ಅಮೃತಸರ ಸ್ವರ್ಣ ಮಂದಿರ, ವಿಶ್ವದ ಅತೀ ದೊಡ್ಡ ಅಡುಗೆ ಮನೆ

ಧಾರ್ಮಿಕ ಕ್ಷೇತ್ರಗಳಿಗೆ ಆಗಾಗ ಹೋಗಿ ಭಗವಂತನ ದರ್ಶನ ಪಡೆಯುವ ಮೂಲಕ ಮನಸ್ಸಿಗೆ ನೆಮ್ಮದಿ ದೊರೆಯುವುದಲ್ಲದೇ, ಅ ಕ್ಷೇತ್ರಗಳ ಮಹಿಮೆ ಮತ್ತು ಅಲ್ಲಿಯ ಧನಾತ್ಮಕ ಕಂಪನಗಳು ನಮ್ಮಲ್ಲಿ ಸೇರಿಕೊಳ್ಳುತ್ತವೆ. ಅದೇ ರೀತಿ ನೂರಾರು ಮೈಲಿಗಳ ದೂರಗಳಿಂದ ಬರುವ ಭಕ್ತಾದಿಗಳಿಗೆ ಆದರಾತಿಥ್ಯವನ್ನು ನೀಡಲು ಅಲ್ಲಿಯ ದೇವಾಲಯಗಳೂ,ಯಾತ್ರಿ ನಿವಾಸಗಳು ಮತ್ತು ಪ್ರಸಾದ ರೂಪದಲ್ಲಿ ಊಟೋಪಚಾರಗಳನ್ನು ನೀಡಲು ಸಿದ್ಧವಾಗಿರುತ್ತದೆ. ತಿರುಪತಿ, ಧರ್ಮಸ್ಥಳ, ಉಡುಪಿ, ಕೊಲ್ಲೂರು, ಶೃಂಗೇರಿ, ಹೊರನಾಡು ಶ್ರೀಕ್ಷೇತ್ರಗಳು ಈ ರೀತಿಯ ಅದರಾತಿಥ್ಯಗಳಿಗೆ ಹೆಸರುವಾಸಿಯಾಗಿವೆ. ಇವೆಲ್ಲಕ್ಕಿಂತಲೂ ಒಂದು ಕೈ ಮೇಲೇ ಎನ್ನಬಹುದಾದ ಅಮೃತಸರದ ಸ್ವರ್ಣಮಂದಿರದ ಸುಸ್ಸಜ್ಜಿತವಾಗಿದೆ ಎಂದರೂ ಸುಳ್ಳಲ್ಲ.

gt9ನಮ್ಮಲ್ಲಿ ದೇವಾಲಯಗಳು ಇರುವಂತೆ ಸಿಖ್ ಧರ್ಮದಲ್ಲಿ ಗುರುದ್ವಾರವು ಇರುತ್ತದೆ. ಅಲ್ಲಿ ಯಾವುದೇ, ಜಾತಿ, ಬಣ್ಣ, ಮತ, ಧರ್ಮ, ಅಥವಾ ಲಿಂಗವನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಅಲ್ಲಿಗೆ ಭೇಟಿ ನೀಡ ಬಹುದಾಗಿದೆ, ಇಲ್ಲಿ ಯಾರಿಗೂ ಯಾವುದೇ ತಾರತಮ್ಯದ ಆಸ್ಪದವಿಲ್ಲದೇ, ಹೆಂಗಸರು ತಲೆಯ ಮುಚ್ಚುವಂತೆ ಸೆರಗನ್ನು ಮತ್ತು ಗಂಡಸರು ತಲೆಗೆ ಮುಂಡಾಸನ್ನು ಕಟ್ಟಿಕೊಂಡು ಕೈಕಾಲುಗಳನ್ನು ತೊಳೆದುಕೊಂಡು ಶುಚಿರ್ಭೂತರಾಗಿ ಹೋಗಬಹುದಾಗಿದೆ.

