ನಾವೆಲ್ಲಾ ಚಿಕ್ಕವರಿದ್ದಾಗ ನಮ್ಮ ಅಜ್ಜಿ ಮತ್ತು ತಾತನ ತೊಡೆಯ ಮೇಲೆ ಕುಳಿತುಕೊಂಡು ಕಥೆ ಕೇಳ್ತಾ ಇದ್ವಿ. ರಾಮಾಯಣ, ಮಹಾಭಾರತದ ಜೊತೆ ಜೊತೆಯಲ್ಲಿ ಕೆಲವು ವೀರ ಪುರುಷರ ಕಥೆಗಳನ್ನು ಕಣ್ಣಿಗೆ ಕಟ್ಟಿದ ಹಾಗೆ ತಾವೇ ಆ ಕಾಲದಲ್ಲಿ ಇದ್ದೇವೇ ಎನ್ನುವ ರೀತಿಯಲ್ಲಿ ನಮಗೆ ವರ್ಣಿಸಿ ಹೇಳುತ್ತಿದ್ದರು. ನಿಧಾನವಾಗಿ ದೊಡ್ಡವರಾಗುತ್ತಿದ್ದಂತೆಯೇ ಸ್ವಲ್ಪ ಅಕ್ಷರಾಭ್ಯಾಸವಾಗಿ ಒಂದೊಂದೇ ಪದಗಳನ್ನು ಜೋಡಿಸ್ಕೊಂಡು ಓದೋ ಹೊತ್ತಿಗೆ ನಮ್ಮಮ್ಮ ದಿನಕ್ಕೊಂದು ಕಥೆ ಎಂಬ ಪುಸ್ತಕವನ್ನು ಕೈಗಿತ್ತರು. ಆ ಪುಸ್ತಕ ಓದುತ್ತಾ ಹೋದಂತೆಲ್ಲಾ ದಿನಕ್ಕೊಂದೇನು, ದಿನಕ್ಕೆ ಮೂರ್ನಾಕ ಕಥೆಗಳನ್ನು ಓದಿದ್ದೂ ಉಂಟು. ಈ ರೀತಿಯಾಗಿ ನಮ್ಮ ಬಾಲ್ಯದಲ್ಲಿ ಓದಿನ ಹಸಿವನ್ನು ನೀವಾರಿಸಿದವರೇ ಡಾ. ಅನುಪಮಾ ನಿರಂಜನ. ಆಕೆ ವೃತ್ತಿಯಿಂದ ವೈದ್ಯೆ ಆದರೆ ಪ್ರವೃತ್ತಿಯಿಂದ ಬರಹಗಾರ್ತಿ. ಅಂದಿನ ದಿನಗಳಲ್ಲಿಯೇ ಅಂತರ್ಜಾತಿ ವಿವಾಹವಾಗಿ ಸಾಮಜಿಕ ಕಳಕಳಿಯನ್ನು ಎತ್ತಿ ತೋರಿಸಿದವರು. ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಜನಾನುರಾಗಿ ಮಕ್ಕಳ ಸಾಹಿತ್ಯ ಮತ್ತು ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯದಲ್ಲಿ ಅಪಾರವಾದ ಸೇವೆ ಸಲ್ಲಿಸಿದವರು.
1934ರ ಮೇ 17 ರಂದು ಮಲೆನಾಡಿನ ತೀರ್ಥಹಳ್ಳಿಯ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಮನೆಯವರು ವೆಂಕಟಲಕ್ಷ್ಮಿ ಎಂದು ನಾಮಕರಣ ಮಾಡಿದರು. ಬಹಳ ಬುದ್ಧಿವಂತಳಾಗಿ ಓದಿನಲ್ಲಿ ಬಹಳ ಚುರುಗಾಗಿದ್ದ ಆ ಹುಡುಗಿ ತಮ್ಮ ಹುಟ್ಟೂರಿನಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಆಗಿನ ಕಾಲಕ್ಕೇ ವೈದ್ಯಕೀಯ ಶಿಕ್ಷಣ ಪಡೆಯುತ್ತಾರೆ. ವೈದ್ಯಕೀಯ ವೃತ್ತಿಗಿಂತಲೂ ಸಾಹಿತ್ಯದತ್ತಲೇ ತಮ್ಮ ಹೆಚ್ಚಿನ ಗಮನವಹಿಸಿ, ಮುಂದೆ ಅನುಪಮಾ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧಿಯಾಗುತ್ತಾರೆ.
