ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯವಾದ ಮಂದಿರವನ್ನು ನಿರ್ಮಿಸಲು ನೆರವೇರಿದ ಶಿಲಾನ್ಯಾಸದಲ್ಲಿ ದೇಶದ ಎಲ್ಲಾ ಭಾಗಗಳ ನದಿಗಳ ನೀರು ಮತ್ತು ಪುಣ್ಯಕ್ಷೇತ್ರಗಳ ಮೃತ್ತಿಕೆಯನ್ನು ಬಳೆಸಲಾಗಿತ್ತು. ಅಂತಹ ಪುಣ್ಯಕಾರ್ಯಕ್ಕೆ ಕನ್ನಡಿಗರ ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಿಂದಲೂ ಜುಲೈ 23ರಂದು ಕಾವೇರಿ ತೀರ್ಥ ಹಾಗೂ ಮೃತ್ತಿಯನ್ನು ಕಳುಹಿಸಿ, ಮನೆಯಿಂದಲೇ ರಾಮಮಂದಿರದ ಶಿಲಾನ್ಯಸ ನೋಡಿ ಸಂಭ್ರಮಿಸಿದ್ದ ತಲಕಾವೇರಿಯ ಪ್ರಧಾನ ಅರ್ಚಕರಾದ ಟಿ.ಎಸ್. ನಾರಾಯಣಾಚಾರ್ ಸೇರಿದಂತೆ ಅವರ ಹಿರಿಯ ಸೋದರ, ಪತ್ನಿ ಹಾಗೂ ಇಬ್ಬರು ಸಹಾಯಕ ಅರ್ಚಕರು ಮತ್ತು ಅವರ ಮನೆಯ ಸಾಕು ಪ್ರಾಣಿಗಳೂ ಸೇರಿದಂತೆ ಎಲ್ಲರೂ ಮೊನ್ನೆ ಗುರುವಾರದಿಂದ ಕಣ್ಮರೆಯಾಗಿದ್ದಾರೆ.
ಮೊನ್ನೆ ಗುರುವಾರ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಕಾವೇರಿಯ ಉಗಮ ತಲಕಾವೇರಿಯ ಪಕ್ಕದ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಭಾರೀ ಜಲಸ್ಫೋಟವಾಗಿ ಭೂಕುಸಿತದಿಂದ ಅವರುಗಳು ವಾಸಿಸುತ್ತಿದ್ದ ಮನೆಗಳು ಸಂಪೂರ್ಣ ಭೂಮಿಯೊಳಗೆ ಮುಚ್ಚಿಹೋಗಿದ್ದು, ಎಲ್ಲರೂ ಬಹುತೇಕ ಜೀವಂತ ಸಮಾಧಿಯಾಗಿರುವ ಶಂಕೆಯಿದೆ ಕೊಡಗಿನಾದ್ಯಂತ ಮೈಚಾಚಿ ಇಷ್ಟೂ ವರ್ಷಗಳ ಕಾಲ ರಮಣೀಯವಾಗಿದ್ದ ಪಶ್ಚಿಮ ಘಟ್ಟ ಇದೀಗ ನರಕ ಸದೃಶ್ಯದಂತೆ ಬಾಸವಾಗುತ್ತಿದೆ. ಈ ಮೂರು ವರ್ಷಗಳ ಕೆಳಗೆಯೂ ಇಂತಹದ್ದೇ ಪ್ರಸಂಗ ನಡೆದು ಎಲ್ಲರ ಪರಿಶ್ರಮದಿಂದ ಸರಿಹೋಗುತ್ತಿದ್ದಂತೆಯೇ ಮತ್ತೊಮ್ಮೆ ಈ ದುರಂತ ನಡೆದು ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಕಳೆದ ನಾಲ್ಕು ದಶಕಗಳಿಂದಲೂ ತಲಕಾವೇರಿಯಲ್ಲೇ ನೆಲೆಸಿರುವ ಟಿ.ಎಸ್. ನಾರಾಯಣಾಚಾರ್ ತೀರ್ಥಕ್ಷೇತ್ರದ ಅರ್ಚಕರಷ್ಟೇ ಆಗಿರದೆ ಹಿಂದೆ ಭಾಗಮಂಡಲ ಪಂಚಾಯತ್ ಮಂಡಲ ಪ್ರಧಾನರಾಗಿಯೂ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂ ಪರಿಷದ್ ಮತ್ತು ಹಿಂದೂ ಜಾಗರಣಾವೇದಿಕೆಯೊಂದಿಗೆ ನಿಕಟವಾದ ಸಂಪರ್ಕಹೊಂದಿದ್ದ ಒಬ್ಬ ಪ್ರಗತಿಪರ ಧಾರ್ಮಿಕ ವ್ಯಕ್ತಿಯಾಗಿದ್ದರು. ಕೇವಲ ಮೂರು ದಿನಗಳ ಹಿಂದೆಯೇ ಪರಿಸರ ಕಾಳಜಿಯಿಂದ ಗಿಡ ನೆಡುವ ಕಾರ್ಯಕ್ರಮದಲ್ಲಿಯೂ ಸಕ್ರೀಯವಾಗಿ ಭಾಗಿಯಾಗಿದ್ದರು.
