ಶ್ರೀರಾಮ ನವಮಿ ಅಂದ್ರೇ ಪೂಜೆ ಜೊತೆ ಪ್ರಸಾದರೂಪದಲ್ಲಿ ಕೊಡುವ ಪಾನಕ, ಕೋಸಂಬರಿ, ನೀರು ಮಜ್ಜಿಗೆಯ ಗಮ್ಮತ್ತೇ ಬೇರೆ. ಇಡೀ ದಿನವೆಲ್ಲಾ ಇದನ್ನೇ ತಿಂದು ಕುಡಿದು ಹೊಟ್ಟೆ ತುಂಬಿಸಿಕೊಳ್ಳಬಹುದಾಗಿದೆ. ರಾಮನವಮಿ ಪಾನಕವೆಂದರೆ ನನಗೆ ಒಂದೆರಡು ರೋಚಕ ಅನುಭವಗಳು ನೆನಪಾಗುತ್ತದೆ. ಅಂತಹ ರಸಾನುಭವ ಇದೋ ನಿಮಗಾಗಿ.
ಆಗಿನ್ನೂ ಎಪ್ಪತ್ತರ ದಶಕ ನಾನಿನ್ನೂ ಸಣ್ಣ ಹುಡುಗ. ರಾಮನವಮಿಯಂದು ಅಮ್ಮಾ ಪಾನಕ, ಕೋಸಂಂಬರಿ, ಮಜ್ಜಿಗೆ ಎಲ್ಲಾ ಮಾಡಿದ್ದರು. ಪಾನಕಕ್ಕೆ ನಾಲ್ಕೈದು ಹನಿ ಪೈನಾಪಲ್ ಎಶೆನ್ಸ್ ಸೇರಿಸಿದ್ದ ಕಾರಣ ಪಾನಕದ ರುಚಿ ಮತ್ತಷ್ಟು ಹೆಚ್ಚಾಗಿದ್ದದ್ದು ನನಗೆ ಬಹಳ ಸೋಜಿಗವೆನಿಸಿತ್ತು. ಮನೆಗೆ ಮುತೈದೆಯರೆಲ್ಲಾ ಬಂದು ಹೋದ ನಂತರ ಅಡುಗೆ ಮನೆಗೆ ಹೋಗಿ ಮೇಲೆ ಇಟ್ಟಿದ್ದ ಸಣ್ಣದಾದ ಎಶೆನ್ಸ್ ಬಾಟೆಲನ್ನು ತೆಗೆದುಕೊಂಡು ಮುಚ್ಚಳ ತೆಗೆದು ಸೊರ್ ಎಂದು ಒಂದರ್ಧ ಮುಚ್ಚಲದಷ್ಟು ಎಶೆನ್ಸ್ ಹಾಕಿಕೊಳ್ಳುತ್ತಿದ್ದಂತೆಯೇ ಬಾಯಲೆಲ್ಲಾ ಒಂದು ರೀತಿಯ ಕಹಿ ಕಹಿ ಅನುಭವ, ಗಂಟಲು ಬೇರೆ ಉರಿಯ ತೊಡಗಿದಂತೆ ಕಿಟಾರ್ ಎಂದು ಕಿರುಚಿಕೊಂಡು ಬಾಟೆಲ್ ಬೀಳಿಸಿ ಬಾಯಿ ತೊಳೆದುಕೊಳ್ಳಲು ಬಚ್ಚಲು ಮನೆಗೆ ಓಡಿ ಹೋಗಿದ್ದೆ.