ವೃತ್ತಿಯಲ್ಲಿ ವೈದ್ಯರಾದ ಅನುಪಮಾ ತಮ್ಮ ವೃತ್ತಿಯ ಜೊತೆಜೊತೆಯಲ್ಲಿಯೇ ಸಾಹಿತ್ಯದ ಕೃಷಿಯತ್ತ ತಮ್ಮ ಹರಿಸಿದರು ಚಿತ್ತ. ಮುಂದೆ ಕುಳಕುಂದ ಶಿವರಾಯ, ನಿರಂಜನ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾಗಿದ್ದ ಮತ್ತೊಬ್ಬ ಲೇಖಕರೊಂದಿಗೆ ಆಗಿನ ಕಾಲದಲ್ಲೇ ಅಂತರ್ಜಾತಿವಿವಾಹವಾಗುವುದರ ಮೂಲಕ ಅವರಲ್ಲಿದ್ದ ಬರಹಗಾರ್ತಿಗೆ ಮತ್ತಷ್ಟು ಚೇತನ ತುಂಬಿತು ಎಂದರೆ ಅತಿಶಯೋಕ್ತಿಯೇನಲ್ಲ. ಪತ್ನಿಯ ಪ್ರತಿಯೊಂದು ಕಾರ್ಯಗಳಿಗೂ ಪ್ರೋತ್ಸಾಹ ನೀಡುತ್ತಾ , ಸಾಮಾಜಿಕ ಕಳಕಳಿಯ ಕಥಾ ವಸ್ತುಗಳ ಕಥೆ ಕಾದಂಬರಿಯ ಜೊತೆ ಜೊತೆಯಲ್ಲಿಯೇ ವೈದ್ಯಕೀಯಕ್ಕೆ ಸಂಬಂಧ ಪಟ್ಟ ಗ್ರಂಥಗಳನ್ನು ರಚಿಸಲು ಪ್ರೋತಾಹಿಸುತ್ತಾರೆ. ಪತಿಯ ಪ್ರೋತ್ಸಾಹ ಮತ್ತು ಸಹಕಾರದಿಂದ ಅವರ ಅನೇಕ ಕಾದಂಬರಿಗಳು ಆಗಿನ ಕಾಲದ ಕನ್ನದ ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿಯೂ ಮತ್ತು ಮಾಸಪತ್ರಿಕೆಗಳಲ್ಲಿ ನೀಳಕಥೆಗಳಾಗಿ ಸಾಹಿತ್ಯಾಸಕ್ತರ ಮನಸ್ಸೆಳಿದಿದ್ದವು.
ಮಕ್ಕಳಿಗೋಸ್ಕರವೇ ಆವರು ಬರೆದ ದಿನಕ್ಕೊಂದು ಕಥೆ ಪುಸ್ತಕಗಳ ಮಾಲಿಕೆ ಅತ್ಯಂತ ಜನಪ್ರಿಯವಾಯಿತು. ಆ ಪುಸ್ತಕಕ್ಕೆ ಪ್ರೇರಣೆ ಹೇಗಾಯಿತೆಂದು ಅನುಪಮಾ ಅವರೇ ಆ ಪುಸ್ತಕದ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ.
