ಅಂಜನಾದ್ರಿ ಮತ್ತು ಕಿಷ್ಕಿಂದ ಪರ್ವತ

ಜಯ ಹನುಮಾನ್ ಜ್ಞಾನ ಗುಣ ಸಾಗರ!
ಜಯ ಕಪೀಶ ತಿಹುಮ್ ಲೋಕ ಉಜಾಗರ!
ರಾಮ ದೂತ ಅತುಲಿತ ಬಲ ಧಾಮ!
ಅಂಜನೀ ಪುತ್ರ ಪವನ ಸುತ ನಾಮ!

ರಾಮಾಯಣದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ನಂತರ ಅತ್ಯಂತ ಜನಪ್ರಿಯನಾಗಿರುವವನೇ ರಾಮನ ಭಂಟ ಆಂಜನೇಯ. ಮಾಯಾಜಿಂಕೆಯ ಜಾಲದಲ್ಲಿ ಮುಳುಗಿಸಿ ಸೀತಾಮಾತೆಯನ್ನು ಯಾರು ಅಪಹರಿಸಿಕೊಂಡು ಹೋಗಿರಬಹುದು ಎಂದು ವೈದೇಹೀ ಎನಾದಳೋ ಲಕ್ಷ್ಮಣಾ, ನನ್ನ ಸೀತೆಯನ್ನು ನೀವು ನೋಡಿದ್ದೀರಾ? ನೀವು ನೋಡಿದ್ದೀರಾ? ಎಂದು ಗಿಡ ಮರ ಬಳ್ಳಿಗಳನ್ನು, ಪ್ರಾಣಿ ಪಶು ಪಕ್ಷಿಗಳನ್ನು, ನದಿ, ಗಿರಿ ಪರ್ವತಗಳನ್ನು ವಿಚಾರಿಸಿಕೊಂಡು ರಾಮ ಕಾಡು ಮೇಡುಗಳನ್ನು ಅಲೆಯುತ್ತಾ ಉತ್ತರದಿಂದ ದಕ್ಷಿಣದ ಕಡೆ ಬರುತ್ತಿರುವಾಗಲೇ , ರಾಮನ ಬರುವಿಕೆಗಾಗಿ, ರಾಮ… ರಾಮ… ರಾಮ… ಎಂದು ರಾಮ ನಾಮ ಜಪಿಸುತ್ತಾ ಕಾಯುತ್ತಿದ್ದವನೇ ಸಾಕ್ಷಾತ್ ಶಿವನ ಅಂಶವಾದ ಹನುಮಂತ.

ನಮ್ಮ ಪುರಾಣದ ಪ್ರಕಾರ ನಮ್ಮ ಕರ್ನಾಟಕದ ಹಂಪೆಯ ಬಳಿ ತುಂಗಭದ್ರಾ ನದಿಯ ತಟದ ಬೆಟ್ಟಗಳ ತಪ್ಪಲ್ಲಿನಲ್ಲಿಯೇ ವಾಸವಾಗಿದ್ದ ಅಂಜನಾದೇವಿ ಮತ್ತು ವಾನರ ನಾಯಕ ಕೇಸರಿಯರ ಮಗನೇ ಹನುಮಂತ. ಹಾಗೆ ಅಂಜನಾದೇವಿ ವಾಸವಾಗಿದ್ದ ಕಾರಣ ಆ ಬೆಟ್ಟವನ್ನು ಅಂಜನಾದ್ರಿ ಪರ್ವತ ಎಂದೇ ಕರೆಯುತ್ತಾರೆ. ಆಂಜನೇಯನ ಜನನದ ಕುರಿತಾಗಿ ಅನೇಕ ಕಥೆಗಳಿವೆ. ಕಪಿಸೇನೆಯ ನಾಯಕ ಕೇಸರಿ ಅದೊಮ್ಮೆ ಅಂಜನಿಯನ್ನು ಆ ಕಾಡಿನಲ್ಲಿ ನೋಡಿ ಪ್ರೇಮಾಂಕಿತನಾಗಿ ಅವರಿಬ್ಬರ ಪ್ರೇಮದ ಫಲವಾಗಿಯೇ ಆಂಜನೇಯನ ಜನನವಾಗುತ್ತದೆ ಎಂದರೆ ಮತ್ತೊಂದು ಕತೆಯ ಪ್ರಕಾರ ವಾಯುದೇವರು ಅಂಜನಿಯ ಕಿವಿಯ ಮೂಲಕ ಆಕೆಯ ಗರ್ಭ ಸೇರಿದ್ದರಿಂದ ಆಕೆಯು ಗರ್ಭವತಿಯಾಗಿ ಆಂಜನೇಯನ ಜನನಕ್ಕೆ ಕಾರಣವಾಗಿದ್ದಕ್ಕಾಗಿ ಆತನನ್ನು ವಾಯುಪುತ್ರ ಎಂದೂ ಕರೆಯುತ್ತಾರೆ.

