ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು  ಬದುಕು

ಆ ಒಂದು ಕರೆ… ಬದಲಾಯಿಸಿತು ಬರವಣಿಗೆಯನ್ನೂ, ಬದುಕನ್ನೂ!

ಶಂಕರ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಚಿಕ್ಕದಾದರೂ ಚೊಕ್ಕವಾದ ಸಂಸಾರ. ಹೆಂಡತಿ ಗೃಹಿಣಿ. ಮಕ್ಕಳು ಶಾಲೆ-ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಯಾವುದೇ ದೊಡ್ಡ ಕೊರತೆಯಿಲ್ಲದ, ನೆಮ್ಮದಿಯಿಂದ ಸಾಗುತ್ತಿದ್ದ ಕುಟುಂಬ. ಶಂಕರನಿಗೆ ಬರವಣಿಗೆಯಲ್ಲಿ ಕೊಂಚ ಹೆಚ್ಚಿನ ಆಸಕ್ತಿ. ಅದರಲ್ಲೂ ರಾಜಕೀಯ ವಿಷಯಗಳೆಂದರೆ ಪಂಚಪ್ರಾಣ. ದಿನವಿಡೀ ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಹೇಗೋ ಸಮಯ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಧರ್ಮ, ತನ್ನ ನೆಚ್ಚಿನ ಸಿದ್ಧಾಂತ ಹಾಗೂ ತಾನು ಮೆಚ್ಚುವ ರಾಜಕೀಯ ನಾಯಕರ ಪರವಾಗಿ ಪ್ರಖರವಾಗಿ ಬರೆಯುತ್ತಿದ್ದ. ಅಷ್ಟೇ ಅಲ್ಲ, ಇತರರ ಬರಹಗಳಿಗೆ ವಾದ-ಪ್ರತಿವಾದ ಮಾಡುವುದು, ತಪ್ಪು ಕಂಡರೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದೂ ಅವನ ದಿನಚರಿಯ ಒಂದು ಭಾಗವಾಗಿತ್ತು.

ಅವನ ಬರಹಗಳು ತೀಕ್ಷ್ಣವಾಗಿದ್ದವು. ವಾದಗಳು ಕಟುವಾಗಿದ್ದವು. ಪರಿಣಾಮವಾಗಿ ಸ್ನೇಹಿತರಿಗಿಂತ ಶತ್ರುಗಳೇ ಹೆಚ್ಚಾಗತೊಡಗಿದ್ದರು. ಕೆಲವು ಸ್ನೇಹಿತರು ತಮ್ಮ ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್ ಗುಂಪುಗಳಿಗೆ ಶಂಕರನನ್ನು ಬೇಕೆಂದೇ ಸೇರಿಸಿಕೊಳ್ಳುತ್ತಿದ್ದರು. ನಂತರ ಯಾವುದಾದರೂ ವಿಷಯದಲ್ಲಿ ಚರ್ಚೆ ಆರಂಭಿಸಿ, ಉದ್ದೇಶಪೂರ್ವಕವಾಗಿ ಶಂಕರನನ್ನು ಕೆರಳಿಸಿ, ತಮ್ಮ ವಿರೋಧಿಗಳ ವಿರುದ್ಧ ತೀಕ್ಷ್ಣವಾದ ಕಮೆಂಟ್‌ಗಳನ್ನು ಹಾಕಿಸುತ್ತಿದ್ದರು. ಚುನಾವಣೆ ಸಮಯ ಬಂದರಂತೂ ಶಂಕರನಿಗೆ ಎಲ್ಲಿಲ್ಲದ ಬೇಡಿಕೆ! ಇವರ ವಿರುದ್ಧ ಒಂದು ಲೇಖನ ಬರೆದು ಕೊಡಿ…ಅವರ ಬಗ್ಗೆ ಸ್ವಲ್ಪ ಖಾರವಾಗಿ ಬರೆಯಬೇಕು…ಈ ವಿಷಯಕ್ಕೆ ನಿಮ್ಮ ಸ್ಟೈಲ್‌ನಲ್ಲಿ ಒಂದು ಪೋಸ್ಟ್ ಬೇಕು…ಎಂದು ಹಲವರು ಶಂಕರನನ್ನು ದುಂಬಾಲು ಬೀಳುತ್ತಿದ್ದರು.

