ಉಚಿತ ಆಮಿಷಗಳು ಮತ್ತು ದೇಶದ ಆರ್ಥಿಕತೆ

TN_freebiesನೆನ್ನೆ ಯಥಾಪ್ರಕಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳ ಜೊತೆಗೆ ವಿಡೀಯೋಗಳನ್ನು ನೋಡುತ್ತಿದ್ದಾಗ ಎರಡು ವಿಷಯ ನನ್ನ ಗಮನ ಸೆಳೆಯಿತು. ಮೊದಲನೆಯದು ಕರ್ನಾಟಕದ ಸಿಂಗಂ ಎಂದೇ ಖ್ಯಾತಿಯಾಗಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಪೋಲೀಸ್ ಹುದ್ದೆಗೆ ರಾಜೀನಾಮೆ ನೀಡಿ ತಮಿಳುನಾಡಿನ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿರುವುದಲ್ಲದೇ, ಸದ್ಯಕ್ಕೆ ತಮಿಳುನಾಡು ರಾಜ್ಯದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ. ಅವರ ಇತ್ತೀಚಿನ ದಿನಗಳಲ್ಲಿ ಅಧಿಕಾರಕ್ಕೆ ಬರುವ ಸಲುವಾಗಿ ಆ ರಾಜ್ಯದ ಎಐಡಿಎಂಕೆ ಮತ್ತು ಡಿಎಂಕೆ ಪಕ್ಷಗಳು ಜನರ ದಿಕ್ಕು ತಪ್ಪಿಸಿ ಸೋಮಾರಿಗಳನ್ನಾಗಿ ಮಾಡಿರುವುದಲ್ಲದೇ, ರಾಜ್ಯದ ಆರ್ಥಿಕ ಪರಿಸ್ಥಿಯನ್ನು ಯಾವ ಮಟ್ಟಕ್ಕೆ ಇಳಿಸಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿದ್ದರು. ಸದ್ಯಕ್ಕೆ ತಮಿಳುನಾಡಿನ ಸರ್ಕಾರ 5,10,000/- ಕೋಟಿ ಸಾಲದಲ್ಲಿ ಮುಳುಗಿದೆ ಇದಕ್ಕೆ ಕಾರಣ, ಅಧಿಕಾರಕ್ಕೆ ಬಂದ ಎರಡೂ ಪಕ್ಷಗಳು ಉಚಿತವಾಗಿ ಮಿಕ್ಸಿ. ಗ್ರೈಂಡರ್, ಕಲರ್ ಟಿವಿ, ಲ್ಯಾಪ್ ಟ್ಯಾಪ್, ಕೇಬಲ್ ಟಿವಿ ಸಂಪರ್ಕ, ಟಿವಿ ನೋಡೋದಿಕ್ಕೆ ವಿದ್ಯುತ್ , ಹಸು, ಮೇಕೆ, ಉಚಿತ ರೇಷನ್ ಹೀಗೆ ಹೇಳುತ್ತಾ ಹೋದರೆ ಪುಟಗಟ್ಟಲೇ ಬರೆಯುವಷ್ಟು ಉಚಿತವಾಗಿ ನೀಡಿದ ಕಾರಣ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಸರ್ಕಾರದ ಕಛೇರಿ ಬಿಡಿ ಒಂದು ಸರ್ಕಾರೀ ಶಾಲೆಯ ಕಟ್ಟಡವನ್ನೂ ರಿಪೇರಿ ಮಾಡಲು ಸಾಥ್ಯವಾಗುತ್ತಿಲ್ಲ. ಇನ್ನು ರಸ್ತೆಗಳಂತೂ ದೇವರಿಗೇ ಪ್ರೀತಿ ಎಂದು ಹೇಳಿದ್ದರು.

