ಕೊರವಂಜಿ ರಾಶಿ

ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಹಾಸ್ಯಲೇಖಕರಾಗಿ, ಸಮಾಜ ಸೇವೆಗಾಗಿ ಬೆಂಗಳೂರು ಮೆಡಿಕಲ್ ಕಾಲೇಜು ಸ್ಥಾಪಿಸಿ, ಕಿರ್ಲೋಸ್ಕರ್ ಕಾರ್ಖಾನೆಯ ನಿರ್ದೇಶಕರಾಗಿ, ಮೈಸೂರು ಲ್ಯಾಂಪ್ಸ್, ಇಂಡಿಯನ್ ಆಕ್ಸಿಜನ್ ಕಂಪನಿಗಳ ಸಲಹೆಗಾರರಾಗಿ, ಇಂಡಸ್ಟ್ರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿಯ ನಿರ್ದೇಶಕರಾಗಿ ಕೈಗಾರಿಕೋದ್ಯಮದಲ್ಲಿ ಸೇವೆ ಸಲ್ಲಿಸಿ, ಮೈಸೂರು ಕ್ಯಾನ್ಸರ್ ಸೊಸೈಟಿ ಸ್ಥಾಪಕ ಸದಸ್ಯರಲ್ಲೊಬ್ಬಗಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ರಾಜ್ಯ ಶಾಖೆಯ ಅಧ್ಯಕ್ಷರಾಗಿ ಹೀಗೆ ಬಹುಮುಖದ ಪ್ರತಿಭೆಯಾಗಿದ್ದ. ಡಾ. ಎಂ. ಶಿವರಾಂ ಹೆಸರು ವಾಸಿಯಾಗಿದ್ದೇ ರಾಶಿ ಎಂಬ ತಮ್ಮ ಕಾವ್ಯನಾಮದಿಂದಲೇ. ತಮ್ಮ ಹೆಸರಿನ ಎರಡು ಪದಗಳ ಪ್ರಥಮಾಕ್ಷರಗಳನ್ನು ತಿರುವು ಮುರುವು ಮಾಡಿ ರಾ.ಶಿ ಎಂದಿಟ್ಟುಕೊಂಡ್ಡಿದ್ದರು.

rashi1

ಬೆಂಗಳೂರಿನ ಶ್ರೀ ರಾಮಸ್ವಾಮಯ್ಯ, ಮತ್ತು ಶ್ರೀಮತಿ ಸೀತಮ್ಮ ದಂಪತಿಗಳಿಗೆ 10-11-1905 ರಲ್ಲಿ ಶಿವರಾಂ ಅವರ ಜನನವಾಯಿತು. ತಮ್ಮ ವಿದ್ಯಾಭ್ಯಾಸವೆಲ್ಲಾ ಬೆಂಗಳೂರಿನಲ್ಲಿಯೇ ಆಗಿ, ತಮ್ಮ ಎಂ.ಬಿ.ಬಿ.ಎಸ್. ಓದುತ್ತಿರುವಾಗಲೇ ಅವರ ತಂದೆಯವರ ಅಕಾಲಿಕ ಮರಣದಿಂದಾಗಿ ಇಡೀ ಕುಟುಂಬದ ಹೊಣೆ ಇವರ ಮೇಲೇ ಬೀಳುತ್ತದೆ. ಕನ್ನಡದ ಮತ್ತೊಬ್ಬ ದಂತಕಥೆಯಾದ ಶ್ರೀ ಕೈಲಾಸಂ ಅವರ ಸಲಹೆಯ ಮೇರೆಗೆ ವೈದ್ಯರಾಗಿದ್ದುಕೊಂಡೇ ಸಮಾಜ ಸೇವೆ ಮಾಡಲು ಪ್ರಾರಂಭಿಸುತ್ತಾರೆ.

