ಸಾಮಾನ್ಯವಾಗಿ ಬಹುತೇಕರು ತಮ್ಮ ನಾಯಕರನ್ನು ಹೊಗಳುವ ಭರದಲ್ಲಿ ಅನಾಥರಕ್ಷಕ, ಧೀನಬಂಧು, ಆಪತ್ಬಾಂಧವ, ಕರುಣಾಸಿಂಧು, ಬಡವರ ಬಂಧು, ಜಗದೋದ್ಧಾರಕ ಎಂದೆಲ್ಲಾ ವಾಚಾಮಗೋಚರವಾಗಿ ಹೇಳುತ್ತಾರಾದರೂ ಅದು ಬಹುತೇಕರಿಗೆ ಮುಖ: ಸ್ತುತಿಯಾಗಿರುತ್ತದೆಯೇ ಹೊರತು ನಿಜವಾಗಿಯೂ ಅಂತಹ ವ್ಯಕ್ತಿಗಳೇ ಆಗಿರುವುದಿಲ್ಲ. ಹಾಗಾದರೇ ಈ ಎಲ್ಲಾ ಉಪಮಾನ ಉಪಮೇಯಗಳು ಯಾರಿಗೆ ಹೋಲುತ್ತವೆ ಎಂದು ಯೋಚಿಸಿದಲ್ಲಿ ಥಟ್ಟನೇ ಮನಸ್ಸಿಗೆ ಹೊಳೆಯುವುದೇ, ನಮ್ಮ ಶ್ರೀಕೃಷ್ಣಾ. ಪ್ರೀತಿಯ ಕಳ್ಳ ಕೃಷ್ಣಾ, ನವನೀತ ಚೋರ, ಹೆಂಗಳೆಯರ ಚಿತ್ತ ಚೋರ, ಗಿರಿಧರ, ಮುರಳೀಧರ, ಗೋಪಾಲಕೃಷ್ಣ ಹೀಗೆ ಜನರು ಪ್ರೀತಿಯಿಂದ ನಾನಾ ರೀತಿಯ ಹೆಸರಿನಿಂದ ಕರೆದರೂ, ಎಲ್ಲವೂ ಅವನಿಗಷ್ಟೇ ಅನ್ವರ್ಥವಾಗುವಂತಹದ್ದು ಎಂದರೆ ತಪ್ಪಾಗಲಾರದು.
ದ್ವಾಪರಯುಗದಲ್ಲಿ ತಂಗಿ ದೇವಕಿಗೆ ಹುಟ್ಟುವ ಮಗನಿಂದಲೇ ತನ್ನ ವಧೆ ಎಂದು ತಿಳಿದು, ತಂಗಿ ಎಂಬ ಮಮಕಾರವೂ ಇಲ್ಲದೇ, ದೇವಕಿ ಮತ್ತು ಭಾವ ವಸುದೇವನನ್ನು ಕಂಸನು ಮಥುರೆಯ ಸೆರೆ ಮನೆಗೆ ತಳ್ಳಿ ಪ್ರತೀ ಬಾರಿ ಹುಟ್ಟುವ ಮಗುವನ್ನೂ ಕೊಂದು ಹಾಕುತ್ತಿರುತ್ತಾನೆ. ಆದರೆ ಎಂಟನೇ ಮಗುವಿನ ನಿರೀಕ್ಷೆಯಲ್ಲಿರುವಾಗ ಈ ಬಾರೀ ಹೇಗಾದರೂ ಮಗುವನ್ನು ಉಳಿಸಿಕೊಳ್ಳಲೇ ಬೇಕೆಂದು ನಿರ್ಧರಿಸಿದ ದಂಪತಿಗಳು, ಶ್ರಾವಣಮಾಸದ ಕೃಷ್ಣಪಕ್ಷದ ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದ ಮಗುವನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ, ವಿಪರೀತವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ತಲೆಯ ಮೇಲೆ ಬುಟ್ಟಿಯಲ್ಲಿ ನವಜಾತ ಶಿಶುವನ್ನು ಹೊತ್ತು ಕೊಂಡು ಗೋಕುಲಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ನಂದರಾಜನ ಮನೆಯಲ್ಲಿ ಯಶೋಧೆಯ ವಶಕ್ಕೊಪ್ಪಿಸಿ, ಯಶೋಧೆಯ ಮಗುವನ್ನು ಕರೆದು ಕೊಂಡು ಪುನಃ ಸೆರೆಮನೆಗೆ ವಾಪಸ್ಸಾಗುತ್ತಾನೆ. ಭಗವಂತನ ಅನುಗ್ರಹದಿಂದ, ಅದೇ ಸಮಯದಲ್ಲಿ ಸೆರೆಮನೆಯ ಭಟರು ನಿದ್ದೆಗೆ ಜಾರಿ, ಸೆರೆಮನೆಯ ಬೀಗ ತನ್ನಿಂದ ತಾನೇ ತೆರೆದುಕೊಂಡು ಪುನಃ ಸೆರೆಮನೆಗೆ ಹಿಂದಿರುಗಿದ ನಂತರ ತನ್ನಷ್ಟಕ್ಕೆ ತಾನೇ ಬೀಗ ಹಾಕಿಕೊಳ್ಳುತ್ತದೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಶ್ರೀ ಕೃಷ್ಣನಿಗೆ ದೇವಕಿ ಜನ್ಮ ಕೊಟ್ಟ ತಾಯಿಯಾದರೆ, ಯಶೋಧೆ ಆತನ ಸಾಕು ತಾಯಿಯಾಗುತ್ತಾಳೆ. ಮುಂದೆ ಗೋಕುಲದಲ್ಲಿ ತನ್ನ ಗೆಳೆಯರೊಂದಿಗೆ ಬಾಲಲೀಲೆಗಳಿಂದ ಎಲ್ಲರನ್ನೂ ಗೋಳು ಹೊಯ್ದು ಕೊಳ್ಳುತ್ತಾ ತನ್ನ ವಿವಿಧ ಚಮತ್ಕಾರಗಳನ್ನು ತೋರಿಸುತ್ತಾ ಅಣ್ಣ ಬಲರಾಮನೊಂದಿಗೆ ಲೋಕವಿಖ್ಯಾತನಾದ ಕಥೆ ಎಲ್ಲರಿಗೂ ತಿಳಿದೇ ಇದೆ.
ದುಷ್ಷರ ಶಿಕ್ಷೆಗಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ಸಾಕ್ಷಾತ್ ವಿಷ್ಣು ದೇವರೇ ದಶಾವತಾರದ ಎಂಟನೇ ಅವತಾರವಾಗಿ ದೇವಕಿ ಮತ್ತು ವಸುದೇವ ದಂಪತಿಗಳಿಗೆ ಜನಿಸಿದ ಆ ದಿನವನ್ನು ಪ್ರಪಂಚಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಬಹಳ ವೈಭವದಿಂದ, ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಚಾಂದ್ರಮಾನ ಪದ್ದತಿಯನ್ನು ಪಾಲಿಸುವವರು ಶ್ರಾವಣ ಮಾಸದ ಬಹುಳ ಅಷ್ಟಮಿ ತಿಥಿಯಂದು ಹಬ್ಬವನ್ನು ಆಚರಿಸಿದರೆ, ಸೌರಮಾನ ಪದ್ದತಿಯನ್ನು ಪಾಲಿಸುವವರು ಶ್ರಾವಣ ಮಾಸದ ಶುಕ್ಲಪಕ್ಷದ ರೋಹಿಣಿ ನಕ್ಷತ್ರದ ದಿನದಂದು ಆಚರಿಸುತ್ತಾರೆ.
