ನಮ್ಮ ಸನಾತನ ಧರ್ಮದಲ್ಲಿ ಕರ್ಮದ ಬಗ್ಗೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದೇವೆ. ಪೂರ್ವ ಜನ್ಮದಲ್ಲಿ ಮಾಡಿದ ಕರ್ಮಗಳ ಫಲ ಫಲವನ್ನು ಈ ಜನ್ಮದಲ್ಲಿ ನಾವು ಅನುಭವಿಸುತ್ತೇವೆ ಎಂಬ ನಂಬಿಕೆ ಇದೆ. ಆದರೆ ಈ ಕಲಿಗಾಲದಲ್ಲಿ ಅದು ಸ್ವಲ್ಪ ಬದಲಾಗಿ, ನಾವು ಮಾಡಿದ ಕರ್ಮವನ್ನು ಇಂದೇ ಡ್ರಾ, ಇಂದೇ ಬಹುಮಾನ ಎನ್ನುವ ಹಾಗೆ ಇಲ್ಲೇ ಅನುಭವಿಸುವ ಹೃದಯವಿದ್ರಾವಕ ಕಥೆಯೊಂದನ್ನು ಹೇಳಲು ಹೊರಟಿದ್ದೇನೆ.
ಧಾರವಾಡದ ಪ್ರಾಣೇಶ್ ಕುಲಕರ್ಣಿಯವರು ಇದ್ದಕ್ಕಿದ್ದಂತೆಯೇ ನಡು ರಾತ್ರಿಯಲ್ಲಿ ತಮ್ಮ ಪ್ರಾಣ ಸ್ನೇಹಿತ ಗುರುರಾಜ ದೇಶಪಾಂಡೆಯವರಿಗೆ ಕರೆಮಾಡಿದರು. ಇಬ್ಬರೂ ಒಳ್ಳೆಯ ಕೆಲಸದಲ್ಲಿದ್ದು ನಿವೃತ್ತರಾದವರೇ, ಹಾಗಾಗಿ ಗಾಡ ನಿದ್ದೆಯಲ್ಲಿದ್ದ ದೇಶಪಾಂಡೆಯವರು ಕರೆ ಬಂದ ಕೆಲ ಸಮಯದ ನಂತರವೇ ಕರೆ ಸ್ವೀಕರಿಸಲು ಮುಂದಾದರು. ಆದರೆ ಅತ್ತ ಕಡೆ ಬಹಳ ಆತಂಕದಲ್ಲಿದ್ದ ಕುಲಕರ್ಣಿಯವರು, ಛೇ!! ಇದೇನಿದು ಗೆಳೆಯ, ಇಷ್ಟು ಹೊತ್ತು ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲವಲ್ಲಾ? ಆವನು ಆರಾಮಾಗಿದ್ದಾನೋ ಇಲ್ಲೊ? ಅಥವಾ.. ಎಂದು ನೂರಾರು ಆಲೋಚನೆ ಮಾಡುವಷ್ಟರಲ್ಲಿ ದೇಶಪಾಂಡೆಯವರೇ ಕರೆ ಮಾಡಿ, ದೋಸ್ತಾ, ಏನ್ ಪಾ!! ಸಮಾಚಾರ? ಇಷ್ಟೊಂದು ರಾತ್ರಿಯಾಗ ಕರೆ ಮಾಡಿದ್ದೀ? ಎಲ್ಲಾ ಆರಾಮ್ ಇದ್ದೀರಿ? ಎಂದು ಕೇಳಿದ ಕೂಡಲೇ, ಅದುವರೆಗೂ ದುಃಖವನ್ನು ತಡೆ ಹಿಡಿದಿದ್ದ ಕುಲಕರ್ಣಿಯವರು ಒಮ್ಮಿಂದೊಮ್ಮೆಲೆ, ಜೋರಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದರು. ಏ… ಏ.. ಸಮಾಧಾನ ಮಾಡ್ಕೋ.. ನೀ ಹೀಗ್ ಅಳ್ತಾ ಕುಂದ್ರೆ ಏನಾತ್ ಎಂದು ನನಗೆ ತಿಳಿವಲ್ದು? ಸ್ವಲ್ಪ ಅಳು ನಿಂದ್ರಿಸಿ ಏನಾತು ವದರು ಎಂದು ಪ್ರೀತಿಯಿಂದಲೇ ಗೆಳೆಯನನ್ನು ಗದುರಿಸಿದರು. ದೇಶಪಾಂಡೆಯವರ ಜೋರು ಧನಿಗೆ ಸ್ವಲ್ಪ ತಣ್ಣಗಾದ ಕುಲಕರ್ಣಿಯವರು, ನನ್ನಾಕಿ ಲಕ್ಶ್ಮೀಗೆ ನಾಲ್ಕೈದು ದಿನಗಳಿಂದ ಆರಾಮಿಲ್ಲ. ಈಗ ಸ್ವಲ್ಪ ಹೊತ್ತಿನಲ್ಲಿ ಜೋರಾಗಿ ಎದೆ ನೋವು ಅಂತಿದ್ದಾಳೆ ಏನು ಮಾಡ್ಲಿಕ್ಕೂ ತಿಳಿವಲ್ದು ಅದಕ್ಕೇ ನಿನಗೆ ಕರಿ ಮಾಡ್ದೇ ಅಂದ್ರು. ಅದನ್ನು ಕೇಳಿಸಿಕೊಂಡ ದೇಶಪಾಂಡೆಯವರು, ಸರಿ ಸರಿ ಸ್ವಲ್ಪ ಬಿಸಿ ನೀರು ಕುಡಿಸ್ತಾ ಇರು. ನಾನು ನನ್ನ ಮಗನ್ ಜೋಡಿ ಕಾರ್ ತಗೊಂಡ್ ಬರ್ತೀನಿ. ದವಾಖಾನೆಗೆ ಕರ್ಕೊಂಡು ಹೋಗೋಣು ಎಂದು ಹೇಳಿ, ಫೋನ್ ಕೆಳಗಿಟ್ಟು ಆತುರಾತುರದಲ್ಲಿ ತಮ್ಮ ಮಗ ಹರಿಯ ಜೊತೆ ಕುಲಕರ್ಣಿಯವರ ಮನೆಗೆ ಹೋಗಿ ಅವರ ಮನೆಯವರನ್ನು