Kj_freegiesಅದೇ ರೀತಿ ಗೋವಾ ವಿಧಾನ ಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಆಮ್ ಆದ್ಮೀ ಪಕ್ಷದ ಅಧ್ಯಕ್ಶ ಅರವಿಂದ್ ಕೇಝ್ರೀವಾಲ್ ಆಮ್ ಆದ್ಮೀ ಪಕ್ಷ ಗೋವಾದಲ್ಲಿ ಅಧಿಕಾರಕ್ಕೆ ಬಂದರೆ, 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೆ 1000 ರೂ, ಗೋವಾದ ಪ್ರತಿಯೊಬ್ಬರ ಮನೆಗಳಿಗೂ 24*7 ವಿದ್ಯುತ್ ಮತ್ತು ನೀರನ್ನು ಉಚಿತವಾಗಿ ನೀಡಲಾಗುತ್ತದೆಯಲ್ಲದೇ, ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣದ ಜೊತೆ ಮೊಹಲ್ಲಾ ಕ್ಲಿನಿಕ್ & ಆಸ್ಪತ್ರೆಗಳನ್ನು ಪ್ರತಿ ಗ್ರಾಮ, ಜಿಲ್ಲೆಗಳಲ್ಲಿ ಆರಂಭಿಸಲಾಗುತ್ತದೆ. ಎಂದು ಬಾರಿ ಉಚಿತ ಕೊಡುಗೆಗಳ ಭರವಸೆ ನೀಡಿ ಜನರನ್ನು ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಈ ಎರಡೂ ಪ್ರಕರಣಗಳನ್ನು ಗಮನಿಸಿದಾಗ ಎಲ್ಲವನ್ನೂ ಉಚಿತವಾಗಿ ಕೊಟ್ಟು ದಿವಾಳಿ ಹಂತಕ್ಕೆ ತಲುಪಿರುವ ವೆನೆಝುವೆಲಾ ದೇಶದ ಕುರಿತಾಗಿ ಕೆಲವು ವರ್ಷಗಳ ಹಿಂದೆ ಬರೆದಿದ್ದ ಲೇಖನ ನೆನಪಿಗೆ ಬಂದಿತು.

ವೆನೆಝುವೆಲಾ ಅತ್ಯಂತ ಸುಂದರ ಮತ್ತು ರಮಣೀಯವಾದ ಪ್ರಕೃತಿ ತಾಣಗಳಿಗೆ ಮತ್ತು ವಿಶ್ವ ಸುಂದರಿಯರ ತಾಣವಾಗಿತ್ತು. ಇಲ್ಲಿನ ಸಮುದ್ರ ತೀರದಲ್ಲಿ ಯಥೇಚ್ಛವಾಗಿ ಪೆಟ್ರೋಲಿಯಂ ದೊರಕುತ್ತಿದ್ದಂತೆಯೇ, ಏಕಾಏಕಿ 1970 ರಲ್ಲಿ ವೆನೆಝುವೆಲಾ ದೇಶವು ಪ್ರಪಂಚದ ಅತ್ಯಂತ 20 ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿತ್ತು.

