ಶಿಶಿರ ಋತುವಿನ ಫಾಲ್ಗುಣ ಮಾಸದ ಪೌರ್ಣಿಮೆ ದಿನವನ್ನು ಕಾಮನ ಹುಣ್ಣಿಮೆ, ವಸಂತ ಹುಣ್ಣಿಮೆ ಅರ್ಥಾತ್ ಹೋಳಿ/ಹೋಲಿ ಹಬ್ಬ ಎಂದು ಅಚರಿಸುತ್ತಾರೆ. ನಮ್ಶ ಹಿಂದೂ ದಿನಚರಿಯಂತೆ ವರ್ಷದ ಕಟ್ಟ ಕಡೆಯ ಹಬ್ಬವೂ ಹೌದು. ಇದಾದ ಹದಿನೈದೇ ದಿನಕ್ಕೆ ಯುಗಾದಿ ಹಬ್ಬ ಬಂದು ಬಿಡುತ್ತದೆ.
ಪುರಾಣದ ಪ್ರಕಾರ, ತಾರಕಾಸುರನೆಂಬ ರಾಕ್ಷಸ ರಾಜ ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಬರಲಿ ಎಂದು ಬ್ರಹ್ಮನಿಂದ ಪಡೆದ ವರದ ಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗುತ್ತಾನೆ. ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಚಿಂತಾಕ್ರಾಂತರಾಗುತ್ತಾರೆ. ದಕ್ಷ ಯಜ್ಞದಲ್ಲಿ ತನ್ನ ಮಡದಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಪರಶಿವನೂ ಭೋಗ ಸಮಾಧಿಯಲ್ಲಿರುತ್ತಾನೆ. ಅದೇ ರೀತೀ ಪಾರ್ವತಿಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಶಿವ ಪಾರ್ವರ್ತಿಯರಿಬ್ಬರೂ ಒಂದುಗೂಡದೇ ಮಕ್ಕಳಾಗುವಂತಿರಲಿಲ್ಲ. ಹೇಗಾದರೂ ಮಾಡಿ ಶಿವನ ತಪಸ್ಸನ್ನು ಭಂಗ ಮಾಡಬೇಕೆಂದು ನಿರ್ಧರಿಸಿದ ದೇವತೆಗಳು ಮನ್ಮಥನ (ಕಾಮ ದೇವರು ) ಮೊರೆ ಹೋದರು. ಲೋಕಕಲ್ಯಾಣಕ್ಕಾಗಿ ಮಾಡುತ್ತಿರುವ ಈ ಕಾರ್ಯದಲ್ಲಿ ತನ್ನ ಸಾವು ನಿಶ್ಚಿತ ಎಂಬುದರ ಅರಿವಿದ್ದರೂ ಸಹಾ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನ ತಪಸ್ಸನ್ನು ಭಂಗ ಮಾಡುತ್ತಾನೆ. ತನ್ನ ತಪೋಭಂಗಕ್ಕೆ ಕಾರಣನಾದ ಕಾಮನನ್ನು ಶಿವ ತನ್ನ ಹಣೆಯ ಮಧ್ಯದಲ್ಲಿದ್ದ ಮೂರನೇ ಕಣ್ಣುಗಳಿಂದ ಸುಟ್ಟು ಭಸ್ಮ ಮಾಡುತ್ತಾನೆ. ಆಗ ಕಾಮನರಸಿ ರತಿದೇವಿಯು ತನ್ನ ಪತಿಯು ಉದ್ದೇಶಪೂರ್ವಕವಾಗಿ ಈ ಕಾರ್ಯ ಮಾಡಿಲ್ಲವೆಂದೂ ದೇವಾನು ದೇವತೆಗಳ ಇಚ್ಚೆಯಂತೆ ಈ ರೀತಿಯ ಕಾರ್ಯದಲ್ಲಿ ಭಾಗಿಯಾಗ ಬೇಕಾದ ಸಂಗತಿಯನ್ನು ಶಿವನಲ್ಲಿ ಆರ್ಜಿಸಿ ತನಗೆ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂದು ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ, ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು ಕಾಮನ ಹುಣ್ಣಿಮೆಯಾಗಿ ಆಚರಿಸಲ್ಪಡುತ್ತದೆ.
