ಕಳೆದ ವಾರ ಬೆಳ್ಳಂಬೆಳಿಗ್ಗೆ ಆಂಬ್ಯುಲೆನ್ಸ್ ಶಬ್ಧ ಮಾಡುತ್ತಾ ನಮ್ಮ ಮನೆಯ ಮುಂದೆ ಬಂದು ನಿಂತದ್ದೇ ತಡಾ ಎಲ್ಲರಿಗೂ ದಿಗ್ಭ್ರಮೆ ಮತ್ತು ಒಂದು ಕ್ಷಣ ಆಶ್ಚರ್ಯವೂ ಸಹ. ನಮ್ಮ ರಸ್ತೆಯ ಬಹುತೇಕ ಮನೆಯವರು ತಮ್ಮ ಮನೆಯಿಂದ ಹೊರಬಂದು ನಮ್ಮನ್ನೇ ಅನುಮಾನಾಸ್ಪದವಾಗಿ ನೋಡಲಾರಂಭಿಸಿದರು. ಮನೆಯ ಅಂಗಳದಲ್ಲೇ ಇದ್ದ ಮಗ ಏನೆಂದು ವಿಚಾರಿಸಿದಾಗ, ಬಂದವರು ನಮ್ಮ ಪಕ್ಕದ ಮನೆಯ ಮಾಲಿಕರನ್ನು ವಿಚಾರಿಸಿದ್ದಾರೆ. ಆದರೆ ಅವರು ಕೆಲ ವರ್ಷಗಳ ಹಿಂದೆಯೇ ಆ ಮನೆಯನ್ನು ಬಾಡಿಗೆಗೆ ಕೊಟ್ಟು ನಮ್ಮ ಮನೆಯಿಂದ ಸ್ವಲ್ಪವೇ ದೂರದಲ್ಲಿರುವ ಅವರ ಮತ್ತೊಂದು ಮನೆಯಲ್ಲಿ ವಾಸಿಸುತ್ತಿರುವ ವಿಷಯವನ್ನು ತಿಳಿದು ಅಲ್ಲಿಗೆ ತೆರಳಿದಾಗ ಎಲ್ಲರೂ ಒಂದು ಕ್ಷಣ ನಿಟ್ಟಿಸಿರು ಬಿಟ್ಟು ನಂತರ ವಿಚಾರಿಸಿದಾಗ, ನಮ್ಮ ಮನೆಯ ಪಕ್ಕದವರು ತಮ್ಮ ವ್ಯವಹಾರದ ಪ್ರಯುಕ್ತ ಮೈಸೂರಿಗೆ ಆಗ್ಗಿಂದಾಗ್ಗೆ ಹೋಗೀ ಬಂದು ಮಾಡುತ್ತಿದ್ದ ಪರಿಣಾಮ ಅವರಿಗೆ ಕೋವಿಡ್- 19 +ve ಆಗಿದ್ದು ಅವರಿಂದ ಅವರ ತಾಯಿ, ಮಡದಿ ಮತ್ತು ಮಗನಿಗೂ ಸೋಂಕು ಹರಡಿದ್ದು ಅವರು ಕೊಟ್ಟ ದಾಖಲೆಯಲ್ಲಿ ಇನ್ನೂ ಹಳೆಯ ವಿಳಾಸವೇ ಇದ್ದ ಕಾರಣ ಇಷ್ಟೇಲ್ಲಾ ಅತಂಕ ಸೃಷ್ಟಿಯಾಗಿತ್ತು.
