ಆಟೋ ರಾಜ ಶಂಕರನಾಗ್

ಆಟೋ ಮಧ್ಯಮ ವರ್ಗದ ಜನ ಸಾಮಾನ್ಯರೂ ಸುಲಭವಾಗಿ ಸಂಚಾರಿಸುವ ವಾಹನ. ಇನ್ನು ಬಹುತೇಕ ಆಟೋ ಚಾಲಕರಿಗೆ ಆಟೋ ಚಾಲನೆಯ ಆದಾಯವೇ ಅವರ ಜೀವನಾಧಾರ. ಅವರವರ ಭಾವನೆ, ಸಿಟ್ಟು ನೆಡವು ಮತ್ತವರ ಅನುಭವಗಳನ್ನು ಭಗ್ನಪ್ರೇಮಿಗಳ ರೂಪದಲ್ಲಿ ಆಟೋ ಹಿಂದೆ ನಾನಾ ರೂಪದಲ್ಲಿ ಬರೆಸಿರುವುದನ್ನು ಕಾಣುತ್ತೇವೆ. ಈ ರೀತಿಯಾಗಿ ವಿಭಿನ್ನ ಬರಹಗಳಿದ್ದರೂ ಅವುಗಳ ಎಲ್ಲದರ ಮಧ್ಯೆ ಕಾಣಬಹುದಾದ ಸಮಾನವಾದ ಒಂದು ಅಂಶವೆಂದರೆ ಶಂಕರ್ ನಾಗ್ ಭಾವಚಿತ್ರ. ಅರೇ ಆಟೋ ರಾಜ ಶಂಕರ್ ನಾಗ್ ಚಿತ್ರವನ್ನು ತಮ್ಮ ಆಟೋದ ಮೇಲೆ ಹಾಕಿರುವ ಆ ಅಭಿಮಾನಿ ಯಾರೆಂದು ನೋಡಲು ಹೋದರೇ ಆತ ಇನ್ನೂ ಚಿಗುರು ಮೀಸೆಯ ಹುಡುಗನೋ ಇಲ್ಲವೇ 20-30ರ ನಡು ವಯಸ್ಸಿನವರಾಗಿರುತ್ತಾರೆ ಮತ್ತು ಆವರುಗಳು ಶಂಕರ್ ನಾಗ್ ಅವರನ್ನು ನೇರವಾಗಿ ನೋಡೇ ಇರುವುದಿಲ್ಲ. ಏಕೆಂದರೆ ಅವರುಗಳು ಹುಟ್ಟುವ ಮುಂಚೆಯೇ ಶಂಕರ್ ನಾಗ್ 30 ಸೆಪ್ಟೆಂಬರ್ 1990 ಕ್ಕೇ ನಮ್ಮನ್ನಗಲಿರುತ್ತಾರೆ. ಸುಮಾರು 31 ವರ್ಷಗಳ ಹಿಂದೆಯೇ ನಮ್ಮನ್ನಗಲಿದರೂ ಇಂದಿಗೂ ಕೂಡ ಜನಮಾನಸದಲ್ಲಿ ಶಾಶ್ವತವಾಗಿ ಮನ ಮಾಡಿರುವ ಶಂಕರ್ ನಾಗ್ ಕೇವಲ ರೀಲ್ ಹೀರೋ ಅಲ್ಲದೇ ರಿಯಲ್ ಹೀರೋನೇ ಸರಿ.

shanka4

ರಾಜಕುಮಾರ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಸಂಪತ್ಕುಮಾರ್ (ವಿಷ್ಣುವರ್ಧನ್), ಅಂಬರೀಷ್ ಮುಂತಾದ ಕನ್ನಡ ಚಲನಚಿತ್ರ ರಂಗದ ದಂತಕಥೆಗಳ ಮಧ್ಯೆಯೂ ಕನ್ನಡ ಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ಶಂಕರ ನಾಗ್ ಕೇವಲ ನಟನಾಗಿಯಲ್ಲದೇ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ವಿಮರ್ಶಕನಾಗಿ, ತಂತ್ರಜ್ಞನಾಗಿ, ಎಲ್ಲದಕ್ಕಿಂತ ಮಿಗಿಲಾಗಿ ಅತ್ಯುತ್ತಮ ಕನ್ನಡಿಗನಾಗಿ ಕನ್ನಡ ಚಲನಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕರ್ನಾಟಕದಲ್ಲೇ ಉಳಿಯುವಂತಾಗಲು ಶ್ರಮಿಸಿದ ಶಕ್ತಿ ಆ ವ್ಯಕ್ತಿ. ಎಂದರೆ ಅತಿಶಯೋಕ್ತಿಯೇನಲ್ಲ. ಕೇವಲ ಚಿತ್ರರಂಗವಲ್ಲದೇ, ಕನ್ನಡ ಮತ್ತು ಮರಾಠಿ ರಂಗಭೂಮಿ, ಕರ್ನಾಟಕ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ತನ್ನನ್ನು ವಿಪರೀತವಾಗಿ ತೊಡಗಿಸಿಕೊಂಡಿದ್ದ ಅಜಾತ ಶತ್ರು ಶಂಕರ್ ನಾಗ್ ಬದುಕಿದ್ದು ಕೇವಲ 35 ವರ್ಷಗಳಾದರೂ ಅವರ ಸಾಧನೆ ಇನ್ನು ಮೂವತ್ತು ತಲೆಮಾರಿಗೂ ಉಳಿಯುವಷ್ಟಿದೆ.