ಅವರೇಕೆ ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡರು ಎಂಬುದನ್ನು ಅವರೇ ಒಂದು‌ ಕಡೆ ಹೀಗೆ ಹೇಳುತ್ತಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದ ಕಾರಣ, ಯಾವುದಾದರೂ ಶವವನ್ನು ಮುಟ್ಟಿ ಮನೆಗೆ ಬಂದಲ್ಲಿ, ಸಂಪ್ರದಾಯಸ್ಥ ಕುಟುಂಬದ ಅವರ ತಾಯಿ ಅವರನ್ನು ನೆರವಾಗಿ ಮನೆಯೊಳಗೆ ಸೇರಿಸಿಕೊಳ್ಳದೆ, ಹಂಡೆಯಲ್ಲಿ ಬಿಸಿ ನೀರು ಕಾಯಿಸಿ ಸ್ನಾನ ಮಾಡಿದ ನಂತರವೇ ಮನೆಯೊಳಗೆ ಪ್ರವೇಶ ಮಾಡುವಂತೆ ತಾಕೀತು ಮಾಡಿದ್ದರು. ಹಾಗೆ ಸೌದೇ ಹಂಡೆಯಲ್ಲಿ ನೀರು ಕಾಯಲು ಸಾಕಷ್ಟು ಸಮಯ ಆಗುತ್ತಿದ್ದರಿಂದ ಆ ಬಿಡುವಿನ ಸಮಯದಲ್ಲಿ ಲೇಖನಗಳನ್ನು ಬರೆಯುತ್ತಿದ್ದರಂತೆ.

koravangi1

ಶಿವರಾಂ ಅವರು ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಬಿಡುವಿನ ವೇಳೆಯನ್ನು ಹೆಚ್ಚಾಗಿ ವಾಚನಾಲಯದಲ್ಲಿ ಕಳೆಯುತ್ತಿದ್ದರು. ಹಾಗೆ ವಾಚನಾಲಯದಲ್ಲಿ ಅವರಿಗೆ ಇಂಗ್ಲೀಷಿನ ಹಾಸ್ಯಪತ್ರಿಕೆ ಪಂಚ್ ಸಾಪ್ತಾಹಿಕ ಅವರಿಗೆ ಬಹಳ ಇಷ್ಟವಾಗುತ್ತಿತ್ತು. ಆ ಪತ್ರಿಕೆಯಲ್ಲಿ ಸಮಕಾಲೀನ ಜೀವನದ ವಿಶ್ಲೇಷಣೆಯನ್ನು ಕಟಕಿ ವ್ಯಂಗ್ಯ ಮತ್ತು ಚತುರೋಕ್ತಿಗಳಿಂದ ಮಾಡುವ ರೀತಿ ಅವರಿಗೆ ಮೆಚ್ಚುಗೆಯಾದುದರಿಂದ ಅದನ್ನು ತಮ್ಮ ಸಂಭಾಷಣೆಗಳಲ್ಲಿ ಅಳವಡಿಸಿಕೊಂಡರು. ಮುಂದೆ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಅವರಿಗೆ ಕೈಲಾಸಂ ಅವರ ಪರಿಚಯವಾಗಿ ಅವರಿಂದ ಪ್ರೇರಿತರಾಗಿ ಹಾಸ್ಯವೇ ವಯಕ್ತಿಕ ಜೀವನದಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ಎಲ್ಲರ ಮನವನ್ನು ಅರಿಯಲು ಸಹಾಯ ಮಾಡುತ್ತದೆ ಎಂದು ಅರಿತು ತಾವೂ ಸಹಾ ಪಂಚ್ ಮಾದರಿಯ ಪತ್ರಿಕೆಯನ್ನು ಕನ್ನಡದಲ್ಲಿ ಹೊರತರಲು ಯೋಚಿಸುತ್ತಿರುವಾಗಲೇ, ರಾಶಿಯವರ ಮಾತುಗಳು ಲವಲವಿಕೆಯಿಂದಲೂ ಚತುರೋಕ್ತಿ ಮತ್ತು ಹಾಸ್ಯಗಳಿಂದಲೂ ಕೂಡಿರುವುದನ್ನು ಗಮನಿಸಿದ ಅವರ ಮಿತ್ರರು, ಇವನ್ನೆಲ್ಲಾ ಬರೆಯಬಾರದೇಕೆ? ಎಂಬ ಪ್ರೇರಣೆಯೊಂದಿಗೆ ಕೈಲಾಸಂ ಮತ್ತು ನಾ. ಕಸ್ತೂರಿಯವರ ಸ್ನೇಹದಲ್ಲಿ 1947ರಲ್ಲಿ ಕನ್ನಡದ ಹಾಸ್ಯ ಪತ್ರಿಕೆ ಕೊರವಂಜಿಯನ್ನು ಪ್ರಾರಂಭಿಸಿಯೇ ಬಿಟ್ಟರು. ಈ ಪತ್ರಿಯ ಮೂಲಕ ರಾಶಿ ಅವರು ಕನ್ನಡ ಸಾಹಿತ್ಯಕ್ಕೆ ಹೊಸತೊಂದು ಆಯಾಮ ನೀಡಿದರು, ತಮ್ಮ ಬಿಡುವಿಲ್ಲದ ವೈದ್ಯಕೀಯ ವೃತ್ತಿಯ ಜೊತೆಗೆ ಕೊರವಂಜಿಯನ್ನು ಬೆಳೆಸಲು ತುಂಬಾ ಶ್ರಮವಹಿದರು. ಆ ಪತ್ರಿಕೆಯಲ್ಲಿ ತಾವು ಬರೆದದ್ದಲ್ಲದೇ ಅನೇಕ ಹಾಸ್ಯ ಬರಹಗಾರರು ಮತ್ತು ವ್ಯಂಗ್ಯ ಚಿತ್ರಕಾರರನ್ನೂ ಬೆಳಕಿಗೆ ತಂದರು.
ನಾ ಕಸ್ತೂರಿ, ಜಿ.ಪಿ.ರಾಜರತ್ನಂ, ಎಸ್.ಎನ್.ಶಿವಸ್ವಾಮಿ ಮುಂತಾದವರು

