ಗೋವಾ ಗೋಳಿನ ಕಥೆ ವ್ಯಥೆ ಭಾಗ-1

ಕೆಲವು ತಿಂಗಳುಗಳ ಹಿಂದೆ ಕುಟುಂಬದೊಂದಿಗೆ ಪ್ರವಾಸದ ನಿಮಿತ್ತ ವಿದೇಶಕ್ಕೆ ಹೋಗಿದ್ದಾಗ ಅಲ್ಲಿ ಮತ್ತೊಂದು ದೇಶದಿಂದ ಬಂದಿದ್ದ ವಿದೇಶೀ ಕುಟುಂಬವೊಂದು ಪರಿಚಯವಾಯಿತು. ಹಾಗೇಯೇ ಉಭಯಕುಶಲೋಪರಿ ವಿಚಾರಿಸಿಕೊಂಡು ನಾನು ಭಾರತೀಯ ಎಂದು ತಿಳಿದ ತಕ್ಷಣ, ಓಹೋ!! ನೀವು ಭಾರತೀಯರೇ, ನಾವು ಇದುವರೆಗೂ ಭಾರತವನ್ನು ನೋಡಿಲ್ಲ. ಆದರೆ ಖಂಡಿತವಾಗಿಯೂ ನಾವು ಭಾರತಕ್ಕೆ ಅತೀ ಶೀಘ್ರದಲ್ಲಿಯೇ ಬರುತ್ತೇವೆ ಎಂದು ಹೇಳಿದಾಗ, ಅ ಮಾತು ಕೇಳಿ ಮನಸ್ಸಂತೋಷವಾಯಿತು. ಅಷ್ಟು ಖುಷಿಯಿಂದ ನೀವು ಭಾರತಕ್ಕೆ ಬರಲು ಕಾರಣವೇನು? ಅಲ್ಲಿ ಯಾವ ಪ್ರದೇಶಕ್ಕೆ ಭೇಟಿ ನೀಡಲು ಇಚ್ಚಿಸುತ್ತೀರಿ?  ಎಂದು ಕುತೂಹಲದಿಂದ ಕೇಳಿದಾಗ, ಗೋವಾ!!. ನನ್ನ ಸ್ನೇಹಿತರ ಮುಖಾಂತರ ನಾನು ಗೋವಾದ ಬಗ್ಗೆ ತುಂಬಾನೇ ಕೇಳಿದ್ದೇನೆ. ಅಲ್ಲಿಯ ಬೀಚಿನಲ್ಲಿ ಸೂರ್ಯಸ್ನಾನದ ಜೊತೆಗೆ ತಣ್ಣನೆ ಫೆನ್ನಿ ಕುಡಿಯಲು ಬಂದೇ ಬರುತ್ತೇವೆ ಎಂದಾಗ ನನ್ನಲ್ಲಿದ್ದ ಉತ್ಸಾಹ ಜರ್ ಎಂದು ಇಳಿದು ನನ್ನ ಮುಖ ಕಪ್ಪಿಟ್ಟಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಎಂದು ತಿಳಿಯುತ್ತೇನೆ. ನಂತರ ಸಾವರಿಸಿಕೊಂಡು ಮಾತನ್ನು ಮುಂದುವರಿಸಿ, ಮೋಜು ಮಸ್ತಿಗಾಗಿ ಭಾರತಕ್ಕೆ ಬರುವುದಾದರೇ ಅಗತ್ಯವೇ ಇಲ್ಲ. ಅಲ್ಲಿಯೂ ಇಲ್ಲಿಯ ರೀತಿಯಲ್ಲಿದೆ. ಆದರೆ ಧಾರ್ಮಿಕ ಚಿಂತನೆಗಳಿಂದ ಪ್ರಪಂಚದ ಅತ್ಯಧ್ಭುತಗಳನ್ನು ನೋಡುವ ಹಂಬಲವಿದ್ದಲ್ಲಿ ಮಾತ್ರವೇ ಭಾರತಕ್ಕೆ ಬನ್ನಿ ಎಂದು ತುಸು ಗಡುಸಾಗಿಯೇ ಹೇಳಿದೆ. ಮಂಗೇಶಿ, ಮಹಾಲಸ, ಮಂಡೋದರಿ, ಮಹಾದೇವ, ಶಾಂತದುರ್ಗಾ, ವಿಜಯದುರ್ಗಾದಂತಹ ದೇವಸ್ಥಾನಗಳಿದ್ದ ಅತ್ಯಂತ ಸುಂದರ ರಮಣೀಯ ಪುಣ್ಯಕ್ಷೇತ್ರಗಳ ತಾಣವಾಗಿದ್ದ ಗೋವಾ ಇದ್ದಕ್ಕಿದ್ದಂತೆಯೇ ಮೋಜು ಮಸ್ತಿಯ ತಾಣವಾಗಿದ್ದು ಹೇಗೇ? ಹಿಂದೂಸ್ಥಾನದ ಭಾಗವಾದ ಗೋವಾ ಕ್ರಿಶ್ಚಿಯನ್ನರ ಪವಿತ್ರ ಕ್ಷೇತ್ರ ಆಗಿದ್ದು ಹೇಗೆ ? ಎಂಬುವ ಹೃದಯವಿದ್ರಾವಕ ವಿಷಯವನ್ನು ಎಳೆ ಎಳೆಯಾಗಿ ತಿಳಿಸುವ ಪ್ರಯತ್ನವೇ ಈ ಲೇಖನ.

