ಸ್ವಾತಂತ್ರ್ಯ ಪೂರ್ವದಲ್ಲಿ ನಾಟಕಗಳೇ ಮನೋರಂಜನೆಯ ಅತ್ಯಂತ ಪ್ರಮುಖ ಪಾತ್ರವಹಿಸಿತ್ತು. ಬಹುತೇಕ ವೃತ್ತಿ ರಂಗಭೂಮಿಯವರು ಪೌರಾಣಿಕ ನಾಟಕಗಳನ್ನೇ ಆಡುತ್ತಿದ್ದಾಗ ಅಲ್ಲೊಬ್ಬ ಯುವಕ ಅದನ್ನೇ ಪ್ರಶ್ನಿಸಿ ಕೇವಲ ಒಂದೇ ರಾತ್ರಿಯಲ್ಲಿ ಸಾಮಾಜಿಕ ಕಳಕಳಿಯ ನಾಟಕವೊಂದನ್ನು ಬರೆದು ಕೊಟ್ಟಿದ್ದ. ಕರ್ನಾಟಕ ಸಂಗೀತ ಕೇವಲ ಹೆಸರಿಗಷ್ಟೇ ಕರ್ನಾಟಕೆ ಎಂದಿತ್ತಾದರೂ ಬಹುತೇಕರು ಹಾಡುತ್ತಿದ್ದದ್ದು ತ್ಯಾಗರಾಜರ ಕೃತಿಗಳನ್ನೋ ಇಲ್ಲವೇ ಬೇರೆಯಾವುದೋ ಭಾಷೆಯ ಹಾಡುಗಳನ್ನೇ . ಇನ್ನು ಹಿಂದೂಸ್ಥಾನಿ ಸಂಗೀತಗಾರರು ಕನ್ನಡದಲ್ಲಿ ಹಾಡುಗಳೇ ಇಲ್ಲವೇನೋ ಎನ್ನುವಂತೆ ಹಿಂದಿ, ಮರಾಠಿ ಹಾಡುಗಳನ್ನೇ ಹಾಡುತ್ತಿದ್ದರು. ಅದು ಮೈಸೂರಿನ ಅರಮನೆಯ ದರ್ಬಾರಾಗಲೀ, ರಾಮೋತ್ಸವಗಳಲ್ಲಾಗಲೀ ಎಲ್ಲಡೆಯೂ ಕನ್ನಡ ಹಾಡುಗಳಿಗೆ ಪ್ರಾಶಸ್ತ್ಯವೇ ಇಲ್ಲದಿದ್ದಾಗ, ಅದನ್ನು ಪ್ರತಿಭಟಿಸಿ, ಕರ್ನಾಟಕ ಸಂಗೀತಗಾರರಿಗೆ ದಾಸರ ಪದಗಳನ್ನೂ ಹಿಂದೂಸ್ಥಾನೀ ಸಂಗೀತಗಾರರಿಗೆ ವಚನ ಸಾಹಿತ್ಯದ ಲಭ್ಯತೆಯನ್ನು ತಾವೇ ಸ್ವತಃ ಹಾಡಿ ತೋರಿಸಿ ಅವರೆಲ್ಲರೂ ಕನ್ನಡದ ಹಾಡುಗಳನ್ನು ಹಾಡುವಂತೆ ಮಾಡಿದ ವ್ಯಕ್ತಿ , ಕನ್ನಡ ಚಿತ್ರಗಳಿಗೆ ಬೆಂಗಳೂರಿನಲ್ಲಿಯೇ ಚಿತ್ರಮಂದಿರಗಳು ಸಿಗದಿದ್ದ ಕಾಲದಲ್ಲಿ ಹೋರಾಟ ನಡೆಸಿ ನಡೆಸಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳನ್ನು ದೊರಕಿಸಿಕೊಟ್ಟ ಧೀಮಂತ ಹೋರಾಟಗಾರ. ಹೀಗೆ ಕನ್ನಡದ ಅಸ್ಮಿತೆಗಾಗಿ ತಮ್ಮ ಇಡೀ ಜೀವನವನ್ನೇ ತೇಯ್ದ ಕಾದಂಬರಿಗಳ ಸರದಾರ/ಸಾರ್ವಭೌಮ ಶ್ರೀ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅರ್ಥಾತ್ ಎಲ್ಲರ ಪ್ರೀತಿಯ ಆನಕೃ.