koravangi2ಬರಹಗಾರರು ಕಡಿಮೆ ಇದ್ದದ್ದರಿಂದ ಒಬ್ಬರೇ ಲೇಖಕರು ಬೇರೆ ಬೇರೆ ಹೆಸರುಗಳಿಂದ ಬರೆಯುತ್ತಿದ್ದರು.ಉದಾಹರಣೆಗೆ ನಾಕ. ರೇವಣ್ಣ, ಪಾಟಾಳಿ, ಕರೀಂ ಖಾನ್ ಎಲ್ಲಾ ನಾ.ಕಸ್ತೂರಿಯವರಾಗಿದ್ದರೆ, ರಾಶಿಯವರು ಪಾಪಿ, ಬಚ್ಚಾ ಎನ್ನುವ ಹೆಸರುಗಳಿಂದಾಗಿ ಬರೆಯುತ್ತಿದ್ದರು.’ಕುಹಕಿಡಿಗಳು ಮತ್ತು ಉರಿಗಾಳು ಎಂಬ ಅಂಕಣದಲ್ಲಿ ರಾಶಿಯವರು ವರ್ತಮಾನದ ವಿಷಯಗಳನ್ನು ಕುರಿತು ಚುಟುಕಾಗಿ ವಿಡಂಬನೆ ಮಾಡುತ್ತಿದ್ದರು. ಕೊರವಂಜಿಯ ಪ್ರಾರಂಭದ ವರ್ಷಗಳಲ್ಲಿ ಆಗಿನ್ನೂ ವಿದ್ಯಾರ್ಥಿಯಾಗಿದ್ದ ಆರ್.ಕೆ.ಲಕ್ಷ್ಮಣ್ ಅವರ ಮೊನಚಾದ ವ್ಯಂಗ್ಯ ಚಿತ್ರಗಳು ಪ್ರಕಟವಾಗುತ್ತಿತ್ತು, ಕಾಲಕ್ರಮೇಣ ಟಿ.ಸುನಂದಮ್ಮ , ದಾಶರಥಿ ದೀಕ್ಷಿತ್, ಅರಾಸೆ, ಕೇಫ ಮುಂತಾದ ಹಾಸ್ಯ ಲೇಖಕರು ಕೊರವಂಜಿ ತಂಡವನ್ನು ಸೇರಿಕೊಂಡು ಅತ್ಯಂತ ಹಾಸ್ಯಮಯ ಲೇಖನಗಳು ಬರತೊಡಗಿದವು. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಬಿ ಜಿ ಎಲ್ ಸ್ವಾಮಿ ಯವರ ಮೀನಾಕ್ಷಿಯ ಸೌಗಂಧ ಎಂಬ ನೀಳ್ಗವನ ಮತ್ತು ಬುಳ್ಳ (ವೇದಾಂತಂ ಶ್ರೀನಿವಾಸ್) ಅವರ ಊಟೋಪಚಾರ ಎಂಬ ನಗೆಬರಹ ತುಂಬಾ ಜನಪ್ರಿಯವಾಗಿದ್ದವು.