ven1ನಮ್ಮ ತಮಿಳುನಾಡಿನಂತೆಯೇ ಸುಲಭವಾಗಿ ಅಧಿಕಾರಕ್ಕೆ ಬರಬೇಕೆಂಬ ಏಕೈಕ ಆಸೆಯಿಂದ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ನಿರುದ್ಯೋಗಿಗಳಿಗೆ ಮತ್ತು ಬಡವರಿಗೆ ಪ್ರತೀ ತಿಂಗಳೂ ಸರ್ಕಾರದ ವತಿಯಿಂದ ಮಾಸಾಶನದ ರೂಪದಲ್ಲಿ ಉಚಿತವಾಗಿ ಧನಸಹಾಯವನ್ನು ಮಾಡುವುದಾಗಿ ಚುನಾವಣಾ ಕಾಲದಲ್ಲಿ ಅವರ ರಾಜಕೀಯ ನಾಯಕನೊಬ್ಬ ಪ್ರಕಟಿಸಿದ. ಈ ಆಮಿಷಕ್ಕೆ ಒಳಗಾದ ಜನ ಅವರನ್ನು ಭಾರೀ ಬಹುಮತದಿಂದ ಆಯ್ಕೆ ಮಾಡಿದರು ಎಂದು ಹೇಳಬೇಕಿಲ್ಲ. ಅಂದಿಗೆ ಹೇಗೂ ಸಂಪದ್ಭರಿತ ರಾಷ್ಟ್ರವಾಗಿದ್ದ ಕಾರಣ, ಆತ ದೇಶದ ಐಶ್ವರ್ಯವನ್ನು ಎಲ್ಲರಿಗೂ ಮನಬಂದಂತೆ ಹಂಚಿಬಿಟ್ಟ. ಮತ್ತೆ ಮುಂದಿನ ಚುಣಾವಣೆಯಲ್ಲಿ ಅಧಿಕಾರಕ್ಕೆ ಬರುವ ಸಲುವಾಗಿ ಸರ್ಕಾರಿ ನೌಕರರು ಹಾಗೂ ಕಾರ್ಮಿಕರ ಸಂಬಳವನ್ನು ಐದು ಪಟ್ಟು ಹೆಚ್ಚಿಸಿದ್ದಲ್ಲದೇ, ಒಂಟಿ ತಾಯಂದಿರಿಗೆ ಅನೂಹ್ಯವಾದ ಕೊಡುಗೆಗಳನ್ನಿತ್ತ.

ven32008ರ ಚುನಾವಣೆಯಲ್ಲಂತೂ ಬೆಲೆಯೇರಿಕೆ ಇಲ್ಲದ ಆಹಾರ ಸರಬರಾಜು ವ್ಯವಸ್ಥೆ ಎಂದು ಘೋಷಿಸಿ, ಮತ್ತೆ ಅಧಿಕಾರಕ್ಕೆ ಬಂದ ನಂತರ, ಸರ್ಕಾರವೇ ಎಲ್ಲಾ ಆಹಾರ ಸಾಮಗ್ರಿಗಳ ಬೆಲೆಯನ್ನು ನಿಗಧಿಪಡಿಸಿತು. ಸರ್ಕಾರ ನಿರ್ಧರಿಸಿದ ಬೆಲೆಗೆ ದೈನಂದಿನ ವಸ್ತುಗಳನ್ನು ಮತ್ತು ಆಹಾರವನ್ನು ಸರಬರಾಜು ಮಾಡಲಾಗದೇ ಅನೇಕ ವ್ಯಾಪಾರಿಗಳು ದೀವಾಳಿಗಳಾದರು. ಈ ರೀತಿಯ ತುಘಲಕ್ ನೀತಿಯನ್ನು ಊಹಿಸಿದ ಸುಮಾರು ಮೂವತ್ತು ಲಕ್ಷಕ್ಕೂ ಅಧಿಕ ಸಿರಿವಂತ ಕೈಗಾರಿಕೋದ್ಯಮಿಗಳು, ನುರಿತ ಕೆಲಸಗಾರರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ದೇಶಬಿಟ್ಟು ಅಕ್ಕ ಪಕ್ಕ ದೇಶಗಳಿಗೆ ಪಲಾಯನಗೊಂಡರು. ಇಷ್ಟಾದರೂ ಆ ದೇಶದ ಆಧ್ಯಕ್ಷ ಹಿಂಜರಿಯದೇ ಹೇಗೂ ಪೆಟ್ರೋಲ್ ವ್ಯಾಪಾರದಿಂದ ಹರಿದು ಬರುವ ಹಣದ ಹೊಳೆಯಲ್ಲಿಯೇ ಎಲ್ಲವನ್ನು ನಿಭಾಯಿಸಬಹುದು ಎಂದು ನಿರ್ಧರಿಸಿದ. ಅಲ್ಲಿನ ಉದ್ಯಮಗಳು ಯಾವ ಮಟ್ಟಿಗೆ ಮುಚ್ಚಿ ಹೋಯಿತೆಂದರೆ, ಆಹಾರ ಉತ್ಮನ್ನಗಳನ್ನು ಬಿಡಿ ಟಾಯಲೆಟ್ ಪೇಪರ್ಗಳನ್ನೂ ಸಹ ವಿದೇಶಗಳಿಂದ ಆಮದು ಮಾಡಿಕೊಳ್ಳ ಬೇಕಾದಂತಹ ದೈನೇಸಿ ಸ್ಥಿತಿಗೆ ತಲುಪಿತು. ಇಷ್ಟಾದರೂ ದೇಶದ ಜನರು ಯಾವುದೇ ಕೆಲಸ ಮಾಡದೇ ಸರಕಾರ ಕೊಡುವ ಉಚಿತ ಸವಲತ್ತುಗಳನ್ನೇ ಬಳಸಿಕೊಂಡು ಐಷರಾಮ್ಯದ ಜೀವನವನ್ನು ನಡೆಸತೊಡಗಿದರು. ತಮ್ಮೆಲ್ಲಾ ಖರ್ಛು ವೆಚ್ಚಗಳನ್ನು ಸರ್ಕಾರವೇ ನೋಡಿಕೊಂಡು ಹೋಗುತ್ತಿದ್ದರಿಂದ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲೇ ಇಲ್ಲ

ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ 2005ರಲ್ಲಿ ಪೆಟ್ರೋಲಿಯಂ ಬೆಲೆ ಅಂತರರಾಷ್ಟ್ರೀಯ ಮಾರಕಟ್ಟೆಯಲ್ಲಿ ಇದ್ದಕ್ಕಿದ್ದಂತೆಯೇ ಬಿದ್ದುಹೋದಾಗ ಆ ದೇಶದ ಜನರಿಗೆ ಎಚ್ಚರಿಕೆಯ ಗಂಟೆಗ ಬೇಕಿತ್ತು. ಆದರೆ ಅದಕ್ಕೆ ತಲೆ ಕೆಡಸಿಕೊಳ್ಳದ ದೇಶದ ಅಧ್ಯಕ್ಷ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತೆ ಯಥೇಚ್ಛವಾಗಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಬಿಟ್ಟ ಕಾರಣ ಎಲ್ಲೆಡೆಯೂ ಕಾಂಚಾಣವೇ ಝಣ ಝಣ ಎಂದು ಸದ್ದು ಮಾಡ ತೊಡಗಿದ್ದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಅವರ ನಗದಿಗೆ ಬೆಲೆಯೇ ಇಲ್ಲವಾಗಿ ಅದು ಕೇವಲ ಬಣ್ಣದ ಕಾಗದಂತಾಯಿತು.

