ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಭಾರತ ಸರ್ಕಾರ ಪ್ರಾರಂಭಿಸಿದ ವಂದೇ ಭಾರತ್ ವಿಮಾನ ಕಾರ್ಯಾಚರಣೆಯ ಭಾಗವಾಗಿ ಅರಬ್ ರಾಷ್ಟ್ರದಿಂದ ಪ್ರಯಾಣಿಕರನ್ನು ಭಾರತಕ್ಕೆ ಕರೆತರುತ್ತಿದ್ದ ಸಂದರ್ಭದಲ್ಲಿ ಮೊನ್ನೆ ಶುಕ್ರವಾರ, 7.8.2010 ರಂದು ಕೋಯಿಕ್ಕೋಡ್ ನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದ ಪೈಲೆಟ್, ತಮ್ಮ ಪ್ರಾಣವನ್ನು ತೆತ್ತು ಭಾರೀ ಪ್ರಾಣಹಾನಿಯನ್ನು ತಪ್ಪಿಸಿದ ವೀರ ಸೇನಾನಿ. Once a Soldier Always a Soldier ಎನ್ನುವ ಮಾತಿನಂತೆ ಒಬ್ಬ ಸೈನಿಕನು ತನ್ನ ದೇಶವಾಸಿಗಳ ಪ್ರಾಣ ಉಳಿಸಲು ತನ್ನ ಪ್ರಾಣವನ್ನು ಪಣಕ್ಕೆ ಇಡುತ್ತಾನೆ ಮತ್ತು ಯಾವುದೇ ಬೆಲೆ ತೆತ್ತಾದರೂ ದೇಶವಾಸಿಗಳ ಪ್ರಾಣ ಕಾಪಾಡುತ್ತಾನೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾದವರೇ 60 ವರ್ಷದ ಪೈಲಟ್ ಶ್ರೀಯುತ ದೀಪಕ್ ವಸಂತ್ ಸಾಠೆ.
ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟುತ್ತದೆ ಎಂಬುದು ಒಂದು ಗಾದೆ ಮಾತು. ಅದಕ್ಕೆ ಪ್ರತಿರೂಪವಾದ ವ್ಯಕ್ತಿಯೇ ಶ್ರೀಯುತ ದೀಪಕ್ ವಸಂತ್ ಸಾಠೆ. ಮೂಲತಃ ಯೋಧರ ಪರಂಪರೆ ಹಿನ್ನಲೆಯುಳ್ಳವರು ಇವರ ತಂದೆ ವಸಂತ್ ಸಾಠೆ ನಿವೃತ್ತ ಬ್ರಿಗೇಡಿಯರ್ ಆಗಿದ್ದರೆ ಇವರ ಸಹೋದರ ಕ್ಯಾಪ್ಟನ್ ವಿಕಾಸ್ ಸಾಠೆ ಜಮ್ಮು ಪ್ರದೇಶದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿರುವಾಗಲೇ ದೇಶಕ್ಕೆ ಜೀವ ಅರ್ಪಿಸಿದ ವೀರ ಸೇನಾನಿ.
1981ರಲ್ಲಿ ಹೈದರಾಬಾದಿನ ವಾಯುಪಡೆಯ ಅಕಾಡೆಮಿಯಿಂದ ಸ್ವೋರ್ಡ್ ಆಫ್ ಆನರ್ ನೊಂದಿಗೆ ಪದವಿ ಪಡೆದು ಭಾರತೀಯ ವಾಯುಪಡೆಯನ್ನು ಸೇರಿದ್ದ ಶ್ರೀಯುತರು ಅತ್ಯಂತ ಅನುಭವಿ ಪೈಲೆಟ್ ಆಗಿದ್ದಲ್ಲದೇ, ವಾಯುಪಡೆಯ ತರಬೇತಿ ಅಕಾಡೆಮಿಯಲ್ಲಿ ಬೋಧಕರಾಗಿದ್ದವರು. ಅವರು ಆತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಅಧ್ಯಯನದ ವಿಷಯದಲ್ಲಿ ಅತ್ಯುತ್ತಮರಾಗಿ ಚಿನ್ನದ ಪದಕವನ್ನು ಗಳಿಸಿದ್ದವರಾಗಿದ್ದರು. ಸದಾಕಾಲವೂ ಎಲ್ಲರಿಗೂ ಸಹಾಯ ಹಸ್ತವನ್ನು ಚಾಚುವಂತಹ ವ್ಯಕ್ತಿಯಾಗಿದ್ದರು. ಅದೊಮ್ಮೆ ದೆಹಲಿಯಿಂದ ಭಟಿಂಡಾಕ್ಕೆ ತಮ್ಮ ಗೆಳೆಯರೊಡನೆ ಕಾರಿನಲ್ಲಿ ಹೋಗುತ್ತಿದ್ದಾಗ ಮಾರ್ಗದ ಮಧ್ಯದಲ್ಲಿ ಅಪಘಾತಕ್ಕೀಡಾಗಿದ್ದ ಬಸ್ಸೊಂದನ್ನು ನೋಡಿದ ತಕ್ಷಣವೇ ತಮ್ಮ ಕಾರನ್ನು ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿ ಸಂತ್ರಸ್ತರಿಗೆ ಸಹಾಯ ಹಸ್ತವನ್ನು ಚಾಚಿದ್ದಂತಹ ಅಪರೂಪದ ವ್ಯಕ್ತಿಯಾಗಿದ್ದವರು. 2003 ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ವೃತ್ತಿಪರ ವಿಮಾನ ಚಾಲಕರಾದರು.