ಶಂಕರನೂ ಯಾರ ಮಾತಿಗೂ ಇಲ್ಲ ಎನ್ನದೆ, ಅವರಿಗಾಗಿ ಉಗ್ರವಾದ ಲೇಖನ, ಕಮೆಂಟ್‌ಗಳನ್ನು ಬರೆಯುತ್ತಿದ್ದ. ಕೆಲವೊಮ್ಮೆ ಆತನ ಬರಹಗಳು ವಿರೋಧಿ ಬಣದವರ ಕೋಪವನ್ನು ಮತ್ತಷ್ಟು ಕೆರಳಿಸುತ್ತಿದ್ದವು. ಕೆಲವರು ಎಚ್ಚರಿಕೆಯನ್ನೂ ನೀಡಿದ್ದರು. ನೋಡಿ ಶಂಕರ, ಬರೆಯುವುದನ್ನು ಸ್ವಲ್ಪ ಕಡಿಮೆ ಮಾಡಿ. ಎಲ್ಲರನ್ನೂ ಎದುರು ಹಾಕಿಕೊಳ್ಳುವುದು ಒಳ್ಳೆಯದಲ್ಲ…ಆದರೆ ಬರೆಯುವ ಗುಂಗಿನಲ್ಲಿದ್ದ ಶಂಕರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಾನಾಯಿತು… ನನ್ನ ಬರಹವಾಯಿತು… ಅಷ್ಟೇ ಅವನ ಪ್ರಪಂಚ.

ಯಾರು ಅಧಿಕಾರಕ್ಕೆ ಬಂದರೂ ನಮಗೇನು?

ಶಂಕರನ ಪತ್ನಿಗೆ ಮಾತ್ರ ಇದರಿಂದ ತುಂಬಾ ಬೇಸರವಾಗಿತ್ತು. ಅನಗತ್ಯ ವಿಚಾರಗಳನ್ನು ಮೈಮೇಲೆ ಎಳೆದುಕೊಂಡು, ವಿನಾಕಾರಣ ಪರರ ವಿರೋಧ ಕಟ್ಟಿಕೊಳ್ಳುವುದು ಏಕೆ?ಎಂದು ಸಾರಿ ಸಾರಿ ಹೇಳುತ್ತಿದ್ದಳು. ಯಾರು ಅಧಿಕಾರಕ್ಕೆ ಬಂದರೂ ನಮಗೇನೂ ಆಗುವುದಿಲ್ಲ. ನಮ್ಮ ಸಂಸಾರ ನಿಮ್ಮ ದುಡಿಮೆಯಿಂದಲೇ ಸಾಗಬೇಕಿದೆ. ಅವರಿಗೆ ನೀವಲ್ಲದಿದ್ದರೆ ಮತ್ತೊಬ್ಬ ಶಂಕರ ಸಿಗುತ್ತಾನೆ. ಆದರೆ ನಮ್ಮ ಮನೆಗೆ ನೀವೊಬ್ಬರೇ… ಎಂದು ಎಷ್ಟೋ ಬಾರಿ ಮನವರಿಕೆ ಮಾಡಲು ಪ್ರಯತ್ನಿಸಿದ್ದಳು.

ಒಮ್ಮೆಂತೂ, ಇದೇ ರೀತಿ ಮುಂದುವರಿಸಿದರೆ ನಾನೂ, ನಿಮ್ಮ ಮಕ್ಕಳೂ ನಿಮ್ಮನ್ನು ಬಿಟ್ಟು ಹೋಗಬೇಕಾಗುತ್ತದೆ… ಎಂದು ಕಣ್ಣೀರಿನಲ್ಲೇ ಎಚ್ಚರಿಸಿದ್ದಳು. ಆದರೂ ಶಂಕರ ಬದಲಾಗಲಿಲ್ಲ. ಅವನ ಪತ್ನಿ ತನ್ನ ಮಾತಿಗೆ ಬೆಲೆ ಕೊಡಬಲ್ಲ ಶಂಕರನ ಆತ್ಮೀಯ ಸ್ನೇಹಿತರು, ಬಂಧುಗಳು ಹಾಗೂ ಪರಿಚಿತರ ಬಳಿಯೂ ತನ್ನ ಗೋಳನ್ನು ಹೇಳಿಕೊಂಡಳು.

ನೀವು ಒಮ್ಮೆ ಅವನಿಗೆ ಬುದ್ಧಿ ಹೇಳಿ. ಈ ರಾಜಕೀಯ ಬರಹಗಳ ಬದಲು ತನ್ನ ಕುಟುಂಬದ ಕಡೆಗೂ ಗಮನ ಹರಿಸುವಂತೆ ಮಾಡಿಎಂದು ಮನವಿ ಮಾಡಿಕೊಂಡಳು. ಅವರೂ ಶಂಕರನಿಗೆ ಬುದ್ಧಿ ಹೇಳಿದರು. ಸರಿ… ಸರಿ…ಎಂದು ತಲೆ ಆಡಿಸಿದ ಶಂಕರ ಎರಡು ದಿನ ಸುಮ್ಮನಿರುತ್ತಿದ್ದ. ಮೂರನೇ ದಿನ ಮತ್ತೆ ಅದೇ ಚಾಳಿ! ತನ್ನ ನಾಯಕರನ್ನು ಹೊಗಳುತ್ತಾ, ವಿರೋಧಿಗಳನ್ನು ಹಳಿಯುತ್ತಾ, ಸಾಲು ಸಾಲು ಉಗ್ರ ಲೇಖನಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಯಾರು ಏನೇ ಹೇಳಿದರು… ಹೇಗೆ ಬುದ್ಧಿ ಹೇಳಿದರು… ಶಂಕರ ಮಾತ್ರ ಬದಲಾಗಲೇ ಇಲ್ಲ.