ven62018ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಪರೀಸ್ಥಿತಿ ಇನ್ನಷ್ಟು ಬಿಗಡಾಯಿಸಿ, ದೇಶದಲ್ಲಿ ಹಣ ದುಬ್ಬರವು ಶೇಕಡಾ13,00,000ರಷ್ಟಾದಾಗ, ಇದ್ದಕ್ಕಿದ್ದಂತೆಯೇ ಉಚಿತ ಸಬ್ಸಿಡಿ ಎಲ್ಲವೂ ನಿಂತುಹೋಯಿತು. ಅದರೆ ಪಗ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ ಎಂದು ಯಾವುದೇ ಕೆಲಸ ಕಾರ್ಯ ಮಾಡದೆ ತಿಂದು ಮಲಗಿ ಅಭ್ಯಾಸವಾಗಿಹೋಗಿದ್ದವರಿಗೆ ಏಕಾ ಏಕಿ ಕೈಯ್ಯಲ್ಲಿ ಕಾಸು ಓಡಾಡದೇ ಹೋದಾಗ, ಸಣ್ಣ ಮಕ್ಕಳು ಆದಿಯಾಗಿ ಬಹುತೇಕರು ಚಾಕು, ಚೈನು ಬಂದೂಕುಗಳನ್ನು ಹಿಡಿದು ಹಣವಿದ್ದವರನ್ನು ಲೂಟಿ ಮಾಡತೊಡಗಿದರು. ಕೆಲವರ ಬಳಿ ಯಧೇಚ್ಚವಾಗಿ ಹಣವಿದ್ದರೂ ತಿನ್ನಲು ಆಹಾರವೇ ಇಲ್ಲದ್ದಾಗಿತ್ತು. ಮನುಷ್ಯರು ಬಿಡಿ ತಿನ್ನಲು ಆಹಾರವಿಲ್ಲದೆ ಪ್ರಾಣಿ ಸಂಗ್ರಹಾಲಯದಲ್ಲಿದ್ದ ಪ್ರಾಣಿಗಳೆಲ್ಲವೂ ಸತ್ತು ಹೋದವು.

ven420-30 ವರ್ಷಗಳ ಹಿಂದೆ ವಿಶ್ವದ 20 ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದ್ದಂತಹ ದೇಶದಲ್ಲಿ ನಿತ್ಯಾವಶ್ಯಕ ವಸ್ತುಗಳನ್ನು ಅಮದು ಮಾಡಿಕೊಳ್ಳಲು ದೇಶದಲ್ಲಿ ಹಣವಿಲ್ಲ. ಪ್ರಪಂಚದ ಅತೀ ಲಂಚಕೋರ ದೇಶಗಳ ಪಟ್ಟಿಯಲ್ಲಿ ೧೦ನೇ ಸ್ಥಾನಕ್ಕಿಳಿಯಿತು. ಪ್ರಪಂಚದ ಅತ್ಯಂತ ಪ್ರಮಾದಕರವಾದ ರಕ್ತಪಾತ ನಡೆಸುವ ದೇಶಗಳ ಪಟ್ಟಿಯಲ್ಲಿಅಗ್ರಸ್ಥಾನವನ್ನುಗಳಿಸಿತು. ಸುಂದರ ಪ್ರಕೃತಿ ತಾಣಗಳಿದ್ದರೂ ಅಲ್ಲಿನ ರಕ್ತಪಾತ ಮತ್ತು ದೋಚುವಿಕೆಗೆ ಅಂಜಿ ವಿದೇಶೀ ಪ್ರವಾಸಿಗರೂ ಆ ದೇಶಕ್ಕೆ ಪ್ರವಾಸಕ್ಕೆ ಹೋಗುವುದನ್ನು ನಿಲ್ಲಿಸಿಬಿಟ್ಟರು.

ven2ಸದ್ಯಕ್ಕೆ ಆ ದೇಶದಲ್ಲಿ ಸರಿಯಾದ ವಿದ್ಯುತ್ ಶಕ್ತಿ ಇಲ್ಲ. ನಾಲ್ಕು ದಿನಕ್ಕೊಮ್ಮೆ ಕೇವಲ ಒಂದು ಗಂಟೆಗಳ ಕಾಲ ನೀರು ಬರುತ್ತದೆ. ಅಂಗಡಿಗಳು ತೆರೆದಿದ್ದರೂ ಬೇಕಾದ ಅಗತ್ಯವಸ್ತುಗಳು ಸಿಗುವುದಿಲ್ಲ. ವಸ್ತುಗಳು ಇದ್ದರೂ ಕೊಳ್ಳಲು ಹಣವಿಲ್ಲ. ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಶೇಕಡಾ 66ಕ್ಕೆ ಮುಟ್ಟಿದೆ. 2015 ರಿಂದ ಈಚೆ ಪೌಷ್ಟಿಕಾಂಶದ ಅಹಾರದ ಕೊರತೆಯಿಂದಾಗಿ ಅಲ್ಲಿನ ಜನರು ಸರಾಸರಿಯಾಗಿ 10-12 ಕೆಜಿಯುಷ್ಟು ತೂಕವನ್ನು ಕಳೆದುಕೊಂಡಿದ್ದಾರೆ.. ಆಸ್ಪತ್ರೆಯಲ್ಲಿ ಜನರಿಗೆ ಬೇಕಾಗುವ ಔಷಧಿಯೂ ಇಲ್ಲದಂತಹ ದಾರುಣ ಸ್ಥಿತಿಗೆ ತಲುಪಿಯಾಗಿದೆ.

