ಜನಮರುಳೋ ಜಾತ್ರೆ ಮರುಳೋ?

ಕಳೆದು ಒಂದೆರಡು ವಾರಗಳಿಂದ ಕೂರೋನಾ ರೋಗಾಣುವುಗಿಂತಲೂ ಅತ್ಯಂತ ಹೆಚ್ಚಾಗಿ ಹರಡಿದ ವಿಷಯವೆಂದರೆ, ಮಂಡ್ಯಾ ಜಿಲ್ಲೆಯ ಮಳವಳ್ಳಿ ತಾಲ್ಲೂಕ್ಕಿನ ನೆಟ್ಕಲ್ ಎಂಬ ಗ್ರಾಮದ ಮಹತ್ವಾಕಾಂಕ್ಷಿ ಪ್ರತಾಪ್ ಅಲಿಯಾಸ್ ದ್ರೋಣ್ ಪ್ರತಾಪ್ ವಿಷಯ ಬಗ್ಗೆಯೇ. ಸುಮಾರು ಒಂದೆರಡು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆಯೇ ದ್ರೋಣ್ ಕುರಿತಂತೆ ತನ್ನ ಸಂಶೋಧನೆಯ ಫಲವಾಗಿ ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಯುವ ವಿಜ್ಞಾನಿ, ಕಸದಿಂದ ರಸ ತೆಗೆಯುವಂತೆ ಹಳೆಯ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಬಳಸಿಕೊಂಡು ಸುಮಾರು 600 ಕ್ಕೂ ಹೆಚ್ಚು ದ್ರೋಣ್ ಗಳನ್ನು ತಯಾರಿಸಿದ್ದಾನೆ. ಕೇವಲ 21 ವರ್ಷದ ವಯಸ್ಸಿನ ಪ್ರತಾಪ್ ಅವರ ಈ ಸಾಧನೆಗಾಗಿ ದೇಶ ವಿದೇಶಗಳಲ್ಲಿ ಪ್ರಸಿದ್ಧರಾಗಿ ತಿಂಗಳಲ್ಲಿ 20-25 ದಿನಗಳನ್ನು ವಿದೇಶಗಳಲ್ಲಿಯೇ ಕಳೆಯುವ ಈತನನ್ನು ಅನೇಕ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಮಾಸಿಕ 16 ಲಕ್ಷ ರೂಗಳು, 5 ಕೋಣೆಗಳುಳ್ಳ ಮನೆ ಮತ್ತು 2.5 ಕೋಟಿ ಬೆಲೆಬಾಳುವ ಕಾರನ್ನು ನೀಡುವುದಾಗಿ ಹೇಳಿದ್ದರೂ, ಒಬ್ಬ ದೇಶಪ್ರೇಮಿಯಾಗಿ ಈ ಆಫರ್ ಗಳನ್ನು ತಿರಸ್ಕರಿಸಿ ತನ್ನ ಈ ಸಾಧನೆ ಭಾರತದ ಸೇನೆಗೆ ಮೀಸಲಾಗಿಟ್ಟಿದ್ದೇನೆ ಎಂದು ಪುಂಖಾನು ಪುಂಖವಾಗಿ ಹೇಳುತ್ತಿದ್ದದ್ದನ್ನು ಕೇಳಿ ಮೈ ರೋಮಾಂಚನವಾಗಿದ್ದಂತೂ ಸುಳ್ಳಲ್ಲ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಈತನ ಸಾಧನೆಯನ್ನು ಗಮನಿಸಿದ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಈತನನ್ನು ನಮ್ಮ ಡಿಆರ್‌ಡಿಒ ಸಂಸ್ಥೆಯಲ್ಲಿ ಯುವ ವಿಜ್ಞಾನಿಯಾಗಿ ಸೇರಿಸಿಕೊಳ್ಳಬೇಕು ಎಂಬ ವಿಷಯ ಓದಿದ ನಂತರವಂತೂ ಪ್ರತಾಪ್ ಮತ್ತು ಪ್ರಧಾನಿಗಳ ಬಗ್ಗೆ ಹೆಮ್ಮೆಯಾಗಿತ್ತು.