ನನ್ನ ಇಬ್ಬರು ಹೆಣ್ಣು ಮಕ್ಕಳಾದ ತೇಜಸ್ವಿನಿ ನಿರಂಜನ ಮತ್ತು ಸೀಮಂತಿನಿ ನಿರಂಜನ, `ಅಮ್ಮ, ಕಥೆ ಹೇಳು ಎಂದು ದಿನವೂ ದುಂಬಾಲು ಬೀಳುತ್ತಿದ್ದರು. ಅವರಿಗಾಗಿ ಭಾರತದ ಪುರಾಣ-ಇತಿಹಾಸಗಳನ್ನು ಆಧರಿಸಿದ ಕಥೆಗಳನ್ನು ಹೆಣೆದು ಹೇಳಿದೆ. ಇವು ಮುಗಿದ ಬಳಿಕ, ಜಗತ್ತಿನ ಇತರ ದೇಶಗಳ ಮಕ್ಕಳ ಕಥೆಗಳಿಗೂ ಕೈಚಾಚಿದೆ, ಹೀಗೆ, ಭಾರತದ ಪಂಚತಂತ್ರ, ಹಿತೋಪದೇಶ, ಪುರಾಣೇತಿಹಾಸ ಮೂಲದ ಕಥೆಗಳು, ಪ್ರಾಚೀನ ಗ್ರೀಸಿನ ಈಸೋಪನನೀತಿಕಥೆಗಳು ಹಾಗೂ ಪುರಾಣಕಥೆಗಳು, ಯುರೋಪಿನ ಗ್ರಿಮ್ ಸೋದರರು ಮತ್ತು ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಮತ್ತಿತರ ಕಥೆಗಳು, ಪೂರ್ವ ಪಶ್ಚಿಮಗಳ ಇನ್ನಿತರ ದೇಶಗಳ ಕಥೆಗಳು — ಇವೆಲ್ಲವುಗಳನ್ನು ನಾನು ಆಧರಿಸಿದೆ, ಈ ಕಥೆಗಳನ್ನು ಹೇಳುವಾಗ ನನ್ನ ಮಕ್ಕಳು ಊಟ, ನಿದ್ದೆ ಮರೆತು ತನ್ಮಯರಾಗುತ್ತಿದ್ದರು. ಅದನ್ನು ಕಂಡು, ‘ಕನ್ನಡನಾಡಿನ ಇತರ ಮಕ್ಕಳೂ ಇವುಗಳಿಂದ ಸಂತೋಷಪಡುವಂತಾಗಬೇಕು’ ಎಂಬ ಹೆಬ್ಬಯಕೆ ನನ್ನಲ್ಲಿ ಮೂಡಿತು. ನಾನು ಹೇಳಿದ ಕಥೆಗಳಲ್ಲಿ ಮಕ್ಕಳು ಆರಿಸಿದುದನ್ನು ಬರೆಯತೊಡಗಿದೆ. ಹೇಗೂ ನೂರಾರು ಕಥೆ ಬರೀತೀರಿ, ಮುನ್ನೂರ ಅರವತ್ತೈದೇ ಬರೆದ್ಬಿಡಿ. ದಿನಕ್ಕೊಂದು ಕಥೆಯಾಗ್ತದೆ‘ ಎಂದರು, ಶ್ರೀ ನಿರಂಜನ. ಈ ರೀತಿ ದಿನಕ್ಕೊಂದು ಕಥೆ ಯ ಉದಯವಾಯಿತು.
ಕಥೆಗಳಿಂದ ಮಕ್ಕಳಿಗಾಗುವ ಉಪಯೋಗ ಬ್ರಹ್ಮಾಂಡದಷ್ಟು. ಕಥೆಗಳಿಂದ ಮಗುವಿನ ಕಲ್ಪನಾಶಕ್ತಿ ಬೆಳೆಯುತ್ತದೆ, ಕುತೂಹಲ ತಣಿಯುತ್ತದೆ, ಬುದ್ದಿ ಚಿಗುರುತ್ತದೆ, ಸಾಹಸಪ್ರವೃತ್ತಿ ಹೆಚ್ಚುತ್ತದೆ, ಅನುಕಂಪ ಬೆಳೆಯುತ್ತದೆ. ದುಷ್ಟರಿಗೆ ಸೋಲು, ಸತ್ಯವಂತರಿಗೆ ಜಯ ಎಂಬ ನೀತಿ ಮನದಟ್ಟಾಗುತ್ತದೆ. ಹೀಗೆ ಕಥೆಗಳು ಮಗುವಿನ ಬೌದ್ಧಿಕ ಬೆಳವೆಣಿಗೆಗೆ ನೆರವಾಗುತ್ತವೆ.
