ಕಲ್ಪವೃಕ್ಷ

ತೆಂಗಿನ ಮರವನ್ನು ಕಲಿಯುಗದ ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ. ನನ್ನನ್ನು ಏಳು ವರ್ಷ ಜನನದಿಂದ ಕಾಪಾಡು. ನಾನು ನಿನ್ನನ್ನು ಎಪ್ಪತ್ತು ವರ್ಷದ ವರೆಗೂ ನೆಮ್ಮದಿಯಿಂದ ಕಾಪಾಡುತ್ತೇನೆ ಎಂದು ತೆಂಗಿನಮರ ಹೇಳುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದದ ಮಾತಿನಲ್ಲಿ ಖಂಡಿತವಾಗಿಯೂ ಸತ್ಯವಿದೆ. ತೆಂಗಿನ ಮರದ ಪ್ರತಿಯೊಂದು ಭಾಗಗಳೂ ಉಪಯೋಗಿಸುವಂತಹದ್ದೇ ಅಗಿದ್ದು ಅದರಲ್ಲಿ ಬಿಸಾಡುವಂತಹ ತ್ರಾಜ್ಯಗಳೇ ಇಲ್ಲದಿರುವುದು ಮೆಚ್ಚಬೇಕಾದಂತಹ ಸಂಗತಿ. ತೆಂಗಿನ ಮರ ಇದ್ದಾಗ ಅನುಭವಿಸಿದ ಸಂತೋಷ ಮತ್ತು ಈಗ ತೆಂಗಿನ ಮರ ಇಲ್ಲದಿರುವಾಗ ಅನುಭವಿಸುತ್ತಿರುವ ಸಂಕಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ.

ನಾನೀಗಾಗಲೇ ಹಲವಾರು ಬಾರಿ ಹೇಳಿಕೊಂಡಂತೆ ಮೂಲತಃ ನಾವು ಮಲೆನಾಡಾದ ಹಾಸನದ ಜಿಲ್ಲೆಯವರು. ನಮ್ಮ ಊರಿನ ಸುತ್ತಮುತ್ತಲಿನ ಜನರ ಪ್ರಮುಖ ಆದಾಯವೇ ತೆಂಗು. ಕಲ್ಪತರು ನಾಡು ತಿಪಟೂರು ನಮ್ಮೂರಿನಿಂದ ಕೆಲವೇ ಮೈಲಿಗಳ ದೂರದಲ್ಲಿವೆ. ಒಂದಾನೊಂದು ಕಾಲದಲ್ಲಿ ಊರಿನ ಶ್ಯಾನುಭೋಗರಾಗಿದ್ದರೂ, ನನಗೆ ಬುದ್ಧಿ ತಿಳಿಯುವ ಹೊತ್ತಿಗೆ ಇದ್ದ ಬದ್ದ ಜಮೀನುಗಳನ್ನೆಲ್ಲಾ ನಮ್ಮ ಮುತ್ತಾತಂದಿರೇ ಕಳೆದು ಹಾಕಿದ್ದರೂ ನಮ್ಮ ಅಜ್ಜಿ ಜತನದಿಂದ ಬೆಳಸಿ ಪೋಷಿಸಿದ್ದ ತೆಂಗಿನ ಮರವೇ ನನಗೆ ನಮ್ಮೂರಿಗೆ ಹೋಗಲು ಪ್ರಮುಖ ಆಕರ್ಷಣೆ. ಇಡೀ ಊರಿನ ಸುತ್ತ ಸಾವಿರಾರು ತೆಂಗಿನ ಮರಗಳ ತೋಟವಿದ್ದರೂ, ನಮ್ಮ ಊರಿನೊಳಗೆ ಇರುವ ಏಕೈಕ ತೆಂಗಿನ ಮರ ನಮ್ಮದೇ ಆಗಿದ್ದದ್ದು ಹೆಮ್ಮೆಯ ವಿಷಯವೆನಿಸುತ್ತಿದ್ದರೂ ಕೆಲವೊಂದು ಬಾರಿ ಸಂಕಟವೂ ಆಗುತ್ತಿತ್ತು. ಊರಿಗೆ ಯಾವ ಹಿರಿಯರು ಅಥವಾ ಸರ್ಕಾರೀ ಅಧಿಕಾರಿಗಳು ಬಂದರೂ, ಊರಿನ ಹಿರಿಯರು ಹತ್ತಿರವಿದ್ದವರನ್ನು ಕರೆದು ಏ ಹೋಗ್ಲಾ, ಐನೋರ ಮನೆ ತೆಂಗಿನ್ಮರ್ದಾಗೆ, ಎಳ್ಣೀರ್ ಕೆಡ್ವಕೊಂಡ್ ಬಾರ್ಲಾ ಎಂದು ಮುಲಾಜಿಲ್ಲದೇ ಕಳುಹಿಸುತ್ತಿದ್ದರು ಮತ್ತು ಇಂದಿಗೂ ಕಳುಹಿಸುತ್ತಲೇ ಇದ್ದಾರೆ.