ದೀಪಕ್ ಸಾಠೆಯವರಿಗೆ ಸುಮಾರು 36 ವರ್ಷಗಳ ವಿಮಾನ ಹಾರಾಟದ ಅನುಭವವಿತ್ತು. 2005 ರಲ್ಲಿ ಏರ್ ಇಂಡಿಯಾದ ವಾಣಿಜ್ಯ ಪೈಲಟ್ ಆಗಿ ಸೇರುವ ಮೊದಲು 21 ವರ್ಷಗಳ ಕಾಲ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ತೊಂಬತ್ತರ ದಶಕದಲ್ಲಿ ಅವರು ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ನಡೆದ ವಾಯು ಅಪಘಾತದಲ್ಲಿ ತಲೆಗೆ ತೀವ್ರ ತರವಾದ ಪೆಟ್ಟು ತಿಂದು ಸುಮಾರು 6 ತಿಂಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ, ಮತ್ತೆ ಅವರೆಂದೂ ವಿಮಾನ ಹಾರಾಟ ಮಾಡಲಾರರು ಎಂದೇ ಎಲ್ಲರೂ ಭಾವಿಸಿದ್ದಾಗಲೇ, ತಮ್ಮ ಬಲವಾದ ಇಚ್ಛಾಶಕ್ತಿ ಮತ್ತು ವಿಮಾನ ಚಾಲನೆಯ ಮೇಲಿನ ಪ್ರೀತಿಯಿಂದಾಗಿ ಮತ್ತೆ ವಿಮಾನವನ್ನು ಚಾಲನೆ ಮಾಡಲು ಸಫಲರಾಗಿದ್ದರು.
ಮೊನ್ನೆ ಶುಕ್ರವಾರ ಅವರು ಚಾಲನೆ ಮಾಡುತ್ತಿದ್ದ ವಿಮಾನ ದುಬೈನಿಂದ 180 ಪ್ರಯಾಣಿಕರೊಂದಿಗೆ ರೊಂದಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (ಎಎಕ್ಸ್‌ಬಿ 1344, ಬಿ 737) ಹೊರಟು ಇನ್ನೇನು ವಿಮಾನ ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕು ಎನ್ನುವ ಹೊತ್ತಿಗೆ ವಿಮಾನದ ಲ್ಯಾಂಡಿಂಗ್ ಗೇರುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದು ಅವರಿಗೆ ತಿಳಿಯುತ್ತದೆ. ಈ ಸಮಯದಲ್ಲಿ ವಿಮಾನ ಲ್ಯಾಂಡ್ ಮಾಡುವ ಪ್ರಯತ್ನ ಮಾಡಿದರೆ ವಿಮಾನ ಹೊತ್ತಿ ಉರಿಯುವ ಸಾಧ್ಯತೆ ಜಾಸ್ತಿ ಇದ್ದುದ್ದರಿಂದ ವಿಮಾನವನ್ನು ಮೂರು ಸುತ್ತು ಆಕಾಶದಲ್ಲಿಯೇ ಸುತ್ತಾಡಿಸಿ ವಿಮಾನದಲ್ಲಿದ್ದ ಇಂಧನವನ್ನು ಆದಷ್ಟೂ ಖಾಲಿ ಮಾಡಿ ವಿಮಾನವನ್ನು ಇಳಿಸುತ್ತಾರೆ. ಈ ಸಮಯೋಚಿತ ಆಲೋಚನೆಯಿಂದಾಗಿ ವಿಮಾನಕ್ಕೆ ಬೆಂಕಿ ಹಿಡಿಯದ ಹಾಗೆ ನೋಡಿಕೊಂಡು ಭಾರೀ ರೀತಿಯಲ್ಲಿ ಅನಾಹುತ ತಪ್ಪಿಸುವುದರಲ್ಲಿ ಸಫಲರಾದರು.