ನಾರದ ಪುರಾಣದಲ್ಲಿ ಬರುವ ಮತ್ತೊಂದು ಕಥೆಯ ಪ್ರಕಾರ, ರಾಕ್ಷಸರ ರಾಜ ಹಿರಣ್ಯಕಷಿಪು ತಾನೇ ದೇವರು ತನ್ನನ್ನೇ ಎಲ್ಲರೂ ಪೂಜಿಸಬೇಕೆಂದು ತಾಕೀತು ಮಾಡಿದ್ದನ್ನು ಆತನ ಸ್ವಂತ ಮಗನಾದ ಪ್ರಹ್ಲಾದನೇ ಒಪ್ಪದೇ, ಹರಿಯೇ ಜಗದೊದ್ಧಾರಕ ಎನ್ನುವುದನ್ನು ಹೇಳುವುದನ್ನು ಕೇಳಲಾಗದೇ, ತನ್ನದೇ ಕರುಳ ಕುಡಿ ಪ್ರಹ್ಲಾದನನ್ನು ಕೊಲ್ಲಲು, ನಾನಾ ರೀತಿಯಾದ ಪ್ರಯತ್ನ ಪಟ್ಟು ವಿಫಲನಾಗಿ, ಕೊನೆಗೆ, ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ ಹೊಂದಿದ್ದ ತನ್ನ ತಂಗಿ ಹೋಳಿಕಾ (ಹೋಲಿಕಾ)ಳ ಮೊರೆ ಹೋಗುತ್ತಾನೆ. ಅಣ್ಣನ ಅನುಜ್ಞೆಯಂತೆ ತನ್ನ ಸೋದರ ಅಳಿಯನ ಬಾಲ ಪ್ರಹ್ಲಾದನನ್ನು ಎತ್ತಿಕೊಂಡ ಹೋಳಿಕಾ, ಅಗ್ನಿಕುಂಡ ಪ್ರವೇಶಿಸುತ್ತಾಳೆ. ಹಾಗೆ ಪ್ರವೇಶಿಸುವ ಭರದಲ್ಲಿ ಆಕೆಯ ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರವು ಗಾಳಿಯಲ್ಲಿ ಹಾರಿಹೋಗಿ, ಹೋಳಿಕಾಳ ದಹನವಾಗುತ್ತಾಳೆ ಮತ್ತು ಪರಮ ವಿಷ್ಣು ಭಕ್ತ ಪ್ರಹ್ಲಾದ ಒಂದು ಚೂರು ಬೆಂಕಿ ತಾಗದೆ ಪಾರಾಗುತ್ತಾನೆ. ಹಾಗಾಗಿ ಹೋಳಿಕಾ ದಹನವಾದ ದಿನವನ್ನು ಹೋಳಿ ಹಬ್ಬ ಎಂದು ಅಚರಿಸುವ ಸಂಪ್ರದಾಯ ಅಂದಿನಿಂದ ರೂಢಿಗೆ ಬಂದಿತು ಎಂಬ ಪ್ರತೀತಿ ಇದೆ.
ಈ ಎರಡೂ ಪುರಾಣ ಕಥನಗಳ ಹಿಂದೆ ಇರುವ ಸಂದೇಶವು ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಹಬ್ಬದ ಆಚರಣೆ ರೂಢಿಯಲ್ಲಿದೆ. ಕೆಟ್ಟ ಕೆಲಸ ಮಾಡುವ ಪ್ರತಿಯೊಬ್ಬರೂ ಅಂತಿಮವಾಗಿ ಸುಟ್ಟು ಭಸ್ಮವಾಗುತ್ತಾರೆ ಎನ್ನುವ ಸುಂದರ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯ ಹಿಂದಿನ ಸದುದ್ದೇಶವಾಗಿದೆ.