ಹತ್ತಿರದಲ್ಲೇ ಇದ್ದ ನರ್ಸಿಂಗ್ ಹೋಮ್ ಒಂದಕ್ಕೆ ಸೇರಿಸಿದರು. ಅಲ್ಲಿಯ ವೈದ್ಯರು ಆ ಕೂಡಲೇ ಪ್ರಥಮ ಚಿಕಿತ್ಸೆಯ ಜೊತೆ ಜೊತೆಯಲ್ಲಿಯೇ ECG ಮಾಡಿ ಸ್ವಲ್ಪ ಹೃದಯ ಸಂಬಂಧದ ತೊಂದರೆಯಿದೆ. ನಾಳೆ ಬೆಳಿಗ್ಗೆ ದೊಡ್ಡ ಡಾಕ್ಟರ್ ಆವರು ಬಂದು ಮುಂದಿನ ಚಿಕಿತ್ಸೆಗಳನ್ನು ನೋಡುತ್ತಾರೆ. ಅಲ್ಲಿಯವರೆಗೂ ಆವರಿಗೆ ನೋವಾಗದಂತೆ ನಾವು ನೋಡಿಕೊಳ್ತೇವೆ ಎಂದು ತಿಳಿಸಿದರು. ಮಾರನೇಯ ದಿನ ಬಂದ ಸರ್ಜನ್ ಅವರನ್ನು ಕೂಲಂಕುಶವಾಗಿ ಪರೀಕ್ಷಿಸಿ, ಸರಿಯಾದ ಸಮಯಕ್ಕೆ ಕರೆದು ತಂದಿದ್ದೀರಿ. ಈ ಕೂಡಲೇ ಒಂದು ಶಸ್ತ್ರಚಿಕಿತ್ಸೆ ಮಾಡಿದರೆ, ಒಂದೆರಡು ತಿಂಗಳೊಳಗೇ ಸರಿ ಹೋಗುತ್ತಾರೆ ಎಂದು ತಿಳಿಸಿ, ಶಸ್ತ್ರ ಚಿಕಿತ್ಸೆಗೆ ಸರಿ ಸುಮಾರು 8-10 ಲಕ್ಷಗಳು ಆಗಬಹುದು. ಅದನ್ನು ಎಷ್ಟು ಬೇಗ ಹೊಂದಿಸುತ್ತೀರೋ ಅಷ್ಟು ಬೇಗ ನಾವು ಶಸ್ತ್ರಚಿಕಿತ್ಸೆ ಮಾಡುತ್ತೇವೆ ಎಂದರು. ನೀವು ದುಡ್ಡಿನ ಬಗ್ಗೆ ಯಾವುದೇ ಯೋಚನೆ ಮಾಡದಿರಿ. ನಾವಿಗಲೇ ವಿಮೆ ಮಾಡಿಸಿದ್ದೇವೆ ಮತ್ತು ಅದಕ್ಕಿಂತಲೂ ಹೆಚ್ಚಿನ ಖರ್ಚಾದಲ್ಲಿ ಭರಿಸಲು ಸಿದ್ದವಿದ್ದೇವೆ. ಹಾಗಾಗಿ ತಡಮಾಡದೇ ಶಸ್ತ್ರಚಿಕಿತ್ಸೆಯನ್ನು ಮಾಡಿ ನನ್ನ ಮಡದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿ ಎಂದು ಕೇಳಿಕೊಂಡರು ಕುಲಕರ್ಣಿಯವರು.
ದೇವರ ದಯೆ ಮತ್ತು ವೈದ್ಯರ ಕೈಗುಣದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಕುಲಕರ್ಣಿಯವರ ಪತ್ನಿ ಲಕ್ಷ್ಮಿಯವರು ನಿಧಾನವಾಗಿ ಹುಶಾರಾಗುವಷ್ಟರಲ್ಲಿ, ಕುಲಕರ್ಣಿಯವರು ವಿದೇಶದಲ್ಲಿ ಇದ್ದ ತಮ್ಮ ಇಬ್ಬರು ಗಂಡು ಮಕ್ಕಳಿಗೂ ಕರೆ ಮಾಡಿ ಅವರ ತಾಯಿಯವರು ಗಂಭೀರ ಸ್ಥಿತಿಯಲ್ಲಿರುವುದನ್ನು ತಿಳಿಸಿ ಮಕ್ಕಳು ಮತ್ತು ಮೊಮ್ಮಕ್ಕಳನ್ನು ನೋಡಿಯಾದರೂ ಅವರ ಮಡದಿ ಆದಷ್ಟು ಬೇಗನೆ ಚೇತರಿಸಿಕೊಳ್ಳಬಹುದೇನೋ ಎಂದೆಣಿಸಿ, ಆದಷ್ಘು ಬೇಗನೆ ಅವರನ್ನು ನೋಡಲಿಕ್ಕೆ ಬರಲು ಸೂಚಿಸಿದ್ದರು. ಮೊದ ಮೊದಲು ಕೆಲಸ ತುಂಬಾ ಇದೆ. ಈಗ ಬರಲು ಸಾದ್ಯವಿಲ್ಲ. ದುಡ್ಡು ಎಷ್ಟೇ ಖರ್ಚಾದರೂ ಪರವಾಗಿಲ್ಲಾ. ದೊಡ್ಡ ಆಸ್ಪತ್ರೆಗೆ ಸೇರಿಸಿ ಅವರನ್ನು ಗುಣಪಡಿಸಿ. ಮನೆಗೆ ಬಂದ ಮೇಲೆ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಅವರನ್ನು ನೋಡಿ ಕೊಳ್ಳಲು ದಾದಿಯರ ವ್ಯವಸ್ಥೆ ಮಾಡೋಣ. ಆಡಿಗೆಯವರನ್ನು ನೇಮಿಸೋಣ ಎಂದೆಲ್ಲಾ ಹೇಳಿದ ಮಕ್ಕಳು, ತಮ್ಮ ತಂದೆಯವರ ಬಾರಿ, ಬಾರಿ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದಲೇ ತಾಯಿಯನ್ನು ನೋಡಲು ಸಕುಂಟ ಸಮೇತರಾಗಿ ಬಂದರು.