15ನೇ ಶತಮಾನದವರೆಗ ಗೋವಾ ಸಂಪೂರ್ಣವಾಗಿ ಕೊಂಕಣೀ ಭಾಷಿಕರಾದ ಸಾರಸ್ವತ ಮತ್ತು ಗೌಡ ಸಾರಸ್ವತ ಬ್ರಾಹ್ಮಣರಿಂದ ನೂರಾರು ಹಿಂದೂ ದೇವಸ್ಥಾನಗಳಿಂದ ಕೂಡಿದ ನಾಡಾಗಿರುತ್ತದೆ. ಗೋವಾ ಮೊದಲು ಕದಂಬರ ಆಳ್ವಿಕೆಯಲ್ಲಿದ್ದು ನಂತರ ಕೆಲಕಾಲ ವಿಜಯನಗರ ಸಾಮ್ರಾಜ್ಯದ ಭಾಗವಾಗಿ ಆದಾದನಂತರ ಇಬ್ರಾಹಿಂ ಆದಿಲ್ ಷಾ ಆಧೀನದಲ್ಲಿ ಸ್ಥಳೀಯ ಮುಸಲ್ಮಾನರ ಆಳ್ಚಿಕೆಗೆ ಬರುತ್ತದೆ. ಈ ಸಮಯದಲ್ಲಿ ಗೋವಾದಲ್ಲಿದ್ದ ಹಿಂದೂಗಳಿಗೆ ಸಾಕಷ್ಟು ತಾರತಮ್ಯ ಮಾಡಲಾಗುತ್ತಿರುವುದನ್ನು ಗಮನಿಸಿದ ಕೆಲ ಸ್ಥಳೀಯರು, ಹತ್ತಿರದ ಹೊನ್ನಾವರ ರಾಜನಿಗೆ ಪತ್ರ ಬರೆದು, ದಯವಿಟ್ಟು ಏನಾದರೂ ಮಾಡಿ ಈ ಮುಸ್ಲಿಂ ದೊರೆ ಇಬ್ರಾಹಿಂ ಆದಿಲ್ ಶಾ ಮತ್ತವರ ಸಾಮಂತರ ದಬ್ಬಾಳಿಕೆಯಿಂದ ನಮ್ಮನ್ನು ಉಳಿಸಿ ಎಂದು ಕೇಳಿಕೊಳ್ಳುತ್ತಾರೆ. ಗೋವಾದ ಹಿಂದೂಗಳ ಮೊರೆಯನ್ನು ಆಲಿಸಿದ ಹೊನ್ನಾವರದ ರಾಜ, ತನ್ನ ಬಲಗೈ ಭಂಟ ತಿಮ್ಮೋಜ ಎಂಬುವನನ್ನು ಗೋವಾಕ್ಕೆ ಕಳುಹಿಸಿ ಇಬ್ರಾಹಿಂ ಆದಿಲ್ ಷಾನನ್ನು ಮಟ್ಟ ಹಾಕುವಂತೆ ತಿಳಿಸುತ್ತಾನೆ. ರಾಜನ ಆಜ್ಞೆಯಂತೆ ಗೋವಾಕ್ಕೆ ಬಂದ ತಿಮ್ಮೋಜಾ ಬಂದು ಶತೃವಿನ ಬಲಾ ಬಲವನ್ನು ಅರಿತು, ಕೇವಲ ತನ್ನ ಸೈನ್ಯದಿಂದ ಈ ಬಲಶಾಲಿ ಆದಿಲ್ ಶಾನ ಸೈನ್ಯವನ್ನು ಸೋಲಿಸುವುದು ಕಷ್ಟ ಸಾಧ್ಯ ಎಂಬುದನ್ನು ಅರಿತು, ಸಮಯದಲ್ಲಿ ಕೊಚ್ಚಿಗೆ ಬಂದಿದ್ದ ಅಫೊನ್ಸೊ ಡಿ ಅಲ್ಬುಕರ್ಕ್ ನನ್ನು ಭೇಟಿಯಾಗಿ ಅದಿಲ್ ಶಾ ನನ್ನು ಬಗ್ಗು ಬಡಿಯಲು ಅವರ ಸಹಾಯವನ್ನು ಕೇಳುತ್ತಾನೆ.