1954 ರಲ್ಲಿ ಹೊನ್ನಾವರ ಹತ್ತಿರದ ಮಲ್ಲಾಪುರದ ಕೊಂಕಣೀ ಸಾರಸ್ವತರ ಮನೆಯಲ್ಲಿ ಮೂರನೇ ಮಗನಾಗಿ ಹುಟ್ಟಿದ ಶಂಕರ್ ನಾಗರಕಟ್ಟೆ , ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರತಿಭಾವಂತ ಮತ್ತು ಅಪರೂಪದ ನಟ ಅನಂತ್ ನಾಗರ ಕಟ್ಟೆಯವರ ಕಿರಿಯ ಸಹೋದರರೂ ಹೌದು. ಬಾಲ್ಯದ ಶಿಕ್ಷಣವೆಲ್ಲಾ ಉತ್ತರ ಕರ್ನಾಟಕದಲ್ಲಿಯಾಗಿ ಕಾಲೇಜಿಗೆ ಬರುವಷ್ಟರಲ್ಲಿ ಅಣ್ಣ ಅನಂತ್ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಕೆಲಸದ ನಿಮಿತ್ತ ಹೋಗಿ ಅಲ್ಲಾಗಲೇ ರಂಗಭೂಮಿಯಲ್ಲಿ ಸಕ್ರೀಯರಾಗಿರುತ್ತಾರೆ. ತಮ್ಮ ಹೆಸರಿನ ಜೊತೆಗೆ ನಾಗರ ಕಟ್ಟೆ ಎಂಬ ತಮ್ಮ ಊರಿನ ಹೆಸರನ್ನು ನಾಗ್ ಎಂದು ಚುಟುಕುಗೊಳಿಸಿ ಅನಂತ್ ನಾಗ್ ಮತ್ತು ಶಂಕರ್ ನಾಗ್ಎಂಬ ಆಕರ್ಷಣೀಯ ಹೆಸರನ್ನು ಇಟ್ಟುಕೊಂಡು ಮುಂದೆ ನಾಗ್ ಸಹೋದರರು ಎಂದು ಖ್ಯಾತಿವಂತರಾಗುತ್ತಾರೆ. ಶಂಕರ್ ತಮ್ಮ ಕಾಲೇಜು ವಿದ್ಯಾಭ್ಯಾಸ ಮುಗಿದ ಕೂಡಲೇ ಅಣ್ಣನನ್ನು ಅನುಸರಿಸಿ ಮುಂಬೈಗೆ ವಲಸೆ ಹೋಗಿ ಬೆಳಗಿನ ಹೊತ್ತಿನಲ್ಲಿ ಬ್ಯಾಂಕ್‌ನಲ್ಲಿ ಗುಮಾಸ್ತರಾಗಿ ಉದ್ಯೋಗ ಮಾಡುತ್ತಲೇ ಸಂಜೆ ಹೊತ್ತು ರಂಗಭೂಮಿ ನಾಟಕದಲ್ಲಿ ಸಕ್ರಿಯರಾಗತೊಡಗುತ್ತಾರೆ. ಆರಂಭದಲ್ಲಿ ರಂಗಸಜ್ಜಿಕೆ, ಬೆಳಕು ಮತ್ತು ದೀಪಗಳ ಸಜ್ಜಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಕ್ರಮೇಣವಾಗಿ ನಟನೆಯಲ್ಲೂ ತಮ್ಮ ಛಾಪನ್ನು ತೋರಿಸತೊಡಗುತ್ತಾರೆ. ಈ ಹೊತ್ತಿಗೆ ಅನಂತ್ ನಾಗ್ ತಮ್ಮ ಪರಿಚಯಸ್ಥರ ಮೂಲಕ ಕೆಲವು ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿ ಪ್ರವರ್ಧಮಾನಕ್ಕೆ ಬರುತ್ತಿರುತ್ತಾರೆ.

odanodu.jpeg

1978ರ ಸಮಯದಲ್ಲಿ ಕನ್ನಡದ ಹೆಸರಾಂತ ನಟ, ನಾಟಕಕಾರ ಮತ್ತು ನಿರ್ದೇಶಕ ಗೀರೀಶ್ ಕಾರ್ನಾಡ್ ತಮ್ಮ ಒಂದಾನೊಂದು ಕಾಲದಲ್ಲಿ ಎಂಬ ಚಿತ್ರಕ್ಕೆ ಹೊಸಾ ನಾಯಕ ನಟನ ತಲಾಶೆಯಲ್ಲಿದ್ದಾಗ ತಮ್ಮ ಜೊತೆ ಈಗಾಗಲೇ ಒಂದು ಮರಾಠಿ ಚಿತ್ರದಲ್ಲಿ ನಟಿಸಿದ ಶಂಕರ್ ನಾಗ್ ನೆನಪಿಗೆ ಬಂದು ಶಂಕರ್ ನಾಗ್ ಮತ್ತು ಮತ್ತೊಬ್ಬ ಪ್ರತಿಭಾವಂತ ಕಂಚಿನ ಕಂಠದ ನಟರಾಗಿದ್ದ ಸುಂದರಕೃಷ್ಣ ಅರಸ್ ಅವರನ್ನು ತಮ್ಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಾರೆ. ತಮ್ಮ ಮೊದಲ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಗೂ ಭಾಜನರಾದ ಶಂಕರ್ ನಾಗ್ ಅಲ್ಲಿಂದ ಹಿಂದಿರುಗಿ ನೋಡಲೇ ಇಲ್ಲ. ಆನೆ ನಡೆದದ್ದೇ ದಾರಿ ಎನ್ನುವಂತೆ 1990ರ ವರೆಗೂ ಶಂಕರ್ ನಾಗ್ ಮಾಡಿದ ಸಾಹಸಗಳೆಲ್ಲವೂ ಕನ್ನಡ ಚಿತ್ರರಂಗದಲ್ಲಿ ಮೈಲು ಗಲ್ಲುಗಳಾದವು. ಆ ಕಾಲದ ನಟರುಗಳು ಕೇವಲ ತಮ್ಮ ಹಾವ ಭಾವ ಮತ್ತು ಸಂಭಾಷಣೆಯಿಂದ ಹೆಸರು ಮಾಡಿದ್ದರೆ, ಶಂಕರ್ ನಾಗ್ ಅವರು ಅಂದಿನ ಕಾಲಕ್ಕೆ ತಕ್ಕಂತೆ ಜನ ಇಷ್ಟ ಪಡುತ್ತಿದ್ದ ಡಿಸ್ಕೋ ಡಾನ್ಸ್ ಮಾಡುತ್ತಾ ಕನ್ನಡದ ಡಿಸ್ಕೋ ಡ್ಯಾನ್ಸರ್ ಎಂದೂ ಮತ್ತು ತಮ್ಮ ಆಕರ್ಷಕ ಮೈಕಟ್ಟಿನಿಂದ ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡು ಕರಾಟೆಕಿಂಗ್ ಎಂದೂ ಹೆಸರು ಗಳಿಸುತ್ತಾರೆ.

