಬೇಸರವಾಗಿ ಮಗನ ಮುಖವೆಲ್ಲಾ ಬಾಡಿ ಹೋಗಿ ಅಳುವುದೊಂದು ಬಾಕಿ ಇತ್ತು ಸರಿ ಮತ್ತೊಮ್ಮೆ ಗಾಡಿ ನಿಲ್ಲಿಸಿದ ಬಳಿ ಎಲ್ಲಿಯಾದರೂ ಕೆಡವಿಕೊಂಡು ಬಿಟ್ಟಿರಬಹುದು ಎಂದು ಓಡೋಡಿ ಅಲ್ಲೆಲ್ಲಾ ಹುಡುಕಾಡಿದರೂ ಗಾಯದ ಮೇಲೆ ಬರೆ ಎಳೆದಂತೆ ಎಲ್ಲೂ ಟಿಕೆಟ್ ಸಿಗಲಿಲ್ಲ. ಕೂಡಲೇ ನಮ್ಮ ಸ್ನೇಹಿತರಿಗೂ ಮತ್ತು ಮಡದಿಗೂ ಕರೆ ಮಾಡಿ ನಮ್ಮ ಕರ್ಮವನ್ನು ತಿಳಿಸಿ ಮನೆಗೆ ಬರುತ್ತಿದ್ದೇವೆ ಎಂದರೂ, ಛಲ ಬಿಡದ ವಿಕ್ರಮನಂತೆ ಆಶಾವಾದಿಗಳಾಗಿ ಕಡೆದಾಗಿ ಒಮ್ಮೆ ಎಲ್ಲಾ ಕಡೆಯಲ್ಲೂ ಹುಡುಕಿ ನೋಡೋಣ ಸಿಕ್ಕದಿದ್ದರೆ ಮನೆಗೆ ಹೋಗೋಣ ಎಂದು ನಿರ್ಧರಿಸಿ ನಿಧಾನವಾಗಿ ಹುಡುಕಾತ್ತಾ ಮತ್ತೆ ಮೆಟ್ರೋ ಸ್ಟೇಷನ್ ಬಳಿ ಬರುತ್ತಿದ್ದಂತೆಯೇ,
ಸಾರ್ ಏನು ಹುಡುಕ್ತಾ ಇದ್ದೀರಾ? ಎಂಬ ಅಪರಿಚಿತ ಧ್ವನಿ ನಮ್ಮ ಹಿಂದಿನಿಂದ ಕೇಳಿಬಂತು. ಆಪತ್ತಿಗಾಗುವವನೇ ಆಪತ್ವಾಂಧವ ಎನ್ನುವಂತೆ ನಡೆದದ್ದೆಲ್ಲವನ್ನೂ ಪಟ ಪಟನೆ ಹೇಳುತ್ತಿದ್ದಂತೆಯೇ, ಓಹೋ !! ಅಯ್ಯೋ ಪಾಪ. ಛೇ ಛೇ ಛೇ ಹೀಗಾಬಾರ್ದಾಗಿತ್ತು ಎಂದು ಲೊಚ ಗುಟ್ಟಿದ. ಅ ಕ್ಷಣದಲ್ಲಿ ನನಗೆ ಆತನ ಮೇಲೆ ಅಪಾರವಾದ ಕೋಪ ಬಂದಿತಾದರೂ ನಮ್ಮ ದುರ್ವಿಧಿಗೆ ಆತನನ್ನು ಹಳಿದು ಏನು ಪ್ರಯೋಜನ? ಎಂದು ಸುಮ್ಮನಾಗುತ್ತಿದ್ದಂತೆಯೇ, ನೋಡಿ ಸಾರ್, ಇದೇನಾ ನಿಮ್ಮ ಟಿಕೆಟ್ ಎಂದು ತನ್ನ ಕೋಟಿನ ಒಳಗಿನಿಂದ ನಾವು ಕಳೆದು ಕೊಂಡಿದ್ಸ ಆ ಎರಡು VVIP Pass ತೆಗೆದು ನಮ್ಮ ಕೈಗಿತ್ತಾಗ, ನನ್ನ ಮತ್ತು ನನ್ನ ಮಗನ ಕಣ್ಣಿನಲ್ಲಿ ಝಗ್ಗನೆ 10,000ವ್ಯಾಟ್ ಹೊನಲು ಬೆಳಕು ಹತ್ತಿದ ಅನುಭವ. ಸಾರ್. ಇದೆಲ್ಲಿ ಸಿಕ್ತು ನಿಮಗೆ? ಇದಕ್ಕಾಗಿ ನಾವೆಷ್ಟು