ಬಂದವರನ್ನು ವಿಚಾರಿಸಿಕೊಳ್ಳುತ್ತಿದ್ದ ಅಮ್ಮಾ ನಾನು ಕಿರಿಚಿದ್ದು ನೋಡಿ ಅಡುಗೆ ಮನೆಗೆ ಬಂದು ನೋಡಿದರೆ ಯಶೆನ್ಸ್ ಬಾಟಲ್ ಒಡೆದು ಗಾಜೆಲ್ಲಾ ಚೂರು ಚೂರಾಗಿದೆ. ಯಶೆನ್ಸ್ ಘಮಲು ಮನೆಯೆಲ್ಲಾ ಹರಡಿದೆ. ಅಷ್ಟರಲ್ಲಿ ಬಾಯಿ ಬಾಯಿ ಬಡಿದುಕೊಳ್ಳುತ್ತಾ, ಬಚ್ಚಲು ಮನೆಯಲ್ಲಿ ಬಾಯಿ ತೊಳೆದುಕೊಳ್ಳುತ್ತಿದ್ದ ನನ್ನನ್ನು ಗಮನಿಸಿ ಬೆನ್ನ ಮೇಲೆ ಗುದ್ದಿದ್ದರು. ಈ ಅಮ್ಮಂದಿರೇ ಹೀಗೆ ಮೊದಲು ಮಕ್ಕಳಿಗೆ ಒಂದು ಗುದ್ದು ಕೊಟ್ಟು ನಂತರವೇ ಸಂತೈಸುವುದು. ಸರಿ ಆಗಿದ್ದು ಆಗಿ ಹೋಗೋಯ್ತು ಸರಿಯಾಗಿ ಬಾಯಿ ತೊಳೆಸಿ ಅಡುಗೆ ಮನೆಗೆ ಕರೆದುಕೊಂಡು ಹೋಗಿ ಒಂದು ಸಣ್ಣ ಬಟ್ಟಲಿಗೆ ಜೇನು ತುಪ್ಪ ಹಾಕಿಕೊಟ್ಟು ನಿಧಾನವಾಗಿ ನೆಕ್ಕಲು ಹೇಳಿದರು. ಜೇನುತುಪ್ಪ ಆದಾದ ನಂತರ ಸಕ್ಕರೆ ಸಂಜೆ ಹೊತ್ತಿಗೆ ಬೆಲ್ಲವನ್ನು ಸವಿದರೂ ಇಡೀ ದಿನ ಬಾಯಿಯ ಕಹಿ ಹೋಗಿರಲಿಲ್ಲ. ಇನ್ನು ಅಡುಗೆ ಮನೆಯನ್ನು ಎಷ್ಟೇ ಒರೆಸಿದ್ದರೂ ಮೂರ್ನಾಲ್ಕು ದಿನಗಳ ಕಾಲ ಯಶೆನ್ಸಿನ ಘಮಲು ಇಡೀ ಮನೆಯನ್ನೇ ಅವರಿಸಿ ಬಂದವರೆಲ್ಲರಿಗೂ ನನ್ನ ಪ್ರತಾಪವನ್ನು ಹೇಳುವಂತಾಗಿತ್ತು.
ಮತ್ತೊಂದು ಪ್ರಸಂಗ ನಡೆದದ್ದು ತೊಂಬತ್ತರ ದಶಕದಲ್ಲಿ. ನಾನಾಗ ಕಾಲೇಜಿನಲ್ಲಿದ್ದೆ. ರಾಮ ನವಮಿ ಹಬ್ಬಕ್ಕೆ ಸರಿಯಾಗಿ ನಮ್ಮ ಕಾಲೇಜಿನಲ್ಲಿ ಪ್ರಿಪರೇಟರಿ ಪರೀಕ್ಷೆಗಳು ನಡೆಯುತ್ತಿದ್ದು ಬೆಳಿಗ್ಗೆ ಮನೆಯಲ್ಲಿ ಅಮ್ಮನಿಗೆ ಪಾನಕ, ಕೂಸಂಬರಿ, ರಸಾಯನ ಮತ್ತು ಹುಳಿಯವಲಕ್ಕಿ ತಯಾರು ಮಾಡುವುದರಲ್ಲಿ ಸಹಾಯ ಮಾಡಿ ರಾಮ ನವಮಿ ಪೂಜೆ ಆದ ಪ್ರಸಾದ ಸ್ವೀಕರಿಸಿದ ನಂತರ ಅವುಗಳನ್ನು ದೊನ್ನೆಗಳಲ್ಲಿ ಹಾಕಿ ನನ್ನ ಪಾಡಿಗೆ ನಾನು ನನ್ನ ಕೋಣೆಯಲ್ಲಿ ಓದು ಕೊಳ್ಳುತ್ತಿದ್ದೆನಾದರೂ, ಮನೆಗೆ ಬಂದು ಹೋಗುತ್ತಿದ್ದವರ ಮಾತು ನನ್ನ ಕಿವಿಯ ಮೇಲೆ ಬೀಳುತ್ತಿತ್ತು.