ಎಲ್ಲವೂ ತಿಳಿಯಾಯಿತ ಎಂದು ತಿಳಿಯುವಷ್ಟರಲ್ಲಿಯೇ ನಮ್ಮ ಖಾಸಗೀ ನ್ಯೂಸ್ ಛಾನೆಲ್ಲಿಗಿಂಗಲೂ ವೇಗವಾಗಿ ಈ ಸುದ್ದಿ ಎಲ್ಲೆಡೆಯಲ್ಲಿಯೂ ಹಬ್ಬಿ ಇಡೀ ದಿನ ಮೇಲಿಂದ ಮೇಲೆ ಬಹುತೇಕರು ಕರೆ ಮಾಡಿ, ಅವರಿಗೆ ಉತ್ತರಿಸುವುದರಲ್ಲಿಯೇ ಹೈರಾಣಾಗಿ ಹೋಗಿದ್ದೆ. ಎಷ್ಟೇ ಸುಶೀಕ್ಷಿತರಾದರೂ ಇನ್ನೂ ಅನೇಕರಿಗೆ ಸರಿಯಾದ ಮಾಹಿತಿಯ ಕೊರತೆಯೋ ಇಲ್ಲವೇ ಒಂದು ರೀತಿಯ ಧೋರಣೆಯೋ ಕಾಣೆ ಕೋವಿಡ್- 19 ಸೋಂಕಿತರನ್ನು ನೋಡುವ ವಿಧಾನ ಮುಜುಗರವನ್ನು ಉಂಟು ಮಾಡುತ್ತಿದೆ.
ರೋಗಿಗಳ ಜೀವವನ್ನು ರಕ್ಷಿಸಬೇಕಾದ ಆಸ್ಪತ್ರೆಗಳೂ ಸಹಾ ಇದಕ್ಕೆ ಹೊರತಾಗಿರದೇ, ಅವರೂ ಸಹಾ ಈ ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಅಂತಹ ಕೆಲವು ಪ್ರಸಂಗಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ದಕ್ಷಿಣ ಕನ್ನಡದವರೊಬ್ಬರು ಕೆಲ ತಿಂಗಳುಗಳ ಹಿಂದೆ ಹೃದಯ ಸಂಬಂಧಿತ ಖಾಯಿಲೆಯಿಂದಾಗಿ ಮಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವಾರ ಇದ್ದಕ್ಕಿದ್ದಂತೆಯೇ ಮತ್ತೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಸ್ಥಳೀಯ ವೈದ್ಯರಲ್ಲಿಗೆ ಹೋದಾಗ ಅವರು ಪರಿಶೀಲಿಸಿ. ಹೃದಯ ಬಡಿತ ಹೆಚ್ಚಾಗಿದ್ದರಿಂದ ಮತ್ತೆ ಮಂಗಳೂರಿನ ಆಸ್ಪತ್ರೆಗೇ ಹೋಗಲು ಸೂಚಿಸಿದ್ದಾರೆ.
ಆ ಕೂಡಲೇ ಅವರು ತಮ್ಮ ಸೋದರ ಸಂಬಂಧಿಯ ಜೊತೆ ರಾತ್ರಿ 8.15 ಕ್ಕೆ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಹೋಗಿ, ಎಷ್ಟು ಮನವಿ ಮಾಡಿಕೊಂಡರೂ, ಯಾವುದೇ ರೀತಿಯ ಚಿಕಿತ್ಸೆಯನ್ನೂ ಕೊಡದೇ, ತಮ್ಮಲ್ಲಿ ಹಾಸಿಗೆಗಳು ಲಭ್ಯವಿಲ್ಲ ಎಂಬ ನೆಪವೊಡ್ಡಿ ಚಕಿತ್ಸೆ ಕೊಡಲಾಗದು ಎಂದು ಸಾಗಹಾಕಿದ್ದಾರೆ.
ವಿಧಿ ಇಲ್ಲದೇ, ಈ ಹಿಂದೆ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಗೆ ಹೋಗಿದ್ದಾರೆ. ಈ ಹಿಂದೇ ಅಲ್ಲಿಯೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಕಾರಣ ತಕ್ಷಣವೇ ಅಸ್ಪತ್ರೆಗೆ ಧಾಖಲು ಮಾಡಿಕೊಂಡು ಕೋವಿಡ್ -19 ರ ಯಾವುದೇ ಲಕ್ಷಣಗಳು ಇಲ್ಲದಿದ್ದರೂ, ಪ್ರಸ್ತುತ ಕಾರ್ಯವಿಧಾನದ ಪ್ರಕಾರ,ಅವರ ಗಂಟಲು ಸ್ವ್ಯಾಬ್ ಅನ್ನು ಕೋವಿಡ್ -19 ಪರೀಕ್ಷೆಗೆ ಕಳುಹಿಸಿದ್ದಾರೆ.