ಶ್ರೀ ಕೃಷ್ಣಜನ್ಮಾಷ್ಟಮಿ ಹಬ್ಬದ ಎರಡು ಮೂರು ದಿನಗಳಿಗೆ ಮುಂಚೆಯೇ ಎಲ್ಲರ ಮನೆಯಲ್ಲಿಯೂ ಸಂಭ್ರಮದ ವಾತವರಣ ವಿದ್ದು, ಅಂದಿನಿಂದಲೇ ಮನೆಯಲ್ಲಿ ಶ್ರೀಕೃಷ್ಣನಿಗೆ ಇಷ್ಟವಾದ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ತೇಂಗೊಳಲು, ಮುಸ್ಸೋರೆ ಯಂತಹ ಕುರುಕಲು ತಿಂಡಿಗಳು, ಒಬ್ಬಟ್ಟು, ಲಾಡು ಮುಂತಾದ ಬಗೆ ಬಗೆಯ ಉಂಡೆಗಳು ಮೈಸೂರು ಪಾಕ್, ಕೊಬ್ಬರೀ ಮಿಠಾಯಿಗಳನ್ನು ಬಹಳ ಭಯ ಭಕ್ತಿಯಿಂದ ಮಡಿಯಲ್ಲಿ ತಯಾರು ಮಾಡುತ್ತಾರೆ. ಹಬ್ಬದ ದಿನದಂದು, ಮನೆ ಮತ್ತು ದೇವರ ಮನೆಯಲ್ಲಿ ತಳಿರು ತೋರಣಗಳಿಂದ ಸುಂದರವಾಗಿ ಅಲಂಕರಿಸಿ ಕೃಷ್ಣನ ವಿಗ್ರಹಗಳನ್ನೋ ಇಲ್ಲವೇ, ಕೃಷ್ಣನ ಫೋಟೋವನ್ನು ವಿಧ ವಿಧ ಹೂವುಗಳಿಂದ ಅದರಲ್ಲೂ ವಿಶೇಷವಾಗಿ ತುಳಸೀ ಅಲಂಕರಿಸಿ, ಮಾಡಿದ ಬಗೆ ಬಗೆಯ ತಿಂಡಿಗಳನ್ನು ನೈವೇದ್ಯಕ್ಕಿರಿಸಿ ಪೂಜಿಸಲಾಗುತ್ತದೆ. ಮನೆಯ ಮುಂದಿನ ತುಳಸೀ ಕಟ್ಟೆಯಿಂದ ದೇವರ ಮನೆಯವರೆಗೂ ಶ್ರೀ ಕೃಷ್ಣನ ಪುಟ್ಟ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬಿಡಿಸಿ ಸಂಭ್ರಮಿಸಲಾಗುತ್ತದೆ. ಪೂಜೆಯ ನಂತರ ಅಕ್ಕ ಪಕ್ಕದ ಮುತ್ತೈದೆಯರನ್ನು ಕರೆದು ಅವರಿಗೆ ಅರಿಶಿನ ಕುಂಕುಮದ ಜೊತೆ ಜನ್ಮಾಷ್ಟಮಿಯ ಬಾಗಿಣವನ್ನು ಕೊಟ್ಟು ನಂತರ ಎಲ್ಲರೂ ಒಟ್ಟಿಗೆ ಪ್ರಸಾದದ ರೂಪದಲ್ಲಿ ಮಾಡಿದ ಎಲ್ಲಾ ತಿಂಡಿಗಳನ್ನು ಸೇವಿಸುತ್ತಾರೆ. ಇನ್ನು ಕೆಲವರ ಮನೆಯಲ್ಲಿ ಬೆಳಗಿನಿಂದ ಮಧ್ಯರಾತ್ರಿಯವರೆಗೂ ಉಪವಾಸವಿದ್ದು ನಂತರ ಶ್ರೀಕೃಷ್ಣನಿಗೆ ಮೇಲೆ ತಿಳಿಸಿದಂತೆ ಪೂಜೆ ಮಾಡಿ ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ.
