ದಾಸಯ್ಯ

WhatsApp_Image_2020-07-30_at_2-removebg-preview (14)ಬಿಳಿ ಪಂಚೆ, ಬಿಳಿ ಜುಬ್ಬಾ ಅಥವಾ ಷರಾಯಿ ಹಾಕಿಕೊಂಡು ತಲೆಯಮೇಲೆ ಸುತ್ತಿದ ಒಂದು ಪೇಟ ಹಣೆಯಲ್ಲಿ ಒಂದು ಅಥವಾ ಮೂರು ಗೆರೆಗಳ ನಾಮ ಹಾಕಿಕೊಂಡು ಎಡಗೈಯಲ್ಲಿ ಉರಿಯುತ್ತಿರುವ ದೀಪದ ಕಂಬ, ಬಲಗೈಯ್ಯಿಗೆ ಜಾಗಟೆ ಕಟ್ಟಿಕೊಂಡು ಕೈಗಳಲ್ಲಿ ಕೆಲವೊಮ್ಮೆ ಕಹಳೆ ಮತ್ತು ಹೆಚ್ಚಿನ ಬಾರಿ ಶಂಖವನ್ನು ಇಟ್ಟುಕೊಂಡು ಎರಡೂ ತೋಳುಗಳಿಗೆ ಜೋಳಿಗೆ ಏರಿಸಿಕೊಂಡು ಎಲ್ಲರ ಮನೆಯ ಮುಂದೆ ಬಂದು ನಿಂತು ವೇಂಕಟರಮಣ ಸ್ವಾಮಿ ಪಾದಕ್ಕೆ ಗೋವಿಂದಾ! ಗೋವಿಂದಾ!! ಆಂಜನೇಯ ವರದಸ್ವಾಮಿ ಗೋವಿಂದಾ!! ಗೋವಿಂದಾ!! ಎಂದು ಜೋರಾಗಿ ಭಗವಂತನ ನಾಮ ಸ್ಮರಣೆ ಮಾಡುತ್ತಾ , ಜೋರಾಗಿ ಕಹಳೆಯನ್ನೂ ಇಲ್ಲವೇ ಭಂ ಭಂ ಭಂ ಎಂದು ಶಂಖವನ್ನು ಊದುತ್ತಾ, ಡಣ್ ಡಣ್ ಎಂದು ಜಾಗಟೆ ಬಾರಿಸಿದರೆ ಮನೆಯೊಳಗಿದ್ದ ಮಕ್ಕಳೆಲ್ಲರೂ ಓಹೋ!!! ದಾಸಯ್ಯ ಬಂದಾ! ದಾಸಯ್ಯ ಬಂದಾ! ಎಂದು ಮನೆಯ ಮುಂಬಾಗಿಲ ಬಳಿ ಓಡಿ ಬಂದು ದಾಸಯ್ಯನ ಕಹಳೆ ಇಲ್ಲವೇ ಶಂಖನಾದವನ್ನು ಕೇಳುತ್ತಾ ನಿಂತರೆ, ಮನೆಯ ಹೆಂಗಳೆಯರು, ಮನೆಯಿಂದ ರಾಗಿ ಹಿಟ್ಟನ್ನೋ ಅಥವಾ ಅಕ್ಕಿಯನ್ನು ಪಾವು ಇಲ್ಲವೇ ಚಿಕ್ಕ ಮೊರದಲ್ಲಿಟ್ಟುಕೊಂಡು ಜೊತೆಗೆ ದಕ್ಷಿಣೆ ಮತ್ತು ಉರಿಯುವ ದೀಪದ ಕಂಬಕ್ಕೆ ಬತ್ತಿ ಮತ್ತು ಎಣ್ಣೆಯನ್ನು ತಂದು, ಅಕ್ಕಿ ಇಲ್ಲವೇ ರಾಗಿ ಹಿಟ್ಟನ್ನು ದಾಸಯ್ಯನ ಜೋಳಿಗೆ ಹಾಕಿ ದೀಪದ ಕಂಬಕ್ಕೆ ಎಣ್ಣೆ ಹಾಗಿ ಜಾಗಟೆಯಮೇಲೆ ದಕ್ಷಿಣೆ ಇಟ್ಟು ಭಕ್ತಿಪೂರ್ವಕವಾಗಿ ಎಲ್ಲರೂ ನಮಸ್ಕರಿಸಿದರೆ ಅದಕ್ಕೆ ಪ್ರತಿಯಾಗಿ ದಾಸಯ್ಯನೂ ಮತ್ತೊಮ್ಮೆ ಭಕ್ತಿಪೂರ್ವಕವಾಗಿ ಪ್ರತಿವಂದಿಸುತ್ತಾ ಮನೆಯವರನ್ನೆಲ್ಲರನ್ನೂ ಕಾಪಾಡೋ ಗೋವಿಂದಾ ಎಂದು ಹರೆಸುತ್ತಾ ಮತ್ತೊಂದು ಮನೆಯತ್ತಾ ಹೆಜ್ಜೆ ಹಾಕುತ್ತಾರೆ.