nodi swamy

ಚಲನ ಚಿತ್ರರಂಗದಲ್ಲಿ ನಟಿಸುತ್ತಲೇ ರಂಗ ಭೂಮಿಯಲ್ಲೂ ತಮ್ಮ ಛಾಪನ್ನು ಮೂಡಿಸಿದ್ದ ಶಂಕರ್ ನಾಗ್ ಕಡೆಗೆ ಅಣ್ಣ ಅನಂತ್ ನಾಗ್,ರಮೇಶ್ ಭಟ್, ಜಗದೀಶ್ ಮಲ್ನಾಡ್ ಮತ್ತು ತಮ್ಮ ಮರಾಠೀ ರಂಗಭೂಮಿಯ ಸಹ ನಟಿಯಾದ ಮತ್ತು ಅವರ ಬಾಳ ಸಂಗಾತಿಯಾದ ಅರುಂಧತೀ ನಾಗ್ ಅವರನ್ನು ಒಳಗೊಂಡ ತಮ್ಮದೇ ಆದ ಒಂದು ಸಂಕೇತ್ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ಬ್ಯಾರಿಸ್ಟರ್, ಸಂಧ್ಯಾ ಛಾಯ, ನೋಡಿ ಸ್ವಾಮಿ ನಾವಿರೋದು ಹೀಗೆ, ಆಟ ಬೊಂಬಾಟ, ಕಾರ್ನಾಡರ ನಾಗಮಂಡಲ , ಅಂಜುಮಲ್ಲಿಗೆ ಮುಂತಾದ ಅನೇಕ ಜನಪ್ರಿಯ ನಾಟಕಗಳನ್ನು ಮಾಡುತ್ತಾರೆ. ಅವುಗಳಲ್ಲಿ ನೋಡಿ ಸ್ವಾಮೀ ನಾವಿರೋದು ಹೀಗೆ ಎನ್ನುವ ನಾಟಕ ಅವರಿಗೆ ಮತ್ತು ಅವರ ತಂಡಕ್ಕೆ ಅಪಾರವಾದ ಹೆಸರನ್ನು ತಂದು ಕೊಡುತ್ತದೆ.

minchu.jpeg

ಚಿತ್ರರಂಗದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದರೂ ಅವರ ಒಲವೆಲ್ಲಾ ನಿರ್ದೇಶನದತ್ತಲೇ ಇದ್ದ ಕಾರಣ, ಅಣ್ಣ ಅನಂತ್ , ಅಂಕಲ್ ಲೋಕನಾಥ್ ಮತ್ತು ಪ್ರಿಯಾ ತೆಂಡೂಲ್ಕರ್ ಜೊತೆಯಲ್ಲಿ ಮೊತ್ತ ಮೊದಲ ಬಾರಿಗೆ ಮಿಂಚಿನ ಓಟ ಎಂಬ ಚಿತ್ರದಲ್ಲಿ ನಟಿಸುವುದರೊಂದಿಗೆ ನಿರ್ದೇಶಿಸುತ್ತಾರೆ. ತಮ್ಮ ಚೊಚ್ಚಲ ಪ್ರಯತ್ನಕ್ಕೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ ತಮ್ಮ ಚೊಚ್ಚಲು ಚಿತ್ರದ ನಟನೆ ಮತ್ತು ನಿರ್ದೇಶನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಾರೆ. 1981ರಲ್ಲಿ ಅವರು ನಿರ್ದೇಶಿಸಿದ ಗೀತಾ ಚಿತ್ರ ಅಂದಿನ ಕಾಲಕ್ಕೆ ಬ್ಲಾಕ್ ಬಸ್ಟರ್ ಚಿತ್ರವಾಗಿತ್ತು. ಮೊತ್ತ ಮೊದಲ ಬಾರಿಗೆ ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಇಳೆಯರಾಜರವನ್ನು ಕನ್ನಡ ಚಿತ್ರವೊಂದಕ್ಕೆ ಸಂಗೀತ ನಿರ್ದೇಶಕರಾಗಿ ಪರಿಚಯಿಸಿದ್ದೇ ಶಂಕರ್ ನಾಗ್. ಅದಕ್ಕಿಂತ ಮುಂಚೆ ತಮ್ಮ ಗುರು ಜಿ. ಕೆ. ವೆಂಕಟೇಶ್ ಅವರ ನಿರ್ದೇಶನದಲ್ಲಿ ಹಲವಾರು ಕನ್ನಡ ಚಿತ್ರಗಳಿಗೆ ವಾದ್ಯಗಾರರಾಗಿ ಕೆಲಸ್ ಮಾಡಿದ್ದ ಇಳೆಯರಾಜ ಗೀತಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಉಳಿದಿರುವಂತ ಹಾಡುಗಳನ್ನು ಕೊಟ್ಟಿದ್ದಾರೆ.