ಪರದಾಡಿದೆವು ಎಂದಾಗ, ಸರ್ ನೀವು ಟಿ-ಶರ್ಟ್ ಹಾಕಿಕೊಂಡು ಹಿಂದೆ ಸರಿ ಮಾಡಿಕೊಳ್ಳುತ್ತಿದ್ದಾಗ ನಿಮಗರಿವಿಲ್ಲದಂತೆಯೇ ಈ ಪಾಸ್ ಬಿದ್ದದ್ದನ್ನು ನಾನು ನೋಡಿ, ಕೂಡಲೇ ನಿಮ್ಮನ್ನು ಕರೆದೆ. ಆದರೆ ನೀವಿಬ್ಬರೂ ಸರ ಸರನೇ ಓಡುತ್ತಾ ಜನರ ಜಂಗುಳಿಯಲ್ಲಿ ಮಾಯವಾದ ಕಾರಣ, ನಿಮಗೆ ಪಾಸ್ ಕೊಡಲಾಗಲಿಲ್ಲ. ಹೇಗೂ ನೀವು ಅದನ್ನು ಹುಡುಕುತ್ತ ಇಲ್ಲಿಗೆ ಬಂದೇ ಬರುವಿರೆಂಬ ನಂಬಿಕೆಯಿಂದ ಇಲ್ಲಿಯೇ ಕಾಯುತ್ತಿದ್ದೇ ಎಂದಾಗ ಆತನನ್ನು ಬಾಚಿ ತಬ್ಬಿ ಕೊಂಡು ತುಂಬಾ ಧನ್ಯವಾದಗಳು ಸಾರ್. ಈಗಿನ ಕಾಲದಲ್ಲೂ ಈ ರೀತಿಯ ಪ್ರಾಮಾಣಿಕ ವ್ಯಕ್ತಿಗಳು ಸಿಗುವುದೇ ಅಪರೂಪ. ನಾವು ನಿಜಕ್ಕೂ ನಿಮಗೆ ಅಭಾರಿಗಳು ಎಂದಾಗ, ಸಾರ್ ಅಷ್ಟೊಂದು ದೊಡ್ದ ಮಾತೇಕೆ? ಒಬ್ಬ ಕ್ರಿಕೆಟ್ ಪ್ರೇಮಿಯ ಪಂದ್ಯ ನೋಡುವ ತವಕ ಮತ್ತೊಬ್ಬ ಕ್ರಿಕೆಟ್ ಪ್ರೇಮಿಗೆ ಗೊತ್ತಿದೆ. ಅದೂ ನಿಮ್ಮ ಮಗನ ಜೊತೆ ಬಂದಿದ್ದೀರಿ, ಅವನಿಗೆ ನಿರಾಸೆ ಅಗುವುದು ಬೇಡ. ಈಗಾಗಲೇ ಹೊತ್ತಾಗಿದೆ. ಈ ಬಾರಿ ಜೋಪಾನವಾಗಿ, ಭಧ್ರವಾಗಿ ಪಾಸ್ ಇಟ್ಟು ಕೊಂಡು ಪಂದ್ಯ ನೋಡಿ, ಜೋರಾಗಿ RCB ತಂಡಕ್ಕೆ ಪ್ರೋತ್ಸಾಹ ನೀಡಿ ನಮ್ಮ ತಂಡ ಗೆಲುವನ್ನು ಪಡೆಯಲಿ ಎಂದು ಹೇಳಿದರು.
ಮತ್ತೊಮ್ಮೆ ನಾವಿಬ್ಬರೂ ಅವರಿಗೆ ಧನ್ಯವಾದಗಳನ್ನು ಹೇಳಿ ಓಡೋಡಿ ಮುಂದಿನ ದ್ವಾರಪಾಲಕರಿಗೆ ಟಿಕೆಟ್ ತೋರಿಸಿ ಒಳಗಡೆ ಕಾಲಿಟ್ಟು. ಮತ್ತೊಮ್ಮೆ ನನ್ನ ಮಡದಿಗೆ ಮತ್ತು ಸ್ನೇಹಿತನಿಗೆ ಕರೆ ಮಾಡಿ ನಡೆದದ್ದೆಲ್ಲವನ್ನೂ ಹೇಳಿ ಒಳಗಡೆ ಕುಳಿತ ಮೇಲೆ ಕರೆ ಮಾಡುತ್ತೇವೆ ಎಂದು ಹೇಳಿ ವಿವಿಐಪಿ ಗೇಟ್ ಬಳಿ ಹೋದ್ರೆ ಮತ್ತೊಂದು ಶಾಕ್ ಕಾದಿತ್ತು.
ಈ ಪಾಸ್ ಶಾಸಕರಿಗೆ ವಿಶೇಷವಾಗಿ ನೀಡಿರುವುದರಿಂದ ಅಲ್ಲಿ ಬರುವ ಎಲ್ಲರೂ ದೊಡ್ದ ದೊಡ್ದ ಅಂತಸ್ತಿನವರೇ ಆಗಿರುತ್ತಾರೆ. ಅಲ್ಲಿ ಅವರಿಗೆ ವಿಶೇಷ ರೀತಿಯ ಸರ್ವಾತಿಥ್ಯ ಇರುವ ಕಾರಣ ಅಲ್ಲಿಗೆ ಚಿಕ್ಕ ಮಕ್ಕಳನ್ನು ಬಿಡಲಾಗದು ಎಂದು ತಿಳಿಸಿದಾಗ. ಅಯ್ಯೋ!! ಅಂತೂ ಇಂತೂ ವನವಾಸ ಮತ್ತು ಅಜ್ಞಾತವಾಸ ಮುಗಿಸಿಬಂದರೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ, ಅಷ್ಟೆಲ್ಲಾ ಆಶ್ವರ್ಯಚಕಿತ ಘಟನೆಗಳು ನಡೆದು ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎಂಬಷ್ಟು ಹತ್ತಿರ ಇರುವಾಗ ಇದೆಂತಹ ಗ್ರಹಚಾರ ಎಂದು. ಸಾರ್ ಮಗನೊಂದಿಗೆ ಬಂದಿದ್ದೇನೆ. ಅವನಿಗೂ ಪಂದ್ಯ ನೋಡುವ ಕುತೂಹಲ. ದಯವಿಟ್ಟು ಮನಸ್ಸು ಮಾಡಿ ಸರ್ ಎಂದು ಮೆಲು ಧನಿಯಲ್ಲಿ ಕೇಳಿದೆ.
ಇಲ್ಲಾರೀ ಹಾಗೆಲ್ಲಾ ಚಿಕ್ಕ ಮಕ್ಕಳನ್ನು ಬಿಡಲಾಗುವುದಿಲ್ಲ. ಸ್ವಲ್ಪ ಹೊತ್ತು ಇಲ್ಲೇ ಇರಿ ನೋಡೋಣ ಎಂದಾಗ, ಮರುಭೂಮಿಯಲ್ಲಿ ಓಯಸಿಸ್ ನಂತೆ ನೀರು ಸಿಕ್ಕ ಅನುಭವ. ಹಾಗೆಯೇ ಹ್ಯಾಪು ಮೊರೆ ಹಾಕಿಕೊಂಡು ಪಕ್ಕಕ್ಕೆ ಬಂದಾಗ ಅಲ್ಲಿ ಬ್ರಿಜೇಶ್ ಪಟೇಲ್ ಅವರನ್ನು ನೋಡಿ ಅವರೊಂದಿಗೆ ಅಪ್ಪಾ ಮಗ ಪೋಟೋ ತೆಗೆಸಿ ಕೊಂಡು ನಮ್ಮ ಪರಿಸ್ಥಿತಿಯನ್ನು ಅವರಿಗೂ ತಿಳಿಸಿದೆ. ಅವರು ಆ ಕೂಡಲೇ ಯಾರಿಗೋ ಹೇಳಿ ನಮ್ಮಲ್ಲಿದ್ದ ವಿವಿಐಪಿ ಪಾಸ್ ಬದಲಾಗಿ ಬೇರೆಯ ಸ್ಟಾಂಡ್ ಟಿಕೆಟ್ ಕೊಡಿಸಿದಾಗ ಮತ್ತೆ ಒನಕೆ ಸಿಗುರಿದಂತೆ ಆಸೆ ಚಿಗುರಿ,. ಅವರಿಗೂ ಸಹಾ ಧನ್ಯವಾದಗಳನ್ನು ತಿಳಿಸಿ ಆ ಜನ ಜಂಗುಳಿಯಲ್ಲಿಯೂ ನುಗ್ಗಿಕೊಂಡು ಹೊರ ಬಂದು ಮತ್ತೊಂದು ಸ್ಟಾಂಡ್ಗೆ ಹೋಗಿ ನಿಗಧಿತ ಸ್ಥಳದಲ್ಲಿ ಕುಳಿತು ಕೊಳ್ಳುವಷ್ಟರಲ್ಲಿ ಟಾಸ್ ಆಗಿ CSK ಟಾಸ್ ಗೆದ್ದು RCBಗೆ ಬ್ಯಾಟ್ ಮಾಡಲು ಹೇಳಿ RCB ತಂಡದ ನಾಯಕ ಕೋಹ್ಲಿ ಮತ್ತು ಡಿಕಾಕ್ ಬ್ಯಾಟ್ ಮಾಡಲು ಸಿದ್ಧರಾಗಿದ್ದರು. ಸ್ನೇಹಿತ ಮತ್ತು ಮಡದಿಗೆ ನಾವಿಬ್ಬರೂ ಕುಳಿತಿರುವ selfi ಕಳುಹಿಸಿ ಅದನ್ನು ನನ್ನ Status ನಲ್ಲೂ ಮರೆಯದೇ update ಮಾಡಿ ಪಂದ್ಯ ನೋಡಲು ಸನ್ನದ್ಧರಾದೆವು.
ನಾಯಕ ಕೋಹ್ಲಿ ಮತ್ತು ಏಬಿಡಿ ಬಾರಿಸುತ್ತಿದ್ದ ಪ್ರತಿ ಸಿಕ್ಸರ್ ಮತ್ತು ಬೌಂಡರಿಗಳಿಗೂ ಜೋರಾಗಿ ಚೀರುತ್ತಾ, ಮೆಕ್ಸಿಕನ್ ಅಲೆಯನ್ನು ಎಲ್ಲರೊಡನೆ ಮಾಡುತ್ತಾ, ನಮ್ಮ ತಂಡದ ಆಟಗಾರರು ಔಟಾದಾಗ ಗಪ್ ಚುಪ್ ಆಗಿಯೂ ಮತ್ತು ವಿಕೆಟ್ ಕಿತ್ತ ನೆಪದಲ್ಲಿ ಇಡೀ ಮೈದಾನವನ್ನೇ ಸುತ್ತಿ ಹಾಕುವ ಇಮ್ರಾನ್ ತಾಹೀರ್ನನ್ನು ಅಣಕಿಸುತ್ತಲೂ ಇಡೀ ಪಂದ್ಯವನ್ನು ಆನಂದಿಸಿದೆವು. ಮಧ್ಯದಲ್ಲಿ ಮನ್ದೀಪ್ ಸಿಂಗ್ ಆಕರ್ಶಕವಾಗಿ ಆಡಿ, ಕೊನೆಯ ಓವರಿನಲ್ಲಿ ವಾಷಿಂಗ್ಟನ್ ಸುಂದರ್ ಭರ್ಜರಿಯಾಗಿ ಬಾರಿಸಿದ ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205ರನ್ ಗಳಿಸಿದಾಗ ಹೇ ಈ ಸಲಾ ಕಪ್ ನಮ್ದೇ ಅಂತಾ ಜೋರಾಗಿ ಕೂಗುತ್ತಾ ಮಧ್ಯಾಂತರದಲ್ಲಿ ಅಲ್ಲಿಯೇ ಸಿಕ್ಕಿದ್ದನ್ನು ತಿಂದು, ಆಗಾಗ ಫೋಟೋಗಳನ್ನು Whatsapp ನಲ್ಲಿ upload ಮಾಡುತ್ತಾ ನಮ್ಮ ಸ್ನೇಹಿತರಿಗೂ ಮತ್ತು ಬಂಧುಗಳನ್ನು ಉರಿಸುವ ಕಾರ್ಯವನ್ನು ಮುಂದುವರಿಸುತ್ತಾ, CSK ಬ್ಯಾಟಿಂಗ್ ನೋಡಲು ಸಿದ್ಧರಾದೆವು.