ಹೀಗೆ ಪೋರ್ಚುಗೀಸರ ಅಫೊನ್ಸೊ ಡಿ ಅಲ್ಬುಕರ್ಕ್ ತನ್ನ ಸೇನೆಯೊಂದಿಗೆ ಗೋವಾದ ಬಂದರಿಗೆ ಮೊತ್ತ ಮೊದಲ ಬಾರಿಗೆ ಬಂದಿಳಿದಾಗ ಅಲ್ಲಿನ ಸಮಸ್ಥ ಹಿಂದೂಗಳೂ ತಮ್ಮನ್ನು ಮುಸಲ್ಮಾನರಿಂದ ಪಾರು ಮಾಡಲು ಸಹಾಯ ಹಸ್ತ ನೀಡಲು ಬಂದಿದ್ದಾರೆ ಎಂದು ತಿಳಿದು ಪೋರ್ಚುಗೀಸರನ್ನು ಬೆಂಬಲಿಸಿದ ಕಾರಣ ಇಬ್ರಾಹಿಂ ಆದಿಲ್ ಷಾ ಪಡೆಗಳು ಸೋತು ಸುಣ್ಣವಾಗುತ್ತವೆ. ಅಫೊನ್ಸೊ ಡಿ ಅಲ್ಬುಕರ್ಕ್ ಮಾಡಿದ ಸಹಾಯಕ್ಕಾಗಿ ತಿಮ್ಮೋಜ ಗೌರವಾದರಗಳೊಂದಿಗೆ , ಕಪ್ಪಕಾಣಿಕೆಯನ್ನು ನೀಡಿ ಕೃತಜ್ಞಾತಪೂರ್ವಕವಾಗಿ ಪೋರ್ಚುಗಲ್ಲಿಗೆ ಹಿಂತಿರುಗಿ ಹೋಗುವಂತೆ ಕೋರಿಕೊಳ್ಳುತ್ತಾನೆ. ಆದರೆ ಸುಂದರ ರಮಣೀಯ ತಾಣವಾದ ಗೋವಾಕ್ಕೆ ಮನಸೋತ ಪೋರ್ಚುಗೀಸರು ಗೋವಾ ಒಂದು ಚಿನ್ನದ ಮೊಟ್ಟೆ ಇಡುವ ಕೋಳಿ ಇದನ್ನು ಬಿಡಲಾಗದು ಎಂದು ನಿರ್ಧರಿಸಿ, ತಿಮ್ಮೋಜನನ್ನೇ ಗಡಿಪಾರು ಮಾಡಿ ಮೆಲ್ರಾಜ್ ಎಂಬ ವ್ಯಕ್ತಿಯನ್ನು ತನ್ನ ನಿರ್ವಾಹಕರಾಗಿ ನೇಮಿಸಿ ಗೋವಾದ ದ್ವೀಪದ ಮೇಲೆ ತಮ್ಮ ಹಕ್ಕನ್ನು ಸ್ಥಾಪಿಸುವ ಮೂಲಕ ಮೊತ್ತ ಮೊದಲ ಬಾರಿಗೆ ಸಂಪೂರ್ಣವಾಗಿ ಗೋವಾ ಪರಕೀಯರ ಪಾಲಾಗುತ್ತದೆ. ಈಗ ಗೋವನ್ನರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದ ಹಾಗಾಗಿ ಹೋಗುತ್ತದೆ. ಹಾಗೆ ಆಕ್ರಮಿತವಾದ ಸ್ಥಳವನ್ನೇ ನಾವಿಂದು ಓಲ್ಡ್ ಗೋವಾ ಎಂದು ಕರೆಯುತ್ತೇವೆ.

mahalasaತದನಂತರ ಹಂತ ಹಂತವಾಗಿ ಸುಮಾರು 1510 ರ ಆಸುಪಾಸಿನಲ್ಲಿ ಪೋರ್ಚುಗೀಸರು ಚೋರಾವ್ಎನ್ನುವ ದ್ವೀಪ ತದನಂತರ ದಿವಾರ್ ಎಂಬ ಮತ್ತೊಂದು ದ್ವೀಪವನ್ನು ವಶಪಡಿಸಿಕೊಂಡಂತೆಯೇ ನಿಧಾನವಾಗಿ ಮತಾಂತರಗಳನ್ನು ಆರಂಭಿಸಿದರು. ಆರಂಭದಲ್ಲಿ ಬ್ರಾಹ್ಮಣ ವ್ಯಾಪಾರಿಗಳು ಮತ್ತು ಹಿಂದೂ ವ್ಯಾಪಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದ ಕಾರಣ ಮತಾಂತರವು ಸಾಮೂಹಿಕ ಪ್ರಮಾಣದಲ್ಲಿ ಮಾಡಲಿಲ್ಲ. ಆದರ ಬದಲಾಗಿ ಕೊಂಕಣಿಗ್ಕರ ಕುಲದೇವತೆಯಾಗಿದ್ದ ಮಹಾಲಾಸ ದೇವಾಲಯ ಮತ್ತಿತರೇ ದೇವಾಲಯಗಳನ್ನು ನಾಶ ಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಗೋವಾದಲ್ಲಿರುವ ಪ್ರತಿಯೊಂದು ದೇವಾಲಯವನ್ನು ನಾಶಪಡಿಸಬೇಕು ಎಂದು ಪೋರ್ಚುಗಲ್ ರಾಜನ ಶಾಸನದ ಮೇರೆಗೆ ಒಂದೇ ವರ್ಷದಲ್ಲಿ, ಸುಮಾರು 280 ದೇವಾಲಯಗಳನ್ನು ನಾಶಪಡಿಸಿರುವುದಕ್ಕೆ ದಾಖಲೆಗಳಿವೆ. ದೇವಾಲಯದವನ್ನು ನಾಶಪಡಿಸಿದ್ದಲ್ಲದೇ ಅಲ್ಲಿದ್ದ ಅತ್ಯಂತ ಗುಣಮಟ್ಟದ ಮರಮುಟ್ಟುಗಳನ್ನು ತಮ್ಮ ಚರ್ಚ್ಗಳಿಗೆ ಮತ್ತು ತಮ್ಮ ಐಶಾರಾಮ್ಯ ಬಂಗಲೆಗಳಿಗೆ ಬಳೆಸಿಕೊಂಡರೆ ವಿಗ್ರಹಗಳನ್ನು ವಿದೇಶಗಳಿಗೆ ಕಳ್ಳಸಾಗಣೆಮಾಡತೊಡಗಿದರು.