ಗುರುದ್ವಾರದ ಮತ್ತೊಂದು ವಿಶೇಷ ಆಕರ್ಷಣೆಯೆಂದರೆ ಲಂಗರ್. ನಮ್ಮಲ್ಲಿರುವ ದಾಸೋಹದ ಪದ್ದತಿಯನ್ನೇ, ಸಿಖ್ ಸಮುದಾಯದವರ ಗುರುದ್ವಾರದಲ್ಲಿ ಲಂಗರ್ ಎಂದು ಕರೆಯುತ್ತಾರೆ. ಇದು ಸಂಪೂರ್ಣ ದಾನಿಗಳ ಧನಸಹಾಯ ಮತ್ತು ಸ್ವಯಂಸೇವಕರ ಶ್ರಮದಿಂದ ನಡೆಯುವ ಪ್ರಕ್ರಿಯೆಯಾಗಿರುತ್ತದೆ. ಇಲ್ಲಿ ತರಕಾರಿ ಹೆಚ್ಚುವುದು, ಅಡುಗೆ ತಯಾರಿಸುವುದು, ಅಡುಗೆ ಬಡಿಸುವುದು, ಕಡೆಗೆ ಎಂಜಿಲು ತಟ್ಟೆಗಳನ್ನು ತೊಳೆಯುವುದು ಈ ಎಲ್ಲಾ ಕೆಲಸಗಳನ್ನು ಅಲ್ಲಿಯ ಸ್ವಯಂಸೇವಕರೇ ನಿರ್ವಹಿಸುವುದು ಅತ್ಯಂತ ಗಮನಾರ್ಯ ಮತ್ತು ಅಭಿನಂದನಾರ್ಹ. ಈ ಪದ್ದತಿಯನ್ನು ಅವರು ಕರಸೇವಾ ಎನ್ನುತ್ತಾರೆ. ದೇವರ ಮುಂದೆ ಬಡವ, ಬಲ್ಲಿದ, ಆಸ್ತಿ, ಅಂತಸ್ತು ಯಾವುದೇ ತಾರತಮ್ಯವಿಲ್ಲದೇ, ಎಲ್ಲರೂ ಸಮಾನರು ಎನ್ನುವ ತತ್ವದಡಿಯಲ್ಲಿ ಪ್ರಪಂಚಾದ್ಯಂತ ಇರುವ ಸಹಸ್ರಾರು ಗುರುದ್ವಾರಗಳಲ್ಲಿ ಇಂದಿಗೂ ಇದು ಆಚರಣೆಯಲ್ಲಿದೆ.

GT8ಅಮೃತಸರದ ಸ್ವರ್ಣ ಮಂದಿರದ ಭವ್ಯತೆ, ಅಲ್ಲಿಯ ಶುಚಿತ್ವ, ನಿಶ್ಯಬ್ಧತೆ, ದಿನದ 24 ಗಂಟೆಗಳೂ, ವಾರದ 7 ದಿನಗಳೂ ಮತ್ತು ವರ್ಷದ 365 ದಿನಗಳೂ ನಿರಂತವಾಗಿ ನಡೆಯುವ ಸುಶ್ರಾವ್ಯವಾದ ಗುರುಕೀರ್ತನೆಯನ್ನು ಕಣ್ತುಂಬ ಮನತುಂಬ ಆಹ್ಲಾದಿಸಿ ಹೊರಗೆ ಬರುತ್ತಿದ್ದಂತೆಯೇ ನಮ್ಮ ಕಣ್ಣಿಗೆ ಬೀಳುವುದೇ ಪ್ರಪಂಚದಲ್ಲೇ ಅತಿದೊಡ್ಡದಾದ ದಿನದ 24 ಗಂಟೆಗಳೂ ಭಕ್ತರ ಹಸಿವನ್ನು ನೀಗಿಸಲು ಸಿದ್ಧವಿರುವ ಸುಸಜ್ಜಿತವಾದ ಎರಡು ಭೋಜನ ಶಾಲೆ ಇದನ್ನು ಗುರು ಕಾ ಲಂಗರ್ ಎಂದೂ ಕರೆಯುತ್ತಾರೆ. ಪ್ರತೀ ದಿನ ಸಾವಿರಾರು ಭಕ್ತಾದಿಗಳು ಈ ಸೇವೆಯ ಸೌಲಭ್ಯವನ್ನು ಪಡೆದು ಸಂತೃಪ್ತರಾಗುತ್ತಿದ್ದಾರೆ.