ಆರಂಭದಲ್ಲಿಯೇ CSK ತಂಡದ ಆಟಗಾರರು ಪಟ ಪಟನೇ ಔಟಾಗಿ ಡಗೌಟ್ ಸೇರಿಕೊಂಡ ಮೇಲಂತೂ ನಮ್ಮೆಲ್ಲರ ಉತ್ಸಾಹ ಹೇಳ ತೀರದು. ಪ್ರತೀ ಆಟಗಾರು ಔಟಾದಾಗಲೂ ಮುಗಿಲು ಮುಟ್ಟುವ ಹಾಗೆ ಹರ್ಷೋದ್ಗಾರ. ಅದೇ ರೀತಿ ಎದುರಾಳಿ ತಂಡ ಬಾರಿಸಿದ ಬೌಂಡರಿ, ಸಿಕ್ಸರ್ಗಳಿಗೆ ಮೌನ ವ್ರತ ಜಾರಿಯಲ್ಲಿಯೇ ಇತ್ತು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಅಂಬಟ್ಟಿ ರಾಯಡು, ತನ್ನ ಎಂದಿನ ನಿಧಾನ ರೀತಿಯಾಗಿ ಒಂದೊಂದೇ ರನ್ ಗಳಿಸುತ್ತಾ ಒಮ್ಮೆ ನಾಯಕ ಧೋನಿ ಜೊತೆಗಾರನಾಗಿ ಬಂದ ಕೂಡಲೇ RCB ತಂಡದ ದುರ್ಬಲ ಕ್ಷೇತ್ರ ರಕ್ಷಣೆಯ ಲಾಭವನ್ನು ಪಡೆದು ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುತ್ತಾ ಪಂದ್ಯದ ದಿಕ್ಕನ್ನೇ ಬದಲಿಸಿಬಿಟ್ಟ.. ಅದಕ್ಕೆ ತಕ್ಕಂತೆ, ತನ್ನ ಎಂದಿನ ಆಕ್ರಾಮಿಕ ಆಟದಿಂದ ನಾಯಕ ಧೋನಿಯೂ ಕೂಡಾ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುತ್ತಾ ಅಂತಿಮವಾಗಿ ಇನ್ನೂ ಎರಡು ಎಸೆತಗಳು ಇರುವಂತೆಯೇ 19.4 ಓವರ್ಗಳಲ್ಲಿ , 5 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ CSK ತಂಡವನ್ನು ವಿಜಯಶಾಲಿಯನ್ನಾಗಿ ಮಾಡಿದಾಗ ಇಡೀ ಮೈದಾನ ನಿಶಬ್ಧ. ನೀರವ ಮೌನ. ಮನಸ್ಸಿನಲ್ಲಿಯೇ ಬೌಲರ್ಗಲನ್ನೂ ಮತ್ತು ಕ್ಷೇತ್ರರಕ್ಷರನ್ನೂ ಹಳಿಯುತ್ತಾ ಭಾರವಾದ ಹೃದಯದಿಂದ ನಿರಾಸೆಯಿಂದ ಮೈದಾನದಿಂದ ಹೊರಬಂದು ವಾಹನವನ್ನೇರಿ ಮನೆಯ ಕಡೆ ಬರ ತೊಡಗಿದೆವು.
ದಾರಿಯುದ್ದಕ್ಕೂ, ಛೇ ಛೇ ಛೇ! ಅಷ್ಟೆಲ್ಲಾ ಕಷ್ಟ ಪಟ್ಟು ನಾನಾ ರೀತಿಯಲ್ಲಿ ಹೋರಾಡಿ ದೇವರ ಅನುಗ್ರಹ, ಅದೃಷ್ಟದ ಬಲ ಮತ್ತು ಪ್ರಾಮಾಣಿಕ ವ್ಯಕ್ತಿಯ ನೆರವಿನಿಂದ ಪಂದ್ಯವನ್ನು ನೋಡಲು ಅವಕಾಶ ಸಿಕ್ಕರೂ, ನಮ್ಮ ನೆಚ್ಚಿನ ತಂಡ RCB ಗೆಲ್ಲಲಿಲ್ಲವಲ್ಲಾ!! ಛೇ ನಮ್ಮ ಬ್ಯಾಟಿಂಗ್ ಚೆನ್ನಾಗಿತ್ತು. ಆರಂಭಿಕ ಬೌಲಿಂಗೂ ಕೂಡಾ ಚೆನ್ನಾಗಿತ್ತು. ಕಡೆಯ ಕೆಲ ಓವರ್ಗಳಲ್ಲಿ ಕೆಲ ದುರ್ಬಲ ಎಸೆತಗಳೂ ಮತ್ತು ದುರ್ಬಲ ಕ್ಷೇತ್ರ ರಕ್ಷಣೆಯ ಫಲವಾಗಿ ಸೋಲುಂಟಾಯಿತು ಎಂದು ನಮ್ಮಲ್ಲಿಯೇ ಸಮಾಧಾನ ಪಟ್ಟು ಕೊಂಡು ಮನೆಗೆ ಸೇರುವಷ್ಟರಲ್ಲಿ ಗಂಟೆ ಹನ್ನೆರಡಾಗಿತ್ತು. ಸಾಧಾರಣವಾಗಿ ಆಗೆಲ್ಲಾ ಹತ್ತು ಇಲ್ಲವೇ ಹನ್ನೊಂದಕ್ಕೇ ಮಲಗುವ ಆಭ್ಯಾಸವಿದ್ದ ನನ್ನ ಮಗಳು ನಾವು ಮನೆಗೆ ಬರುವುದನ್ನೇ ಶಬರಿಯಂತೆ ಕಾಯುತ್ತಾ ನಾವು ಮನೆಗೆ ಕಾಲಿಟ್ಟೊಡನೇಯೇ ಅಯ್ಯೋ ನೋಡಿದ್ಯಾ ನಿಂದು ಐರನ್ ಲೆಗ್. ನೀನು ಹೋಗಿದ್ದರಿಂದಲೇನೇ ನಿಮ್ಮ RCB ತಂಡ ಸೋತು ಹೋಯ್ತು ಎಂದು ನನ್ನ ಮಗನನ್ನು ಹಂಗಿಸಿದಾಗ. ಏ ಹಾಗೇನೀಲ್ಲಾ ಆ ಒಂದೆರದು ಕ್ಯಾಚ್ ಹಿಡಿದಿದ್ದರೆ, ಆ ಬೌಲರ್ ಕೊನೆಯ ಓವರ್ಗಳಲ್ಲಿ ಚೆನ್ನಾಗಿ ಬೋಲಿಂಗ್ ಮಾಡಿದ್ದರೆ ಗೆಲುವು ನಮ್ಮದೇ ಆಗುತ್ತಿತ್ತು ಎಂದು ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ರೇ.. ಕಾರ ಹೇಳತ್ತಾ, ತನ್ನ ತಂಡವನ್ನು ಸಮರ್ಥಿಸಿಕೊಳ್ಳುತ್ತಿದ್ದ ನನ್ನ ಮಗ. ಆಗಾಗಲೇ ತಡವಾಗಿತ್ತು. ಮಾರನೇಯ ದಿನ ನಾನು ಕಛೇರಿಗೂ ಮಕ್ಕಳು ಶಾಲಾ/ಕಾಲೇಜಿಗೆ ಹೋಗಬೇಕಾಗಿದ್ದ ಕಾರಣ ಹೆಚ್ಚಿನ ವಾದ ವಿವಾದಕ್ಕೆ ಇಳಿಯದೆ, ಈ ಪಂದ್ಯ ಸೋತ್ರೆ ಏನಾಯ್ತು. ಇನ್ನೂ ನಮ್ಮ ಬಹಳ ಪಂದ್ಯಗಳಿವೆ ನಾವು ಗೆದ್ದೇ ಗೆಲ್ತೀವಿ ಎಂಬ ವಿಶ್ವಾಸವಿದೆ. ಈ ಸಲಾ ಕಪ್ ನಮ್ದೇ ಅಂತ ಹೇಳಿ ನಾವೆಲ್ಲರೂ ಮಲಗಿದೆವು.
ಪ್ರತೀ ಬಾರಿ, ಈ ಸಲಾ ಕಪ್ ನಮ್ದೇ, ಈ ಸಲಾ ಕಪ್ ನಮ್ದೇ ಅಂತಾ ಹೇಳುತ್ತಲೇ ಇದೆ. ನಾವೂ ಸಹಾ ಅಪ್ಪಟ ಅಭಿಮಾನಿಗಳಾಗಿ ಅದನ್ನೇ ಪುನರುಚ್ಚರಿಸುತ್ತಲೇ RCB ತಂಡ ನೀರಸ ಪ್ರದರ್ಶನ ನೀಡುತ್ತಾ ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಿದರೂ, ಪ್ರತೀ ಬಾರಿ ಹೊಸಾ ಹೊಸಾ ಆಟಗಾರರ ಜೊತೆ ಗೂಡಿ ಮಗದಷ್ಟೂ ಉತ್ಸಾಹದಿಂದ ತಂಡಕ್ಕೆ ಬೆಂಬಲ ಸೂಚಿಸುತ್ತಲೇ ಬಂದಿದ್ದೇವೆ.