whatsapp-image-2019-12-24-at-10.57.01-pm.jpeg

ಹಂಪೆಯಿಂದ ಸುಮಾರು 21 ಕಿಮೀ ದೂರದಲ್ಲಿ ಮತ್ತು ಆನೆಗೊಂದಿಯಿಂದ ಹುಮ್ನಾಬಾದ್ ರಸ್ತೆಯಲ್ಲಿ ಸುಮಾರು 5 ಕಿಮೀ ಪ್ರಯಾಣಿಸುತ್ತಿದ್ದಂತೆಯೇ ಬಲ ಭಾಗದಲ್ಲಿ ಈ ಅಂಜನಾದ್ರಿ ಪರ್ವತವಿದೆ. ಬೆಟ್ಟ ತಲುಪುವವರೆಗೂ ಅತ್ಯುತ್ತಮವಾದ ರಸ್ತೆಯಿದೆ. ಅಡಿಯಿಂದ ಬೆಟ್ಟದ ತುದಿಯವರೆಗೂ ತಲುಪಲು ನೂರಾರು ಮೆಟ್ಟಲುಗಳನ್ನು ಹತ್ತಬೇಕು. ಆರಂಭದಲ್ಲಿ ಸುಲಭವಾಗಿ ಹತ್ತಬಹುದಾದರೂ ಎತ್ತರ ಏರಿದಂತೆಲ್ಲಾ ಸ್ವಲ್ಪ ಕಡಿದಾಗಿದ್ದು ಎತ್ತರವಾಗಿದ್ದು ಏರಲು ತುಸು ತ್ರಾಸದಾಯಕವೇ ಅನಿಸುತ್ತದೆ. ಪ್ರಸ್ತುತವಾಗಿ ಅರ್ಧದಷ್ಟು ಬೆಟ್ಟಕ್ಕೆ ಗ್ರಿಲ್ ಅಳವಡಿಸಿ ಹೊದಿಗೆ ಹಾಕಿರುವ ಪರಿಣಾಮ ಸ್ವಲ್ಪ ಆರಾಮವಾಗಿ ಬಿಸಿಲಿನ ಝಳವಿಲ್ಲದೆ ಹತ್ತಬಹುದಾಗಿದೆ. ಎತ್ತರೆತ್ತರಕ್ಕೆ ಏರಿದಂತೆಲ್ಲಾ ದೇಹಕ್ಕೆ ಅಯಾಸವಾದರೂ ಜೈ ಶ್ರೀರಾಂ ಜೈ ಶ್ರೀರಾಂ ಎಂದು ಜೋರಾಗಿ ಘೋಷಣೆ ಹಾಕುತ್ತಾ ಮೆಟ್ಟಿಲು ಹತ್ತುವ ಭಕ್ತರ ಜೋಶ್ ಜೊತೆ ನಮ್ಮ ಆಯಾಸವೆಲ್ಲವೂ ಪರಿಹಾರವಾಗಿ, ನಮಗರಿವಿಲ್ಲದಂತೆಯೇ ನಾವೂ ಕೂಡಾ ಅವರ ಜೊತೆ ಜೈಶ್ರೀರಾಂ ರಾಮ ನಾಮವನ್ನು ಸ್ಮರಿಸುತ್ತಾ ಹೋದಂತೆ ಬೆಟ್ಟ ಹತ್ತುವುದೇ ಗೊತ್ತಾಗುವುದಿಲ್ಲ. ಅದೂ ಅಲ್ಲದೇ ಅಲ್ಲೇ ಹತ್ತಿರದಲ್ಲೇ ಹರಿಯುವ ತುಂಗಭದ್ರೆಯ ರಮಣೀಯ ದೃಶ್ಯ ಒಂದೆಡೆಯಾದರೇ ಬೆಟ್ಟದ ಸುತ್ತಮುತ್ತಲೂ ಹಸುರನ್ನೇ ಹೊದ್ದಿರುವಂತಹ ಗದ್ದೆಗಳ ನಯನ ಮನೋಹರ ದೃಶ್ಯ ನಮ್ಮ ಕಣ್ಮನಗಳನ್ನು ಸೆಳೆಯುತ್ತಾ ನಮ್ಮ ಆಯಾಸವನ್ನು ಪರಿಹರಿಸುತ್ತದೆ. ಹಾಂ!! ಮತ್ತೊಂದು ವಿಚಾರ. ಅದು ಹೇಳಿ ಕೇಳಿ ಅಂಜನಾದ್ರಿ ಬೆಟ್ಟ ಹಾಗಾಗಿ ಅಲ್ಲಿ ಕಪಿ ಸೇನೆಯ ಕಾಟ ತುಸು ಹೆಚ್ಚೇ ಇದೆ. ಕೈಯಲ್ಲಿ ತಿನ್ನುವ ಪದಾರ್ಥಗಳನ್ನು ಇಟ್ಟುಕೊಂಡು ಹೋದರಂತೂ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಕಪಿಗಳು ಎಗರಿಸಿಕೊಂಡು ಹೋಗಿಬಿಡುತ್ತವೆ. ಅಂತೂ ಇಂತೂ ಕಷ್ಟ ಪಟ್ಟು ಬಂಡೆಗಲ್ಲುಗಳ ನಡುವೆ ಬಾಗುತ್ತ ಏಳುತ್ತಾ ಸಂದುಗಳಲ್ಲಿ ತೂರಿ ಸಾಗುತ್ತಾ ಅಲ್ಲಲ್ಲಿ ಬೆಟ್ಟದಲ್ಲಿ ಜಿನುಗುವ ನೀರಿನ ಝರಿಗಳನ್ನು ದಾಟುತ್ತಾ ಸುಮಾರು 575 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ತುತ್ತ ತುದಿಯನ್ನು ತಲುಪುತ್ತಿದ್ದಂತೆ ಆ ಸುಡುಬಿಸಿಲಿನಲ್ಲೂ ತಣ್ಣನೆಯ ಗಾಳಿ ಮತ್ತು ಆ ಸುತ್ತಮುತ್ತಲಿನ ಪ್ರಕೃತಿಯ ಸೌಂದರ್ಯದ ಮಡಿಲಲ್ಲಿ ನಮ್ಮೆಲ್ಲರ ಆಯಾಸ, ಏದುಸಿರು ತಕ್ಷಣವೇ ಮಾಯವಾಗಿ ಬಿಡುತ್ತದೆ.
WhatsApp Image 2019-12-24 at 10.57.00 PM (1)

