ನಾಡೋಜ ಕಯ್ಯಾರ ಕಿಞ್ಞಣ್ಣ ರೈ

ಸ್ಬಾತಂತ್ರ್ಯಪೂರ್ವದಲ್ಲಿ ಅವಿಭಜಿತ ದಕ್ಷಿಣಕನ್ನಡದ ಭಾಗವವಾಗಿ ಮದರಾಸಿನ ಪ್ರಾಂತ್ಯದಲ್ಲಿದ್ದ ಕಾರಸಗೋಡು, ರಾಜ್ಯಗಳ ಭಾಷಾವಾರು ವಿಭಜನೆಯ ಸಮಯದಲ್ಲಿ ಕನ್ನಡಿಗರೇ ಪ್ರಾಭಲ್ಯವಾಗಿದ್ದರೂ, ಕೇರಳದ ಪಾಲಾದಾಗ ಮನನೊಂದು ಉಗ್ರವಾದ ಪ್ರತಿಭಟನೆ ನಡೆಸಲು ಪ್ರೇರೇಪರಾಗಿ ಕನ್ನಡದ ಕಿಚ್ಚನ್ನು ಹತ್ತಿಸಿದವರೇ, ಶ್ರೀ ಕಯ್ಯಾರ ಕಿಞ್ಞಣ್ಣ ರೈ. ಅದೇ ಸಂದರ್ಭದಲ್ಲಿ ಬಹಳವಾಗಿ ನೊಂದಿದ್ದ ರೈಗಳು ದುಃಖದಿಂದ
ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ ಎಲ್ಲರೂ ಎದ್ದೆದ್ದು ಓಡಿ ಬನ್ನಿ
ಕನ್ನಡದ ಗಡಿಕಾಯೆ, ಗುಡಿಕಾಯೆ, ನುಡಿಕಾಯೆ ಕಾಯಲಾರೆನೆ ಸಾಯೆ ಓ ಬನ್ನಿ -ಬೆಂಕಿ ಬಿದ್ದಿದೆ ಮನೆಗೆ!
ಹಾರೆಗುದ್ಲಿ ಕೊಡಲಿ ನೊಗ ನೇಗಿಲೆತ್ತುತಲಿ ನೆಲದಿಂದ ಹೊಲದಿಂದ ಹೊರಟು ಬನ್ನಿ
ಕನ್ನಡದ ನಾಡಿಂದ, ಕಾಡಿಂದ, ಗೂಡಿಂದ ಕಡಲಿಂದ, ಸಿಡಿಲಿಂದ ಗುಡುಗಿಬನ್ನಿ ಬೆಂಕಿಬಿದ್ದಿದೆ ಮನೆಗೆ!
ಅಕ್ಕಂದಿರೆ ಅಣ್ಣಂದಿರೆ, ತಂಗಿಯರೆ ತಮ್ಮಂದಿರೆ ಬೆಂಕಿಯನ್ನಾರಿಸಲು ಬೇಗ ಬನ್ನಿ
ಕನ್ನಡದ ಒಲವೊಂದೆ ಛಲವೊಂದೆ, ನೆಲವೊಂದೆ ನಾಡ ನುಳಿಸುವೆನಂದರೆ ಓಡಿ ಬನ್ನಿ ಬೆಂಕಿ ಬಿದ್ದಿದೆ ಮನೆಗೆ!
ಎಂಬ ಪದ್ಯವನ್ನು ಬರೆದು ಅಂದಿನ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಿದರೂ ಆವರೆಲ್ಲರ ಹೋರಾಟ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದ ಹಾಗಾಗಿದ್ದು ನಿಜಕ್ಕೂ ವಿಷಾಧನೀಯವೇ ಸರಿ.

ಹಿರಿಯ ಸಾಹಿತಿಯಾಗಿ, ಬಹುಭಾಷಾ ಕೋವಿದರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಕರಾಗಿ, ಸ್ಥಳೀಯ ಜನಪ್ರತಿನಿಧಿಯಾಗಿ ಕನ್ನಡ ಮತ್ತು ಕಾಸರುಗೋಡನ್ನು ಕರ್ನಾಟಕ್ಕಕ್ಕೆ ಸೇರಿಸಲು ನಿರಂತರವಾಗಿ ದುಡಿದವರು, ಶತಾಯುಷಿ, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು.