ven5ಯಾವ ದೇಶದಲ್ಲಿ ಪೆಟ್ರೋಲ್ , ಡೀಸೆಲ್ ನೀರಿಗಿಂತ ಅಗ್ಗವಾಗಿತ್ತೋ ನಂತರ ಹತ್ತಾರು ವರ್ಷಗಳ ಕಾಲ ಉಚಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ಪಡೆದು ದೇಶಾದ್ಯಂತ ಅಲೆದಾಡುತ್ತಿದ್ದರೋ ಇಂದು ಅದೇ ದೇಶದಲ್ಲಿ ಹತ್ತು ಲೀಟರ್ ಪೆಟ್ರೋಲ್ ಗೆ ಎರಡರಿಂದ ಮೂರು ದಿನ ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವಂತಹ ದುಸ್ತಿತಿಗೆ ಬಂದು ತಲುಪಿದ್ದಾರೆ. ಇನ್ನು ಹೆಣ್ಣ್ಯು ಮಕ್ಕಳಂತೂ ಒಂದು ಸಣ್ಣ ತುಣುಕು ರೊಟ್ಟಿಗಾಗಿ ರಾತ್ರಿಯಿಡೀ ರೋಡಿನಮೆಲೆ ನಿಂತು ತನ್ನ ಮೈಯ್ಯನ್ನು ಮಾರಿಕೊಂಡು ಜೀವನವನ್ನು ನಡೆಸಬೇಕಾಗಿದೆ. ಸಣ್ಣ ಮಕ್ಕಳು ಅವರಿವರು ಕೊಡುವ ಅಲ್ಪ ಸ್ವಲ್ಪ ತಿಂಡಿಗಾಗಿ ಬೆಳಗಿನ ಜಾವದಿಂದ ಅರ್ಧರಾತ್ರಿಯ ವರೆಗೂ ಸರದಿ ಸಾಲಿನಲ್ಲಿ ಕಾಯುವಂತಹ ದೈನೇಸಿ ಸ್ಥಿತಿ ತಲುದ್ದಾರೆ, ವಯಸ್ಕರು ದಾರಿಯಲ್ಲಿ ಅಡ್ಡಾಡುತ್ತಾ ಯಾರೋ ಸೇದುತ್ತಿರುವ ಸಿಗರೇಟಿನಲ್ಲಿ ಒಂದು ಧಮ್ ಕೊಡಿರೆಂದು ಅಂಗಲಾಚುತ್ತಿರುವುದು ನಿಜಕ್ಕೂ ಹಿಂಸೆ ಎನಿಸಿತ್ತದೆ.

