ಹರಳೋ ಮರಳೋ?

ಅರೇ ಇದೇನಿದೂ ಅರವತ್ತಕ್ಕೆ ಅರಳೋ ಮರಳೋ ಎನ್ನುವುದನ್ನು ಕೇಳೀದ್ದೇವೆ. ಆದನ್ನು ತಪ್ಪಾಗಿ ಹರಳೋ ಮರಳೋ ಎನ್ನುವ ಶೀರ್ಷಿಕೆ ಕೊಟ್ಟಿದ್ದೀನಿ ಅಂತ ಯೋಚನೆ ಮಾಡ್ತಾ ಇದ್ದೀರಾ? ನಾನು ಆ ರೀತಿಯ ಶೀರ್ಷಿಕೆ ಕೊಡಲು ಇರುವ ಕಾರಣ ಏನು ಅಂತ ತಿಳಿದ್ರೇ, ಖಂಡಿತವಾಗಿಯೂ ಬೆಚ್ಚಿ ಬೀಳ್ತೀರಿ. ಕಳೆದ ಎರಡು ಮೂರು ದಿನಗಳಿಂದ ವಾಟ್ಸಾಪ್ ವಿವಿದ ಗುಂಪಪುಗಳಲ್ಲಿ ಗಾಜಿನ ಸೋಡಾ ಬಾಟಲಿನಿಂದ ಪಚ್ಚೆ ಹರಳನ್ನು ಮಾಡುವ ವಿಡೀಯೋ ಹರಿದಾಡುತ್ತಿದೆ. ಯಾವುದೋ ಹಸಿರು ಬಣ್ಣದ ಬಾಟಲ್ಲನ್ನು ಸುತ್ತಿಗೆಯಿಂದ ಹೊಡೆದು, ಒಡೆದು ಅದರ ತಳ ಭಾಗದ ಗಟ್ಟಿ ಭಾಗವನ್ನು ಸಣ್ಣಗೆ ಕತ್ತರಿಸಿ ಅದನ್ನು ಸಾಣೆ ಹಿಡಿದು ಉಂಗುರಕ್ಕೆ ಅಳವಡಿಸಿ ಅದನ್ನೇ ಸಾವಿರಾರು ರೂಪಾಯಿಗಳಿಗೆ ಮಾರುತ್ತಾರೆ ಎಂಬ ಆಘಾತಕಾರಿ ವಿಷಯ ವೈರಲ್ ಆಗುತ್ತಿದೆ. ಇದೇ ರೀತಿಯ ಸಂದೇಹ ನನಗೆ ಇಪ್ಪತ್ತು ವರ್ಷಗಳ ಹಿಂದೆಯೇ ಆಗಿದ್ದು ಆ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ನನ್ನ ಮದುವೆ ಸಂದರ್ಭದಲ್ಲಿ ನಮ್ಮ ಮಾವನವರು ವರೋಪಚಾರವಾಗಿ ಲೋಕಾರೂಢಿಯಾಗಿ ಕೊಡುವ ವಾಚು, ಉಂಗುರ, ಸೂಟು ಬೂಟಿನ ರೂಪದಲ್ಲಿ ನವಗ್ರಹ ಉಂಗುರವನ್ನು ಕೊಟ್ಟಿದ್ದರು. ಕಷ್ಟ ಪಟ್ಟು ಸಂಪಾದಿಸಿದ ಹಣದಲ್ಲಿ ಅಂತಹ ಮೂರು ಉಂಗುರಗಳನ್ನು ಮಾಡಿಸಿ, ಒಂದು ಅವರಿಗೆ, ಮತ್ತೊಂದು ಅವರ ಮಗನಿಗೆ ಮತ್ತು ಮೂರನೆಯದ್ದನ್ನು ಮಗಳನ್ನು ಕೈ ಹಿಡಿದ ಅಳಿಯನಿಗೆ ಕೊಟ್ಟಿದ್ದರು. ಅಂತಹ ಅಮೂಲ್ಯವಾದ ಉಂಗುರವನ್ನು ಪ್ರತಿನಿತ್ಯ ಧರಿಸಲು ಆಗಾದೆಂದು ನಿರ್ಧರಿಸಿ, ಯಾವುದಾದರೂ ಸಭೆ ಸಮಾರಂಭಗಳ ಸಮಯದಲ್ಲಿ ಮಾತ್ರವೇ ಧರಿಸಿ ಉಳಿದ ಸಮಯದಲ್ಲಿ ಎತ್ತಿಡುವುದನ್ನು ಗಮನಿಸಿದ ನಮ್ಮ ಮಾವನವರು ನಮ್ಮ ಮದುವೆಯ ವಾರ್ಷಿಕೋತ್ಸವದ ಸಮಯದಲ್ಲಿ‌ ಮತ್ತೊಂದು ಸುಂದರವಾದ ಪಚ್ಚೆಯ ಉಂಗುರವನ್ನು ಉಡುಗೊರೆಯನ್ನಾಗಿ ಕೊಟ್ಟು ಇದನ್ನು ಪ್ರತಿದಿನವೂ ಧರಿಸಬೇಕೆಂದು ಆಗ್ರಹ ಪಡಿಸಿದರು.