ಈ ಹೊತ್ತಿಗೆಯ ಕಥೆಗಳನ್ನು ಓದಿದ ಅಥವ ಓದಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವಬಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ; ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ, ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. ಆ ದಿಸೆಯಲ್ಲಿ ಈ ಕಥೆಗಳು ಒಂದಿಷ್ಟಾದರೂ ನೆರವಾದರೆ ನನ್ನ ಶ್ರಮ ಸಾರ್ಥಕ ಆಯಿತೆಂದು ಭಾವಿಸುವೆ.
ಹೀಗೆ ತಮ್ಮ ಮಕ್ಕಳಿಗೆ ಕಥೆ ಹೇಳಲೆಂದು ಅರಂಭವಾದ ಅವರ ಕಥಾ ಲೋಕ ಮುಂದೆ ತಮ್ಮ ಪತಿ ನಿರಂಜನ ಅವರ ಪ್ರೋತ್ಸಾಹದ ಫಲವಾಗಿ ಪುಸ್ತಕ ರೂಪ ತಳೆದು ಪ್ರಪಂಚಾದ್ಯಂತ ಮಕ್ಕಳ ಜ್ಞಾನ ಬಂಢಾರವನ್ನು ವೃದ್ಧಿಸಲು ಸಹಕಾರಿಯಾಯಿತು.
ಕೇವಲ ಸಮಕಾಲೀನ ವಿಷಯವಲ್ಲದೇ, ಅತ್ಮ ಕಥನ, ಪ್ರವಾಸ ಕಥನ, ನಾಟಕ ಕಾದಂಬರಿಗಳು, ಅನುವಾದ, ವೈದ್ಯಕೀಯ ಪುಸ್ತಕಗಳು, ಪೌರಾಣಿಕ ಕಾದಂಬರಿ, ಶಿಶು ಸಾಹಿತ್ಯ, ಹೀಗೆ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದರಿಂದ ಡಾ.ಅನುಪಮಾ ಅವರು ಕನ್ನಡದಲ್ಲಿ ವಿಶಿಷ್ಟ ಲೇಖಕಿಯಾಗಿ ಎಲ್ಲರ ನಡುವೆ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಇವರ ಹಲವಾರು ಕಥೆ ಹಾಗೂ ಕಾದಂಬರಿಗಳು ಭಾರತೀಯ ಇತರ ಭಾಷೆಗಳಿಗೆ ಅನುವಾದಗೊಂಡಿವೆ.
ಅನಂತಗೀತ, ಶ್ವೇತಾಂಬರಿ, ಹಿಮದಹೂ, ಆಳ, ದಿಟ್ಟೆ, ಸಂಕೋಲೆಯೊಳಗಿಂದ, ಆಕಾಶಗಂಗೆ, ಮಾಧವಿ (ಪೌರಾಣಿಕ ಕಾದಂಬರಿ ), ಋಣಮುಕ್ತಳು (ಕಣಗಾಲ್ ಪುಟ್ಟಣ್ಣನವರ ನಿರ್ದೇಶನದಲ್ಲಿ ಚಲನಚಿತ್ರವಾಗಿದೆ) ಹೀಗೆ ಸುಮಾರು 25ಕ್ಕೂ ಹೆಚ್ಚು ಕಾದಂಬರಿಗಳು, ದಾಂಪತ್ಯ ದೀಪಿಕೆ, ವಧುವಿಗೆ ಕಿವಿಮಾತು, ಕೇಳು ಕಿಶೋರಿ, ತಾಯಿ-ಮಗು, ಸ್ತ್ರೀಸ್ವಾಸ್ಠ್ಯ ಸಂಹಿತೆ, ಕ್ಯಾನ್ಸರ್ ಜಗತ್ತು, ಆರೋಗ್ಯಭಾಗ್ಯಕ್ಕೆ ವ್ಯಾಯಾಮ ಹೀಗೆ 15ಕ್ಕೂ ಹೆಚ್ಚು ವೈದ್ಯಕೀಯ ಕೃತಿಗಳಲ್ಲದೆ ಅನೇಕ ಶಿಶು ಸಾಹಿತ್ಯಗಳನ್ನು ರಚಿಸಿದ್ದಾರೆ.