ಇಷ್ಟೆಲ್ಲಾ ಸ್ವಾರಸ್ಯಮಯವಾಗಿದ್ದ ಕೊರವಂಜಿಯನ್ನು ಕನ್ನಡದ ಓದುಗರು ಅದೇಕೋ ಅಷ್ಟಾಗಿ ಅಪ್ಪಿ ಕೊಳ್ಳಲೇ ಇಲ್ಲ. ರಾಶಿಯವರೇ 1966ರಲ್ಲಿ ಕೊರವಂಜಿ ಕಾಡಿಗೆ ಹೋದಳು. ಎಂದು ಹೇಳಿ ಪತ್ರಿಕೆಯನ್ನು ನಿಲ್ಲಿಸಿಬಿಟ್ಟರೆ, ಮಹೀಶೂರ ಕನ್ನಡಿಗ ನಿದ್ದೆಯಿಂದೆದ್ದು ಆಕಳಿಸುತ್ತಾ, ಹೋಗ್ಬಿಟ್ಟು ಬರ್ತೀನಿ ಅಂದ್ಯಾ, ಕೊರವಂಜೀ? ನೀನು ಇದ್ದದೇ ಗೊತಾಗ್ಲಿಲ್ಲವಲ್ಲೇ!” ಎಂದ. ಇದು ಆಗಿನ ಕಾಲದಲ್ಲಿ ಕನ್ನಡ ಪತ್ರಿಕೆಗಿದ್ದ ಪರಿಸ್ಥಿತಿ. ಕೊಂಡು ಓದುವ ಹವ್ಯಾಸ ಕನ್ನಡಿಗರಿಗೆ ಇರಲಿಲ್ಲ. ಆರ್ಥಿಕವಾಗಿ ಸಧೃಡರಾಗದಿದ್ದ ಕಾರಣ, ಬಹುತೇಕರು ಪುಸ್ತಕಾಲಯ, ಅಥವಾ ಗ್ರಂಥ ಭಂಡಾರಗಳಲ್ಲಿ ಸಿಕ್ಕ ಪುಸ್ತಕಗಳು ದೈನಿಕಗಳು ಮತ್ತು ಬೇರೆಯವರಿಂದ ಕೈಗಡವಾಗಿ ಪಡೆದ ಪುಸ್ತಕಗಳನ್ನು ಮಾತ್ರವೇ ಓದುತ್ತಿದ್ದ ಪರಿಣಮ ಬಹಳ ದುಖಃದಿಂದ ಕೊರವಂಜಿ ಪತ್ರಿಕೆ ನಿಂತೇ ಹೋಯಿತು.