gt5ಭೋಜನಶಾಲೆಯನ್ನು ಪ್ರವೇಶಿಸುತ್ತಿದ್ದಂತೆಯೇ, ನಗುಮುಖದ ಸ್ವಯಂಸೇಕರ ಆಯಿಯೇ, ಪರ್ಷಾದ್ ಲೀ ಜೀಯೇ ಎನ್ನುವ ಸ್ವಾಗತ ದೊರೆಯುತ್ತದೆ. ಹಾಸಿರುವ ಜಮಖಾನದ ಮೇಲೆ ಸಾಲಾಗಿ ಕುಳಿತು ಕೊಂಡಲ್ಲಿ ಸ್ವಯಂಸೇವಕರೊಬ್ಬರು ಅಗಲವಾದ ತಟ್ಟೆಗಳನ್ನು ಕೊಡುತ್ತಾ ಬಂದರೆ ಅದರ ಹಿಂದೆಯೇ ಲೋಟ ಮತ್ತು ನೀರನ್ನು ಬಡಿಸಲು ಮತ್ತೊಬ್ಬರು ಸಿದ್ಧರಿರುತ್ತಾರೆ. ತಟ್ಟೆಗೆ ಮೊದಲು ಯಾವುದಾದರೂ ಸಿಹಿ ಸಾಧಾರಣವಾಗಿ ಸೂಜೀ ಹಲ್ವಾ ಅಂದರೆ ನಮ್ಮಲ್ಲಿಯ ಕೇಸರಿಬಾತ್ ರೀತಿಯ ಸಿಹಿ ಖಾದ್ಯವೋ ಇಲ್ಲವೇ ಖೀರ್ ಬಡಿಸಿ ಅದರ ಜೊತೆ ಹೆಚ್ಚಿದ ತರಕಾರಿಗಳ ಸಲಾಡ್ ಬಡಿಸುತ್ತಾರೆ ಅದರ ಜೊತೆ ಪಲ್ಯ ಮತ್ತು ದಾಲ್ ಬಡಿಸುತ್ತಾ ಹೋದಂತೆ ಅದರ ಹಿಂದೆ ದೊಡ್ಡ ಪಾತ್ರೆಗಳಲ್ಲಿ ರೊಟ್ಟಿಯನ್ನು ಕೊಡಲು ಬರುತ್ತಾರೆ. ಸಾಧಾರಣವಾಗಿ ಉಳಿದೆಲ್ಲಾ ಪದಾರ್ಥಗಳನ್ನು ತಟ್ಟೆಯಲ್ಲೇ ನೇರವಾಗಿ ಬಡಿಸಿದರೆ, ರೊಟ್ಟಿಯನ್ನು ಮಾತ್ರಾ ಎಲ್ಲರೂ ಭಗವಂತನಿಗೆ ಕೃತಜ್ಞತಾ ಪೂರ್ವಕವಾಗಿ ಕೈಯೊಡ್ಡಿ ಸ್ವೀಕರಿಸ ಬೇಕು ಎನ್ನುವುದು ಅವರ ಸಂಪ್ರದಾಯವಾದ ಕಾರಣ, ಚಪಾತಿ ಅಥವಾ ರೊಟ್ಟಿಯನ್ನು ಅವರು ತಟ್ಟೆಗೆ ಬಡಿಸುವುದಿಲ್ಲ.