ಕಿಞ್ಞಣ್ಣ ರೈಯವರು 1915 ಜೂನ್ 8 ರಂದು ಶ್ರೀ ದುಗ್ಗಪ್ಪ ರೈ ಮತ್ತು ಶ್ರೀಮತಿ ದ್ಯೇಯಕ್ಕ ರೈ ದಂಪತಿಗಳ ಮಗನಾಗಿ ಅಂದಿನ ಕರ್ನಾಟಕದ ಕಾಸರಗೋಡಿನ ಪೆರಡಾಲ ಗ್ರಾಮದಲ್ಲಿ ಜನಿಸಿದರು. ಮಾತೃಭಾಷೆ ತುಳುವಾದರೂ, ಕಲಿತದ್ದೆಲ್ಲಾ ಕನ್ನಡದಲ್ಲೇ. ತಮ್ಮ ಹನ್ನೆರಡನೆಯ ವಯಸ್ಸಿನಲ್ಲೇ ಗೆಳೆಯರೊಡನೆ ಜೊತೆಗೂಡಿ ಕನ್ನಡದಲ್ಲಿ ಸುಶೀಲ ಎಂಬ ಕೈಬರಹ ಪತ್ರಿಕೆಯನ್ನು ಹೊರ ತಂದು ಅಂದು ಗಾಂಧಿಯವರ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಯ ಲೇಖನಗಳನ್ನು ಪ್ರಕಟಿಸುತ್ತಾ ಜನಜಾಗೃತಿ ಗೊಳಿಸತೊಡಗಿದರು. ಹೀಗೇ ಯೌವನಾವಸ್ಥೆಗೆ ಬರುವಷ್ಟರಲ್ಲಿಯೇ ತಮಗೇ ಅರಿವಿಲ್ಲದಂತೆಯೇ ಮಹಾತ್ಮ ಗಾಂಧಿಯವರ ಹೋರಾಟದಿಂದ ಪ್ರೇರಿತರಾಗಿ ದೇಶದ ಸ್ವಾತಂತ್ರ್ಯದ ಚಳುವಳಿಯಲ್ಲಿ ಧುಮುಕಿ ತಮ್ಮ ಕ್ರಾಂತಿಕಾರಿ ಬರಹಗಳ ಮೂಲಕ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹತ್ತಿಸತೊಡಗಿದ್ದರು.

ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಯಲ್ಲಿಯೇ ಕನ್ನಡ ಮತ್ತು ಸಂಸ್ಕೃತದ ಪದವಿಯನ್ನು ಪಡೆದು ಮಂಗಳೂರಿಗೆ ತಮ್ಮ ವಾಸ್ತವ್ಯವನ್ನು ಬದಲಿಸಿ ಅಲ್ಲಿ ಆಂಗ್ಲಭಾಷೆಯನ್ನೂ ಕಲಿತು, ಪತ್ರಿಕೋದ್ಯಮವನ್ನು ವೃತ್ತಿಯಾಗಿಸಿಕೊಂಡು ಮಂಗಳೂರಿನಲ್ಲಿ ಆಗತಾನೇ ಪ್ರಾರಂಭವಾಗಿದ್ದ ಸ್ವದೇಶಾಭಿಮಾನಿ ಎಂಬ ಕನ್ನಡ ಪತ್ರಿಕೆಗೆ ಉಪಸಂಪಾದಕರಾಗಿ ಸ್ವಾತಂತ್ರ್ಯ ಸಂಗ್ರಾಮದ ಕುರಿತಾದ ಉಗ್ರ ಲೇಖನಗಳನ್ನು ಬರೆಯ ತೊಡಗಿದರು.

