ಕರ್ನಾಟಕದ ಅತ್ಯಂತ ಸಾಂಪ್ರದಾಯಿಕವಾದ, ಪೌಷ್ಟಿಕರವಾದ, ರುಚಿಕರವಾದ ಮತ್ತು ಆರೋಗ್ಯಕರವೂ ಆದ ಸಿಹಿಕಡುಬು (ಕೊಳಕೊಟ್ಟೆ)ಯನ್ನು ಸಾಂಪ್ರದಾಯಕವಾಗಿ ಮನೆಯಲ್ಲಿ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣಾ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ.
ಸುಮಾರು 4-5 ಜನರಿಗೆ ಸಾಕಾಗುವಷ್ಟು ಸಿಹಿಕಡುಬು (ಕೊಳಕೊಟ್ಟೆ) ಬೇಕಾಗುವ ಸಾಮಗ್ರಿಗಳು
- ತೊಳೆದು ಹಾಕಿದ ಅಕ್ಕಿ ಹಿಟ್ಟು – 1 ಬಟ್ಟಲು
- ತೆಂಗಿನ ಕಾಯಿ ತುರಿ- 1 ಬಟ್ಟಲು
- ಉಂಡೆ ಬೆಲ್ಲ – 1 ಬಟ್ಟಲು
- ತುಪ್ಪಾ – 2 ಚಮಚ
- ಏಲಕ್ಕಿ ಪುಡಿ – 1 ಚಮಚ
- ಚಿಟಿಕೆ ಉಪ್ಪು
ಸಿಹಿಕಡುಬು (ಕೊಳಕೊಟ್ಟೆ) ಮಾಡುವ ವಿಧಾನ :
ಮೊದಲನೇ ಹಂತ ಕನಕ ಮಾಡಿಕೊಳ್ಳುವ ವಿಧಾನ
- ಒಲೆಯ ಮೇಲೆ ಗಟ್ಟಿ ತಳದ ಪಾತ್ರೆಯನ್ನು ಇಟ್ಟು ಅದರಲ್ಲಿ ಅಕ್ಕಿ ಹಿಟ್ಟಿಗೆ ಎರಡು ಪ್ರಮಾಣದಷ್ಟು ನೀರನ್ನು ಹಾಕಿ ಕುದಿಸಿಕೊಳ್ಳಬೇಕು.
- ಕುದಿಯುತ್ತಿರುವ ನೀರಿಗೆ ಚಿಟಿಗೆ ಉಪ್ಪನ್ನು ಬೆರಸಬೇಕು
- ಕುದಿಯುತ್ತಿರುವ ನೀರಿಗೆ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಅಕ್ಕಿ ಹಿಟ್ಟನ್ನು ಬೆರೆಸಿಕೊಳುತ್ತಾ ಗಂಟು ಬಾರದಂತೆ ಚೆನ್ನಾಗಿ ಉಕ್ಕರಿಸಿಕೊಂಡು ರಾಗಿ ಮುದ್ದೆ ಮಾಡುವಂಟೆ ಅಕ್ಕಿ ಹಿಟ್ಟಿನ ಮುದ್ದೆಯನ್ನು ತಯಾರಿಸಿಕೊಂಡು ಅದನ್ನು ಆರಲು ಬಿಡಬೇಕು.
ಎರಡನೆಯ ಹಂತ ಸಿಹಿ ಹೂರಣ ಮಾಡಿಕೊಳ್ಳುವ ವಿಧಾನ
- ಒಲೆಯ ಮೇಲೆ ಗಟ್ಟಿ ತಳದ ಪಾತ್ರೆಯನ್ನು ಇಟ್ಟು ಅದಕ್ಕೆ ಬೆಲ್ಲವನ್ನು ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಬೆಲ್ಲದ ಪಾಕವನ್ನು ತಯಾರಿಸಿಕೊಳ್ಳಬೇಕು.
- ಕುದಿಯುತ್ತಿರುವ ಪಾಕಕ್ಕೆ ಕಾಯಿತುರಿಯನ್ನು ಬೆರೆಸಿ ಚೆನ್ನಾಗಿ ಗಂಟಾಗದಂತೆ ಸುಮಾರು ಐದಾರು ನಿಮಿಷಗಳಷ್ಟು ಕಾಲ ತಿರುವಿಕೊಳ್ಳಬೇಕು.
- ಈ ಸಿಹಿಮಿಶ್ರಣದ ರುಚಿಯನ್ನು ಇಮ್ಮಡಿಗೊಳಿಸಲು ಸ್ವಲ್ಪ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿದಲ್ಲಿ ಕನಕ ಸಿದ್ದ.