ತಂದೆ ಮಕ್ಕಳ ಮಾತುಕತೆಯ ಅರಿವಿಲ್ಲದಿದ್ದ ಕುಲಕರ್ಣಿಯವರ ಮಡದಿ, ಒಮ್ಮಿಂದೊಮ್ಮೆಲೆ ಇಬ್ಬರೂ ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ನೋಡಿ ಬಹಳ ಸಂತೋಷಗೊಂಡರು. ಅವರ ಆಗಮನದ ಪರಿಣಾಮವಾಗಿಯೋ ಏನೋ? ವೈದ್ಯರು ಹೇಳಿದ್ದಕಿಂತ ಮೊದಲೇ ಸಂಪೂರ್ಣ ಗುಣಮುಖರಾಗಿ ಮನೆಯವರೆಲ್ಲರೂ ಕೂಡಿ ಅವರ ಮನೆದೇವರು ಮತ್ತು ಸುತ್ತ ಮುತ್ತಲಿನ ತೀರ್ಥಕ್ಷೇತ್ರಗಳಿಗೂ ಹೋಗಿ ಬಂದರು. ಅತ್ಯಂತ ಆಸೆ ಪಟ್ಟು ವಿಶಾಲವಾಗಿ ಕಟ್ಟಿದ್ದ ಮನೆಯಲ್ಲಿ ಅನೇಕ ವರ್ಷಗಳಿಂದಲೂ ಕೇವಲ ಅಜ್ಜಿ ಮತ್ತು ತಾತಂದಿರೇ ಇದ್ದದ್ದು ಈಗ ಎಲ್ಲರೂ ಬಂದ ಪರಿಣಾಮ ಮನೆಯಲ್ಲಿನ ಕಲರವ ಹೇಳ ತೀರದು. ಇನ್ನೇನು ಮಕ್ಕಳು ಹೊರಡಲು ಎರಡು ದಿನಗಳು ಇವೇ ಎಂದಾಗ ಕುಲಕರ್ಣಿಯವರು ತಮ್ಮ ಆಪ್ತಮಿತ್ರ ದೇಶಪಾಂಡೆಯವರ ಸಮ್ಮುಖದಲ್ಲಿ ಇಬ್ಬರೂ ಮಕ್ಕಳನ್ನು ಮನೆಯ ಮೇಲಿನ ಹಜಾರಕ್ಕೆ ಕರೆದೊಯ್ದು ಇಬ್ಬರೂ ಮಕ್ಕಳನ್ನು ತಬ್ಬಿಕೊಂಡು ಗಳಗಳನೆ ಅಳ ತೊಡಗಿದರು. ಮಕ್ಕಳ ಮುಂದೆ ಈ ರೀತಿಯಾಗಿ ಎಂದು ಅಳದ ತಂದೆಯವರ ಈ ರೀತಿಯ ವರ್ತನೆ ಮಕ್ಕಳಲ್ಲಿ ಆತಂಕ ತರಿಸಿತಾದರೂ ಅದನ್ನು ಸಾವರಿಸಿಕೊಂಡು ಅವರ ತಂದೆಯನ್ನು ಸಂತೈಯಿಸಿ, ಸುಮ್ಮನೆ ಅಳಬೇಡಿ. ಏನೋ ಮಾತನಾಡಬೇಕು ಎಂದು ಹೇಳಿದ್ದಿರಿ. ಏನು ಸಮಾಚಾರ? ಯಾರಾದರೂ ಏನಾದರೂ ಹೇಳಿದರೇ? ನಮ್ಮಿಂದೇನಾದರೂ ಆರ್ಥಿಕ ಸಹಾಯ ಬೇಕೇ? ಅಥವಾ ಇನ್ನಾವುದಾರೂ ಸೌಲಭ್ಯಗಳು ಬೇಕೇ? ಎಂದು ಒಂದೇ ಉಸಿರಿನಲ್ಲಿ ತಂದೆಯವರನ್ನು ಕೇಳಿದರು. ಅಲ್ಲಿಯವರೆಗೂ ಸುಮ್ಮನೆ ತಲೆ ತಗ್ಗಿಸಿ ಮೌನವಾಗಿ ಅಳುತ್ತಿದ್ದ ಕುಲಕರ್ಣಿಯವರು ಒಮ್ಮೆಲೆ ಛಗ್ಗನೆ, ತಮ್ಮ ತಲೆ ಎತ್ತಿ ಮಕ್ಕಳನ್ನು ದುರು ದುರುಗುಟ್ಟಿ ನೋಡಿದರು. ಅಪ್ಪನನ್ನು ಹಾಗೆಂದೂ ನೋಡಿರದ ಮಕ್ಕಳಿಬ್ಬರೂ ತಬ್ಬಿಬ್ಬಾದರು.