ಆ ದಿನ…

ಅದೊಂದು ದಿನ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ರಾಜಕೀಯ ಕಾರಣಕ್ಕಾಗಿ ವಾದಕ್ಕಿಳಿದರು. ಸಾಮಾನ್ಯವಾದ ಚರ್ಚೆ ನಿಧಾನವಾಗಿ ವಾಗ್ವಾದವಾಯಿತು. ವಾಗ್ವಾದ ವಿಕೋಪಕ್ಕೆ ತಿರುಗಿತು. ಕೊನೆಗೆ ಒಬ್ಬ ಮತ್ತೊಬ್ಬನ ಮನೆಗೆ ಹೋಗಿ ಧಮ್ಕಿ ಹಾಕುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿತು. ಬೇಡದ ಜಾಗಕ್ಕೆ ಇರುವೆ ಬಿಟ್ಟುಕೊಂಡಂತೆಶಂಕರನೂ ಆ ವಿಷಯಕ್ಕೆ ಧುಮುಕಿದ. ಪರಾ-ಪರ ವಿಚಾರಿಸದೆ, ಧಮ್ಕಿಗೆ ಒಳಗಾದ ವ್ಯಕ್ತಿಯ ಪರವಾಗಿ ನಿಂತು ಫೇಸ್‌ಬುಕ್‌ನಲ್ಲಿ ವಾದಕ್ಕಿಳಿದ. ಇಂತಹ ಸಂದರ್ಭವನ್ನೇ ಕಾಯುತ್ತಿದ್ದವರಂತೆ ಶಂಕರನ ವಿರೋಧಿಗಳು ಕೂಡ ಆತನ ಮೇಲೆ ಮುಗಿಬಿದ್ದರು.

ಆದರೆ ಶಂಕರ ಹಿಂದೆ ಸರಿಯಲಿಲ್ಲ. ಒಂದಕ್ಕೆ ಎರಡು ಉತ್ತರ. ಎರಡು ಮಾತಿಗೆ ನಾಲ್ಕು ಮಾತು. ಸಾಮಾನ್ಯ ವಾದ ನಿಧಾನವಾಗಿ ವಿತಂಡ ವಾದವಾಗಿ ಬದಲಾಯಿತು. ಮಾತಿಗೆ ಮಾತು ಬೆಳೆಯುತ್ತಲೇ ಹೋಯಿತು. ಅಂತ್ಯ ಕಾಣದ ಆ ಜಗಳದ ನಡುವೆಯೇ… ಶಂಕರನ ಮೊಬೈಲ್‌ಗೆ ಒಂದು ಕರೆ ಬಂತು.

ಅಂಕಲ್… ಒಂದು ವಿಷಯ ಹೇಳಬಹುದಾ?

ಕರೆ ಮಾಡಿದ್ದವನು ಶಂಕರನ ಮಗಳ ಸಹಪಾಠಿ. ಚಿಕ್ಕಂದಿನಿಂದಲೂ ಪರಿಚಯವಿದ್ದ ಹುಡುಗ. ಶಂಕರನ ಮಗಳು ಪ್ರತೀ ವರ್ಷವೂ ಆತನಿಗೆ ರಾಖಿ ಕಟ್ಟಿ, ಅಣ್ಣನ ಸ್ಥಾನ ನೀಡಿದ್ದಳು. ಆತ ಕೂಡ ಶಂಕರನ ಮಗಳನ್ನು ತನ್ನ ಒಡಹುಟ್ಟಿದ ತಂಗಿಯಂತೆಯೇ ನೋಡಿಕೊಳ್ಳುತ್ತಿದ್ದ. ನಮ್ಮ ಹುಡುಗನ ಕರೆ. ಏನೋ ವಿಷಯ ಇರಬೇಕು… ಎಂದುಕೊಂಡ ಶಂಕರ ಕರೆ ಸ್ವೀಕರಿಸಿದ.

ಅಂಕಲ್, ಹೇಗಿದ್ದೀರಿ? ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ? ನಾವೆಲ್ಲ ಚೆನ್ನಾಗಿದ್ದೇವೆ. ನೀನು ಹೇಗಿದ್ದೀಯಾ? ಮನೆಯಲ್ಲಿ ಎಲ್ಲರೂ ಆರಾಮಾ? ಏನು ಸಮಾಚಾರ? ಬಹಳ ಅಪರೂಪವಾಗಿ ಕರೆ ಮಾಡಿದ್ದೀಯಲ್ಲಾ?ಎಂದು ಶಂಕರ ಸಹಜ ಕುತೂಹಲದಿಂದ ಕೇಳಿದ. ಅಂಕಲ್… ನೀವು ಏನೂ ತಪ್ಪು ತಿಳಿದುಕೊಳ್ಳುವುದಿಲ್ಲ ಅಂದ್ರೆ ಒಂದು ವಿಷಯ ಹೇಳಬಹುದಾ? ಅರೇ… ಇದೇನಪ್ಪಾ ಇಷ್ಟು ರಹಸ್ಯ? ಹೇಳಪ್ಪಾ… ಅಂಕಲ್, ನಾನು ತುಂಬಾ ದಿನಗಳಿಂದ ಈ ವಿಷಯವನ್ನು ನಿಮ್ಮ ಬಳಿ ಹೇಳಬೇಕು ಅಂತಿದ್ದೆ. ಆದರೆ ಹೇಗೆ ಹೇಳುವುದು ಎಂದು ಬಹಳ ಯೋಚಿಸುತ್ತಿದ್ದೆ. ಅದೇನಪ್ಪಾ ವಿಷಯ? ನೇರವಾಗಿ ಹೇಳು.

