ಬಹುಷಃ ಎಪ್ಪತ್ತು ಮತ್ತು ಎಂಭತ್ತರ ದಶಕದಲ್ಲಿ ಬಾಲ್ಯಾವಸ್ಥೆಯನ್ನು ಕಳೆದವರಿಗೆ ನಿಂಬೇಹುಳಿ ಪೆಪ್ಪರ್ಮೆಂಟ್ ಎಂಬ ಹೆಸರನ್ನು ಕೇಳಿದ ಕೂಡಲೇ ಖಂಡಿತವಾಗಿಯೂ ಬಾಯಯಲ್ಲಿ ನೀರು ಬಂದೇ ಬರುತ್ತದೆ. ಏಕೆಂದರೆ ಅಂದೆಲ್ಲಾ ನಮಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದ್ದ ಚಾಕ್ಲೇಟ್ ಎಂದರೆ ಅದೊಂದೇ. ಕಡಿಮೆ ಹಣ ಜಾಸ್ತಿ ಹೊತ್ತು ಮಜ ಕೊಡುತ್ತಿದ್ದದ್ದೇ ಈ ನಿಂಬೇಹುಳಿ ಪೆಪ್ಪರ್ಮೆಂಟ್. ನಾವು ಚಿಕ್ಕವರಿದ್ದಾಗ ಮಾಡಿದ ಅತ್ಯುತ್ತಮ ಕೆಲಸಗಳಿಗೆ ಪ್ರೋತ್ಸಾಹಕರವಾಗಿ ಬಹುಮಾನ ರೂಪದಲ್ಲಿ ಸಿಗುತ್ತಿದ್ದದ್ದೇ ಈ ನಿಂಬೇಹುಳಿ ಪೆಪ್ಪರ್ಮೆಂಟ್. ಯಾರಾದರೂ ಚಿಕ್ಕ ಮಕ್ಕಳಿರುವ ಮನೆಗೆ ಬಂದರೆ, ಹೂವು ಹಣ್ಣುಗಳ ಜೊತೆ ಒಂದಿಷ್ಟು ನಿಂಬೇಹುಳಿ ಪೆಪ್ಪರ್ಮೆಂಟ್ ತಂದೇ ತರುತ್ತಿದ್ದರು. ಅಂತಹ ನಿಂಬೇಹುಳಿ ಪೆಪ್ಪರ್ಮೆಂಟ್ ನನ್ನ ಜೀವಕ್ಕೇ ಕುತ್ತು ತಂದು ಕಡೆಗೆ ನಮ್ಮ ತಂದೆಯರಿಂದ ಪುನರ್ಜನ್ಮ ಪಡೆದ ಹೃದಯಸ್ಪರ್ಶಿ ರೋಚಕ ಸನ್ನಿವೇಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಸುಮಾರು ವರ್ಷಗಳ ಹಿಂದಿನ ಘಟನೆ. ಬಹುಶಃ ನಾನಾಗ ಮೂರನೆಯದ್ದೋ ಇಲ್ಲವೇ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ. ದಸರಾ ಹಬ್ಬದ ರಜೆ ಬೇರೆ ಬಂದಿತ್ತು. ದಸರಾದ ಪ್ರತೀ ದಿನ ಸಂಜೆಯಾಯ್ತು ಎಂದರೆ ನಾನೂ ಮತ್ತು ನಮ್ಮ ತಂಗಿಯರೆಲ್ಲರೂ ಕೈಯಲ್ಲೊಂದು ಚಿಕ್ಕ ಚೀಲ ಹಿಡಿದುಕೊಂಡು ನೆರೆಹೊರೆಯ ಮನೆಗಳಲ್ಲಿ ಗೊಂಬೆ ನೋಡಿಕೊಂಡು ಬೊಂಬೇ ಬಾಗಿಣ ಇಸ್ಕೋಂಡು ಬರ್ತಾ ಇದ್ವಿ. ಅದರಲ್ಲೊಬ್ಬರು ಬೊಂಬೇ ಬಾಗಿಣಕ್ಕೆ ಏನೂ ಮಾಡಲಾಗದೇ, ನಿಂಬೇಹುಳಿ ಪೆಪ್ಪರ್ಮೆಂಟ್ ಕೊಟ್ಟಿದ್ದರು. ನಾವೆಲ್ಲರೂ ಅತೀ ಖುಷಿಯಿಂದಲೇ ಮನೆಗೆ ಹಿಂದುರಿಗೆ ಬಂದರೆ ನಮ್ಮ ತಾಯಿಯವರೂ ಪಕ್ಕದ ಮನೆಗೆ ಬೊಂಬೆ ನೋಡಲು ಹೋಗಿದ್ದ ಕಾರಣ ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ಸರಿಯಾದ ಸಮಯ ಅಂತ ನಿಂಬೇಹುಳಿ ಪೆಪ್ಪರ್ಮೆಂಟ್ ಬಾಯಿಗೆ ಹಾಕಿಕೊಂಡು ಚೀಪ ತೋಡಗಿದೆವು. ಹಾಗೇ, ಚೀಪುತ್ತಾ ಆಗ್ಗಿಂದ್ದಾಗ್ಗೆ ಬಾಯಿಂದ ಕೈಗೆ ಹಾಕಿಕೊಂಡು ಯಾರದ್ದು ಎಷ್ಟು ಕರಗಿದೆ? ಯಾರ ಪೆಪ್ಪರ್ಮೆಂಟ್ ಇನ್ನೂ ಕರಗಿಲ್ಲ ಎಂದು ನೋಡಿಕೊಳ್ಳುತ್ತಾ ಆಟ ಆಡುತ್ತಿದ್ದಾಗ, ಅಯ್ಯೋ, ನಿನ್ನ ಪೆಪ್ಪರ್ಮೆಂಟ್ ಇನ್ನೂ ಕರಗೇ ಇಲ್ವಾ? ಅಂತ ನನ್ನ ತಂಗಿ ನನ್ನ ಬಾಯಿಗೆ ಕೈ ಹಾಗಿದಾಗ ನಾನು ಒಮ್ಮಿಂದೊಮ್ಮೆಲ್ಲೆ ಗಬಗ್ ಎಂದು ಬಾಯಿ ಮುಚ್ಚಿದ್ದಷ್ಟೇ ಗೊತ್ತಾಗಿದ್ದು. ಇದ್ದಕ್ಕಿದ್ದಂತೆಯೇ ಗಂಟಲು ಬಿಗಿದು ಕೊಳ್ತಾ ಇದೆ, ಉಸಿರಾಡುವುದಕ್ಕೆ ಆಗ್ತಾ ಇಲ್ಲ. ಜೋರಾಗಿ ಕೂಗಲೂ ಆಗ್ತಾ ಇಲ್ಲ. ಕಣ್ಣುಗಳನ್ನು ತೇಲಿಸುತ್ತಾ ಅಲ್ಲೇ ಒದ್ದಾಡ ತೊಡಗಿದಾಗ, ಗಾಭರಿಯಾದ ನನ್ನ ತಂಗಿಯರು ಅಣ್ಣಾ, ಅಮ್ಮಾ ಅಂತ ಜೋರಾಗಿ ಕೂಗತೊಡಗಿದರು.
