ಹಿರಿಯರು ಇರಲವ್ವಾ ಮನೆತುಂಬಾ

ಹಬ್ಬ ಹರಿದಿನಗಳಲ್ಲಿ, ಮದುವೆ ಮುಂಜಿ ನಾಮಕರಣ ಮುಂತಾದ ಶುಭ ಸಮಾರಂಭಗಳಲ್ಲಿ ಆಚಾರ, ವಿಚಾರ ಕಟ್ಟು ಪಾಡುಗಳು ಮತ್ತು ಸಂಪ್ರದಾಯದ ಆಚರಣೆಗಳೇ ಹೆಚ್ಚಿನ ಮಹತ್ವ ಪಡೆದಿರುತ್ತವೆ. ಒಂದೊಂದು ಪ್ರದೇಶದಲ್ಲಿಯೂ, ಒಬ್ಬೊಬ್ಬರ ಮನೆಗಳಲ್ಲಿಯೂ ಅಲ್ಲಿಯ ಸ್ಥಳೀಯ ಪರಿಸರ, ಹವಾಮಾನ ಮತ್ತು ಅನುಕೂಲಕ್ಕೆ ತಕ್ಕಂತೆ ಆಚರಣೆಗಳು ರೂಢಿಯಲ್ಲಿರುತ್ತದೆ. ಹಾಗಂದ ಮಾತ್ರಕ್ಕೆ ಈ ಪದ್ದತಿಗಳಿಗೆ ಯಾವುದೇ ಲಿಖಿತ ವಿಧಿವಿಧಾನಗಳು ಇಲ್ಲವಾದರೂ ಅದು ತಲೆ ತಲಾಂತರದಿಂದ ಹಿರಿಯರು ಆಚರಿಸುತ್ತಿದ್ದದ್ದನು ನೋಡಿ, ಕೇಳಿ ತಿಳಿದು ರೂಢಿಯಲ್ಲಿಟ್ಟು ಕೊಂಡು ಬಂದಿರುತ್ತಾರೆ.

ನೆನ್ನೆ ವರಮಹಾಲಕ್ಷ್ಮಿ ಹಬ್ಬ. ಸಕಲ ಹಿಂದೂಗಳು ಯಾವುದೇ ಜಾತಿಯ ತಾರತಮ್ಯವಿಲ್ಲದೇ ಬಹಳ ಶ್ರದ್ಧಾ ಭಕ್ತಿಗಳಿಂದ ಆಚರಿಸುವ ಹಬ್ಬ. ಜೊತೆಗೆ ಸಕಾಲಿಕವಾಗಿ ಮಳೆಯೂ ಬಿದ್ದ ಕಾರಣ, ನಮ್ಮ ಸುತ್ತಮುತ್ತಲ ಪ್ರದೇಶಗಳೆಲ್ಲಾ ಹಚ್ಚ ಹಸಿರನ್ನು ಹೊತ್ತು ಪ್ರಕೃತಿಯೇ ನಮ್ಮೆಲ್ಲರ ಸಂಭ್ರಮವನ್ನು ಇಮ್ಮಡಿಗೊಳಿಸಿ ಹಬ್ಬಕ್ಕೆ ಇನ್ನೂ ಮೆರಗನ್ನು ‌ತಂದಿದೆ.. ಇಂತಹ ಹಬ್ಬದಂದು ಮನೆಯಲ್ಲಿಯೂ ಅದೇ ವಾತಾವರಣ ಮೂಡಿಸಲು ತಳಿರು ತೋರಣಗಳಿಂದ ಸಿಂಗರಿಸುವುದು ವಾಡಿಕೆ. ನಮ್ಮ ಪೂಜ್ಯ ತಂದೆಯವರು ಇದ್ದಾಗ ಅವರೇ ಹಿಂದಿನ ದಿನ ಚಿಗುರಾದ ಮಾವಿನ ಎಲೆಗಳನ್ನು ತಂದು ಅದನ್ನು ತೊಳೆದು, ನೀಟಾಗಿ ಒರೆಸಿ ಒಂದೇ ಸಮಾನಾದ ಎಲೆಗಳನ್ನೆಲ್ಲಾ ಜೋಡಿಸಿ ತುದಿಯನ್ನು ಸರಿಸಮನಾಗಿ ಕತ್ತರಿಸಿ, ಮನೆಯ ಮುಖ್ಯದ್ವಾರ ಮತ್ತು ದೇವರ ಮನೆಗಳ ಬಾಗಿಲಿನ ಹಳೆಯ ತೋರಣಗಳನ್ನು ತೆಗೆದು., ದಾರವನ್ನು ಮತ್ತೊಮ್ಮ ಹುರಿಗೊಳಿಸಿ, ಬಾರೋ ಬಾರೋ ಮಗು, ಇಲ್ಲವೇ ಬಾರೋ ಬಾರೋ ಅಕ್ಕಾ, ಅಪ್ಪಾ ಬರುವ ಹೊತ್ತಿಗೆ ತೋರಣ ಎಲ್ಲಾ ಕಟ್ಟಿ ಬಿಡೋಣ ಎಂದು ನನ್ನ ಮಗ ಇಲ್ಲವೇ ಮಗಳನ್ನು ಪೂಸಿ ಹೊಡೆಯುತ್ತಾ ಅವರ ಸಹಾಯದೊಂದಿಗೆ ಚೆಂದದ ತೋರಣಗಳನ್ನು ಕಟ್ಟಿ ಉಳಿದ ಎಲ್ಲಾ ಬಾಗಿಲುಗಳಿಗೆ ಮಾವಿನ ಕುಡಿ ಮತ್ತು ಬೇವಿನ ಕುಡಿಯನ್ನು ಸಿಕ್ಕಿಸಿದರೆ, ನಮ್ಮ ತಾಯಿಯವರು ಮನೆಯ ಕೈ ತೋಟದಲ್ಲಿಯೇ ಬಿಟ್ಟ ಹೂವುಗಳ ಜೊತೆಗೆ ಸಿಕ್ಕ ಪಕ್ಕ ಪತ್ರೆಗಳನ್ನೆಲ್ಲಾ ಸೇರಿಸಿ ಮುದ್ದಾದ ತೋಮಲವನ್ನು ಕಟ್ಟಿ ಬಾಗಿಲಿಗೆ ಸಿಕ್ಕಿಸಿ ಹಬ್ಬದ ಹಿಂದಿನ ದಿನವೇ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿ ಬಿಡುತ್ತಿದ್ದರು.