ನಾನು ಚಿಕ್ಕ ಹುಡುಗ. ನಿಮ್ಮ ಕಣ್ಣ ಮುಂದೆ ಆಡಿ ಬೆಳೆದವನು. ನೀವು ದೊಡ್ಡವರು. ನಿಮಗೆ ಬುದ್ಧಿ ಹೇಳುವಷ್ಟು ತಿಳುವಳಿಕೆ ನನಗಿಲ್ಲದಿರಬಹುದು. ಆದರೂ ನಿಮ್ಮ ಹಿತೈಷಿಯಾಗಿ ಒಂದು ವಿಷಯ ಹೇಳಲೇಬೇಕು. ಫೋನ್‌ನಲ್ಲಿ ಹೇಳುವುದು ಸರಿಯಲ್ಲ ಅನ್ನಿಸಿದರೆ ಮನೆಗೇ ಬಂದು ಹೇಳುತ್ತೇನೆ… ಅವನ ಮಾತು ಕೇಳುತ್ತಾ ಶಂಕರನ ಕುತೂಹಲ ಮತ್ತಷ್ಟು ಹೆಚ್ಚಾಯಿತು.

ಅಂಕಲ್… ನಾನು ನಿಮ್ಮ ಬರಹಗಳ ಅಭಿಮಾನಿ!

ಶಂಕರನಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇತ್ತು. ಹುಡುಗನ ಮಾತಿನಲ್ಲಿದ್ದ ಗಂಭೀರತೆ ಗಮನಿಸಿ ಅವನ ಹೃದಯದ ಬಡಿತವೂ ಹೆಚ್ಚಾಗತೊಡಗಿತು. ಹೇ… ಹೇ… ಮನೆಗೆ ಯಾವಾಗ ಬೇಕಾದರೂ ಬಾ. ನಮ್ಮ ಮನೆಗೆ ಬರಲು ನಿನಗೆ ಸಂಕೋಚವೇನು? ಅದು ಸರಿ, ಈಗ ವಿಷಯಕ್ಕೆ ಬಾ… ಶಂಕರನ ಧ್ವನಿಯಲ್ಲಿ ಆತಂಕ ಬೆರೆತಿತ್ತು. ಅದನ್ನು ಗಮನಿಸಿದ ಹುಡುಗ ತಕ್ಷಣ,

ಅಂಕಲ್, ನೀವು ಗಾಬರಿಪಡುವಂಥದ್ದೇನೂ ಇಲ್ಲ. ನಾನು ನಿಮ್ಮ ಬರಹಗಳ ಅಭಿಮಾನಿ. ಅದೆಷ್ಟೋ ಬಾರಿ ನೀವೇ ನನಗೆ ಭಾಷಣಗಳನ್ನು ಬರೆದುಕೊಟ್ಟಿದ್ದೀರಿ. ಅವುಗಳಿಂದ ನನಗೆ ಬಹುಮಾನಗಳೂ ಬಂದಿವೆ. ಆದರೆ… ಎಂದು ಸ್ವಲ್ಪ ನಿಂತ. ಆದರೆ?ಎಂದು ಶಂಕರ ಕೇಳಿದ. ನಿಮ್ಮ ಇತ್ತೀಚಿನ ಬರಹಗಳು ನನಗೆ ತುಂಬಾ ಬೇಸರವಾಗುತ್ತಿವೆ, ಅಂಕಲ್. ಶಂಕರ ಮೌನವಾದ. ನಿಮ್ಮ ಇತ್ತೀಚಿನ ಬಹುತೇಕ ಬರಹಗಳಲ್ಲಿ ದ್ವೇಷ ಮತ್ತು ಅಸೂಯೆ ಹೆಚ್ಚಾಗಿದೆ. ಅವು ಏಕಪಕ್ಷೀಯವಾಗಿವೆ. ಹಲವಾರು ಬಾರಿ ನಿಮ್ಮ ವಾದವನ್ನೇ ಎಲ್ಲರೂ ಒಪ್ಪಿಕೊಳ್ಳಬೇಕು ಎನ್ನುವ ಧಾಟಿಯಲ್ಲಿರುತ್ತವೆ. ಇನ್ನೊಂದು ವಿಷಯ… ಏನು?

ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಬಗ್ಗೆ ಇಲ್ಲಸಲ್ಲದ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ನನಗೆ ಗೊತ್ತಿರುವ ಮಟ್ಟಿಗೆ ಅವರ ಆರೋಪಗಳಲ್ಲಿ ಸತ್ಯವಿಲ್ಲ. ಆದರೆ ಜನರ ದೃಷ್ಟಿಯಲ್ಲಿ ನಿಮ್ಮನ್ನೇ ಆರೋಪಿ ಎಂದು ಬಿಂಬಿಸುವಲ್ಲಿ ಅವರು ಯಶಸ್ವಿಯಾಗುತ್ತಿದ್ದಾರೆ. ಅಂಕಲ್, ದಯವಿಟ್ಟು ನನ್ನನ್ನು ನಿಮ್ಮ ಕುಟುಂಬದವನಂತೆ ಭಾವಿಸಿ ಈ ರೀತಿಯ ಬರಹಗಳನ್ನು ನಿಲ್ಲಿಸಿ.

ಶಂಕರ ಏನೂ ಮಾತನಾಡಲಿಲ್ಲ. ಹುಡುಗ ಮುಂದುವರಿಸಿದ. ನೀವು ಬರೆಯಬೇಕಾದದ್ದು ಇನ್ನೂ ಎಷ್ಟೋ ಇದೆ. ನಿಮ್ಮ ಅನುಭವಗಳನ್ನು ನಮ್ಮಂತಹ ಕಿರಿಯರಿಗೆ ತಿಳಿಸಬೇಕಾಗಿದೆ. ನಿಮ್ಮ ಬದುಕಿನಲ್ಲಿ ನೀವು ಕಂಡದ್ದು, ಕಲಿತದ್ದು, ಅನುಭವಿಸಿದ್ದು—ಅವುಗಳ ಬಗ್ಗೆ ಬರೆಯಿರಿ. ಆದ್ದರಿಂದ ಮತ್ತೊಮ್ಮೆ ನಿಮ್ಮ ಮಗಳ ಸ್ನೇಹಿತನಾಗಿಯೂ, ನಿಮ್ಮ ಅಭಿಮಾನಿಯಾಗಿಯೂ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ…

ದಯವಿಟ್ಟು ಈ ರೀತಿಯ ಬರಹಗಳಿಂದ ದೂರವಿರಿ. ಇದರಿಂದ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. ಇಂದು ನಿಮ್ಮ ಸ್ನೇಹಿತನಿಗೆ ಧಮ್ಕಿ ಹಾಕಿದ್ದಾರೆ. ನಾಳೆ ಇದೇ ಪರಿಸ್ಥಿತಿ ನಿಮಗೂ ಬರಬಹುದು. ಕೋಪದ ಭರದಲ್ಲಿ ಪರಿಸ್ಥಿತಿ ಕೈಮೀರಿದರೆ ನಿಮಗೆ ಹಾನಿಯಾಗಲೂಬಹುದು. ಆ ರೀತಿಯಾಗಿ ನಿಮ್ಮನ್ನು ಕಲ್ಪಿಸಿಕೊಳ್ಳಲೂ ನನ್ನಿಂದಾಗುವುದಿಲ್ಲ, ಅಂಕಲ್. ಅದಕ್ಕಾಗಿ ದಯವಿಟ್ಟು ಸುಮ್ಮನಾಗಿಬಿಡಿ. ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ. ನಿಮ್ಮಿಂದ ಇನ್ನೂ ಅತ್ಯುತ್ತಮವಾದ ಬರಹಗಳು ಹೊರಬರುತ್ತವೆ… ಎಂದು ಹೇಳಿ ಕರೆ ಮುಗಿಸಿದ.

ಆ ಮಾತು ಶಂಕರನ ಅಹಂಗೆ ಪೆಟ್ಟು ಕೊಟ್ಟಿತ್ತು

ತನ್ನ ಮಗಳ ವಯಸ್ಸಿನ ಹುಡುಗ. ತನ್ನ ಕಣ್ಣ ಮುಂದೆ ಆಡಿ ಬೆಳೆದ ಹುಡುಗ. ತನ್ನಿಂದ ಹಲವು ಬಾರಿ ಸಹಾಯ ಪಡೆದ ಹುಡುಗ. ಅವನೇ ತನಗೆ ಬುದ್ಧಿ ಹೇಳಿದ್ದ! ಮೊದಲಿಗೆ ಶಂಕರನ ಅಹಂಗೆ ಅದು ಸಹಿಸಲಿಲ್ಲ. ಈ ಸಣ್ಣ ಹುಡುಗನ ಮಾತನ್ನು ನಾನೇಕೆ ಕೇಳಬೇಕು? ಅವನಿಗೇನು ಗೊತ್ತಾಗುತ್ತದೆ?ಎಂದು ಮನಸ್ಸಿನಲ್ಲೇ ಭುಸು ಗುಟ್ಟಿದ.