ಅವರ ಮನೆ ಗುಡ್ಡದಲ್ಲಿರುವುದರಿಂದ ಇಂತಹ ಅವಘಡಗಳು ಸಂಭವಿಸ ಬಹುದು ಎಂದು ಊಹಿಸಿ, ಶೀಘ್ರದಲ್ಲಿಯೇ ಮನೆ ಖಾಲಿ ಮಾಡಿ ಬೇರೆಡೆ ತೆರಳುವಂತೆ ನೋಟೀಸ್ ಕೊಟ್ಟಿದ್ದರೂ, ತಾಯಿ ಕಾವೇರಮ್ಮ ನೋಡಿಕೊಳ್ಳುತ್ತಾಳೆ ಬಿಡಿ ಎಂಬ ಬಂಢ ದೈರ್ಯ ತೋರಿದ್ದು ಅವರ ಜೀವಕ್ಕೇ ಕುತ್ತಾದದ್ದು ನಿಜಕ್ಕೂ ದುಖಃಕರವೇ ಸರಿ.
ಆದರೆ ಇಂತಹ ದೈನೇಸಿ ಸ್ಥಿತಿಗೆ ಬರಲು ಕಾರಣವೇನು? ಇದಕ್ಕೆ ಕಾರಣೀ ಭೂತರು ಯಾರು? ಇಂತಹ ಪ್ರಕೃತಿ ವಿಕೋಪಕ್ಕೆ ಕೊನೆ ಎಂದು? ಇದಕ್ಕೆ ಶಾಶ್ವತ ಪರಿಹಾರವೇನು? ಎಂದು ಯಾರಾದರೂ ಯೋಚಿಸಿದ್ದಾರಾ?
ಇಪ್ಪತೈದು ಮುವತ್ತು ವರ್ಷಗಳ ಹಿಂದೆ ಇದಕ್ಕಿಂತಲೂ ಹೆಚ್ಚು ಜೋರಾಗಿ ಎಲ್ಲಾ ಕಡೆಯಲ್ಲೂ ಮಳೆ ಬರುತ್ತಿತ್ತು. ಅಂದು ವಾರಗಟ್ಟಲೆ ನಿರಂತರವಾಗಿ ಒಂದು ಘಳಿಗೆಯೂ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದರೂ ಗುಡ್ಡಗಳು ಉರುಳುವುದಾಗಲೀ, ಊರಿಡೀ ಮುಳುಗುವುದಾಗಲಿ, ಮನೆಗಳು ಬೀಳುವುದಾಗಲಿ, ಪ್ರಾಣ ಹಾನಿಯಾಗಲೀ ಕೇಳಿಯೇ ಇರಲಿಲ್ಲ. ಆದರೆ ಈಗ ಕೇವಲ ಮೂರ್ನಾಲ್ಕು ದಿನ ಬಿದ್ದ ಜಡಿ ಮಳೆಗೆ ಇಡೀ ಊರಿಗೆ ಊರೇ ಮುಳುಗಿ ನಾಶವಾಗಲು ಕಾರಣವೇನು? ಎಂದು ಯೋಜಿಸಿದರೆ ಬರುವ ಉತ್ತರವೇ ಮನುಷ್ಯರ ಸ್ವಾರ್ಥ.