ಆದರಿಂದು ಆ ರೀತಿ ಸಂಭ್ರಮಿಸಲು ನಮ್ಮ ಜೊತೆ ನಮ್ಮ ತಾಯಿ ಮತ್ತು ತಂದೆಯವರು ಇಲ್ಲದಿದ್ದರೂ ಆ ಸತ್ಸಂಪ್ರದಾಯಗಳಿಗೆ ಕಿಂಚಿತ್ತೂ ಚ್ಯುತಿ ಬಾರದಂತೆ ನಡೆಸಿಕೊಂಡು ಹೋಗುವುದನ್ನು ತಮ್ಮ ಮೊಮ್ಮಕ್ಕಳಿಗೆ ಕಲಿಸಿ ಕೊಟ್ಟಿ ಹೋಗಿದ್ದಾರೆ. ನೆನ್ನೆ ಸಂಜೆ ಮನೆಯಿಂದಲೇ ಕಛೇರಿಯ ಕೆಲಸ ಮುಗಿಸಿದಾಗ ತಡರಾತ್ರಿಯಾಗಿತ್ತು. ಅಷ್ಟು ಹೊತ್ತಿಗಾಗಲೇ ನನ್ನ ಮಗ, ಎದುರು ಮನೆಯಿಂದ ಮಾವಿನ ಸೊಪ್ಪು, ಬಾಳೇಕಂದು ಎಲ್ಲವನ್ನೂ ತಂದು ತನ್ನ ತಾಯಿಯ ಸಹಾಯದಿಂದ ತನ್ನ ತಾತನ ರೀತಿಯಲ್ಲಿಯೇ ಅತ್ಯಂತ ಚೊಕ್ಕವಾಗಿ ತೋರಣ ಕಟ್ಟಿದ್ದನ್ನು ನೋಡಿದಾಗ, ನನಗೆ ಅರಿವಿಲ್ಲದಂತೆಯೇ ನನ್ನ ಕಣ್ಣುಗಳು ತುಂಬಿ ಹೃದಯ ಭಾರವಾಗಿ ಅಗಲಿದ ನಮ್ಮ ತಂದೆಯರ ನೆನಪಾಯಿತು.