kl3ನಾವು ಊರಿಗೆ ಬತುತ್ತಿದ್ದೇವೆ ಎಂದು ಗೊತ್ತಾಗುತ್ತಿದ್ದಂತೆಯೇ ನಮ್ಮ ಅಜ್ಜಿ ಲೇ, ಇವ್ನೇ, ಬಾರೋ ಇಲ್ಲಿ. ಈ ಕಾಪೀ ಕುಡ್ದು ತಿಂಡಿ ತಿಂದು ಒಂದು ಗೊನೆ, ಬೊಂಬಲು ಇರುವ ಎಳ್ನೀರ್ ಇಳಿಸಿಕೋಡೋ. ಮೊಮ್ಮಕ್ಕಳು ಬೆಂಗಳೂರಿನಿಂದ ಬರ್ತಾ ಇದ್ದಾರೆ ಅಂತ ನಾವು ಬರುವ ಹೊತ್ತಿಗಾಗಲೇ, ಎಳನೀರು ಸಿದ್ದ ಪಡಿಸಿಡುತ್ತಿದ್ದರು ನಮ್ಮ ಅಜ್ಜಿ. ಊರಿಗೆ ಹೋದೊಡನೆಯೇ ದೊಡ್ಡವರಿಗೆಲ್ಲಾ ಕಾಫೀ ಸಮಾರಾಧನೆಯಾದರೇ, ಮಕ್ಕಳಿಗೆಲ್ಲಾ ಯಥೇಚ್ಚ ಎಳನೀರು ಅಭಿಷೇಕ. ಏ ಕಚ್ಚಿಕೊಂಡು ಎಂಜಿಲು ಮಾಡಿಕೊಂಡು ಮೈಮೇಲೆಲ್ಲಾ ಸುರಿಸಿಕೊಂಡು ಕುಡೀಬೇಡ. ಲೋಟಕ್ಕೆ ಬಗ್ಗಿಸಿಕೊಂಡು ಕುಡೀ ಎಂದು ಎಷ್ಟೇ ಹೇಳಿದರೂ, ಕೇಳುತ್ತಿದ್ದವರು ಯಾರು? ಹೊಟ್ಟೇ ತುಂಬಾ ಎಳನೀರು ಕುಡಿದು ಬೊಂಬ್ಲು ತಿಂದು ಉಳಿಸಿದ್ದನ್ನೇ ಮಾರನೇಯ ದಿನ ದೋಸೆ ಮಾಡಿ ಬಡಿಸುತ್ತಿದ್ದರು ನಮ್ಮಜ್ಜಿ.

ಇನ್ನೂ ನಮ್ಮೂರಿನವರೋ ವಿಶಾಲ ಹೃದಯವಂತರು. ಇಂದಿಗೂ ಸಹಾ, ಹಿರಿಯರೂ ಕಿರಿಯರು ಎನ್ನದೇ, ಸ್ವಾಮೀ, ಐಯ್ನೋರೇ (ಐಯ್ಯನವರೇ ಎನ್ನುವ ಗ್ರಾಮೀಣ ಸೊಗಡು), ಬುದ್ದೀ ಎಂದೇ ಸಂಬೋಧಿಸುವಂತಹ ಸಂಸ್ಕಾರವಂತರು. ನಮ್ಮನ್ನು ನೋಡಿದ ತಕ್ಷಣ ಐಯ್ನೋರೇ, ಯಾವಾಗ್ ಬಂದ್ರೀ? ಎಲ್ಲಾ ಆರಾಮೇ? ಯಾವಾಗ್ ಓಯ್ತೀರೀ? ಎಂದು ಕೇಳುತ್ತಿದ್ದದ್ದು ನನಗೆ ಸೋಜಿಗವನ್ನುಂಟು ಮಾಡುತ್ತಿತ್ತು. ಅರೇ! ಇದೇನು ಈಗ ತಾನೇ ಬಂದಿದ್ದೀವಿ. ಅಷ್ಟು ಬೇಗನೇ ಯಾವಾಗ ಹೋಗ್ತೀರೀ? ಅಂತ ಕೇಳ್ತಾ ಇದ್ದಾರಲ್ಲಾ ಅಂತ ಕೋಪಾನೂ ಬರ್ತಾ ಇತ್ತು. ಅದರೆ ಅವರ ಮುಂದಿನ ಮಾತು ಅಪ್ಯಾಯಮಾನವಾಗುತ್ತಿತ್ತು. ಓಗೋ ಮುಂದೇ, ಮನ್ತಾವಾ ಬಂದ್ ಓಗೀ, ನಾಲ್ಕು ಕಾಯೀನೂ ವಸಿ ರಾಗಿ ಕೊಡ್ತೀನೀ ಎನ್ನುತಿದ್ದರು. ಹಾಗೆ ನಮ್ಮೂರಿನಿಂದ ಬೆಂಗಳೂರಿಗೆ ಹಿಂದಿರುಗುವಾಗ ಸುಮಾರು ಹತ್ತಿಪ್ಪತ್ತು ತೆಂಗಿನ ಕಾಯಿಯ ದಿಡ್ದಿ, ಒಂದಷ್ತು ಕೊಬ್ಬರೀ ಗಿಟುಕುಗಳು, ತೆಂಗಿನ ಮತ್ತು ಹಂಚೀಕಡ್ಡೀ ಪೊರಕೇ, ಒಂದಿಷ್ಟು ರಾಗಿ, ಹುರಳೀ ಕಾಳು, ಅವರೇ ಕಾಳು, ಹುಣಸೇ ಹಣ್ಣು, ಸಾಂಬಾರ್ ಈರುಳ್ಳಿಗಳು ನಮ್ಮ ಗಂಟಿನ ಜೊತೆಗಿರುತ್ತಿದ್ದವು, ಎಷ್ಟೋ ಬಾರಿ ಅವುಗಳ ಬೆಲೆಗಿಂತಲೂ ಅಧಿಕ ಮೊತ್ತವನ್ನೇ ಬಸ್ಸಿನಲ್ಲಿ ಮತ್ತು ಆಟೋದವನಿಗೆ ಲಗ್ಗೇಜ್ ರೂಪದಲ್ಲಿ ಕೊಟ್ಟಿದ್ದರೂ ನಮ್ಮೂರಿನ ಅಭಿಮಾನದ ಮುಂದೆ ಆ ಲಗ್ಗೇಜ್ ದುಡ್ಡು ಎಂದೂ ಹೆಚ್ಚೆನಿಸುತ್ತಿರಲಿಲ್ಲ.

