ಮೈಸೂರು ಎಂದಾಕ್ಷಣ ಎಲ್ಲರಿಗೂ ಥಟ್ ಅಂತಾ ನೆನಪಿಗೆ ಬರುವುದೇ ಮೈಸೂರು ದಸರಾ, ಮೈಸೂರು ಅರಮನೆ, ಮೈಸೂರು ಮೃಗಾಲಯ ಇದರ ಜೊತೆಗೆ ಮೈಸೂರಿನ ಹೆಸರನ್ನು ಜಗದ್ವಿಖ್ಯಾತ ಮಾಡಿದ ಮತ್ತೊಂದು ಅಂಶವೆಂದರೆ, ಮೈಸೂರು ಪಾಕ್. ಅರೇ! ಈ ಸಿಹಿ ತಿಂಡಿಗೂ ಮೈಸೂರಿಗೂ ಏನು ಸಂಬಂಧ? ಅಂತ ತಿಳಿಯ ಬೇಕಾದರೆ, ಆ ಸಿಹಿ ತಿಂಡಿ ಆವಿಷ್ಕಾರದ ಹಿಂದಿರುವ ರೋಚಕವಾದ ಸಂಗತಿ ತಿಳಿಯೋಣ ಬನ್ನಿ.
1884-1940ರ ವರೆಗೂ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ನಾಲ್ಮಡೀ ಕೃಷ್ಣರಾಜ ಒಡೆಯಯರ್ ಅವರಿಗೆ ಉಟೋಪಚಾರಗಳಲ್ಲಿ ವಿಶೇಷವಾದ ಆಸಕ್ತಿ ಇತ್ತು. ಹಾಗಾಗಿ ಆವರ ಅಂಬಾ ವಿಲಾಸ್ ಅರಮನೆಯಲ್ಲಿ ಬಗೆ ಬಗೆಯ ಆಹಾರವನ್ನು ತಯಾರಿಸಲು ಅನುವಾಗವಂತಹ ದೊಡ್ಡದಾದ ಅಡುಗೆಮನೆ ಇದ್ದು ಅದನ್ನು ನಿರ್ವಹಿಸಸಲು ಅನೇಕ ಬಾಣಸಿಗರು ಇದ್ದರು. ಅಲ್ಲಿ ದಕ್ಷಿಣ ಭಾರತಿಯ, ಉತ್ತರ ಭಾರತೀಯ, ಯುರೋಪಿಯನ್ ಅಡುಗೆ ಯಿಂದ ಹಿಡಿದು ಅರಮನೆಯೊಳಗಿನ ವಿವಿಧ ದೇವಾಲಯಗಳ ನೈವೇದ್ಯವೂ ಇದೇ ಅಡುಗೆ ಮನೆಯಿಂದಲೇ ತಯಾರಾಗುತ್ತಿತ್ತು.
ಅದೊಮ್ಮೆ ಅರಮನೆಗೆ ಬರುತ್ತಿದ್ದ ವಿಶೇಷ ಅತಿಥಿಗಳಿಗಾಗಿ ಒಂದು ಒಳ್ಳೆಯ ಸಿಹಿ ತಿಂಡಿಯನ್ನು ತಯಾರಿವಂತೆ ಮಹಾರಾಜರು ಅರಮನೆಯ ಪ್ರಮುಖ ಬಾಣಸಿಗರಾಗಿದ್ದ ಕಾಕಾಸುರ ಮಾದಪ್ಪನವರಿಗೆ ತಿಳಿಸಿದರು. ಮಹಾರಾಜರ ಅಪ್ಪಣೆಗೆ ಮರು ಮಾತನಾಡದೇ ಆಡುಗೆ ಮನೆಗೆ ಬಂದ ಮಾದಪ್ಪನವರಿಗೆ ದಿಢೀರ್ ಎಂದು ಯಾವ ಸಿಹಿ ತಿಂಡಿಯನ್ನು ತಯಾರಿಸಬೇಕು ಎಂದು ತೋಚದೇ ಹೋದಾಗ ತಮ್ಮ ಮುಂದಿದ್ದ ಸಕ್ಕರೆಯಿಂದ ಪಾಕವನ್ನು ತಯಾರಿಸಿ ಅದಕ್ಕೆ ಕಡಲೆ ಹಿಟ್ಟು, ತುಪ್ಪ ಮತ್ತು ಎಣ್ಣೆ ಸೇರಿಸಿ ಮಿಠಾಯಿ ಆಕಾರದಲ್ಲಿ ಬಿಸಿ ಬಿಸಿಯಾದ ಹೊಸದೊಂದು ಸಿಹಿ ತಿಂಡಿಯೊಂದನ್ನು ತಯಾರಿಸಿ ಅದನ್ನು ಅಲಂಕಾರಿಕವಾದ ತಟ್ಟೆಯಲ್ಲಿ ಇರಿಸಿ ಮಹಾರಾಜ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ರುಚಿ ನೋಡಲು ಕೊಟ್ಟರು. ಆ ಸಿಹಿತಿಂಡಿಯ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರ ಬೆನ್ನು ತಟ್ಟಿ ಪ್ರಶಂಶಿಸಿ, ಇದು ಯಾವು ಹೊಸಾ ತಿಂಡಿ? ಇದರ ಹೆಸರೇನು? ಎಂದು ಕೇಳಿದರು.