ಮತಾಂತರದ ಮುಂದುವರಿದ ಭಾಗವಾಗಿ ಪೋರ್ಚುಗೀಸರು ಸಮಾಜದಲ್ಲಿ ಪ್ರಭಾವಶಾಲಿಗಳಾಗಿದ್ದ ಆಯುರ್ವೇದ ಪಂಡಿತರು ಮತ್ತು ಪುರೋಹಿತ‌ಗಳ ಮೇಲೆ ಕೆಟ್ಟ ದೃಷ್ಟಿ ಬೀರಿದರು. ವೈದ್ಯರುಗಳು ಮನೆಯಿಂದ ಮನೆಗೆ ಹೋಗುತ್ತಿದ್ದರು ಮತ್ತು ಅವರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೆ ಹಿಂದೂ ಕುಟುಂಬಗಳು ತಮ್ಮೆಲ್ಲಾ ಧಾರ್ಮಿಕ ಕಾರ್ಯಗಳಿಗೆ ಮತ್ತು ಸಂಸ್ಕಾರಗಳಿಗೆ ಪುರೋಹಿತರ ಮೇಲೆಯೇ ಅವಲಂಭಿತರಾಗಿದ್ದರು ಆ ಕಾರಣದಿಂದಾಗಿ ಅವರಿಬ್ಬರ ಮೇಲೆ ಕಠಿಣವಾಗಿ ಮುಗಿಬಿದ್ದ ಪೋರ್ಚುಗೀಸರು ನೀವು ನಿಮ್ಮ ಹಳ್ಳಿಯಲ್ಲಿ ಇರಬೇಕಾದರೆ, ಒಂದೋ ಮತಾಂತರಗೊಳ್ಳಬೇಕು ಇಲ್ಲವೇ ನೀವು ಸ್ವತಃ ಗಡಿಪಾರಾಗಬೇಕು ಎಂದು ಆಜ್ಞೆಮಾಡಿದ್ದಲ್ಲದೇ ಒಂದು ತಿಂಗಳ ಗಡುವನ್ನು ನೀಡಿದರು. ಈ ರೀತಿಯಾಗಿ ತಮ್ಮ ಕುಲದೇವತೆಗಳ ದೇವಾಲಯವನ್ನು ಪೋರ್ಚುಗೀಸರು ನಾಶಪಡಿಸುತ್ತಿದ್ದು ಮತ್ತು ಗಡಿಪಾರಿಗೆ ಗಡವು ನೀಡಿದ್ದನ್ನು ಸಹಿಸಲಾಗದ ಸಾರಸ್ವತರು ಮತ್ತು ಗೌಡ ಸಾರಸ್ವತ ಬ್ರಾಹ್ಮಣರು ತಮ್ಮ ತಮ್ಮ ಆರಾಧ್ಯ ದೈವಗಳನ್ನು ಹೊತ್ತೊಯ್ದು, ಕರ್ನಾಟಕದ ಕರಾವಳಿ ಮತ್ತು ಕೇರಳದ ಕಡೆ ತಮ್ಮ ವಾಸ್ತವ್ಯ ಬದಲಿಸಿಕೊಂಡರು.

goachurchಏತನ್ಮಧ್ಯೆ, ಡಿಯಾಗೋ ಡಾ ಬೊರ್ಬಾ ಮತ್ತು ಮಿಗುಯೆಲ್ ವಾಜ್ ಎಂಬ ಇಬ್ಬರು ರಾಜನ ಆಜ್ಞೆಯಂತೆ ಗೋವಾದಲ್ಲಿ ದೊಡ್ಡ ಸಾಮೂಹಿಕ ಮತಾಂತರಗೊಳಿಸುವಿಕೆಗೆ ಚಾಲನೆ ನೀಡಿದರು. 1541 ರಲ್ಲಿ, ಚರ್ಚ್‌ನ ಸಲಹೆಯ ಮೇರೆಗೆ ಪೋರ್ಚುಗೀಸ್ ರಾಜನು ಗೋವಾದಲ್ಲಿ ಕರುಣೆಯ ಕಠಿಣವಾದ ಕಠಿಣ ಡಿ ಮಿಸರಿಕಾರ್ಡಿಯ ನೀತಿಯನ್ನು ಅನುಸರಿಸಲು ನಿರ್ಧರಿಸಿದನು. ಇದರ ಫಲವಾಗಿ ಗೋವಾದ ದಿವಾರ್ ಮತ್ತು ಗೋಪುರಿ ದ್ವೀಪದಲ್ಲಿರುವ ಎಲ್ಲಾ ದೇವಾಲಯಗಳು ನಾಶವಾದವು. 1548 ರಲ್ಲಿ, ಬಿಷಪ್ ಆಲ್ಬರ್ಕ್ಯೂ, ರಾಜನಿಗೆ ಒಂದು ವರ್ಷದೊಳಗೆ, ಇಡೀ ದ್ವೀಪವನ್ನು ಕ್ರಿಶ್ಚಿಯನ್ನರನ್ನಾಗಿ ಮಾಡುತ್ತೇವೆ ಎಂಬ ಶಪಥವನ್ನೂ ಕೈಗೊಂಡರು.

ಮತಾಂತರಗೊಂಡ ಹಿಂದೂಗಳಿಗೆ ಕ್ರಿಶ್ಚಿಯನ್ ರೀತಿ ರಿವಾಜುಗಳನ್ನು ಕಲಿಸುವ ಸಲುವಾಗಿಯೇ ಸೇಂಟ್ ಪಾಲ್ಸ್ ಎಂಬ ಕಾಲೇಜು ಕಾಲೇಜನ್ನು ಸ್ಥಾಪಿಸಿ ಹೊಸದಾಗಿ ಮತಾಂತರವಾದ ಕ್ರೈಸ್ತರಿಗೆ ತರಬೇತಿ ನೀಡಿ ಅವರನ್ನು ಉತ್ತಮ ಕ್ರೈಸ್ತರನ್ನಾಗಿ ಮಾಡುವ ನಿರ್ಧಾರ ಕೈಗೊಂಡರು. ನಾಶ ಪಡಿಸಿದ ದೇವಾಲಯಗಳ ಸಕಲ ಸಂಪತ್ತು ಮತ್ತು ಆಸ್ತಿಗಳನ್ನು ಈ ಕಾಲೇಜಿನ ಆಭಿವೃದ್ಧಿಗಾಗಿ ಬಳೆಸಲಾಯಿತು. ಇದಾದ ನಂತರ ಹಿಂದೂಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಹಿಂದೂಗಳನ್ನು ನಾನಾ ರೀತಿ ಹಿಂಸೆಗಳ ಮೂಲಕ ಕಿರುಕುಳ ನೀಡಲಾರಂಭಿಸಿದರು. ಗೋವಾದಲ್ಲಿರುವವರು ಮೂರ್ತಿ ಪೂಜೆಗಳನ್ನಾಗಲೀ ಮರ, ಕಲ್ಲು, ಲೋಹದಿಂದ ಮಾಡಿದ ವಿಗ್ರಹಗಳನ್ನು ಪೂಜಿಸಬಾರದು ಒಂದೊಂಬೆ ಹಾಗೆ ಮೂರ್ತಿ ಪೂಜೆ ಮಾಡುವ ವ್ಯಕ್ತಿಗಳು ಕಂಡು ಬಂದಲ್ಲಿ ಅವರನ್ನು ಸೆರೆಮನೆಗೆ ತಳ್ಳಿ ಚಿತ್ರ ವಿಚಿತ್ರ ರೀತಿಯಲ್ಲಿ ಹಿಂಸಿಸಲಾರಂಭಿಸಿದರು. ಗೋವಾದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಂಗೇಶಿಯ ಮೂಲ ದೇವಾಲಯವು 1566 ರ ಸುಮಾರಿಗೆ ನಾಶಪಡಿಸಿ ಅದೇ ಸ್ಥಳದಲ್ಲಿ ಚರ್ಚ್ ಅನ್ನು ನಿರ್ಮಿಸಲಾಯಿತು. ದೇವಾಲಯಗಳು ಧ್ವಂಸವಾದಾಗಲೆಲ್ಲಾ ಅಲ್ಲಿನ ಹಿಂದೂಗಳು, ಸಾಧ್ಯವಾದಷ್ಟೂ ಮೂಲ ವಿಗ್ರಹವನ್ನು ಉಳಿಸಿಕೊಂಡು ಅದನ್ನು ರಹಸ್ಯವಾಗಿ ಹೊಸ ಸ್ಥಳಕ್ಕೆ ಸ್ಥಳಾಂತರಿಸುವುದರಲ್ಲಿ ಅಲ್ಪ ಮಟ್ಟಿಗೆ ಯಶಸ್ವಿಯೂ ಆದರು. 1583 ರಲ್ಲಿ ಕುಂಕೋಲಿನ್ ಗ್ರಾಮದೇವತೆ ಶಾಂತದುರ್ಗೀ ದೇವಾಲಯವನ್ನು ನಾಶಪಡಿಸಲಾಯಿತು. ಆದನ್ನು ವಿರೋಧಿಸಿದ ಅನೇಕ ಸ್ಥಳೀಯರನ್ನು ಸೈನಿಕರ ಸಹಾಯದಿಂದ ಹತ್ಯೆಮಾಡಲಾಯಿತು.