anjan2-e1577208207549.jpg

ಬೆಟ್ಟ ಹತ್ತಿ ಪೂರ್ವಭಿಕಮುಖವಾಗಿರುವ ದೇವಸ್ಥಾನದ ಒಳಗೆ ಹೆಜ್ಜೆಗಳನ್ನು ಇಡುತ್ತಲೇ ನಮ್ಮ ಕಣ್ಣಿಗೆ ಕೇಸರಿ ಚೆಂದನಾಲಂಕೃತ ಆಂಜನೇಯನ ಪ್ರತಿಮೆ ಕಾಣುತ್ತಿದ್ದಂತೆಯೇ ನಮಗೇ ಅರಿವಿಲ್ಲದಂತೆಯೇ ಮನೋಜವಂ ಮಾರುತ ತುಲ್ಯ ವೇಗಂ ಜಿತೇಂದ್ರಿಯಂ ಬುಧ್ಧಿಮತಾಂ ವರಿಷ್ಠಂ ವಾತಾತ್ಮಜಂ ವಾನರ ಯೂಥ ಮುಖ್ಯಂ ಶ್ರೀ ರಾಮ ಧೂತಂ ಶಿರಸಾ ನಮಾಮಿ!! ಶ್ಲೋಕವನ್ನು ಪಠಿಸಿದರೆ ಆಶ್ವರ್ಯವೇನಿಲ್ಲ. ಮನಸಾರೆ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಅರ್ಚಕರು ಕೊಡುವ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಹಣೆಗೆ ಚೆಂದನದ ತಿಲಕ ಧರಿಸಿ ಉಳಿದದ್ದನ್ನು ಅಲ್ಲಿಯೇ ಗೋಡೆಗೆ ತೀಡಿ, ಪ್ರದಕ್ಷಿಣಾಕಾರವಾಗಿ ಬಂದರೆ ಅಮೃತಶಿಲೆಯ ಶ್ರೀರಾಮ, ಸೀತೆ ಲಕ್ಷ್ಮಣರೊಡನೆ ಭಕ್ತಿಯಿಂದ ನಮಸ್ಕರಿಸುತ್ತಿರುವ ಆಂಜನೇಯನ ದರ್ಶನವಾಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಬಂದರೆ ಉತ್ತರಾಭಿಮುಖವಾಗಿ ಇರುವ ಅಮೃತಶಿಲೆಯ ಅಂಜನಾದೇವಿಯ ಪ್ರತಿಮೆಯನ್ನು ನೋಡಬಹುದಾಗಿದೆ. ಈ ಎಲ್ಲಾ ದೇವರುಗಳಿಗೆ ನಮಸ್ಕಾರ ಮಾಡಿಕೊಂಡು ಹೊರಗೆ ಬಂದರೆ ಯಥಾಪ್ರಕಾರ ತಿನ್ನಲು ತಮಗೇನಾದರೂ ಸಿಗಬಹುದೇನೋ ಎನ್ನುವಂತೆ ಭಕ್ತಾದಿಗಳ ಆಗಮನಕ್ಕಾಗಿಯೇ ಬಕಪಕ್ಷಿಗಳಂತೆ ಕಾಯುತ್ತಿರುವ ಕಪಿಗಳ ಹಿಂಡುಗಳನ್ನು ನೋಡಬಹುದು.
WhatsApp Image 2019-12-24 at 10.57.00 PM (4)

WhatsApp Image 2019-12-24 at 10.57.00 PM (3)
Anjana devi

WhatsApp Image 2019-12-24 at 10.57.00 PM (2)