ಬೆಳಿಗ್ಗೆ ತೈಲಾಭ್ಯಂಜನಕ್ಕೆ ಮನೆಯವರೆಲ್ಲರೂ ಸಿದ್ಧರಾದಾಗ ಮಗಳು ನನಗೆ ಮತ್ತು ನನ್ನ ಮಗನ ಹಣೆಗೆ ಕುಂಕುಮವಿಟ್ಟು ನೆತ್ತಿಯ ಮೇಲೆ ಹರಳೆಣ್ಣೆ ಒತ್ತಿ ತನ್ನಮ್ಮನ ಜೊತೆಯಲ್ಲಿ ಆರತಿ ಬೆಳಗುತ್ತಿದ್ದಾಗ ನನಗೆ, ಆಕೆ ನನ್ನ ಮಗಳಂತೆ ಕಾಣದೆ ಸ್ವತಃ ನನ್ನ ತಾಯಿಯೇ ನನಗೆ ಆರತಿ ಮಾಡುತ್ತಿದ್ದಾರೇನೋ ಎಂಬಂತೆ ಭಾಸವಾಗಿದ್ದಂತೂ ಸತ್ಯ. ಅದೇ ರೀತಿ ಹಬ್ಬಕ್ಕೂ ಮುಂಚೆ, ಅಮಾವಾಸ್ಯೆಗೂ ಮೊದಲೇ ಅಮ್ಮಾ ಮಕ್ಕಳೇ ಸೇರಿಕೊಂಡು ಮನೆಯ ಧೂಳನ್ನೆಲ್ಲಾ ತೆಗೆದು ದೇವರುಗಳನ್ನೆಲ್ಲಾ ತೊಳೆದು ಮತ್ತೊಮ್ಮೆ ಅಣಿಗೊಳಿಸಿ,ತಾತ ಇಲ್ಲದಿರುವ ಕಾರಣ ನನ್ನಿಂದಲೇ ಭಕ್ಷೀಸು ಕೂಡಾ ಪಡೆದಿದ್ದರು.

ಮನೆಯವರೆಲ್ಲರೂ ಕೂಡಿ ಸರಳವಾಗಿ ಆದರೆ ಸಾಂಗೋಪಾಂಗವಾಗಿ ಪೂಜೆಗಳನ್ನು ಮುಗಿಸಿ, ಪ್ರಸಾದದ ಜೊತೆ ಬೆಳಗಿನ ಉಪಹಾರ ಮುಗಿಸಿದ ಸಂತರ ಮಧ್ಯಾಹ್ನದ ಅಡುಗೆಯ ತಯಾರಿಗೆ ಸಿದ್ದವಾದಾಗ, ನಾನು ಮತ್ತು ನನ್ನ ಮಗ ತರಕಾರಿ ಹೆಚ್ಚಿಕೊಟ್ಟು, ತೆಂಗಿನಕಾಯಿ ತುರಿದುಕೊಟ್ಟರೆ, ಮಗಳು ತನ್ನ ಅಜ್ಜಿ (ನಮ್ಮ ಮನೆಯವರ ತಾಯಿ)ಯ ಜೊತೆ ಬೇಳೆ ಒಬ್ಬಟ್ಟಿಗೆ ಹೂರಣ ಹೇಗೆ ಸಿದ್ಧ ಪಡಿಸಿಕೊಳ್ಳು ಬೇಕು ಎಂಬುದನ್ನು ಕಲಿತುಕೊಳ್ಳುತ್ತಿದ್ದಳು. ನನ್ನ ಮನೆಯೊಡತಿ ಉಳಿದ ಪದಾರ್ಥಗಳ ತಯಾರಿಯಲ್ಲಿ ಮಗ್ನಳಾಗಿದ್ದರೆ, ನಮ್ಮ ಮಾವನವರು ಮನೆಯ ಹಿತ್ತಲಿನಿಂದ ಕತ್ತರಿಸಿ ತಂದ ಬಾಳೇ ಎಲೆಯನ್ನು ತೊಳೆದು ಒರೆಸಿ, ಒಬ್ಬಟ್ಟು ಮಾಡಲೂ ಮತ್ತು ಊಟಕ್ಕೂ ಬಾಳೆ ಎಲೆ ಸಿದ್ದ ಪಡಿಸಿಟ್ಟಿದ್ದರು. ಹೀಗೆ ಮನೆಮಂದಿಯೆಲ್ಲಾ ಒಟ್ಟಿಗೆ ಸೇರಿ ಕೊಂಡು ನಮ್ಮ ಮನೆ 1000, ಸಂಭ್ರಮ (ಸಾವಿರದ ಸಂಭ್ರಮಕ್ಕೆ) ಅನ್ವರ್ಥದಂತೆ ಸಂಭ್ರಮವಾಗಿ ಹಬ್ಬವನ್ನು ಆಚರಣೆ ಮಾಡಿದ್ದನ್ನು ಹೇಳುವುದಕ್ಕಿಂತ ಆಚರಿಸಿ ಅನುಭವಿಸಿದರೇ ಚೆಂದ ಮತ್ತು ಮನಕ್ಕೆ ಆನಂದ.