ಷ್ಟು ಇಷ್ಟ ಪಟ್ಟು ಪ್ರೀತಿಯಿಂದ ಮಾಡಿಸಿ ಕೊಟ್ಟ ಉಂಗುರವನ್ನು ಅವರ ಆಸೆಯಂತೆಯೇ ಬಲಗೈ ಉಂಗುರದ ಬೆರಳಿಗೆ ಹಾಕಿ ಕೊಂಡಿದ್ದೆ. ಅದನ್ನು ಧರಿಸುವ ಮೊದಲಾಗಲೀ ಅಥವಾ ಧರಿಸಿದ ನಂತರವಾಗಲೀ ನನ್ನ ಜೀವನದಲ್ಲಿ ಹೆಚ್ಚಿನ ಬದಲಾವಣೆ ಆಗದಿದ್ದರೂ, ನಮ್ಮ ಬಾಳಿನಲ್ಲಿ ಮಹಾಲಕ್ಷ್ಮಿ ರೂಪದಲ್ಲಿ ನಮ್ಮ ಮಗಳು ಜನಿಸಿದ್ದಳು. ಅದೊಮ್ಮೆ ಯಾವುದೋ ಸಮಾರಂಭದಲ್ಲಿ ಪರಿಚಿತ ಜ್ಯೋತಿಷ್ಯರೊಬ್ಬರು ನನ್ನ ಕೈಯಲ್ಲಿದ್ದ ಪಚ್ಚೆ ಉಂಗರವನ್ನು ನೋಡಿ ಇದನ್ನು ನಿಮ್ಮ ಜನ್ಮ ರಾಶಿಯ ಅನುಗುಣವಾಗಿ ಧರಿಸಿದ್ದೀರೋ? ಎಂದು ಕೇಳಿದರು. ಅದಕ್ಕೆ ನಾನು ಹಾಗೇನು ಇಲ್ಲ ನಮ್ಮ ಮಾವನವರು ಪ್ರೀತಿಯಿಂದ ಕೊಟ್ಟಿರುವ ಕಾರಣ ಧರಿಸಿದ್ದೇನೆ ಎಂದೆ. ಆ ಕೂಡಲೇ, ಅರೇ, ಹಾಗೆಲ್ಲಾ ಯಾವುದೋ ಹರಳುಗಳನ್ನು ಧರಿಸಬಾರದು, ಜೀವನ ಲತ್ತೇ ಹೊಡೆಯುತ್ತದೆ ಎಂದು ಕೂಡಲೇ ನನ್ನ ಜನ್ಮ ರಾಶಿ ನಕ್ಷತ್ರ ಎಲ್ಲವನ್ನೂ ಕೂಲಂಕುಶವಾಗಿ ವಿಚಾರಿಸಿ ಅದಕ್ಕನುಗುಣವಾಗಿ ಪುಷ್ಯರಾಗ ಹರಳನ್ನು ಧರಿಸಲು ಸಲಹೆ‌‌ ಕೊಟ್ಟರು.

ಪುರೋಹಿತರು ಹೇಳಿದ್ದೇ ವೇದ ವಾಕ್ಯ ಎಂದು ನಂಬಿದ ನನ್ನ ಮಡದಿ, ವಾರಾಂತ್ಯದಲ್ಲಿ ಅವೆನ್ಯೂ ರಸ್ತೆಯಲ್ಲಿ ಸುಮಾರು ದಶಕಗಳಿಂದಲೂ ಅವರಿಗೆ ಪರಿಚಯವಿರುವ ನಂಬಿಕಸ್ಥ ಮತ್ತು ಈ ಹಿಂದಿನ ನವರತ್ನದ ಮತ್ತು ಪಚ್ಚೆ ಕಲ್ಲಿನ ಉಂಗುರಗಳನ್ನು ಖರೀದಿಸಿದ್ದ ಆಭರಣದ ಅಂಗಡಿಗೆ ಹೋಗಿ, ನಮ್ಮ ಮನೆಯವರಿಗೆ‌ ಪುಷ್ಯರಾಗ ಇರುವ ಉಂಗುರ ಬೇಕಿತ್ತು ಸ್ವಲ್ಪ ತೋರಿಸಿ ಎಂದು ಕೇಳಿದಳು.