ನಮ್ಮ ತಂದೆಯವರು ತಮ್ಮ ಕಾರ್ಖಾನೆಯ ಪಾಳಿ ಮುಗಿಸಿಕೊಂಡು ಆಗ ತಾನೇ ಮನೆಗೆ ಬಂದು ಸೈಕಲ್ ಸ್ಟಾಂಡ್ ಹಾಕುತ್ತಿದ್ದವರು ಈ ಆರ್ತನಾದವನ್ನು ಕೇಳಿ ಸೈಕಲ್ಲನ್ನು ಅಲ್ಲಿಯೇ ಗೋಡೆಗೆ ಒರಗಿಸಿ ಒಳಗೆ ಓಡಿ ಬಂದು ನೋಡಿದವರೇ, ಒಂದು ಕ್ಷಣ ದಂಗಾಗಿ ಅವರಿಗೂ ಏನಾಗುತ್ತಿದೆ ಎಂದೇ ಗೊತ್ತಾಗಲಿಲ್ಲ. ಅದೇ ಸಮಯಕ್ಕೆ ನನ್ನ ತಂಗಿಯರ ಕೈಯ್ಯಲ್ಲಿ ನಿಂಬೇಹುಳಿ ಪೆಪ್ಪರ್ಮೆಂಟ್ ಇದ್ದದ್ದನ್ನು ಗಮನಿಸಿದ ನಮ್ಮ ತಂದೆಯವರು ಕೂಡಲೇ ಪರಿಸ್ಥಿತಿಯನ್ನು ಅರ್ಥೈಸಿಕೊಂಡು, ಕೂಡಲೇ, ನನ್ನನ್ನು ಎತ್ತಿ ಹಿಡಿದು ತಲೆ ಕೆಳಗೆ ಮಾಡಿ ಬೆನ್ನ ಮೇಲೆ ಮೆದುವಾಗಿ ಗುದ್ದಿದ ತಕ್ಷಣವೇ ನನ್ನ ಗಂಟಲೊಳಗೆ ಸಿಕ್ಕಿಹಾಕಿಕೊಂಡಿದ್ದ ನಿಂಬೇಹುಳಿ ಪೆಪ್ಪರ್ಮೆಂಟ್ ನನ್ನ ಬಾಯಿಯಿಂದ ಹೊರಗೆ ಬಿತ್ತು. ಆ ಕೂಡಲೇ ಕಿಟಾರ್ ಎಂದು ನಾನು ಕಿರುಚಿದಾಗ, ಸದ್ಯ ಬದುಕಿತು ಬಡ ಜೀವ ಎಂದು ಎಲ್ಲರಿಗೂ ಅನ್ನಿಸಿದರೆ, ನಾನು ಮಾತ್ರಾ, ಕೂಡಲೇ, ಆ ನನ್ನ ಪೆಪ್ಪರ್ಮೆಂಟ್ ಅಂತ ಕೆಳಗೆ ಬಿದ್ದಿದ್ದ ನಿಂಬೇಹುಳಿ ಪಪ್ಪರ್ಮೆಂಟನ್ನು ತೆಗೆದು ಬಾಯಿಗೆ ಹಾಕಿಕೊಳ್ಳಲು ಹೋಗಿದ್ದನ್ನು ನೋಡಿದ ನಮ್ಮ ತಂದೆ ಕೈ ಹಿಡಿದು ಎಳೆದದ್ದು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ.
ಬಹುಶಃ ಅಂದು ನನ್ನ ತಂದೆಯವರು ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಾರದಿದ್ದರೇ ನಾನಿಂದು ನಿಮ್ಮೊಂದಿಗೆ ಈ ರೋಚಕತೆಯನ್ನು ಹಂಚಿಕೊಳ್ಳಲು ಸಾಧ್ಯವೇ ಇರುತ್ತಿರಲಿಲ್ಲ. ಅಮ್ಮ ಜನ್ಮವನ್ನು ನೀಡಿದರೆ, ಅಪ್ಪ ಪುನರ್ಜನ್ಮವನ್ನು ನೀಡಿದರು ಎಂದರೆ ಅತಿಶಯೋಕ್ತಿಯೇನಲ್ಲ.
ಇಂದು ನಮ್ಮ ತಂದೆಯವರು ನಮ್ಮೊಂದಿಗೆ ಇಲ್ಲದಿದ್ದರೂ ಪ್ರತಿ ಬಾರಿ ನಾನಾಗಲೀ ಅಥವಾ ನಮ್ಮ ಮಕ್ಕಳಾಗಲೀ ಚಾಕ್ಲೇಟ್ ತಿನ್ನುವಾಗ ಈ ಪ್ರಸಂಗ ನೆನಪಿಗೆ ಬಂದು ನಮ್ಮ ತಂದೆಯವರನ್ನು ನೆನೆಯುತ್ತಾ ನನಗೇ ಅರಿವಿಲ್ಲದಂತೆ ನನ್ನ ಕಣ್ಣುಗಳು ಒದ್ದೆಯಾಗುತ್ತವೆ.
ಇಂದು ಜೂನ್ 20. ವಿಶ್ವ ಅಪ್ಪಂದಿರ ದಿನ. ಇಂದು ನಮ್ಮ ತಂದೆಯವರು ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ, ಮಾನಸಿಕವಾಗಿ ಸದಾಕಾಲವೂ ನಮ್ಮೊಂದಿಗೆ ಇದ್ದಾರೆ. ಅವರ ಅಗಲಿಕೆ ನಮ್ಮನ್ನು ಕಾಡುತ್ತದಾದರೂ ಅವರ ಆಶೀರ್ವಾದ ನಮ್ಮನ್ನು ಸದಾಕಾಲವೂ ಕಾಪಾಡುತ್ತದೆ.