ಪತ್ರಿಕೋದ್ಯಮದಲ್ಲಿ ಪ್ರಸಿದ್ದಿ, ಗೌರವ, ಗಳಿಕೆ, ಅನುಕೂಲ, ಸೌಲಭ್ಯ ಹೆಚ್ಚಿದ್ದರೂ, ಕಯ್ಯಾರರ ಮನಸ್ಸು ಮಂಗಳೂರಿನಲ್ಲಿ ಹೆಚ್ಚಿನ ದಿನಗಳು ಇರಲು ಬಹಸದೇ ತನ್ನ ಸ್ವಗ್ರಾಮದ ಕಡೆಗೆ ಸೆಳೆಯುತಿತ್ತು. ದೇಶಕ್ಕಾಗಿ ಹೋರಾಟ, ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಪರಿಣಾಮ ಅಖಂಡ ಭಾರತದ ಅಭ್ಯುದಯಕ್ಕಾಗಿ ಛಲತೊಟ್ಟರು. ಹಳ್ಳಿ ರಾಷ್ಟ್ರದ ಅಡಿಪಾಯ ಎಂಬುದನ್ನು ಅರಿತ ಕೈಯಾರರು ತಮಗೆ ಸಿಗುತಿದ್ದ ಎಲ್ಲಾ ಸೌಲಭ್ಯಗಳನ್ನು ತ್ಯಜಿಸಿ ಕಾಸರಗೋಡಿನ ತಮ್ಮ ಹಳ್ಳಿಯಲ್ಲಿ ಬಂದು ನೆಲೆಸಿದರು.

rai4ಕೈಯಲ್ಲಿ ಅಧಿಕಾರವಿದ್ದರೆ ಜನಸೇವೆ ಮಾಡಬಹುದು ಎಂಬುದನ್ನು ಅರಿತು ಚುನಾವಣೆಯಲ್ಲಿ ಸ್ವರ್ಧಿಸಿ ಕಾಸರಗೋಡಿನ ಬದಿಯಡ್ಕ ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಸರ್ಕಾರದಿಂದ ಅಭಿವೃದ್ಧಿಗಾಗಿ ದೊರೆತ ಹಣವನ್ನು ಕೊಂಚವೂ ಪೋಲು ಮಾಡದೇ, ನಿಸ್ವಾರ್ಥವಾಗಿ ರಸ್ಥೆ ನಿರ್ಮಾಣ, ಪ್ರಾಥಮಿಕ ಸವಲತ್ತು, ಸೌಲಭ್ಯಗಳನ್ನು ನಿರ್ಮಿಸಿಕೊಟ್ಟರು. ಸತತವಾಗಿ ಮೂರು ಬಾರಿ ಹದಿನೈದು ವರ್ಷಗಳ ಕಾಲ ಬದಿಯಡ್ಕ ಗ್ರಾಮಪಂಚಾಯಿತಿಯ ಅಧ್ಯಕ್ಷರಾಗಿ ಗ್ರಾಮವನ್ನು ಅಮೂಲಾಗ್ರವಾಗಿ ಅಭಿವೃದ್ಧಿಪಡಿಸಿದ್ದನ್ನು ಗುರುತಿಸಿದ ಭಾರತದ ಕೇಂದ್ರ ಸರ್ಕಾರ ಬದಿಯಡ್ಕ ಗ್ರಾಮಕ್ಕೆ ಅತ್ಯುತ್ತಮ ಗ್ರಾಮ ಪ್ರಶಸ್ತಿಯನ್ನು ನೀಡಿ ಗೌರವಿಸಿತೆಂದರೆ ಕಯ್ಯಾರ ಕಿಞ್ಞಣ್ಣ ರೈ ಅವರ ಪರಿಶ್ರಮದ ಅರಿವಾಗುತ್ತದೆ.

ಜನಪ್ರತಿನಿಧಿಯ ನಂತರ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಅಂತಹ ಭಾವೀ ಪ್ರಜೆಗಳಿಗೆ ಉತ್ತಮ ಆರಂಭದಲ್ಲೇ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಕಲಿಸಿದರೆ ಮುಂದೆ ಅದೇ ಮಕ್ಕಳು ದೇಶದ ಹೆಮ್ಮೆಯ ಸತ್ಪ್ರಜೆಗಳಾಗುತ್ತಾರೆ ಎಂಬುದನ್ನು ಮನಗಂಡಿದ್ದ ಕಯ್ಯಾರರು ಕಾಸರಗೋಡಿನ ನವಜೀವನ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದರು. ತುಳು ಭಾಷೆಯ ತಾಯಿ ಜನ್ಮನೀಡಿದರೆ, ಕನ್ನಡ ತಾಯಿ ಸಾಕು ತಾಯಿಯಾಗಿದ್ದು ಇಬ್ಬರು ತಾಯಿಯರೂ ತನ್ನೆರಡು ಕಣ್ಣುಗಳಿದ್ದಂತೆ ಅವರುಗಳ ಸೇವೆಗಾಗಿಯೇ ತನ್ನೀ ಜೀವನ ಮುಡಿಪು ಎಂದು ನಿಸ್ವಾರ್ಥವಾಗಿ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದನ್ನು ಗಮನಿಸಿದ ಸರ್ಕಾರ 1969ರಲ್ಲಿ ಅತ್ಯುತ್ತಮ ಶಿಕ್ಷಕ ಎಂದು ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಪುರಸ್ಕೃರಿಸಿತು.