ಇನ್ನು ದೇವಾಲಯಗಳಲ್ಲಿ ಬಾಲಕೃಷ್ಣನ ಪುಟ್ಟ ಮೂರ್ತಿಯನ್ನು ತೊಟ್ಟಿಲಲ್ಲಿಟ್ಟೋ ಇಲ್ಲವೇ ಕೃಷ್ಣನ ವಿವಿಧ ಬಗೆಯ ವಿಗ್ರಹಗಳನ್ನು ಜೋಡಿಸಿಯೋ ಇಲ್ಲವೇ ಕೃಷ್ಣನ ನಾನಾ ಭಂಗಿಯ ಫೋಟೋಗಳನ್ನು ಇಟ್ಟು ಚೆಂದವಾಗಿ ಅಲಂಕರಿಸಿ ಹೂವು, ಪತ್ರೆಗಳನ್ನು ಅರ್ಪಿಸಿ, 108 ತುಳಸಿದಳದಿಂದ ಕೃಷ್ಣಾಷ್ಟೋತ್ತರದೊಂದಿಗೆ ಅರ್ಚನೆಯನ್ನು ಮಾಡಿ. ಅಷ್ಟೋತ್ತರ, ಭಜನೆಯ ನಂತರ ಕೃಷ್ಣನಿಗೆ ಪ್ರಿಯವಾದ ಬೆಣ್ಣೆ, ಮೊಸರು, ಹಾಲನ್ನು ಜೊತೆಗೆ ಬಗೆ ಬಗೆಯ ಉಂಡೆಗಳು, ಕುರುಕಲು ತಿಂಡಿಗಳು ಮತ್ತು ಸಿಹಿತಿಂಡಿಗಳನ್ನು ನೈವೇದ್ಯ ರೂಪದಲ್ಲಿ ಸಮರ್ಪಿಸಿ, ವಿಶೇಷವಾದ ಪೂಜೆ ಮಾಡುತ್ತಾರೆ. ಅದೇ ರೀತಿ ಪುಟ್ಟ ಪುಟ್ಟ ಮಕ್ಕಳಿಗೆ ಶ್ರೀಕೃಷ್ಣ ವೇಷದ ಸ್ಪರ್ಧೆ ಏರ್ಪಡಿಸುತ್ತಾರೆ. ಇನ್ನೂ ಹಲವಾರು ಕಡೆ ಶ್ರೀ ಕೃಷ್ಣನ ಬಾಲ್ಯದ ಆಟಗಳನ್ನು ನೆನಪಿಸುವ ಬೆಣ್ಣೆ ಕದಿಯುವ ಸ್ಪರ್ಥೆ, ಎತ್ತರದಲ್ಲಿ ಮೊಸರು ಕುಡಿಕೆಯನ್ನು ಕಟ್ಟಿ ಅದನ್ನು ಕಣ್ಣಿಗೆ ಬಟ್ಟೆ ಕಟ್ಟಿ ಒಡೆಯುವ ಸ್ಪರ್ಥೆ ಅದೇ ರೀತಿ ಪಿರಾಮಿಡ್ ತರಹ ಹುಡುಗರು ಒಬ್ಬರ ಮೇಲೆ ಒಬ್ಬರು ನಿಂತು ಮಡಿಕೆ ಒಡೆಯಲು ಪ್ರಯತ್ನಿಸುತ್ತಿದ್ದರೆ ಅಕ್ಕ ಪಕ್ಕದಲ್ಲಿ ನಿಂತಿರುವವರು ರಭಸವಾಗಿ ನೀರನ್ನು ಎರಚುತ್ತಾ ಮೊಸರಿನ ಕುಡಿಕೆ ಒಡೆಯದಿರುವಂತೆ ನೋಡಿಕೊಳ್ಳುವ ಸ್ಪರ್ಥೆಯ ಬಗ್ಗೆ ಹೇಳುವುದಕ್ಕಿಂತ ಅನುಭವಿಸಿದರೇ ಚೆಂದ.
ಉತ್ತರ ಭಾರತಾದ್ಯಂತ ಜನಾಷ್ಟಮಿಯನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ, ಕೃಷ್ಣನ ವಿಗ್ರಹವನ್ನು ವೈಭವೋಪೇತವಾಗಿ ಅಲಂಕರಿ, ಕೃಷ್ಣನ ಸಾಹಸಗಳನ್ನು ವರ್ಣಿಸುವ ಭಜನೆಗಳು ಛಪ್ಪನ್ ಭೋಗ್ ಎಂಬ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಇಲ್ಲಿ 56 ಬಗೆ ಬಗೆಯ ತಿಂಡಿ ತಿನಿಸು ಹಾಗೂ ಹಣ್ಣು ಹಂಪಲುಗಳನ್ನು ಶ್ರೀಕೃಷ್ಣನಿಗೆ ನೈವೇದ್ಯ ಸಲ್ಲಿಸಿದ ಬಳಿಕ ಎಲ್ಲಾ ತಿಂಡಿಗಳನ್ನು ಒಂದೆಡೆ ಸೇರಿಸಿ ಪ್ರಸಾದ ವಿತರಿಸಲಾಗುತ್ತದೆ. ಯಾವುದೇ ಜಾತಿ ಮತ, ಪಂಥ ಎನ್ನದೆ ಎಲ್ಲಾ ಭಕ್ತರು ತಂದಿರುವ ಪ್ರಸಾದವನ್ನು ಭಕ್ತರಿಗೆ ವಿತರಿಸುವ ಮೂಲಕ ವಸುದೈವ ಕುಟುಂಬಕಂ ಎಂಬ ಪದಕ್ಕೆ ನಿಜವಾದ ಅರ್ಥವನ್ನು ಕಲ್ಪಿಸುತ್ತಾರೆ.