ದೇವರ ದರ್ಶನ ಮಾಡಿಕೊಂಡು ಹೊರಬರುತ್ತಿದ್ದಂತೆಯೇ ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳನ್ನು ಅತ್ಯಂತ ರಮಣೀಯವಾಗಿ ಸವಿಯಲು ಅತ್ಯುತ್ತಮವಾದ ಹಿಡಿಕೆಯುಳ್ಳ ವ್ಯವಸ್ಥೆಯನ್ನು ಮಾಡಿದ್ದಾರೆ. ಅದೂ ಅಲ್ಲದೇ ಅಲ್ಲೇ ಪಕ್ಕದಲ್ಲಿಯೇ ಇರುವ ಪಾಕಶಾಲೆಯಲ್ಲಿ ಮಧ್ಯಾಹ್ನ ಸರಿ ಸುಮಾರು 1 ಗಂಟೆಯಿಂದ 3ರವರೆಗೂ ಬರುವ ಭಕ್ತಾದಿಗಳ ಹಸಿವನ್ನು ನೀವಾರಿಸಲು ಪ್ರಸಾದದ ವ್ಯವಸ್ಥೆಯೂ ಇದೆ.

ಹಾಗೆ ಪ್ರಸಾದವನ್ನು ಸ್ವೀಕರಿಸಿ ಸ್ವಲ್ಪ ದೇವಸ್ಥಾನದ ಹಿಂದಿರುವ ಕಡಿದಾದ ಗುಡ್ಡವನ್ನು ಏರಿದರೆ, ಸುಂದರವಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಬಹುದಾಗಿದೆ, ಹಾಗಾಗಿಯೇ ಬಹುತೇಕ ಚಾರಣಿಗರು ಈ ಬೆಟ್ಟಕ್ಕೆ ಮುಂಜಾನೆಯೋ ಇಲ್ಲವೇ ಸಂಜೆಯ ಹೊತ್ತೋ ಆಗಮಿಸುತ್ತಾರೆ. ಈ ಪ್ರದೇಶದಿಂದ ಸುತ್ತಮುತ್ತಲಿನ ಕಿಷ್ಕಿಂದಾ, ಅಂಜನಾದ್ರಿ, ವಿರುಪಾಪುರಗಡ್ಡೆ, ಪಂಪಸರೋವರವನ್ನು ನೋಡಬಹುದಾಗಿದೆ.

ಇಂದಿನ ಯುವಕರಲ್ಲಿ ಧರ್ಮ, ದೇಶ ಭಕ್ತಿಯ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಥಳೀಯ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ಘಟಕವು ಹನುಮ ಜಯಂತಿ ಅಂಗವಾಗಿ ಯುವಕರಿಗೆ ಹನುಮ ಮಾಲೆ ಧರಿಸುವ ಕಾರ್ಯಕ್ರಮವನ್ನು ಇತ್ತೀಚಿನ ವರ್ಷಗಳಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಅನುಗುಣವಾಗಿ ಮಾರ್ಗಶಿರ ಶುದ್ದ ಚತುರ್ಥಿ ಯಿಂದ ಚತುರ್ಧಶಿ ಹನುಮದ್ ವ್ರತದವರೆಗೆ. 11 ದಿನಗಳ ಕಾಲ ಮಾಲಾಧಾರಣೆ ಮಾಡಿ ಶ್ರಧ್ಧೆಯಿಂದ ವ್ರತಾಚರಣೆ ಮಾಡುತ್ತಾ ಹನುಮಜ್ಜಯಂತಿಯಂದು ಅಂಜನಾದ್ರಿ ಬೆಟ್ಟದಲ್ಲಿ ನಡೆಯುವ ಪವಮಾನ ಹೋಮದಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನಾನಂತರ ಮಾಲೆಯ ವಿಸರ್ಜನೆ ಮಾಡುವುದರ ಮೂಲಕ ವ್ರತ ಕೊನೆಗೊಳ್ಳುತ್ತದೆ. ವರ್ಷದಿಂದ ವರ್ಷಕ್ಕೆ ಈ ರೀತಿಯ ಹನುಮಂತನ ವ್ರತಾಧಾರಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಇಂದಿನ ಯುವಜನತೆ ಮತ್ತೆ ದೇಶ ಮತ್ತು ಧರ್ಮದ ಕಡೆ ಆಕರ್ಷಿತರಾಗುತ್ತಿರುವ ಸಂಕೇತ ಎಂದರೂ ತಪ್ಪಾಗಲಾರದು.