ಮೂಲಕಃ ಹಾಸನ ಜಿಲ್ಲೆಯ ಅರಕಲಗೂಡಿನವರಾದ ನರಸಿಂಗರಾಯರು ಮತ್ತು ಅನ್ನಪೂರ್ಣಮ್ಮನವರ ಗರ್ಭದಲ್ಲಿ 1908ರ ಮೇ 9ರಂದು ಕೃಷ್ಣರಾವ್ ಅವರ ಜನನವಾಯಿತು. ಪ್ರಾಥಮಿಕ ಮಾಧ್ಯಮಿಕ ಶಾಲೆಗಳ ಓದನ್ನು ಮುಗಿಸಿ ಕೃಷ್ಣರಾಯರು ಬೆಂಗಳೂರಿನ ದೇಶೀಯ ವಿದ್ಯಾಶಾಲೆಗೆ ಸೇರಿದರು. ಅಲ್ಲಿನ ವಾತಾವರಣ ಬಾಲಕ ಕೃಷ್ಣರಾಯರ ಆಸಕ್ತಿ-ವಿಚಾರಗಳನ್ನು ರೂಪಿಸುವಲ್ಲಿ ನೆರವಾಯಿತು. ರಾಷ್ಟ್ರೀಯ ಭಾವನೆಗಳ ಕೇಂದ್ರವಾಗಿದ್ದ ಆ ಶಾಲೆಯಲ್ಲಿನ ಅಧ್ಯಾಪಕರಾದ ಶ್ರೀ ಸಂಪದ್ಗಿರಿ ರಾಯರು, ಕಂದಾಡೆ ಕೃಷ್ಣಯ್ಯಂಗಾರ್ ಅವರ ಪ್ರಭಾವದಿಂದ ಗಾಂಧಿ ವಿವೇಕಾನಂದರ ಪರಿಚಯವಾಗಿ ಅವರ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿದರು.
ನಾಟಕದ ಗೀಳನ್ನು ಹಚ್ಚಿಕೊಂಡಿದ್ದ ತಂದೆ ನರಸಿಂಗರಾಯರು ಎ.ವಿ. ವರದಾಚಾರ್ಯರಂಥ ಶ್ರೇಷ್ಠ ಕಲಾವಿದರನ್ನು ಸೇರಿಸಿಕೊಂಡು ಹವ್ಯಾಸಿ ನಾಟಕ ರಂಗವನ್ನು ಕಟ್ಟಿಕೊಂಡು ಎಲ್ಲಾ ಕಡೆಗಳಿಲ್ಲೂ ನಾಟಕ ಪ್ರದರ್ಶನ ಮಾಡುತ್ತಿದ್ದರಿಂದ ಅನಕೃಅವರಿಗೆ ಬಾಲ್ಯದಿಂದಲೂ ನಾಟಕರಂಗದ ಪರಿಚಯವಿತ್ತು, ಅದೊಮ್ಮೆ ವರದಾಚಾರ್ಯರ ಪೌರಾಣಿಕ ನಾಟಕವನ್ನು ನೋಡುತ್ತಿದ್ದಾಗ ಅವರಿಗೆ ಅದು ಸರಿಯಾಗಿ ಕಾಣದೇ, ನಾಟಕಗಳು ನಮ್ಮ ಸಮಾಜಿಕ ಸಮಸ್ಯೆಗಳ ಕುರಿತದ ಸಂಗತಿಗಳನ್ನೇಕೆ ರಂಗದ ಮೇಲೆ ಬರಬಾರದು ಎಂಬ ಪ್ರಶ್ನೆ ಹಾಕುತ್ತಾರೆ. ಆದಕ್ಕುತ್ತರವಾಗಿ ವರದಾಚಾರ್ಯರು ಅಂಥಹ ನಾಟಕಗಳನ್ನು ಯಾರು ಬರೆಯುತ್ತಾರೆ? ಎಂದು ಮರುಪ್ರಶ್ನಿಸಿದಾಗ ರಾತ್ರೋರಾತಿ ಕೃಷ್ಣರಾಯರೇ ಮದುವೆಯೋ ಮನೆ ಹಾಳೋ ಎನ್ನುವ ಆ ಸಮಯದಲ್ಲಿದ್ದ ಸಮಸ್ಯೆಯ ಕುರಿತಾದ ನಾಟಕವೊಂದನ್ನು ಬರೆದುಕೊಡುವ ಮೂಲಕ ತಮ್ಮ 16ನೇಯ ವಯಸ್ಸಿನಲ್ಲಿಯೇ ನಾಟಕಕಾರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಕೃಷ್ಣರಾಯರ ಪಾದರ್ಪಣವಾಗಿ ಮುಂದೆ ಐವತ್ತು ವರ್ಷಗಳ ಕಾಲ ಸುಮಾರು 190 ಕೃತಿಗಳನ್ನು ರಚಿಸಿ, ಅವುಗಳಲ್ಲಿ 112 ಕಾದಂಬರಿಗಳು; 9 ಕಥಾಸಂಗ್ರಹಗಳು, 24 ನಾಟಕಗಳು; 24 ವಿಮರ್ಶೆ ಹಾಗೂ ಪ್ರಬಂಧ ಸಂಕಲನಗಳು, 9 ಜೀವನ ಚರಿತ್ರೆಗಳು, 3 ಅನುವಾದಗಳು, 9 ಸಂಪಾದಿತ ಗ್ರಂಥಗಳನ್ನು ರಚಿಸುವ ಮೂಲಕ ತಮ್ಮ ಸಮಕಾಲೀನರಲ್ಲಿ ಅತ್ಯಂತ ಜನಪ್ರಿಯ ಲೇಖಕ ಎನ್ನಿಸಿಕೊಂಡರಲ್ಲದೇ ಅನೇಕ ಸಾಹಿತಿಗಳಿಗೆ ಗುರುಸ್ಥಾನದಲ್ಲಿದ್ದು ಮಾರ್ಗದರ್ಶನ ಮಾಡಿದ್ದರು.