ನಾವೆಲ್ಲಾ ಸಣ್ಣವರಿದ್ದಾಗ ಕಾಮನ ಹಬ್ಬ ಬರುವ ಎರಡು ಮೂರು ವಾರಗಳ ಮುಂಚೆಯೇ ನಮಗೆಲ್ಲಾ ಸಂಭ್ರಮವೋ ಸಂಭ್ರಮ. ಸ್ವಲ್ಪ ವಯಸ್ಕರು ಅಂದರೆ ಹೈಸ್ಕೂಲ್ ಅಥವಾ ಕಾಲೇಜು ಹೋಗುತ್ತಿದ್ದವರೇ ನಮ್ಮ ನಾಯಕರು. ಅವರ ನೇತೃತ್ವದಲ್ಲಿಯೇ ಎಲ್ಲರ ಮನೆಗಳಿಗೂ ಹೋಗಿ ಕಾಮನ ದಹನಕ್ಕೆ ಕಟ್ಟಿಗೆ ಸಂಗ್ರಹಿಸುವುದು ಪ್ರತೀ ವರ್ಷದ ವಾಡಿಕೆ. ಹಾಗೆ ಪ್ರತಿ ಮನೆ ಮನೆಗೂ ಸಂಗ್ರಹಿಸಲು ಹೋಗುವಾಗ ಬರೀ ಸುಮ್ಮನೆ ಶಾಂತಿ ರೀತಿಯಿಂದ ಹೋಗದೆ,
ಕಾಮಣ್ಣನ ಮಕ್ಕಳು, ಕಳ್ಳ ಸುಳ್ಳ, ಸೂ.. ಮಕ್ಕಳು. ಅಡಿಕೆ ಗೋಟು ಪೊರಕೆ ಏಟು,
ಕಾಮಣ್ಣ ಮಕ್ಕಳು, ಕಳ್ಳ ನನ್ನ ಮಕ್ಕಳು, ಏನೇನು ಕದ್ದರು? ಸೌದೆ ಬೆರಣಿ ಕದ್ದರು,
ಯಾತಕ್ಕೆ ಕದ್ದರು? ಕಾಮಣ್ಣನ ಸುಡೋಕೆ ಕದ್ದರು.
ಎಂದು ಜೋರಾಗಿ ಹೇಳುತ್ತಾ , ಕೊನೆಗೆ ಗುಂಪಿನಲ್ಲಿ ಇದ್ದವರೆಲ್ಲರೂ ಲಬೊ… ಲಬೊ… ಲಬೊ… ಎಂದು ಬಾಯಿ ಬಾಯಿ ಬಡಿದು ಕೊಳ್ಳುತ್ತಾ ನಮ್ಮ ಬಡಾವಣೆಯ ಪ್ರತಿಯೊಬ್ಬರ ಮನೆಗಳಿಂದಲೂ ಕಾಮನ ದಹನಕ್ಕೆ ಉರುವಲನ್ನು ಸಂಗ್ರಹಿಸುತ್ತಿದ್ದೆವು.
ಬಹುತೇಕರು, ನಮ್ಮ ಬಡಾವಣೆಯ ಮಕ್ಕಳು ಕಾಮನ ದಹನ ಮಾಡುತ್ತಿದ್ದಾರಲ್ಲಾ ಎಂದು ತಮ್ಮ ಮನೆಯಿಂದ ಸ್ವಇಚ್ಛೆಯಿಂದ ಏನೋ ಒಂದು ಉರುವಲನ್ನು ತಂದು ಕೊಟ್ಟರೆ, ಇನ್ನೂ ಕೆಲ ಘಾಟಿ ಜನರು, ಸುಖಾ ಸುಮ್ಮನೆ ಬಾಯಿ ಜೋರು ಮಾಡುತ್ತಾ, ಹೋಗ್ರೋ ಹೋಗ್ರೋ ನಾವು ಏನನ್ನೂ ಕೋಡೋದಿಲ್ಲಾ ಕಣ್ರೋ ಎಂದು ದಬಾಯಿಸಿ ಕಳುಹಿಸುತ್ತಿದ್ದರು. ಹಾಗೆ ಬೈದು ಕಳುಹಿಸಿದರೆ ಹುಡುಗು ಬುದ್ದಿಯ ನಾವು ಸುಮ್ಮನೆ ಬಿಡ್ತೀವಾ? ಹಬ್ಬದ ನೆಪದಲ್ಲಿ ಗುಂಪಿನಲ್ಲಿ ಗೋವಿಂದಾ ಅಂತಾ ಎಲ್ಲರೊಟ್ಟಿಗೆ ಬಾಯಿಗೆ ಬಂದ ಬಯ್ಗುಳವನ್ನೆಲ್ಲ ಅವರತ್ತ ಹೇಳಿ, ರಾತ್ರಿ ಕತ್ತಲಾದ ಮೇಲೆ ಅವರ ಮನೆಯಿಂದ ಯಾವುದಾದರೂ ಉರುವಲನ್ನು ಕಳುವು ಮಾಡಿಯೇ ಬಿಡುತ್ತಿದ್ದೆವು. ಏನೂ ಸಿಕ್ಕಲಿಲ್ಲವೆಂದರೆ ಅವರ ಹಿತ್ತಲಿನ ಮರದ ಅಡ್ಡ ಗೇಟುಗಳನ್ನೇ ಬಿಡುತ್ತಿರಲಿಲ್ಲ. ಇಂತಹ ಪುಂಡ ಮಕ್ಕಳ ಬೈಗುಳಕ್ಕೆ ಏಕೆ ಬೀಳುವುದು ಎಂದೋ, ಇಲ್ಲವೇ ಕೈಗೆ ಸಿಕ್ಕದ್ದನ್ನು ಕದ್ದು ಕೊಂಡು ಹೋಗುತ್ತಾರೆ ಎಂಬ ಭಯದಿಂದಲೋ ಏನೋ ಬಹಳಷ್ಟು ಮಂದಿ ಏನಾದರೂ ಒಂದು ಉರುವಲನ್ನು ಕೊಟ್ಟು ನಮ್ಮನ್ನು ಸಾಗ ಹಾಕುತ್ತಿದ್ದರು. ಹಾಗೆ ಸಂಗ್ರಹಿಸಿದ ಸೌದೆ, ಹಳೆಯ ಮೊರ, ಪೊರಕೆ ಇನ್ನು ಮುಂತಾದ ಉರುವಲುಗಳನ್ನೆಲ್ಲಾ ಒಂದು ಮೈದಾನದಲ್ಲಿಯೋ ಅಥವಾ ಸ್ವಚ್ಛ ಮಾಡಿದ ಖಾಲಿ ಸೈಟಿನಲ್ಲಿ ಒಟ್ಟುಗೂಡಿಸಿ ಅದನ್ನು ಕಾಯುವುದೇ ಒಂದು ದೊಡ್ಡ ಕೆಲಸವಾಗುತ್ತಿತ್ತು.