ಜುಲೈ 22ರ ಮಧ್ಯರಾತ್ರಿ ದಾದಿಯರು ಅವರ ಕೋಣೆಗೆ ಬಂದು ಅವರಿಗೆ ಕೋವಿಡ್- 19 +ve ಆಗಿರುವ ಕಾರಣ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಿದ್ದಲ್ಲದೇ, ಅವರ ಜೊತೆಯಲ್ಲಿದ್ದ ಅವರ ಸೋದರ ಸಂಬಂಧಿಯವರಿಗೂ ಕೋವಿಡ್ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ಕೂಡಲೇ ಅವರು ಎರಡನೇ ಆಭಿಪ್ರಾಯ ಪಡೆಯುವ ಸಲುವಾಗಿ ತಮಗೆ ಪರಿಚಯವಿದ್ದ ಮತ್ತೊಂದು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯ ಮೇರೆಗೆ 2 ನೇ ಪರೀಕ್ಷೆ ಗಾಗಿ 23 ನೇ ಸಂಜೆ ಕೆ.ಎಂ.ಸಿ.ಗೆ ಸ್ವ್ಯಾಬ್ ಕಳುಹಿಸಿದ್ದಾರೆ.
ಜುಲೈ 23ರ ಮಧ್ಯರಾತ್ರಿ ಅವರ ಸೋದರಸಂಬಂಧಿಯವರ ವರದಿ ನೆಗೆಟಿವ್ ಬಂದಿದ್ದರಿಂದ, ಅವರನ್ನು 24 ನೇ ಬೆಳಿಗ್ಗೆ ಬಿಡುಗಡೆ ಮಾಡಲಾಯಿತಾದರೂ, ಆಘಾತಕಾರಿ ಸಂಗತಿಯೆಂದರೆ, ಕೋವಿಡ್ -19ರ ಪರೀಕ್ಷೆ ಮತ್ತು ಮತ್ತು 2 ಜಗ್ ಬಿಸಿ ನೀರನ್ನು ಕೊಟ್ಟಿದ್ದಕ್ಕೆ 21,305/- ರೂ.ಗಳ ಬಿಲ್ ಜಡಿದಿದ್ದಾರೆ.
ಕೆ.ಎಂ.ಸಿ ಯಿಂದ ಕೋವಿಡ್ ನೆಗೆಟಿವ್ ಎಂಬ ವರದಿ 24ರ ಮಧ್ಯಾಹ್ನವೇ ಬಂದರೂ ಮತ್ತೆ ಒಂದು ದಿನ ಆಸ್ಪತ್ರೆಯಲ್ಲಿಯೂ ಉಳಿಸಿಕೊಂಡು 25 ರಂದು ಬೆಳಿಗ್ಗೆ ನನ್ನನ್ನು ಡಿಸ್ಚಾರ್ಜ್ ಮಾಡಲು ಒಪ್ಪಿ ಆ ಸಮಸ್ಯೆ ಈ ಸಮಸ್ಯೆ ಎಂದು ಬಿಲ್ಲಿಂಗ್ ಮಾಡಲು ಬಹಳ ಸಮಯ ತೆಗೆದುಕೊಂಡು ರಾತ್ರಿ 8ಕ್ಕೆ 88,456/- ರೂಗಳ ಬಿಲ್ ಕೊಟ್ಟಿದ್ದಾರೆ.