kageಆದರೆ ಇದ್ದಕ್ಕಿದ್ದಂತೆಯೇ ದೇಶದಲ್ಲಿ ನಡೆಯುವ ಸುದ್ದಿ ಮತ್ತು ಅಭಿಪ್ರಾಯಗಳ ಕುರಿತಾದ ಮಾಹಿತಿಯನ್ನು ವಾಸ್ತವವಾಗಿ ಪರಿಶೀಲನೆ ಮಾಡುವಂತಹ OpIndia.com ಎಂಬ ವೆಬ್‌ಸೈಟ್ ಒಂದು ದ್ರೋಣ್ ಪ್ರತಾಪ್ ಕುರಿತಂತೆ ಸುದೀರ್ಘವಾದ ತನಿಖೆ ನಡೆಸಿ ಆತ ಇದುವರೆಗೂ ಹೇಳಿದ್ದೆಲ್ಲವೂ ಹಸೀ ಸುಳ್ಳು. ಆತ ಯಾವುದೇ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡದೇ ಇಲ್ಲ. ನಿಜಕ್ಕೂ ಆತ ಹೇಳಿದಂತಹ ಸ್ಪರ್ಧೆಗಳೇ ನಡೆದಿಲ್ಲ ಎಂದು ತಿಳಿಸಿದ್ದಲ್ಲದೇ ಆತನ ಇದುವರೆಗಿನ ಭಾಷಣವೆಲ್ಲವೂ ಹಸೀ ಸುಳ್ಳು ಎಂದು ವೈಜ್ಞಾನಿಕವಾಗಿ ದಾಖಲೆಯ ಸಮೇತ ಎಳೆ ಎಳೆಯಾಗಿ ಬಿಚ್ಚಿಟ್ಟಿತೋ ಆಗ ನಿಜಕ್ಕೂ ಮನಸ್ಸಿಗೆ ದುಃಖವಾಗ ತೊಡಗಿತು. ಕುರಿ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲನ್ನು ಹೋಡೆಯುವಂತೆ ಎಲ್ಲಾ ಮಾಧ್ಯಮಗಳೂ ಸಾಮಾಜಿಕ ಜಾಲ ತಾಣಗಳು ಆತನ ವಿರುದ್ಧವಾಗಿ ಬರೆಯ ತೊಡಗಿದಾಗ, ದೇವರೇ ಆತನ ಮೇಲಿರುವ ಈ ಎಲ್ಲಾ ಅರೋಪಗಳೂ ಸುಳ್ಳಾಗಿರಲಿ ಎಂದು ಮನಸ್ಸು ಹಾತೊರೆದಿದ್ದಲ್ಲದೇ ಅದನ್ನೇ ನಾನು ನನ್ನ ಮುಖ ಪುಟದಲ್ಲಿ ಹಾಕಿಕೊಂಡಿದ್ದೆ.

ಇಷ್ಟೆಲ್ಲಾ ನಡೆಯುತ್ತಿರುವಾಗ ಪ್ರತಾಪ್ ಏಕೆ ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿಲ್ಲಾ ಎಂದು ಯೋಚಿಸುತ್ತಿದ್ದಾಗಲೇ, ಪ್ರತಾಪ್ ಕೂಡ ಕೆಲವು ಮಾಧ್ಯಮಗಳ ಮೂಲಕ ತನ್ನ ಮೇಲಿನ ಈ ಆರೋಪಗಳೆಲ್ಲವೂ ಸುಳ್ಳು. ನಾನು ಇದುವರೆವಿಗೂ ಹೇಳಿದ್ದೆಲ್ಲವೂ ಸತ್ಯ. ನನ್ನ ವಿರುದ್ಧ ಕಾಣದ ಕೈಗಳ ಷಡ್ಯಂತ್ರ ನಡೆಯುತ್ತಿದೆ. ಈ ಕುರಿತಂತೆ ಇನ್ನೆರಡು ದಿನಗಳಲ್ಲಿ ದಾಖಲೆ ಸಮೇತ ತಿಳಿಸುತ್ತೇನೆ ಎಂದಾಗ ಮನಸ್ಸಿಗೆ ಕೊಂಚ ನಿರಾಳವಾಗಿತ್ತು.