ಇನ್ನು ಕಾಮನ ಹುಣ್ಣಿಮೆ ದಿನ ಬಂದಿತೆಂದರೆ ಹಿಂದಿನ ದಿನವೇ ಅಂಗಡಿಯಿಂದ ಗುಲಾಲ್, ಪಿಚಕಾರಿ ಮುಂತಾದವುಗಳನ್ನು ಖರೀದಿಸಿ ತಂದರೆ, ಗುಲಾಲ್ ಖರೀದಿಸಲು ಆಗದಿದ್ದವರು, ನೀರಿಗೆ ಸುಣ್ಣ ಮತ್ತು ಅರಿಶಿನ ಬೆರೆಸಿ ಕೆಂಪಾದ ಓಕಳಿಯನ್ನೇ ತಯಾರಿಸಿಕೊಂಡು ಎಲ್ಲರ ಮನೆ ಮನೆಗೂ ಗುಂಪು ಗುಂಪಾಗಿ ಹೋಗಿ ಒಳಗೆ ಅಡಗಿ ಕುಳಿತವರನ್ನು ಹೊರಗೆ ಎಳೆದು ತಂದು ಅಡಿಯಿಂದ ಮುಡಿ ತನಕ ಬಣ್ಣದ ನೀರಿನ ಅಭಿಷೇಕ ಮಾಡಿಸಿ ಅವರನ್ನು ಜೊತೆಗೆ ಕರೆದು ಕೊಂಡು ಬೇರೆ ಬೇರೆ ಗಲ್ಲಿಗಳ ಸ್ನೇಹಿತರ ಮನೆಗಳಿಗೆ ಹೋಗಿ ಹೋಲಿ ಆಟವಾಡುತ್ತಾ ಹೋದ ಮನೆಯಲ್ಲೆಲ್ಲಾ ಕೊಟ್ಟದ್ದನೇ ತಿನ್ನುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಾ ಇಡೀ ದಿನ ಕಳೆಯುತ್ತಿದ್ದದ್ದೇ ಗೊತ್ತಾಗುತ್ತಿರಲಿಲ್ಲ. ಹಾಗೆ ಹೋದ ಮನೆಗಳಲ್ಲಿ ಎಲ್ಲರಿಗೂ ಸಾಕಾಗುವಷ್ಟು ಸಿಹಿ ತಿಂಡಿಗಳನ್ನು ಮಾಡಿಟ್ಟಿರುತ್ತಿದ್ದರು ಮತ್ತು ಅದನ್ನೆಲ್ಲಾ ಸಂತೋಷದಿಂದ ಮಕ್ಕಳಿಗೆ ಹಂಚಿ ಎಲ್ಲರೂ ತಿಂದು ಸಂಭ್ರಮಿಸುತ್ತಿದ್ದದ್ದನ್ನು ನೋಡಿ ಸಂಭ್ರಮಿಸುತ್ತಿದ್ದರು ಮತ್ತು ಮನೆಯವರೆಲ್ಲರೂ ಒಟ್ಟಿಗೆ ಹೊರಬಂದು ಪರಸ್ಪರ ಬಣ್ಣಗಳನ್ನು ಎರೆಚಾಡುತ್ತಾ ಆನಂದ ಪಡುತ್ತಿದ್ದರು.
ಇನ್ನು ಸಂಜೆ ಕತ್ತಲಾಗುತ್ತಿದ್ದಂತೆಯೇ ಎಲ್ಲರೂ ಕಟ್ಟಿಗೆ ಸಂಗ್ರಹಿಸಿದ ಜಾಗಕ್ಕೆ ಬಂದು ಅ ಕಟ್ಟಿಗೆಗಳನ್ನೆಲ್ಲಾ ಒಪ್ಪವಾಗಿ ಗೋಪುರದ ರೀತಿಯಲ್ಲಿ ಜೋಡಿಸಿ, ಸಂಗ್ರಹಿಸಿದ ಮೊರವೊಂದಕ್ಕೋ ಇಲ್ಲವೇ ಯಾವುದಾದರೂ ರೊಟ್ಟೊಂದಕ್ಕೆ ಕಣ್ಣು, ಮೂಗು, ಬಾಯಿ ಬರೆದು ಅದಕ್ಕೆ ಕಾಮನ ರೂಪಕ್ಕೆ ತಂದು ಎಲ್ಲಾ ಹಿರಿಯರ ಸಮ್ಮುಖದಲ್ಲಿ ಬೆಂಕಿ ಹಚ್ಚಿ ಅದು ಸಂಪೂರ್ಣ ಉರಿದು ಬೂದಿಯಾಗುವವರೆಗೂ ಅಲ್ಲೇ ಜೋರಾಗಿ ಲಬ ಲಬೋ ಎಂದು ಬಾಯಿ ಬಡಿದು ಕೊಳ್ಳುತ್ತಾ, ಇಲ್ಲವೇ, ಹಾಡುಗಳನ್ನು ಹಾಡುತ್ತಾ, ಪ್ರಸಾದ (ಸಾಧಾರಣವಾಗಿ ಕಡಲೇಕಾಳು ಹುಸ್ಲಿ) ತಿನ್ನುತ್ತಾ ಮಜಾ ಮಾಡುತ್ತಿದ್ದದ್ದು ನಿಜಕ್ಕೂ ಮನಸ್ಸಿಗೆ ಮುದ ಕೊಡುತ್ತಿತ್ತು.