ಆದರೆ… ಮನುಷ್ಯನ ಮನಸ್ಸು ವಿಚಿತ್ರ. ಕೆಲವು ಮಾತುಗಳು ಕಿವಿಯಿಂದ ಒಳಗೆ ಹೋಗಿ, ತಕ್ಷಣ ಹೊರಗೆ ಬರುವುದಿಲ್ಲ. ಅವು ಎಲ್ಲೋ ಮನಸ್ಸಿನ ಒಂದು ಮೂಲೆಯಲ್ಲಿ ಕುಳಿತುಕೊಳ್ಳುತ್ತವೆ. ಆ ಮಾತುಗಳೇ ನಿಧಾನವಾಗಿ ನಮ್ಮನ್ನು ಕಾಡತೊಡಗುತ್ತವೆ. ಒಂದೆರಡು ದಿನಗಳ ನಂತರ ಶಂಕರ ಸುಮ್ಮನೆ ಕುಳಿತು ಯೋಚಿಸುತ್ತಿದ್ದ. ಅರೇ… ಹೌದಲ್ಲವೇ! ಹುಡುಗ ಹೇಳಿದ್ದರಲ್ಲಿ ಸತ್ಯಾಂಶವಿತ್ತು. ಇದನ್ನೇ ಅಲ್ಲವೇ ನನ್ನ ಹೆಂಡತಿಯೂ ಇಷ್ಟು ದಿನಗಳಿಂದ ಹೇಳುತ್ತಿದ್ದದ್ದು? ಇದನ್ನೇ ಅಲ್ಲವೇ ನನ್ನ ಸ್ನೇಹಿತರೂ, ಬಂಧುಗಳೂ ಹೇಳುತ್ತಿದ್ದದ್ದು? ಛೇ… ಎಂತಹ ದುಡುಕು ಬುದ್ಧಿ ನನ್ನದು! ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಂಡ.

ಆ ಕ್ಷಣದಲ್ಲಿ ಶಂಕರ ಒಂದು ಸತ್ಯವನ್ನು ಅರಿತುಕೊಂಡ. ಚಿಕ್ಕವರಾಗಲಿ, ದೊಡ್ಡವರಾಗಲಿ… ನಮ್ಮ ಒಳಿತಿಗಾಗಿ ಯಾರಾದರೂ ಒಂದು ಒಳ್ಳೆಯ ಮಾತು ಹೇಳಿದರೆ ಅದನ್ನು ಕೇಳುವ ಮನಸ್ಸು ಹೊಂದಿರುವುದೇ ನಿಜವಾದ ದೊಡ್ಡತನ. ಆ ದಿನವೇ ಬದಲಾಗಬೇಕೆಂದು ನಿರ್ಧರಿಸಿದ.

ಬರವಣಿಗೆ ನಿಲ್ಲಿಸಲಿಲ್ಲ… ಬದಲಾಯಿಸಿದ!

ಶಂಕರ ಸಾಮಾಜಿಕ ಜಾಲತಾಣಗಳಿಂದ ನಿಧಾನವಾಗಿ ವಿಮುಖನಾದ. ಆದರೆ ಬರವಣಿಗೆಯನ್ನು ಮಾತ್ರ ಬಿಡಲಿಲ್ಲ. ಬದಲಿಗೆ ತನ್ನದೇ ಒಂದು ಬ್ಲಾಗ್ ಆರಂಭಿಸಿದ. ತಾನು ಕಂಡದ್ದು… ತಾನು ಕೇಳಿದ್ದು… ತಾನು ಅನುಭವಿಸಿದ್ದು… ತನ್ನ ಬದುಕಿನಲ್ಲಿ ಕಲಿತ ಪಾಠಗಳು… ಸಮಾಜದಲ್ಲಿ ಕಂಡ ಒಳ್ಳೆಯ ಸಂಗತಿಗಳು… ಜನರಿಗೆ ಉಪಯೋಗವಾಗಬಹುದಾದ ವಿಚಾರಗಳು… ಇವೆಲ್ಲವನ್ನೂ ಅಕ್ಷರಗಳ ರೂಪದಲ್ಲಿ ದಾಖಲಿಸತೊಡಗಿದ. ಆತನ ಬರವಣಿಗೆಯಲ್ಲಿ ಈಗ ಕೋಪ ಇರಲಿಲ್ಲ. ದ್ವೇಷ ಇರಲಿಲ್ಲ. ಅಸೂಯೆ ಇರಲಿಲ್ಲ. ಅದರ ಬದಲು ಅನುಭವವಿತ್ತು, ಭಾವನೆಯಿತ್ತು, ಪ್ರೀತಿ ಇತ್ತು, ದೇಶಪ್ರೇಮವಿತ್ತು, ಜೀವನದ ಸತ್ಯಗಳಿದ್ದವು.