WhatsApp Image 2019-12-24 at 11.09.40 PM

ಹುಶಾರಾಗಿ ಕಡಿದಾದ ಮೆಟ್ಟಲುಗಳನ್ನು ಇಳಿದು ಕೆಳಗೆ ಬಂದು ಅಲ್ಲಿಂದ ಪುನಃ ಆನೆಗೊಂದಿ ಕಡೆಗೆ ಸುಮಾರು ಒಂದು ಕಿಮಿ ಬಂದರೆ ಬಲಭಾಗದಲ್ಲಿ ಕಿಷ್ಕಿಂದ ಬೆಟ್ಟ ಅರ್ಥಾತ್ ಶಬರಿಗಿರಿ ಮತ್ತು ಪಂಪಸರೋವರ ಕಾಣಸಿಗುತ್ತದೆ. ಈ ಋಷಿಮುಖ ಬೆಟ್ಟದ ಕುರಿತು ಹೇಳಬೇಕೆಂದರೆ, ನಿಶಾಧ ಬುಡಕಟ್ಟು ಸಮುದಾಯದ ಬೇಟೆಗಾರನ ಮಗಳಾದ ಶಬರಿ ಎಂಬ ಕನ್ಯೆಗೆ ಅವಳ ತಂದೆ ಮದುವೆ ಏರ್ಪಾಡು ಮಾಡಿ ಮಾರನೆಯ ದಿನದ ಮದುವೆಯ ಔತಣಕ್ಕಾಗಿ ನೂರಾರು ಕುರಿಗಳನ್ನು ತರಿಸುತ್ತಾರೆ. ತನ್ನ ಮದುವೆಗಾಗಿ ಅಮಾಯಕ ಪ್ರಾಣಿಗಳ ಬಲಿಯನ್ನು ಇಷ್ಟಪಡದ ಶಬರಿ ಮದುವೆ ದಿನ ಮುಂಜಾನೆ ಯಾರಿಗೂ ಹೇಳದಂತೆ ತನ್ನ ಗುರುಗಳ ದರ್ಶನ ಪಡೆಯಲು ಮನೆಯನ್ನು ಬಿಟ್ಟು ಸುಮಾರು ದಿನಗಳ ಪ್ರಯಾಣದ ನಂತರ ಅವಳಿಗೆ ಋಷಿಮುಖ ಬೆಟ್ಟದಲ್ಲಿ ಋಷಿ ಮಾತಂಗ ಗುರುಗಳ ದರ್ಶನವಾಗುತ್ತದೆ. ತನ್ನ ಗುರುಗಳ ಸೇವೆಯನ್ನು ಮಡುತ್ತಲೇ ದಿನ ಕಳೆಯಲಾರಂಭಿಸುತ್ತಾಳೆ. ಮಾತಂಗ ಋಷಿಗಳು ತಮ್ಮ ಅಂತಿಮ ದಿನಗಳನ್ನು ಎದುರು ನೋಡುತ್ತಿರುವಾಗ, ನಿಮ್ಮಜೊತೆ ನನ್ನನ್ನೂ ಕರೆದುಕೊಂಡು ಹೋಗಿ ಎಂದು ಶಬರಿ ಕೇಳಿಕೊಂಡಾಗ, ಮಾತಂಗ ಮುನಿಗಳು ಮಗಳೇ, ನೀನು ಬಂದ ಕೆಲಸವಿನ್ನೂ ಬಾಕಿ ಇದೆ. ಮುಂದೊಮ್ಮೆ ಶ್ರೀರಾಮ ಚಂದ್ರನ ದರ್ಶನವಾಗುವವರೆಗೂ ನೀನಿಲ್ಲಿ ಕಾಯಲೇ ಬೇಕು ಎಂದು ಹೇಳಿ ತಮ್ಮ ಕೊನೆಯುಸಿರೆಳಿಯುತ್ತಾರೆ. ಅಂದಿನಿಂದ ಕಾದಿರುವಳು ಶಬರಿ ರಾಮ ಬರುವನೆಂದು ತನ್ನ ಪೂಜೆಗೊಳುವನೆಂದು ಕಾಯುತ್ತಾ ಅಲ್ಲಿಯೇ ಇರುವ ಸ್ಪಟಿಕದಂತಹ ನೀರಿನ ಪಂಪ ಸರೋವರದಲ್ಲಿ ಮಿಂದು ಭಕ್ತಿಯಿಂದ ಸುತ್ತಮುತ್ತಲಿನ ಕಾಡು ಮೇಡುಗಳನ್ನು ಅಲೆಯುತ್ತಾ ರಾಮನಿಗಾಗಿಯೇ ಹಣ್ಣು ಹಂಪಲುಗಳನ್ನು ಸಂಗ್ರಹಿಸಿ ಇಟ್ಟು ಲಕ್ಷ್ಮಣರೊಡನೆ ರಾಮ ಬಂದಾಗ ಅತನಿಗೆ ಹಣ್ಣುಗಳನ್ನು ನೀಡಿ ತನ್ನ ಜೀವನವನ್ನು ಅಂತ್ಯ ಗೊಳಿಸಿದ ಕಥೆ ನಮಗೆಲ್ಲರಿಗೂ ತಿಳಿದಿದೆ. ಇದಕ್ಕೆ ಪುರಾವೆ ಎನ್ನುವಂತೆ ಇಲ್ಲಿಯ ಪ್ರದೇಶ ಬೆಟ್ಟ ಗುಡ್ಡಗಳ ನಡುವೆಯೂ ಮರಗಿಡಗಳಿಂದ ದಟ್ಟವಾಗಿದ್ದು ಎರಡು ಕಲ್ಯಾಣಿಗಳಿವೆ ಮತ್ತು ಅದರ ಎದುರಿನಲ್ಲಿಯೇ ವಿಜಯಲಕ್ಶ್ಮೀ ದೇವಸ್ಥಾನವಿದೆ ಮತ್ತತದ ಒಂದು ಬದಿಯಲ್ಲಿ ಶಿವಲಿಂಗದ ದೇವಾಲಯವಿದ್ದರೆ, ಮತ್ತೊಂದು ಬದಿಯಲ್ಲಿ ಶಬರಿ ಪಾದಗಳು ಮತ್ತು ಶ್ರೀರಾಮನ ಪಾದಗಳಿವೆ.