ನಮಗೆ ಯಾರೂ ಏನೂ ಹೇಳಲಿಲ್ಲ. ನಮಗೆ ಇನ್ನಾವ ಸೌಲಭ್ಯಗಳೂ ಬೇಡ. ನಿಮ್ಮ ಆರ್ಥಿಕ ಸಹಾಯವಂತೂ ಮೊದಲೇ ಬೇಡ. ದಯವಿಟ್ಟು ನೀವು ಹೋಗೋ ಮುಂದೆ ಎರಡು ತೊಟ್ಟು ವಿಷವನ್ನು ನಿಮ್ಮ ಕೈಯ್ಯಾರೆ ನಮ್ಮಿಬ್ಬರಿಗೆ ಕೊಟ್ಟು ಬಿಡಿ. ನಾವಿಬ್ಬರೂ ಒಟ್ಟಿಗೆ ನೆಮ್ಮದಿಯಿಂದ ಸಾಯುತ್ತೇವೆ. ಸರಿ ಸುಮಾರು 50 ವರ್ಷಗಳಿಗೂ ಅಧಿಕ ವರ್ಷಗಳಿಂದ ಒಟ್ಟಿಗೆ ಬಾಳುತ್ತಿದ್ದೇವೆ. ನನ್ನ ಬಿಟ್ಟು ನಿಮ್ಮ ಅಮ್ಮ , ನಿಮ್ಮ ಅಮ್ಮನನ್ನು ಬಿಟ್ಟು ನಾನು. ಹೀಗೆ ಒಬ್ಬರೊನ್ನೊಬ್ಬರು ಅಗಲಿ ಇರಲಾವು. ನಮ್ಮ ಕಾಲಾನಂತರ ನಮ್ಮ ಅಂತ್ಯಕ್ರಿಯೆಯನ್ನು ಮಾತ್ರಾ ಮಾಡಿದರೆ ಸಾಕು. ಬೇರಾವ ವಿಧಿ ವಿಧಾನಗಳನ್ನೂ ಮಾಡದಿದ್ದರೂ ಪರವಾಗಿಲ್ಲ. ಎಂದು ಹೇಳಿದರು. ಅಪ್ಪಾ! ಇದೇನಿದು ಈ ರೀತಿಯಾಗಿ ಅಪಶಕುನದ ಮಾತಗಳನ್ನು ಆಡುತ್ತೀರಿ? ನಾವೇನು ನಿಮಗೆ ಕಡಿಮೆ ಮಾಡಿದ್ದೇವೆ? ಇಲ್ಲಿ ಸಕಲ ರೀತಿಯ ಸೌಲಭ್ಯಗಳಿವೆ ಮತ್ತೇಕೆ ಚಿಂತೆ ಎಂದ ದೊಡ್ಡ ಮಗ. ಅದಕ್ಕೆ ಹೂಂ ಎಂದು ಹೂಂಗುಟ್ಟಿದ ಚಿಕ್ಕ ಮಗ. ಹೌದಪ್ಪಾ. ನಮಗೆ ಇಲ್ಲಿ ಎಲ್ಲವೂ ಇದೆ. ಆದರೆ ವಯಸ್ಸಾದ ಸಮಯದಲ್ಲಿ ನಮ್ಮನ್ನು ನೋಡಿ ಕೊಳ್ಳಬೇಕಾದವರೇ ಇಲ್ಲಿ ಇಲ್ಲ. ಆದಿನ ನಿಮ್ಮ ಅಮ್ಮ ಹುಷಾರು ತಪ್ಪಿದಾಗ, ಇದೇ ದೇಶಪಾಂಡೆ ಮತ್ತವನ ಮಗ ಇಲ್ಲದಿದ್ದಲ್ಲಿ ನೀವಿಂದು ನಿಮ್ಮ ಅಮ್ಮನ ಮುಖ ನೋಡಲು ಸಾಧ್ಯವಾಗುತ್ತಿರಲಿಲ್ಲ. ವಂಶೋದ್ದಾರಕರು ಎಂದು ಇಬ್ಬಿಬ್ಬರು ಗಂಡು ಮಕ್ಕಳಿದ್ದರೂ ಸಹಾ ಆಪತ್ತಿನಲ್ಲಿ ಸ್ನೇಹಿತ ಮತ್ತು ಆತನ ಮಗನನ್ನು ಆಶ್ರಯಿಸಬೇಕಾಯಿತು. ಇಂತಹ ಸುಖಃಕ್ಕೆ ಮಕ್ಕಳೇಕೆ ಬೇಕು? ನಿಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿ, ನೀವು ಕೇಳಿದ್ದದ್ದನ್ನೆಲ್ಲಾ ಕೊಡಿಸಿ ನಿಮಗ ವಿದ್ಯೆಕಲಿಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೂ ಕಳುಹಿಸಿ, ಮದುವೆ ವಯಸ್ಸಿಗೆ ಬಂದಾಗ, ನಿಮಗೊಪ್ಪುಂತಹಾ ಹುಡುಗಿಯ ಜೊತೆಗೇ ಮದುವೆ ಮಾಡಿಸಿ ನಿಮ್ಮ ಸುಖಃವೇ ನಮ್ಮ ಸುಖಃ ಎಂದು ತಿಳಿದಿರುವ ನಮಗೆ ಸಾಯುವ ಕಾಲದಲ್ಲಿ ನೋಡಿಕೊಳ್ಳಲು ಹೆತ್ತ ಮಕ್ಕಳೇ ಇಲ್ಲದಿದ್ದರೆ ಹೇಗೆ ? ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಅಲ್ಲಿಯವರೆಗೂ ಸುಮ್ಮನೆ ಅಣ್ಣನ ಮಾತಿಗೆ ಹೂಂ ಗುಟ್ಟುತ್ತಿದ್ದ ತಮ್ಮ, ಇದ್ದಕ್ಕಿದ್ದಂತೆಯೇ ವ್ಯಗ್ರನಾಗಿ ಹೋದ. ಅಪ್ಪಾ, ಸಾಕು ಮಾಡಿ ಈ ನಿಮ್ಮ ಪ್ರಲಾಪ. ಅವಾಗಲಿನಿಂದಲೂ ಕೇಳುತ್ತಲೇ ಇದ್ದೇನೆ ನಿಮ್ಮ ಆಲಾಪ. ಸುಮ್ಮನೆ ನಮ್ಮನ್ನೇಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಮಾನಿಸುತ್ತಿದ್ದೀರಿ? ನೀವು ಹೇಳಿದ್ದೆಲ್ಲವೂ ಒಬ್ಬ ಪೋಷಕರಾಗಿ ಮಾಡಬೇಕಾದಂತಹ ಕರ್ತವ್ಯಗಳೇ ಹೊರತು ಅದಕ್ಕಿಂತ ಹೆಚ್ಚಿನದ್ದೇನು ನೀವು ಮಾಡಿಲ್ಲ. ನಾವೆಲ್ಲರೂ ನಿಮ್ಮ ಆಣತಿಯಂತೆಯೇ ಓದಿ, ವಿದೇಶಗಳಲ್ಲಿ ನೆಲೆಸಿದಾಗ, ನಮ್ಮ ಮಕ್ಕಳು ವಿದೇಶದಲ್ಲಿದ್ದಾರೆ ಎಂದು ಎಲ್ಲರ ಮುಂದೆ ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತಿದ್ದವರು, ಈಗ ಕಷ್ಟ ಬಂದಿತೆಂದು ನಮ್ಮನ್ನು ತೆಗಳುವುದು ಸರಿಯೇ? ಭಗವಧ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿರುವಂತೆ ಪ್ರತಿಪಲಾಪೇಕ್ಷೆಯಿಂದ ಯಾವುದೇ ಕೆಲಸಗಳನ್ನು ಮಾಡಕೂಡದು. ನಿಜಕ್ಕೂ ಹೇಳಬೇಕೆಂದರೇ, ಸದ್ಯದ ಈ ಪರಿಸ್ಥಿತಿ ಬಂದೊದಗಲು ನಿಮಗೆ ನೀವೇ ಕಾರಣ. ನೀವು ಅಂದು ಒಬ್ಬ ಮಗನಾಗಿ ನಿಮ್ಮ ತಂದೆ ತಾಯಿಯರಿಗೆ ಏನು ಮಾಡಿದ್ದೀರೋ ಅದನ್ನೇ ನೀವು ಇಂದು ನಿಮ್ಮ ಮಕ್ಕಳಿಂದ ಪಡೆಯುತ್ತಿದ್ದೀರಿ ಎಂದು ಅಬ್ಬರಿಸಿದ. ಕಿರಿಯ ಮಗನ ಈ ಹೇಳಿಕೆಯಿಂದ ಎಲ್ಲರೂ ಒಂದು ಕ್ಷಣ ಮೌನವಾದರು. ಆ ಒಂದು ಕ್ಷಣ ಯಾರಿಗೂ ಏನು ಹೇಳಬೇಕೆಂದೇ ತಿಳಿಯಲಿಲ್ಲ.
ಸ್ವಲ್ಪ ಸಾವರಿಸಿಕೊಂಡ ಕುಲಕರ್ಣಿಯವರು. ಹೌದು. ಎಲ್ಲವೂ ನನ್ನದೇ ತಪ್ಪು. ಅಂದು ನನ್ನ ಹೆತ್ತ ತಂದೆ ತಾಯಿಯರು, ಅಂತಹ ಕಷ್ಟದ ಸಮಯದಲ್ಲೂ ಹೊಟ್ಟೆ ಬಟ್ಟೆ ಕಟ್ಟಿ ಅಂದಿನ ಕಾಲದಲ್ಲೇ ಇಂಜಿನೀಯರಿಂಗ್ ಓದಿಸಿದರು. ಹಾಗೆ ಓದಿದ ನಂತರ ಧಾರವಾಡದಲ್ಲಿ ನನಗೆ ಸೂಕ್ತ ಕೆಲಸ ಸಿಗದ ಕಾರಣ, ದೂರದ ಪೂನಾಕ್ಕೆ ಕೆಲಸ ಹುಡುಕಿಕೊಂಡು ಹೋಗಿ ಅಲ್ಲೇ ನನ್ನ ಬದುಕು ಕಟ್ಟಿಕೊಂಡೆ. ಅಲ್ಲೇ ನನ್ನ ಮದುವೆಯಾಗಿ ಮಕ್ಕಳಾದರು. ಕಾಲ ಕಾಲಕ್ಕೆ ಪರಿಶ್ರಮಕ್ಕೆ ತಕ್ಕ ಹಣವೂ ಕೈ ಸೇರ ತೊಡಗಿತು. ಮೊದಮೊದಲು ಅಪ್ಪಾ ಅಮ್ಮನನ್ನು ನೋಡಲು ತಿಂಗಳಿಗೊಮ್ಮೆಯಾದರೂ ಬಂದು ಹೋಗುತ್ತಿದ್ದವನು, ಕ್ರಮೇಣ ಮೂರು, ಇಲ್ಲವೇ ಆರು ತಿಂಗಳು ಇಲ್ಲವೇ, ವರ್ಷಕ್ಕೊಮ್ಮೆ ನಾಗರಪಂಚಮಿಗೆ ಬರುವಷ್ಟಕ್ಕೇ ಸೀಮಿತವಾಯಿತು. ತಿಂಗಳು ತಿಂಗಳಿಗೆ ಸರಿಯಾಗಿ ಹಣವನ್ನು ಕಳುಹಿಸುತ್ತಿದ್ದೆನಾದ್ದರಿಂದ ಊರಿನಲ್ಲಿ ಎಲ್ಲರೂ ಚೆನ್ನಾಗಿರ ಬಹುದೆಂಬ ಭಾವನೆ ನನ್ನದಾಗಿತ್ತು. ನಾನು ಊರಿಗೆ ಬಂದಾಗಲೂ ನನ್ನ ಮನಸ್ಸನ್ನು ನೋಯಿಸಬಾರದೆಂಬ ಕಾರಣದಿಂದ ನಮ್ಮ ತಂದೆ ತಾಯಿಯರೂ ನನ್ನ ಬಳಿ ಯಾವುದೇ ತೊಂದರೆಗಳನ್ನು ಹೇಳಿಕೊಳ್ಳದೇ ಚೆನ್ನಾಗಿಯೇ ಇರುವಂತೆ ನಟಿಸಿ, ಕಾಲ ಬಂದಾಗ ನಮ್ಮನ್ನಗಲಿದರು. ಅವರು ಕಾಲವಾದ ನಂತರ ಅವರ ನೆನಪಿನಲ್ಲಿ ಈ ಬಂಗಲೆ ಕಟ್ಟಿಸಿದೆ. ಕೆಲಸದಿಂದ ನಿವೃತ್ತನಾದ ನಂತರ ಕಡೆಯ ದಿನಗಳನ್ನು ನಮ್ಮ ತವರಿನಲ್ಲೇ ಕಳೆಯುವ ಇಚ್ಛೆಯಿಂದ ಇಲ್ಲೇ ಬಂದು ನೆಲೆಸಿದೆ. ನಾವು ವಯಸ್ಸಾದಾಗ, ನಮಗೀಗ ಮಕ್ಕಳ ಅಗಲಿಕೆಯಿಂದಾಗಿರ ಬಹುದಾದ ಕಷ್ಟಗಳು ಅರಿವಾಗುತ್ತಿದೆ ಎಂದು ಹೇಳಿ. ಇಬ್ಬರೂ ಮಕ್ಕಳಿಗೆ ಕೈ ಮುಗಿಯುತ್ತಾ , ನಮಗಿಂತಲೂ ಚಿಕ್ಕವರಾದರೂ ನೀವು ಕಣ್ಣು ತೆರೆಸಿದ್ದೀರಿ ಅದಕ್ಕೆ ಧನ್ಯವಾದಗಳು. ಮರ್ಯಾದಾ ಪುರುಶೋತ್ತಮನಾದ, ಎಲ್ಲರಿಗೂ ಆದರ್ಶ ಪ್ರಾಯನಾದ, ಶ್ರೀರಾಮ ಚಂದ್ರನ ತಂದೆ ದಶರಥ ಮಹಾರಾಜನಿಗೇ ಸಾಯುವ ಸಮಯದಲ್ಲಿ ಅವರ ನಾಲ್ಕೂ ಮಕ್ಕಳು ಜೊತೆಯಲ್ಲಿ ಇಲ್ಲದಿದ್ದಾಗಾ, ಇನ್ನು ಹುಲು ಮಾನವನಾದ ನಾನು ಅದನ್ನು ಹೇಗೆ ಬಯಸಲಿ? ನನ್ನ ಹಣೆಯಲ್ಲಿ ಬರೆದ ವಿಧಿಯಂತೆಯೇ ಆಗುತ್ತದೆ. ವಿಧಿ ಬದಲಿಸಲು ನಾನ್ಯಾರು? ನೀವ್ಯಾರು? ನಾವು ಮಾಡಿದ ಕರ್ಮವನ್ನು ನಾವೇ ಅನುಭವಿಸುತ್ತೇವೆ. ಅದಕ್ಕೇ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ ಎಂದು ಹೇಳಿ, ದೇಶಪಾಂಡೇ, ನಡೀರೀ, ಆಕೀಗೆ ದವಾ ಕೊಡ ಹೊತ್ತಾತು. ಹಂಗೇ ಇಬ್ರೂ ಕೂಡೀ ಊಟ ಮಾಡೋಣು ಎನ್ನುತ್ತಾ ತನ್ನ ಆಪ್ತ ಮಿತ್ರರನ್ನು ಕರೆದುಕೊಂಡು ಮಹಡಿ ಇಳಿಯತೊಡಗಿದರು.