ಅಂದು ನಮ್ಮ ತಾಯಿ ತಂದೆಯರು ತಮ್ಮ ಮೊಮ್ಮಕ್ಕಳಲ್ಲಿ ಬಿತ್ತಿ ಹೋದ ಸಂಪ್ರದಾಯದ ಬೀಜ ಇಂದು ಮೊಳಕೆಯೊಡೆದು ಸಣ್ಣ ಸಸಿಯಾಗಿ ಟಿಸಿಲು ಹೊಡೆಯುತ್ತಿದ್ದರೆ ಅದಕ್ಕೆ ಇಂದು ನಮ್ಮ ಅತ್ತೆ ಮತ್ತು ಮಾವನವರು ಸರಿಯಾದ ಸಮಯಕ್ಕೆ ಸಂಪ್ರದಾಯದ ನೀರೇರದು ಪೋಷಿಸಿ ಹೆಮ್ಮರ ಮಾಡುವ ಕನಸು ಹೊತ್ತಿದ್ದಾರೆ ಮತ್ತು ಅದರಲ್ಲಿ ಬಹಳಷ್ಟು ಸಾಕಾರವನ್ನೂ ಪಡೆದಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸದು.

ಇಂದಿಗೂ ಸಹಾ ನಾವು ನಮ್ಮನ್ನು ಪರಿಚಯಿಸಿಕೊಳ್ಳುವ ಸಂಧರ್ಭದಲ್ಲಿ ಇಂತಹ ಊರಿನ, ಇಂತಹ ವಂಶದ, ಇಂತಹವರ ಮೊಮ್ಮಕ್ಕಳು, ಇಂತಹವರ ಮಕ್ಕಳು ಎಂದೇ ನಮ್ಮ ಹಿರಿಯರ ಅಸ್ತಿತ್ವದಿಂದಲೇ ಗುರುತಿಸಿಕೊಳ್ಳುತ್ತೇವೆ.‌ ನಮ್ಮ ವಂಶಾವಳಿಯ ಚೆನ್ನಾಗಿದ್ದಲ್ಲಿ ಅವರ ಮುಂದಿನ ಪೀಳಿಗೆಯೂ ಅದೇ ಸಂಸ್ಕಾರವನ್ನು ಹೊಂದಿರುತ್ತದೆ ಎಂಬುದೇ ಎಲ್ಲರ ನಂಬಿಕೆಯಾಗಿದೆ. ನಾವುಗಳು ತಪ್ಪು ಮಾಡಿದರೂ ಬೈಯ್ಯುವುದು ನಮ್ಮ ಹಿರಿಯರನ್ನೇ. ಯಾವ ವಂಶದವನಪ್ಪಾ ಇವನು? ಅದೇನು ಹೇಳ್ಕೊಟ್ಟಿದ್ದಾರಪ್ಪಾ ಇವರ ಅಪ್ಪಾ ಅಮ್ಮಾ ಎಂದು ಹಿರಿಯರನ್ನೇ ಬೈಯ್ಯುತ್ತಾರೆ.

