ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮತ್ತು ಕರ್ನಾಟಕದ ಏಕೀಕರಣದ ಸಮಯದಲ್ಲಿ  ಕಾಸರಗೋಡು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿತ್ತು. ದುರದೃಷ್ಟವಶಾತ್, ಸ್ವಾತಂತ್ರ್ಯಾನಂತರ 1956ರಲ್ಲಿ ಭಾಷಾವಾರು ರೂಪದಲ್ಲಿ ರಾಜ್ಯಗಳ ವಿಂಗಡಣೆಯಾದಾಗ, ಕನ್ನಡಿಗರೇ ಬಹುಸಂಖ್ಯಾತರಾಗಿದ್ದರೂ ಕೆಲವು ಕಾಣದ ಕೈಗಳ ಕರಾಮತ್ತಿನಿಂದ ಕಾಸರಗೋಡು ಕರ್ನಾಟಕದ ಭಾಗವಾಗದೇ ಕೇರಳದ ಪಾಲಾದಾಗ, ಅಲ್ಲಿಯ ಬಹುತೇಕ ಮಂದಿ ಬಹಳವಾಗಿ ನೊಂದುಕೊಂಡರು ಮತ್ತು ಉಗ್ರಪ್ರತಿಭಟನೆಯನ್ನೂ ಮಾಡಿದರು. ಅಂದಿನಿಂದ ಇಂದಿನವರೆಗೂ ಅಲ್ಲಿಯ ಜನ ಭೌತಿಕವಾಗಿ ಕೇರಳಕ್ಕೆ ಸೇರಿದ್ದರೂ ಮಾನಸಿಕವಾಗಿ ಕರ್ನಾಟಕ್ಕಕ್ಕೆ ಹತ್ತಿರವಾಗಿದ್ದಾರೆ. ಅಂತಹ ಕಾಸರಗೋಡು ಪ್ರಾಂತದ ತಾಯಬಾರ ಮೊಗವತೋರ ಕನ್ನಡಿಗರ ಮಾತೆಯೆ… ಈ ಜನಪ್ರಿಯ ಚಿತ್ರಗೀತೆಯ ಲೇಖಕ (ಮೂಲತಃ ಪದ್ಯವನ್ನು ಕುಲವಧು ಚಿತ್ರಕ್ಕೆ ಅಳವಡಿಸಿಕೊಂಡಿದ್ದಾರೆ) ಮತ್ತು ಕನ್ನಡ ಪ್ರಪ್ರಥಮ ರಾಷ್ಟ್ರಕವಿಗಳಾದ ಪಂಜೇಮಂಜೇಶ್ವರ ಗೋವಿಂದ ಪೈ ಅವರ ಕುರಿತಾಗಿ ತಿಳಿದು ಕೊಳ್ಳೋಣ.

govinda2ಮಂಗಳೂರು ಮೂಲದ ತಿಮ್ಮಪ್ಪ ಪೈ ಮತ್ತು ದೇವಕಿಯಮ್ಮನವರ ಗರ್ಭದಲ್ಲಿ 23 ಮಾರ್ಚ್, 1883ರಲ್ಲಿ ಕಾಸರಗೋಡು ತಾಲ್ಲೂಕಿನ ಮಂಜೇಶ್ವರದಲ್ಲಿ ಗೋವಿಂದ ಪೈಗಳ ಜನನವಾಗುತ್ತದೆ. ಆಗರ್ಭ ಶ್ರೀಮಂತ ಕುಟುಂಬ. ಹುಟ್ಟಿನಿಂದಲೂ ಚಿನ್ನದ ಚಮಚಚನ್ನು ಬಾಯಿಯಲ್ಲೇ ಇಟ್ಟು ಜನಿಸಿದ ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿಯೇ ನಡೆಯುತ್ತದೆ. ವಿಶೇಷವೆಂದರೆ ಖ್ಯಾತ ನವೋದಯ ಸಾಹಿತ್ಯದ ಆಚಾರ್ಯ ಪುರುಷರಾಗಿದ್ದ ಪಂಜೆ ಮಂಗೇಶರಾಯರು ಇವರಿಗೆ ಕನ್ನಡದ ಅಧ್ಯಾಪಕರಾಗಿದ್ದರೆ, ನಂತರ ಮದರಾಸಿನಲ್ಲಿ ಉನ್ನತ ಶಿಕ್ಷಣ ಪಡೆಯುವಾಗ ಡಾ . ಸರ್ವಪಲ್ಲಿ ರಾಧಾಕೃಷ್ಣನ್ ಇವರ ಸಹಪಾಠಿಯಾಗಿದ್ದರು.

