ಉಗ್ರಸೇನ ಎಂಬ ಪರೋಪಕಾರಿ ರಾಜನು ಮಥುರಾ ರಾಜ್ಯವನ್ನು ಆಳುತ್ತಿರಲು ಅತನ ಮಗನಾದ ಕಂಸನೇ ತನ್ನ ತಂದೆಯಿಂದ ಸಿಂಹಾಸನವನ್ನು ಕಸಿದುಕೊಂಡಿದ್ದಲ್ಲದೇ ಪ್ರಜಾಪೀಡಿತನಾಗಿದ್ದ. ಈತನ ದಬ್ಬಾಳಿಕೆಯನ್ನು ಹೇಗಾದರೂ ಪರಿಹಸಲೇ ಬೇಕೆಂದು ಜನ ಭಗವಂತನಲ್ಲಿ ಮೊರೆ ಹೋದಾಗ ಈತನನ್ನು ಸಂಹರಿಸಲು ಸಾಕ್ಷಾತ್ ವಿಷ್ಣು, ಕೃಷ್ಣನ ಅವತಾರದಲ್ಲಿ ಈ ಭೂಲೋಕದಲ್ಲಿ ಜನ್ಮ ತಳೆಯುವುದಾಗಿ ಭರವಸೆ ಕೊಟ್ಟಿದ್ದಲ್ಲದೇ, ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಗಾಗಿಯೇ ಮಹಾ ವಿಷ್ಣು ಕೃಷ್ಣನಾಗಿ ಭೂಮಿಗೆ ಬರುವ ಮೊದಲು ವಿಷ್ಣುವಿನ ಆಸನವಾದ ಆದಿಶೇಷನು ವಾಸುದೇವ ಮತ್ತು ರೋಹಿಣಿ ದಂಪತಿಗಳಿಗೆ ಬಲರಾಮನ ರೂಪದಲ್ಲಿ ಕೃಷ್ಣನ ಅಣ್ಣನಾಗಿ ಜನಿಸಿರುತ್ತಾನೆ.
ಇತ್ತ ಯಾದವ ಕುಲವನ್ನು ಸಹ ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಕಂಸ ತನ್ನ ಸಹೋದರಿ ದೇವಕಿಯನ್ನು ಯಾದವರ ರಾಜಕುಮಾರ ವಸುದೇವನೊಂದಿಗೆ ವಿವಾಹ ಮಾಡಿಕೊಟ್ಟನು. ಅದೇ ಸಮಯದಲ್ಲಿಯೇ ದೇವಕಿಯ ಸಂತತಿಯಿಂದಲೇ ತನ್ನ ಅಂತ್ಯವಾಗುತ್ತದೆ ಎಂದು ತಿಳಿದು, ಅಲ್ಲಿಯೇ ದೇವಕಿಯನ್ನು ಕೊಲ್ಲಲು ಮುಂದಾದಾಗ, ವಸುದೇವ ತಮಗೆ ಜನಿಸುವ ಪ್ರತಿ ಮಗುವನ್ನು ಜನಿಸಿದ ಕೂಡಲೇ ಕಂಸನಿಗೆ ಹಸ್ತಾಂತರಿಸುವುದಾಗಿ ಭರವಸೆ ನೀಡಿದ ನಂತರವೇ ಪ್ರಾಣ ಭಿಕ್ಷೆ ನೀಡುವುದಲ್ಲದೇ, ತನ್ನ ಸಹೋದರಿ ದೇವಕಿ ಮತ್ತು ವಾಸುದೇವನನ್ನು ಸೆರೆಮನೆಗೆ ತಳ್ಳುತ್ತಾನೆ. ಪ್ರತೀ ಬಾರೀ ಮಕ್ಕಳು ಜನಿಸಿದಾಗಲೂ ಕಂಸ ಆ ಮಗು ಜಗತ್ತನ್ನು ನೋಡುವ ಮೊದಲೇ, ತಂಗಿಯ ಮಡಿಲಿನಿಂದ ಮಗುವನ್ನು ಕಿತ್ತೊಯ್ದು ಸೆರೆಮನೆಯ ಗೋಡೆಗಳಿಗೆ ಮಗುವನ್ನು ಅಪ್ಪಳಿಸಿ ಕೊಲ್ಲುತ್ತಿರುತ್ತಾನೆ.