- ಈ ಕನಕವನ್ನು ಸ್ವಲ್ಪ ಆರಲು ಬಿಡಬೇಕು.
ಮೂರನೇಯ ಹಂತದಲ್ಲಿ ಸಿಹಿ ಕಡುಬು ಮಾಡುವ ವಿಧಾನ
- ಆರಿದ ಕನಕ ಹಿಟ್ಟನ್ನು ಚೆನ್ನಾಗಿ ನಾದಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು
- ಈ ಸಣ್ಣ ಉಂಡೆಯನ್ನು ಚಪಾತಿ ಲಟ್ಟಿಸಿಕೊಳ್ಳುವಂತೆ ಲಟ್ಟಿಸಿಕೊಂಡು ಅದರೊಳಗೆ ಒಂದು ಚಮಚ ಸಿಹಿ ಹೂರಣವನ್ನು ಇಟ್ಟು ಮಡಿಸಿಟ್ಟುಕೊಳ್ಳವೇಕು.
- ನೋಡಲು ಅಂದವಾಗಿ ಕಾಣಲು ಕಡುಬು ತಯಾರಿಸುವ ಅಚ್ಚನ್ನು ಬಳೆಸಬಹುದು. ಇಲ್ಲವೇ ಮೋದಕದ ರೀತಿಯಲ್ಲೂ ತಯಾರಿಸಬಹುದು.
- ಹೀಗೆ ತಯಾರಾದ ಹಸೀ ಕಡುಬನ್ನು ಇಡ್ಲಿ ಪಾತ್ರೆಯಲ್ಲಿ ಸುಮಾರು 10-15 ನಿಮಿಷಗಳಷ್ಟು ಕಾಲ ಹಬೆಯಲ್ಲಿ ಬೇಯಿಸಿದಲ್ಲಿ ಬಿಸಿ ಬಿಸಿಯಾದ ರುಚಿಯಾದ ಸಿಹಿ ಕಡುಬು ಅರ್ಥಾತ್ ಕೊಳಕಟ್ಟೆ ಸಿದ್ಧ.
ಬಿಸಿಬಿಸಿಯಾದ ರುಚಿ ರುಚಿಯಾದ ಕೊಳಕಟ್ಟೆ ಮಾಡುವುದನ್ನು ಈ ವೀಡೀಯೋ ಮೂಲಕವೂ ನೋಡಿ ಕಲಿಯಬಹುದಾಗಿದೆ.
ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ , ಮಾಡ್ಕೋಳ್ಳಿ , ತಿನ್ಕೊಳ್ಳಿ
ಏನಂತೀರೀ?
ಮನದಾಳದ ಮಾತು : ಸಿಹಿಕಡುಬು (ಕೊಳಕಟ್ಟೆ) ಕೇವಲ ಸಾಂಪ್ರದಾಯಕ ಸಿಹಿ ತಿಂಡಿಯಷ್ಟೇ ಅಲ್ಲದೇ, ಮೊದಲು ಕನಕದ ರೂಪದಲ್ಲಿ ಹಿಟ್ಟು ಬೆಂದ ನಂತರ ಮತ್ತೊಮ್ಮೆ ಹೂರಣ ಬೆರೆಸಿದ ಕಡುಬು ಆಕಾರದಲ್ಲಿ ಎರಡನೇ ಬಾರಿ ಹಬೆಯಲ್ಲಿ ಬೇಯಿಸಲ್ಪಡುವ ಕಾರಣ ಇದು ಆರೋಗ್ಯಕರವೂ ಹೌದು. ಬ್ರಾಹ್ಮಣರ ಉಪಪಂಗಡಗಳಲ್ಲಿ ಒಂದಾದ ಸಂಕೇತಿಗಳ ಮನೆಯಲ್ಲಿ ಇದನ್ನು ಹೆಚ್ಚಾಗಿ ಮಾಡುತ್ತಾರಲ್ಲದೇ, ಉಳಿದವರ ಮನೆಗಳಲ್ಲಿ ನಾಗರಪಂಚಮಿಯಂದು ವಿಶೇಷವಾಗಿ ತಯಾರಿಸುತ್ತಾರೆ.
#ಅನ್ನಪೂರ್ಣ
#ಸಿಹಿಕಡುಬು
#ಕೊಳಕೊಟ್ಟೆ
#ಏನಂತೀರೀ
ಸಿಹಿಕಡುಬು, ಕೊಳಕೊಟ್ಟೆ, ಸಂಕೇತಿ, ನಾಗರಪಂಚಮಿ