ಇನ್ನು ಶ್ರೀ ಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಿ ಮಧ್ಯರಾತ್ರಿಯಲ್ಲಿ ನಂದ ಉತ್ಸವ ನಡೆಸಿ , ಭೋಗ್ ಅರ್ಪಣೆಯಲ್ಲಿ ಶ್ರೀ ಕೃಷ್ಣನಿಗೆ ಪ್ರಿಯವಾದ ಆಹಾರಗಳನ್ನು ನೈವೇದ್ಯ ಮಾಡಲಾಗುತ್ತದೆ. ಬಳಿಕ ಈ ನೈವೇದ್ಯವನ್ನು ಭಕ್ತರಿಗೆ ಹಂಚಲಾಗುತ್ತದೆ.
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯಂದು ವಿಶೇಷ ಪೂಜೆ ಪುನಸ್ಕಾರಗಳು ನೆರವೇರುತ್ತವೆ. ವಿಶೇಷವಾಗಿ 9 ರಂಧ್ರಗಳಿರುವ ನವಗ್ರಹ ಕಿಟಕಿಯ ಮೂಲಕ ಕೃಷ್ಣನ ದರ್ಶನ ಪಡೆಯುತ್ತಾರೆ. ಜೊತೆಗೆ ಹುಲಿ ವೇಷದ ಕುಣಿತ,ತಾಳ ಮದ್ದಳೆ ಮತ್ತು ಚಂಡೆಯ ಸೇವೆ, ಮೊಸರು ಗಡಿಗೆ ಒಡೆಯುವ ವಿಟ್ಲಪಿಂಡಿ, ಮತ್ತಿತರೆ ಕೃಷ್ಣ ಬದುಕಿನ ಚಿತ್ರಣ ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಇನ್ನು ದೇಶಾದ್ಯಂತ ಇರುವ ಇಸ್ಕಾನ್ ದೇವಾಲಯಗಳಲ್ಲಿ ಶ್ರೀ ಕೃಷ್ಣ ಜನಾಷ್ಟಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ವೇಳೆ 108 ವಿಭಿನ್ನ ನೈವೇದ್ಯಗಳನ್ನಿಟ್ಟು ಕೃಷ್ಣನಿಗೆ ಅರ್ಪಿಸಿ ಪೂಜಿಸಲಾಗುತ್ತದೆ. ಅಲ್ಲದೆ ಕೃಷ್ಣನ ಮೂರ್ತಿಯನ್ನು ನೀರು, ಅರಿಶಿನ, ತುಳಸಿ ದಳಗಳು ಹಾಗೂ ಗುಲಾಬಿ ದಳಗಳಿಂದ ಅಭಿಷೇಕ ಮಾಡಲಾಗುತ್ತದೆ. ರಾಧಾ ಕೃಷ್ಣರ ಮೂರ್ತಿಯನ್ನು ತರಹೇವಾರಿ ಹೂವು ಹಣ್ಣುಗಳಿಂದ ಅಲಂಕರಿಸಿರುತ್ತಾರೆ ಮತ್ತು ಶಾಲಾ ಮಕ್ಕಳಿಗೆ ಭಗವಧ್ಗೀತೆಯ ಸ್ಪರ್ಧೆ, ಪುಟ್ಟ ಪುಟ್ಟ ಮಕ್ಕಳಿಗೆ ಶ್ರೀ ಕೃಷ್ಣನ ವೇಷದ ರಸಪ್ರಶ್ನೆಗಳು, ಚಿತ್ರಕಲಾ ಸ್ಪರ್ಧೆ. ಹೆಂಗಸರಿಗೆ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಿ ಆಕರ್ಷಕವಾದ ಬಹುಮಾನವನ್ನು ವಿತರಿಸುತ್ತಾರೆ. ಸಂಜೆ ನಗರಾದ್ಯಂತ ಶ್ರೀ ಕೃಷ್ಣನ ಚೈತನ್ಯ ರಥದೊಂದಿಗೆ ನಗರ ಸಂಕೀರ್ತನೆ ನಡೆಸಿ, ಬೆಳಗಿನಿಂದ ಇಡೀ ರಾತ್ರಿಯವರೆಗೂ ಲಕ್ಷಾಂತರ ಭಕ್ತರು ಭಕ್ತಿಯಿಂದ ಶ್ರೀ ಕೃಷ್ಣನ ದರ್ಶನ ಪಡೆದು ಧನ್ಯರಾಗುತ್ತಾರೆ.
ಹದಿನೈದನೇ ಶತಮಾನದ ಚೈತನ್ಯ ಮಹಾಪ್ರಭುಗಳ ಭಕ್ತಿ ಚಳುವಳಿಯ ಸಮಯದಲ್ಲಿ ಪ್ರಚಲಿತಕ್ಕೆ ಬಂದ
ಹರೇ ಕೃಷ್ಣ ಹರೇ ಕೃಷ್ಣ , ಕೃಷ್ಣ ಕೃಷ್ಣ ಹರೇ ಹರೇ|
ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ| ಎಂಬ ಮಂತ್ರ ಇಂದಿಗೂ ಎಲ್ಲರಿಗೂ ಅಚ್ಚು ಮೆಚ್ಚಿನ ಮಹಾ ಮಂತ್ರವಾಗಿದೆ.
ಈ ರೀತಿಯಾಗಿ ಶ್ರೀಕೃಷ್ಣ ಚಿಕ್ಕವರಿಂದ ದೊಡ್ಡವರಿಗೆ, ಗಂಡು ಮತ್ತು ಹೆಣ್ಣು ಎಂಬ ಬೇಧವಿಲ್ಲದೆ, ಅಬಾಲವೃದ್ದರೂ ಪ್ರೀತಿಸಲ್ಪಡುವ ದೇವರಾಗಿದ್ದು, ಹೆತ್ತ ತಾಯಿ ಮತ್ತು ಬೆಳೆಸಿದ ತಾಯಿಗೆ ಮುದ್ದಿನ ಮಗುವಾಗಿ, ಪ್ರೇಮಿಕೆಗೆ ಪ್ರಿಯತಮನಾಗಿ, ಗೋವುಗಳಿಗೆ ಗೋಪಾಲಕನಾಗಿ, ದೀನರಿಗೆ ಬಂಧುವಾಗಿ, ಆರ್ತರಿಗೆ ರಕ್ಷಕನಾಗಿ, ಧರ್ಮಿಗಳಿಗೆ ಮಿತ್ರನಾಗಿ, ಅಧರ್ಮಿಗಳಿಗೆ ಸಿಂಹಸ್ವಪ್ನವಾಗಿ, ವೈರಿಯೊಡನೆ, ಸ್ನೇಹಿತರೊಡನೆ, ಸಹೋದರಿ ದ್ರೌಪದಿಯ ಮಾನ ಕಾಪಾಡುವ ಅಣ್ಣನಾಗಿ , ಯುದ್ಧ ರಾಯಭಾರಿಯಾಗಿ, ಸಾರಥಿಯಾಗಿ, ಪ್ರೇಮಿ, ಮಡದಿಯರೊಂದಿಗೆ ಮತ್ತು ಗೆಳೆಯರೊಡನೆ ಹೇಗಿರ ಬೇಕು? ಸಂಬಂಧ, ಬಾಂಧವ್ಯ, ಬದುಕಿನ ರಾಜಕೀಯಗಳನ್ನು ಹೇಗೆ ನಿಭಾಯಿಸ ಬೇಕು? ಯುದ್ದದ ಸಮಯದಲ್ಲಿ ಯಾವ ರೀತಿಯಾಗಿ ತಂತ್ರಗಾರಿಕೆ ಮಾಡಬೇಕು? ಸಂಕಷ್ಟದ ಸಮಯವನ್ನು ಹೇಗೆ ನಿಭಾಯಿಸ ಬೇಕು? ಎನ್ನುವುದನ್ನು ಜಗತ್ತಿಗೇ ತೋರಿಸಿಕೊಟ್ಟ ಶ್ರೀಕೃಷ್ಣನೇ ನಮಗೆ ಅತ್ಯುತ್ತಮ ಮಾರ್ಗದರ್ಶಿ. ಅಂದಿಗೂ… ಇಂದಿಗೂ… ಎಂದೆಂದಿಗೂ… ಮತ್ತು ಬದುಕಿನ ಪ್ರತಿಯೊಂದೂ ಕ್ಷಣ ಕ್ಷಣಕ್ಕೂ ಶ್ರೀ ಕೃಷ್ಣನ ನಡೆಯೇ ನಮಗೆಲ್ಲಾ ಆದರ್ಶ. ಹಾಗಾಗಿ ಕೃಷ್ಣಂ ವಂದೇ ಜಗದ್ಗುರುಂ.