ಕೇವಲ ಎದೆ ನೋವು ಎಂದು ಹೋಗಿದ್ದಕ್ಕೆ ಆ ಸಮಸ್ಯೆಗೆ ಚಿಕಿತ್ಸೆ ಕೊಡದೇ,ಕೋವಿಡ್ ಎಂದು ಹೆದರಿಸಿ ಕೇವಲ 4 ದಿನಗಳಿಗೆ ಒಟ್ಟು 1,09,761/- ರೂಪಾಯಿಗಳನ್ನು ಅವರಿಂದ ಕಿತ್ತಿದ್ದಾರೆ. ಕೋವಿಡ್ -19 ರ ಯಾವುದೇ ಲಕ್ಷಣಗಳನ್ನು ಹೊಂದಿಲ್ಲದಿದ್ದರೂ ಖಾಸಗೀ ಆಸ್ಪತ್ರೆಯಲ್ಲಿ +ve ಎಂಬ ವರದಿ ಬಂದು ಯಾವುದೇ ಚಿಕಿತ್ಸೆಯನ್ನು ನೀಡದೇ, ಕೇವಲ ಒಂದೇ ದಿನದಲ್ಲಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ -ve ಬರಲು ಹೇಗೆ ಸಾಧ್ಯ? ರೋಗಿಗೆ ವಿಮಾ ಸೌಲಭ್ಯವಿದೆ ಎಂಬುದನ್ನು ಅರಿತ ಖಾಸಗೀ ಆಸ್ಪತ್ರೆಯವರು ನಿಸ್ಸಂದೇಹವಾಗಿ ಲೂಟಿಗೆ ಇಳಿದಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.
ಪರಿಸ್ಥಿತಿ ಇಲ್ಲಿಗೆ ಮುಗಿದಿದ್ದರೇ ಏನೋ ಪರವಾಗಿಲ್ಲ ಎನ್ನಬಹುದಾಗಿತ್ತು. ಆ ಖಾಸಗೀ ಆಸ್ಪತ್ರೆಯವರ ಒಂದು ಸುಳ್ಳು ವರದಿಯಿಂದಾಗಿ ಮತ್ತಷ್ಟು ತೊಂದರೆಗೆ ಒಳಗಾಗಿದ್ದಾರೆ. ಅವರ ಮಡದಿ ಮತ್ತು ಪುಟ್ಟ ಮಕ್ಕಳು ಮತ್ತು ಅವರ ಮನೆಯ 7 ಕೆಲಸಗಾರರ ಕುಟುಂಬವನ್ನು ನಿರ್ಬಂಧಿಸಲಾಗಿದೆ. ಅದಲ್ಲದೇ ಅವರ ಕಚೇರಿಯ 10 ಸಿಬ್ಬಂದಿ, ಕುಟುಂಬವನ್ನು ನಿರ್ಬಂಧಿಸಲಾಗಿರುವ ಕಾರಣ ಅವರ ಅಂಗಡಿಯನ್ನೂ ಮುಚ್ಚಿರುವ ಬಾರೀ ನಷ್ಟವನ್ನೇ ಅನುಭವಿಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯವರ ಧನದಾಹಿಯ ಒಂದು ಸುಳ್ಳು ವರದಿಯಿಂದಾಗಿ ಒಟ್ಟು 19 ಕುಟುಂಬಗಳು ಬಳಲುತ್ತಿದ್ದಾರೆ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಈ ಎಲ್ಲಾ ಸುದ್ದಿ ಇಡೀ ನಗರಕ್ಕೆ ಕ್ಷಣ ಮಾತ್ರದಲ್ಲಿಯೇ ಹರಡಿ ಅವರ ಅಂಗಡಿಗೆ ಗ್ರಾಹಕರು ಸಹಾ ಬರಲು ಹೆದರುತ್ತಿದ್ದಾರೆ. ಇಷ್ಟೆಲ್ಲಾ ಆರ್ಥಿಕ ನಷ್ಟಕ್ಕೆ ಹೊಣೆಯಾದ ಆ ಖಾಸಗೀ ಆಸ್ಪತ್ರೆಯವರು ಮಾತ್ರ ಯಾವುದೇ ಅಡ್ಡಿಗಳಿಲ್ಲದೇ ತಮ್ಮ ಲೂಟಿಯನ್ನು ಮುಂದುವರಿಸುತ್ತಿದ್ದಾರೆ.