ಈ ಬಾರಿ RCBಯಲ್ಲಿ ಉತ್ತಮ ಅನುಭವಿ ಆಟಗಾರರು ಇರುವ ಕಾರಣ ಮತ್ತೆ ಭರವಸೆಯನ್ನು ಹುಟ್ಟಿಸಿದೆ. ಇನ್ನು ಕೆಲವರು RCB ತಂಡ, ಕನ್ನಡಿಗರಿಗೆ ಮತ್ತು ಕನ್ನಡತನಕ್ಕೆ ಪ್ರೋತ್ಸಾಹ ನೀಡುತ್ತಿಲ್ಲವಾದ ಕಾರಣ, ಕನ್ನಡಿಗರೇ ಹೆಚ್ಚಾಗಿರುವ ತಂಡವನ್ನು ಬೆಂಬಲಿಸೋಣ ಎನ್ನುವ ವಿತಂಡ ವಾದ ಮಂಡಿಸುತ್ತಿದ್ದಾರೆ. ಇನ್ನೂ ಕೆಲವರು ಬೆಟ್ಟಿಂಗ್ಗಿನಲ್ಲಿ ತೊಡಗಿಕೊಂಡು ಹಣ ಮತ್ತು ಮನಃ ಶಾಂತಿಯನ್ನು ಕಳೆದುಕೊಂಡು ದುಃಖ ಪಡುತ್ತಿದ್ದಾರೆ.
ಅದಕ್ಕಾಗಿಯೇ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಹೇಳುವುದೇನೆಂದರೆ, ಈ IPL ಪಂದ್ಯಾವಳಿಗಳು ಖಂಡಿತವಾಗಿಯೂ ಖುಷಿ ಕೊಡುತ್ತದೆ. ಇಲ್ಲಿ ಆಡುವ ಆಟಗಾರರು ಒಂದು ಕಾರ್ಪೋರೆಟ್ ಸಂಸ್ಥೆಯ ಗುತ್ತಿಗೆದಾರರೇ ಹೊರತು ನಮ್ಮ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸುವುದಿಲ್ಲ. ಎಲ್ಲರೂ ತಮ್ಮ ಲಾಭಕ್ಕಾಗಿ ಆಡುತ್ತಿದ್ದಾರೆ ಎಂಬುದು ನೆನಪಿಸಿಕೊಳ್ಳೋಣ.
ಹಾಗಾಗಿ ಈ ಪಂದ್ಯಗಳನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳದೇ, ಕೇವಲ ಮನೋರಂಜನಾತ್ಮಕವಾಗಿ ನೋಡೋಣ ಮತ್ತು ಸಂಭ್ರಮಿಸೋಣ.
ಇನ್ನೂ ಒಂದು ಹೆಜ್ಜೆ ಮುಂದುವರೆದು ನಮ್ಮ ನೆಚ್ಚಿನ RCB ತಂಡ ಈ ಬಾರಿಯಾದರೂ, ಗೆಲ್ಲಲೇ ಬೇಕು ಮತ್ತು ಗೆದ್ದೇ ತೀರುತ್ತದೆ ಎಂಬ ಆತ್ಮ ವಿಶ್ವಾಸದಲ್ಲಿ ಮತ್ತೊಮ್ಮೆ,ಈ ಸಲಾ ಕಪ್ ನಮ್ದೇ ಅಂತಾ ಬೇಕಿದ್ರೂ ಹೇಳಿಕೊಂಡು ಬೆಂಬಲಿಸೋಣವೇ ಹೊರತು ಅದನ್ನೇ ನೆಪ ಮಾಡಿಕೊಂಡು, ನಾಡು, ಭಾಷೆ ಅಂತ ನಮ್ಮ ನಮ್ಮಲ್ಲೇ ವೈಮನಸ್ಯ ಮಾಡಿಕೊಳ್ಳದಿರೋಣ.
ಏನಂತೀರೀ?
ನಿಮ್ಮವನೇ ಉಮಾಸುತ
Interesting article. Enjoyed reading it.
LikeLike