gt4ಈ ರೀತಿ ಸಭಾಂಗಣದಲ್ಲಿ ಹಾಜರಿದ್ದ ಎಲ್ಲಾ ಭಕ್ತಾದಿಗಳಿಗೂ ಸ್ವಯಂಸೇವಕರು ಆಹಾರವನ್ನು ಬಡಿಸಿದ ನಂತರ, ಸ್ವಯಂಸೇವಕರೊಬ್ಬರು ಜೋ ಬೋಲೆ ಸೋ ನಿಹಾಲ್ ಎಂದು ಹೇಳುತ್ತಾರೆ. ಯಾರು ಉತ್ತರಿಸುತ್ತಾರೋ ಅವರು ಸಂತೋಷವಾಗಿರುತ್ತಾರೆ ಎಂಬುದು ಇದರರ್ಥ, ಇದಕ್ಕೆ ಪ್ರತಿಯಾಗಿ ಊಟಕ್ಕೆ ಕುಳಿತಿರುವ ಭಕ್ತಾದಿಗಳು ಸಹಾ ಸತ್ ಶ್ರೀ ಅಕಾಲ್ ಎಂದು ಭಕ್ತಿ ಪೂರ್ವಕವಾಗಿ ಜೋರಾಗಿ ಪ್ರತಿಕ್ರಿಯಿಸುತ್ತಿದ್ದಂತೆಯೇ, ಎಲ್ಲರೂ ಊಟವನ್ನು ಮಾಡಲು ಪ್ರಾರಂಭಿಸಬಹುದಾಗಿದೆ. ಯಾವುದೇ ಪದಾರ್ಥವನ್ನು ಎಷ್ಟು ಸಲ ಬೇಕಾದರೂ ಸಂಕೋಚವಿಲ್ಲದೇ ಕೇಳಿದರೂ ಸಂತೋಷದಿಂದಲೇ ಬಡಿಸಲು ಸ್ವಯಂಸೇವಕರು ಸಿದ್ದವಾಗಿರುತ್ತಾರಾದರೂ, ಅಗತ್ಯಕ್ಕಿಂತ ಹೆಚ್ಚಿನದ್ದನ್ನು ಹಾಕಿಸಿಕೊಂಡು ಆಹಾರವನ್ನು ಪೋಲು ಮಾಡುವುದು ಅಲ್ಲಿ ನಿಶಿದ್ಧವಾಗಿದೆ. ಇದರ ಜೊತೆ ಅನ್ನ ಕೆಲವೊಮ್ಮೆ ಮೊಸರು ಸಹಾ ಲಭ್ಯವಿರುತ್ತದೆ. ಊಟವಾದ ನಂತರ ತಟ್ಟೆಗಳನ್ನು ಖುದ್ದಾಗಿ ತೆಗೆದುಕೊಂಡು ಆಹಾರದ ತ್ರಾಜ್ಯಗಳನ್ನು ನಿಗಧಿತ ಸ್ಥಳದಲ್ಲಿ ಹಾಕಿ ತಟ್ಟೆಗಳನ್ನು ತೊಳೆಯಲು ಇಟ್ಟು ನಮ್ಮ ಕೈತೊಳೆದು ಬರುತ್ತಿದ್ದಂತೆಯೇ, ಬಿಸಿ ಬಿಸಿ ಚಾ ಸಿದ್ಧವಿರುತ್ತದೆ. ಇಷ್ಟವಿದ್ದವರು ರುಚಿ ರುಚಿಯಾದ ಮತ್ತು ಬಿಸಿಯಾದ ಟೀ ಸೇವಿಸಬಹುದಾಗಿದೆ

ಈ ಮೇಲೆ ತಿಳಿಸಿದಂತಹ ಎಲ್ಲಾ ವ್ಯವಸ್ಥೆ ದಿನದ ಇಪ್ಪನ್ನಾಲ್ಕು ಗಂಟೆಗಳೂ ಇಲ್ಲಿ ಲಭ್ಯವಿದ್ದು ಅದನ್ನು ಅಲ್ಲಿಯ ಸ್ವಯಂಸೇವಕರು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