ಅಂತಿಮ ವರ್ಷದ ಬಿ.ಎ ಪರೀಕ್ಷೇ ನಡೆಯುತ್ತಿದ್ದ ಸಮಯದಲ್ಲಿಯೇ ತಂದೆಯವರ ಮರಣವಾಗಿ ಕುಟುಂಬದ ಜವಾಬ್ಧಾರಿ ಹೊರುವ ಸಲುವಾಗಿ ಅವರ ವಿದ್ಯಾಭ್ಯಾಸ ಅಲ್ಲಿಗೇ ಕೊನೆಗೊಂಡರೂ ಅವರು ಬರೆದಿದ್ದ ಒಂದೇ ಒಂದು ಇಂಗ್ಲೀಷ್ ಪರೀಕ್ಷೆಯಲ್ಲಿ ಎಲ್ಲರಿಗಿಂತಲೂ ಪ್ರಥಮರಾಗಿ ಬಂಗಾರದ ಪದಕ ಪಡೆದಿರುತ್ತಾರೆ. ಗೋವಿಂದ ಪೈಯವರು ಮಂಗಳೂರಿನಿಂದ ತಮ್ಮ ವಾಸ್ತವ್ಯವನ್ನು ಮಂಜೇಶ್ವರಕ್ಕೆ ಬದಲಿಸಿ ತಮ್ಮ ಅಂತ್ಯ ಕಾಲದವರೆಗೂ ಅಲ್ಲಿಯೇ ನೆಲಸಿದ್ದರಿಂದ ಮಂಜೇಶ್ವರ ಗೋವಿಂದ ಪೈ ಎಂದೇ ಹೆಸರು ವಾಸಿಯಾದರು.

govinda3ಮನೆಯ ಮಾತೃಭಾಷೆ ಕೊಂಕಣಿ, ಅಕ್ಕ ಪಕ್ಕ ತುಳು, ಓದಿದ್ದು ಮತ್ತು ಸಾಹಿತ್ಯರಚನೆ ಕನ್ನಡ ಭಾಷೆ, ಉನ್ನತ ಶಿಕ್ಷಣ ಪಡೆದದ್ದು ಇಂಗ್ಲೀಷಿನಲ್ಲಿ, ಮಲೆಯಾಳಂ ಮತ್ತು ತಮಿಳು ಭಾಷೆ ಅವರಿಗೆ ಕರಗತವಾಗಿತ್ತು. ಅತ್ಯುತ್ತಮ ಸಾಹಿತ್ಯ ಸವಿಯಲು ಆಸಕ್ತಿಯಿಂದ ದೇಸೀ ಭಾಷೆಗಳಾದ ಸಂಸ್ಕ್ಕತ, ಪಾಲಿ, ಬಂಗಾಲಿ, ಮರಾಠಿ, ಗುಜರಾತಿ ಭಾಷೆಗಳನ್ನು ಕಲಿತರೆ, ಕಾಲೇಜಿನಲ್ಲಿ ಲ್ಯಾಟಿನ್ , ಫ್ರೆಂಚ್, ಜರ್ಮನ್ ಗ್ರೀಕ್ ಮುಂತಾದ ಸುಮಾರು 25 ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದು ಬಹುಭಾಷಾ ಕೋವಿದರೆನಿಸಿ ಕೊಂಡಿದ್ದರು. ಅವರ ಮನೆಯ ಗ್ರಂಥಾಲಯದಲ್ಲಿ ಸುಮಾರು 43 ಭಾಷೆಗಳ ಸಾವಿರಾರು ಗ್ರಂಥಗಳ ಸಂಗ್ರಹವಿದ್ದು ಬಹುತೇಕ ಗ್ರಂಥಗಳನ್ನು ಅವರು ಓದಿ ಮುಗಿಸಿದ್ದರು.

ಹದಿಮೂರನೇ ವಯಸ್ಸಿನಲ್ಲಿ ಪದ್ಯಗಳನ್ನು ಬರೆದು ಅದೇ ಪದ್ಯಗಳು ತಮ್ಮ ಹದಿನೇಳನೆಯ ವಯಸ್ಸಿನಲ್ಲಿಯೇ ಪದ್ಯ ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮುಂದೆ ಗೊಲ್ಗೋಥಾ ಅಥವಾ ಯೇಸುವಿನ ಕಡೆಯ ದಿನ, ವೈಶಾಖಿ ಅಥವಾ ಬುದ್ಧನ ಕೊನೆಯ ದಿನ (ಖಂಡ ಕಾವ್ಯ) ಗೊಮ್ಮಟ ಜಿನಸ್ತುತಿ, ನಂದಾದೀಪ, ಗಿಳಿವಿಂಡು, , ಹೆಬ್ಬೆರಳು, ಶ್ರೀಕೃಷ್ಣ ಚರಿತ್ರೆ, ಬರಹಗಾರನ ಹಣೆಬರಹ, ಪಾಶ್ರ್ವನಾಥ ತೀರ್ಥಂಕರ ಚರಿತೆ ಹೀಗೆ ಹಲವರು ಕೃತಿಗಳನ್ನು ರಚಿಸಿದ್ದಲ್ಲದೆ ತಮ್ಮ ಭಾಷಾ ಪಾಂಡಿತ್ಯದಿಂದ ಇತರೇ ಭಾಷೆಗಳಿಂದ ಅನೇಕ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದರು

ಕೇವಲ ಸಾಹಿತ್ಯ ಮತ್ತು ಅನುವಾದಗಳಿಗಷ್ಟೇ ಸೀಮಿತವಾಗದೆ, ಸಾಹಿತ್ಯ ಸಂಶೋಧನೆಯತ್ತ ಗೋವಿಂದ ಪೈಗಳು ಹರಿಸಿದ್ದರು ತಮ್ಮ ಚಿತ್ತ. ತುಳುನಾಡಿನ ಇತಿಹಾಸ, ಗೌಡ ಸಾರಸ್ವತರ ಮೂಲ, ಬಸವೇಶ್ವರ ವಂಶಾವಳಿ, ಹಾಗು ಕರ್ನಾಟಕದ ಪ್ರಾಚೀನ ರಾಜಮನೆತನಗಳು, ಭಾರತೀಯ ಇತಿಹಾಸ, ಜೈನ, ಬೌದ್ಧ ಹಾಗು ವೀರಶೈವ ಧರ್ಮಗಳ ಬಗ್ಗೆ ಸಂಶೋಧನೆ ಮಾಡಿ, ಅನೇಕ ಲೇಖನಗಳನ್ನು ಬರೆದಿದ್ದಾರೆ. ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮುಂತಾದ ಲೇಖನಗಳು ಉದಾಹರಣೆಯಾಗಿವೆ.

ಸ್ವಾತಂತ್ರ್ಯಾನಂತರ ಭಾಹಾವಾರು ಪ್ರಾಂತಗಳಾಗಿ ವಿಂಗಡಣೆಯಾಗುವರೆಗೂ ಅವಿಭಜಿತ ದಕ್ಷಿಣ ಕನ್ನಡ ಮದ್ರಾಸ್ ಪ್ರಾಂತಕ್ಕೆ ಸೇರಿದ್ದ ಕಾರಣ, ಪೈಗಳ ಅಗಾಧ ಪಾಂಡಿತ್ಯವನ್ನು ಪರಿಗಣಿಸಿ ಮದರಾಸ್ ಸರ್ಕಾರ ಅವರಿಗೆ ರಾಷ್ಟ್ರಕವಿ ಪ್ರಶಸ್ತಿ ನೀಡಿತು. ಈ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ರಾಷ್ಟ್ರಕವಿ ಪ್ರಶಸ್ತಿ ಪಡೆದ ಪ್ರಪ್ರಥಮರಾದರು, ಧರ್ಮಸ್ಥಳದ ಜಿನರಾಜ ಹೆಗ್ಗಡೆಯವರು ಸಹಾ 1949 ರಲ್ಲಿ ಗೋವಿಂದ ಪೈಗಳನ್ನು ಧರ್ಮಸ್ಥಳದಲ್ಲಿ ಸನ್ಮಾಸಿದ್ದರು. 1951ರಲ್ಲಿ ಬೊಂಬಾಯಿಯಲ್ಲಿ ನಡೆದ 34ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಜಾತಸ್ಯ ಮರಣಂ ಧೃವಂ ಅಂದರೆ ಹುಟ್ಟಿದವರು ಒಂದಲ್ಲಾ ಒಂದು ಸಾಯಲೇ ಬೇಕೆಂಬ ಜಗದ ನಿಯಮದಂತೆ ಗೋವಿಂದ ಪೈಯವರು 6-9-1963ರಲ್ಲಿ ಮಂಜೇಶ್ವರದಲ್ಲಿ ದೈವಾಧೀನರದರೂ ಅವರ ಕೃತಿಗಳ ಮೂಲಕ ತಮ್ಮ ಸಂಶೋಧನೆಗಳ ಮೂಲಕ ಸಮಸ್ತ ಕನ್ನಡಿಗರ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವುದರಿಂದ ಮಂಜೇಶ್ವರ ಗೋವಿಂದ ಪೈ ನಮ್ಮ ಹೆಮ್ಮೆಯ ಕನ್ನಡ ಕಲಿಗಳು.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s