ನಮ್ಮ ಮನೆಯ ಹತ್ತಿರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ದಂಪತಿಗಳು ಮತ್ತವರ ಇಬ್ಬರು ಗಂಡು ಮಕ್ಕಳು ಬಾಡಿಗೆಗೆ ಹೊಸದಾಗಿ ಬಂದಿದ್ದರು. ಹಬ್ಬದ ದಿನ ಮೇಷ್ಟ್ರು ನಮ್ಮ ಮನೆಯ ರಾಮನವಮಿಗೆ ಬಂದಿದ್ದವರು ಹಾಗೇ ಲೋಕಾಭಿರಾಮವಾಗಿ ಮಾತಾನಾಡುತ್ತಾ ಪ್ರಸಾದ ಎಲ್ಲ ಸ್ವೀಕರಿಸಿದ ನಂತರ ಎಲ್ಲಿ ಮನೆಯಲ್ಲಿ ಯಾರೂ ಕಾಣ್ತಾ ಇಲ್ಲವಲ್ಲಾ? ಎಂದು ಕೇಳಿದಾಗ, ಮಗ ಒಳಗೆ ಅವನ ಕೋಣೆಯಲ್ಲಿ ಓದುಕೊಳ್ಳುತ್ತಿದ್ದಾನೆ ಎಂದರು ನಮ್ಮ ಅಮ್ಮ. ಓ ಹೌದೇ, ಎಂದು ಹೇಳಿ ಧಡಕ್ಕನೆ ನನ್ನ ರೂಮಿನೊಳಗೆ ನುಗ್ಗಿದ ಮೇಷ್ಟ್ರು, ರಾಮ ನವಮಿಯ ಶುಭಾಶಯಗಳು. ಏನಯ್ಯಾ, ಹಬ್ಬದ ದಿನವೂ ಓದ್ತಾ ಇದ್ದೀಯಾ. ಭೇಷ್ ಭೇಷ್. ಚೆನ್ನಾಗಿ ಓದಬೇಕು ಎಂದು ಹೇಳಿ. ಸರಿ ಬಾ ನಮ್ಮ ಮನೆಯ ರಾಮನನ್ನು ನೋಡಿ ಬರುವಿಯಂತೆ ಎಂದರು. ಮೇಷ್ಟ್ರೇ, ಈಗ ಓದುತ್ತಾ ಇದ್ದೀನಿ. ಸ್ವಲ್ಪ ಸಮಯದ ನಂತರ ಬರ್ತೀನಿ ಅಂತಾ ಹೇಳಿದರೂ ಕೇಳದೆ, ಬಾರಯ್ಯಾ, ನಿನ್ನ ಬಗ್ಗೆ ನನಗೆ ಗೊತ್ತಿಲ್ಲವಾ, ಅಮೇಲೆ ನೀನು ಏನೋ ಸಬೂಬು ಹೇಳಿಕೊಂಡು ಬರುವುದೇ ಇಲ್ಲ. ಬ್ರಹ್ಮಚಾರಿಗಳಿಗೆ ಪ್ರಸಾದ ಕೊಟ್ಟರೆ ಪುಣ್ಯ ಬರುತ್ತದೆ ಎಂದು ಹೇಳಿ ನನ್ನನ್ನು ಬಲವಂತ ಮಾಡಿಕೊಂಡು ಕರೆದು ಕೊಂಡು ಹೊರಟೇ ಬಿಟ್ಟರು. ನಮ್ಮ ಅಮ್ಮನೂ ಕೂಡಾ ವಯಸ್ಸಾದವರ ಹತ್ತಿರ ಅಷ್ಟೊಂದು ಹೇಳಿಸಿಕೊಳ್ಳಬಾರದು. ಬೇಗ ಹೋಗಿ ಬಂದು ಬಿಡು ಎಂದಾಗ. ಸರಿ ಎಂದು ಹಾಕಿಕೊಂಡಿದ್ದ ನಿಕ್ಕರ್ ಮೇಲೆಯೇ ಪಂಚೆ ಉಟ್ಟುಕೊಂಡು ಮೇಷ್ಟ್ರ ಮನೆಗೆ ಹೋದೆ.
ಮೇಷ್ಟ್ರು ಬರುವುದನ್ನೇ ಕಾಯುತ್ತಿದ್ದ ಅವರ ಮನೆಯಾಕೆ, ಓ ಬಂದ್ರಾ, ಒಂದೈದು ನಿಮಿಷ ಮಾತಾಡ್ತಾ ಇರಿ. ನಾನು ಪಕ್ಕದ ಮನೆಗೆ ಅರಿಶಿನ ಕುಂಕುಮಕ್ಕೆ ಹೋಗಿ ಬಂದು ಬಿಡ್ತೀನಿ ಎಂದು ಹೇಳಿ ಪಕ್ಕದ ಮನೆಗೆ ಹೊರಟೇ ಬಿಟ್ಟರು. ಸರಿ ನಾನು ಹತ್ತು ಹದಿನೈದು ನಿಮಿಷಗಳು ಕಾದರೂ ಮೇಡಂ ಅವರು ಬರಲಿಲ್ಲವಾದ್ದರಿಂದ ಸರಿ ಮೇಷ್ಟ್ರೇ, ಸ್ವಲ್ಪ ಹೊತ್ತಾದ ಮೇಲೆ ಬರ್ತೀನಿ ಎಂದು ಹೇಳಿ ದೇವರ ಮನೆಯ ರಾಮ ದೇವರಿಗೆ ನಮಸ್ಕರಿಸಿ ಹೊರಡಲು ಅನುವಾದೆ. ಹೇ.. ಇರಪ್ಪಾ ನಮ್ಮವಳು ಬಂದು ಬಿಡ್ತಾಳೆ. ಒಂದು ನಿಮಿಷ ಇರು. ಪಾನಕ ತಂದು ಕೊಡ್ತೀನಿ. ಪಾನಕ ಕುಡಿದು ಮುಗಿಸುವಷ್ಟರಲ್ಲಿ ಅವಳು ಬಂದು ಬಿಡ್ತಾಳೆ ಎಂದು ಹೇಳಿ, ಅಡುಗೆ ಮನೆಯಿಂದ ಕೆಂಬಣ್ಣದ ಪಾನಕ ತಂದು ಕೈಗಿತ್ತು ಪಕ್ಕದಲ್ಲಿ ಕುಳಿತು ಕುಡಿ ಎಂದರು. ಸರಿ ಪಾನಕ ಕುಡಿಯೋಣ ಎಂದು ಮೊದಲನೇ ಗುಟುಕನ್ನು ಬಾಯಿಗೆ ಹಾಕಿಕೊಂಡರೆ, ಅದು ಪಾನಕದ ರೀತಿಯಿಲ್ಲ. ಏನೂ ಒಂತಾರ ಒಗರು ಓಗರು, ಕಹಿ, ಹುಳಿ ಎಲ್ಲರದರ ಸಮ್ಮಿಳನ. ಸರಿ ಮಾತನಾಡಿದರೆ ಸುಮ್ಮನೆ ತೊಂದರೆ ಸಿಕ್ಕಿ ಹಾಕಿ ಕೊಳ್ತೀನಿ ಅಂತ ಪಾನಕದ ಲೋಟವನ್ನು ಪಕ್ಕಕ್ಕೆ ಇಟ್ಟೆ. ನಾನು ಹಾಗೆ ಕುಡಿಯದೇ ಇಟ್ಟಿದ್ದನ್ನು ನೋಡಿದ ಮೇಷ್ಟ್ರು, ಅರೇ ಪಾನಕಾನೇ ಕುಡಿಲಿಲ್ಲಾ. ಯಾಕೆ ಪಾನಕ ಸೇರಲ್ವಾ? ಅದಕ್ಕೆ ನಿಂಬೆ ಹಣ್ಣಿನ ಪಾನಕ ಬೇಡ ಅಂತಾ ರಸ್ನಾ ಮಾಡಿಸಿದ್ದು. ಕುಡಿ ಕುಡಿ ಅಂತಾ ಬಲವಂತ ಮಾಡಿಸಿ ಪಾನಕ ಕುಡಿಸಿಯೇ ಬಿಟ್ಟರು. ಬಿಸಿ ತುಪ್ಪ ನುಂಗುವ ಹಾಗಿಲ್ಲ ಬಿಡುವ ಹಾಗಿಲ್ಲ ಎನ್ನುವ ಹಾಗೆ ಇದು ಪಾನಕ ಅಲ್ಲಾ ಅಂತಾ ಹೇಳುವುದಕ್ಕೇ ಆಗುತ್ತಿಲ್ಲಾ ಮತ್ತು ಕುಡಿಯಲು ಆಗುತ್ತಿಲ್ಲ. ಗಂಟಲೆಲ್ಲಾ ಉರಿ, ಹೊಟ್ಟೆ ತೊಳೆಸುತ್ತಿದೆ. ಏನೂ ಮಾಡದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡು ಹಾಗೂ ಹೀಗೂ ಮಾಡಿ ಅರ್ಧ ಲೋಟ ಕುಡಿಯುವಷ್ಟರಲ್ಲಿ ಮೇಡಂ ಅವರು ಬಂದು ನನ್ನನ್ನು ನೋಡಿ, ಅಯ್ಯೋ ಬೇಜಾರು ಮಾಡಿಕೊಳ್ಳಬೇಡಪ್ಪಾ ಸ್ವಲ್ಪ ತಡ ಆಗಿಹೋಯ್ತು. ಇರು ಪಾನಕ ಕೋಸಂಬರಿ ಕೊಡ್ತೀನಿ ಅಂತ ದೇವರ ಮನೆಗೆ ಹೋದ್ರು. ಅದಕ್ಕೆ ಅವರ ಯಜಮಾನರು ಬರೀ ಕೋಸಂಬರಿ ಕೊಡು. ಪಾನಕ ಆಗಲೇ ಕೊಟ್ಟಿದ್ದೀನಿ ಎಂದರು. ಹಾಂ ಪಾನಕ ಕೊಟ್ರಾ, ಎಲ್ಲಿಂದ ಕೊಟ್ರೀ? ಪಾನಕದ ಲೋಟಗಳೆಲ್ಲಾ ಇಲ್ಲೇ ಇದೆ ಎಂದಾಗ, ಅದೇ ಅಡುಗೆ ಮನೆಯಲ್ಲಿ ಒಲೆ ಪಕ್ಕದಲ್ಲಿದ್ದ ಪಾತ್ರೆಯಿಂದ ಲೋಟಕ್ಕೆ ಹಾಕಿ ಕೊಟ್ಟೆ ಎಂದರು ಮೇಷ್ಟ್ರು. ಅಯ್ಯೋ ಅದ್ಯಾಕ್ರೀ ಕೊಟ್ರೀ. ಅದು ಪಾನಕ ಅಲ್ಲಾ. ಅದು ಕೈ ನೀರು ಅದ್ದುಕೊಳ್ಳುವ ಪಾತ್ರೆ. ಬಾತ್ ಕಲೆಸಿದ ಮೇಲೆ ಕೈ ತೊಳೆದುಕೊಂಡ ನೀರು ಎಂದು ನನಗೂ ಕೇಳುವ ಹಾಗೆ ಹೇಳಿದೊಡನೆ, ನನಗೆ ಹೊಟ್ಟೆ ತೊಳೆಸಿ, ವ್ಯಾಕ್ ಎಂದು ವಾಂತಿ ಮಾಡಿಕೊಳ್ಳಬೇಕೆನಿಸಿತು. ಮಗೂ ಏನು ತಿಳಿದುಕೊಳ್ಳ ಬೇಡ. ಮೇಷ್ಟ್ರಿಗೆ ತಿಳಿಯದೇ ಕೊಟ್ಟು ಬಿಟ್ಟಿದ್ದಾರೆ ಎಂದು ಸಮಾಧಾನ ಪಡಿಸಲು ಯತ್ನಿಸಿದರು. ಮೇಷ್ಟರ ಮುಖದಲ್ಲಿ ಸುಮ್ಮನೆ ಮನೆಯಲ್ಲಿ ಓದುತ್ತಿದ್ದ ಹುಡುಗನನ್ನು ಕರೆತಂದು ಈ ರೀತಿಯ ಪಜೀತಿಗೆ ಒಳಪಡಿಸಿದನಲ್ಲಾ ಎಂಬ ಪಶ್ಚಾತ್ತಾಪ ಎದ್ದು ಕಾಣುತ್ತಿತ್ತು. ನನ್ನ ಮುಖ ಇಂಗು ತಿಂದ ಮಂಗನಂತಾಗಿತ್ತು.
ಎಪ್ಪತ್ತು ಎಪ್ಪತ್ತೆರಡು ವಯಸ್ಸಿನ ಮೇಷ್ಟ್ರಿಗೆ ಕಣ್ಣು ಅಷ್ಟೊಂದು ಸರಿಯಾಗಿ ಕಾಣಿಸುತ್ತಿರಲಿಲ್ಲ. ಆವರು ಅದಾಗಲೇ ದಪ್ಪನೆಯ ಸೋಡಾ ಗ್ಲಾಸ್ ಕನ್ನಡಕ ಹಾಕಿಕೊಳ್ಳುತ್ತಿದ್ದರು. ಅವರಿಗೆ ಮೇಡಂನವರು ದೇವರ ಮನೆಯಲ್ಲಿ ಪಾನಕ ಕೊಸಂಬರಿ ಇಟ್ಟಿರುವುದು ಗೊತ್ತಿರದೆ, ಅಡುಗೆ ಮನೆಯಲ್ಲಿ ಬಾತ್ ಕಲೆಸಿ ಕೈ ಅದ್ದುಕೊಂಡು ಬಣ್ಣವಾಗಿದ್ದ ನೀರನ್ನೇ ಪಾನಕ ಎಂದು ತಿಳಿದು ನನಗೆ ಕೊಟ್ಟುಬಿಟ್ಟಿದ್ದರು. ಸರಿ ಎದ್ದನೋ ಬಿದ್ದನೋ ಎನ್ನುವಂತೆ ಕೋಸಂಬರಿ ಪಾನಕ ತೆಗೆದುಕೊಂಡು ಅವರ ಮನೆಯಲ್ಲಿ ಏನನ್ನೂ ತಿನ್ನದೆ ಮನೆಗೆ ಬಂದು ವಾಂತಿ ಮಾಡಿದ ಮೇಲೆಯೇ ಸ್ವಲ್ಪ ಸಮಾಧಾನವಾಯಿತು. ಅಷ್ಟು ಹೊತ್ತಿಗೆ ನಮ್ಮ ತಂಗಿಯಂದಿರೂ ಮನೆಗೆ ಬಂದು ನೆಡೆದದ್ದೆಲ್ಲವನ್ನು ಕೇಳಿ ತಿಳಿದು ಹೊಟ್ಟೆ ತುಂಬಾ ನಕ್ಕಿದ್ದೇ ನಕ್ಕಿದ್ದು. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವ ಪರಿಸ್ಥಿತಿ ನನ್ನದಾಗಿತ್ತು. ಅವತ್ತು ಇಡೀ ದಿನ ಏನನ್ನೇ ತಿಂದರೂ ಅದೇ ಒಗರು ರುಚಿಯೇ ನನ್ನ ಮನಸ್ಸಿಗೆ ಬಂದು ಇಡೀ ದಿನ ಸರಿಯಾಗಿ ತಿನ್ನಲೇ ಆಗಲಿಲ್ಲ.