ಪ್ರವಾಸೋದ್ಯಮ ಈ ಪರಿಯಾಗಿ ಬೆಳೆಯುವ ಮುನ್ನಾ ಮಲೆನಾಡು ಮತ್ತು ಕೊಡಗಿನ ಜನ ನೆಮ್ಮದಿಯಾಗಿ ತಮ್ಮ ತೋಟ, ಗದ್ದೆಗಳ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆ ಸಮಯದಲ್ಲಿಯೂ ಮಳೆಗಾಲದಲ್ಲಿ ಇದಕ್ಕಿಂತಲೂ ಹತ್ತು ಪಟ್ಟು ಹೆಚ್ಚಿನ ಮಳೆ ಸತತವಾಗಿ ಬಿಟ್ಟೂ ಬಿಡದೇ, ಮೂರ್ನಾಲ್ಕು ತಿಂಗಳುಗಳು ಸುರಿಯುತ್ತಿತ್ತು. ನದಿಗಳು ಉಕ್ಕೇರುತ್ತಿದ್ದವು. ಗದ್ದೆಗಳು ಮತ್ತು ತೋಟಗಳು ಮುಳುಗುತ್ತಿದ್ದವಾದರೂ ಈ ರೀತಿಯ ಭೀಕರ ನಷ್ಟವಾಗುತ್ತಿರಲಿಲ್ಲ ಈ ರೀತಿಯಾದ ಪ್ರಾಣ ಹಾನಿಯಾಗುತ್ತಿರಲಿಲ್ಲ.
ನಗರ ಪ್ರದೇಶಗಳಿಂದ ವಾರಾಂತ್ಯದಲ್ಲಿ ಮೋಜು ಮಸ್ತಿಗೆಂದು ಯಾವಾಗ ಜನರು ಈ ಪ್ರದೇಶಗಳಿಗೆ ಬರ ತೊಡಗಿದರೋ, ಅಲ್ಲಿಯ ಜನ ತಮ್ಮ ತೋಟವಲ್ಲದೇ ಇತರೇ ಹೆಚ್ಚಿನ ಹಣ ಕಾಣತೊಡಗಿದರು. ಬಹುತೇಕರು ತಮ್ಮ ತಮ್ಮ ಮನೆಗಳನ್ನೇ ಅನಧಿಕೃತವಾಗಿ ಹೋಮ್ ಸ್ಟೆ ಮಾಡಿಕೊಂಡು, ಅತಿಥಿ ದೇವೋಭವ ಎನ್ನುತ್ತ, ಪ್ರವಾಸಿಗರ ಬೇಕೂ ಬೇಡಗಳನ್ನು ಪೂರೈಸುವುದರೊಂದಿಗೆ ಈ ಭೂಭಾಗಗಳ ಅವನತಿಗೆ ಚರಮ ಗೀತೆ ಹಾಡಿದರು ಎಂದರೂ ತಪ್ಪಾಗಲಾರದು.
ಪ್ರವಾಸಿಗರು ಹೆಚ್ಚಾದಂತೆಲ್ಲಾ ಅವರ ಹಣದ ದಾಹ ಹೆಚ್ಚಾಗ ತೊಡಗಿತು. ಪ್ರವಾಸಿಗರಿಂದ ಆದಾಯ ಹೆಚ್ಚಾಗುತ್ತಿದೆ ಎಂಬುದನ್ನು ಗ್ರಹಿಸಿದ ಹೊರಗಿನವರು ಸಿಕ್ಕಾ ಪಟ್ಟೆ ಖರ್ಚು ಮಾಡಿ ಆಸ್ತಿ ಖರೀದಿಸಿ ಪ್ರವಾಸೋದ್ಯಮದ ಹೆಸರಿನಲ್ಲಿ ಕಾಫಿ ತೋಟಗಳ ಜೊತೆ ಅಕ್ಕ ಪಕ್ಕದ ಕಾಡುಗಳನ್ನು ಅಕ್ರಮವಾಗಿ ಒಳಗೆ ಹಾಕಿಕೊಂಡು ಅಲ್ಲಿದ್ದ ಮರಗಳನ್ನು ಕಡಿದು ರೆಸಾರ್ಟ್ ಮಾಡುವ ಮೂಲಕ ಅನೈತಿಕ ಚಟುವಟಿಗೆಗೆ ಆಶ್ರಯತಾಣವಾದರು. ಅಲ್ಲಿಯ ಜನರೂ ಒತ್ತಾಯಕ್ಕೋ ಇಲ್ಲವೇ ಅತಿಯಾದ ಹಣದ ಆಸೆಗೆ ಬಿದ್ದು, ಭವಿಷ್ಯದ ಚಿಂತನೆಯಿಲ್ಲದೇ, ಸಿಕ್ಕ ಸಿಕ್ಕವರಿಗೆ ತಮ್ಮ ಆಸ್ತಿಗಳನ್ನ ಮಾರುವ ಮೂಲಕ ಸ್ಥಳೀಯರೇ ಕಾಣೆಯಾಗಿ ಪರಕೀಯರ ಪಾಲಾಗತೊಡಗಿತು.