ಕೆಲವೇ ದಿನಗಳಲ್ಲಿ ಶಂಕರನ ಬ್ಲಾಗ್ ಜನಪ್ರಿಯವಾಗತೊಡಗಿತು. ಅವನ ಬರಹಗಳನ್ನು ಓದಿದ ಒಂದೆರಡು ವಾರಪತ್ರಿಕೆಗಳು ಆತನ ಲೇಖನಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದವು. ಅದು ಶಂಕರನಿಗೆ ಅಪಾರ ಸಂತೋಷ ನೀಡಿತು. ಸ್ವಲ್ಪ ಸಮಯದಲ್ಲೇ ಒಂದು ಪತ್ರಿಕೆಯಲ್ಲಿ ಅಂಕಣಕಾರನಾಗಿ ಬರೆಯುವ ಅವಕಾಶವೂ ದೊರೆಯಿತು. ಈಗ ಪ್ರತಿವಾರವೂ ತಪ್ಪದೆ ಸಾಮಾಜಿಕ ಚಿಂತನೆಯುಳ್ಳ ಲೇಖನ ಬರೆಯುತ್ತಿದ್ದ. ಓದುಗರು ಮುಂದಿನ ವಾರದ ಲೇಖನಕ್ಕಾಗಿ ಕಾಯುವಂತಾಯಿತು.

ನಿಮ್ಮ ಈ ಬರಹ ತುಂಬಾ ಚೆನ್ನಾಗಿದೆ!

ಒಂದು ಕಾಲದಲ್ಲಿ ಶಂಕರನನ್ನು ಕಂಡರೆ ರಾಜಕೀಯ ಜಗಳದ ವ್ಯಕ್ತಿ ಎಂದು ಗುರುತಿಸುತ್ತಿದ್ದವರು, ಈಗ ಅವನನ್ನು ಲೇಖಕನಾಗಿ ಗುರುತಿಸತೊಡಗಿದರು. ಪ್ರಶಸ್ತಿ-ಪುರಸ್ಕಾರಗಳು ಅವನನ್ನು ಹುಡುಕಿಕೊಂಡು ಬರತೊಡಗಿದವು. ಹೋದ ಬಂದ ಕಡೆಯಲ್ಲೆಲ್ಲಾ ಜನ ಶಂಕರನನ್ನು ಗುರುತಿಸಿ ಮಾತನಾಡಿಸುತ್ತಿದ್ದರು. ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

ಅದನ್ನು ನೋಡುತ್ತಿದ್ದ ಶಂಕರನ ಪತ್ನಿಗೆ ಆಗುತ್ತಿದ್ದ ಸಂತೋಷವನ್ನು ಹೇಳಲು ಮಾತುಗಳೇ ಇರಲಿಲ್ಲ. ಒಂದು ಕಾಲದಲ್ಲಿ, ಬರೆಯಬೇಡಿ… ಎಂದು ಬೇಡಿಕೊಂಡಿದ್ದ ಅದೇ ಪತ್ನಿ ಈಗ, ರೀ… ಈ ವಿಷಯದ ಬಗ್ಗೆ ಬರೆಯಿರಿ. ಜನರಿಗೆ ಇಷ್ಟವಾಗುತ್ತದೆ… ಎಂದು ಪ್ರೋತ್ಸಾಹ ಕೊಡತೊಡಗಿದಳು.

ಮನೆಯಲ್ಲಿ ಹೆಂಡತಿ-ಮಕ್ಕಳ ಸಂಪೂರ್ಣ ಸಹಕಾರ ದೊರೆತ ಮೇಲೆ ಶಂಕರನ ಬರವಣಿಗೆ ಇನ್ನಷ್ಟು ಪಕ್ವವಾಯಿತು. ಹೊಸ ಹೊಸ ಪ್ರದೇಶಗಳಿಗೆ ಕುಟುಂಬದೊಂದಿಗೆ ಪ್ರವಾಸ ಹೋಗುತ್ತಿದ್ದ. ಅಲ್ಲಿ ಕಂಡ ಅನುಭವಗಳನ್ನು ದಾಖಲಿಸುತ್ತಿದ್ದ. ಜನರನ್ನು ಭೇಟಿಯಾಗುತ್ತಿದ್ದ. ಅವರ ಬದುಕು, ನೋವು, ಸಾಧನೆ, ಸಂಸ್ಕೃತಿ, ಪ್ರಕೃತಿ—ಎಲ್ಲವನ್ನೂ ತನ್ನ ಬರಹಗಳಲ್ಲಿ ಕಟ್ಟಿಕೊಡುತ್ತಿದ್ದ. ದ್ವೇಷ ಮತ್ತು ಅಸೂಯೆಯಿಂದ ದೂರವಾಗಿ ಪ್ರೀತಿ, ಮಾನವೀಯತೆ, ದೇಶಪ್ರೇಮ ಮತ್ತು ಜೀವನಾನುಭವಗಳ ಬಗ್ಗೆ ಬರೆಯತೊಡಗಿದ ಮೇಲೆ ಆತನ ಆರೋಗ್ಯದಲ್ಲೂ ಗಮನಾರ್ಹ ಸುಧಾರಣೆ ಕಂಡುಬಂತು.