ಹೀಗೆ ಏಳು ಮಕ್ಕಳು ಈಗಾಗಲೇ ಕಂಸನ ಕೈಯ್ಯಲ್ಲಿ ಹತರಾಗಿ ಎಂಟನೇ ಮಗುವಿನ ಆಗಮದ ನಿರೀಕ್ಷೆಯಲ್ಲಿರುವ ಆ ದಂಪತಿಗಳಿಗೆ ಶ್ರಾವಣಮಾಸದ ಬಹುಳ ಸಪ್ತಮಿ ರೋಹಿಣಿ ನಕ್ಷಂತ್ರದಂದು ಮುದ್ದಾದ ಮಗು ಜನಿಸುತ್ತದೆ. ನೋಡಲು ಕಪ್ಪಾಗಿದ್ದರೂ ಬಹಳ ಸುಂದರವಾಗಿದ್ದ ಆ ಮಗುವನ್ನು ಹೇಗಾದರೂ ಮಾಡಿ ಕಂಸನ ಕೈಯಿಂದ ರಕ್ಷಿಸಿಕೊಳ್ಳಬೇಕು ಎಂದು ದೇವಕಿ ಯೋಚಿಸುತ್ತಿರುವಾಗಲೇ ಸೆರಮನೆಯಲ್ಲಿ ಪ್ರಕಾಶಮಾನವಾದ ಬೆಳಕೊಂದು ಚೆಲ್ಲಿ ದೈವಿಕ ಧ್ವನಿಯಿಂದ ವಾಸುದೇವನು ಎಚ್ಚರಗೊಂಡು ನೋಡಿದರೆ ಅವರ ಕೈಕೊಳಗಳೆಲ್ಲವೂ ತಂತಾನೆ ಬಿಚ್ಚಿಕೊಂಡಿರುತ್ತವೆ. ಕಾವಲು ಕಾಯುತ್ತಿದ ಭಟರೆಲ್ಲರೂ ನಿದ್ದೆಗೆ ಜಾರಿ ಹೋಗಿದ್ದರೆ, ಸೆರೆಮನೆಯ ಬೀಗವೂ ತಂತಾನೇ ತೆಗೆದುಕೊಂಡಿರುತ್ತದೆ. ಇದೇ ಸುಸಂದರ್ಭ ಎಂದು ನಿರ್ಧರಿಸಿದ ವಸುದೇವ ಪುಟ್ಟ ಕಂದನನ್ನು ಬುಟ್ಟಯೊಳಗೆ ಇಟ್ಟುಕೊಂಡು ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ, ಗೆಳೆಯ ನಂದರಾಜನಿಗೆ ಬಳಿಗೆ ಹೋಗಲು ನಿರ್ಧರಿಸಿದಾಗ ಉಕ್ಕಿ ಹರಿಯುತ್ತಿದ್ದ ಯಮುನೇಯೂ ದಾರಿ ಬಿಡುತ್ತದೆ. ಅದೇ ರಾತ್ರಿ ನಂದರಾಜ ಮತ್ತು ಅವರ ಪತ್ನಿ ಯಶೋದಳಿಗೆ ಹೆಣ್ಣು ಮಗುವಿನ ಜನನವಾಗಿರುತ್ತದೆ. ವಸುದೇವ ತನ್ನ ಮಗುವನ್ನು ಯಶೋಧಳ ಕೈಗಿತ್ತು ಆವರಿಗೆ ಜನಿಸಿದ ಹೆಣ್ಣು ಮಗುವನ್ನು ತೆಗೆದುಕೊಂಡು ಪುನಃ ಯಥಾ ಸ್ಥಾನವಾದ ಸೆರೆಮನೆಗೆ ಬರುತ್ತಾನೆ. ವಸುದೇವ ಹಾಗೆ ಕರೆದುಕೊಂಡು ಬಂದ ಹೆಣ್ಣು ಮಗುವೇ ಯೋಗಮಾಯ.