BTVನೆನ್ನೆ ಸಂಜೆ B-TVಯಲ್ಲಿ ಕಿರಿಕ್ ಕೀರ್ತಿಯ ಸಂದರ್ಶನದಲ್ಲಿ ಪ್ರತಾಪನ ಪ್ರಲಾಪಗಳನ್ನು ನೋಡುತ್ತಿದ್ದಂತೆಯೇ ನನ್ನ ಆಶಾವಾದದ ಆಸೆಗಳೆಂಬ ಗಾಳಿ ತುಂಬಿದ್ದ ಬೆಲೂನ್ ಡಬ್ ಎಂದು ಒಡೆದು ಹೋಗಿ ನುಚ್ಚುನೂರಾಯಿತು. ಆತ ಈ ಮೊದಲೇ ಹೇಳಿದ್ದ ಸುಳ್ಳನ್ನು ಸತ್ಯ ಮಾಡಲು ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತಾ ಹೋಗುತ್ತಿದ್ದದ್ದು ಸ್ಪಷ್ಟವಾಗಿ ಗೊಚರಿಸಿತು.  ಸಂದರ್ಶಕ ಕೇಳುತ್ತಿದ್ದ ಪ್ರಶ್ನೆಗಳಿಗೆ ಸಂಬಂಧವೇ ಇಲ್ಲದೇ ಓತ ಪ್ರೋತವಾಗಿ ಆತ ನೀಡುತ್ತಿದ್ದ ಉತ್ತರಗಳು ಕೆಲವು ವರ್ಷಗಳ ಹಿಂದೆ ಅರ್ನಾಬ್ ಗೋಸ್ವಾಮಿ ಮತ್ತು ರಾಹುಲ್ ಗಾಂಧಿ ಸಂದರ್ಶನವನ್ನು ನೆನಪಿಸಿ ಸ್ಪಷ್ಟವಾಗಿ ಪ್ರತಾಪ್ ವಿಜ್ಞಾನಿಗಿಂತ ಒಬ್ಬ ಅವಕಾಶವಾದಿ ಎಂಬುದು ಜಗಜ್ಜಹೀರಾತಾಯಿತು.

jaggeshನಿಜ ಹೇಳಬೇಕೆಂದರೆ ಆತನಿಗೆ ದ್ರೋಣ್ ಬಗ್ಗೆ ಅಲ್ಪ ಸ್ವಲ್ಪ ಜ್ಞಾನವಿದೆ ಅದನ್ನೇ ಆತನ ತಾತಾ ಅಜ್ಜಿಯರು ಉತ್ಪೇಕ್ಷೆಯಾಗಿ ಹಿರಿಯ ನಟ ಜಗ್ಗೇಶ್ ಅವರಿಗೆ ವಿದೇಶದಲ್ಲಿ ತಿಳಿಸಿದ್ದಾರೆ. ಭಾರತಕ್ಕೆ ಮರಳಿಬಂದ ನಂತರ ಕುತೂಹಲದಿಂದ ಆತನನ್ನು ತಮ್ಮ ಮನೆಗೆ ಕರಿಸಿ ಮಾತಾನಾಡಿಸಿದಾಗ ಜಗ್ಗೇಶ್ ಅವರು ನಡೆಸಿಕೊಡುತ್ತಿದ್ದ ಕಾಗೇ ಹಾರಿಸುವ ಕಾರ್ಯಕ್ರಮಕ್ಕಿಂತಲೂ ಹೆಚ್ಚಾಗಿಯೇ ಈಗ ಕಾಗೇ ಹಾರಿಸಿದ್ದಾನೆ ಅದನ್ನು ತಮ್ಮ ಮುಗ್ಧತೆಯಿಂದ ನಂಬಿದ ಜಗ್ಗೇಶ್ ಅವರು ಒಬ್ಬ ಗ್ರಾಮೀಣ ಪ್ರತಿಭೆಗೆ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುವ ಉದ್ದೇಶದಿಂದ ತಮ್ಮ ರಾಜಕೀಯ ಪ್ರಭಾವ ಬಳೆಸಿಕೊಂಡು ಮಂತ್ರಿ ಮಾಗಧರಿಗೆ ಅವನನ್ನು ಪರಿಚಯಿಸಿದ್ದಲ್ಲದೇ ಜೀ ಟಿವಿಯ ತಮ್ಮ ಕಾರ್ಯಕ್ರಮವೊಂದರ ಮೂಲಕ ಈತನನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