WhatsApp Image 2019-12-24 at 10.57.00 PM

ಸದ್ಯಕ್ಕೆ ಈ ಪ್ರದೇಶದಲ್ಲಿ ಒಬ್ಬ ಸ್ವಾಮೀಜಿಗಳು ನಡಿಸಿಕೊಂಡು ಹೋಗುತ್ತಿದ್ದು ಇಲ್ಲಿಯೂ ಸಹಾ ನಿತ್ಯ ದಾಸೋಹವಾಗುತ್ತದೆ. ಮಧ್ಯಾಹ್ನ 1 ಗಂಟೆಯಿಂದ ಸುಮಾರು 4ರ ವರೆಗೂ ಇಲ್ಲಿ ಪ್ರಸಾದ ವಿತರಣೆಯಾಗುತ್ತದೆ. ಆಂಜನಾದ್ರಿ ಬೆಟ್ಟದಲ್ಲಿ ಸಮಯಾಭಾವದಿಂದಾಗಿ ಸಿಕ್ಕದ ಪ್ರಸಾದ, ನಮಗೆ ಇಲ್ಲಿ ಪುಷ್ಕಳವಾಗಿ ಸಿಹಿ ಹುಗ್ಗಿ(ಬೆಲ್ಲದನ್ನ) ಅನ್ನ ಮತ್ತು ಬೇಳೆ ಸಾರು ತಿನ್ನುವಂತಾಯಿತು. ಊಟವಾದ ನಂತರ ಎಲ್ಲರೂ ತಟ್ಟೆ ಲೋಟಗಳನ್ನು ಯಾರದೇ ಮೇಲ್ವಿಚಾರಣೆ ಇಲ್ಲದಿದ್ದರೂ ಖುದ್ದಾಗಿ ತೊಳೆದಿಡುತ್ತಿದ್ದದ್ದು ಗಮನಾರ್ಹವಾಗಿತ್ತು. ಇಲ್ಲಿಯೂ ಸಹಾ ಕಪಿ ಸೇನೆಯಿಂದ ಎಚ್ಚರಿಕೆ ವಹಿಸುವುವುದು ತುಸು ತ್ರಾಸದಾಯಕವೇ ಸರಿ.

whatsapp-image-2019-12-24-at-10.57.01-pm-1.jpeg

ಈ ಬೆಟ್ಟದ ತಪ್ಪಲಿನಿಂದ ಮತ್ತೊಮ್ಮೆ ಹೆದ್ದಾರಿ ತಲುಪಿ ಬಲಭಾಗಕ್ಕೆ ಆನೆಗೊಂದಿಯ ಕಡೆಗೆ ಸುಮಾರು ಒಂದು ಕಿಮೀ ಪ್ರಯಾಣಿಸಿ ಮತ್ತೊಮ್ಮೆ ಬಲಭಾಗಕ್ಕೆ ತಿರುಗಿದರೆ ಕಿಷ್ಕಿಂದೆ ಬೆಟ್ಟದ ಮತ್ತೊಂದು ಬದಿಯನ್ನು ತಲುಪಬಹುದಾಗಿದೆ. ಇಲ್ಲಿ ಸುಮಾರು ಮುಕ್ಕಾಲು ಭಾಗ ನಮ್ಮ ವಾಹನಗಳು ಹೋಗಬಹುದಾಗಿದ್ದು ಅಲ್ಲಿಂದ ಸುಮಾರು ನೂರರಿಂದ ನೂರೈವತ್ತು ಸರಳ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋದರೆ ದುರ್ಗೀದೇವಸ್ಥಾನ ಸಿಗುತ್ತದೆ ಮತ್ತು ಅದರ ಪಕ್ಕದಲ್ಲಿಯೇ ದೇಸೀ ಗೋಶಾಲೆಯೂ ಇದೆ. ಇಲ್ಲೂ ಸಹಾ ಭಕ್ತಾದಿಗಳಿಗೆ ಮಧ್ಯಾಹ್ನ 2ರ ಹೊತ್ತಿಗೆ ದಾಸೋಹದ ವ್ಯವ್ಯಸ್ಥೆಯಿದೆ. ದುರ್ಗೀ ದೇವಾಲಯದ ಹಿಂದೆ ಸುಮಾರು ಅರ್ಧ ಕಿಮೀ ನಡೆದರೆ, ವಾಲಿ ಗುಹೆಸಿಗುತ್ತದೆ.