ಜೊತೆಯಲಿ ಜೊತೆಜೊತೆಯಲಿ, ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ, ಸಂತೋಷಕ್ಕೆ ಹಾಡು ಸಂತೋಷಕ್ಕೆ, ಏನೇ ಕೇಳು ಕೊಡುವೆ ನಿನಗೆ ನಾನೀಗ, ನನ್ನ ಜೀವ ನೀನು ಹಾಡುಗಳು ಇಂದಿಗೂ ಜನಪ್ರಿಯ ಹಾಡುಗಳ ಸಾಲಿನಲ್ಲಿ ಅಗ್ರಸ್ಥಾನವನ್ನು ಪಡೆದಿದ್ದು, ಇಂದಿಗೂ ಬಹುತೇಕ ಆರ್ಕೇಷ್ಟ್ರಾ ತಂಡಗಳು, ಸಂತೋಷಕ್ಕೆ ಹಾಡು ಸಂತೋಷಕ್ಕೆ ಹಾಡಿನ ಜೊತೆಗೆ ಶಂಕರ್ ನಾಗ್ ಅವರಂತೆಯೇ ಕೈಬೀಸಿ ನಡೆಡಾಡುತ್ತಾ ನೃತ್ಯ ಮಾಡುವುದನ್ನು ಮುಂದುವರಿಸಿ ಕೊಂಡು ಹೋಗುತ್ತಿವೆ. ಇಂದಿಗೂ ಜೊತೆಯಲಿ ಜೊತೆಜೊತೆಯಲಿ ಕಾಲರ್ ಟ್ಯೂನ್ ಅತ್ಯಂತ ಜನಪ್ರಿಯವಾಗಿದೆ.

muttu.jpeg

ಇದಾದ ನಂತರ ತಮ್ಮ ನೋಡಿ ಸ್ವಾಮಿ ನಾಟಕವನ್ನೇ ಚಲನಚಿತ್ರವನ್ನಾಗಿ ನಿರ್ಮಿಸಿ ನಿರ್ಮಾಣ ಮಾಡಿದ್ದರು. 1984 ರಲ್ಲಿ ಅವರ ನಿರ್ದೇಶನದಲ್ಲಿ ಮೂಡಿಬಂದ ಆಕ್ಸಿಡೆಂಟ್ ರಾಷ್ಟ್ರಪ್ರಶಸ್ತಿಯನ್ನು ಗಳಿಸಿತಲ್ಲದೇ, ಅಂತರಾಷ್ಟ್ರೀಯ ಮಟ್ಟದಲ್ಲೂ ಅವರಿಗೆ ಕೀರ್ತಿ ತಂದು ಕೊಟ್ಟಿತು. ಶಂಕರ್ ಅವರ ನಿರ್ದೇಶದ ಚಾಕಚಕ್ಯತೆಗೆ ಮರುಳಾದ ಡಾ.ರಾಜಕುಮಾರ್ ಅವರೂ ಕೂಡ ಒಂದು ಮುತ್ತಿನ ಕಥೆ ಚಿತ್ರದಲ್ಲಿ ಶಂಕರ್ ನಾಗ್ ಅವರ ನಿರ್ದೇಶನದಲ್ಲಿ ನಟಿಸಿದ್ದಾರೆ. ಹೀಗೆ ಡಾ.ರಾಜ್, ವಿಷ್ಣುವರ್ಧನ್, ಅಂಬರೀಶ್ ಮತ್ತು ಅನಂತ್ ನಾಗ್ ಆವರಂತಹ ದಿಗ್ಗಜರೊಂದಿಗೆ ಅವರ ಸರಿಸಮನಗಿ ನಟಿಸಿ ಸೈ ಎನಿಸಿಕೊಂಡರು ಶಂಕರ್ ನಾಗ್. ಅವರು ನಿರ್ದೇಶಿಸಿದ ಬಹುತೇಕ ಚಿತ್ರಗಳು ಆರ್ಥಿಕವಾಗಿ ಹೆಚ್ಚಿನ ಲಾಭ ತಂದು ಕೊಡದಿದ್ದರೂ ಅವರ ಸಮಾಜಿಕ ಕಳಕಳಿ ಮತ್ತು ಪ್ರಯೋಗಶೀಲತೆಯಿಂದ ಜನಮನರ ಹೃದಯವನ್ನಂತೂ ಗೆದ್ದಿತ್ತು ಎಂದರೆ ಸುಳ್ಳಾಗದು.

ಎಂಭತ್ತರ ದಶಕದ ಆರಂಭದಲ್ಲಿ ಅವರು ಆಟೋ ಡ್ರೈವರ್ ಆಗಿ ನಟಿಸಿದ ಆಟೋ ರಾಜ ಚಿತ್ರದ ಮೂಲಕ ಮಧ್ಯಮ ವರ್ಗದ ಪಾಲಿನ ನಾಯಕರಾಗಿ ಹೋಗಿ ಆಟೋ ಚಾಲಕರ ಹೃದಯದಲ್ಲಿ ಶಾಶ್ವತವಾಗಿ ಮನೆ ಮಾಡಿದ ಶಂಕರ್, ನಂತರ ಎಂಬತ್ತನೇ ದಶಕದ ಅಂತ್ಯದಲ್ಲಿ ಬೆಂಗಳೂರಿನ ದಕ್ಷ ಪೋಲೀಸ್ ಅಧಿಕಾರಿಯಾಗಿದ್ದ ಸಾಂಗ್ಲಿಯಾನಾ ಅವರ ಹೆಸರಿನಲ್ಲಿ ಬಂದ ಚಿತ್ರ, ಶಂಕರ್ ನಾಗ್ ಅವರ ಚಿತ್ರರಂಗದ ಬದಕನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿತು. ದಕ್ಷ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ಸಮಾಜ ಘಾತುಕರನ್ನು ಸೆದೆಬಡಿಯುತ್ತಿದ್ದರೆ ಛೇ ಇವರೇ ನಿಜವಾಗಿಯೂ ಪ್ರಾಮಾಣಿಕ ಪೋಲೀಸ್ ಅಧಿಕಾರಿಯಾಗಬಾರದಾಗಿತ್ತೇ ಎಂದು ಜನರು ಮಾತನಾಡಿಕೊಳ್ಳುವಂತಾಗಿತ್ತು. ಇದೇ ಚಿತ್ರದ ಜನಪ್ರಿಯತೆಯಿಂದಾಗಿ ಸಾಂಗ್ಲಿಯಾನಾ-2 ಕೂಡಾ ಬಂದು ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಸೀಕ್ವೆಲ್ ಸಿನಿಮಾಕ್ಕೆ ನಾಂದಿ ಹಾಡಿತು.