ಯೋಗಮಯ ದೇವಕಿಯ ಪಕ್ಕದಲ್ಲಿ ಮಲಗಿದ ತಕ್ಷಣ ಜೋರಾಗಿ ಅಳಲು ಶುರು ಮಾಡುತ್ತದೆ. ಮಗುವಿನ ಅಳುವಿನ ಶಬ್ಧಕ್ಕೆ ಎಚ್ಚರಗೊಂಡ ಕಾವಲು ಭಟರು ಕೂಡಲೇ ಕಂಸನಿಗೆ ವಿಷಯ ಮುಟ್ಟಿಸುತ್ತಾರೆ. ಕೂಡಲೇ ಮಗುವನ್ನು ಕೊಲ್ಲಲು ಕಂಸ ಬಂದಾಗ, ಮಗುವನ್ನು ಕೊಲ್ಲಬಾರದೆಂದದೂ ತನ್ನ ಸಂತಾನದಿಂದಲೇ ನಿನ್ನ ಅಂತ್ಯ ಎನ್ನುವ ಭವಿಷ್ಯವಾಣಿ ಬಹುಶಃ ತಪ್ಪಾಗಿರಬೇಕೆಂದೂ ದೇವಕಿ ತನ್ನ ಸಹೋದರ ಕಂಸನಲ್ಲಿ ಪರಿಪರಿಯಾಗಿ ಬೇಡಿಕೊಂಡರೂ ಕಂಸನ ಹೃದಯ ಕರಗುವುದಿಲ್ಲ.
ಕೃಷ್ಣನ ಜೀವನವನ್ನು ಉಳಿಸಲೆಂದೇ ಅದೇ ದಿನ ಯಶೋದೆಯ ಉದರದಲ್ಲಿ ಜನಿಸಿದ ಆ ಹೆಣ್ಣು ಮಗು ಯೋಗಮಾಯಳನ್ನು ಕೃಷ್ಣ ಜನ್ಮಾಷ್ಠಮಿಯಂದು ಯಾರೂ ನೆನಪಿಸಿಕೊಳ್ಳದಿರುವುದು ನಿಜಕ್ಕೂ ಬೇಸರದ ಸಂಗತಿಯೇ ಸರಿ. ಕಂಸ ತನ್ನ ಸೋದರ ಸೊಸೆಯನ್ನು ಕಲ್ಲಿನ ಚಪ್ಪಡಿಯಲ್ಲಿ ಅಪ್ಪಳಿಸಲು ಪ್ರಯತ್ನಿಸಿದಾಗ, ಆ ಯೋಗಮಯಳು ಕಂಸನ ಹಿಡಿತದಿಂದ ತಪ್ಪಿಸಿಕೊಂಡು ಭಗವಂತನ ಸಹೋದರಿಯಂತೆ ಅವತರಿಸಿದ ಎಂಟು ಕೈಗಳ ದೇವತೆಯ ರೂಪವನ್ನು ಪಡೆದುಕೊಳ್ಳುತ್ತಾನೆ. ಯೋಗಮಾಯ ಕೂಡ ಶಕ್ತಿಯ ಅವತಾರವಾಗಿದ್ದು, ಕೆಲವು ಹಳೆಯ ವಾಗ್ದಾನಗಳನ್ನು ಉಳಿಸಿಕೊಳ್ಳಲು ವಿಷ್ಣುವಿನ ಅವತಾರದೊಂದಿಗೆ ಜನಿಸಿದ್ದಳು. ಕಂಸಾ ಅವಳನ್ನು ತನ್ನ ಕಾಲುಗಳಿಂದ ಹಿಡಿದು ನೆಲಕ್ಕೆ ಅಪ್ಪಳಿಸಲು ಮುಂದಾದಾಗ, ಅವಳು ಸ್ವರ್ಗದ ಕಡೆಗೆ ಹಾರಿ, ಕಂಸಾ, ನಿನ್ನನ್ನು ಕೊಲ್ಲುವವನು ಈಗಾಗಲೇ ಜನ್ಮ ಪಡೆದಿದ್ದಾನೆ ಮತ್ತು ಅವನು ದೂರದಲ್ಲಿ ಸುರಕ್ಷಿತ ಕೈಗಳಲ್ಲಿ ಬೆಳೆಯುತ್ತಿದ್ದಾನೆ. ಹಾಗಾಗಿ ನೀನು ನನ್ನನ್ನು ಕೊಲ್ಲುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ಹೇಳಿದ್ದಲ್ಲದೇ, ನಾನು ಬಯಸಿದ್ದಲ್ಲಿ ನಿನ್ನನ್ನು ಈಗಲೇ ಕೊಲ್ಲಬಹುದಿತ್ತು ಆದರೆ ನೀನು ನನ್ನ ಕಾಲುಗಳಿಂದ ಹಿಡಿದಿದ್ದರಿಂದ, ನಾನು ಅದನ್ನು ನಿನ್ನ ನಮ್ರತೆಯ ಅಭಿವ್ಯಕ್ತಿಯಾಗಿ ತೆಗೆದುಕೊಂಡು ನಿನ್ನನ್ನು ಕ್ಷಮಿಸುತ್ತಿದ್ದೇನೆ ಎಂದು ಹೇಳಿ ಆಕಾಶದಲ್ಲಿ ಹಾರಿಹೋಗುತ್ತಾಳೆ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗುತ್ತದೆ. ಕೃಷ್ಣನ ಇತರ ಒಡಹುಟ್ಟಿದವರಂತೆ ಅವಳು ಕೂಡ ಕೊಲ್ಲಲ್ಪಟ್ಟಳು ಎಂದು ಯಾವ ಧರ್ಮಗ್ರಂಥಗಳಲ್ಲಿಯೂ ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ.