ರೋಗಿ ಬಯಸಿದ್ದೂ ಹಾಲು ಅನ್ನ. ವೈದ್ಯ ಹೇಳಿದ್ದೂ ಹಾಲೂ ಅನ್ನ ಎನ್ನುವಂತೆ ತನಗೆ ಸಿಕ್ಕ ಇಂತಹ ಅದ್ಭುತ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಪ್ರತಾಪ್, ಅತ್ಯಂತ ಮುಗ್ಧತೆಯಿಂದ ಮರುಳು ಮಾಡಿದ್ದಾನೆ. ಅಲ್ಲಿಂದ ಶುರುವಾಯಿತು ನೋಡಿ ಮಾಧ್ಯಮಗಳ ಪ್ರತಾಪ. ಸದಾ ಕಾಲವೂ TRP ಹಿಂದೆ ಬಿದ್ದು ಸಣ್ಣ ಸಣ್ಣ ವಿಷಯಗಳನ್ನೂ ವಾಸ್ತವವನ್ನು ಅರಿಯದೇ ಅತೀ ವರ್ಣರಂಜಿತವಾಗಿ ತೋರಿಸಲು ಹಪಾಹಪಿಸುವ ಕನ್ನಡದ ಎಲ್ಲಾ ಮಾಧ್ಯಮಗಳೂ Zee Kannadaಕ್ಕಿಂತಲೂ ಒಂದು ಹೆಜ್ಜೇ ಮುಂದೆ ಹೋಗಿ ಆತನ ಪೂರ್ವಾಪರಗಳನ್ನು ತಿಳಿಯದೇ, ಸುಖಾ ಸುಮ್ಮನೆ ಆತನನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಂತೆಯೇ ಪ್ರತಾಪನಿಗೆ ರೊಟ್ಟಿ ಜಾರೀ ತುಪ್ಪಕ್ಕೆ ಬಿದ್ದಂತಾಗಿ ಇದೇ ಸುಸಂದರ್ಭ ಎಂದು ಇದೇ ಪ್ರಸಿದ್ಧಿಯನ್ನೇ ಬಳಸಿಕೊಂಡು ರಾಜಕಾರಣಿಗಳು, ಉದ್ಯಮಿಗಳು ಮತ್ತು ಮಠ ಮಾನ್ಯಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ತನ್ನ ಮುಂದಿನ ಸಂಶೋಧನೆಗಾಗಿ ದೇಣಿಗೆಯ ರೂಪದಲ್ಲಿ ಕಬಳಿಸಿದ್ದಾನೆ.

ಕಳ್ಳನ ಹೆಂಡತಿ ಯಾವಾಗಲೂ ಮುಂ.. ಎನ್ನುವ ಗಾದೆಯಂತೆ ಯಾವಾಗ ಈತನ ಸುಳ್ಳುಗಳು ಬಟ್ಟ ಬಯಲಾಯಿತೋ ಆತ ಸಮಾಜದ ಮುಂದೆ ಬೆತ್ತಲಾಗಿದ್ದಾನೆ. ಆತನೇ ಅನೇಕ ಬಾರಿ ಹೇಳಿಕೊಂಡಂತೆ ತಾನೊಬ್ಬ ಮುಗ್ಧ ಮತ್ತು ಮಹಾನ್ ದೇಶ ಭಕ್ತ ಎಂಬುದು ಸತ್ಯವಾಗಿದ್ದಲ್ಲಿ ಹೇಳಿದ್ದ ಸುಳ್ಳಿಗೆ ಮತ್ತೊಂದು ಸುಳ್ಳುಗಳ ಸರಮಾಲೆಯನ್ನು ಜೋಡಿಸುತ್ತಾ ವಿತಂಡ ವಾದ ಮಾಡದೇ ಎಲ್ಲರ ಬಳಿಯೂ ತಪ್ಪಾಗಿದೆ ಕ್ಷಮಿಸೀ ಎಂದಿದ್ದರೇ, ಏನೋ ಹುಡುಗು ಬುದ್ಧಿಯ ಹುಡುಗಾ ಈ ರೀತಿಯ ತಪ್ಪು ಮಾಡಿದ್ದಾನೆ. ಮುಂದೆ ಈ ರೀತಿ ಮಾಡ ಬೇಡ ಎಂದು ಸುಮ್ಮನಾಗುತ್ತಿದ್ದರೇನೋ? ಅದರೆ ಪ್ರಾಯಶಃ ಅವನ ಅಹಂ ಮತ್ತು ಅವನ ಹಿಂದಿದ್ದ ಮಾಧ್ಯಮಗಳು ಅಡ್ದಿಯಾಗಿವೆ.

ಯಾವ ಮಾಧ್ಯಮಗಳು ಅತನ ಪೂರ್ವಾಪರಗಳನ್ನು ಪರಿಶೀಲಿಸದೇ ಕೇವಲ ತಮ್ಮ TRPಗಾಗಿ ಅವನ ಎಲ್ಲಾ ಸಾಧನೆಗಳನ್ನು ಅನುಮೋದಿಸಿದ್ದವೋ ಈಗ ಅದೇ ಮಾಧ್ಯಮಗಳು ಮತ್ತದೇ TRP ಗಾಗಿ ಆತನನ್ನು ಬಳಸಿಕೊಳ್ಳುತ್ತಿವೆ. ಆದರೆ ಈ ಬಾರಿ ಆತನನ್ನು ಅಪರಾಧಿಗಳೆಂದು ಬಿಂಬಿಸಿ ಅದೇ ಮಾಧ್ಯಮಗಳು ನ್ಯಾಯಾಧೀಶರ ಸ್ಥಾನವನ್ನು ಆಲಂಕರಿಸಿರುವುದು ಅಸಹ್ಯವನ್ನು ತರಿಸುತ್ತಿದೆ. ಯಾವುದೇ ಸುದ್ದಿಯನ್ನು ಪ್ರಸಾರ ಮಾಡುವ ಮೊದಲು ಅದರ ಕುರಿತಂತೆ ಮಾಹಿತಿಯನ್ನು ಕಲೆಹಾಕಿ ವಾಸ್ತವತೆಯನ್ನು ಜನರ ಮುಂದೆ ಪ್ರಸಾರ ಮಾಡುವುದು ಒಂದು ಜವಾಬ್ಧಾರೀ ಪತ್ರಕರ್ತ ಮತ್ತು ಮಾಧ್ಯಮದ ಕರ್ತವ್ಯ. ಆದರೆ ಈ ಹಿಂದೇ ಮಾಡಿದಂತೆ ಈ ಬಾರಿಯೂ ಅತನನ್ನೇ ಮುಂದೆ ಕೂರಿಸಿಕೊಂಡೋ ಇಲ್ಲವೇ ವೀಡಿಯೋ ಸಂದರ್ಶನದ ಮೂಲಕ ಆತ ಒಪ್ಪಿಸುವ ಗಿಣಿ ಪಾಠವನ್ನೇ ತನಿಖೆ ನಡೆಸದೇ ನೇರ ಪ್ರಸಾರ ಮಾಡುತ್ತಿರುವುದು ಯಾವ ಪತ್ರಿಕಾ ಧರ್ಮ?

ಅತ ಹೇಳುತ್ತಿರುವುದು ಸತ್ಯವೋ ಇಲ್ಲವೇ ಸುಳ್ಳೋ ಎಂದು ನಿರ್ಧರಿಸಲು ದ್ರೋಣ್ ಕುರಿತಂತೆ ವಿಷಯ ತಜ್ಞರನ್ನು ತಮ್ಮ ಚರ್ಚೆಯಲ್ಲಿ ಕುಳ್ಳಸಿರಿಕೊಂಡು ಸತ್ಯಾಸತ್ಯೆಯನ್ನು ತಿಳಿಯಬಹುದಿತ್ತಲ್ಲವೇ? ಅದೇ ರೀತಿ ಆತನಿಗೆ ಹಣ ಕೊಟ್ಟು ಮೋಸ ಹೋದ ವ್ಯಕ್ತಿಗಳನ್ನು ಚರ್ಚೆಗೆ ಆಹ್ವಾನಿಸಿ ಅವರೆಲ್ಲರೂ ಪ್ರತಾಪನ ಮಾತಿಗೆ ಹೇಗೆ ಮರುಳಾದರೂ ಎಂಬುದನ್ನು ಜನರಿಗೆ ತಿಳಿಯ ಪಡಿಸಿ ಮುಂದೆ ಯಾರೂ ಈ ರೀತಿಯ ಮೋಸಕ್ಕೆ ಒಳಗಾಗದ ರೀತಿ ಎಚ್ಚರಿಸಬಹುದಿತ್ತಲ್ಲವೇ? ಈ ರೀತಿ ಮಾಡಿ ಹಿಂದೆ ತಾವೇ ಆತನನ್ನು ಹೊಗಳಿ ಅಟ್ಟಕ್ಕೇರಿಸಿದ್ದ ತಪ್ಪನ್ನಾದರೂ ತಿದ್ದಿಕೊಳ್ಳಬಹುದಾಗಿತ್ತು.