ಶಂಕರ್ ನಾಗ್ ನಂತರ ಇತ್ತೀಚಿನ ನಟರುಗಳಾದ ಉಪೇಂದ್ರ ಮತ್ತು ಗಣೇಶ್ ಕೂಡಾ ಆಟೋ‌ ಡ್ರೈವರ್ ಕುರಿತಾದ ಸಿನಿಮಾ ಮಾಡಿದರೂ ಕನ್ನಡಿಗರ ಮನಸ್ಸಿನಲ್ಲಿ ಅಟೋವಿಗೆ ಶಂಕರ್ ನಾಗ್ ಅನ್ವರ್ಥ ನಾಮ ಎನಿಸಿ ಹೋಗುವಷ್ಟು ತುಂಬಿ ಹೋಗಿರುವ ಕಾರಣ ಆಟೋ ರಾಜ ಹೆಸರಿನಲ್ಲಿ ಬೇರೆ ಯಾವುದೇ ನಟರನ್ನು ಊಹಿಸಿ ಕೊಳ್ಳಲೂ ಸಾಧ್ಯವಲ್ಲವಾಗಿದೆ ಎಂದರೆ ಶಂಕರ್ ನಾಗ್ ಅವರ ಜನಪ್ರಿಯತೆ ಇಂದಿಗೂ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಊಹಿಸಿಕೊಳ್ಳಬಹುದಾಗಿದೆ.

malgudi.jpeg

80ರ ದಶಕದಲ್ಲಿ ದೇಶಾದ್ಯಂತ ಪ್ರವರ್ಧಮಾನಕ್ಕೆ ಬಂದ ದೂರದರ್ಶನದ ರಾಷ್ಟ್ರೀಯ ವಾಹಿನಿ, ಶಂಕರ್ ನಾಗ್ ಅವರನ್ನು ಹಿಂದಿ ಧಾರಾವಾಹಿಯನ್ನು ನಿರ್ದೇಶಿಸಲು ಕೇಳಿಕೊಂಡಾಗ ಶಂಕರ ನಾಗ್ ಅತ್ಯಂತ ಸಂತೋಷ ದಿಂದ ಒಪ್ಪಿಕೊಂಡು ಕನ್ನಡಿಗರೇ ಆದ ಪ್ರಸಿದ್ಧ ಆರ್.ಕೆ.ನಾರಾಯಣ್‌ ಅವರ ಮಾಲ್ಗುಡಿ ಡೇಸ್ ಪುಸ್ತಕವನ್ನು ಆಧಾರಿಸಿ ಮಾಸ್ಟರ್ ಮಂಜುನಾಥ್ ಮತ್ತು ಅನಂತ್ ನಾಗ್ ಆವರನ್ನು ಪ್ರಧಾನವಾಗಿಸಿ ತೆಗೆದ ಮಾಲ್ಗುಡೇ ಡೇಸ್ ಸರಣಿಯ ಮಿಠಾಯಿವಾಲ, ಸ್ವಾಮಿ ಮುಂತಾದ ಧಾರಾವಾಹಿ ದೇಶಾದ್ಯಂತ ಏಕೆ ಪ್ರಪಂಚಾದ್ಯಂತ ಅತ್ಯಂತ ಮನ್ನಣೆ ಪಡೆಯಿತು. ಈ ಲಾಕ್ ಡೌನ್ ಸಮಯದಲ್ಲಿ ಅದರ ಕನ್ನಡ ಅವತರಣಿಕೆ ಪ್ರಸಾರವಾಗಿ ಎಲ್ಲರ ಹೃನ್ಮನಗಳನ್ನು ಗೆಲ್ಲುವುದರಲ್ಲಿ ಸಫಲವಾಯಿತು.

ಇಷ್ಟೆಲ್ಲದರ ನಡುವೆಯೂ ಅಂದಿನ ಜನಪ್ರಿಯ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಪ್ರಭಾವಕ್ಕೆ ಒಳಗಾಗಿ ಸಕ್ರೀಯವಾಗಿಯಲ್ಲದಿದ್ದರೂ ಪರೋಕ್ಷವಾಗಿ ರಾಮಕೃಷ್ಣ ಹೆಗಡೆ ಮತ್ತು ಅವರ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಇಳಿದಿದ್ದರು. ಅವರ ಅಣ್ಣ ಅನಂತ್ ಒಮ್ಮೆ ಲೋಕಸಾಭಾ ಚುನಾಚಣೆಯಲ್ಲಿ ಸೋತರಾದರೂ ನಂತರ ಬೆಂಗಳೂರಿನ ಮಲ್ಲೇಶ್ವರ ಕ್ಷೇತ್ರದಿಂದ ವಿಧಾನ ಸಭಾ ಸದಸ್ಯರಾಗಿ ಆಯ್ಕೆಯಾಗಿ ದಿ.ಜೆ ಹೆಚ್ ಪಟೇಲ್ ಅವರ ಸಂಪುಟದಲ್ಲಿ ಸಚಿವರೂ ಆಗಿದ್ದರು.

ಇಷ್ಟೆಲ್ಲಾ ಚಟುವಟಿಕೆಗಳ ಮಧ್ಯೆಯೂ ಅವರಿಗೆ ನಾಟಕ ಮತ್ತು ಚಿತ್ರಗಳ ಹೊರತಾಗಿ ಏನಾದರೂ ಮಾಡಬೇಕೆಂಬ ತುಡಿತ ಕಾಡುತ್ತಲೇ ಇದ್ದುದರ ಪರಿಣಾಮವಾಗಿ