ನಮ್ಮ ದೇಶದಲ್ಲೂ ಅಥಿಕಾರವನ್ನು ಹಿಡಿಯುವ ಸಲುವಾಗಿ ಎಲ್ಲವನ್ನೂ ಆ ಭಾಗ್ಯ ಈ ಭಾಗ್ಯ ಎಂದು ಉಚಿತವಾಗಿ ಕೊಡುತ್ತಲೇ ಹೋದಲ್ಲಿ ಜನರು ಸೋಮಾರಿಗಳಾಗಿ ದೇಶದ ಪರಿಸ್ಥಿತಿ ಇದಕ್ಕಿಂತಲೂ ಭೀಕರವಾಗುವುದರಲ್ಲಿ ಸಂದೇಹವೇ ಇಲ್ಲ. ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ೧೦-೧೨ ವರ್ಷಗಳ ಹಿಂದೆ ಬೆಂಗಳೂರಿನ ಬಹುತೇಕ ಕಟ್ಟದ ನಿರ್ಮಾಣದ ಕೆಲಸಗಾರರು ತಮಿಳಿಗರಾಗಿದ್ದರು, ಯಾವಾಗ ತಮಿಳುತಾಡಿನಲ್ಲಿ ಬಹುತೇಕ ಎಲ್ಲವನ್ನೂ ಉಚಿತವಾಗಿ ಕೊಡಲಾರಂಭಿಸಿದರೋ ಕೆಲಸವೇ ಮಾಡದೇ ಎಲ್ಲವೂ ಸಿಗುವುದರಿಂದ ಇಲ್ಲೇಕೆ ಕೆಲಸ ಮಾಡಬೇಕು ಎಂದು ಬಹುತೇಕರು ತಮ್ಮ ತಮ್ಮ ಊರುಗಳಿಗೆ ಹೋಗಿ ಅಲ್ಲಿಯೂ ಸಹಾ ನರೇಗಾದ ಅಡಿಯಲ್ಲಿ ಬೇಕಾ ಬಿಟ್ಟಿ ಕೆಲಸ ಮಾಡಿ ವಾರಕ್ಕೆ ಕಮೀಷನ್ ಹೊರಾತಾಗಿ ಅಷ್ಟೋ ಇಷ್ಟೋ ಕೂಲಿ ಸಂಪಾದಿಸಿ ಉಚಿತ ರೇಷನ್ ತಿಂದು ಕೊಂಡು ಉಚಿತವಾಗಿ ಕೊಟ್ಟಿರುವ ಕಲರ್ ಟಿವಿನೋಡಿಕೊಂಡು ಸೋಮಾರಿಗಳಾಗಿದ್ದಾರೆ.

freebiesಸತ್ಯ ಯಾವಾಗಲೂ ಕಹಿಯಾಗಿಯೇ ಇರುತ್ತದಾದರೂ. ಎಲ್ಲರೂ ಈ ಸತ್ಯವನ್ನು ಮನಗಾಣಬೇಕು. ಅದರಲ್ಲೂ ತಮ್ಮ ರಾಜಕೀಯ ತೆವಲಿಲುಗಳಿಗಾಗಿ ಎಗ್ಗಿಲ್ಲದೆ ನಾನಾ ಭಾಗ್ಯಗಳನ್ನು ಘೋಷಿಸುತ್ತಿರುವ ನಮ್ಮ ದೇಶದ ರಾಜಕಾರಣಿಗಳಿಗೆ ಅರಿವಾಗಲೇ ಬೇಕು. ದುಡಿಯುವ ಕೈಗಳಿಗೆ ಉಚಿತವಾಗಿ ಹಣ ಮತ್ತು ಆಮಿಷಗಳನ್ನೊಡ್ಡಿ ಎಂದೂ ಸೋಮಾರಿಗಳನ್ನಾಗಿಸ ಬಾರದು. ಕೂತು ತಿನ್ನುವವರಿಗೆ ಕುಡಿಕೆ ಹೊನ್ನು ಸಾಲದು ಎನ್ನುವ ಗಾದೆ ಮಾತು ಅಕ್ಷರಶಃ ಸತ್ಯ.

ಬಡವರಾದರೂ ಸ್ವಾವಲಂಬಿಗಳಾಗಿ ಸ್ವಾಭಿಮಾನಿಗಳಾಗಿರಬೇಕೇ ಹೋರತು ಈ ರೀತಿಯಾಗಿ. ಬಿಕ್ಷುಕರಾಗ ಬಾರದು.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s