ಕೆಚ್ಚೆದೆಯ ಹಾಕಿ ಪಟು ಎಂ. ಪಿ. ಗಣೇಶ್

ಯಾವುದೇ ಒಂದು ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟವನ್ನು ತಲುಪುದು ಎಷ್ಟು ಕಷ್ಟ ಎಂದು ಕ್ರೀಡಾಪಟು ಆಗಿದ್ದವರಿಗೆ ತಿಳಿಯುತ್ತದೆ ಇಲ್ಲವೇ ಕ್ರೀಡಾಸಕ್ತರಿಗೆ ತಿಳಿದಿರುತ್ತದೆ. ಇಲ್ಲೊಬ್ಬರು ಎರಡೆರಡು ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ, ಮತ್ತೊಂದು ಕ್ರೀಡೆಯ ಆಡಳಿತಾಧಿಕಾರಿಯಾಗಿ ನಮ್ಮ ರಾಜ್ಯಕ್ಕೆ ಹೆಮ್ಮೆ ತಂದ ವೀರ ಸೇನಾನಿ, ಕೆಚ್ಚೆದೆಯ ಆಟಗಾರ, ಛಲವಂತ ನಾಯಕ, ಅತ್ಯುತ್ತಮ ತರಭೇತಿದಾರ ಮತ್ತು ಸಮರ್ಥ ಕ್ರೀಡಾ ಆಡಳಿತಗಾರರಾಗಿದ್ದ ಹಾಕಿ ಆಟಗಾರ ಶ್ರೀ ಎಂ ಪಿ ಗಣೇಶ್ ಆವರ ಬಗ್ಗೆ ತಿಳಿದುಕೊಳ್ಳೋಣ.

ಕೊಡಗು ಜಿಲ್ಲೆಯ ಮಡಿಕೇರಿಯ ಸುಂಟಿಕೊಪ್ಪದ ಬಳಿಯ ಅಂದಗೋವೆ ಎಂಬ ಗ್ರಾಮದ ಮೊಳ್ಳೆರ ಮನೆತನದ ಪೂವಯ್ಯನವರ ಮಗನಾಗಿ ಜುಲೈ 8, 1948ರಂದು ಗಣೇಶರವರು ಜನಿಸಿದರು. ಮೊಳ್ಳೆರ ಪೂವಯ್ಯ ಗಣೇಶ್ ಎಂಬುದು ಇವರ ಪೂರ್ಣ ಹೆಸರು. ಬಾಲ್ಯದಿಂದಲೂ ಕ್ರೀಡೆಯಲ್ಲಿ ಅತ್ಯಂತ ಚಟುವಟಿಕೆಯಿಂದಿದ್ದ ಗಣೇಶ್ ರವರು ತಮ್ಮ ವಿದ್ಯಾಭ್ಯಾಸವನ್ನು ಮಡಿಕೇರಿಯಲ್ಲಿಯೇ ಮುಗಿಸಿ ನಂತರ ಅಲ್ಲಿಯೇ ಕಾಲೇಜನ್ನೂ ಮುಂದುವರೆಸುತ್ತಾರೆ. ಕಾಲೇಜಿನಲ್ಲಿ ಅವರು ಅತ್ಯುತ್ತಮ ಫುಟ್ಬಾಲ್ ಅಟಕ್ಕೆ ಖ್ಯಾತರಾಗಿ ದಸರಾ ಕ್ರೀಡಾಕೂಟದಲ್ಲಿಯೂ ತಮ್ಮ ಕಾಲೇಜಿನ ಪ್ರಮುಖ ಆಟಗಾರನಾಗಿ ಪಾಲ್ಗೊಂಡು ನಂತರ ತಮ್ಮ ಜಿಲ್ಲಾ ತಂಡದ ಸದಸ್ಯರಾಗಿರುತ್ತಾರೆ.