sanketh

  • ಪ್ರತೀ ಕನ್ನಡ ಚಿತ್ರಗಳೂ ವಾಯ್ಸ್ ಡಬಿಂಗ್ ಮತ್ತು ರೀ-ರೆಕಾರ್ಡಿಂಗ್ ಕೆಲಸಗಳಿಗೆ ಅಂದಿನ ಮದರಾಸಿಗೇ ಹೋಗುತ್ತಿದ್ದನ್ನು ನೋಡಿ ಕನ್ನಡ ಚಿತ್ರ ರಂಗಕ್ಕೆ ಅನುಕೂಲವಾಗಲೆಂದೇ ಸಂಕೇತ್ ಇಲೆಕ್ಟ್ರಾನಿಕ್ಸ್ ಎಂಬ ಹೆಸರಿನಲ್ಲಿ ರಿಕಾರ್ಡಿಂಗ್ ಸ್ಟುಡಿಯೋವನ್ನು ಬೆಂಗಳೂರಿನ ಶೇಶಾದ್ರಿಪುರದಲ್ಲಿ ನಿರ್ಮಿಸಿ ಕನ್ನಡ ಚಿತ್ರರಂಗ ಬೆಂಗಳೂರಿನಲ್ಲಿಯೇ ಉಳಿಯುವಂತೆ ಮಾಡಿದ ಕೀರ್ತಿ ನಾಗ್ ಸಹೋದರರಿಗೆ ಸಲ್ಲುತದೆ.
  • ಬೆಂಗಳೂರಿನ ವಾಹನ ದಟ್ಟಣೆಯ ಪರಿಹಾರಕ್ಕೆಂದು ಅಂದಿನ ಕಾಲದಲ್ಲಿಯೇ ಲಂಡನ್ನಿನ ಮಾದರಿಯ ಮೆಟ್ರೋ ರೈಲನ್ನು ಬೆಂಗಳೂರಿಗೆ ತರಲು ಯೋಚಿಸಿ ಅದರ ನೀಲಿ ನಕ್ಷೆಯನ್ನು ತಯಾರಿಸಿ ಸರ್ಕಾರದ ಮುಂದೆ ಇಟ್ಟಿದ್ದರು.
  • ಬೆಂಗಳೂರಿಗೆ ಅತ್ಯಂತ ಸಮೀಪದಲ್ಲಿ ಇರುವ ನಂದೀ ಬೆಟ್ಟಕ್ಕೆ ರೋಪ್ ವೇ (rope way) ಹಾಕಿಸಿ ಅಬಾಲ ವೃದ್ಧರಾಗಿ ಜನ ನಂದಿಗೆ ಬಂದು ರಮಣಿಯ ಪ್ರಕೃತಿ ಸೌಂದರ್ಯವನ್ನು ಸವಿಯುವಂತೆ ಮಾಡಬೇಕು ಎಂದು ಯೋಚಿಸಿ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ್ದರು.
  • ಅಂದೆಲ್ಲಾ ಸಿರಿವಂತರಿಗೆ ಮಾತ್ರವೇ ಸೀಮಿತವಾಗಿದ್ದ ಕ್ಲಬ್ಬುಗಳಿಗೆ ಜನಸಾಮಾನ್ಯರಿಗೂ ಕೈಗೆಟುವ ಹಾಗೆ ಮಾಡುವ ಪ್ರಯತ್ನವೇ ಇಂದಿನ ಕಂಟ್ರೀ ಕ್ಲಬ್.

ಜನಸಾಮಾನ್ಯರಿಗೂ ತಮ್ಮದೊಂದು ಸ್ವಂತದ ಸೂರು ಮಾಡಿಕೊಳ್ಳುವುದು ಬಹಳ ಕಷ್ಟ ಎಂಬುದನ್ನು ಮನಗಂಡು ಅತ್ಯಂತ ಕಡಿಮೆ ವೆಚ್ಚದ ಪ್ರೀಕ್ಯಾಸ್ಟೆಡ್ ಫ್ಯಾಬ್ರಿಕೇಟೇಡ್ ಮನೆ ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸಿ ಯಲಹಂಕದಲ್ಲಿ ಪ್ರಾಯೋಗಿಕವಾಗಿ ಕಟ್ಟಿಸಿದ ಒಂದೆರಡು ಮನೆಯನ್ನು ಈಗಲೂ ಕಾಣಬಹುದಾಗಿದೆ.
`
Time is money ಎಂಬುದನ್ನು ಅಪಾರವಾಗಿ ನಂಬಿದ್ದ ಶಂಕರ್ ನಾಗ್ ಒಂದು ಕ್ಷಣವೂ ಸುಮ್ಮನಿರದೇ ಎನಾದರೊಂದು ಕೆಲಸ ಮಾಡುತ್ತಲೇ ಇರುತ್ತಿದ್ದರು. 1990ರ ಸೆಪ್ಟಂಬರ್ 30 ರ ಬೆಳಗ್ಗೆ ಪ್ರೇಮಾ ಕಾರಂತ್ ಅವರ ಜೋಕುಮಾರಸ್ವಾಮಿ ಚಿತ್ರದ ಚಿತ್ರೀಕರಣಕ್ಕಾಗಿ ಹುಬ್ಬಳ್ಳಿಗೆ ತೆರಳಬೇಕಾಗಿತ್ತು. ಹಗಲಿನಲ್ಲಿ ಪ್ರಯಾಣಿಸಿದರೆ ಸಮಯ ವ್ಯರ್ಥವಾಗುತ್ತದೆ ಎಂದೇ ಭಾವಿಸಿದ್ದ ಶಂಕರ್ ನಾಗ್ ಹಿಂದಿನ ದಿನದ ರಾತ್ರಿ ತಮ್ಮ ಪತ್ನಿ ಅರುಂಧತಿ ನಾಗ್ ಮತ್ತು ಅವರ ಮುದ್ದಿನ ಮಗಳು ಕಾವ್ಯಾಳ ಜೊತೆ ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದರು. ಮಾರ್ಗದ ಮಧ್ಯದಲ್ಲಿ ತಾವೇ ಚಾಲಕನ ಜಾಗದಲ್ಲಿ ಕುಳಿತು ತಮ್ಮ ಕಾರ್ ಚಾಲನೆ ಮಾಡುತ್ತಿದ್ದಾಗ ತಡ ರಾತ್ರಿಯಲ್ಲಿ ದಾವಣಗೆರೆಯ ಆನಗೋಡು ಎಂಬ ಗ್ರಾಮದ ಬಳಿಯಲ್ಲಿ ಅಪಘಾತಕ್ಕೆ ಸಿಲುಕಿ ಸಹ ಪ್ರಯಾಣಿಕರಾಗಿದ್ದ ಆವರ ಪತ್ನಿ, ಪುತ್ರಿ ಮತ್ತು ಚಾಲಕ ಅಲ್ಪ ಸ್ವಲ್ಪ ಗಾಯಾಳುಗಳಾದರೇ ಕಾರ್ ಚಾಲನೆ ಮಾಡುತ್ತಿದ್ದ ಶಂಕರ್ ನಾಗ್ ಸ್ಧಳದಲ್ಲೇ ವಿಧಿವಶರಾದರು.