ಆ ಒಂದು ಕರೆ…

ಇಂದು ಶಂಕರ ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ. ಹೆಂಡತಿ, ಮಕ್ಕಳು, ಬಂಧು-ಮಿತ್ರರೊಂದಿಗೆ ಸುಖೀ ಸಂಸಾರ. ಸಮಾಜದಲ್ಲಿ ಗೌರವ. ಓದುಗರ ಪ್ರೀತಿ. ಬರವಣಿಗೆಯಲ್ಲಿ ಹೊಸ ಎತ್ತರ. ಹಾಗೆ ನೋಡಿದರೆ ಇದಕ್ಕೆ ಕಾರಣ ಏನು? ಒಬ್ಬ ದೊಡ್ಡ ನಾಯಕನ ಮಾತಲ್ಲ. ಯಾವುದೋ ಪ್ರಶಸ್ತಿಯಲ್ಲ. ಯಾವುದೋ ಅದ್ಭುತ ಘಟನೆ ಅಲ್ಲ.

ತನ್ನ ಮಗಳ ಸಹಪಾಠಿ ಮಾಡಿದ ಆ ಒಂದು ಕರೆ. ತನ್ನ ಮಗಳ ವಯಸ್ಸಿನ ಒಬ್ಬ ಹುಡುಗ, ತನ್ನನ್ನು ಅಭಿಮಾನದಿಂದ ಕಾಣುತ್ತಿದ್ದರೂ, ತನ್ನ ಒಳಿತಿಗಾಗಿ ಕಹಿ ಸತ್ಯವನ್ನು ಹೇಳುವ ಧೈರ್ಯ ತೋರಿಸಿದ ಆ ಒಂದು ಕರೆ. ಆ ಕರೆ ಶಂಕರನ ಬರವಣಿಗೆಯನ್ನು ಮಾತ್ರ ಬದಲಿಸಲಿಲ್ಲ. ಅವನ ಚಿಂತನೆಯನ್ನೂ ಬದಲಿಸಿತು. ಚಿಂತನೆ ಬದಲಾದಾಗ ಬದುಕು ಬದಲಾಯಿತು. ಬದುಕು ಬದಲಾದಾಗ ಸಂಬಂಧಗಳು ಬದಲಾದವು. ಸಂಬಂಧಗಳು ಬದಲಾದಾಗ ಮನಸ್ಸಿಗೆ ನೆಮ್ಮದಿ ದೊರೆಯಿತು. ಮತ್ತು ಆ ನೆಮ್ಮದಿಯಿಂದ ಹುಟ್ಟಿದ ಬರಹಗಳು ಅವನಿಗೆ ಹೊಸ ಬದುಕನ್ನೇ ಕೊಟ್ಟವು.

ಬಹುಶಃ ಜೀವನದಲ್ಲಿ ನಮಗೆ ಬೇಕಾಗಿರುವುದು ದೊಡ್ಡ ದೊಡ್ಡ ಉಪದೇಶಗಳಲ್ಲ. ಕೆಲವೊಮ್ಮೆ… ನಮ್ಮನ್ನು ನಿಜವಾಗಿಯೂ ಪ್ರೀತಿಸುವ ಒಬ್ಬ ವ್ಯಕ್ತಿ, ಸರಿಯಾದ ಸಮಯದಲ್ಲಿ ಹೇಳುವ ಒಂದು ಸತ್ಯವಾದ ಮಾತು ಸಾಕು. ಆ ಒಂದು ಮಾತು ನಮ್ಮ ದಾರಿಯನ್ನೇ ಬದಲಿಸಬಹುದು. ಆ ಒಂದು ಕರೆ ನಮ್ಮ ಬದುಕನ್ನೇ ಬದಲಿಸಬಹುದು.

ಶಂಕರನ ಬದುಕಿನಲ್ಲಿ ಆದದ್ದು ಅದೇ. ಇಂದು ಅವನು ಅರಿತುಕೊಂಡಿರುವ ಸತ್ಯ ಒಂದೇ— ಬರವಣಿಗೆಯ ಶಕ್ತಿ ಬೇರೆಯವರನ್ನು ಸೋಲಿಸುವುದರಲ್ಲಿ ಇಲ್ಲ; ನಮ್ಮೊಳಗಿನ ಮನುಷ್ಯನನ್ನು ಗೆಲ್ಲುವುದರಲ್ಲಿ ಇದೆ. ಆ ಒಂದು ಕರೆ, ನಿಜಕ್ಕೂ ಶಂಕರನ ಬರವಣಿಗೆಯನ್ನೂ ಬದುಕನ್ನೂ ಬದಲಿಸಿತು. ಇದೇ ಅಲ್ಲವೇ… ಒಂದು ಸತ್ವಯುತವಾದ ಕರೆಯ ಮಹತ್ವ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು  ಬದುಕು”

Leave a Reply