ಸಾಧ್ಯವಾದಷ್ಟೂ ಹಿಂದೂಗಳ ಜೀವನವನ್ನು ಕಷ್ಟಕರವಾಗಿಸುವ ಮೂಲಕ ಪರೋಕ್ಷವಾಗಿ ನೀವು ಮತಾಂತರ ಆಗುವಂತೆ ನೋಡಿಕೊಳ್ಳಲಾಯಿತು. ಮತಾಂತರಗೊಂಡ ಕ್ರೈಸ್ತರಿಗೆ ಮಾತ್ರ ಸರ್ಕಾರಿ ಉದ್ಯೋಗ ಮತ್ತು ಒಪ್ಪಂದದ ಕೆಲಸವನ್ನು ನೀಡಲಾಯಿತು. ಹಿಂದೂಗಳಿಗೆ ಸಾರ್ವಜನಿಕ ಕಚೇರಿಗಳನ್ನು ನಿಷೇಧಿಸಲಾಯಿತು. . ಹಳ್ಳಿಗಳ ಪಂಚಾಯಿತಿಯ ಮುಖ್ಯಸ್ಥ ಗಾಂವ್ಕರ್ ಗಳನ್ನೂ ಮತಾಂತರ ಗೊಳಿಸಿ ಸಂಪ್ರೂರ್ಣ ಗ್ರಾಮ ಗ್ರಾಮಗಳನ್ನು ಕ್ರಿಶ್ಚಿಯನ್ ಗ್ರಾಮಗಳಾಗಿ ಪರಿವರ್ತಿಸಿತೊಡಗಿದರು. ಕ್ರಿಶ್ಚಿಯನ್ ಆಗಿ ಮತಾಂತರ ಆದವರಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರೋತ್ಸಾಹಿಸಲಾಯಿತು. 1560 ರಲ್ಲಿದ್ದ ವೈಸ್ರಾಯ್ ಮತಾಂತರವಾಗಲು ನಿರಾಕರಿಸಿದ ಹಿಂದೂಗಳನ್ನು ಪೋರ್ಚುಗೀಸ್ ಪ್ರದೇಶಗಳಿಂದ ಹೊರಹಾಕುವಂತೆ ಆದೇಶಿಸಿದರು ಅವರ ಆಸ್ತಿಯನ್ನು ವಿಲೇವಾರಿ ಮಾಡಲು ಅವರಿಗೆ ಒಂದು ತಿಂಗಳು ಕಾಲಾವಕಾಶ ನೀಡಲಾಯಿತು. ಒಂದು ತಿಂಗಳೊಳಗೆ ಆಸ್ತಿ ವಿಲೇವಾರಿ ಮಾಡದಿದ್ದಲ್ಲಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂಬ ಭಯದ ವಾತಾವತಣ ನಿರ್ಮಾಣ ಮಾಡಿದ ಫಲವಾಗಿ ಹಿಂದೂಗಳು ಸಿಕ್ಕಷ್ಟೇ ಸೀರುಂಡೆ ಎನ್ನುವಂತೆ ಸಿಕ್ಕ ಸಿಕ್ಕವರಿಗೆ ಅವರು ಕೊಟ್ಟಷ್ಟೇ ಬೆಲೆಗೆ ತಮ್ಮ ಆಸ್ತಿಗಳನ್ನು ಮಾರಾಟಮಾಡಿ ಕರ್ನಾಟಕದ ಕಡೆ ವಲಸೆ ಮಾಡತೊಡಗಿದರು.

1620 ರಲ್ಲಿ, ವೈಸ್ರಾಯ್ ಪೋರ್ಚುಗೀಸ್ ಪ್ರಾಂತ್ಯಗಳಲ್ಲಿ ಯಾವುದೇ ಹಿಂದೂಗಳ ಮದುವೆ ಅಥವಾ ಸತ್ತವರ ಅಂತ್ಯಸಂಸ್ಕಾರ ಮಾಡುವಂತಿಲ್ಲ ಎಂಬ ಹೊಸಾ ಕಾನೂನು ಜಾರಿಗೆ ತಂದರು. ಆಗ ಸ್ಥಳೀಯರು ನದಿ ದಾಟಿ ಆ ಕಡೆಯ ಅದೀಲ್ ಶಾ ಪ್ರಾಂತ್ಯದಲ್ಲಿ ಮದುವೆ ಮಾಡಿಕೊಂಡ ಬಂದರೆ ಇನ್ನು ಸತ್ತವರನ್ನು ತಮ್ಮ ಗ್ರಾಮಗಳಲ್ಲಿ ದಹನ ಮಾಡಲು ಸಾಧ್ವವಾಗದ ಕಾರಣ, ನದಿಯ ಮಧ್ಯದಲ್ಲಿ ದೋಣಿಗಳಲ್ಲಿ ಅಂತ್ಯಸಂಸ್ಕಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದರು.