Shankar3

ಸೆಪ್ಟಂಬರ್ 30, 1990ರ ಬೆಳಿಗ್ಗೆ ಶಂಕರ್ ನಾಗ್ ಅವರ ಅಕಾಲಿಕ ದುರ್ಮರಣವನ್ನು ಕೇಳಿದ ರಾಜ್ಯದ ಜನ ತಮ್ಮ ಸಮೀಪದ ಬಂಧುವನ್ನೇ ಕಳೆದುಕೊಂಡರೋ ಏನೋ ಎನ್ನುವಂತೆ ದುಃಖಿಸಿದರು. ಮೂರ್ನಾಲ್ಕು ದಿನಗಳ ಕಾಲ ಇಡೀ ರಾಜ್ಯಕ್ಕೆ ರಾಜ್ಯವೇ ಶೋಕದಲ್ಲಿ ಮುಳುಗಿ ಹೋಗಿತ್ತು. ಎಲ್ಲಾ ಗ್ರಾಮ ಗ್ರಾಮಗಳಲ್ಲಿಯೂ, ದೊಡ್ದ ದೊಡ್ಡ ನಗರಗಳ ಎಲ್ಲಾ ಬಡಾವಣೆಗಲ್ಲಿಯೂ ಶಂಕರ್ ನಾಗ್ ಅವರ ಪೋಟೋವನ್ನು ಇಟ್ಟು ತಮ್ಮ ಅಭಿಮಾನವನ್ನು ಭಕ್ತಿ ಪೂರ್ವಕವಾಗಿ ಮತ್ತು ಅರ್ಥಪೂರ್ಣವಾಗಿ ತೋರಿಸಿದ್ದರು ಸಮಸ್ತ ಕನ್ನಡಿಗರು.

ಅದೇಕೋ ಏನೋ ಸಾಧಕರುಗಳು ಹೆಚ್ಚು ದಿನ ಬದುಕುಳಿಯುವುದಿಲ್ಲ ಎನ್ನುವಂತೆ, ಸ್ವಾಮಿ ವಿವೇಕಾನಂದರು 39 ವರ್ಷ, ಶ್ರೀ ಶಂಕರಾಚಾರ್ಯರು 32ಡೇ ವರ್ಷ ಭಗತ್ ಸಿಂಗ್ ಕೇವಲ 23 ವರ್ಷದಲ್ಲೇ ತಮ್ಮ ತಮ್ಮ ಸಾಧನೆಗಳಿಂದ ಜಗತ್ಪಸಿದ್ಧರಾದರೆ ಶಂಕರ್ ನಾಗ್ ಕೂಡ ತಮ್ಮ 35ನೇ ವರ್ಷದಲ್ಲಿಯೇ ನಮ್ಮನ್ನಗಲುವ ಮೂಲಕ ಆ ಮಹಾನ್ ಸಾಧಕರ ಸಾಲಿಗೆ ಸೇರ್ಪಡೆಯಾಗಿ ಬಿಟ್ಟರು.

ನಾಟಕಗಳ ನಿರ್ಮಾಣ, ನಿರ್ದೇಶನ ಮತ್ತು ನಿರ್ವಹಣೆಗಳ ಮೂಲಕ ಸದಾ ನಾಟಕರಂಗದ ಒಡನಾಟ ಇಟ್ಟು ಕೊಂಡಿದ್ದ ಶಂಕರನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ಅವರ ನಾಟಕಗಳ ಪ್ರದರ್ಶನಕ್ಕೆ ಸುಗಮವಾಗಿರುವಂತಹ ಸುಸಜ್ಜಿತ ಅಂತರಾಷ್ಟ್ರೀಯ ಮಟ್ಟದ ನಾಟಕ ಮಂದಿರವೊಂದನ್ನು ನಿರ್ಮಿಸಬೇಕೆಂದಿದ್ದರು. ಆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರುವಾಗಲೇ ಶಂಕರನಾಗ್ ಅಕಾಲಿಕವಾಗಿ ಅಗಲಿಹೋಗಿದ್ದರು. ಪತಿಯ ಅಗಲಿಕೆಯಿಂದ ಕೆಲಕಾಲ ಮೌನವಾಗಿದ್ದ ಅವರ ಪತ್ನಿ ಅರುಂಧತಿನಾಗ್ ನಂತರ ಶಂಕರ್ ನಾಗ್ ಅವರ ಕನಸಿನ ಆ ಮಹತ್ತರ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದು ಅದಕ್ಕೆ ತಮ್ಮ ಪತಿಯ ನೆನಪು ಚಿರಕಾಲ ಉಳಿಯುವಂತೆ ಬೆಂಗಳೂರಿನ ಪ್ರತಿಷ್ಠಿತ ಜೆ.ಪಿ ನಗರದ ಬಡಾವಣೆಯಲ್ಲಿ ರಂಗಶಂಕರ ಎಂಬ ಅತ್ಯಂತ ಸುಸಜ್ಜಿತ ರಂಗಮಂಟಪವನ್ನು ನಿರ್ಮಿಸಿದ್ದಾರೆ. ಇಂದಿಗೂ ಕೂಡಾ ಕಾಲ ಕಾಲಕ್ಕೆ ಅಲ್ಲಿ ನಾಟಕ ಪ್ರದರ್ಶನ ಮತ್ತು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ಏರ್ಪಟ್ಟು ಸ್ಥಳೀಯ ಕಲಾವಿದರುಗಳೊಂದಿಗೆ ಅಂತರಾಷ್ಟೀಯ ಮಟ್ಟದ ಹೆಸರಾಂತ ಕಲಾವಿದರುಗಳು ಭಾಗವಹಿಸುತ್ತಾ ಶಂಕರ್ ನಾಗ್ ರಂತೆ ರಂಗ ಶಂಕರವನ್ನೂ ಕೂಡಾ ಸದ ಕಾಲ ಚಟುವಟಿಕೆಯ ತಾಣವನ್ನಾಗಿ ಮಾಡಿದ್ದಾರೆ. ಸರ್ಕಾರವೂ ಕೂಡ ಬೆಂಗಳೂರಿನ ಪ್ರತಿಷ್ಠಿತ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ, ಬಹು ಮಹಡಿ ಕಟ್ಟಡದಲ್ಲಿರುವ ಸರ್ಕಾರಿ ಸಾಮ್ಯದ ಚಲನಚಿತ್ರ ಮಂದಿರಕ್ಕೆ ಶಂಕರ್ ನಾಗ್ ಚಿತ್ರ ಮಂದಿರ ಎಂದು ಹೆಸರಿಟ್ಟಿದೆ.