ಇದೇ ರೀತಿಯ ಮತ್ತೊಂದು ಪ್ರಕರಣ ಮುಂಬೈಯಲ್ಲಿಯೂ ಪತ್ತೆಯಾಗಿದ್ದು ಅಲ್ಲಿಯ ಪ್ರಸಿದ್ಧ ಆಸ್ಪತ್ರೆಗೆ ಎದೆ ನೋವೆಂದು ಹೋದ ರೋಗಿಗೆ ತಕ್ಷಣವೇ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗ ಬೇಕೆಂದು ಸೂಚಿಸಲಾಯಿತು ಮತ್ತು ರೋಗಿಯ ಒಪ್ಪಿಗೆ ಮೇರೆಗೆ ಪೂರ್ವ-ಶಸ್ತ್ರಚಿಕಿತ್ಸೆಯ ಪರೀಕ್ಷೆಗಳಿಗೆ ಒಳಪಡಿಸಿ ಭಾರೀ ಮೊತ್ತದ ವೆಚ್ಚದ ಬಗ್ಗೆ ಅವರಿಗೆ ತಿಳಿಸಿ ರೋಗಿಗೆ ಒಂದು ಫಾರ್ಮ್ ಅನ್ನು ಭರ್ತಿ ಮಾಡಲು ಸೂಚಿಸಿದರು. ಫಾರ್ಮ್ ಭರ್ತಿ ಮಾಡುವಾಗ ಉದ್ಯೋಗ ಎಂಬ ಜಾಗದಲ್ಲಿ ಅವರು ಸಿಬಿಐ ಅಧಿಕಾರಿ, ಎಂದು ಬರೆದು ಹಿಂದಿರುಗಿಸಿದ್ದಾರೆ.
ಸಿಬಿಐ ಆಧಿಕಾರಿ ಎಂದ ಕೂಡಲೇ ಆಸ್ಪತ್ರೆಯವರ ವರ್ತನೆಯಲ್ಲಿ ದಿಢೀರ್ ಬದಲಾಗಿದೆ. ಅದುವರೆಗೂ ಪರೀಕ್ಷಿಸುತ್ತಿದ್ದ ವೈದ್ಯರ ಬದಲಾಗಿ ಹಿರಿಯ ವೈದ್ಯರ ಹೊಸ ತಂಡವೊಂದು ಬಂದು ರೋಗಿಯನ್ನು ಮತ್ತೊಮ್ಮೆ ಪರೀಕ್ಷಿಸಿ, ಕೆಲ ಸಮಯದ ನಂತರ ಯಾವುದೇ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂದು ಸಲಹೆ ನೀಡಿ ಕೆಲವು ಔಷಧಿಗಳನ್ನು ನಿರಂತರವಾಗಿ ತೆಗೆದುಕೊಂಡಲ್ಲಿ ಕೆಲವೇ ತಿಂಗಳುಗಳಲ್ಲಿ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತದೆ ಎಂದು ತಿಳಿಸಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಿ ಕಳುಹಿಸಿದ್ದಾರೆ.
ನಿಜ ಹೇಳಬೇಕೆಂದರೆ, ಆ ರೋಗಿಯ ಸಿಬಿಐ ಅಧಿಕಾರಿಯಾಗಿರದೇ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿ ಕೆಲಸ ಮಾಡುವವರಾಗಿದ್ದಾರೆ. ಈ ಪ್ರಕರಣದಿಂದ ಆಸ್ಪತ್ರೆಯವರು ಸಾಮಾನ್ಯ ರೋಗಿಗಳನ್ನು ಹೇಗೆ ಸುಲಿಯುತ್ತಿದ್ದಾರೆ, ಎಂಬುದು ಅರಿವಾಗುತ್ತದೆ
ಇನ್ನು ಎರಡು ದಿನಗಳ ಹಿಂದೆ ಖ್ಯಾತ ಚಲನಚಿತ್ರ ನಟಿ ಸುಧಾರಾಣಿ ತಮ್ಮ ಅಣ್ಣನ ಮಗಳ ಆರೋಗ್ಯ ದಿಢೀರ್ ಎಂದು ಹದಗೆಟ್ಟ ಪರಿಣಾಮ ಅಲ್ಲಿಯೇ ಶೇಷಾದ್ರಿ ಪುರದ ಖಾಸಗೀ ಆಸ್ಪತ್ರೆಗೆ ಕರೆದೊಯ್ದರೆ ಮತ್ತದೇ ಹಾಸಿಗೆಗಳು ಇಲ್ಲಾ ಎಂಬ ನೆಪವೊಡ್ದಿ ಪ್ರಥಮ ಚಿಕಿತ್ಸೆಯನ್ನೂ ನೀಡಲು ನಿರಾಕರಿಸಿದ್ದಾರೆ. ಆಕೆ ಕೂಡಲೇ ತಮ್ಮ ಪ್ರಭಾವ ಬಳಸಿ ನಗರದ ಪೊಲೀಸ್ ಕಮಿಷಿನರ್ ಭಾಸ್ಕರ್ ರಾವ್ ಅವರನ್ನು ಸಂಪರ್ಕಿಸಿ, ಅವರ ಮೂಲಕ ಆಸ್ಪತ್ರೆಯವರಿಗೆ ಹೇಳಿಸಿದ ಕಾರಣ ಕೂಡಲೇ ಚಿಕಿತ್ಸೆ ಕೊಟ್ಟಿದ್ದಾರೆ.