gt3

 • ಸಾಮಾನ್ಯವಾಗಿ, ಇಲ್ಲಿ ಲಂಗರ್ ನಲ್ಲಿ ಬಡಿಸುವ ಎಲ್ಲಾ ಪದಾರ್ಥಗಳನ್ನೂ ಸ್ವಯಂಸೇವಕರು ತಮ್ಮ ಕೈಯಿಂದಲೇ ತಯಾರಿಸುತ್ತಾರೆ ಕೆಲವೊಂದು ವಿಶೇಷ ದಿನಗಳಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ಭಕ್ತಾದಿಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಮಾತ್ರವೇ, ಅಲ್ಲಿರುವ ಸ್ವಯಂಚಾಲಿತ ಯಂತ್ರಗಳ ಮೂಲಕ ರೊಟ್ಟಿಯನ್ನು ತಯಾರಿಸುತ್ತಾರೆ, ಈ ಯಂತ್ರ ಗಂಟೆಗೆ 25 ಸಾವಿರ ರೊಟ್ಟಿಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ.
 • ಸಾಮಾನ್ಯ ದಿನದಲ್ಲಿ, 50,000-60,000 ಕ್ಕೂ ಹೆಚ್ಚು ಜನರು ಲಂಗರ್ ಸೇವೆಯನ್ನು ಬಳಸಿದರೆ, ವಿಶೇಷ ದಿನಗಳಲ್ಲಿ ಈ ಸಂಖ್ಯೆ 100,000 ವರೆಗೂ ಅಧಿಕವಾಗಿರುತ್ತದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
 • ಲಂಗರ್ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಪಾತ್ರೆಗಳು ವಿಶ್ವದಲ್ಲೇ ಅತೀ ದೊಡ್ಡ ಅಡುಗೆ ಪಾತ್ರೆಗಳಲ್ಲಿ ಒಂದಾಗಿದೆ.
  ಇಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಊಟಕ್ಕೆ ಬಳಸುವ ತಟ್ಟೆ ಮತ್ತು ಲೋಟಗಳನ್ನು ಅಲ್ಲಿ ಕಾಣಬಹುದಾಗಿದೆ.
 • ಈ ಅಡುಗೆ ಮನೆ ವಿಶ್ವದ ಅತಿ ದೊಡ್ಡ ಸಮುದಾಯದ ಅಡುಗೆ ಮನೆಯಾಗಿದೆ.
 • ಸರಳ ಸಸ್ಯಾಹಾರಿ ಮತ್ತು ಅಷ್ಟೇ ಪೌಷ್ಠಿಕಾಂಶವಿರುವ ಅನಿಯಮಿತ ಆಹಾರವನ್ನು ಇಲ್ಲಿ ಬಡಿಸಲಾಗುತ್ತದೆ.
 • ಆಹಾರ ತಯಾರಿಕೆಯ ಪಾತ್ರೆಗಳು ಮತ್ತು ತಟ್ಟೆ, ಲೋಟಗಳನ್ನು ಸ್ವಚ್ಛಗೊಳಿಸುವಾಗ ನೈರ್ಮಲ್ಯದ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲಾಗುತ್ತದೆ. ಪಾತ್ರೆಗಳು ಮೂರ್ನಾಲ್ಕು ಬಾರಿ ಶುದ್ಧೀಕರಿಸಲಾಗುತ್ತದೆ.
 • ಇಲ್ಲಿರುವ ಆಹಾರ ಪದಾರ್ಥಗಳ ಉಗ್ರಾಣ ಸಾಕಷ್ಟು ದೊಡ್ಡದಾಗಿದ್ದು ಸದಾಕಾಲವೂ ಅದು ಭರ್ತಿಯಾಗಿಯೇ ಇರುತ್ತದೆ.
 • ಹಿಂದೆಲ್ಲಾ ಕಟ್ಟಿಗೆಯ ಉರುವಲುಗಳನ್ನು ಬಳೆಸುತ್ತಿದ್ದರೂ, ಈಗ ಆಧುನಿಕ ಪದ್ದತಿಯಂತೆ ಪ್ರತೀದಿನ ನೂರಾರು ಅನಿಲ ಸಿಲೆಂಡರ್ಗಳನು ಬಳಸಲಾಗುತ್ತದೆ.
 • ಪ್ರತಿದಿನ ಇಷ್ಟು ದೊಡ್ಡ ಪ್ರಮಾಣದ ಆಹಾರದ ವಿತರಣೆ ಎಲ್ಲವೂ ಭಕ್ತಾದಿಗಳು ದಾನದ ರೂಪದಲ್ಲಿ ಕೊಡುವ ಧ್ಯಾನ್ಯಗಳು, ಕಚ್ಚಾ ವಸ್ತುಗಳು ಮತ್ತು ಕಾಣಿಕೆ ರೂಪದಲ್ಲಿ ಕೊಡುವ ನಗದು ದೇಣಿಗೆಗಳಿಂದಲೇ ನಡೆಯುತ್ತದೆ ಹೊರತು ಯಾರಿಂದಲೂ ಆಗ್ರಹಪೂರ್ವಕವಾಗಿ ಕೇಳಿ ಪಡೆಯುವುದಿಲ್ಲ.