1669 ರಲ್ಲಿ ಅಲ್ಲಿಯ ರಾಜನ ಅತ್ಯಂತ ಕೆಟ್ಟ ಮತ್ತು ಭಯಾನಕವಾದ ಮತ್ತೊಂದು ಆದೇಶ ಹೊರಡಿಸಿದನು. ಆ ಆದೇಶದ ಪ್ರಕಾರ, ಹಿಂದೂ ಕುಟುಂಬಗಳ ಎಲ್ಲ ಅನಾಥರು ಅವರ ಇತರೇ ಕುಟುಂಬಸ್ಥರು ಇಲ್ಲವೇ ಅಜ್ಜಾ ಅಜ್ಜಿಯರೊಂದಿಗೆ ಉಳಿಯುವಂತಿರಲಿಲ್ಲ. ಅವರ ಸಂಪೂರ್ಣ ಜಬಾಬ್ಧಾರಿ ಸ್ಥಳೀಯ ಚರ್ಚ ನ ಪಾದ್ರಿಯ ಆಶ್ರಯಕ್ಕೆ ಬಿಡಬೇಕಾಗುತ್ತಿತ್ತು. ಹಾಗೇ ಪಾದ್ರಿಗಳ ಆಶ್ರಯಕ್ಕೆ ಬಂದ ಮಕ್ಕಳ ಶಿಖೆಯನ್ನು ಕತ್ತರಿಸಿ ಈ ಮೂಲಕ ಅವರು ಮತ್ತೆ ತಮ್ಮ ಕುಂಟುಂಬಕ್ಕೆ ಹೋಗದಂತೆ ಮಾಡುಬಿಡುತ್ತಿದ್ದರು. ಸಾಂಪ್ರದಾಯಿಕತೆಯ ಆ ದಿನಗಳಲ್ಲಿ, ಶಿಖೆ ಇಲ್ಲದಿದ್ದವರನ್ನು ಹಿಂದೂ ಸಮಾಜ ಒಪ್ಪುತ್ತಿರಲ್ಲ. ಹಾಗಾಗಿ ಶಿಖೆ ಕತ್ತರಿಸಿಕೊಂಡ ಮಗುವಿಗೆ ಯಾವುದೇ ಆಯ್ಕೆ ಇರದೆ ಬಲವಂತವಾಗಿ ಕ್ರಿಶ್ಚಿಯನ್ ಆಗಿಹೋಗುತ್ತಿದ್ದರು.

ಕ್ರಿಶ್ಚಿಯನ್ ಧರ್ಮದ ಪ್ರಚಾರದ ಧಿಮಾಕಿನಲ್ಲಿ ಸಮುದಾಯದವೆರಲ್ಲರೂ ಬಳಸುತ್ತಿದ್ದ ನೀರು ಕುಡಿಯುವ ಭಾವಿಗಳಲ್ಲಿ ಬ್ರೆಡ್ ತುಂಡುಗಳನ್ನು ಮತ್ತು ಗೋಮಾಂಸದ ತುಂಡುಗಳನ್ನು ಹಾಕಿಬಿಡುತ್ತಿದ್ದರು. ಗೊತ್ತಿಲ್ಲದ ಜನಾ ಆ ಬಾವಿ, ಕಲ್ಯಾಣಿ ಅಥವಾ ಸಮುದಾಯದ ಸರೋವರ ನೀರನ್ನು ಕುಡಿದಾ ಕ್ಷಣ, ಸರಿ ಈಗ ನೀವು ಗೋಮಾಂಸ ಬೆರೆತ ನೀರನ್ನು ಕುಡಿಯುವ ಮೂಲಕ ಧರ್ಮಭ್ರಷ್ಟರಾಗಿ ಹೋದಿರಿ. ಹಾಗಾಗಿ ಇನ್ನು ಮುಂದೆ ನೀವುಗಳು ಹಿಂದೂ ಅಲ್ಲ ಮತ್ತು ನಿಮ್ಮ ಕುಟುಂಬದವರು ನಿಮ್ಮನ್ನು ಸೇರಿಸಿಕೊಳ್ಳುವುದಿಲ್ಲ. ಹಾಗಾಗಿ ನೀವು ಚೆನ್ನಾಗಿ ಇರಬೇಕಾದಲ್ಲಿ ಕ್ರಿಶ್ಚಿಯನ್ ಆಗಿ ಮತಾಂತರವಾಗುವುದೇ ಕಡೆಯ ಆಯ್ಕೆ ಎಂದು ಬೆದರಿಕೆಯ ಮೂಲಕ ಬಲವಂತದಿಂದ ಹಿಂದೂಗಳನ್ನು ಕ್ರಿಶ್ವಿಯನ್ನರಾಗಿ ಮತಾಂತರಿಸಿದರು.