ಹೀಗೆ ತೆಂಗಿನ ಕಾಯಿ ಮತ್ತು ತೆಂಗಿನ ಉತ್ಪನ್ನಗಳನ್ನು ನಾವೆಂದೂ ಕೊಂಡವರೇ ಅಲ್ಲ. ಬಾಡಿಗೆ ಮನೆಯಲ್ಲಿ ಎಷ್ಟು ದಿನ ಅಂತ ಇರುವುದು. ನಮಗೂ ಒಂದು ಸ್ವಂತ ಮನೆ ಬೇಡ್ವೇ ಅಂತಾ ಯಾವಾಗ ನಮ್ಮ ಅಮ್ಮನ ತಲೆಯಲ್ಲಿ ಹುಳಾ ಹೊಕ್ಕಿತೋ, ಅಂದಿನಿಂದ ತಂದೆಯವರ್ನ್ನು ಕಾಡೀ ಬೇಡೀ ಸಾಲ ಸೋಲ ಮಾಡಿಸಿ ಬೆಂಗಳೂರಿನಲ್ಲೊಂದು 40×66 ನಷ್ಟು ವಿಶಾಲವಾದ ನಿವೇಶನವೊಂದನ್ನು ಕೊಂಡು ಅದರಲ್ಲೊಂದು ಪುಟ್ಟದಾಗಿ ವಾಸಕ್ಕೊಂದು ಮನೆಯನ್ನು ಕಟ್ಟಿಸಿಕೊಂಡು ಮನೆಯ ಸುತ್ತಲೂ ಊರಿನಿಂದಲೇ ಐದಾರು ಸಾಂಪ್ರದಾಯಿಕ ತೆಂಗಿನ ಸಸಿಗಳನ್ನು ತರಿಸಿ ಅದನ್ನು ಮಕ್ಕಳಿಗಿಂತಲೂ ಹೆಚ್ಚಾಗಿ ಪೋಷಿಸಿ ಫಲ ಕೊಡಲಾರಂಬಿಸಿದ ನಂತರವಂತೂ ನಮ್ಮ ತಂದೆ ತಾಯಿಯರ ಆನಂದಕ್ಕೆ ಪಾರವೇ ಇಲ್ಲ. ನನಗೆ ಇನ್ನೂ ಚೆನ್ನಾಗಿ ನೆನಪಿರುವಂತೆ ನಮ್ಮ ಮನೆಯ ತೆಂಗಿನ ಮರದಲ್ಲಿ ಮೊದಲ ಬಾರಿಗೆ ಹೊಂಬಾಳೆ ಮೂಡಿದಾಗ ನಮ್ಮ ಮನೆಯಲ್ಲಿ ಹಬ್ಬದ ವಾತಾವರಣ. ಆ ಮರಕ್ಕೆ ಪೂಜೆ ಮಾಡಿ ಅಕ್ಕ ಪಕ್ಕದವರನ್ನು ಕರೆದು ಅರಿಷಿನ ಕುಂಕುಮ ಕೊಟ್ಟು ಗಸಗಸೆ ಪಾಯಸದ ಸಮಾರಾಧನೆ ಮಾಡಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