gt7ಪ್ರತಿ ನಿತ್ಯವೂ ಇಷ್ಟೇಲ್ಲಾ ವ್ಯವಸ್ಥೆಗಳಿಗೆ ಒಂದು ಚೂರು ಲೋಪಬಾರದಂತೆ ಅಲ್ಲಿನ ಸ್ವಯಂಸೇವಕರು ನೋಡಿಕೊಂಡು ಹೋಗುತ್ತಿರುವುದು ನಿಜಕ್ಕೂ ಅಭಿನಂದನಾರ್ಯ ಮತ್ತು ಅನುಕರಣೀಯ. ಕೆಲವು ಸ್ವಯಂಸೇವಕರು ಕೆಲದಿನಗಳ ಮಟ್ಟಿಗೆ ತಮ್ಮೆಲ್ಲಾ ಕೆಲಸಕಾರ್ಯಗಳನ್ನು ಬದಿಗಿಟ್ಟು ಇಲ್ಲಿಗೆ ಬಂದು ಸೇವೆ ಸಲ್ಲಿಸಿದರೆ, ಹೆಚ್ಚಿನವರು ಇಲ್ಲಿಯೇ ಪೂರ್ಣಾವಧಿಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

 

ವಿದೇಶಗಳಲ್ಲಿರುವ ಅಸಂಖ್ಯಾತ ಭಾರತೀಯ ವಿದ್ಯಾರ್ಥಿಗಳು ಇಂದಿಗೂ ಸಹಾ ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಇಂತಹ ಲಂಗರ್ ಗಳನ್ನೇ ಆಶ್ರಯಿಸಿದ್ದಾರೆ.

ಈ ಎಲ್ಲಾ ಸಂಪೂರ್ಣ ಪ್ರಕ್ರಿಯೆಯನ್ನು ಸ್ವಯಂಸೇವಕರು ಹೊರೆ ಎಂದು ಭಾವಿಸದೇ ಅಥವಾ ಮುಖವನ್ನು ಸುಕ್ಕು ಮಾಡಿಕೊಳ್ಳದೇ, ಸದಾಕಾಲವೂ ಹಸನ್ಮುಖರಾಗಿ ಧರ್ಮನಿಷ್ಠೆ ಮತ್ತು ನಿಯಮದಿಂದ ತಮ್ಮ ಸಿಖ್ ಧರ್ಮಾಧಾರಿತ ಸಿದ್ಧಾಂತವಾದ ಸೇವಾ ಅಥವಾ ಸೇವೆಯ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ.

GT1ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ, ಬಂದು ಹೋಗುವ ನಡುವೆ ಬರೀ ಕತ್ತಲೆ, ಭಕ್ತಿಯ ಬೆಳಕು ಬಾಳಿಗೆ ಬೇಕು, ಮುಕ್ತಿಗೆ ಭಗವಂತನ ಕೊಂಡಾಡಬೇಕು. ಆ ಮೂಲಕ ಆಂತರಿಕತೆಯನ್ನು ಶುದ್ಧೀಕರಿಸಸಿಕೊಳ್ಳಬೇಕು ಎನ್ನುವ ತತ್ವ ಅಲ್ಲಿಯ ಸ್ವಯಂಸೇವಕರದ್ದಾಗಿದೆ. ಹೀಗೆ ಅಮೃತಸರದ ಸುವರ್ಣ ಮಂದಿರ ಕೇವಲ ಬಾಹ್ಯವಾಗಿ ಚಿನ್ನದವಾಗಿರದೇ, ಅಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ಸ್ವಯಸೇವಕರ ಹೃದಯಗಳೂ ಚಿನ್ನವಾಗಿದೆ ಎಂದರೂ ಅತಿಶಯೋಕ್ತಿಯೇನಲ್ಲ.

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s