ಈ ನಾಯಿಕೊಡೆಯಂತಹ ಹೋಮ್ ಸ್ಟೇ, ರೆಸಾರ್ಟ್, ಕಾಟೇಜ್‌ಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಪರಿಸರ ಎಗ್ಗಿಲ್ಲದೆ ಹಾಳು ಮಾಡತೊಡಗಿದರು. ಗಿಡ ಮರಗಳ ನಾಶವಾಗಿ ಪರಿಸರ ಹಾಳಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ರೈಲು ಮತ್ತು ದೊಡ್ಡ ವಿದ್ಯುತ್ ಪ್ರಾಜೆಕ್ಟ್ ಗಳನ್ನು ಈ ಪ್ರದೇಶದಿಂದ ದೂರವಿಟ್ಟಿದ್ದರೂ ರೈಲ್ವೇ ಸಂಪರ್ಕವಿದ್ದರೆ ಪ್ರವಾಸೋದ್ಯಮಕ್ಕೆ ಇನ್ನಷ್ಟು ಮೆರಗು ಬರುತ್ತದೆ ಎಂದು ಯಾರೋ ರಾಜಕಾರಣಿಗಳ ಕಿವಿಯೂದಿದ್ದೇ ತಡಾ, ಅಲ್ಲಿ ಮರಗಳ್ಳರ ಗರಗಸಗಳು ಸದ್ದು ಮಾಡುತ್ತಾ ನೋಡ ನೋಡುತ್ತಿದ್ದಂತೆಯೇ, ಲಕ್ಷಾಂತರ ಮರಗಳ ಮಾರಣ ಹೋಮವೇ ನಡೆಯಿತು. ಇದರ ಜೊತೆಗೆ ಅಕ್ರಮ ಗಣಿಗಾರಿಕೆಯೂ ಅವ್ಯಾಹತವಾಗಿ ನಡೆಯುತ್ತಿದೆ
ನೀರು ನಿಲ್ಲಬೇಕಾದ ಜಾಗದಲ್ಲಿ ಗಗನಚುಂಬಿ ಕಟ್ಟಡಗಳು ನಿರ್ಮಾಣ ಮಾಡಿದರು, ನೀರು ಹರಿಯಬೇಕಾದ ರಾಜಕಾಲುವೇ ಜಾಗವನ್ನೆಲ್ಲಾ ರಸ್ತೆಗಾಗಿ ಡಾಂಬರೀಕರಣ ಹಾಗೂ ಕಾಂಕ್ರೀಟ್ ಮಾಡಿದರು. ಮಳೆ ನೀರನ್ನು ಹೀರಿಕೊಳ್ಳುವ ಭೂಮಿಯ ಎಲ್ಲಾ ದಾರಿಗಳನ್ನು ಮುಚ್ಚಿದಾಗ ರಸ್ತೆಗಳೇ ನದಿಗಳಂತಾದವು. ಮನೆಯ ಅಂಗಳ ಈಜು ಕೊಳದ ರೂಪ ಪಡೆದು ಮನೆಯ ಒಳಗೂ ನೀರು ಹರಿದು ಬಂತು. ಮನುಷ್ಯನ ತನ್ನ ಐಶಾರಾಮ್ಯಕ್ಕಾಗಿ ಪರಿಸರವನ್ನು ನಾಶಪಡಿಸಿದ ಪರಿಣಾಮದಿಂದಾಗಿಯೇ ಕಾಲ ಕಾಲಕ್ಕೆ ಮಳೆ ಬಾರದಂತಾಯಿತು. ಇನ್ನು ಸಣ್ಣದಾಗಿ ಅಕಾಲಿಕ ಮಳೆ ಬಂದರೂ ಗುಡ್ಡಗಳೇ ಉರುಳಿಹೋಗಿ ಊರಿಗೆ ಊರೇ ಮುಳುಗಿ ಹೋಗುವಂತ ಪರಿಸ್ಥಿತಿ ನಿರ್ಮಾಣವಾಯಿತು, ಗುಡ್ಡಗಳನ್ನು ಹಿಡಿದಿಟ್ಟುಕೊಳ್ಳುತ್ತಿದ್ದಂತಹ ನಿತ್ಯಹರಿದ್ವರ್ಣದ ದಟ್ಟವಾದ ಕಾಡಗಳನ್ನು ಟಿಂಬರ್ ಮಾಫಿಯಾದವರು ಎಗ್ಗಿಲ್ಲದೆ ಕಡಿದು ಕಾಫೀ, ರಬ್ಬರ್ ತೋಟಗಳನ್ನು ಮಾಡಿಕೊಂಡು ಲಕ್ಷಾಂತರ ರೂಪಾಯಿಗಳ ಅಕ್ರಮ ಸಂಪಾದನೆ ಮಾಡಿಕೊಂಡ ಪರಿಣಾಮವೇ ಈ ರೀತಿಯ ಅವಗಡಗಳು ಸಂಭವಿಸುತ್ತಿವೆ.