ದೇಶದ ಸೈನ್ಯಕ್ಕೆ ಕರ್ನಾಟಕದ ಕೊಡಗು ಜಿಲ್ಲೆಯ ಕೊಡುಗೆ ಅಪಾರ. ಕೊಡಗಿನ ಪ್ರತಿ ಮನೆಯಲ್ಲಿಯೂ ದೇಶ ಸೇವೆಗಾಗಿ ಒಬ್ಬರನ್ನು ಮೀಸಲಾಗಿಟ್ಟಿರುತ್ತಾರೆ, ಅಂತೆಯೇ ಗಣೇಶ್ ಅವರೂ ಸಹಾ ತಮ್ಮ ಪಿಯುಸಿ ಮುಗಿಸುವ ಹೊತ್ತಿಗೇ ಭಾರತೀಯ ಸೈನ್ಯಕ್ಕೆ ಸೇರಿಕೊಳ್ಳುತ್ತಾರೆ. ಸೈನ್ಯದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಕ್ರೀಡೆಗೆ ಖಡ್ಡಾಯವಾಗಿ ಸೇರಿಕೊಳ್ಳಲೇ ಬೇಕಾಗಿರುವ ಕಾರಣ ಮತ್ತು ಅವರ ಕೊಡಗಿನಿಂದ ಬಂದಿದ್ದ ಕಾರಣ ಉನ್ನತಾಧಿಕಾರಿಯಾಗಿದ್ದ ನಂದಾ ರವರು ಗಣೇಶ್ ಅವರನ್ನು ಹಾಕಿ ತಂಡಕ್ಕೆ ಸೇರಿಸಿಕೊಳ್ಳುತ್ತಾರೆ. ಹಾಕಿ ಮತ್ತು ಕೊಡಗಿಗೆ ಒಂದು ರೀತಿಯ ಅವಿನಾಭಾವ ಸಂಬಂಧ. ಕೊಡಗಿನ ಅನೇಕ ಹಾಕಿ ಆಟಗಾರರು ಕರ್ನಾಟಕ ಮತ್ತು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅದೇ ರೀತಿ ಗಣೇಶ್ ಅವರೂ ಕೂಡ ತಮ್ಮ ಚುರುಕಾದ ಮತ್ತು ಮಿಂಚಿನ ವೇಗದ ಆಟದಿಂದಾಗಿ ಬಲು ಬೇಗನೇ ಎಲ್ಲರ ಗಮನ ಸೆಳೆದು, ಸರ್ವಿಸಸ್ ತಂಡಕ್ಕೆ ಆಯ್ಕೆಯಾಗಿ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ಪಿನಲ್ಲಿ ಸರ್ವಿಸಸ್ ತಂಡದ ಪರ 1965ರಿಂದ 1970ರವರೆಗೆ ಪ್ರಮುಖ ಆಟಗಾರರಾಗುತ್ತಾರೆ. ಮುಂದೆ 1974ರಲ್ಲಿ ಮುಂಬಯಿ ತಂಡಕ್ಕೆ ಸೇರ್ಪಡೆಯಾಗುತ್ತಾರೆ.