ಮಹಾರಾಜರ ಈ ಪ್ರಶ್ನೆಗೆ ಉತ್ತರಿಸಲಾರದೇ ತಬ್ಬಿಬ್ಬಾದ ಮಾದಪ್ಪನವರು, ಬುದ್ದೀ, ಇದು ಅಜಾನಕ್ಕಾಗಿ ತಯಾರಿಸಿದ ಹೊಸಾ ರುಚಿ. ಹಾಗಾಗಿ ಇದಕ್ಕೆ ಹೆಸರೇನೂ ಇಲ್ಲ ಎಂದಾಗ, ಸರಿ. ಈ ಹೊಸ ತಿಂಡಿಗೆ ಏನಾದರೊಂದು ಹೆಸರಿಡಬೇಕಲ್ಲವೆ? ಎಂದು ಯೋಚಿಸಿ ರುಚಿ ಶುಚಿಯಾದ ಅಡುಗೆಗೆ ನಳಪಾಕ ಎಂದು ಕರೆಯುತ್ತೇವೆ. ಅದಲ್ಲದೇ ಸಕ್ಕರೆ ಪಾಕದಿಂದ ನಮ್ಮ ಮೈಸೂರು ಅರಮನೆಯಲ್ಲಿ ತಯಾರಾಗಿರುವುದರಿಂದ ಇದಕ್ಕೆ ಮೈಸೂರು ಪಾಕ (ಪಾಕ್ ಅಥವಾ ಪಾಕ, ಎಂದರೆ ಸಂಸ್ಕೃತ ಅಥವಾ ಭಾರತದ ಬೇರೆ ಯಾವುದೇ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ) ಎಂದು ಹೆಸರಿಡೋಣ ಎಂದಾಗಾ, ಎಲ್ಲರೂ ಸಂತೋಷದಿಂದ ಅನುಮೋದಿಸಿದ ಪರಿಣಾಮವಾಗಿ ಮೈಸೂರ್ ಪಾಕ್ ಎಂಬ ಹೊಸಾ ಸಿಹಿ ತಿಂಡಿ ಮೈಸೂರಿನ ಅರಮನೆಯಲ್ಲಿ ಆವಿಷ್ಕಾರವಾಯಿತು.