ಅಂದಿನಿಂದ ಎಲ್ಲೇ ಹೋಗಲಿ, ಪಾನಕ ಕೊಡ್ತಾ ಇದ್ರೇ ಅಥವಾ ರಾಮನವಮಿ ಬಂದ್ರೆ, ಈ ಪ್ರಸಂಗಗಳು ನನ್ನ ಸ್ಮೃತಿ ಪಟಲದಲ್ಲಿ ಹಾದು ಹೋಗುತ್ತದೆ. ಅದಕ್ಕಾಗಿ ಈಗೆಲ್ಲಾ, ಅಕ್ಕ ಪಕ್ಕದವರು ಪಾನಕ ಕುಡಿದ ಮೇಲೆಯೇ ಅವರ ಮುಖ ನೋಡಿದ ಮೇಲೆಯೇ ನಾನು ಪಾನಕ ಕುಡಿಯುವುದು . ಅಂದಿನಿಂದ ಬೆಳ್ಳಗಿರುವುದು ಹಾಲಲ್ಲ ಎಂಬ ಗಾದೆ ಜೊತೆಗೆ ಬಣ್ಣದ ನೀರೆಲ್ಲಾ ಪಾನಕವಲ್ಲ ಎಂದು ನಾನೇ ಜೋಡಿಸಿಕೊಂಡೆ. ಅದಕ್ಕೇ ಅಲ್ವೇ,
ನಮ್ಮ ಹಿರಿಯರು ಹೇಳಿರುವುದು ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಅಂತಾ. ವೇದ ಸುಳ್ಳಾದರೂ ಗಾದೆ ಸುಳ್ಳಲ್ಲಾ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ
Nice experience
LikeLiked by 1 person
ನಿಮ್ಮ ರಾಮನವಮಿಯ ಪಾನಕ ಕೋಸಂಬರಿ ಕಥೆ ಓದಿದೆ. ನಿಮ್ಮ ಅನುಭವಗಳು ಸ್ವಾರಸ್ಯಕರವಾಗಿದೆ. ರಾಮನವಮಿ ದಿನ ಮನೆಗಳಲ್ಲಲ್ಲದೆ ಹೊರಗಡೆಯೂ ಕೆಲವು ಸಂಸ್ಥೆಗಳವರು ಮತ್ತು ಸೇವಾ ಸಂಘಗಳವರು ರಸ್ತೆಯಲ್ಲಿ ಚಪ್ಪರ ಹಾಕಿ ಪಾನಕ, ಕೋಸಂಬರಿ ಮತ್ತು ನೀರು ಮಜ್ಜಿಗೆ ಕೊಡುವ ಪದ್ಧತಿ ಇದೆ. ನಾನು ಮೊದಲಿನಿಂದಲೂ ನಮ್ಮ ಮತ್ತು ಬಂಧುಗಳ ಮನೆಗಳಲ್ಲಿ ಬಿಟ್ಟರೆ ಹೊರಗಡೆ ಪಾನಕ ಕೋಸಂಬರಿಗಳನ್ನು ತಿನ್ನುತ್ತಿರಲಿಲ್ಲ. ನನ್ನ ಸ್ನೇಹಿತ, ನಾವೆಲ್ಲ ತಿನ್ನಲ್ವ, ತಿಂದರೆ ಏನಾಗುತ್ತೆ ತಿನ್ನೋ ಎಂದು ಬಲವಂತ ಮಾಡುತ್ತಿದ್ದ. ಆದರೂ ನನಗೆ ಮನೆಗಳಲ್ಲಿ ಬಿಟ್ಟರೆ ಹೊರಗಡೆ ಕೊಡುವುದನ್ನು ತಿನ್ನುತ್ತಿರಲಿಲ್ಲ. ಕಾರಣ ಅವರು ಯಾವಯಾವ ನೀರಿನಲ್ಲಿ ಮಾಡಿರುತ್ತಾರೋ ಏನೋ ,ಸ್ವಚ್ಛವಾಗಿ ಮಾಡಿರುತ್ತಾರೋ ಇಲ್ಲವೋ ಎಂಬ ಅನುಮಾನ. ಇದಕ್ಕೆ ಒಂದು ಉದಾಹರಣೆ. ನಾವು ಬೆಂಗಳೂರಿನ ಕೆ.