prakash1ರಾಷ್ಟ್ರ ಮಟ್ಟದ ಅನೇಕ ಹಾಕಿ ಪಂದ್ಯಾವಳಿಯಲ್ಲಿ ತಮ್ಮ ವೇಗದ ಮತ್ತು ಬಿರುಸಿನ ಗೋಲ್ ಹೊಡೆಯುವ ಶಕ್ತಿಯುತ ಆಟದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ, ಅಂತರರಾಷ್ಟ್ರೀಯ ಮಟ್ಟದ ಲೈಟ್ ಬ್ಲೂಸ್ ಸ್ಪರ್ಧೆಗೆ ಆಯ್ಕೆಯಾದರು. ಬ್ಯಾಂಕಾಕಿನಲ್ಲಿ 1970ರಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ರಜತ ಪದಕ ಪಡೆದ ಭಾರತದ ಹಾಕಿ ತಂಡದ ಸದಸ್ಯರಾಗಿರುತ್ತಾರೆ. ಜಪಾನ್, ಪಾಕಿಸ್ತಾನ, ಮುಂತಾದ ದೇಶಗಳ ತಂಡಗಳ ವಿರುದ್ಧದ ಅವರ ವೇಗದ ಆಟವನ್ನು ಮೆಚ್ಚಿದ ಅಂದಿನ ಮಾಧ್ಯಮಗಳು ಗಣೇಶ್ ಅವರನ್ನು ಭಾರತದ ಹುಲಿ ಎಂದು ಕರೆಯುತ್ತಾರೆ. 1971ರ ಬಾರ್ಸಿಲೋನ ವಿಶ್ವ ಕಪ್ ಹಾಕಿ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ತಂಡದ ಸದಸ್ಯರಾಗಿರುತ್ತಾರೆ. 1972ರ ಮ್ಯೂನಿಚ್ ಒಲಿಂಪಿಕ್ಸಿನಲ್ಲಿ ಗಣೇಶ್ ಅವರು ತಮ್ಮ ವಿಶಿಷ್ಟ ಆಟದ ಮೂಲಕ ಎಲ್ಲರ ಗಮನ ಸೆಳೆದರಾದರೂ ಅಂತಿಮವಾಗಿ ಕಂಚಿನ ಪದಕಗಳಿಸಲಷ್ಟೇ ಸಾಧ್ಯವಾಗುತ್ತದೆ. ಒಲಂಪ್ಲಿಕ್ಸಿನಿನಲ್ಲಿ ತಮ್ಮ ಪ್ರದರ್ಶನದಿಂದಾಗಿ 1973ರ ಹಾಲೆಂಡ್‌ನ ಆಮ್ಸ್ಟರ್‌ಡ್ಯಾಮ್ ವಿಶ್ವ ಕಪ್‌ ಹಾಕಿ ತಂಡಕ್ಕೆ ಭಾರತ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಾರೆ. ತಮ್ಮ ಅತ್ಯಮೋಘ ಆಟದಿಂದಾಗಿ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸುವುದರಲ್ಲಿ ಬಹುಮುಖ್ಯ ಪಾತ್ರವಹಿಸುತ್ತಾರೆ. ಫೈನಲ್ ಪಂದ್ಯದಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನದ ವಿರುದ್ಧದ ಜಿದ್ದಾಜಿದ್ದಿನ ಪಂದ್ಯ ನಡೆದು ಎರಡೂ ತಂಡಗಳ ಸಮಬಲದಿಂದಾಗಿ ಪಂದ್ಯದ ಗೆಲುವನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಹಂತಕ್ಕೆ ತಲುಪುತ್ತದೆ. ಮೊದಲೇ ಹೈವೋಲ್ಟೇಜ್ ಪಂದ್ಯ ಅದರಲ್ಲೂ ತಂಡ ನಾಯಕನಾಗಿ ಅವರ ಮೇಲಿನ ಜವಾಬ್ಧಾರಿ ಅತ್ಯಂತ ಮಹತ್ತವಾಗಿರುತ್ತದೆ. ಹೀಗಾಗಿ ಪೆನಾಲ್ಟಿ ಶೂಟೌಟ್‌ನ ನಿರ್ಣಾಯಕ ಹೊಡೆತದಲ್ಲಿ ಸ್ವತಃ ಗಣೇಶ್ ಅವರೇ ಗೋಲನ್ನು ಬಾರಿಸಲು ಹೋಗಿ ಒತ್ತಡದಿಂದಾಗಿಯೋ ಅಥವಾ ದುರಾದೃಷ್ಟದಿಂದಾಗಿಯೋ ಏನೋ ಗೋಲುಗಳಿಸಲು ವಿಫಲರಾಗಿ ತಂಡ ಬೆಳ್ಳಿ ಪದಕಕ್ಕೇ ತೃಪ್ತಿಪಡಬೇಕಾಗುತ್ತದೆ ಈ ಘಟನೆ ನನ್ನ ಜೀವನದಲ್ಲಿ ಮರೆಯಲಾರದ ಕ್ಷಣವಾಗಿದೆ. ಇದರಲ್ಲಿ ನಾನು ಗೋಲುಗಳಿಸಿದ್ದರೇ ಭಾರತ ತಂಡ ಗೆಲುವು ಸಾಧಿಸಿ ಚಿನ್ನದ ಪದಕ ಜಯಿಸುತ್ತಿತ್ತು. ನನ್ನ ತಪ್ಪಿನಿಂದಾಗಿ ಈಡೀ ತಂಡವೇ ಸೋಲು ಕಂಡಿದ್ದು ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿತ್ತು ಎಂದು ಸಂದರ್ಶನವೊಂದರಲ್ಲಿ ಸ್ವತಃ ಗಣೇಶ್ ಅವರೇ ಹೇಳಿಕೊಂಡಿದ್ದಾರೆ.