ಇಂತಹ ಒಳ್ಳೆಯ ಸಿಹಿ ತಿಂಡಿ ಕೇವಲ ಅರಮನೆಗಷ್ಟೇ ಸೀಮಿತವಾಗಬಾರದೆಂದು ನಿರ್ಧರಿಸಿದ ಮಹಾರಾಜರು ಮುಂದೆ ತಮ್ಮ ಬಾಣಸಿಗ ಕಾಕಾಸುರ ಮಾದಪ್ಪನವರಿಗೆ ಗುರುರಾಜ ಸ್ವೀಟ್ಸ್ ಎಂಬ ಅಂಗಡಿಯನ್ನು ಮೈಸೂರಿನ ಸಯ್ಯಾಜಿ ರಾವ್ ರಸ್ತೆಯ ಉದ್ದಗಲಕ್ಕೂ ಚಾಚಿಕೊಂಡಿರುವ ದೇವರಾಜ ಮಾರ್ಕೆಟ್ಟಿನಲ್ಲಿ ಕಟ್ಟಿಸಿಕೊಡುತ್ತಾರೆ ಈ ಮೂಲಕ ಅಧಿಕೃತವಾದ ಮೈಸೂರು ಪಾಕ್ ಜನಸಾಮಾನ್ಯರಿಗೂ ಸಿಗುವಂತೆ ಮಾಡಿಕೊಡುತ್ತಾರೆ. ಇಂದಿಗೂ ಸಹಾ, ಮಾದಪ್ಪನವರ ಕುಟುಂಬದವರೇ ಗುರು ಸ್ವೀಟ್ಸ್ ಅಂಗಡಿಯನ್ನು ಅದೇ ಸ್ಥಳದಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಅಂದಿನಿಂದ ಮೈಸೂರ್ ಪಾಕ್ ದಕ್ಷ್ಣಿಣಭಾರತದ ಎಲ್ಲಾ ಸಭೆ ಸಮಾರಂಭಗಳ ಸಾಂಪ್ರದಾಯಿಕ ಅಡುಗೆಯಲ್ಲಿ ಸೇರಿ ಹೋಯಿತು. ಮೊದಲೆಲ್ಲಾ ಗಟ್ಟಿಯಾದ ದಪ್ಪನ್ನಾದ ಮೈಸೂರು ಪಾಕ್ ತಯಾರಿಸುತ್ತಿದ್ದರು, ಅದನ್ನು ತಿನ್ನುವಾಗ ಕಠುಂ ಕಠುಂ ಎಂದು ತಿನ್ನಬೇಕಾಗುತ್ತಿತ್ತು. ನಂತರ ನಿಧಾನವಾಗಿ ಮೈಸೂರು ಪಾಕಿನಲ್ಲಿಯೂ ತರತರಹದ ಆವಿಷ್ಕಾರಗಳು ಮುಂದುವರೆದು ಈಗ ಹೊಸ ಯುಗದ ಆವೃತ್ತಿಯಾದ ಮೈಸುರ್ಪಾ ಎಂಬ ಮೃದುವಾದ ತುಪ್ಪ ಆವೃತ್ತಿಯಿಂದ ಎಲ್ಲಡೆ ದೊರೆಯುತ್ತಿದೆ. ಈ ರೀತಿಯ ಮೃದುವಾದ ಮೈಸೂರು ಪಾಕನ್ನು ಶ್ರೀ ಕೃಷ್ಣ ಸ್ವೀಟ್ಸ್ ಪ್ರಾರಂಭಿಸಿದ್ದಲ್ಲದೇ ಕೆಲ ಕಾಲದ ವರೆಗೂ ಅದರ ಏಕಸ್ವಾಮ್ಯವನ್ನು ಹೊಂದಿದ್ದರಾದರೂ ನಂತರದ ದಿನಗಳಲ್ಲಿ ಆ ಹೊಸಾ ಪಾಕ ವಿಧಾನ ದಕ್ಷಿಣ ಭಾರತದ ಪ್ರತಿಯೊಂದು ಸಿಹಿ ಅಂಗಡಿಗೂ ತಲುಪಿಯಾಗಿತ್ತು. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವೆಂಕಟೇಶ್ವರ ಸ್ವೀಟ್ಸ್ ಅವರ ಮೃದುವಾದ ಮೈಸೂರು ಪಾಕ್ ಒಂದು ಕಾಲದಲ್ಲಿ ಪ್ರಸಿದ್ಧಿ ಪಡೆದಿತ್ತು. ಇಂದು ಬೆಂಗಳೂರಿನ ಮದರ್ ಡೈರಿಯವರು ತಯಾರಿಸುವ ಮೃದುವಾದ ಮೈಸೂರು ಪಾಕ್ ಪ್ರಸಿದ್ದಿ ಪಡೆದಿದೆ. ಇಂದಿನ ಬಹುತೇಕರು ಆರೋಗ್ಯ ಪ್ರಜ್ಞೆಯುಳ್ಳವರಾಗಿ, ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಿದ ಪರಿಣಾಮವಾಗಿ ಈಗ ಬಿಳಿ ಸಕ್ಕರೆಯ ಬದಲಾಗಿ ತಾಳೇ ಸಕ್ಕರೆಯಿಂದ ತಯಾರಿಸಿ ಕರುಪಟ್ಟಿ ಮೈಸುರ್ಪಾ ಎಂಬ ಹೆಸರಿನಿಂದ ತಮಿಳುನಾಡಿನಾದ್ಯಂತ ಪ್ರಸಿದ್ದಿಯಾಗಿದೆ. ಈಗಂತೂ ಹಾರ್ಲಿಕ್ಸ್ ಮೈಸೂರ್ ಪಾಕ್, ಬೋರ್ನ್ವೀಟಾ ಮೈಸೂರ್ ಪಾಕ್, ಚಾಕ್ಲೇಟ್ ಮೈಸೂರ್ ಪಾಕ್, ಬಾದಾಮ್ ಮೈಸೂರ್ ಪಾಕ್, ಕಾಜೂ ಮೈಸೂರ್ ಪಾಕ್ ಹೀಗೆ ತರತರಹದ ಮೈಸೂರ್ ಪಾಕ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಕಾಲ ಕಾಲಕ್ಕೆ ಬಣ್ಣ, ಆಕಾರ ಮತ್ತು ಮೃದುತ್ವದಲ್ಲಿ ಮೈಸೂರು ಪಾಕ್ ಬದಲಾಗಿದ್ದರೂ, ಇಂದಿಗೂ ಸಾಂಪ್ರದಾಯಿಕವಾಗಿ ದಕ್ಷಿಣ ಭಾರತದ ಮದುವೆ ಮುಂಜಿ ನಾಮಕರಣ ಮತ್ತು ಇತರ ಹಬ್ಬ ಹರಿದಿನಗಳಲ್ಲಿ ಮೈಸೂರು ಪಾಕ್ ಖಾಯಂ ಸಿಹಿ ತಿಂಡಿಯಾಗಿದೆ. ಇನ್ನೇಕೆ ತಡಾ ಇಂತಹ ರೋಚಕ ಇತಿಹಾಸವಿರುವ ಅಪ್ಪಟ ದೇಸೀ ಸಿಹಿ ತಿಂಡಿಯಾದ ಮೈಸೂರು ಪಾಕನ್ನು ಹೆಮ್ಮೆಯಿಂದ ನಮ್ಮ ಈ ಹಬ್ಬಗಳ ಸಾಲಿನಲ್ಲಿ ಮನೆಯಲ್ಲಿಯೇ ಮಾಡಿಕೊಂಡೋ ಇಲ್ಲವೇ ಅಂಗಡಿಯಿಂದ ಕೊಂಡು ತಂದು ಸವಿಯೋಣ ಅಲ್ವೇ?
ಏನಂತೀರೀ?
ಬಾಯಲ್ಲಿ ನೀರೂರಿಸುವ ಹಾಗೆ ಬರೆದಿದ್ದೀರಿ.. ಮೈಸೂರು ಪಾಕಿನ ಹಿಂದೆ ಕತೆ ಮತ್ತೆ ಕೇಳಿ ತುಂಬ ಖುಷಿಯಾಯಿತು. ಮೈಸೂರು ಪಾಕ ಅನ್ನು ಕೂಡ ಕೆಲವರು ವಿವಾದ ಈಡು ಮಾಡಿದರಲ್ಲ ಅನ್ನುವ ಬೇಜಾರಿದೆ.
LikeLiked by 1 person
ನಮ್ಮ ಊರಿನ ಪಾಕ ….ಮೈಸೂರು ಪಾಕ(ಪಾಕ್)… ಹಾಲಿವುಡ್ ಸಿನಿಮಾಗಳಲ್ಲೂ ಹೆಸರು ಮಾಡಿದೆ… ಮನುಷ್ಯನಾಗಿ ಯಾವ ದೇಶದಲ್ಲಿ ಹುಟ್ಟಿದರು ಒಮ್ಮೆಯಾದರು ತಿನ್ನಬೇಕು ಮೈಸೂರು ಪಾಕ್ ಅನ್ನು….
LikeLike
[…] ಮಾಡಿದ್ದೂ ಇದೇ ಮಹಾರಾಜರೇ. ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಪಡೆಯ […]
LikeLike