ಈ ಹಿಂದೆ ತಿಳಿಸಿರುವಂತೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದ ಮಧ್ಯದಲ್ಲೇ ಮೃತರಾದ ನಮ್ಮ ತಂದೆಯವರನ್ನು ಬೆಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಯವರು ಐಸಿಯು ವಾರ್ಡಿಗೆ ಸೇರಿಸಿಕೊಂಡು ಅವರು ಬದುಕಿದ್ದಾರೆ ಇನ್ನು 24ಗಂಟೆಗಳ ಪರಿಶೀಲನೆಯ ನಂತರ ಶಸ್ತ್ರಚಿಕಿತ್ಸೆ ಮಾಡಿದರೆ ಸರಿಯಾಗುತ್ತಾರೆ ಎಂದಿದ್ದರು. ಅದೃಷ್ಟವಶಾತ್, ಅದೇ ಆಸ್ಪತ್ರೆಯ ಹಿರಿಯ ಸಿಬ್ಬಂದಿ ನಮ್ಮ ಸಂಬಂಧಿಗಳಾಗಿದ್ದ ಪರಿಣಾಮ ಅವರು ಬಂದು ನೋಡಿದ ಅರ್ಧ ಗಂಟೆಯ ಒಳಗೆ ನಾಟಕೀಯ ಘಟನೆಗಳು ಸಂಭವಿಸಿ ಅಧಿಕೃತವಾಗಿ ನಮ್ಮ ತಂದೆಯವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಒಂದು ವೇಳೆ ನಮ್ಮ ಸಂಬಂಧಿಗಳು ಬಾರದಿದ್ದಲ್ಲಿ ಮೃತರಾದವರ ಶವವನ್ನೇ ಇನ್ನೂ ನಾಲ್ಕೈದು ದಿನಗಳ ಕಾಲ ಇಟ್ಟು ಕೊಂಡು ಲಕ್ಷಾಂತರ ರೂಪಾಯಿಗಳ ಲೂಟಿ ಮಾಡುತ್ತಿದ್ದರೋ ಏನೋ?
ನಮ್ಮ ಸಂಸ್ಕೃತಿಯಲ್ಲಿ ವೈದ್ಯೋ ನಾರಯಣೋ ಹರಿಃ ಎಂದರೆ ವೈದ್ಯರು ದೇವರಿಗೆ ಸಮಾನ ಎಂದು ನಂಬುತ್ತೇವೆ. ಯಮಧೂತರ ಕೈಯ್ಯಿಂದ ರಕ್ಷಿಸಿಕೊಂಡು ಬರಬೇಕಾದ ವೈದ್ಯರುಗಳೇ, ಈ ರೀತಿಯಲ್ಲಿ ಯಮಧೂತರಾದಲ್ಲಿ ಜನಸಾಮಾನ್ಯರನ್ನು ರಕ್ಷಿಸುವವರು ಯಾರು? ಆಸ್ಪತ್ರೆಗೆ ಹೋದ ತಕ್ಷಣವೇ ಕೇಳುವ ಮೊದಲ ಪ್ರಶ್ನೆಯೇ ರೋಗಿಗೆ ವಿಮಾ ಸೌಲಭ್ಯವಿದೆಯೇ ಎಂದು? ಒಂದು ಪಕ್ಷ ವಿಮೆ ಇದೆ ಎಂದಾದಲ್ಲಿ ತಕ್ಷಣವೇ ಬೇಕೋ ಬೇಡವೋ ಹತ್ತಾರು ಪರೀಕ್ಷೆಗಳು ದುಬಾರಿ ಚಿಕಿತ್ಸಾ ಕೋಣೆಗಳ ಮೂಲಕ ಲೂಟಿಗಿಳಿಯುತ್ತಿರುವ ಈ ಖಾಸಗೀ ಆಸ್ಪತೆಗಳಿಗೆ ಕಡಿವಾಣ ಹಾಕುವವರು ಯಾರು?