ಒಮ್ಮೆ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡ ನಂತರ ಅವರ ಸಂಪೂರ್ಣ ಜೀವನಶೈಲಿ ಬದಲಿಸಿಕೊಳ್ಳಬೇಕಿತ್ತು. ಮೊದಲು ಉಡುಪುಗಳನು ಬದಲಿಸಿದರು. ಧೋತಿ ಸೀರೆಗಳನ್ನು ಧರಿಸಿದರೆ ದಂಡ ವಿಧಿಸಲಾಗುತ್ತಿತ್ತು ಅದರ ಬದಲಿಗೆ ಪಾಶ್ಚಾತ್ಯ ಬಟ್ಟೆಗಳನ್ನೇ ಧರಿಸಬೇಕಿತ್ತು. ನಂತರ ಭಾಷೆಯನ್ನು ನಿಗ್ರಹಿಸಲಾಯಿತು. ಕೊಂಕಣಿಯಲ್ಲಿ ಮಾತನಾಡುವುದನ್ನು ಮತ್ತು ಶಿಕ್ಷಣವನ್ನು ನಿಷೇಧಿಸಿ ಮನೆ ಮನೆಯಲ್ಲಿಯೂ ಪೋರ್ಚುಗೀಸ್ ಮಾತನಾಡಲು ಒತ್ತಾಯಿಸಲ್ಪಟ್ಟರು. ಗೋವಾದಲ್ಲಿ ತಾಯಿ ತಂದೆಯರನ್ನು ಆಯಿ ಮತ್ತು ಪಾಪಾ ಅಥವಾ ಆಯಿ ಮತ್ತು ಬಪ್ಪಾ ಎಂದು ಸಂಭೋಧಿಸುತ್ತಿದ್ದರೆ ಅವುಗಳ ಬದಲಾಗಿ ಪೋರ್ಚುಗೀಸರಂತೆ ಮಾಯ್ ಮತ್ತು ಪೈ ಎಂದೇ ಸಂಭೋದಿಸಲು ತಾಕೀತು ಮಾಡಲಾಯಿತು. ಆಹಾರ ಪದ್ದತಿಗಳಲ್ಲಿಯೂ ಬದಲಾವಣೆ ತಂದು ಎಲ್ಲರಿಗೂ ಬಲವಂತವಾಗಿ ಹಂದಿಮಾಂಸವನ್ನು ತಿನ್ನಿಸಲಾಯಿತು. ಅಡುಗೆ ವಿಧಾನವನ್ನು ಎಷ್ಟರ ಮಟ್ಟಿಗೆ ಬದಲಾಯಿಸಿದರೆಂದರೆ, ಹಿಂದೂಗಳು ಅನ್ನಕ್ಕೆ ಉಪ್ಪನ್ನೆಂದೂ ಹಾಕುತ್ತಿರಲಿಲ್ಲ. ಆದರೆ ಕ್ರೈಸ್ತರಾಗಿ ಬದಲಾದ ಮೇಲೆ ಮಾಡುವ ಅನ್ನದಲ್ಲಿ ಉಪ್ಪನ್ನು ಕಡ್ಡಾಯವಾಗಿ ಹಾಕುವಂತೆ ಒತ್ತಾಯಿಸಲಾಯಿತು. ಹಾಗಾಗಿ ಇಂದಿಗೂ ಗೋವಾ ಕಡೆಯ ಕ್ರಿಶ್ಚಿಯನ್ನರ ಮನೆಗಳಲ್ಲಿ ಅನ್ನಕ್ಕೆ ಉಪ್ಪನ್ನು ಹಾಕುವುದನ್ನು ಗಮನಿಸಬಹುದು.

ಇದೇ ಸಮಯದಲ್ಲಿ ಫ್ರಾನ್ಸಿನಿಂದ ಕ್ರೈಸ್ತ ಮತ ಪ್ರಚಾರಕನಾಗಿ ಗೋವಾಕ್ಕೆ ಬಂದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಎಂಬ ಪಾದ್ರಿ ಮಾಡಿದ ಮಾರಣ ಹೋಮ ಮತ್ತು ಹಿಂದೂವಿನಿಂದ ಕ್ರಿಶ್ಚಿಯನ್ನರಾಗಿ ಮತಾಂತರ ಹೊಂದಿದವರ ಕರಾಳ ಬದುಕು ಹೇಗಿತ್ತು ?ಎಂಬುವುದನ್ನು ಮುಂದಿನ ಭಾಗದಲ್ಲಿ ತಿಳಿದುಕೊಳ್ಳೋಣ

ಏನಂತೀರೀ?

2 thoughts on “ಗೋವಾ ಗೋಳಿನ ಕಥೆ ವ್ಯಥೆ ಭಾಗ-1

  1. ನಿಮ್ಮ ಲೇಖನ ಓದಿ ನೋವು…ಮತ್ತೆ …ಖುಷಿ ಆಯಿತು…ಒಂದು ತನಿಖಾ ಲೇಖನ ಓದಿದ ಅನುಭವ ಆಯಿತು…

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s