ಈ ರೀತಿಯಾಗಿ ಪ್ರಕೃತಿಯನ್ನು ಎಗ್ಗಿಲ್ಲದೆ ನಾಶ ಮಾಡಿ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವಂತೆ ಪ್ರತಿಯೊಂದಕ್ಕೂ ಸರ್ಕಾರವನ್ನೇ ದೂಷಿಸುವುದು ಸರಿ ಕಾಣದು. ಸರ್ಕಾರಗಳೂ ಕೂಡಾ ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಅತೀ ಹೆಚ್ಚಿನ ಪ್ರಾಣ ಹಾನಿಯಾಗದಂತೆ ನೋಡಿ ಕೊಳ್ಳುತ್ತಾ , ಎಲ್ಲರಿಗೂ ಪುನರ್ವಸತಿ ಕಲ್ಪಿಸುವತ್ತ ಹರಿಸಿದೆಯಾದರೂ, ಘಟನೆ ಸಂಭವಿಸಿದ ಕೆಲದಿನಗಳು ಸ್ಥಬ್ಧವಾಗಿದ್ದು ನಂತರ ಯಥಾ ಪ್ರಕಾರ ಪ್ರಕೃತಿ ಮಾತೆಯ ಮೇಲಿನ ಅತ್ಯಾಚಾರ ಎಗ್ಗಿಲ್ಲದೇ ಮುಂದುವರೆಯುತ್ತಾ ಹೋಗುತ್ತಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕೃತಿಯ ವಿನಾಶವನ್ನು ತಡೆಯದೇ ಹೋದಲ್ಲಿ ಇಂದು ಕೇರಳ ಮತ್ತು ಕೊಡಗಿನಲ್ಲಿ ನಡೆದ ಇಂತಹ ಘಟನೆಗಳು ಇನ್ನು ಕೆಲವೇ ವರ್ಷಗಳಲ್ಲಿ ಚಿಕ್ಕಮಗಳೂರು, ಸಕಲೇಶಪುರದ ಕಡೆಗಳಲ್ಲಿಯೂ ಸಂಭವಿಸಬಹುದಾಗಿದೆ. ಹಾಗಾಗಿ ವಸುದೈವ ಕುಟುಂಬಕಂ ಎಂಬ ನಮ್ಮ ಸಂಸ್ಕೃತಿಯ ಧ್ಯೇಯವನ್ನು ನೆನಪಿನಲ್ಲಿಟ್ಟುಕೊಂಡು ನಾವೂ ಬಾಳೋಣ ಮತ್ತು ಎಲ್ಲರನ್ನೂ ಬಾಳಲು ಬಿಡೋಣ. ಪ್ರವಾಸೋದ್ಯಮ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಇದೇ ರೀತಿ ಪ್ರಕೃತಿಯನ್ನು ನಾಶ ಮಾಡುತ್ತಾ ಹೋದಲ್ಲಿ ಅಂತಿಮವಾಗಿ ನಮ್ಮನ್ನೇ ಸರ್ವನಾಶ ಮಾಡುವುದು ಖಂಡಿತ. ಇಂದು ನಾವು ಮಾಡುತ್ತಿರುವ ತಪ್ಪಿನಿಂದಾಗಿ ಭವಿಷ್ಯದಲ್ಲಿ ನಮ್ಮ ನಿಮ್ಮ ಮಕ್ಕಳು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ನಮ್ಮ ಮುಂದಿನ ಪೀಳಿಗೆಯವರನ್ನು ನೆನಪಿಸಿಕೊಂಡಾದರೂ ಪ್ರಕೃತಿಯ ವಿನಾಶವನ್ನು ತಡೆಯೋಣ
ಏನಂತೀರೀ?