ಹಾಗೆಂದ ಮಾತ್ರಕ್ಕೆ ಎಲ್ಲಾ ವೈದ್ಯರೂ ಮತ್ತು ಆಸ್ಪತ್ರೆಗಳೂ ಸರಿ ಇಲ್ಲ ಎಂದು ಹೇಳುತ್ತಿಲ್ಲವಾದರೂ ಸೇವೆ ಮಾಡ ಬೇಕಿದ್ದವರೇ ಲೂಟಿ ಮಾಡುತ್ತಿರುವುದಂತೂ ಸುಳ್ಳಲ್ಲ. ಸರ್ಕಾರ ಈ ಕೂಡಲೇ ಇದರತ್ತ ಗಮನ ಹರಿಸಿ ಎಲ್ಲದ್ದಕ್ಕೂ ಒಂದು ದರ ಪಟ್ಟಿಯನ್ನು ರೂಪಿಸುವುದರ ಮೂಲಕ ಈ ರೀತಿಯ ಹಗಲು ದರೋಡೆಯನ್ನು ತಡೆಗಟ್ಟಲೀ ಮತ್ತು ಅಂತಹ ಲೂಟಿಕೋರ ಆಸ್ಪತ್ರೆಗಳನ್ನು ಕೂಡಲೇ ಕಪ್ಪು ಪಟ್ಟಿಗೆ ಸೇರಿಸಿ ಅವರ ಪರವಾನಗಿ ರದ್ದು ಪಡಿಸುವ ಮೂಲಕ ರೋಗಿಗಳನ್ನು ಕಾಪಾಡಬೇಕು ಎಂದು ಆಗ್ರಹಿಸೋಣ
ಏನಂತೀರೀ?
ನಮ್ಮ ದೇಶದಲ್ಲಿಯ ವೈದ್ಯಕೀಯ ವ್ಯವಸ್ಥೆ ಹಾಳಾಗಿ ದಶಕಗಳೇ ಕಳೆದುಹೋಗಿದೆ, ನಮ್ಮ ಜನರಿಗೆ ನಾವು ಕಟ್ಟುವ ತೆರಿಗೆ ಹಣಕ್ಕೆ ಸರಕಾರದಿಂದ ಏನನ್ನು ಅಪೇಕ್ಷಿಸಬೇಕು ( ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್ ಮತ್ತು ರಸ್ತೆ ) ಎಂಬುದೇ ಇನ್ನು ಗೊತ್ತಿಲ್ಲ. ಈ ಐದು ಮೂಲಭೂತ ಸೌಕರ್ಯಗಳನ್ನು ಸರಕಾರಗಳು ಕೇಳದೆ ಕೊಡಬೇಕು. ಇವತ್ತಿಗೂ ಇವು ಆಶ್ವಾಸನೆಗಳಾಗಿ ಉಳಿದಿವೆ. ಹೀಗಿರಬೇಕಾದರೆ ಈ ಅವ್ಯವಸ್ಥೆ ಸರಿ ಆಗುತ್ತದೆ ಅನ್ನುವ ನಂಬಿಕೆ ಮೇಲೆ ಅಪನಂಬಿಕೆ ಇದೆ.
LikeLiked by 1 person