ಮುಗ್ಧತೆಯಿಂದ ಆರಂಭವಾದ ಈ ಪ್ರಕರಣ ಈಗ ಹುಂಬತನಕ್ಕೆ ತಲುಪಿದೆ.

ಆದರೆ ಪ್ರತಾಪನಿಗಾಗಲೀ ಮಾಧ್ಯಮಗಳಿಗಾಗಲೀ ತಮ್ಮ ತಪ್ಪನ್ನು ಒಪ್ಪಿ ತಿದ್ದಿಕೊಳ್ಳುವ ಮನೋಭಾವ ಇಲ್ಲವಾಗಿದೆ ಎಲ್ಲರಿಗೂ ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ ತಮಗೆ ಏನು ಬೇಕೋ ಅದನ್ನು ಆದಷ್ಟೋ ಬೇಗನೆ ಗೆಬರಿಕೊಂಡು ಸದ್ದಿಲ್ಲದೇ ಸುಮ್ಮನಾಗಿ ಬಿಡುವ ಹಪಾಹಪಿ. ಜನರ ನೆನಪಿನ ಶಕ್ತಿ ಬಹಳ ಕಡಿಮೆ. ಇಷ್ಟರ ಮಧ್ಯೆ ಮತ್ತೊಂದು ಸಮಸ್ಯೆ ಬಂದಿತೆಂದರೆ ಇದನ್ನು ಬಿಟ್ಟು ಮತ್ತೊಂದು ವಿಷಯದ ಬಗ್ಗೆ ಗಮನ ಹರಿಸುತ್ತಾರೆ ಎಂಬ ಸತ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಈ ಪ್ರಸಂಗವನ್ನು ನೋಡುತ್ತಿದ್ದರೆ, ಮುಗ್ಧತೆಯಿಂದ ಆರಂಭವಾದ ಈ ಪ್ರಕರಣ ಈಗ ಹುಂಬತನಕ್ಕೆ ತಲುಪಿದೆ. ಪ್ರತಾಪ್ ತನ್ನ ಬೆರುಗು ಮಾತುಗಳಿಂದ ಆರಂಭದಲ್ಲಿ ಒಂದಷ್ಟು ಜನರಿಗೆ ಪ್ರೇರಣಾದಾಯಕವಾಗಿದ್ದಂತೂ ಸುಳ್ಳಲ್ಲ. ಇದುವರೆವಿಗೂ ಆತನ ವಿರುದ್ಧ ಆರ್ಥಿಕವಾಗಿಯಾಗಲೀ ಅಥವಾ ಇನ್ನಾವುದೇ ರೀತಿಯಲ್ಲಾಗಲೀ ನಷ್ಟ ಹೊಂದಿರುವ ಬಗ್ಗೆ ಯಾರೂ ಯಾವುದೇ ಲಿಖಿತ ದೂರನ್ನು ನೀಡಿಲ್ಲವಾದ್ದರಿಂದ ಇನ್ನು ಕೆಲವೇ ಕೆಲವು ದಿನಗಳಲ್ಲಿ ಈ ಪ್ರಕರಣ ಜನರ ಮನಸ್ಸಿನಿಂದ ಮರೆತು ಹೋಗುತ್ತದೆ. ಎಲ್ಲಿಯ ವರೆಗೆ ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವುದನ್ನು ಅನುಸರಿಸುವುದಿಲ್ಲವೋ ಅಲ್ಲಿಯ ವರೆಗೂ ಇಂತಹ ಮೋಸಗಾರರು ಮತ್ತು ಅದರ ದುರ್ಲಾಭವನ್ನು ಪಡೆಯುವ ಮಾಧ್ಯಮಗಳು ಇದ್ದೇ ಇರುತ್ತವೆ.