ಆರ್. ರಸ್ತೆಯಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೆವು. ನಮ್ಮ ಮನೆಯ ಪಕ್ಕದಲ್ಲಿ ಒಂದು ಬ್ಯಾಟರಿ ಷಾಪ್ ಇದ್ದು ಅಲ್ಲಿ ಕೆಲಸ ಮಾಡುವ ಇಬ್ಬರು ರಾಮನವಮಿ ದಿವಸ ಪಾನಕ ಕೋಸಂಬರಿ ಮಾಡಿ ಜನರಿಗೆಲ್ಲ ಹಂಚುತ್ತಿದ್ದರು. ನಮ್ಮ ಮನೆಯಲ್ಲಿ ಆಗ ನೀರಿಗೆ ಹಾಹಾಕಾರ ಇದ್ದುದರಿಂದ ಮನೆಯಲ್ಲಿ ಅಲ್ಲದೆ ಹೊರಗಡೆ ಒಂದು ಡ್ರಮ್ಮಿನಲ್ಲಿ ನೀರು ಶೇಖರಿಸಿಡುತ್ತಿದ್ದೆವು. ಅದನ್ನು ಕುಡಿಯಲು ಉಪಯೋಗಿಸದೆ ಬಟ್ಟೆ ಒಗೆಯಲು, ಬೇರೆ ಹೊರಗಡೆ ಕೆಲಸಗಳಿಗೆ ಉಪಯೋಗಿಸುತ್ತಿದ್ದೆವು. ಆ ಅಂಗಡಿಯವರು ರಾಮನವಮಿ ದಿವಸ ಬೆಳಿಗ್ಗೆ ನಮ್ಮ ಮನೆಗೆ ಬಂದು ಇವತ್ತು ರಾಮನವಮಿಯಾದ್ದರಿಂದ ಕೋಸಂಬರಿ ಪಾನಕ ಮಾಡಿ ಹಂಚುತ್ತೇವೆ ಅದಕ್ಕೆ ನಿಮ್ಮ ಮನೆಯ ಡ್ರಮ್ಮಿನಲ್ಲಿರುವ ನೀರು ಕೊಡಿ ಎಂದರು. ನಾನು ” ಇದು ಕುಡಿಯುವ ನೀರಲ್ಲ. ಬಟ್ಟೆ ಒಗೆಯಲು ಅಥವಾ ಪಾತ್ರೆ ತೊಳೆಯಲು ಉಪಯೋಗಿಸುತ್ತೇವೆ. ಜೊತೆಗೆ ಡ್ರಂ ತೊಳೆದು ಬಹಳ ದಿನ ಆಗಿದೆ. ನೀರಿನಲ್ಲಿ ಕಸ ಬೇರೆ ಇದೆ. ದಯವಿಟ್ಟು ಈ ನೀರು ಉಪಯೋಗಿಸಬೇಡಿ. ಇದನ್ಕು
ಕೊಡಲು ನಮ್ಮ ಮನಸ್ಸು ಒಪ್ಪಲ್ಲ, ಬೇರೆ ಕುಡಿಯುವ ನೀರು ಉಪಯೋಗಿಸಿ ” ಅಂದೆ. ಅದಕ್ಕೆ ಅವರು ಅಷ್ಟೊಂದು ನೀರು ಎಲ್ಲಿಂದ ತರೋದು ಸಾರ್, ಕೊಡಿ ಪರ್ವಾಗಿಲ್ಲ. ಕರ್ಬೂಜ, ಬೆಲ್ಲ ಹಾಕಿ ಚೆನ್ನಾಗಿ ಹಿಸುಕಿಬಿಟ್ಟರೆ ಏನೂ ಗೊತ್ತಾಗಲ್ಲ, ಜನ ಕುಡೀತಾರೆ ಅಂತ ತೊಗೊಂಡು ಹೋಗಿ ಮಾಡಿ ಹಂಚಿದರು.. ಜನ ಎರಡೆರಡು ಲೋಟ ಇಸ್ಕೊಂಡು ಕುಡಿಯುತ್ತಿದ್ದರು. ನಾವಂತೂ ಕುಡಿಯಲಿಲ್ಲ. ಇದಕ್ಕೇ ನಾನು ಹೊರಗಡೆ ಕೊಡುವ ಪಾನಕ, ನೀರು ಮಜ್ಜಿಗೆ, ಕೋಸಂಬರಿ ತಿನ್ನುತ್ತಿರಲಿಲ್ಲ. ಸರಿ ತಾನೆ.