ದಾಸಯ್ಯ ಎಂಬುವರು ಹಳ್ಳಿಗಾಡಿನಲ್ಲಿ ಜನ ಸಾಮಾನ್ಯರಿಗೂ ಮತ್ತು ಭಗವಂತನಿಗೂ ನಡುವಿನ ಕೊಂಡಿ ಅರ್ಥಾತ್ ಜನಪದ ಪುರೋಹಿತ. ಊರಿನ ಯಾವುದೇ ಮನೆಯಲ್ಲಿ ಸಭೆ ಸಮಾರಂಭಗಳಾಗಲೀ ಅಥವಾ ಸಾವು ನೋವುಗಳಾಗಲೀ ಅಲ್ಲಿ ದಾಸಯ್ಯ ಇರಲೇಬೇಕು. ಯಾರಮನೆಯಲ್ಲಿ ಸಾವಾದರೂ ಹೆಣವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ಮುನ್ನ ನಡೆಯುವ ವಿಧಿವಿಧಾನಗಳಿಗೆ ದಾಸಯ್ಯನದೇ ಪೌರೋಹಿತ್ಯ. ಅದೇ ರೀತಿ ಮನೆಯ ಸೂತಕ ಕಳೆದ ನಂತರ, ಮನೆಮಠಗಳನ್ನು ಶುದ್ಧಿ ಮಾಡಲು ದಾಸಯ್ಯನಿರಲೇ ಬೇಕು. ಇನ್ನು ಶುಭ ಸಮಾರಂಭಗಳಲ್ಲಿ ಊರಿನ ಜಾತ್ರೆಗಳಲ್ಲಿ ಪಂಕ್ತಿ ಭೋಜನದಲ್ಲಿ ಕುಳಿತವರಿಗೆಲ್ಲರಿಗೂ ಮಾಡಿದ ಅಡುಗೆಯನ್ನು ಬಡಿಸಿದ ನಂತರ ದಾಸಯ್ಯ ಬಂದು ಎಡೆ ಪೂಜೆ ಮಾಡಿ ಗೋವಿಂದ.. ಗೋವಿಂದಾ.. ಶ್ರೀ ಆಂಜನೇಯ ವರದ ಗೋವಿಂದಾ ಗೋವಿಂದ, ಶ್ರೀರಂಗನಾಥ ಸ್ವಾಮಿ ಪಾದವೇ ಗತಿ ಗೋವಿಂದಾ ಗೋವಿಂದ , ಆ ಊರಿನ ಗ್ರಾಮದೇವರ ಹೆಸರಿಗೂ ಗೋವಿಂದಾ ಹೇಳುತ್ತಿದ್ದರೆ, ಪಂಕ್ತಿಯಲ್ಲಿ ಕುಳಿತವರೆಲ್ಲರೂ ಒಕ್ಕೊರಲಿನಿಂದ ದಾಸಯ್ಯನ ಜೊತೆಗೆ ಗೋವಿಂದಾ.. ಗೋವಿಂದಾ.. ಎಂದು ಧ್ವನಿ ಸೇರಿಸಿದ ನಂತರ, ಮನೆಯ ಯಜಮಾನರತ್ತ ತಿರುಗಿ ಹೂಂ!! ದಾಸಪ್ಪನ ಅಪ್ಪಣೆ ಆಯ್ತು ಎಂದ ಮೇಲೆಯೇ ಎಲ್ಲರೂ ಊಟಕ್ಕೆ ಕೈಹಾಕುವುದು ನಡೆದು ಬಂದ ಸಂಪ್ರದಾಯ. ಅಕಸ್ಮಾತ್ ದಾಸಯ್ಯನ ಗೋವಿಂದಾ ಹೇಳುವ ಮೊದಲೇ ಚಿಕ್ಕ ಮಕ್ಕಳು ಅಥವಾ ದೊಡ್ದವರೇನಾದರೂ ಅಪ್ಪಿ ತಪ್ಪಿ ಊಟಕ್ಕೆ ಕೈ ಹಾಕಿದ್ದನ್ನು ಯಾರದರೂ ಕಂಡರೆ, ಥೂ!! ಅದೇನೂ ಅನ್ನಾ ಕಂಡಿಲ್ಲದ ಹಾಗೆ ಆಡ್ತಿ? ಸ್ವಲ್ಪ ದಾಸಯ್ಯ ಗೋವಿಂದಾ ಹೇಳೋವರೆಗೂ ತಡಿಯಬಾರ್ದೇ? ಎಂದು ಗದುರುತ್ತಿದ್ದದ್ದು ಸರ್ವೇ ಸಾಮಾನ್ಯವಾಗಿತ್ತು.