ವಾಲಿ ಮತ್ತು ಸುಗ್ರೀವರಿಬ್ಬರೂ ಅಣ್ಣತಮ್ಮಂದಿರು ಅದೊಮ್ಮೆ ದುಂದುಭಿ ಎಂಬ ಅಸುರನು ವಾಲಿಯೊಂದಿಗೆ ಕಾಲು ಕೆರೆದುಕೊಂದು ಯುದ್ಧಕ್ಕೆ ಬಂದು ಯುದ್ಧದಲ್ಲಿ ದುಂದುಭಿಯನ್ನು ಕೊಂದ ವಾಲಿಯು ಕೋಪದಿಂದ ಅವನ ದೇಹವನ್ನು ಆಕಾಶದಿಂದ ಸುಮಾರು ದೂರ ಎಸೆಯುತ್ತಾನೆ. ಹಾಗೆ ದೇಹವನ್ನು ಎಸೆದಾಗ ದೇಹದ ಕೆಲವು ಹನಿ ರಕ್ತವು ಮಾತಂಗ ಋಷಿಯ ಆಶ್ರಮದ ಮೇಲೆ ಬೀಳುತ್ತದೆ. ಆಶ್ರಮದ ಮೇಲೆ ಬಿದ್ದ ರಕ್ತವನ್ನು ನೋಡಿದ ಋಷಿಯು ಕೋಪಗೊಂಡು, ವಾಲಿಯು ಋಷ್ಯಮುಖ ಪರ್ವತದ ಮೇಲೆ ಕಾಲಿಟ್ಟರೆ ತಲೆ ಸಾವಿರ ಹೋಳಾಗಲಿ ಎಂದು ಶಾಪವನ್ನು ನೀಡುತ್ತಾರೆ.

ದುಂದುಭಿಯ ಮರಣದ ಸುದ್ದಿ ಕೇಳಿದ ಅವನ ಸಹೋದರ ಮಾಯಾವಿಯು ವಾಲಿಯ ಮೇಲೆ ಯುದ್ಧಕ್ಕೆ ಬಂದು, ವಾಲಿಯ ಮುಷ್ಠಿ ಪ್ರಹಾರವನ್ನು ತಡೆಯಲಾಗದೇ ಒಂದು ದೊಡ್ಡ ಗುಹೆಯೊಂದರಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ವಾಲಿ ತನ್ನ ತಮ್ಮ ಸುಗ್ರೀವನನ್ನು ಗುಹೆಯ ಹೊರಗೆ ನಿಲ್ಲಿಸಿ, ತಾನು ಹೊರಗೆ ಬರುವವರೆಗೂ ಇಲ್ಲಿಯೇ ಕಾಯುತ್ತಿರ ಬೇಕೆಂದು ತಿಳಿಸಿ ಮಾಯಾವಿಯನ್ನು ಕೊಂದೇ ತೀರುತ್ತೇನೆಂದು ಫಣ ತೊಟ್ಟು ಗುಹೆಯನ್ನು ಪ್ರವೇಶಿಸುತ್ತಾನೆ.

ಸುಮಾರು ಹದಿನೈದು ದಿಗಳು ಕಳೆದರೂ ಅಣ್ಣ ವಾಲಿಯು ಗುಹೆಯಿಂದ ಹೊರಗೆ ಬಾರದಿರುವುದನ್ನು ಕಂಡು ಸುಗ್ರೀವನಿಗೆ ಭಯ ಉಂಟಾಗುತ್ತದೆ. ಅದೇ ಸಮಯದಲ್ಲಿ ಗುಹೆಯಿಂದ ರಕ್ತದೋಕುಳಿ ಹರಿದು ಬರುವುದನ್ನು ಕಂಡು ತನ್ನ ಅಣ್ಣ ಅಸುನೀಗಿರಬೇಕೆಂದು ತಿಳಿದು ರಾಕ್ಷಸ ಪುನಃ ಹೊರಬಾರದಿರಲೆಂದು ಆ ಗುಹೆಯ ದ್ವಾರವನ್ನು ದೊದ್ಡದಾದ ಬಂಡೆಯೊಂದರಿಂದ ಮುಚ್ಚಿ,ಬಹಳ ದುಃಖದಿಂದ ಭಾರವಾದ ಹೃದಯದೊಂದಿಗೆ ಕಿಷ್ಕಿಂಧೆಗೆ ಮರಳುತ್ತಾನೆ.