aparanji

ಇಪ್ಪತ್ತೈದು ವರುಷಗಳಕಾಲ ಕನ್ನಡ ಜನತೆಯನ್ನು ರಂಜಿಸಿ, ನಗಿಸಿದ ಕೊರವಂಜಿ ಕಾಡಿಗೆ ತೆರಳಿ ಸುಮಾರು ಹದಿನಾರು ವರ್ಷಗಳಾದ ಮೇಲೆ 1983 ನೇ ಇಸವಿಯಲ್ಲಿ ಅ.ರಾ.ಸೇ.ಯವರು ತಮ್ಮ ಗೆಳೆಯ ಶೇಷಗಿರಿಯವರನ್ನು ಕರೆದುಕೊಂಡು ರಾಶಿಯವರ ಮನೆಗೆ ಬಂದು ಪುನಃ ಕೊರವಂಜಿಯನ್ನು ಹೊರತರುವ ಆಲೋಚನೆಯನ್ನು ಮುಂದಿಟ್ಟರು. ಆರಂಭದಲ್ಲಿ ರಾ.ಶಿ.ಯವರು ಆ ಕುರಿತು ಅಷ್ಟೇನೂ ಉತ್ಸಾಹ ತೋರಿಸದಿದ್ದರೂ, ಕೊನೆಗೆ ಅ.ರಾ.ಸೇ.ಯವರ ಸ್ನೇಹಪೂರ್ಣ ಒತ್ತಾಯಕ್ಕೆ ಮಣಿದು ಒಂದು ಷರತ್ತಿನ ಮೂಲಕ ತಮ್ಮ ಒಪ್ಪಿಗೆ ನೀಡಿದರು. ಕೊರವಂಜಿ ಪರಂಪರೆ ಇಲ್ಲಿಗೆ ನಿಲ್ಲಲಿ ಕೊರವಂಜಿ ಬದಲಿಗೆ ಬೇರೆ ಹೆಸರಿನಲ್ಲಿ ಹೊಸ ಪತ್ರಿಕೆ, ತನ್ನದೇ ಆದ ಪರಂಪರೆ ಬೆಳೆಸಲಿ ಎಂದಾಗ, ಅದಕ್ಕೊಪ್ಪಿದ ಅ.ರಾ.ಸೇ. ಬೇರೆ ಯಾವುದಾದರೂ ಹೊಸಾ ಹೆಸರನ್ನು ಸೂಚಿಸಿ ಎಂದು ರಾಶಿಯವರನ್ನೇ ಕೇಳಿದ್ದಕ್ಕೆ, ಅಪರಂಜಿ ಎಂಬ ಹೆಸರನ್ನು ರಾ.ಶಿ.ಯವರೇ ಸೂಚಿಸಿದರು. 1983ರ ಶ್ರಾವಣ ಮಾಸದಲ್ಲಿ ಅಪರಂಜಿಯ ಮೊದಲ ಸಂಚಿಕೆ ಬಿಡುಗಡೆಯಾಯಿತು ಪ್ರಾರಂಭದಿಂದಲೇ ಅಪರಂಜಿಯ ಬಳಗಕ್ಕೆ ಶ್ರೀನಿವಾಸ ವೈದ್ಯ, ಲೀಲಾ ಮಿರ್ಲೆ, ಎಂ.ಎಸ್.ಕೆ. ಪ್ರಭು, ಶಾಂತಾ ರಘು ಇವರುಗಳೆಲ್ಲಾ ಸೇರಿಕೊಂಡು ತಮ್ಮ ಉತ್ಕ್ರಷ್ಟ ಹಾಸ್ಯಪ್ರಜ್ಞೆಯಿಂದ ಅಪರಂಜಿಯನ್ನು ಮತ್ತಷ್ಟು ಶ್ರೀಮಂತಗೊಳಿಸುವುದರ ಜೊತೆಗೆ ಓದುಗರಲ್ಲಿ ಒಂದು ಉತ್ತಮ ಅಭಿರುಚಿಯನ್ನು ಬೆಳೆಸುವುದಕ್ಕೆ ಕಾರಣರಾದರು.