ಮನೆಯ ಮುಂದೆ ದಾಸಯ್ಯ ಬಂದಾಗ ಗಮನಿಸದಿದ್ದರೂ ಇಂತಹ ಸಭೆ ಸಮಾರಂಭಗಳಲ್ಲಿ ಮಾತ್ರ ದಾಸಯ್ಯನ ಪಾತ್ರ ಹೆಚ್ಚೇ ಇರುತ್ತಿತ್ತು ಮತ್ತು ದಾಸಯ್ಯನನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಅದಕ್ಕೇ ಏನೋ ಈಗಲೂ ಯಾವುದೇ ಸಭೆ ಸಮಾರಂಭಗಳಲ್ಲಿ ಅಥವಾ ಯಾರದೇ ಮನೆಗೆ ಹೋದಾಗ ಅವರನ್ನು ಸರಿಯಾಗಿ ಮಾತನಾಡಿಸದೇ ಅಥವಾ ಅವರತ್ತ ಗಮನಕೊಡದೇ ಹೋದಾಗ, ನೀವ್ಯಾವೂರು ದಾಸಯ್ಯ ಅಂಥಾನೂ ಕೇರ್ ಮಾಡ್ಲಿಲ್ಲಾ ಅಂತಾ ಹೇಳುವುದು ಸಹಜವಾಗಿದೆ.

ಹೀಗೆ ದಾಸಯ್ಯ ಎಂಬುವರು ಪುರದ ಹಿತವನ್ನು ಬಯಸುವ ಪುರೋಹಿತನಾದರೂ ಬ್ರಾಹ್ಮಣನಲ್ಲ. ಶುಭ ಮತ್ತು ಅಶುಭಗಳ ವಿಧಿ ವಿಧಾನಗಳನ್ನು ಮಾಡಿಸುವನಾದರೂ ಮಂತ್ರ ತಂತ್ರ ಕಲಿತವನಲ್ಲ. ದಾಸನೆಂದರೆ ಭಗವಂತನ ಭಕ್ತ ಅಥವಾ ಭಗವಂತನ ಸೇವೆ ಮಾಡುವವ ಎಂದರ್ಥ, ಅಂತೆಯೇ ನಮ್ಮಲ್ಲಿ ಪುರಂದರದಾಸರು, ಕನಕದಾಸರಂತಹ ದಾಸವರೇಣ್ಯರು ಇದ್ದರೂ ಈ ಜನಪದ ದಾಸಯ್ಯ ಅವರಂತೆ ಕೀರ್ತನೆ ಹಾಡುವುದಿಲ್ಲವಾದರೂ ಅವರಂತೆಯೇ ಭಗವಂತನ ಸಂಕೀರ್ತನೆಯಂತೂ ಮಾಡುತ್ತಾರೆ.