ಇಂದು ಆಗಸ್ಟ್ 21, ಹಿರಿಯ ನಾಗರೀಕರ ದಿನ. ದುರಾದೃಷ್ಟವಶಾತ್ ಇಂದಿನ ಬಹುತೇಕ ಮನೆಗಳಲ್ಲಿ ಹಿರಿಯರನ್ನು ಒಬ್ಬಂಟಿಯಾಗಿ ಮಾಡಿ ನಾನಾ ಕಾರಣಗಳಿಗಾಗಿ ದೂರ ಇರುತ್ತಾರೆ. ಹಾಗೆ ದೂರ ಹೋಗುವುದು ತಪ್ಪು ಎಂದು ಹೇಳುವುದಿಲ್ಲ. ಆದರೆ ನಮ್ಮ ಮನೆಯ ಹಿರಿಯರನ್ನೂ ಅವರ ಕಡೆಯ ದಿನಗಳಲ್ಲಿ ನಮ್ಮೊಂದಿಗೆ ಇಟ್ಟುಕೊಂಡು ಯಥಾಶಕ್ತಿ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವರೇನೂ ನಮ್ಮಿಂದ ಪ್ರತಿದಿನ ಭಕ್ಷ್ಯ ಭೋಜನಗಳನ್ನೇನೂ ಬಯಸುವುದಿಲ್ಲ. ನಮ್ಮಿಂದ ಹಣಕಾಸಿನ ನೆರವನ್ನಂತೂ ಕೇಳುವುದಿಲ್ಲ. ಅವರಿಗೆ ಬೇಕಾದದ್ದು ಮಕ್ಕಳ ಮತ್ತು ಮೊಮ್ಮಕ್ಕಳ ಪ್ರೀತಿ ಮತ್ತು ವಿಶ್ವಾಸ ಅಷ್ಟೇ. ದಯವಿಟ್ಟು ನಮ್ಮ ಪೋಷಕರನ್ನು ವೃದ್ದಾಶ್ರಮಕ್ಕೆ‌ ಸೇರಿಸದಿರೋಣ. ಹೆತ್ತ‌ಮಕ್ಕಳೇ ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿ ಕೊಳ್ಳಲು ಆಗದಿದ್ದಲ್ಲಿ ವೃದ್ಧಾಶ್ರಮದಲ್ಲಿ ಸಂಬಂಧವೇ ಪಡೆದವರು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ ಎಂದು ಹೇಗೆ ತಾನೇ ನಂಬುವುದು?

ಹಿಂದಿನ ಕಾಲದಲ್ಲಿ ಆಶೀರ್ವಾದ ಮಾಡುವಾಗ ಮಕ್ಕಳಿರಲವ್ವಾ ಮನೆ ತುಂಬಾ ಎಂದು ಹೇಳುತ್ತಿದ್ದರು. ಇಂದು ಅದನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡು, ಹೆಣ್ಣಾಗಲೀ, ಗಂಡಾಗಲೀ ಮಕ್ಕಳೆರಡೇ ಇರಲಿ ಮತ್ತು ಅವರ ಜೊತೆಗೆ ಅವರ ಅಜ್ಚಿ ಯಂದಿರು, ತಾತ ಮತ್ತು ಅಜ್ಜನವರು ಜೊತೆಯಲ್ಲಿಯೇ ಇರಲಿ ಎನ್ನುವುದು ಸೂಕ್ತವಲ್ಲವೇ?

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ನೂಲಿನಂತೆ ಸೀರೆ ತಾಯಿಯಂತೆ ಮಗಳು ಎನ್ನುವಂತೆ, ನಾವು ಇಂದು ಕಲಿಸಿ ಕೊಡುವ ಸಂಸ್ಕೃತಿ ಮತ್ತು ಸಂಪ್ರದಾಯಗಳೇ ಮುಂದೆ ತಲಾತಲಾಂತರದವರೆಗೂ ನಮ್ಮ ವಂಶವನ್ನು ಕಾಪಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಹಿಂದಿನಂತೆಯೇ, ಅವಿಭಕ್ತ ಕುಟುಂಬಗಳಾಗಿ ಇರೋಣ. ಅನಿವಾರ್ಯ ಪರಿಸ್ಥಿತಿಯಲ್ಲಿ, ಎಲ್ಲೇ ಇರಲೀ, ಹೇಗೇ ಇರಲೀ, ಹೆತ್ತ ತಂದೆ ತಾಯಿ, ಕಟ್ಟಿ ಕೊಂಡ ಮಡದಿ ಮತ್ತು ಜನ್ಮ ಕೊಟ್ಟ ಮಕ್ಕಳೊಂದಿಗೆ ವಿಭಕ್ತ ಕುಟುಂಬಗಳಾಗಿಯಾದರೂ ಸುಖಃ ಸಂಸಾರ ನಡೆಸೋಣ. ಮನಗಳು ವಿಕಸನಗೊಂಡಂತೆಲ್ಲಾ ಮನೆಗಳು ಅರಳುತ್ತವೆ. ಮನೆಗಳು ಅರಳಿದಾಗ, ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳು ಮಾಯವಾಗಿ ಇಡೀ ಕುಟುಂಬ ಸುಖಃ ಶಾಂತಿ ನೆಮ್ಮದಿಯಿಂದ ಇರುತ್ತದೆ.

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s