ಕೃಷ್ಣರಾಯರ ಬಹುತೇಕ ಕೃತಿಗಳು ಸಾಮಾಜಿಕ ಸಮಸ್ಯೆಗಳ ಕುರಿತದ್ದೇ ಆಗಿದ್ದರೂ, ಕೆಲವೊಂದು ಐತಿಹಾಸಿಕ ಕಾದಂಬರಿಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ಬಹುಪಾಲು ಕಾದಂಬರಿಗಳು ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದವೇ ಆಗಿದ್ದರು. ಅಪರೂಪಕ್ಕೆಂಬಂತೆ, ಬೆಂಗಳೂರಿನ ನಾಡಪ್ರಭು ಕೆಂಪೇಗೌಡರು ಮತು ಕಿತ್ತೂರು ರಾಣಿ ಚೆನ್ನಮ್ಮನವರ ಕುರಿತು ಒಂದೊಂದು ಕಾದಂಬರಿಯನ್ನು ಬರೆದಿದ್ದಾರೆ. ಬಸವೇಶ್ವರ, ಅಲ್ಲಮಪ್ರಭು, ಅಕ್ಕಮಹಾದೇವಿಯರನ್ನು ಕುರಿತು ಕೃಷ್ಣರಾಯರು ಇಂಗ್ಲಿಷಿನಲ್ಲಿಯೂ ಬರೆದಿದ್ದಾರೆ. ಅವರ ಅನೇಕ ಕಾದಂಬರಿಗಳು ಅಧ್ಭುತವಾದ ಕನ್ನಡ ಚಿತ್ರಗಳಾಗಿ ತೆರೆಯ ಮೇಲೆ ರಾರಾಜಿಸಿದವು.
ಕೃಷ್ಣರಾಯರು ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರವರ್ತಕರು. ಇವರು ತಮ್ಮ ಧ್ಯೇಯಸಾಧನೆಗಾಗಿ ಉತ್ಸಾಹೀ ಲೇಖಕರ ತಂಡವನ್ನೇ ಕಟ್ಟಿ ಅದರ ಮೂಲಕ ಅನೇಕ ನವ್ಯ ಸಾಹಿತ್ಯಗಳು ಕನ್ನಡ ಸಾರಸ್ವತ ಲೋಕದಲ್ಲಿ ಬರಲು ಕಾರಣೀ ಭೂತರಾದರು. ಕೃಷ್ಣರಾಯರು ಕೇವಲ ಸಾಹಿತ್ಯಕ್ಕೇ ತಮ್ಮನ್ನು ಮೀಸಲಾಗಿಸಿಕೊಳ್ಳದೇ, ಪತ್ರಿಕೋದ್ಯಮ, ಚಲನಚಿತ್ರೋದ್ಯಮಗಳಲ್ಲಿಯೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು ಕನ್ನಡ ನುಡಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಗಳಿಗೆ ಕೆಲಕಾಲ ಸಂಪಾದಕರಾಗಿದ್ದರು. ಕಥಾಂಜಲಿ ಮತ್ತು ವಿಶ್ವವಾಣಿ ಎಂಬ ಪತ್ರಿಕೆಗಳನ್ನು ಇವರೇ ಪ್ರಕಟಿಸುತ್ತಿದ್ದರು. ಕೆಲವು ಕನ್ನಡ ಚಲನಚಿತ್ರಗಳ ನಿರ್ಮಾಣದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಕರ್ನಾಟಕಾದ್ಯಂತ ನಡೆಯುತ್ತಿದ್ದ ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ಸಂಘಟಕರು ಕನ್ನಡ ಸಂಗೀತಗಾರರನ್ನು