ನಮ್ಮ ದೇಶ ಹೆಸರಿಗಷ್ಟೇ ಜಾತ್ಯಾತೀತ ದೇಶವಾದರೂ ಇಲ್ಲಿ ಪ್ರತಿಯೊಂದಕ್ಕೂ ಜಾತಿಯದೇ ಕಾರುಬಾರು. ನಮ್ಮಲ್ಲಿ ಸಾವಿರಾರು ಜಾತಿಗಳು ಮತ್ತು ಲಕ್ಷಾಂತರ ಉಪಜಾತಿಗಳಿವೆ. ಅಂತಹ ಒಂದು ಜಾತಿಗೆ ಸೇರಿದವರೇ ಈ ದಾಸಯ್ಯನವರು. ಬಹುತೇಕ ಇಂತಹ ದಾಸಯ್ಯರನ್ನು ಕರ್ನಾಟಕ ಮತ್ತು ಆಂಧ್ರ ಪ್ರದೇಶಾದ್ಯಂತ ಹೆಚ್ಚಾಗಿ ಕಾಣಬಹುದಾಗಿದೆ. ಇವರುಗಳೆಲ್ಲ ತಿರುಪತಿ ತಿಮ್ಮಪ್ಪನ ಒಕ್ಕಲಿನವರು ಮತ್ತು ಇವರಲ್ಲಿಯೂ ಅನೇಕ ಉಪಜಾತಿಯವರಿದ್ದಾರೆ. ಊರಿನ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಹೇಗೆ ಕುಲಪುರೋಹಿತರು ಇರುತ್ತಾರೋ ಹಾಗೆಯೇ ಇವರೂ ಸಹಾ ತಮ್ಮ ಸುತ್ತಮುತ್ತಲಿನ ಹಳ್ಳಿಗಳ ದಾಸಯ್ಯರಾಗಿದ್ದು ಕೊಂಡು ಪ್ರತೀ ದಿನ ಒಂದೊಂದು ಹಳ್ಳಿಗಳಿಗೆ ಹೋಗಿ ಅಲ್ಲಿ ಸಂಗ್ರಹವಾದ ದವಸದಾನ್ಯಗಳು ಮತ್ತು ದುಡ್ಡು ಮತ್ತು ಸಭೆ ಸಮಾರಂಭಗಳಲ್ಲಿ ಕೊಟ್ಟ ದಕ್ಷಿಣೆ ಕಾಸಿನಿಂದಲೇ ಜೀವನ ಸಾಗಿಸುತ್ತಾರೆ. ಶ್ರಾವಣಮಾಸ ಬಂದಿತೆಂದರೆ ಈ ದಾಸಯ್ಯನವರಿಗೆ ಸುಗ್ಗಿಯ ಕಾಲ. ಅದರಲ್ಲೂ ಶ್ರಾವಣ ಶನಿವಾರ ಯಾವುದೇ ಮನೆಗೆ ಹೋದರೂ ಬರಿಗೈಯ್ಯಲ್ಲಿ ಕಳುಹಿಸಲಾರರು.

ಪ್ರತೀ ವರ್ಷದ ಶ್ರಾವಣ ಮಾಸದ ಶ್ರಾವಣ ಶನಿವಾರದಂದು ನಮ್ಮ ಮನೆಗೂ ಒಬ್ಬ ದಾಸಯ್ಯ ಬರುತ್ತಿದ್ದರು. ಮನೆಯ ಮುಂದೆ ಡಣ್ ಡಣ್ ಎಂದು ಜಾಗಟೆ ಸದ್ದಾಗುತ್ತಿದ್ದಂತೆಯೇ ನಮ್ಮ ವಯಸ್ಸಾದ ತಂದೆಯವರು ಪುಟ್ಟ ಮಗುವಿನಂತೆ ತಮ್ಮ ಪುಟ್ಟ ಮೊಮ್ಮಕ್ಕಳನ್ನು ಕರೆದುಕೊಂಡು ದಾಸಯ್ಯನ ಬಳಿಗೆ ಬಂದು ದಾಸಯ್ಯನ ಶಂಖನಾದ, ಕಹಳೆಯನಾದವನ್ನು ಮೊಮ್ಮಕ್ಕಳಿಗೆ ಪರಿಚಯಿಸಿ, ಮೊಮ್ಮಕ್ಕಳ ಕೈಯ್ಯಲ್ಲಿ ಹತ್ತೋ, ಇಪ್ಪತ್ತೋ ರೂಪಾಯಿಗಳನ್ನು ಜಾಗಟೆಯ ಮೇಲೆ ಇಟ್ಟರೆ ದಾಸಯ್ಯನಿಗೂ ಮತ್ತು ನಮ್ಮ ತಂದೆಯವರಿಗೂ ಅದೇನೋ ಸಂತೋಷ ಸಂತೃಪ್ತಿ. ಅಷ್ಟರೊಳಗೆ ನಮ್ಮ ತಾಯಿಯವರೋ ಇಲ್ಲವೇ ನಮ್ಮಾಕಿಯೂ ಪಾವು ಭರ್ತಿ ಅಕ್ಕಿಯನ್ನು ದಾಸಯ್ಯನ ಜೋಳಿಗೆ ಹಾಕುತ್ತಿದ್ದಂತೆಯೇ ಮತ್ತೊಮ್ಮೆ ಜೋರಾಗಿ ಜಾಗಟೆ, ಶಂಖನಾದ ಕಹಳೆಯನ್ನೂದಿ, ಗೋವಿಂದ ನಾಮಸ್ಮರಣೆ ಮಾಡಿ ಭಕ್ತಿಯಿಂದ ಹರೆಸಿ ಹೋಗುತ್ತಿದ್ದರು ದಾಸಯ್ಯ.