ಅಪ್ಪಾ, ನೀವಂದ್ರೇ ನನಗಿಷ್ಟ. ನಿಮ್ಮ ಆಶೀರ್ವಾದ , ಪರಿಹರಿಸತ್ತೆ ನಮ್ಮೆಲ್ಲಾ ಕಷ್ಟ.
ಮಾತೃದೇವೋ ಭವ, ಪಿತೃದೇವೋಭವ ಎಂದು ಪ್ರತಿದಿನವೂ ತಂದೆ ತಾಯಿಯರನ್ನು ನೆನೆಯುತ್ತಾ, ಅಪ್ಪಾ ಅಮ್ಮಂದಿರನ್ನು ನಮಿಸುವ ಭಾರತೀಯರಿಗೆ ಪ್ರತಿದಿನವೂ ಅಪ್ಪಾ ಅಮ್ಮಂದಿರ ದಿನವೇ ಹೌದು.
ಏನಂತೀರೀ?
ನಿಮ್ಮವನೇ ಉಮಾಸುತ
ಶ್ರೀ .ಶ್ರೀಕಂಠ ಬಾಳಗಂಚಿಯವರೇ ವಾಸ್ತವ ಸಂಗತಿ ಈಗ ನೆನಪಿಗೆ ಬರುತ್ತಿದೆ ನಾನು 4-5 ವರ್ಷ ದವನು ಇರಬಹುದು ನಮ್ಮಮ್ಮ ರಾಗಿ ಮುದ್ದೆ ದಿನಾ ಮಾಡುತ್ತಿದ್ದರು ನನಗೆ, ನನ್ನ ತಮ್ಮ ಮತ್ತು ತಂಗಿಗೆ ಅನ್ನವನ್ನು ಮಾತ್ರ ಹಾಕುತ್ತಿದ್ದರು. ನಾನು ಹಟಮಾಡಿ ರಾಗಿ ಮುದ್ದೆ ಹಾಕದೇ ಇದ್ದರೆ ಊಟವನ್ನು ಮಾಡುವುದಿಲ್ಲ ಅಂತ ಊಟ ಮಾಡಲೇ ಇದ್ದು ನನ್ನ ಮಗ ಎಲ್ಲಿ ಸತ್ತು ಹೋಗುತ್ತದೊ, ಎಂದು ಹೆದರಿದ್ದು ಗಾದೆಯ ಹಾಗೆ ನಾಯಿಯಾದರು ತಾಯಿ ಅಂತ ಅಂದರೆ ಅದು ಸಹ ಅದರ ಮಕ್ಕಳಿಗೆ ಜನ್ಮ ಕೊಟ್ಟಿರುತ್ತದೆ ನೆಕ್ಕಿ, ನೆಕ್ಕಿ ಅದರ ಮಕ್ಕಳನ್ನು ಮುದ್ದಾಡುತ್ತದೆ ಹಾಗೆ ನಮ್ಮ ತಾಯಿ ಸಹ ಊಟಮಾಡದೇ ನನ್ನ ಹಠವನ್ನೇ ಸಾದಿಸಿದೆ
ರಾಗಿಮುದ್ದೆ ಒಣಗಿ ಓಟೆಗರಿ ಆಗಿ ಹೋಗಿತ್ತು ಅಲ್ಲದೇ ಅದೇ ಮೊದಲನೇ ದಿವಸ ರಾಗಿ ಮುದ್ದೆ ತಿಂದಿದ್ದು ಅದನ್ನು ನಮ್ಮ,ಅಪ್ಪ, ಅಮ್ಮ, ಅಣ್ಣ,ಅಕ್ಕಂದಿರು ತಿನ್ನು ವಷ್ಟು ಗಾತ್ರದಲ್ಲಿ ಪಿಡಚೆ ಮಾಡಿ (ಹುಳಿ) ಸಾಂಬಾರ್ ನಲ್ಲಿ ಉರುಳಿಸಿ ನುಂಗಿದೆ ಅದು ಗಂಟಲಲ್ಲಿ ಸಿಕ್ಕಿ ಕೊಂಡು