ಕನ್ನಡ ಮತ್ತು ತುಳು ಭಾಷೆಗಳಲ್ಲಿ ಹಲವಾರು ಪುಸ್ತಕಗಳನ್ನು ರಚಿಸಿದ ಕೈಯ್ಯರರು, ಮಕ್ಕಳಿಗೆಂದೇ ವಿಶೇಷವಾಗಿ ಸರಳವಾಗಿ ವ್ಯಾಕರಣ ಪುಸ್ತಕವನ್ನು ರಚಿಸಿದ್ದಲ್ಲದೇ, ಮಕ್ಕಳಿಗಾಗಿಯೇ ಮಕ್ಕಳ ಪದ್ಯ ಮಂಜರಿ, ಎನ್ನಪ್ಪೆ ತುಳುವಪ್ಪೆ (ತುಳು ಕವನ), ಕೊರಗ ಕೆಲವು ಕವನಗಳು, ಶತಮಾನದ ಗಾನ, ಪ್ರತಿಭಾ ಪಯಸ್ವಿನಿ. ಮುಂತಾದ ಅನೇಕ ಸಾಹಿತ್ಯವನ್ನು ರಚಿಸಿದರು.

ನಾವೆಲ್ಲರೂ ಚಿಕ್ಕವಯಸ್ಸಿನಲ್ಲಿ ಓದಿದ

rai3ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ
ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟಪಟ

ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು
ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು

ಇಂತ ಧ್ವಜವು ನಮ್ಮ ಧ್ವಜವು ನೋಡು ಹಾರುತಿರುವುದು
ಧ್ವಜದ ಶಕ್ತಿ ನಮ್ಮ ಭಕ್ತಿ ನಾಡ ಸಿರಿಯ ಮೆರೆವುದು

ಕೆಂಪು ಕಿರಣ ತುಂಬಿ ಗಗನ ಹೊನ್ನ ಬಣ್ಣವಾಗಿದೆ
ನಮ್ಮ ನಾಡ ಗುಡಿಯ ಬಣ್ಣ ನೋಡಿರಣ್ಣ ಹೇಗಿದೆ

ಈ ಪದ್ಯವನ್ನು ಅಂದಿನ ಕಾಲದಲ್ಲೇ ಮಕ್ಕಳಿಗೆ ದೇಶಭಕ್ತಿಯನ್ನು ಜಾಗೃತ ಗೊಳಿಸುವ ಸಲುವಾಗಿ ಮತ್ತು ಈ ಪದ್ಯದ ಮೂಲಕ
ಸರಳವಾಗಿ ನಮ್ಮ ರಾಷ್ಟ್ರಧ್ವಜವನ್ನು ಮಕ್ಕಳ ಮನದಲ್ಲಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದರು ಶ್ರೀಯುತ ರೈಗಳು .