WhatsApp_Image_2020-07-30_at_2-removebg-preview (5)ಇತ್ತೀಚೆಗೆ ಇಂತಹ ದಾಸಯ್ಯನವರು ಮನೆಯ ಮುಂದೆ ಬರುವುದೂ ಕಡಿಮೆಯೇನು ಇಲ್ಲವೇ ಇಲ್ಲದಾಗಿದೆ. ಈಗ ಬರುವವರು ನಿಜವಾದ ದಾಸಯ್ಯರಿಗಿಂತ ಭಿಕ್ಷೆಗೆ ಬೇಡುವ ದಾಸಯ್ಯರಾಗಿದ್ದಾರೆ. ಆದರೂ ಅದೇನೋ ಇಂದು ಬೆಳಿಗ್ಗೆ ಅಪರೂಪಕ್ಕೆ ನಮ್ಮ ಮನೆಯ ಮುಂದೆ ದಾಸಯ್ಯನ ಜಾಗಟೆ ಶಬ್ಧ ಕೇಳಿದೊಡನೆಯೇ ಕಣ್ಣಂಚಿನಲ್ಲಿ ನನಗೇ ಅರಿವಿಲ್ಲದೇ ಅಪ್ಪನ ನೆನೆಪಾಗಿ ನೀರೂರಿತು. ಮೆಲ್ಲನೆ ಕಣ್ಣೊರಿಸಿಕೊಂಡು ಪರ್ಸಿನಿಂದ ದುಡ್ಡನ್ನು ತೆಗೆದುಕೊಂಡು ಅಡುಗೆ ಮನೆಗೆ ಹೋಗಿ ಪಾವಿನಲ್ಲಿ ಅಕ್ಕಿಯನ್ನು ತುಂಬಿಕೊಂಡು ದಾಸಯ್ಯನ ಜೋಳಿಗೆಗೆ ಹಾಕಿ ಜಾಗಟೆಯ ಮೇಲೆ ದಕ್ಷಿಣೆ ಇಟ್ಟಾಗ ಮನಸ್ಸಿಗೇನೋ ನೆಮ್ಮದಿ.  ಹಾಗೇ ಅವರನ್ನು ಮಾತನಾಡಿಸಿದಾಗ ಅವರ ಹೆಸರು ಶಂಕರಪ್ಪ ಎಂದು ಗೊತ್ತಾಯಿತು. ಯಶವಂತಪುರದ ದಿವಾನರಪಾಳ್ಯದ ನಿವಾಸಿಯಾದರೂ ಶ್ರಾವಣ ಮಾಸದಲ್ಲಿ ವಿದ್ಯಾರಣ್ಯಪುರದವರೆಗೂ ಬಂದು ತಮ್ಮ ಕುಲವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರೂ ಸಹಾ ದೇವತಾ ಮತ್ತು ಸೂತಕಗಳನ್ನು ವಿಧಿ ವಿಧಾನಗಳ ಮೂಲಕ ನಡೆಸಿಕೊಡುವ ಪ್ರವೃತ್ತಿಯನ್ನು ಬೆಳಿಸಿಕೊಂಡಿದ್ದಾರೆ ಎಂದು ತಿಳಿಯಿತು.

 

ಕೇವಲ ನಾನೊಬ್ಬನೇ ದಾಸಯ್ಯನ ಜಾಗಟೆ, ಶಂಖನಾದ ಮತ್ತು ಗೋವಿಂದಾ ನಾಮಸ್ಮರಣೆ ಕೇಳಿದರೆ ಸಾಕೇ..? ನಮ್ಮಮ್ಮ ಅನುಭವವನ್ನು ಎಲ್ಲರೊಡನೆ ಹಂಚಿಕೋ ಎಂದು ಹೇಳಿಕೊಟ್ಟಿದ್ದಾರೆ, ಹಾಗಾಗಿ ಅದರ ಅನುಭವವನ್ನು ನಿಮ್ಮೊಂದಿಗೆ ಈ ವೀಡೀಯೋ ಮತ್ತು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇನೆ.