ಗಣೇಶ್ ಅವರ ಪುಟ್ಬಾಲ್ ಆಟದ ಪರಿಣಿತಿ, ಚಾಕಚಕ್ಯತೆ ಮತ್ತು ಸಾಮರ್ಥ್ಯವನ್ನು ಕಂಡು ಇಟಾಲಿಯನ್ ಕ್ಲಬ್ ಆವರನ್ನು ತಮ್ಮ ತಂಡದ ಪರವಾಗಿ ಆಡಲು ಆಹ್ವಾನ ಕೊಡುತ್ತದೆ. ಬಾಲ್ಯದಿಂದಲೂ ಫುಟ್ಬಾಲ್ ಆಟದತ್ತವೇ ಒಲವನ್ನು ಹೊಂದಿದ್ದ ಗಣೇಶ್ ಈ ಆಹ್ವಾನವನ್ನು ಸುವರ್ಣಾವಕಾಶ ಎಂದು ಪರಿಗಣಿಸಿ, ಸೈನ್ಯಕ್ಕೆ ಮತ್ತು ಹಾಕಿ ಆಟಕ್ಕೆ ವಿದಾಯ ಹೇಳಿ ಕೆಲಕಾಲ ವಿದೇಶೀ ಲೀಗಿನಲ್ಲಿ ಫುಟ್ಬಾಲ್ ಆಟವನ್ನೂ ಆಡಿ ತಮ್ಮ ಕ್ರೀಡಾ ನೈಪುಣ್ಯತೆಯನ್ನು ಮೆರೆಸುತ್ತಾರಾದರೂ ಹಲವಾರು ಗಾಯಗಳ ಸಮಸ್ಯೆಯಿಂದಾಗಿ ಅವರು ಎಲ್ಲಾ ರೀತಿಯ ಆಟಕ್ಕೆ ವಿದಾಯ ಹೇಳಿ ಹಾಕಿ ತರಭೇತುರಾರರಾಗುವತ್ತ ಹರಿಸುತ್ತಾರೆ ತಮ್ಮ ಚಿತ್ತ.

1980ರ ಮಾಸ್ಕೋವಿನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಎಮ್ ಎಮ್ ಸೋಮಯ್ಯನವರ ನೇತೃತ್ವದಲ್ಲಿ ಸ್ವರ್ಣಪದಕವನ್ನು ಗೆದ್ದ ಭಾರತೀಯ ತಂಡದ ಕೋಚ್ ಆಗಿದ್ದರು. 1988ರ ಸಿಯೋಲ್‌ ಒಲಿಂಪಿಕ್ಸ್‌ನಲ್ಲಿ ಮತ್ತು 1989ರ ಬರ್ಲಿನ್‍ನಲ್ಲಿನ ಚಾಂಪಿಯನ್ಸ್ ಟ್ರೋಫಿಯಲ್ಲೂ ತಂಡ ತರಭೇತಿದಾರರಾಗಿರುತ್ತಾರೆ. ಳಲ್ಲಿ ಹಾಗೂ ಬ್ಯಾಂಕ್‌ಕಾಕ್‌ನಲ್ಲಿನ ಏಷ್ಯಾ ಕ್ರೀಡೆಗಳಲ್ಲಿ ಭಾರತೀಯ ಹಾಕಿ ಫೆಡರೇಶನ್ನಿನ ಕೋಚಿಂಗ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.