chap2ಹಾಕಿದ ಆರು ಮರಗಳಲ್ಲಿ ಒಂದನ್ನು ಉದ್ದೇಶಪೂರ್ವಕವಾಗಿಯೇ ತೆಗಿಸಿ ಹಾಕಿದ್ದರಿಂದ ಉಳಿದ ಐದೂ ಮರಗಳೂ ಸಾಕಷ್ಟು ಫಲ ನೀಡುತ್ತಿದ್ದವು. ನಾವು ಹೇಗೆ ನಮ್ಮೂರಿನಲ್ಲಿ ಎಳನೀರು ಕುಡಿದು ಸಂಭ್ರಮಿಸುತ್ತಿದ್ದೆವೋ ಅದೇ ರೀತಿ ಸಂಭ್ರಮಿಸುವ ಪಾಳಿ ಈಗ ನಮ್ಮ ಅಣ್ಣಂದಿರ ಮತ್ತು ಅಕ್ಕ ತಂಗಿಯ ಮಕ್ಕಳ ಪಾಲಾಗಿತ್ತು. ಅವರೆಲ್ಲರಿಗೂ ನಮ್ಮ ತಂದೆಯವರು ಪ್ರೀತಿಯ ಎಳ್ನೀರ್ ತಾತ ಆಗಿ ಹೋಗಿದ್ದರು. ಉಂಡೂ ಹೋದಾ ಕೊಂಡೂ ಹೋದ ಎನ್ನುವಂತೆ ಮನಸೋ ಇಚ್ಚೆ ಎಳ್ನೀರನ್ನು ಕುಡಿಸುತ್ತಿದ್ದದ್ದಲ್ಲದೇ, ಅವರು ಮನೆಗಳಿಗೆ ನಾಲ್ಕಾರು ಎಳನೀರುಗಳನ್ನು ಕೊಟ್ಟು ಕಳಿಸಿದರೇನೇ ನಮ್ಮ ತಂದೆ ತಾಯಿಯರಿಗೆ ಸಮಾಧಾನವಾಗುತ್ತಿತ್ತು. ಇನ್ನೂ ಯಾರೇ ನಮ್ಮ ಮನೆಗೆ ಬಂದರೂ ಬಾವಿಯಿಂದ ನೀರನ್ನು ಸೇದಿ ಹಂಡೆಗೆ ಸುರಿದು, ತೆಂಗಿನ ಹೆಡೆಮಟ್ಟೆ, ತೆಂಗಿನ ಸಿಪ್ಪೆ, ಕರಟಗಳನ್ನು ಹಾಕಿ ಚೆನ್ನಾಗಿ ಕೊತಕೊತನೇ ಬಿಸಿ ಬಿಸಿ ನೀರನ್ನು ಕಾಯಿಸಿ ಮೈ ತುಂಬ ಎಣ್ಣೇ ಹಚ್ಚಿ, ಹದವಾಗಿ ಚಿಗರೇಪುಡಿ ಮತ್ತು ಸೀಗೆ ಪುಡಿಯಿಂದ ಎಣ್ಣೇ ಹೋಗಿಸುತ್ತಿದ್ದ ಸುಖಃವನ್ನು ಅನುಭವಿಸಿದವರಾರೂ ಇನ್ನೂ ಮರೆತಿಲ್ಲ. ಸಂಬಂಧೀಕರ ಮತ್ತು ಅಕ್ಕ ಪಕ್ಕದವರ ಯಾರದ್ದೇ ಮನೆಯಲ್ಲಿ ಯಾವುದೇ ಶುಭ ಸಮಾರಂಭಗಳು ನಡೆದರೂ ಅದರ ಚಪ್ಪರಕ್ಕೆ ನಮ್ಮ ಮನೆಯ ತೆಂಗಿನ ಗರಿಯೇ ಪ್ರಾಶಸ್ತ್ಯ.

kal3ದಿನಗಳು ಕಳೆದಂತೆಲ್ಲಾ ತೆಂಗಿನ ಮರಗಳು ನಮ್ಮ ಮನೆಗಿಂತಲೂ ಎತ್ತರಕ್ಕೇರಿದ್ದವು. ಮೂರು ತಿಂಗಳಿಗೊಮ್ಮೆ ಸುಮಾರು 150-250 ಕಾಯಿಗಳನ್ನು ಕೀಳಿಸುತ್ತಿದ್ದರು. ಅರಂಭದಲ್ಲಿ ಕಾಯಿ ಕೀಳಿಸಲು ಮರವೊಂದಕ್ಕೆ 20ರೂಗಳನ್ನು ಕೊಡುತ್ತಿದ್ದದ್ದು ಅಂತಿಮವಾಗಿ ಅದು 200ಕ್ಕೇರಿತ್ತು. ಮರದಿಂದ ಗೊನೆಯನ್ನು ಜೋಪಾನವಾಗಿ ಇಳಿಸಿ, ಚೆನ್ನಾಗಿ ಬಲಿತ ಕಾಯಿಗಳನ್ನು ಅಟ್ಟದ ಮೇಲೆ ಕೊಬ್ಬರೀಯಾಗಲೆಂದು ಹಾಕಿ ಉಳಿದ ಕಾಯಿಗಳನ್ನು ಮನೆಗೆ ಬಳಸುತ್ತಿದ್ದದಲ್ಲದೇ ನಮ್ಮ ಬಂಧು-ಬಾಂಧವರಲ್ಲದೇ ಅಕ್ಕ ಪಕ್ಕದವರಿಗೂ ಕೊಡುತ್ತಿದ್ದೆವೇ ವಿನಃ ಎಂದಿಗೂ ಒಂದೂ ಕಾಯಿಯನ್ನು ಹಣಕ್ಕಾಗಿ ಮಾರಲೇ ಇಲ್ಲ. ಹಬ್ಬಗಳು ಬಂದಿತೆಂದರೆ ಅವತ್ತು ಅರವತ್ತು ಕಾಯಿಗಳನ್ನು ಸುಲಿದು ಎಲ್ಲರ ಮನೆಗಳಿಗೆ ಕೊಟ್ಟು ಬರುವುದೇ ನಮ್ಮ ಕೆಲಸವಾಗುತ್ತಿತ್ತು. ಸಂಕ್ರಾಂತಿ ಬಂದಿತೆಂದರೆ ನಮ್ಮ ಹತ್ತಿರದ ಸಂಬಂಧಿಗಳು ಮತ್ತು ಸುತ್ತಮುತ್ತಲಿನ ಎಲ್ಲರಿಗೂ ಹಬ್ಬಕ್ಕೆ ಸಾಕಾಗುವಷ್ತು ಕೊಬ್ಬರೀ ನಮ್ಮ ಮನೆಯಿಂದಲೇ ಕೊಡುತ್ತಿದ್ದರು. ನಮ್ಮ ತಾಯಿಯವರು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ತಂಗಿಯರು, ಅವರ ತಂಗಿಯಂದಿರು ಮತ್ತು ನಮ್ಮ ತಂದೆಯವರ ಅಕ್ಕ ತಂಗಿಯರು ಎಂದು ಬೇಧ-ಭಾವ ತೋರದೇ, ಎಲ್ಲರ ಮನೆಗಳಿಗೂ ಎಳ್ಳು ಬೆಲ್ಲಕ್ಕೆ, ಕೊಬ್ಬರಿಯನ್ನು ಸ್ವತಃ ಸಣ್ಣದಾಗಿ ಹೆಚ್ಚಿ ಒಣಗಿಸಿ, ಒಂದರಾಡಿ ಕೊಡುತ್ತಿದ್ದದ್ದು ಇನ್ನೂ ಹಚ್ಚ ಹಸಿರಾಗಿಯೇ ಮನದಲ್ಲಿದೆ. ಕಾಲ ಕಾಲಕ್ಕೆ ನಮ್ಮ ಮನೆಯ ಜೊಬ್ಬರೀ ಗಿಟುಕುಗಳು, ವಿದೇಶದಲ್ಲಿದ್ದ ನಮ್ಮ ಸಂಬಂಧೀಕರ ಮನೆಗಳ ವರೆಗೂ ತಲುಪಿತ್ತು.

ಮನೆಯಲ್ಲಿ ಯತೇಚ್ಛವಾಗಿ ಕಾಯಿ ಮತ್ತು ಕೊಬ್ಬರಿಗಳಿದ್ದ ಕಾರಣ, ಅಮ್ಮ ‌ಮಾಡುತ್ತಿದ್ದ ಪ್ರತೀ ಅಡುಗೆಯಲ್ಲೂ ಕಾಯಿ‌ಯೇ ಮುಂದು. ‌ಏನಿಲ್ಲವೆಂದರೂ ದಿನಕ್ಕೆ ಎರಡ್ಮೂರು ಕಾಯಿಗಳಾದರೂ ಅಚ್ಚರಿ ಎನಿಸುತ್ತಿರಲಿಲ್ಲ. ಚೆಟ್ನಿ, ಗೊಜ್ಜು, ಪಲ್ಯ, ಸಾರು, ಹುಳೀ, ಎಲ್ಲದಕ್ಕೂ ಕಾಯಿಯೇ ಪ್ರಾಧಾನ್ಯ. ಇಂಗು-ತೆಂಗು ಇದ್ದರೆ ಮಂಗವೂ ಚೆಂದಗೆ ಅಡುಗೆ ಮಾಡುತ್ತದಂತೇ ಎನ್ನುವಂತೆ ನಮ್ಮಮ್ಮನ ಕೈ ರುಚಿ ನಿಜಕ್ಕೂ ಅದ್ಭುತ. ಕಾಯಿ ಹಾಲು ಹಾಕಿ ಮಾಡುತ್ತಿದ್ದ ಆ ಸಾರು. ಕಾಯಿ ಹಿಂಡಿ ಹಾಲು ತೆಗೆದ ಚರಟವನ್ನು ಸುಮ್ಮನೇ ಬಿಸಾಡಲು ಮನಸ್ಸಾಗದೇ ಅದರ ಸಲುವಾಗಿ ಮಾಡುತ್ತಿದ್ದ ಪಲ್ಯ, ಕೋಸಂಬರಿ, ಹುಸ್ಲಿಗಳು ಊಟದ ರುಚಿಯನ್ನು ಮತ್ತಷ್ಟು ಮಗದಷ್ಟು ಹೆಚ್ಚಿಸುತ್ತಿದ್ದವು.

ತೆಂಗಿನ ಮರ ಬೆಳೆದು ದೊಡ್ಡದಾಗುತ್ತಿದ್ದಂತೆಯೇ ಅದನ್ನು ನೋಡ ನೋಡುತ್ತಲೇ ನಾನೂ ಸಹಾ ಬೆಳೆದು ನಿಂತಿದ್ದೆ. ಅಪ್ಪಾ-ಅಮ್ಮಾ ನೋಡಿ ಒಪ್ಪಿ ಅದ್ದೂರಿಯಾಗಿ ಬೆಂಗಳೂರಿನ ಹುಡುಗಿಯೊಂದಿಗೆ ಮದುವೆ ಮಾಡಿಸಿಯೇ ಬಿಟ್ಟರು. ಅಲ್ಲಿಂದ ಶುರುವಾಯ್ತು ನೋಡಿ ಕಾಯಿಯ ಕುರಿತಂತೆ ಜಟಾಪಟಿ. ಅತ್ತೆ ಸೊಸೆಯರ ನಡುವಿನ ಈ ತಂಗಿನ‌ಕಾಯಿ ಬಳಕೆಯ ಪೈಪೋಟಿಯ ಅನುಭವ ನೇರವಾಗಿಯಲ್ಲದಿದ್ದರೂ ತೆರೆಯ ಹಿಂದೆ ಆಗುತ್ತಿದ್ದದ್ದೇ ನನಗೇ. ಅದರಿಬ್ಬರ ಮಧ್ಯೆ ನಾನು ಸಿಕ್ಕಿ ಸಲುಗುತ್ತಿದ್ದದ್ದು ಯಾವ ಶತ್ರುವಿಗೂ ಬೇಡ.