ಆದರೆ ಗುಹೆಯೊಳಗೆ ನಡೆದ ವಿಷಯವೇ ಬೇರೆಯದಾಗಿರುತ್ತದೆ. ಬಲು ದಿನಗಳ ಹೋರಾಟದ ಫಲವಾಗಿ ವಾಲಿಯು ಮಾಯಾವಿಯನ್ನು ಕೊಂದು ಗುಹೆಯಿಂದ ಹೊರಬರುತ್ತಿದ್ದಂತೆ ಗುಹೆಯ ಬಾಗಿಲಲ್ಲಿ ಅಡ್ಡವಾಗಿರುವ ಬಂಡೆಯನ್ನು ನೋಡಿ ಕೋಪಗೊಂಡು ಸುಗ್ರೀವನನ್ನು ಕರೆಯುತ್ತಾನೆ. ಎಷ್ಟೇ ಕೂಗಿಕೊಂಡರೂ ಆಕಡೆಯಿಂದ ಸುಗ್ರೀವನಿಂದ ಯಾವುದೇ ರೀತಿಯ ಉತ್ತರ ಬಾರದಿದ್ದಾಗ ಕೋಪಗೊಂಡು ತನ್ನ ಶಕ್ತಿಯಿಂದ ಆ ಬಂಡೆಯನ್ನು ಕುಟ್ಟಿ ಪುಡಿ ಮಾಡಿ ಹೊರಬಂದು ನಂತರ ತಮ್ಮನಿಗೇ ಶತೃವಾಗುತ್ತಾನೆ. ಆನಂತರ ಅಣ್ಣನ ಕೋಪದಿಂದ ಭಯಗೊಂಡು ಮಾತಂಗ ಋಷಿಯ ವಾಲಿಯ ಮೇಲಿನ ಶಾಪವನ್ನು ನೆನೆದು ಮಾತುಂಗ ಋಷಿಯ ಆಶ್ರಯ ಸೇರಿ ಕೊನೆಗೆ ರಾಮನ ಭೇಟಿಯಾಗಿ, ರಾಮ ಹಿಂದಿನಿಂದ ವಾಲಿಯನ್ನು ಸಂಹರಿಸಿದ ಕಥೆ ನಮಗೆಲ್ಲರಿಗೂ ತಿಳಿದಿದೆ.

whatsapp-image-2019-12-24-at-10.57.01-pm-2.jpeg

ದುಂದುಭಿಯ ತಮ್ಮ ಮಾಯಾವಿಯೊಂದಿಗೆ ವಾಲಿ ಹೋರಾಟ ಮಾಡಿದ ಗುಹೆ ಇದೇ ಎಂದು ಇಲ್ಲಿಯ ಜನರ ನಂಬಿಕೆಯಾಗಿದೆ. ಆ ಗುಹೆಯ ಪಕ್ಕದಲ್ಲಿಯೇ ನಿಂತಿರುವ ಗಣಪ ಅದರ ಪಕ್ಕದಲ್ಲಿಯೇ ನವಗ್ರಹ ವೃಕ್ಷಗಳು ಮತ್ತು ಅದರ ಹಿಂದೆ ತಪಸ್ಸು ಮಾಡುತ್ತಾ ಕುಳಿತಿರುವ ಆಂಜನೇಯನ ಸಣ್ಣ ದೇವಸ್ಥಾನಗಳಿವೆ. ಅಲ್ಲಿಂದ ಸ್ವಲ್ಪ ದೂರ ಕಡಿದಾದ ಪ್ರದೇಶದಲ್ಲಿ ನಡೆದರೆ ಹುತ್ತವೊಂದಿದೆ. ಇಲ್ಲಿಯೂ ಸಹಾ ವಾನರ ಸೇನೆಯ ಕಾಟ ತಪ್ಪಿದ್ದಲ್ಲ.

ಸಾವಿರಾರು ರೂಪಾಯಿಗಳನ್ನು ಖರ್ಚುಮಾದಿಕೊಂಡು ಮಲ್ಟೀಪ್ಲೆಕ್ಸ್ ಗಳಲ್ಲಿ ಫ್ಯಾಂಟಸಿ ಸಿನಿಮಾ ನೋಡಲು ಮಕ್ಕಳನ್ನು ಕರೆದುಕೊಂಡು ಹೋಗುವ ಜೊತೆಗೆ ಇಂತಹ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಪ್ರದೇಶಗಳಿಗೂ ನಮ್ಮಮಕ್ಕಳನ್ನು ಕರೆದುಕೊಂಡು ಹೋಗೋಣ. ನಮ್ಮ ಮಕ್ಕಳಿಗೂ ನಮ್ಮ ಪುರಾಣಗಳ ಬಗ್ಗೆ ನಂಬಿಕೆ ಹೆಚ್ಚಾಗಿ ನಮ್ಮ ಪುರಾಣಗಳ ಬಗ್ಗೆ ಮತ್ತದರ ಮೌಲ್ಯಗಳ ಬಗ್ಗೆ ಗೌರವ ಹೆಚ್ಚಿಸುವಂತೆ ಮಾಡಿದರೆ ನಮ್ಮ ದೇಶವನ್ನು ಯಾವ ದುಷ್ಟ ಶಕ್ತಿಗಳಿಂದಲೂ ವಿಭಜಿಸಲು ಸಾಧ್ಯವಾಗದು ಅಲ್ಲವೇ?

ಏನಂತೀರೀ?

One thought on “ಅಂಜನಾದ್ರಿ ಮತ್ತು ಕಿಷ್ಕಿಂದ ಪರ್ವತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s