ಹೊರಗೂ, ಬರುವುದಿಲ್ಲ ಹೊಟ್ಟೆ ಒಳಗೂ ಹೋಗುವುದಿಲ್ಲ ಉಸಿರಾಟಕ್ಕೆ ತೊಂದರೆ ಆಗಿ ಕಣ್ಣು ಗಳು ಮೇಲಕ್ಕೆ ಸಿಕ್ಕಿ ಕೊಂಡಿತು ಗಂಟಲಿನಿಂದ ಶಭ್ಧ ಬರಲು ಶುರುವಾಯಿತು ಗಟ್ರಂ, ಗುಟ್ರಂ, ಗಟ್ರಂ, ಗುಟ್ರಂ, ಅಂತ ನಮ್ಮ ಅಮ್ಮ ಅಳುತ್ತಾ ಅದೇನು ನೆನಪಾಯಿತೋ ಗೊತ್ತಿಲ್ಲ ನನ್ನ ಕುತ್ತಿಗೆಯನ್ನು ಬಗ್ಗಿಸಿ ಎಡದ ಕೈಲಿ ಹಿಡಿದು ಬಲದ ಕೈ ಯನ್ನು ಮುಷ್ಟಿ ಕಟ್ಟಿ ನನ್ನ ಕುತ್ತಿಗೆಗೆ ಅವರ ಶಕ್ತಿ ಬಿಟ್ಟು ಬಲವಾಗಿ ಕುತ್ತಿಗೆಗೆ ಗುದ್ದಿದರು ಇದ್ದಕ್ಕಿದ್ದ ಹಾಗೆ ಗಂಟಲಲ್ಲಿ ಸಿಕ್ಕಿ ಕೊಂಡಿದ್ದ ರಾಗಿ ಮುದ್ದೆಯ ಪಿಡುಚೆ ಹೊಟ್ಟೆ ಒಳಗೆ ಹೋಯಿತು ಬೇಗ ನಮ್ಮಮ್ಮ ತಟ್ಟೆಯಲ್ಲಿ ಇದ್ದ ರಾಗಿ ಮುದ್ದೆ ತೆಗೆದು ಅನ್ನ ಹಾಕಿ ಊಟಮಾಡುವ ಮೊದಲು ಮನೆಯಲ್ಲಿ ಎಮ್ಮೆ, ಹಸು, ಗಳು ಇದ್ದು ದಾರಾಳವಾಗಿ ಹಾಲು,ಮೊಸರು, ಬೆಣ್ಣೆ, ತುಪ್ಪ ಇತ್ತು ಒಂದು ದಪ್ಪ ಉಂಡೆ ಬೆಣ್ಣೆ ಕೊಟ್ಟರು ಪುಟ್ಟ ಮಗು ಆಗಿದ್ದರಿಂದ ಗಂಟಲಲ್ಲಿ ಸಿಕ್ಕಿ ಕೊಂಡಿದ್ದ ರಾಗಿ ಮುದ್ದೆ ಪಿಡುಚೆ ಬಹಳ ಗಟ್ಟಿ ಒಣಗಿ ಹೋಗಿದ್ದ ಕಾರಣ ಗಂಟಲು ಒಳಭಾಗ ಬಹಳ ಮೃದು ವಾಗಿರುತ್ತದೆ ಅದೆಲ್ಲ (,ಗೋಳಿಸಿ) ಮೇಲಿನ ಚರ್ಮದ ಪದರ ಹೋಗಿರುತ್ತದೆ ಏನು ತಿಂದರೂ ಗಂಟಲು ಉರಿಯಲು ಶುರುವಾಗುತ್ತದೆ ಹಾಗಾಗಿ ಬೆಣ್ಣೆ ತನ್ನಿಸಿ ಅನ್ನ ಅವರೇ ಸ್ವಲ್ಪ ಸ್ವಲ್ಪ ತಿನ್ನಿಸೀ ನಮ್ಮ ಅಮ್ಮ ಊಟಾ ಮಾಡುವ ಮೊದಲು ದೇವರಿಗೆ ತುಪ್ಪದ ದೀಪ ಹಚ್ಚಿ ನನ್ನ ಮಗನನ್ನು ಉಳಿಸಿಕೊಟ್ಟೆಯಲ್ಲಾ ಅಂತ ನಮಸ್ಕಾರ ಮಾಡಿ ನಂತರ ಊಟ ಮಾಡಿದ್ದರು. ನನಗೆ ಪುನಃ ನಮ್ಮಮ್ಮ ನನಗೆ ರಾಗಿ ಮುದ್ದೆ ಹಾಕಿದ್ದು ನನಗೆ ಚೆನ್ನಾಗಿ ರಾಗಿ ಮುದ್ದೆ ಹೇಗೆ ತಿನ್ನಬೇಕು ಅಂತ ತಿಳಿದ ಮೇಲೆ 18 ನೇ ವರ್ಷದಲ್ಲಿಯೇ. ನಿಜವಾಗಿ ಇದನ್ನು ಅನುಭವಿಸಿದ ನನಗೆ ಮತ್ತು ನೆನಪು ಮಾಡಿ ಕೊಟ್ಟ ನಿಮ್ಮ ಕಥೆ ಕೇಳಿ ಬಿದ್ದು ಬಿದ್ದು ನಕ್ಕು ಬಿಟ್ಟಿದ್ದೀನಿ. ಏತಕ್ಕೆ ಗೊತ್ತ? ಇಷ್ಟು ಬುದ್ದಿವಂತ ಸಹ ಎಡವಟ್ಟು ಅಣ್ಣಯ್ಯ ಆಗಿದ್ದು ಮತ್ತು ನಿಮ್ಮಲೇಖನ ಮರೆತು ಹೋಗಿದ್ದ ರಾಗಿ ಮುದ್ದೆ ತಿಂದ ಅನುಭವವನ್ನು ನೆನಪಿಸಿದ್ದು ಬೇಗ ನಿಮ್ಮ ಅಪ್ಪ ನಿಮ್ಮನ್ನು ತಲೆ ಕೆಳಗಾಗಿ ಮಾಡಿ ಬೆನ್ನ ಮೇಲೆ ಗುದ್ದಿ ದ್ದಾರೆ ಕೆಲವರಿಗೆ ತಿಳಿದಿದ್ದು ಆಕ್ಷಣದಲ್ಲಿ ಏನೂಮಾಡಲು ತೊಚುವುದೇ ಇಲ್ಲ ನಿಮ್ಮ ಅಪ್ಪ ನಿಮಗೆ ಪುನರ್ಜನ್ಮ ಕೊಟ್ಟರೆ ನಮ್ಮಮ್ಮ ನನಗೆ ಪುನರ್ಜನ್ಮ ಕೊಟ್ಟಿರುತ್ತಾರೆ
ನಾವಿಬ್ಬರು ಎಡವಟ್ಟಣ್ಣಯ್ಯಗಳೇ. ನಿಜವಾಗಿ ನಿಮ್ಮ ಲೇಖನವ ಓದಲೇ ಬೇಕು ಇಂತಹ ಸಮಯದಲ್ಲಿ ಏನು ಮಾಡಬಹುದು ಎಂದು ಕೆಲವರಿಗೆ ತಿಳಿಯದೇ ಇದ್ದು ಇದನ್ನು ಓದಿದವರಿಗೆ ತಿಳಿಯುತ್ತದೆ ಇದನ್ನು ನೆನಪಿದಿಕೊಂಡು ನಾನಂತೂ ಬಿದ್ದು ಬಿದ್ದು ಹೊಟ್ಟೆ ನೋವಾಗುವಷ್ಟು ನಗುವ ಹಾಗೆ ಮಾಡಿದೆ ಈ ನಿಮ್ಮ ಲೇಖನ ಅದಕ್ಕೆ ನಿಮಗೆ ನನ್ನ ಹೃದಯ ಪೂರ್ವಕ ವಂದನೆಗಳು 👌🤣🤣🤣👍👍
LikeLiked by 1 person
ಬಾಲ್ಯದ ನೆನಪುಗಳೇ ಹಾಗೆ. ಮೆಲುಕು ಹಾಕಿದಷ್ಟೂ ಸುಮಧುರವಾಗಿಯೇ ಇರುತ್ತದೆ.
LikeLike