WhatsApp Image 2020-07-17 at 11.35.35 AMಇದೇ ಸಮಯದಲ್ಲಿ ಪ್ರತಾಪನನ್ನು ಪರಿಚಯಿಸಿದ ತಪ್ಪಿನ ಅರಿವಾಗಿ, ಪ್ರಾಮಾಣಿಕವಾಗಿ ಕಲಿತು ಅರಿತ ಜ್ಞಾನಿ ಸಾವಿರ ಅನುಮಾನದ ಪ್ರಶ್ನೆಗೆ ಒಂದೆ ಮಾತಿನಲ್ಲಿ ಸಾಕ್ಷಿಸಮೇತ ಉತ್ತರಕೊಟ್ಟು ಪುಟಿದೇಳುತ್ತಾನೆ! ಆಂತರ್ಯದಲ್ಲಿ ಗೆದ್ದು ಗಳಿಸಲು ವಾಮಮಾರ್ಗ ಅನುಸರಿಸುವವ ಮಾತಿಗೆ ಮಾತು ಪೋಣಿಸಿ ಅನುಮಾನಿಸಿದವರ ದಾರಿ ತಪ್ಪಿಸಿ ಬೀಸುವ ದೊಣ್ಣೆ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ! ಜಾಲತಾಣ ಬಲ್ಲವರಿಗೆ ಕೋಟಿ ಕಣ್ಣು ಅರಿವಿರಲಿ ಮನುಜ! ಎಂದು ಪರೋಕ್ಷವಾಗಿ ನೀಡಿರುವ ಎಚ್ಚರಿಕೆ ನಿಜಕ್ಕೂ ಮಾರ್ಮಿಕವಾಗಿದೆ.

ಏನಂತೀರೀ?

3 thoughts on “ಜನಮರುಳೋ ಜಾತ್ರೆ ಮರುಳೋ?

    1. ನಿಮ್ಮ ಅಭಿಪ್ರಾಯಕ್ಕೆ ನನ್ನ ಪೂರ್ಣ ಸಹಮತವಿದೆ.ಆ ಸಂದರ್ಶನವನ್ನು ಕೆಲ ಸಮಯ ನಾನೂ ವೀಕ್ಷಿಸಿದೆ.ಆ ಹುಡುಗನ ಉತ್ತರಗಳು ಯಾವೊಂದೂ ಸಮರ್ಪಕವಾಗಿರಲಿಲ್ಲ.360kgಪರಿಕರಗಳನ್ನು ಭಾರತದಿಂದ ವಿಮಾನದಲ್ಲಿ ಸಾಗಿಸಿದ್ದು,ಅದರಲ್ಲೂ ದ್ರೋಣ್ ಹಾರಿಸಲು ಬೇಕಾದ Batteryಗಳನ್ನು ಸಾಗಿಸುವುದು ಅಸಾಧ್ಯದ ಮಾತು.ನಿರ್ಭಿಡೆಯಿಂದ ಅದನ್ನು ಸಮರ್ಥಿಸಿಕೊಂಡ ಆ ಹುಡುಗ.ಇನ್ನು ಮಿಕ್ಸಿ ಮೋಟಾರ್ ಬಳಸಿ ದ್ರೋಣ್ ತಯಾರಿಸಿದ್ದನೆಂಬುದು ಶುದ್ಧ ಸುಳ್ಳು.ಅದೂ ಕೂಡ ಅಸಾಧ್ಯದ ಮಾತು.ಅಂದು ಪರಾಮರ್ಶಿಸದೇ ಆತನನ್ನು ವೀಪರೀತವಾಗಿ ವೈಭವೀಕರಿಸಿದ ಮಾಧ್ಯಮಗಳದ್ದೂ ಅಷ್ಟೇ ಹೊಣೆಗೇಡಿತನವಿದೆ

      Liked by 1 person

  1. ಈ ರೀತಿಯ ಸಾವಿರಾರು ಜನರು ನಮ್ಮ ದೇಶದಲ್ಲಿ ಇದ್ದಾರೆ. ಜನರ ಭಾವುಕತೆ ಮತ್ತು ಮುಗ್ದತೆಯನ್ನು ಉಪಯೋಗಿಸಿಕೊಂಡು ಮೋಸ ಮಾಡುತ್ತಲೇ ಇದ್ದಾರೆ. ಅವರಲ್ಲಿ ಇವನೊಬ್ಬ ಅಷ್ಟೇ. ಆದರೆ ಈವನಿಂದ ಸಾವಿರಾರು ಮಕ್ಕಳು ಪ್ರೇರಿತರಾಗಿದ್ದಂತೂ ನಿಜ. ಅವರ ಮನಸ್ಸಿನ ಮೇಲೆ ಆಗುವ ಪರಿಣಾಮಗಳೇನು? ಮುಂದೆ ಅವರು ಹೇಗೆ ಈ ಘಟನೆಯನ್ನು ತೆಗೆದುಕೊಳ್ಳುತ್ತಾರೆ ಅನ್ನುವುದು ಯೋಚನೆ ಮಾಡಬೇಕಾದ ವಿಷಯ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s