ganeshತಾವು ಹಿಡಿದ ಕೆಲಸವಾಗಲೀ ಅಥವಾ ತಮಗೆ ವಹಿಸಿದ ಕೆಲಸವನ್ನಾಗಲೀ ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ಎಂ. ಪಿ. ಗಣೇಶ್ ಅವರ ಸಾಮರ್ಥ್ಯವನ್ನು ಗಮನಿಸಿದ ಅಂದಿನ ಯುವಜನ ಕ್ರೀಡಾ ಸಚಿವರಾಗಿದ್ದ ಮತ್ತು ಕೊಡಗಿನವರೇ ಆಗಿದ್ದ ಶ್ರೀ ಗುಂಡೂರಾವ್ ಅವರನ್ನು ಯುವಜನ ಕ್ರೀಡಾ ಇಲಾಖೆಯ ನಿರ್ದೇಶಕರಾಗಿದ್ದ ಜೆ. ಆನಂದನ್ ಅವರ ಸಹಾಯಕ ಕ್ರೀಡಾ ಆಡಳಿತಗಾರರಾಗಿ ನೇಮಿಸಿದರು. . ಇವರ ಪ್ರಾಮಾಣಿಕ ಸೇವೆಯ ಫಲವಾಗಿ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಇವರನ್ನು ಆಡಳಿತ ಅಧಿಕಾರಿಯಾಗಿ ನೇಮಕ ಮಾಡುತ್ತಾರೆ ಇಂಫಾಲ್ ಮುಂತಾದ ಕಡೆಗಳಲ್ಲಿ ಕಾರ್ಯ ನಿರ್ವಹಿಸಿದ ನಂತರ ಬೆಂಗಳೂರಿನಲ್ಲಿಯೇ ಇರಲು ಇಷ್ಟಪಟ್ಟ ಗಣೇಶ್ ಅವರನ್ನು ದಕ್ಷಿಣ ಭಾರತದ ರಾಷ್ಟ್ರೀಯ ಕ್ರೀಡಾಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಲಾಯಿತು. 1991ರಿಂದ 2001ರ ವರೆಗೆ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿ, ಕೆಲಕಾಲ ದೆಹಲಿಯಲ್ಲಿಯೂ ಸೇವೆ ಸಲ್ಲಿಸಿದರು. ಒಬ್ಬ ಕ್ರೀಡಾಪಟುವಾಗಿ ಮತ್ತೊಬ್ಬ ಕ್ರೀಡಾಪಟುಗಳ ಅವಶ್ಯಕತೆಗಳನ್ನು ಅರಿತು ಅವರಿಗೆ ಅಗತ್ಯವಿದ್ದ ಎಲ್ಲಾ ರೀತಿಯ ಸೂಕ್ತ ಸೌಲಭ್ಯಗಳನ್ನು ಒದಗಿಸಿಕೊಟ್ಟ ಪರಿಣಾಮವಾಗಿ ಅವರ ಆಡಳಿತಾವಧಿಯಲ್ಲಿಯೇ, ಭಾರತ ತಂಡ 2004ರ ಒಲಿಂಪಿಕ್ಸ್, 2006ರ ಕಾಮನ್ ವೆಲ್ತ್ ಕ್ರೀಡಾ ಕೂಟಗಳಲ್ಲಿ ಹಿಂದಿಗಿಂತಲೂ ಉತ್ತಮ ಫಲಿತಾಂಶದಲ್ಲಿ ಕಂಡಿದ್ದರಲ್ಲಿ ಗಣೇಶ್ ಅವರ ಕೊಡುಗೆ ಮಹತ್ತರವಾದದ್ದು. 2006ರಲ್ಲಿ ರಾಷ್ತ್ರೀಯ ಕ್ರೀಡಾ ಪ್ರಾಧಿಕಾರದ ಸೇವೆಯಿಂದ ನಿವೃತ್ತರಾದ ಗಣೇಶ್ ಬೆಂಗಳೂರಿಗೆ ಹಿಂದಿರುಗಿದರೂ ಅವರನ್ನು ವಿಶ್ರಾಂತ ಜೀವನ ನಡೆಸಲು ಬಿಡದೆ, ಅವರ ಕ್ರೀಡಾಧಿಕಾರಿಯಾಗಿದ್ದ ಕೌಶಲ್ಯವನ್ನು ಕ್ರಿಕೆಟ್ ಆಟದಲ್ಲೂ ಬಳೆಸಿಕೊಳ್ಳಲು ನಿರ್ಥರಿಸಿದ ರಾಜ್ಯ ಕ್ರಿಕೆಟ್ ಸಂಸ್ಥೆ 2009ರಿಂದ ಕೆಲ ಕಾಲ ಅವರನ್ನು ಕರ್ನಾಟಕ ರಾಜ್ಯದ ಕ್ರಿಕೆಟ್ ಸಂಸ್ಥೆಯ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಹುದ್ದೆ ನೀಡಿ ಅವರ ಅಪಾರವಾದ ಕ್ರೀಡಾ ಅನುಭವವನ್ನು ಕ್ರಿಕೆಟ್ಟಿಗರೊಂದಿಗೂ ಹಂಚಿಕೊಳ್ಳುವ ಸುವರ್ಣಾವಕಾಶವನ್ನು ನೀಡಿತು.

ಕ್ರೀಡಾಜಗತ್ತಿನಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ ಗಣೇಶ ಅವರಿಗೆ

  • 1973 ರಲ್ಲಿ ಅರ್ಜುನ ಪ್ರಶಸ್ತಿ
  • 1981ರಲ್ಲಿ ಕರ್ನಾಟಕದ ಬೆಳ್ಳಿ ಮಹೋತ್ಸವ ಕ್ರೀಡಾ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಹೀಗೆ ಹಾಕಿ, ಫುಟ್ಬಾಲ್ ಮತ್ತು ಕ್ರಿಕೆಟ್ ಮೂರೂ ಆಟಗಳಲ್ಲಿಯೂ ತಮ್ಮ ಸಾಧನೆಯನ್ನು ಮೆರೆದ ಎಂ ಪಿ ಗಣೇಶ್ ಅವರು ಕರ್ನಾಟಕದಿಂದ ಹೊರಹೊಮ್ಮಿದ ಅತಿದೊಡ್ಡ ಕ್ರೀಡಾಪಟುಗಳಲ್ಲಿ ಪ್ರಮುಖರಾಗಿದ್ದಾರೆ. ಅವರು ಪ್ರತಿಭಾವಂತ ಕ್ರೀಡಾಪಟು ಮಾತ್ರವಲ್ಲದೆ, ಅವರ ಆಡಳಿತಾತ್ಮಕ ಕುಶಾಗ್ರಮತಿ ಭಾರತೀಯ ಕ್ರೀಡೆಗಳಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದ ಕಾರಣ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s