ನಗೆ ಬರಹಗಳು
ತುಟಿ ಮೀರುದುದು, ಕೆಣಕೋಣು ಬಾ, ಇಂದಾನೊಂದು ಕಾಲದಲ್ಲಿ, ಕೊರವಂಜಿಯ ಪಡುವಣ ಯಾತ್ರೆ, ನಗುಸರಸಿ ಅಪ್ಸರೆಯರು, ಕೊರವಂಜಿ ಕಂಡ ನಗು ಸಮಾಜ, ಕೊರವಂಜಿ ಕಂಡ ನಗು ವ್ಯಕ್ತಿಗಳು, ಕೊರವಂಜಿ ಕಂಡ ನಗು ದರ್ಬಾರಿಗಳು, ಕೊರವಂಜಿ ಕಂಡ,
ನಗು ಸಂಸಾರಿಗಳು, ನಗೆಹನಿಗಳು

ನಗೆಹನಿಗಳು
ಥಳುಕು ತುಣುಕು, ನಗೆಗೆರೆ ಚಿತ್ರಗಳು, ನಗು

ಕಳ್ಳರ ಕಥೆಗಳು,
ಜಗ್ಗೋಜಿ ಮತ್ತು ಬುದ್ದೋಜಿ

ಕಾದಂಬರಿಗಳು
ಪಂಪಾಪತಿಯ ಕೃಪೆ, ಹರಿದ ಉಯಿಲು, ಮಧುವನದಲ್ಲಿ ಮೇಳ, ಕಾರ್ತೀಕ ಸೋಮವಾರ

ಇದದಲ್ಲದೇ ಅನೇಕ ಆಂಗ್ಲ ಬರಹಗಳು, ವ್ಯಕ್ತಿ ಚಿತ್ರಗಳು, ಕವನ ಸಂಗ್ರಹಗಳು, ವಿಚಾರ ಸಾಹಿತ್ಯ, ಮಾನಸಿಕ ಆರೋಗ್ಯದ ಕುರಿತಾದ ವೈದ್ಯಕೀಯ ಬರಗಳನ್ನು ಬರೆದಿದ್ದಾರೆ.

ರಾಶಿಯವರ ಅತ್ಯಂತ ಪ್ರಮುಖ ಪುಸ್ತಕಗಳು ಮನೋನಂದನ, ಮನಮಂಥನ ಮತ್ತು ಆನಂದ. ಮನೋದೈಹಿಕ ಬೇನೆಗಳ ವಿಸ್ತೃತ ಅಧ್ಯಯನವಿರುವ ಹೊತ್ತಗೆ ‘ಮನೋನಂದನ’. ಮನೋದೈಹಿಕ ಬೇನೆಗಳಿಗೆ ರೋಗಿಯ ಆಳ ಮನಸ್ಸಿನ ಭಯವೋ, ಆತಂಕವೋ ಕಾರಣವಾಗಿರುತ್ತದೆ. ಇಂಥ ಕಾಹಿಲೆಗಳಿಗೆ ಚಿಕಿತ್ಸೆ ನೀಡಬೇಕಾದರೆ ವೈದ್ಯನಿಗೆ ರೋಗಿಯ ಮನಸ್ಸು ಮತ್ತು ದೇಹಗಳ ಪರಿಚಯ ಸ್ಪಷ್ಟವಿರಬೇಕು. ಚಿಕಿತ್ಸೆ ಯಶಸ್ವಿಯಾಗಬೇಕಾದರೆ ರೋಗಿಯ ಸಹಕಾರವೂ ಅತ್ಯಗತ್ಯ. ಆದ್ದರಿಂದ ಇಂಥ ಬೇನೆಗಳ ಮೂಲ ಸ್ವರೂಪ ಏನು ಎಂಬುದನ್ನು ವೈದ್ಯ ಮತ್ತು ರೋಗಿ ಇಬ್ಬರೂ ಅರಿತರೆ ಒಳ್ಳೆಯದು. ಆ ದಿಸೆಯಲ್ಲಿ ಇಬ್ಬರಿಗೂ ಕೈಪಿಡಿಯಾಗುವಂತಹ ಪುಸ್ತಕ ಮನೋನಂದನ. ಇದು ನನಗೆ ತುಂಬಾ ಇಷ್ಟವಾದ ಕೃತಿ ಎಂದು ಡಾ. ಶಿವರಾಂ ಅವರೇ ಹೇಳಿಕೊಂಡಿದ್ದಾರೆ.