ವಿಮಾನ ಭೂ ಸ್ಪರ್ಶ ಮಾಡುವುದಕ್ಕೆ ಕೆಲವೇ ಕ್ಷಣಗಳ ಮೊದಲು ವಿಮಾನದ ಇಂಜಿನ್ ಆಫ್ ಮಾಡಿದ ಕ್ಯಾಪ್ಟನ್ ಸಾಠೆ, ವಿಮಾನವನ್ನು ಅದರ ಹೊಟ್ಟೆಯ ಮೇಲೆ (Belly Landing) ಲ್ಯಾಂಡ್ ಮಾಡುವಲ್ಲಿ ಸಫಲರಾದರು ಹಾಗೂ ವಿಮಾನ ಮತ್ತು ಪ್ರಯಾಣಿಕರಿಗೆ ಅತ್ಯಂತ ಕಡಿಮೆ ಆಘಾತವಾಗುವಂತೆ ನೋಡಿಕೊಂಡರು. ಭಾರೀ ಮಳೆ ಸುರಿಯುತ್ತಿದ್ದ ಕಾರಣ ನೆಲಕ್ಕೆ ಅಪ್ಪಳಿಸಿದ ಭರದಲ್ಲಿ ವಿಮಾನ ಎರಡು ತುಂಡುಗಳಾದರೂ, 180 ಪ್ರಯಾಣಿಕರಿದ್ದ ಇಡೀ ವಿಮಾನವೇ ಹೊತ್ತಿ ಉರಿಯುವುದರ ಬದಲು ಈ ಪ್ರಕ್ರಿಯೆಯಿಂದಾಗಿ ಅವರು ಮತ್ತು ಅವರ ಸಹ ಪೈಲೆಟ್ ಒಳಗೊಂಡಂತೆ ಕೇವಲ 18 ಜನರು ಮಾತ್ರವೇ ಮೃತಪಟ್ಟು ಉಳಿದ 162 ಸಹ ಪ್ರಯಾಣಿಕರ ಪ್ರಾಣ ಉಳಿಸಿ ಹುತಾತ್ಮರಾದರು.
ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ ಅವರ ಸೋದರಸಂಬಂಧಿ ನಿಲೇಶ್ ಸಾಠೆಯವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವಂತೆ, ಒಂದು ವಾರಗಳ ಮುಂಚೆ ಅವರು ಭೇಟಿ ಮಾಡಿದ್ದಾಗ, ಕರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ವಿದೇಶಗಳಿಂದ ಸಿಕ್ಕಿಬಿದ್ದ ಭಾರತೀಯರನ್ನು ಮರಳಿ ಕರೆತರುವ ವಂದೇ ಭಾರತ್ ಕಾರ್ಯಾಚರಣೆಯ ಭಾಗವಾಗಲು ಹೆಮ್ಮೆ ಪಡುತ್ತೇನೆ ಎಂದಿದ್ದರಂತೆ.
ತಮ್ಮ ಭಾವನಾತ್ಮಕ ಪೋಸ್ಟ್ನಲ್ಲಿ, ವಿಮಾನದಲ್ಲಿದ್ದ ನೂರಾರು ಪ್ರಯಾಣಿಕರ ಪ್ರಾಣ ಉಳಿಸುವ ಪ್ರಯತ್ನದಲ್ಲಿ ತಮ್ಮ ಸಹೋದರ ಹುತಾತ್ಮರಾಗಿದ್ದಾರೆ ಎಂದೇ ಬರೆದಿದ್ದಾರೆ. 36 ವರ್ಷಗಳ ಹಾರಾಟದ ಅನುಭವ ಹೊಂದಿರುವ ಅನುಭವಿ ವೈಮಾನಿಕ ಆಪರೇಟರ್ ಬಗ್ಗೆ ತಮ್ಮ ಸುದೀರ್ಘವಾದ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಈ ಪೈಲಟ್‌ನನ್ನು ಸೈನಿಕ ಎಂದು ಕರೆದಿದ್ದಾರಲ್ಲದೇ ತಮ್ಮ ದೇಶವಾಸಿಗಳ ಪ್ರಾಣ ಉಳಿಸಲು ಒಬ್ಬ ಸೈನಿಕನಂತೆ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಎಂದು ಕಂಬನಿ ಸುರಿಸಿದ್ದಾರೆ.