ಆದರೆ ಇಂದಿನ ಮಕ್ಕಳಿಗೆ ಆ ರೀತಿಯ , ಸಂಭ್ರಮ, ಸಂಪ್ರದಾಯಗಳ ಪರಿಚಯವೇ ಇಲ್ಲವಾಗಿರುವುದು ನಿಜಕ್ಕೂ ದುಖಃ ಕರವಾದ ವಿಷಯವಾಗಿದೆ. ಎಲ್ಲೋ ಕೆಲವೊಂದು ಕಡೆ ಅದೂ ಉತ್ತರ ಭಾರತೀಯರು ಹೆಚ್ಚಾಗಿರುವ ಕಡೆ ರಾವಣನ ದಹನ ಎಂದು, ಅಂಗಡಿಯಿಂದ ಕೊಂಡು ತಂದ ಸಿದ್ದ ಪಡಿಸಿದ ರಾವಣನ ಬೆದರು ಬೊಂಬೆ ಉರಿಸುತ್ತಾರಾದರೂ, ಹಿಂದಿನಂತೆ ಮನೆ ಮನೆಗೆ ಹೋಗಿ ಉರುವಲು ಸಂಗ್ರಹಿಸಿ ಕಾಮನನನ್ನು ತಯಾರಿಸಿದಂತಹ ಮಜಾ ಕೊಡುವುದಿಲ್ಲ. ಇನ್ನು ಬಳಸುವ ಬಣ್ಣಗಳೆಲ್ಲವೂ ರಾಸಾಯನಿಕವಾಗಿದ್ದು ಅದು ಹಾನಿಕಾರವಾಗಿರುವುದು ಮತ್ತು ಹಾಗೆ ಬಳಿದ ಬಣ್ಣಗಳು ದೇಹದಿಂದ ಮೂರ್ನಾಲ್ಕು ದಿನಗಳು ಹೋಗದೆ ಅನೇಕ ರೀತಿಯ ತುರಿಕೆಗಳಿಗೂ ಕಾರಣವಾಗಿರುವುದು ನಿಜಕ್ಕೂ ಕಳವಳಕಾರಿಯ ಸಂಗತಿ.
ಆಧುನಿಕತೆ ಹೆಸರಿನಲ್ಲಿ ನಮ್ಮ ಪೂರ್ವಜರು ಸಂಪ್ರದಾಯದ ರೂಪದಲ್ಲಿ ರೂಢಿಗೆ ತಂದಿದ್ದ ಹಬ್ಬ ಹರಿದಿನಗಳನ್ನು ಆಚರಿಸುವ ಮತ್ತು ಬೇಸಿಗೆ ನೆರೆ ಹೊರೆಯವರ ಮನೆಗಳ ಆತಿಥ್ಯದ ಸವಿಯನ್ನೇ ಅರಿಯದ ಇಂದಿನ ಮಕ್ಕಳಿಗೆ ಸ್ವಲ್ಪ ಸಮಯ ಮಾಡಿಕೊಂಡು ನೆರೆ ಹೊರೆ ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಹೊಸ ಸಂಬಂಧಗಳನ್ನು ಬೆಸೆಯುವ ನಮ್ಮ ಹಬ್ಬಗಳ ಅರ್ಥಪೂರ್ಣ ಆಚರಣೆಗಳನ್ನು ಪರಿಚಯಿಸುವ ಗುರುತರ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ.
ಏನಂತೀರೀ?
ನಿಮ್ಮವನೇ ಉಮಾಸುತ