ಏನಂತೀರೀ?
ನಿಮ್ಮವನೇ ಉಮಾಸುತ
ಶ್ರೀಕೃಷ್ಣ ನನ್ನ ಆರಾಧ್ಯ ದೈವ, ನೀ ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದೇ ಸಾಕೋ ಎಂದು ದಾಸರು ಸ್ತುತಿಸಿದ್ದಾರೆ. ಶ್ರೀಕೃಷ್ಣ ತನ್ನ ಅವತಾರವಾದ ಕ್ಷಣದಿಂದ ದೈವತ್ವ, ಮಹಿಮೆಯನ್ನು ಅಂತ್ಯದವರೆಗೂ ತೋರಿ ಮೆರೆಯುತ್ತಾನೆ. ಶ್ರೀಕೃಷ್ಣನ ಧರ್ಮದ ವ್ಯಾಖ್ಯಾನ, ಅನುಸಂಧಾನ ಹಾಗೂ ಧರ್ಮ ರಕ್ಷಣೆಯ ಅಭಯ ಅವನ ಭಕ್ತರಿಗೆ ಉಪಾಸನೆಯ ಧಾತು. ಆತ ಪಾಂಡವರನ್ನು ಪ್ರತಿಹಂತದಲ್ಲೂ ರಕ್ಷಿಸಿ ಅವರನ್ನು ಉದ್ಧರಿಸಿದ ರೀತಿ ಅನನ್ಯ. ಭೀಷ್ಮ, ದ್ರೋಣ, ಕರ್ಣಾದಿಗಳು ತಾವು ನಂಬಿದ್ದ ಧರ್ಮವನ್ನು ಪಾಲಿಸಿದ್ದರೂ ಅವರ ಅಂತ್ಯಕಾಲದಲ್ಲಿ ಅವರ ಧರ್ಮಪಾಲನೆಯ ನ್ಯೂನತೆಗಳನ್ನು ತಿಳಿಸಿ ಸ್ವರೂಪಯೋಗ್ಯವಾದ ಅಂತ್ಯವನ್ನು ಕರುಣಿಸುತ್ತಾನೆ.
ಜನ್ಮಾಷ್ಟಮಿಯ ವಿವಿಧ ಆಚರಣೆ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ. ಅಷ್ಟಮಿ ದಿನ ಪೂರ್ತಿ ಉಪವಾಸವಿದ್ದು ರಾತ್ರಿ ಪೂಜೆಯ ನಂತರ ಚಂದ್ರೋದಯದವರೆಗು ಕಾದಿದ್ದು ಕೃಷ್ಣನಿಗೆ, ಚಂದ್ರನಿಗೆ ಹಾಗೂ ದೇವಕಿಗೆ ಅರ್ಘ್ಯವನ್ನು ನೀಡಿ ಮಾರನೇ ದಿನ ಬೆಳಿಗ್ಗೆ ಪೂಜಾ ನೈವೇದ್ಯ ಮಾಡಿ ಬ್ರಾಹ್ಮಣ ಸುವಾಸಿನಿಯರಿಗೆ ಉಣಬಡಿಸಿದ ನಂತರ ತಾವು ಪಾರಣೆ ಮಾಡುವ ಸಂಪ್ರದಾಯ ಈಗಲೂ ಆಚರಣೆಯಲ್ಲಿದೆ.