ಹೇಳೀ ಕೇಳಿ ಬೆಂಗಳೂರಿನಲ್ಲಿಯೇ ಹುಟ್ಟಿ ಕಾಯಿ, ಕೊಬ್ಬರಿಯನ್ನು ಕೊಂಡು ತಂದು ತಿಂದು ಬೆಳೆದವಳು ನಮ್ಮಾಕಿ. ಹಾಗಾಗಿ ಅವಳ ಆಡುಗೆಯಲ್ಲಿ ಕಾಯಿಯನ್ನು ಜೋಪಾನವಾಗಿ ಬಳಸುತ್ತಿದ್ದಳು. ಅದಕ್ಕೆ ತದ್ವಿರುದ್ಧ ನಮ್ಮಮ್ಮ. ಚಟ್ನಿಗೆ ಕಾಯಿಯ ಹೊರತಾಗಿ ಹುರಿಗಡಲೆ ಬಳೆಸುತ್ತಾರೆ ಎನ್ನುವುದು ಅರಿವಾಗಿದ್ದೇ ನನ್ನ ಮಡದಿ ಬಂದ ಮೇಲೆ ಎಂದರೂ ತಪ್ಪಾಗಲಾರದು. ಅಮ್ಮ ದಿನಕ್ಕೆ ಒಂದೆರಡು ಕಾಯಿ ಬಳಸುತ್ತಿದ್ದರೆ ನಮ್ಮಾಕಿ ವಾರಕ್ಕೊಂದೋ ಇಲ್ಲವೇ ಎರಡೋ ತೆಂಗಿನ ಕಾಯಿಯನ್ನು ಬಳೆಸುವುದನ್ನು ನೋಡಿ ಅಮ್ಮನಿಗೆ ಅದೇನೋ ಸಂಕಟ. ಅಲ್ವೋ, ಇಷ್ಟೇ ಇಷ್ಟು ಕಾಯಿ ಹಾಕಿ ಅಡುಗೆ ಮಾಡಿದರೆ ಅದೇನು ರುಚಿಯಾಗಿರುತ್ತದೋ ಎಂದು ಅಮ್ಮಾ ಹೇಳಿದ್ರೇ, ಯಾಕೇ? ಚೆನ್ನಾಗಿಲ್ಲಾ ಚೆನ್ನಾಗಿಲ್ಲಾ ಅಂತಾನೇ ಒಂದು ಡಬರೀ ಸಾರು ಖರ್ಚಾಗಿದೇ? ಮನೆಯಲ್ಲಿ ಕಾಯಿ ಇದೇ ಅಂತಾ ಅಷ್ಟೊಂದು ಬಳಸುವುದು ದೇಹಕ್ಕೆ ಒಳ್ಳೆಯದಲ್ಲಾ. ಕೊಲೇಸ್ಟ್ರಾಲ್ ಹೆಚ್ಚಾಗುತ್ತದೆ ಎನ್ನುವ ನೀತಿ ಪಾಠ ಮನೆಯವರಿಂದ. ಒಟ್ಟಿನಲ್ಲಿ ಅತ್ತೇ ಸೊಸೆಯರ ತೆಂಗಿನಕಾಯಿಯ ವ್ಯಾಜ್ಯದಲ್ಲಿ ಬಲಿಪಶುವಾಗುತ್ತಿದ್ದದ್ದು ಮಾತ್ರಾ ನಾನೇ.

ನಾವು ಯಾರ ಮನೆಗಾದರೂ ಅಥವಾ ಯಾವುದೇ ಸಭೆ ಸಮಾರಂಭಗಳಿಗೆ ಹೋದಾಗ, ತೆಂಗಿನಕಾಯಿ ಬಾಗಿಣ ಕೊಟ್ಟರೆ, ನಾವು‌ ಮುಟ್ಟಿದ ಶಾಸ್ತ್ರ ‌ಮಾಡಿ ಅಯ್ಯೋ, ನಮ್ಮ ಮನೆಯಲ್ಲೇ ‌ಅಷ್ಟೊಂಸು‌ ತೆಂಗಿನ ಮರ ಇದೆ.‌ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ ಎಂದೇ ಹೇಳುತ್ತಿದ್ದ ಕಾರಣ ನಮ್ಮ ಸಂಬಂಧಿಕರಾರೂ ನಮಗೆ ತೆಂಗಿನ ಕಾಯಿಯನ್ನೇ ಕೊಡುತ್ತಿರಲಿಲ್ಲ.