ಕೃಷ್ಣನು ಜನಿಸಿದ ಆ ಕತ್ತಲೆಯ ರಾತ್ರಿಯಲ್ಲಿ, ಸೆರೆಮನೆಯ ಎಲ್ಲಾ ಕಾವಲುಗಾರರು ನಿದ್ರೆಗೆ ಜಾರಿರುತ್ತಾರೆ, ವಸುದೇವನಿಗೆ ಕಟ್ಟಿದ್ದ ಸರಪಳಿಗಳು ತಂತಾನೇ ಬಿಚ್ಚಿಕೊಂಡಿರುತ್ತದೆ, ಸೆರೆಮನೆಯ ಬಾಗಿಲುಗಳು ನಿಧಾನವಾಗಿ ತೆರೆಯಲ್ಪಟ್ಟವೋ ಅದೇ ರೀತಿಯಲ್ಲಿಯೇ, ಕೃಷ್ಣ (ಚೇತನಾ, ಜಾಗೃತಿ) ನಮ್ಮ ಹೃದಯದಲ್ಲಿ ಜನ್ಮ ಪಡೆದ ತಕ್ಷಣ, ಎಲ್ಲಾ ಕತ್ತಲೆಗಳೂ (ನಕಾರಾತ್ಮಕತೆ) ಮಸುಕಾಗುತ್ತದೆ.
ಎಲ್ಲಾ ಸರಪಳಿಗಳು (ಅಹಂ, ನಾನು, ನನ್ನದು, ಸ್ವಾರ್ಥ) ಎಲ್ಲವೂ ಮುರಿದು ಹೋಗುತ್ತವೆ ಮತ್ತು ನಾವು ನಮ್ಮನ್ನು ಉಳಿಸಿಕೊಳ್ಳುವ ಎಲ್ಲಾ ಜೈಲು ಬಾಗಿಲುಗಳು (ಜಾತಿ, ಧರ್ಮ, ವೃತ್ತಿ, ಸಂಬಂಧಗಳು ಇತ್ಯಾದಿ) ತೆರೆಯಲಾಗುತ್ತದೆ.
ಇದರೊಂದಿಗೆ ಸಮಾಜದಲ್ಲಿರುವ ಜಾತಿ, ಧರ್ಮ, ಆಸ್ತಿ ಅಂತಸ್ತುಗಳ ಸಂಬಂಧಗಳು ಮರೆಯಾಗಿ ಒಂದು ಸುಂದರ ಸಮಾಜ ನಿರ್ಮಾಣವಾದಲ್ಲಿ ಮಾತ್ರವೇ ಕೃಷ್ಣನ ತಂಗಿ ಯೋಗಮಾಯಳ ತ್ಯಾಗಕ್ಕೆ ಸಾರ್ಥಕತೆ ದೊರೆಯುತ್ತದೆ. ಕೃಷ್ಣನೇ ಭಗವದ್ಗೀತೆಯಲ್ಲಿ ಹೇಳಿದಂತೆ
ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ||
ಮಾ ಕರ್ಮಫಲ ಹೇತುರ್ಭೂ || ಮಾ ತೇ ಸಂಗೋಸ್ತ್ವ ಕರ್ಮಣಿ ||
ಅಂದರೆ ನಿನ್ನ ಕರ್ತವ್ಯವನ್ನು ನೀನು ಶ್ರದ್ಧಾ ಭಕ್ತಿಗಳಿಂದ ಮಾಡು ಫಲಾಫಲವನ್ನು ನನ್ನ ಮೇಲೆ ಬಿಡು ಎಂಬ ಮಾತಿಗೆ ನಿಜವಾದ ಅರ್ಥ ದೊರೆಯುತ್ತದೆ.
ಏನಂತೀರೀ?