ತಂದೆ ಮತ್ತು ಅವರ ಸ್ನೇಹಿತರು ಕೆಳಗಿ ಇಳಿದು ಹೋದಂತೆಯೇ, ಮಕ್ಕಳಿಬ್ಬರಿಗೂ ಮಾತಿನ ಭರದಲ್ಲಿ ತಾವು ಆಡಿದ ಮಾತಿನಿಂದ ತಮ್ಮ ತಂದೆಯವರಿಗಾದ ನೋವು ಅರಿವಾಯಿತು ಮತ್ತು ಅದರ ಜೊತೆ ಜೊತೆಗೇ ಇನ್ನೊಬ್ಬರು ಮಾಡಿದ ತಪ್ಪನ್ನು ಎತ್ತಿ ಆಡಿ ತೋರಿಸಿದರೆ ಅದು ದ್ವೇಷವಾಗುತ್ತದೆಯೇ ಹೊರತು ಅಲ್ಲಿ ಪ್ರೀತಿ ಉಕ್ಕುವುದಿಲ್ಲ ಎಂಬುದು ಮನದಟ್ಟಾಯಿತು. ತಮ್ಮ ತಂದೆಯವರು ಅಂದು ಅರಿವಿಲ್ಲದೇ ಮಾಡಿದ ತಪ್ಪನ್ನು ಇಂದು ತಾವುಗಳು ಗೊತ್ತಿದ್ದೂ ಗೊತ್ತಿದ್ದೂ ಮಾಡಿದರೇ, ಮುಂದೇ ಅದೇ ತಪ್ಪನ್ನು ತಮ್ಮ ಮಕ್ಕಳೂ ಖಂಡಿತವಾಗಿಯೂ ಮಾಡಿಯೇ ತೀರುತ್ತಾರೆ ಮತ್ತು ನಾವುಗಳು ಇದೇ ಪರಿಸ್ಥಿತಿಯನ್ನು ಅನುಭವಿಸಿಯೇ ತೀರುತ್ತೇವೆ. ಇಲ್ಲೇ ಸ್ವರ್ಗ. ಇಲ್ಲೇ ನರಕ. ಮೇಲೇನಿಲ್ಲಾ ಇಲ್ಲಾ ಸುಳ್ಳು ಹುಟ್ಟು ಸಾವು ಎರಡರ ಮಧ್ಯೇ ಮೂರು ದಿನದಾ ಬಾಳು ಎಂಬ ನಾಗರಹೊಳೆ ಚಿತ್ರದ ಅಂಬರೀಷ್ ಅಭಿನಯದ ಹಾಡು ಅವರಿಗೆ ನೆನಪಾಯಿತು. ಇಬ್ಬರೂ ಕೊಂಚ ಹೊತ್ತು ಮಾತನಾಡಿ, ಒಂದು ನಿರ್ಧಾರಕ್ಕೆ ಬಂದು, ತಮ್ಮ ತಮ್ಮ ಮಡದಿಯರೊಡನೇ ನಡೆದದ್ದೆಲ್ಲವನ್ನೂ ತಿಳಿಸಿ ತಮ್ಮ ನಿರ್ಧಾರವನ್ನೂ ಅವರಿಗೆ ತಿಳಿಸಿ ಎಲ್ಲರೂ ಒಟ್ಟಾಗಿ ತಂದೆ ತಾಯಿಯರ ಕೋಣೆಗೆ ಬಂದು ಅಪ್ಪಾ, ಅಮ್ಮಾ ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ. ಗೊತ್ತಿದ್ದೋ ಗೊತ್ತಿಲ್ಲದಂತೆಯೋ ಇಷ್ಟು ದಿನ ನಿಮಗೆ ತೊಂದರೆ ಕೊಟ್ಟಿದ್ದೀವಿ. ಇನ್ನು ಮುಂದೆ ಆ ರೀತಿಯಾಗಿ ಮಾಡುವುದಿಲ್ಲ. ನಮ್ಮ ಮಕ್ಕಳ ಈ ವರ್ಷದ ಪರೀಕ್ಷೇ ಮುಗಿಯುತ್ತಿದ್ದಂತೆಯೇ, ಇಲ್ಲಿಗೇ ಹಿಂದಿರುಗಿ ಬರುತ್ತೇವೆ. ಇಲ್ಲಿಗೇ ಬಂದು ನಮ್ಮಿಬ್ಬರ ಅನುಭವದ ಮೇಲೆ ಒಂದು ಹೊಸಾ ಕಂಪನಿ ಹುಟ್ಟು ಹಾಕಿ ಇಲ್ಲಿಂದಲೇ ಕೆಲಸ ಮಾಡುತ್ತೀವಿ. ಆಗ ಕೇವಲ ನಮಗಲ್ಲದೇ ನಮ್ಮಂತಹ ಅನೇಕರು ತಮ್ಮ ತಂದೆ ತಾಯಿಯರ ಜೊತೆಯಲ್ಲಿಯೇ ಇದ್ದು ಇಲ್ಲೇ ಉದ್ಯೋಗ ಮಾಡುವಂತಾಗುತ್ತದೆ. ದೇಶ ಕಾರ್ಯ ಈಶ ಕಾರ್ಯ ಎನ್ನುವಂತೆ, ನಮ್ಮ ಸ್ವಾರ್ಥಕ್ಕಾಗಿ ಸ್ಥಾಪಿಸುವ ಕಂಪನಿ, ನಿಸ್ವಾರ್ಥವಾಗಿ ಅನೇಕರಿಗೆ ಉಪಯೋಗವಾಗುತ್ತದೆ ಎಂದು ಹೇಳಿ ತಂದೆ ತಾಯಿಯರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಇಷ್ಟು ಶ್ರೀಘ್ರವಾಗಿ ಮತ್ತು ಈ ರೀತಿಯಾಗಿ ತಮ್ಮ ಮಕ್ಕಳು ಬದಲಾಗುತ್ತಾರೆ ಎಂಬುದನ್ನು ನಿರೀಕ್ಷಿಸದ ಅವರ ತಂದೆ ತಾಯಿಯರು ಆನಂದ ಭಾಷ್ಪ ಹರಿಸಿದರು. ಕಾಲ ಉರುಳಿ ಹೋಗಿದ್ದೇ ಗೊತ್ತಾಗಲಿಲ್ಲ. ನುಡಿದಂತೆ ಆರೆಂಟು ತಿಂಗಳಿನಲ್ಲಿ ಮಕ್ಕಳಿಬ್ಬರೂ ಸಕುಟುಂಬ ಸಮೇತರಾಗಿ ಹಿಂದಿರುಗಿ ಬಂದು ಒಂದೇ ಮನೆಯಲ್ಲಿ ಅಜ್ಜಿ, ತಾತ, ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮೊಕ್ಕಳೊಂದಿಗೆ ಅವಿಭಕ್ತ ಕುಟುಂಬವಾಗಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಅವರು ಸ್ಥಾಪಿಸಿದ ಕಂಪನಿಯಲ್ಲಿ ಆ ಇಬ್ಬರು ಗಂಡು ಮಕ್ಕಳು ಮತ್ತು ಸೊಸೆಯರಲ್ಲದೇ, ಅವರ ಜೊತೆ ನೂರಾರು ಜನರಿಗೆ ಉದ್ಯೋಗ ದೊರೆತು, ಸಾವಿರಾರು ಜನರಿಗೆ ಆಶ್ರಯತಾಣವಾಗಿ, ಲಕ್ಷಾಂತರ ರೂಪಾಯಿಗಳ ವ್ಯವಹಾರವನ್ನು ಮಾಡುತ್ತಾ , ಕೋಟ್ಯಾಂತರ ಜನಸಂಖ್ಯೆ ಇರುವ ಈ ದೇಶಕ್ಕೇ ಹೆಮ್ಮೆಯನ್ನು ತರುತ್ತಿದೆ.