ಜಾತಸ್ಯ ಮರಣಂ ಧೃವಂ ಎನ್ನುವಂತೆ ಹುಟ್ಟಿದವರು ಸಾಯಲೇ ಬೇಕು ಎನ್ನುವುದು ಜಗದ ನಿಯಮ. ಅದೇ ರೀತಿ ಅದೊಂದು ದಿನ ಯಾರಿಗೂ ಹೇಳದೇ ಬಾರದಿರುವ ಲೋಕಕ್ಕೆ ಅಮ್ಮಾ ಹೋಗಿಯೇ ಬಿಟ್ಟರು. ಅಮ್ಮನೇ ಇಲ್ಲದಿರುವಾಗ ಅಮ್ಮನ ಮನೆಯೇಕೆ ಎಂದು ಅಮ್ಮಾ ಬಾಳಿ ಬೆಳಗಿದ್ದ ನಮ್ಮ ಹಳೆಯ ಮನೆಯನ್ನು ಮಾರಿದ ಅಪ್ಪಾ ಅವರಿಚ್ಚೆಯಂತೆ ಮಕ್ಕಳಿಗೆ ಪಾಲನ್ನು ಹಂಚಿ ಬಿಟ್ಟರು. ನಿಜ ಹೇಳಬೇಕೆಂದರೆ ಆ ಮನೆಯನ್ನು ಮಾರಿದ ನಂತರವೇ ನಮಗೆ ತೆಂಗಿನ ಕಾಯಿ ಮತ್ತು ಕೊಬ್ಬರಿಯ ನಿಜವಾದ ‌ಬೆಲೆ ಗೊತ್ತಾದದ್ದು. ಅಯ್ಯೋ ಇಷ್ಟು ಸಣ್ಣ ಕಾಯಿಗೆ 25-30 ರೂಪಾಯಿಗಳಾ? ಎಂದು‌‌ ಮೂಗಿನ ಮೇಲೆ ಬೆರಳಿಟ್ಟೆವು. ಸಂಕ್ರಾಂತಿಗೆ ಕೇಜಿಗೆ 200ರೂ ಕೊಟ್ಟು ಕೊಬ್ಬರಿಯನ್ನು ಕೊಂಡು ತಂದಾಗಲೇ ನನ್ನಾಕಿ ರೀ…, ಕಾಯಿ ಕಡಿಮೇ ಬಳಸೀ… ಎಂದು ಏಕೆ ಸದಾಕಾಲವೂ ಹೇಳುತ್ತಿದ್ದಳು ಎಂಬ ಮಹತ್ವ ಅರಿವಾಗಿತ್ತು. ಆದರೆ ಕಾಲ ಮಿಂಚಿ ಹೋಗಿದ್ದರಿಂದ ಚಿಂತಿಸಿ ಫಲವಿಲ್ಲ ಎನ್ನುವಂತೆ ನಿಧಾನವಾಗಿ ಮತ್ತು ಆನಿವಾರ್ಯವಾಗಿ ದಿನಕ್ಕೆರಡು ಕಾಯಿಯ ಬಳಕೆಯಿಂದ, ವಾರಕ್ಕೊಂದೋ ಇಲ್ಲವೇ ಎರಡು ಕಾಯಿಯನ್ನು ಬಳಸುವ ಅಭ್ಯಾಸ ಮಾಡಿಕೊಂಡೆವು.

‌ಈಗ ಯಾರದ್ದೇ ಮನೆ, ಮದುವೆ, ಮುಂಜಿ, ಸಭೇ, ಸಮಾರಂಭಗಳಿಗೆ ಹೋದರೋ‌ ನಿಸ್ಸಂಕೋಚವಾಗಿ‌ ಕಾಯಿಯನ್ನು ಕೇಳಿ ಪಡೆದುಕೊಂಡರು ಬರುವಂತಹ ದೈನೇಸಿ‌ ಸ್ಥಿತಿಗೆ ತಲುಪಿದ್ದೇವೆ. ಮೈಸೂರಿನಲ್ಲಿರುವ ಚಿಕ್ಕಪ್ಪನ ಮನೆಗೆ ಹೋದರೆ ಮೊದಲು ನೋಡುವುದೇ ಮನೆಯ ಮುಂದಿನ ತೆಂಗಿನ ಮರಗಳಲ್ಲಿ ಎಷ್ಟು ಗೊನೆ ಬಲಿತಿದೆ. ಇಲ್ಲವೇ ಅವರ ಅಟ್ಟದ ಮೇಲೆ ಎಷ್ಟು ಕಾಯಿ ಇದೆ ಎಂದು. ಬೆಂಗಳೂರಿಗೆ ಬರುವಾಗ ಕಾರಿನ ಡಿಕ್ಕಿಯ ಭರ್ತಿ ಕಾಯಿಯನ್ನು ತುಂಬಿಕೊಂಡು ಬರ್ತೀವಿ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲವೇನೋ?