ನಿರ್ಲಕ್ಷಿಸಿ, ಮದರಾಸಿನಿಂದ ಕಲಾವಿದರನ್ನು ಕರೆಸಿ ಹಾಡಿಸುತ್ತಿದ್ದನ್ನು ಅನಕೃ ಅವರು ತೀವ್ರವಾಗಿ ವಿರೋಧಿಸಿದರು. ಅದೊಮ್ಮೆ ಕರ್ನಾಟಕ ಸಂಗೀತದ ದಿಗ್ಗಜೆ, ಎಮ್ ಎಸ್ ಸುಬ್ಬುಲಕ್ಷ್ಮಿಯವರು ಮದರಾಸಿನಿಂದ ಹಾಡಲು ಬಂದಿದ್ದಾಗ ಅನಕೃ ಆವರನ್ನು ಭೇಟಿ ಮಾಡಿ ತಮ್ಮ ಚಳುವಳಿಯ ಉದ್ದೇಶವನ್ನು ವಿವರಿಸಿದಾಗ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀಮತಿ ಸುಬ್ಬುಲಕ್ಶ್ಮಿಯವರು ತಮ್ಮ ಸಂಗೀತ ಕಾರ್ಯಕ್ರವನ್ನು ರದ್ದುಮಾಡಿ ಹಿಂತಿರುಗಿದ್ದರು.
ಈ ರೀತಿಯ ದೊಡ್ಡ ದೊಡ್ಡ ಪ್ರತಿಭಟನೆಗಳ ಫಲವಾಗಿಯೇ ವಿದುಷಿ ಎಂ.ಎಸ್. ವಸಂತಕೋಕಿಲ, ಅವರ ಮಗಳಾದ ವಿದುಷಿ ಎಂ.ಎಲ್. ವಸಂತಕುಮಾರಿ ಮುಂತಾದ ಕಲಾವಿದರು ಕನ್ನಡದ ಕೃತಿಗಳನ್ನು ತಮ್ಮ ಸಂಗೀತ ಕಛೇರಿಗಳಲ್ಲಿ ಹಾಡ ತೊಡಗಿದ ಪರಿಣಾಮ, ಕನ್ನಡದ ದೇವರನಾಮಗಳು ಎಲ್ಲರ ಮನೆಮನಗಳನ್ನು ತಲುಪಿದವು ಮತ್ತು ಎಲ್ಲಾ ಕಡೆಗಳಲ್ಲಿಯೂ ಕನ್ನಡದ ಹಾಡುಗಳಿಗೆ ವಿಶ್ವಾದ್ಯಂತ ಮನ್ನಣೆ ದೊರೆಯತೊಡಗಿತು.
ಅದೇ ರೀತಿ ಕರ್ನಾಟಕದ ಹಿಂದೂಸ್ತಾನಿ ವಿದ್ವಾಂಸರಗಳೂ ಕೂಡಾ ತಮ್ಮ ಕಛೇರಿಗಳಲ್ಲಿ ಮರಾಠಿ ಅಭಂಗಗಳನ್ನು, ಮತ್ತು ರಂಗಗೀತೆಗಳನ್ನು ಹಾಡುತ್ತಿದ್ದರೇ ಹೊರತು ಕನ್ನಡದ ಕೃತಿಗಳು ಅಲ್ಲಿ ಸುಳಿಯುತ್ತಿರಲಿಲ್ಲ ಅದೊಮ್ಮೆ ತಮ್ಮ ಗೆಳೆಯ ಮಲ್ಲಿಕಾರ್ಜುನ ಮನ್ಸೂರರಿಗೆ ಶಿವ¬ಶರಣರ ವಚನಗಳನ್ನು ಹಾಡುವಂತೆ ಅನಕೃ ಒತ್ತಾಯಿಸಿದಾಗ ಅವರು ಏನು ಚ್ಯಾಷ್ಟಿ ಮಾಡ್ತೀರಾ? ಎಂದು ನಕ್ಕರಂತೆ. ಆಕೂಡಲೇ ಆನಕೃ ರವರು ವಚನದಲ್ಲಿ ನಾಮಾಮೃತ ತುಂಬಿ ಎಂಬ ವಚನವನ್ನು ಸ್ವತಃ ತಾವೇ ಭಾವಪೂರ್ಣವಾಗಿ ಹಾಡಿ ತೋರಿಸಿದಾಗ ಅದರಿಂದ ಪ್ರಭಾವಿತರಾದ ಮನ್ಸೂರರೂ ಮುಂದೆ ತಮ್ಮ ಎಲ್ಲಾ ಕಛೇರಿಗಳಲ್ಲಿಯೂ ವಚನಗಳಿಗೆ ಪ್ರಾಶಸ್ತ್ಯ ಕೊಟ್ಟ ಪರಿಣಾಮವಾಗಿ ಹಿಂದೂಸ್ತಾನಿ ಸಂಗೀತದಲ್ಲಿ ವಚನ ಗಾಯನದ ಪರಂಪರೆಯೇ ಬೆಳೆಯಿತು.
ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿದ್ದ ಕಾಲದಲ್ಲಿ ಅನಕೃ ಮತ್ತು ಮ. ರಾಮಮೂರ್ತಿಗಳು ಉಗ್ರವಾಗಿ ಹೋರಾಟ ನಡೆಸಿದ ಪರಿಣಾಮವಾಗಿಯೇ. ಬೆಂಗಳೂರಿನ ಅಲಂಕಾರ್ ಚಿತ್ರಮಂದಿರದಲ್ಲಿ ಮೊತ್ತ ಮೊದಲ ಬಾರಿಗೆ ಜಿ.ವಿ.ಅಯ್ಯರ್ ನಿರ್ದೇಶನದ ಬಂಗಾರಿ ಕನ್ನಡ ಚಿತ್ರ ಪ್ರದರ್ಶನಗೊಂಡಿತು.
ಆನಕೃ ಅವರ ಕುರಿತಂತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ನಾನು ತಮಿಳು ಕನ್ನಡಿಗ, ಮಿರ್ಜಾ ಇಸ್ಮಾಯಿಲ್ ಅವರು ಮುಸ್ಲಿಂ ಕನ್ನಡಿಗರು, ಆದರೆ ಅನಕೃ ಮಾತ್ರವೇ ಅಚ್ಚ ಕನ್ನಡಿಗರು ಎಂದು ಶ್ಲಾಘಿಸಿದ್ದದ್ದು ಅನಕೃ ಅವರ ಕನ್ನಡ ತನವನ್ನು ಎತ್ತಿ ತೋರಿಸುತ್ತದೆ. ಅದೇ ರೀತಿ ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ ಎಂಬ ಅನಕೃ ಅವರ ಮಾತು ಅವರ ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿದೆ.
ಮಣಿಪಾಲದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಕೂಡ ಪಡೆದಿದ್ದರು. ಮೈಸೂರು ರಾಜ್ಯದ ಸಾಹಿತ್ಯ ಅಕಾಡಮಿಗೆ ಇವರು ಮೊದಲ ಅಧ್ಯಕ್ಷರಾಗಿದ್ದರು.
ಇಂತಹ ಮಹಾನ್ ಚೇತನ, 1971 ರ ಜುಲೈ 8 ರಂದು ಇಹಲೋಕವನ್ನು ಭೌತಿಕವಾಗಿ ತ್ಯಜಿಸಿದರೂ, ಕನ್ನಡ ಸಾಹಿತ್ಯ ಲೋಕದ ಧೃವತಾರೆಯಾಗಿ ಇಂದಿಗೂ ಬೆಳಗುತ್ತಿದ್ದಾರೆ.
ತಮ್ಮ ಜೀವಮಾನದುದ್ದಕ್ಕೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುತ್ತಾ, ಕರ್ನಾಟಕಾದ್ಯಂತ ಸುತ್ತಾಡುತ್ತಾ ತಮ್ಮ ಚಳುವಳಿ, ಭಾಷಣಗಳ ಮೂಲಕ ಕನ್ನಡಿಗರನ್ನು ಹುರಿದುಂಬಿಸಿದರು. ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಜಾಗೃತಗೊಳಿಸಿದರು. ಕೃಷ್ಣರಾಯರು ದೊಡ್ಡ ಪ್ರಮಾಣದಲ್ಲಿ ತಮ್ಮ ಜನರ ಪ್ರೀತಿವಿಶ್ವಾಸಗಳನ್ನು ಪಡೆದಿದ್ದರು. ಸಾಹಿತಿಯಾಗಿ, ವಾಗ್ಮಿಯಾಗಿ ಜನಪ್ರಿಯತೆಯ ಶಿಖರವನ್ನೇರಿದ್ದರು ನಮ್ಮ ಕಾದಂಬರಿಗಳ ಸಾರ್ವಭೌಮ ಶ್ರೀ ಅನಕೃ. ಹಾಗಾಗಿಯೇ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು
ಏನಂತೀರೀ?