ನಾನು ಶಾಲಾ ದಿನಗಳಲ್ಲಿ ಇಸ್ಕಾನ್ ದೇವಾಲಯದ ಶ್ರೀ ಕೃಷ್ಣ ಚಿತ್ರ ಸ್ಪರ್ಧೆಯಲ್ಲಿ ಮೂರ್ನಾಲ್ಕು ವರ್ಷ ಭಾಗವಹಿಸಿದ್ದು ನೆನಪಾಯಿತು.
LikeLiked by 1 person
ಹರೇ ಕೃಷ್ಣ
LikeLiked by 1 person
ಚೆನ್ನಾಗಿತ್ತು
LikeLike
ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿವಿಧ ಆಚರಣೆಯನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ. ನೀವು ಹೇಳಿದಂತೆ ಕೃಷ್ಣ ಜನ್ಮಾಷ್ಟಮಿ (ಗೋಕುಲಾಷ್ಟಮಿ)ಯನ್ನು ದೇಶದ ಉದ್ದಗಲದಲ್ಲೂ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ದೇಶದಲ್ಲೆಲ್ಲ ಇಂದು ಆಚರಿಸಿದರೆ ನಾವು (ಅಯ್ಯಂಗಾರ್ಸ್) ಮುಂದಿನ ತಿಂಗಳು ರೋಹಿಣಿ ನಕ್ಷತ್ರ ದಿನದಂದು ಕೃಷ್ಣ ಜಯಂತಿಯನ್ನು ಆಚರಿಸುತ್ತೇವೆ. ನಮ್ಮಲ್ಲಿ ಈ ಹಬ್ಬವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸುತ್ತೇವೆ. ವಿಶೇಷವಾಗಿ ಮಂಟಪ ಕಟ್ಟಿ ಅಲಂಕಾರಗಳನ್ನು ಮಾಡಿ ಕೃಷ್ಣನನ್ನು ಪೂಜಿಸುವ ಸಂಪ್ರದಾಯ ಇದೆ. ಚಿಕ್ಕ ಮಕ್ಕಳಿದ್ದರೆ ವಿಶೇಷವಾಗಿ ಗಂಡುಮಕ್ಕಳ ಕಾಲಿಗೆ ಬಿಳಿ ನಾಮದ ಬಣ್ಣ ಹಚ್ಚಿ ಬೃಂದಾವನದಿಂದ ಕೃಷ್ಹನ ಮಂಟಪದವರೆಗೆ ಹೆಜ್ಜೆಗಳನ್ನು ಇಡಿಸುತ್ತೇವೆ. ನಾವು ಚಿಕ್ಕವರಾಗಿದ್ದಾಗ ಈ ಹಬ್ಬ ಬಂತೆಂದರೆ ಸಂಭ್ರಮವೋ ಸಂಭ್ರಮ. ನಮ್ಮ ಮನೆಯ ತಿಂಡಿಗಳಲ್ಲದೆ ಹಬ್ಬದ ನಂತರ ಎರಡು ಮೂರು ದಿನ ನಮ್ಮ ಬಂಧುಗಳ ಮನೆಗಳಿಗೆ ಹೋಗಿ ಅವರು ಕೊಡುವ ತರಹಾವರಿ ತಿಂಡಿಗಳನ್ನು ಸಂಗ್ರಹಿಸಿ ಹದಿನೈದು ದಿನಗಳವರೆಗೆ ಇಟ್ಟುಕೊಂಡು ತಿನ್ನುತ್ತಿದ್ದೆವು. ಒಟ್ಟಿನಲ್ಲಿ
ಹಬ್ಬಗಳಲ್ಲಿ ಗೋಕುಲಾಷ್ಟಮಿಗೆ ವಿಶೇಷ ಸ್ಥಾನವಿದೆ.
LikeLiked by 1 person
ಹೌದು. ನಾವು ಶ್ರಾವಣ ಬಹುಳ ಸಪ್ತಮಿಯಂದು ಕೃಷ್ಣ ಜನ್ಮಾಷ್ಟಮಿ ಆಚರಿಸಿದರೆ ಸೌರಮಾನದ ಪದ್ದತಿಯನ್ನು ಆಚರಿಸುವವರು ರೋಹಿಣಿ ನಕ್ಷತ್ರದಂದು ಗೋಕುಲಾಷ್ಟಮಿ ಆಚರಿಸುತ್ತಾರೆ
LikeLike