ಈ ಘಟನೆಗೆ ಒಂದು ವಾರದ ಮೊದಲು ನಿಲೇಶ್ ಸಾಠೆ ಮತ್ತು ದೀಪಕ್ ಸಾಠೆ ನಡುವೆ ನಡೆದ ಸಂಭಾಷಣೆಯಲ್ಲಿ ಖುಷಿ ಖುಷಿಯಾಗಿ ವಂದೇ ಭಾರತ್ ಮಿಷನ್ ಬಗ್ಗೆ ಮಾತನಾಡುತ್ತಾ ಅರಬ್ ದೇಶಗಳಿಂದ ನಮ್ಮ ದೇಶವಾಸಿಗಳನ್ನು ಮರಳಿ ಕರೆತರುವ ಬಗ್ಗೆ ಅವರಿಗೆ ಹೆಮ್ಮೆಯಿತ್ತು. ಪ್ರಯಾಣಿಕರನ್ನು ಕರೆತರಲು ಇಲ್ಲಿಂದ ಹೋಗುವಾಗ ನೀವು ಖಾಲೀ ವಿಮಾನವನ್ನು ಓಡಿಸುವ ಬದಲು ಪ್ರಯಾಣಿಕರನ್ನೇಕೆ ಕರೆದುಕೊಂಡು ಹೋಗುವುದಿಲ್ಲ ಎಂದು ಕುತೂಹಲದಿಂದ ಪ್ರಶ್ನಿಸಿದಾಗ, ಓಹ್, ಇಲ್ಲ. ನಾವು ಎಂದಿಗೂ ಖಾಲಿಯಾಗಿ ವಿಮಾನವನ್ನು ಹಾರಿಸುವುದಿಲ್ಲ. ನಾವು ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದಿಲ್ಲವಾದರೂ ವಿಮಾನದಲ್ಲಿ ಆ ದೇಶಗಳಿಗೆ ಹಣ್ಣುಗಳು, ತರಕಾರಿಗಳು, ಔಷಧಿಗಳನ್ನು ತೆಗೆದುಕೊಂಡು ಹೋಗುತ್ತೇವೆ ಎಂದಿದ್ದರಂತೆ.
ಇತ್ತೀಚೆಗೆ ರಾಜಕಾರಣಿಯೊಬ್ಬರು, ಬಡತನದ ಕಾರಣದಿಂದಾಗಿ ಹೆಚ್ಚಿನವರು ಸೈನ್ಯ ಸೇರುತ್ತಾರೆ ಎಂಬ ಆಣಿ ಮುತ್ತೊಂದನ್ನು ಸುರಿಸಿದ್ದರು. ಆದರೆ. ದೀಪಕ್ ವಸಂತ್ ಸಾಠೆ ಹೊಟ್ಟೇ ಪಾಡಿಗೆ ಸೈನ್ಯ ಸೇರದೆ, ಕೆಚ್ಚಿದೆಯಿಂದ ದೇಶಕ್ಕಾಗಿ ಏನಾದರೂ ಸಾಧಿಸಲೇ ಬೇಕು ಎನ್ನುವ ಹಂಬಲದಿಂದ ಸೈನ್ಯ ಸೇರಿದವರಾಗಿದ್ದರು ಮತ್ತು ಅದನ್ನು ಸಾಧಿಸುವ ನಿಟ್ಟಿನಲ್ಲಿ ಹುತಾತ್ಮರಾದರು. ಸೇವೆ ಎಂಬ ಯಜ್ಞದಲ್ಲಿ ಸಮಿತ್ತಿನಂತೆ ತಮ್ಮನ್ನು ತಾವೇ ಅರ್ಪಿಸಿಕೊಂಡು ನೂರಾರು ಪ್ರಯಾಣಿಕರ ಪ್ರಾಣವನ್ನು ಉಳಿಸಿದರು ಎಂದರೆ ತಪ್ಪಾಗಲಾರದು ಅಲ್ವೇ?
ಏನಂತೀರೀ?
ನಮ್ಮ ಹೆಮ್ಮೆಯ ಸೈನಿಕನನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು…. ಪೈಲೆಟ್ ದೀಪಕ್ ಸಾಠೇ ಅವರಿಗೆ ನನ್ನ ನಮನಗಳು
LikeLike