LikeLiked by 1 person
ಮಾನ್ಯ, ಶೀ್ರ. ಶೀ್ರಕಂಠ ಬಾಳಿಗ ಸರ್, ಈ ನಿಮ್ಮ ರಾಮನವಮಿಯ ಪಾನಕ, ಕೋಸಂಬರಿ, ನೀರು ಮಜ್ಜಿ ಗೆ ಗಮ್ಮತ್ತು , ಅನುಭವಿಸಿದ್ದೀರೋ ಇಲ್ಲವೋ ಅದು ಬೇರೆ ವಿಷಯ ಅನುಬಹುಸಿದ್ದಂಕಿ ಹೆಚ್ಚಾ ಗಿ ಬಹಳ ಸ್ವಾರಸ್ಯ ವಾಗಿ ಇದನ್ ಬಾಕಿಯವರಿಗೆ ಪಾನಕ, ನೀರು ಮಜ್ಜಿಗೆ ಕುಡಿಸಿ, ಕೋಸಂಬರಿ ಗಮ್ಮತ್ತು ಓದಿ ನಕ್ಕು, ನಕ್ಕು, ಹೊಟ್ಟೆ ಹುಣ್ಣಾಗಿದ್ದು ಬಿದ್ದು, ಬಿದ್ದು, ನಕ್ಕು ಬಿಟ್ಟಿದ್ದೀವಿ ನಾವುಗಳು ರಾಮನವಮಿಯ ದಿವಸ ನಮ್ಮ ಮನೆಯಲ್ಲಿ ಮಾಡಿರುವ ಪಾನಕ, ಕೋಸಂಬರಿಯನ್ನೇ ತಿನ್ನುವುದಿಲ್ಲಾ ಇನ್ನು ಹೋಗಿ, ಹೋಗಿ, ಬೇರೆಯವರ ಮನೆ ರಾಮನವಮಿ ಪಾನಕ, ನೀರು ಮಜ್ಕುಜಿಗೆ ಕುಡಿದು ಕೋಸಂಬರಿ ತಿಂದು ಪಜೀತಿ ಪಡುವುದೆಲ್ಲಿ ಅಂತೂ ಯಿಂತು ತಮ್ಮ ಲೇಖನ ಎಂತಹವರನ್ನು ಬಿದ್ದು, ಬಿದ್ದು, ನಕ್ಕು ಹೊಟ್ಟೆ ಹುಣ್ಣು ಮಾಡಿಸಿರುವುದಂತು ನಿಜ
LikeLiked by 1 person
ಧನ್ಯೋಸ್ಮಿ
LikeLike
ಮಾನ್ಯ, ಶ್ರೀ .ಶ್ರೀಕಂಠ ಬಾಳಿಗಂಚಿ ಸರ್, ತಮ್ಮ ರಾಮನವಮಿಯ ಪಾನಕ, ಕೋಸಂಬರಿ, ನೀರು ಮಜ್ಜಿಗೆ ಗಮ್ಮತ್ತು ಇಂತಹ ಲೇಖನಗಳು ತುಂಬ, ತುಂಬಾ ಬರಲಿ ಮತ್ತು ಎಂದೂ ನಗದೇ ಇದ್ದವರನ್ನು ಬಿದ್ದು ಬಿದ್ದು ಹೊಟ್ಟೆ ಹುಣ್ಣಾಗುವ ಹಾಗೆ ನಗಿಸುವುದರಲ್ಲಿ ನಿಸ್ಸೀಮರು ಬಹಳ ಸಂತೋಷ ಇದನ್ನು ನಿಮ್ಮಮನೆಯವರು ಓದಬೇಕು ಅವರು ಬಿದ್ದು, ಬಿದ್ದು, ಹೊಟ್ಟೆ ಹುಣ್ಣಾಗುವ ಹಾಗೆ ನಗುವುದನ್ನು ತಾವು ನೋಡಿ ಬಿದ್ದು, ಬಿದ್ದು, ನೋಡುವುದನ್ನು ನಿಮ್ಮ ಮಕ್ಕಳು ಸಹ ಓದಿ ಅವರುಗಳು ಬಿದ್ದು, ಬಿದ್ದು, ಹೊಟ್ಟೆ ಹುಣ್ಣಾಗುವಸ್ಟು ನಗುವುದನ್ನು ತಾವು ಈ ಲೇಖನ ಬರೆದ ಮಾನ್ಯ . ಶ್ರೀ .ಶ್ರೀಕಂಠ ಬಾಳಗಂಜಿ ರವರು ನೋಡಿ ಕುಣಿದಾಡಬೇಕು ಅನ್ನುವುದು ನಮ್ಮಗಳೆಲ್ಲರ ವಿನಂತಿ ಮತ್ತು ಪ್ರಾರ್ಥನೆ
LikeLiked by 1 person