 

ಈ ಲೇಖನ ನಿಮಗೆ ಇಷ್ಟವಾಗಿ ನಿಮ್ಮ ಬಂಧು-ಮಿತ್ರರೊಡನೆ ಹಂಚಿಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ.

ಏನಂತೀರೀ?

ಲೇಖನ ಮುಗಿಸುವ ಮೊದಲು ದಾಸಯ್ಯನ ಬಗ್ಗೆ ಅಂದಿನ ಕಾಲದಲ್ಲಿಯೇ ದಾಸರ ದಾಸ ಪುರಂದರದಾಸರು ಬರೆದಿದ್ದ ಈ ಕೀರ್ತನೆ ನೆನಪಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

( ರಾಗ ಹಿಂದುಸ್ಥಾನಿ ಕಾಪಿ ಆದಿತಾಳ)

ಊರಿಗೆ ಬಂದರೆ ದಾಸಯ್ಯ, ನಮ್ಮಕೇರಿಗೆ ಬಾ ಕಂಡ್ಯ ದಾಸಯ್ಯ ||ಪ||

ಕೇರಿಗೆ ಬಂದರೆ ದಾಸಯ್ಯ, ಗೊಲ್ಲ ಕೇರಿಗೆ ಬಾ ಕಂಡ್ಯ ದಾಸಯ್ಯ ||ಅ||

ಕೊರಳೊಳು ವನಮಾಲೆ ಧರಿಸಿದನೆ, ಕಿರು- ಬೆರಳಲಿ ಬೆಟ್ಟವನೆತ್ತಿದನೆ

ಇರುಳು ಹಗಲು ನಿನ್ನ ಕಾಣದೆ ಇರಲಾರೆ ಮರುಳು ಮಾಡಿದಂಥ ದಾಸಯ್ಯ ||

ಕಪ್ಪು ವರ್ಣದ ದಾಸಯ್ಯ, ಕಂ-ದರ್ಪನ ಪಿತನೆಂಬೊ ದಾಸಯ್ಯ

ಅಪ್ಪಿಕೊಂಡು ನಮ್ಮ ಮನಸಿಗೆ ಬಂದರೆ ಅಪ್ಪವ ಕೊಡುವೆನು ದಾಸಯ್ಯ ||

ಮುಂದೇನು ದಾರಿ ದಾಸಯ್ಯ, ಚೆಲ್ವ ಪೊಂಗೊಳಲೂದುವ ದಾಸಯ್ಯ

ಹಾಂಗೆ ಪೋಗದಿರು ದಾಸಯ್ಯ, ಹೊ-ನ್ನುಂಗುರ ಕೊಡುವೆನು ದಾಸಯ್ಯ ||

ಸಣ್ಣ ನಾಮದ ದಾಸಯ್ಯ, ನಮ್ಮ ಸದನಕೆ ಬಾ ಕಂಡ್ಯ ದಾಸಯ್ಯ

ಸದನಕೆ ಬಂದರೆ ದಾಸಯ್ಯ, ಮಣಿ-ಸರವನು ಕೊಡುವನು ದಾಸಯ್ಯ ||

ಸಿಟ್ಟು ಮಾಡದಿರು ದಾಸಯ್ಯ, ಸಿರಿ-ಪುರಂದರವಿಟ್ಠಲದಾಸಯ್ಯ

ರಟ್ಟು ಮಾಡದಿರು ದಾಸಯ್ಯ, ತಮ್- ಬಿಟ್ಟು ಕೊಡುವನು ದಾಸಯ್ಯ ||

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

2 thoughts on “ದಾಸಯ್ಯ”

  1. ಇವರು ನಮ್ಮನೆ ಹತ್ರ ಗುರುವಾರ ಬರ್ತಾರೆ.
   ನಮ್ಮೂರಿನ ದಾಸಯ್ಯ ಕೂಡ ಗುರುವಾರವೇ ಬರುತ್ತಿದ್ದರು.
   ಅವರು ಹಾಡುತ್ತಿದ್ದ ಗುರುವಾರ ಬಂತಮ್ಮ ಮತ್ತು ಇಂಥ ಅಂದ ಇಂಥ ಚೆಂದ ಶಾರದಮ್ಮ ಹಾಡುಗಳು ಈಗಲೂ ನನ್ನ ಮನಸಿನಲ್ಲಿ ಅಚ್ಚಳಿಯದೆ ಉಳಿದಿದೆ.

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s