ಅನುಪಮಾ ಅವರ ಅನನ್ಯ ಸಾಹಿತ್ಯ ಸೇವೆಗಾಗಿ, ಸಾಹಿತ್ಯ ಅಕಾಡೆಮಿ ಪುರಸ್ಕಾರ ಮತ್ತು ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ದೊರಕಿದೆಯಲ್ಲದೇ, ಕಾಸರಗೋಡಿನಲ್ಲಿ ನಡೆದ ಮಹಿಳಾ ಸಮ್ಮೇಳನದ ಅಧ್ಯಕ್ಷತೆ ಮತ್ತು ಮುಂಬಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿರುತ್ತಾರೆ.
ಸ್ವತಃ ವೈದ್ಯೆಯಾಗಿದ್ದರೂ ಕಡೆಯ ದಿನಗಳಲ್ಲಿ ಅನುಪಮಾ ನಿರಂಜನ ಅವರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಾರೆ. ಕ್ಯಾನ್ಸರ್ ತಮ್ಮ ದೇಹವನ್ನು ಕಿತ್ತು ತಿನ್ನುತ್ತಿದ್ದರೂ, ಆ ನರಳುವಿಕೆಯಲ್ಲೂ ತಮ್ಮ ಜೀವಿತದ ಕೊನೆಯವರೆಗೆ ಸಾಹಿತ್ಯ ಸೇವೆಯನ್ನು ನಿಲ್ಲಿಸದೇ ಮುಂದುವರೆಸುತ್ತಾರೆ. ಅದೇ ಸಮಯದಲ್ಲಿ ಸುಧಾ ವಾರಪತ್ರಿಕೆಯಲ್ಲಿ ಅವರೇ ಬರೆದಿದ್ದ ಲೇಖನ ಸಾವು ಒಳಗೆ ಬರಬಹುದೇ ? ಎಂದಾಗ ತಡಿ, ಸ್ವಲ್ಪ ಕೆಲಸವಿದೆ ಎಂದೆ! ಎಂಬುದು ಬಹಳಷ್ಟು ಓದುಗರ ಮನವನ್ನು ಆರ್ದ್ರವಾಗಿಸಿತ್ತು ಎಂದರೆ ಅತಿಶಯೋಕ್ತಿಯೇನಲ್ಲ . ಅಂತಿಮವಾಗಿ ಫೆಬ್ರವರಿ 15, 1991ರಂದು ನಮ್ಮನ್ನೆಲ್ಲಾ ಅಗಲುತ್ತಾರೆ.
ಸಾಹಿತ್ಯಕವಾಗಿ, ವೃತ್ತಿಪೂರ್ವಕವಾಗಿ ಮತ್ತು ಸಾಮಾಜಿಕವಾಗಿ ಮಹತ್ವದ ಸಾಧನೆಗಳನ್ನು ಮಾಡಿದ ಡಾ. ಅನುಪಮಾ ನಿರಂಜನ ಅವರು ತಮ್ಮ ಸಾವು ಕಣ್ಮುಂದೆ ಇದ್ದರೂ ಧೃತಿಗೆಡದೆ ಅವರು ಬದುಕಿದ ಪರಿ ಅನನ್ಯ, ಅನುಕರಣಿಯ ಮತ್ತು ಅವಿಸ್ಮರಣೀಯ. ಸಾಹಿತಿ ಸಾಯಬಹುದು ಆದರೆ ಅವರು ಬರೆದ ಸಾಹಿತ್ಯಕ್ಕೆ ಸಾವಿಲ್ಲ ಎನ್ನುವಂತೆ, ಅವರು ಬರೆದ ಸಾಹಿತ್ಯದಿಂದ ಇಂದಿಗೂ ನಮ್ಮೊಡನೆ ಇರುವ ಕಾರಣ ಡಾ. ಅನುಪಮಾ ನಿರಂಜನರವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು
ಏನಂತೀರೀ?
ನಿಮ್ಮವನೇ ಉಮಾಸುತ
ಚೆಂದದ ನಿರೂಪಣೆ.ಧನ್ಯವಾದಗಳು.
LikeLiked by 1 person
ಧನ್ಯವಾದಗಳು
LikeLike