ಕರ್ನಾಟಕದ ಏಕೀಕರಣವನ್ನು ಕರ್ನಾಟಕದ ಉದ್ದಗಲಗಳಲ್ಲಿ ದೊರೆಯುವ ವಿವಿಧ ಹಣ್ಣುಗಳ ಮೂಲಕ,
ನಂಜನಗೂಡಿನ ರಸಬಾಳೆ, ಕೊಡಗಿನ ಕಿತ್ತಳೆ, ಬೀದರ ಸೀಬೆ ಹಣ್ಣು, ಮಧುಗಿರಿ ದಾಳಿಂಬೆ, ಬೆಳವಲದ ಸಿಹಿ ಲಿಂಬೆ, ಬೆಳಗಾವಿ ಸಿಹಿ ಸಪೋಟ, ದೇವನ ಹಳ್ಳಿ ಚಕ್ಕೋತ, ಗಂಜಾಮ್ ಅಂಜೀರ್, ತುಮಕೂರು ಹಲಸು, ಧಾರವಾಡ ಅಪೂಸು, ಮಲೆ ನಾಡಿನ ಅನಾನಸು ಸವಿಯಿರಿ, ಬಗೆ ಬಗೆ ಹಣ್ಣುಗಳ, ಕನ್ನಡ ನಾಡಿನ ಹಣ್ಣುಗಳ ಎಂದು ಕವಿತೆಯ ಮೂಲಕ ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಮಕ್ಕಳ ಮನದಲ್ಲಿ ಸರಳವಾಗಿ ಅಚ್ಚೊತ್ತುವಂತೆ ಮಾಡುವ ಕಲೆ ರೈಗಳಿಗೆ ಕರಗತವಾಗಿತ್ತು

rai3
1997 ರಲ್ಲಿ ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತಮ್ಮ ಅಧ್ಯಕ್ಷ ಭಾಷಣದಲ್ಲಿ ಕಯ್ಯಾರ ಕಿಞ್ಞಣ್ಣ ರೈಯವರು ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗ ಅದನ್ನು ಕರ್ನಾಟಕಕ್ಕೆ ಅತೀ ಶೀಘ್ರದಲ್ಲಿಯೇ ಸೇರ್ಪಡೆಮಾಡಿಕೊಳ್ಳ ಬೇಕೆಂದು ಕರ್ನಾಟಕ ಸರ್ಕಾರಕ್ಕೆ ತಮ್ಮ ಆಳಲನ್ನು ಮುಟ್ಟಿಸಿದ್ದರು.

ಕನ್ನಡ ಮತ್ತು ತುಳು ಭಾಷೆಗಳ ಸಾಹಿತ್ಯಕ್ಕೆ ಅವರು ಸಲ್ಲಿಸಿದ್ದ ಸೇವೆಗೆ ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು ಅವುಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಅತ್ಯುತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ , ಗೌರವ ಡಾಕ್ಟರೇಟ್, ನಾಡೋಜ ಪ್ರಶಸ್ತಿ, ಕರ್ನಾಟಕ ಏಕಿಕರಣ ಪ್ರಶಸ್ತಿ ಹೀಗೆ ಹತ್ತಾರು ಪ್ರಶಸ್ತಿಗಳಿಗಳನ್ನು ಅವರಿಗೆ ನೀಡುವುದರ ಮೂಲಕ ಆ ಪ್ರಶಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡವು ಎಂದರೂ ತಪ್ಪಾಗಲಾರದು.

ಕಾಸರುಗೋಡನ್ನು ಕರ್ನಾಟಕಕ್ಕೆ ಸೇರಿಸುವ ಕನಸಿನಲ್ಲಿಯೇ ನೂರು ವರ್ಷಗಳನ್ನು ಪೂರೈಸಿ ತಮ್ಮ 101ನೇ ವರ್ಷದಲ್ಲಿ ಆಗಸ್ಟ್ 09 2015 ಭಾನುವಾರ ಬದಿಯಡ್ಕದ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು.

ಅಪ್ಪಟ ಗಾಂಧಿವಾದಿಯಾಗಿ , ಸ್ವಾತಂತ್ರ್ಯ ಹೋರಾಟಗಾರರಾಗಿ, ಕವಿ, ಸಾಹಿತಿ, ಕನ್ನಡ, ತುಳು ಭಾಷೆ ಹಾಗೂ ಸಮಾಜದ ಏಳಿಗೆಗಾಗಿ ತಮ್ಮನ್ನು ಸಮರ್ಪಿಸಿಕೊಂಡು ತಮ್ಮ ಆ ಇಳಿವಯಸಿನಲ್ಲಿಯೂ ಯುವ ಜನಾಂಗಕ್ಕೆ ಸ್ಪೂರ್ತಿ ಮತ್ತು ಉತ್ಸಾಹದ ಚಿಲುಮೆಯಾಗಿದ್ದ ಕಯ್ಯಾರ ಕಿಞ್ಞಣ್ಣ ರೈಯವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s