ಇಅವರ ಮನಮಂಥನ ಎಂಬ ಕೃತಿಗೆ 1974 ರಲ್ಲಿ ರಾಜ್ಯ ಸಾಹಿತ್ಯ ಅಕಡೆಮಿಯ ಪ್ರಶಸ್ತಿ ದೊರೆತರೆ
1976 ರಲ್ಲಿ ಅದೇ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದವು.

ರಾಶಿಯವರು ಜನವರಿ 13, 1984ರಂದು ಈ ಲೋಕವನ್ನಗಲಿದರು. ಈಗ ರಾಶಿ ಅವರ ಪುತ್ರ ಶಿವಕುಮಾರ್ ಅವರು ಕೊರವಂಜಿಯ ಹೊಸಾ ವೇಷವಾದ ಅಪರಂಜಿ ( http://aparanjimag.in/) ಪತ್ರಿಕೆಯನ್ನೂ ಈಗಲೂ ನಡೆಸಿಕೊಂಡು ಹೋಗುವುದರ ಮೂಲಕ ತಮ್ಮ ತಂದೆಯವರ ಹಾಸ್ಯಪ್ರಜ್ಞೆಯನ್ನು ಮುಂದುವರಿಸಿಕೊಂಡು ಹೋಗುವುದರ ಮೂಲಕ ರಾಶಿಯವರನ್ನು ಅಪರಂಜಿಯ ಮೂಲಕ ಇಂದಿಗೂ ಜೀವಂತವಾಗಿಟ್ಟಿದ್ದಾರೆ.

ನಗೆಗಾರರಾಗಿ ಸಾಹಿತ್ಯಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ರಾಶಿ ಅವರು ತಮ್ಮ ವಿಶಿಷ್ಟ ಹಾಸ್ಯ ಪ್ರಜ್ಞೆಯ ಮೂಲಕ ಯಾರನ್ನೂ ನೋಯಿಸದೇ ಅವರ ಅಂತರಂಗವನ್ನು ಅವರೇ ನೋಡಿಕೊಂಡು ತಮ್ಮಷ್ಟಕ್ಕೆ ತಾವೇ ನಗುವಂತೆ ಮಾಡಿದ ಲೇಖಕ. ರಾಶಿಯವರ ಜ್ಞಾನದಾಹ ಮತ್ತು ಜೀವನೋತ್ಸಾಹ ಎಂಥವರನ್ನೂ ಬೆರಗುಗೊಳಿಸುವಂಥದ್ದು. ಈ ದೆಸೆಯಿಂದಾಗಿ ಅವರು ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ ಗ್ರಂಥಗಳನ್ನು ನೀಡಿದರು. ಆದ್ದರಿಂದಲೇ ಅವರು ಕನ್ನಡದ ರಸಋಷಿ ಹಾಗಾಗಿಯೇ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s