porake2ಮೊನ್ನೆ ಮನೆಯ ಮುಂದೆ ತೆಂಗಿನ ಪೊರಕೆಯನ್ನು ಮಾರಿಕೊಂಡು ಬಂದಾಕೆ, ಅಣ್ಣಾ ಜೋಡಿ 180ಕ್ಕೆ ಮಾರ್ತಾ ಇದ್ದೀನಿ ನಿಮಗಾದ್ರೇ 150ಕ್ಕೆ ಕೊಡ್ತೀನಿ ಅಂದಾಗ ನನಗೇ ಅರಿವಿಲ್ಲದಂತೆ ಊಟವಾದ ಬಳಿಕ ಒಣಗಿ ಬಿದ್ದ ತೆಂಗಿನ ಸೋಗೆಯನ್ನು ಮನೆಯ ಮುಂದೆ ಹರಡಿಕೊಂಡು ನಿಧಾನವಾಗಿ ಜೀವುತ್ತಾ (ಸೀಳುತ್ತಾ) ರಾಶಿ ರಾಶಿ ತೆಂಗಿನ ಪೊರಕೆಗಳನ್ನು ಮಾಡಿ ಎಲ್ಲರಿಗೂ ಉಚಿತವಾಗಿ ಹಂಚುತ್ತಿದ್ದ ನಮ್ಮ ಅಜ್ಜಿ ಮತ್ತು ತಂದೆಯವರು ಕಣ್ಣ ಮುಂದೆ ಬಂದು ಕಣ್ಣಂಚಿನಲ್ಲಿ ನೀರೂರಿತ್ತು. ಆ ಕೂಡಲೇ ನನ್ನ ಮನದಾಳವನ್ನು ಅರಿತ ನನ್ನಾಕೇ ಪ್ರೀತಿಯಿಂದ ತಲೆ ಸವರಿದಾಗ ಆಕೆಯ ಆ ಕರುಣೆಯಲ್ಲಿ ನಮ್ಮಮ್ಮನನ್ನು ಕಂಡಿದ್ದಂತೂ ಸುಳ್ಳಲ್ಲ.

ಈ ರೀತಿ ತೆಂಗಿನಕಾಯಿ ನಮ್ಮ ಜೀವನದಲ್ಲಿ ಕೇವಲ ಅಡುಗೆಯ ಪರಿಕರವಾಗಿವುದಷ್ಟೇ ಅಲ್ಲದೇ, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ನಮ್ಮ ಮೂರು ತಲೆಮಾರಗಳನ್ನು ಸದಾಕಾಲವೂ ನೆನಪಿಸುವಂತಹ ಕಲ್ಪವೃಕ್ಷವಾಗಿದೆ.

ಏನಂತೀರೀ?

One thought on “ಕಲ್ಪವೃಕ್ಷ

  1. ಅದೇ ಪರಿಸ್ಥಿತಿ ನನಗೂ ಆಗ್ತಾ ಇದೆ ಸಾರ್.. ನಾನು ಹುಟ್ಟಿದ್ದು ಹಿರಿಯೂರು ತಾಲೂಕಿನಲ್ಲಿ ಆದರೂ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನಲ್ಲಿ ಇದ್ದಾಗ ನನ್ನ ಸ್ನೇಹಿತೆಯರು ಎಷ್ಟೇ ಬಾರಿ ಎಳನೀರು ಕೊಂಡು ಕುಡಿಯುತ್ತಿದ್ದರು ನನಗೆ ಎಂದಿಗೂ ಅದನ್ನು ಕುಡಿತಿರ್ಲಿಲ್ಲ.. ಅದೇ ಮನೆಗೆ ಹೋದ್ರೆ ಕುಡಿದೇ ಬರ್ತಾ ಇರ್ಲಿಲ್ಲ.. ಆದ್ರೆ ಬೆಂಗಳೂರು ಎಷ್ಟೋ ಉತ್ತಮ.. ಈಗ ಗಂಡನ ಮನೆ ರಾಯಚೂರು.. ಇಲ್ಲಿ ತೆಂಗಿನ ಕಾಯಿ ಬರಿ ದೇವರಿಗೆ ಮಾತ್ರ.. ನಂತರ ಅದನ್ನು ಯಾವ್ದಾದ್ರೂ ಗಿಡಕ್ಕೆ ಹೂವು ಹಣ್ಣಿನ ಜೊತೆ ಹಾಕಿ ಬಿಡ್ತಿದ್ರು. ಅದನ್ನ ಉಪಯೋಗಿಸೋದು ಗೊತ್ತಿಲ್ಲ.. ಇಡ್ಲಿ ಜೊತೆಗಿನ ಚಟ್ನಿ ಕೂಡ ಸ್ವಲ್ಪ ಒಣ ಕೊಬ್ಬರಿ ಇದ್ದರೆ ಇಲ್ಲ ಅಂದ್ರೆ ಬರೀ ಶೇಂಗಾ( ಕಡಲೆ ಕಾಯಿ) ಪುಟಾಣಿ( ಕಡಲೆ) ಹಾಕಿ ಮಾಡ್ತಾ ಇದ್ದವರು ಈಗ ಯಾವ್ದಾದ್ರೂ ಪೂಜೆ ಆದ್ರೆ ಅಲ್ಲಿ ಒಡೆದ 5-10 ಕಾಯಿ ಒಂದೇ ದಿನ ತಂದು ಫ್ರಿಡ್ಜ್ ತುಂಬಾ ಇಡ್ತಾರೆ.. ಆದ್ರೆ ಈಗ ನನುಗೂ ಕೂಡಾ ಅದುನ್ನ ಬರಿ ಚಟ್ನಿಗೆ ಮಾತ್ರ ಉಪಯೋಗಿಸೋದು ಅಭ್ಯಾಸ ಆಗಿದೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s