ಕಳೆದ 31ವರ್ಷಗಳಿಂದ ಭೌತಿಕವಾಗಿ ಕನ್ನಡಿಗರೊಂದಿಗೆ ಇಲ್ಲವಾದರೂ ತಮ್ಮೆಲ್ಲಾ ಕಾರ್ಯಗಳ ಮೂಲಕ, ದೂರದೃಷ್ಟಿಯ ಮೂಲಕ ಶಂಕರ್ ನಾಗ್ ಒಂದು ರೀತಿಯ ಆಲ್ ರೌಂಡರ್ ರೂಪದಲ್ಲಿ ಸಮಸ್ತ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಮನೆ ಮಾಡಿದ್ದಾರೆ. ಅದರ ದ್ಯೋತಕವೇ ಇಂದಿಗೂ ನಾಡಿನ ಪುಟ್ಟ ಪುಟ್ಟ ಮಕ್ಕಳಿಗೂ ಶಂಕರ್ ನಾಗ್ ಅವರ ಪರಿಚಯವಿದೆ. ಬಹುಶಃ ಶಂಕರ್ ನಾಗ್ ಇಂದು ಬದುಕಿದ್ದಲ್ಲಿ ನಮ್ಮ ರಾಜ್ಯದಲ್ಲಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಇನ್ನು ಎಷ್ಟೆಷ್ಟೋ ಬದಲಾವಣೆಗಳನ್ನು ಕಾಣಬಹುದಿತ್ತು . ಇದರ ಅರಿವಿದ್ದೋ ಏನೋ, ಆಟೋ ಚಾಲಕರಂತೂ ಶಂಕರ್ ನಾಗ್ ಅವರನ್ನು ತಮ್ಮ ಆರಾದ್ಯ ದೈವ ಎಂದೇ ಭಾವಿಸಿ ಅಂದಿಗೂ ಇಂದಿಗೂ ಎಂದಿದಿಗೂ ಮರೆಯದಂತೆ ಮೆರೆಸುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಶಂಕರ್ ಅವರನ್ನು ಕನ್ನಡಿಗಳು ಮರೆಯಲು ಸಾಧ್ಯವೇ? ಅವರೆಂದೂ ಮರೆಲಾಗದ ಮಾಣಿಕ್ಯವೇ ಸರಿ.

ಏನಂತೀರೀ?

5 thoughts on “ಆಟೋ ರಾಜ ಶಂಕರನಾಗ್

  1. ದಿವಂಗತ ಶ್ರೀ ಶಂಕರ್ ನಾಗ್ ಅವರ ಬಗ್ಗೆ ತುಂಬಾ ಮಾಹಿತಿ ನೀಡಿದ್ದೀರಿ.

    ಧನ್ಯವಾದಗಳು 🙏🏻

    ಸೆಪ್ಟೆಂಬರ್ 30 1990 ಮರೆಯಲಸಾದ್ಯವಾದ ದಿನ.

    ಆ ದಿನ ಇಡೀ ಕರ್ನಾಟಕದ ಜನತೆಗೆ ಸಿಡಿಲುಬಡಿದಂತಹ ಸನ್ನಿವೇಶ ಎದುರಾಗಿದ್ದು ಇನ್ನು ನೆನಪಿದೆ….

    ನಾನು ಮತ್ತು ನನ್ನ ಗೆಳೆಯರು ಶಂಕರ್ ನಾಗ್ ರವರ ಫೋಟೋ ಇಟ್ಟು ಶ್ರದ್ಧಾಂಜಲಿ ಸಭೆ ಮಾಡಿದ್ದು ಇನ್ನೂ ನೆನಪಲ್ಲಿದೆ.

    ಕನ್ನಡಿಗರು ಖಂಡಿತವಾಗಿ
    ದೂರದೃಷ್ಟಿಯುಳ್ಳ ಒಬ್ಬ ಪ್ರಯಾಣಿಕ ಹಾಗೂ ಧೀಮಂತ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ.

    ಅವರು ಬದುಕಿದ್ದಿದ್ದರೆ ಕರ್ನಾಟಕದ ಚಿತ್ರಣವೇ ಬದಲಾಗುತ್ತಿತ್ತು.

    ಶಂಕರಣ್ಣ We Miss You

    Like

  2. ನಿಜಕ್ಕೂ ತುಂಬಾ ಚೆನ್ನಾಗಿದೆ ನಿಮ್ಮ ಬರಹ ನಿಮ್ಮ ಬರಹಕ್ಕೆ ಧನ್ಯವಾದಗಳು

    Liked by 1 person

  3. ಈಗ ಇರುವ ವ್ಯವಸ್ಥೆಯ ಬಗ್ಗೆ ಆ ಕಾಲದಲ್ಲಿ ಯೋಚನೆ ಮಾಡಿದಂತ ಮಹಾನ್ ವ್ಯಕ್ತಿ ಶಂಕರ್ ನಾಗ್.
    ನಿಮ್ಮ ಲೇಖನದ ಮೂಲಕ ಶಂಕರ್ ನಾಗ್ ಅವರನ್ನು ಪರಿಚಯಿಸಿದಕ್ಕೆ ತುಂಬ ಧನ್ಯವಾದಗಳು

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s