ನಿಜ. ಮೇಲೆ ಹೇಳಿದಂತಹ ಕಥೆಯಲ್ಲಿ ಎಲ್ಲವೂ ನಿಜವಲ್ಲ. ಕೆಲವೊಂದು ಕಾಲ್ಪನಿಕವಾಗಿಯೂ ಇದೆಯಾದರೂ, ಸಾಧಿಸಲು ಅಸಾಧ್ಯೇನೂ ಅಲ್ಲದ್ದಾಗಿದೆ. ಜೀವನದಲ್ಲಿ
ಪ್ರಾಣ, ಯೌವನ ಮತ್ತು ಕಾಲ ಹಿಂದಿರುಗಿ ಬರಲಾರದು, ಅದೇ ರೀತಿ
ರೋಗ, ಆಸ್ತಿ ಮತ್ತು ಕಷ್ಟಗಳು ಬಂದು ಹೋಗುವಂತಹದ್ದು. ಆದರೇ,
ವಿದ್ಯೆ, ಸ್ನೇಹ ಮತ್ತು ಸಂಬಂಧಗಳು ಜೀವಿತಾವಧಿಯವರೆಗೂ ನಮ್ಮೊಂದಿಗೇ ಇರುವಂತಹವು. ಹಾಗಾಗಿ ಕಲಿತ ವಿದ್ಯೆಯನ್ನು ಸರಿಯಾಗಿ ಬಳೆಸಿಕೊಂಡು ಬಂಧು-ಮಿತ್ರರೊಡನೇ ಸ್ನೇಹ ವೃದ್ಧಿಸಿ ಕೊಂಡು ಸಂಬಂಧಗಳನ್ನು ಬೆಳೆಸೋಣ ಮತ್ತು ಉಳಿಸೋಣ. ಏಕೆಂದೆರೆ ಒಗ್ಗಟ್ಟಿನಲ್ಲಿ ಬಲವಿದೆ. ಎಲ್ಲಿ ಬಲವಿದೆಯೋ ಅಲ್ಲಿ ಛಲವಿರುತ್ತದೆ. ಎಲ್ಲಿ ಛಲ ಇರುತ್ತದೆಯೋ ಅಲ್ಲಿ ಗೆಲುವು ಇದ್ದೇ ಇರುತ್ತದೆ.
ನಾವು ಗೆದ್ದೇ ಗೆಲ್ತೀವೀ.. ನಾವು ಗೆದ್ದೇ ಗೆಲ್ತೀವೀ, ಒಂದು ದಿನಾ.. ನಮ್ಮಲೀ ಛಲವಿದೇ.. ನಮ್ಮಲೀ ಬಲವಿದೇ.. ನಾವು ಗೆದ್ದೇ ಗೆಲ್ತೀವೀ..ಒಂದು ದಿನಾ.. ನಾವು ಗೆಲ್ಲಲೇ ಬೇಕು ಒಂದು ದಿನಾ..
ಏನಂತೀರೀ?
ಕಥೆಯಲ್ಲಿ ಬರುವಂತಹ ಅಣ್ಣ-ತಮ್ಮಂದಿರ ವ್ಯಾಪಾರ ಕೌಟುಂಬಿಕ ವ್ಯಾಪಾರವಾಗಿದ್ದಲ್ಲಿ ಅಲ್ಲಿ ಎಲ್ಲರಿಗೂ ಕೆಲಸವಿರುತ್ತದೆ ಹಾಗೂ ಎಲ್ಲರೂ ಸಾವರಿಸಿಕೊಂಡು ಹೋಗಬಲ್ಲರು.
ಇದೊಂದು ಸುಖಾಂತ್ಯದ ಮಾದರಿ. ಒಳ್ಳೆಯ ವಿಶ್ಲೇಷಣೆ. ಬರಹ ಚೆನ್ನಾಗಿದೆ
LikeLike
ಮೊದಲು ಸಮಸ್ಯೆಯನ್ನು ತಿಳಿಸಿ ನಂತರ ಅದಕ್ಕೆ ಸೂಕ್ತ ಪರಿಹಾರವನ್ನೂ ಅದರ ಜೊತೆಯಲ್ಲಿಯೇ ನೀಡಿದಲ್ಲಿ ಎಲ್ಲರ ಮನಸ್ಸನ್ನು ತಟ್ಟುತ್ತದೆ ಎಂದು ಸುಖಾಂತ್ಯದಲ್ಲಿ ಕಥೆಯನ್ನು ಮುಗಿಸಿದ್ದೇನೆ.
LikeLike
ಬಹಳ ಸೊಗಸಾಗಿ ಬರೆದಿದ್ದೀರಿ…
LikeLiked by 1 person
ದನ್ಯೋಸ್ಮಿ
LikeLike
👳
LikeLike