ಪರಿಚಯ ಇದ್ದ ಕಾರಣ ಎಂದಿನಂತೆ ಆದರದಿಂದ ಕುಳ್ಳರಿಸಿದ ಅಂಗಡಿಯ ಮಾಲಿಕರು ಪುಷ್ಯರಾಗದ ತೋರಿಸಿ ಅದರ ಬೆಲೆ ಸುಮಾರು ಏಳೆಂಟು ಸಾವಿರಗಳಾಗಬಹುದು. ಉಂಗುರದ ಆಕಾರ ಮತ್ತು ಆಕೃತಿಯ ಮೇಲೆ ಬೆಲೆ ಹೆಚ್ಚು ಕಡಿಮೆಯಾಗುತ್ತದ್ದೆ ಎಂದು ತಿಳಿಸಿದಾಗ, ನಮ್ಮ ಮೇಲಿನ ಮಮತೆಯಿಂದ ನನ್ನ ಮಡದಿ ಮಮತ ಬೆಲೆಯನ್ನೂ ಲೆಕ್ಕಿಸದೇ ನನಗೆ ಮುದ್ದಾದ ಉಂಗುರವನ್ನು ಆರಿಸಿಯೇ ಬಿಟ್ಟಿದ್ದಳು.

ಅದೇಕೋ ಏನೋ, ಅಂದೆಲ್ಲಾ, ಗಾಜಿನಿಂದ ವಜ್ರದ ಹರಳಿಗೆ ತಲೆ ಮೇಲೆ ಹೊಡೆಯುವಂತೆ ನಕಲೀ ಹರಳುಗಳನ್ನು ತಯಾರಿಸುವುದನ್ನು ಓದಿ ತಿಳಿದಿದ್ದ ನಾನು ಸುಮ್ಮನಿರಲಾರದೇ, ಚಿನ್ನದ ನಿಖರತೆ ಅಳೆಯಲು ಯಂತ್ರವಿದ್ದ ಹಾಗೆ, ಈ ಹರಳುಗಳನ್ನು ಪರೀಕ್ಷಿಸಲು ಯಾವುದಾದರೂ ಮಾನದಂಡವಿದೆಯೇ. ಇದು ಅಸಲಿಯೋ? ನಕಲಿಯೋ ಎಂದು ಹೇಗೆ ತಿಳಿಯುವುದು? ಎಂದು ಕುತೂಹಲದಿಂದ ಕೇಳಿಯೇ ಬಿಟ್ಟೆ.

ಅಲ್ಲಿಯವರೆಗೂ ಶಾಂತವಾಗಿದ್ದ ಅಂಗಡಿಯಾತ, ಇದ್ದಕ್ಕಿದ್ದಂತೆಯೇ, ಏನ್ರೀ ನೀವು?, ಏನು ಮಾತಾನಾಡುತ್ತಿದ್ದೀರೀ? ನಿಮಗೆ ನಮ್ಮ ಹರಳಿನ ಬಗ್ಗೆ ನಂಬಿಕೆ ಇಲ್ವೇನ್ರೀ? ನಮ್ಮ ಅನುಭವದ ಮೇಲೆ ಅದು ಅಸಲಿಯೋ ನಕಲಿಯೋ ಎಂದು ನೋಡಿದ ತಕ್ಷಣವೇ ಹೇಳ್ತೇವೆ. ನಾವು ಕೊಟ್ಟ ಈ ಹರಳನ್ನು ಬೇರೇ ಎಲ್ಲಿಯಾದರೂ ತೋರಿಸಲು ಹೋಗಬೇಡಿ. ಅವರಿಗೆಲ್ಲಾ ಅಸಲಿ ಯಾವುದು ನಕಲಿ ಯಾವುದು ಎಂದು ತಿಳಿಯದೇ ಏನೇನೋ ತಪ್ಪು ತಪ್ಪು ಹೇಳಿ ನಿಮ್ಮನ್ನು ಬೇಸ್ತು ಗೊಳಿಸುತ್ತಾರೆ ಎಂದು ಸ್ವಲ್ಪ ಜೋರು ಧನಿಯಲ್ಲಿ ಹೇಳಿದರು.

ನಾವು ಕೊಟ್ಟ ಈ ಹರಳನ್ನು ಎಲ್ಲಿ ಬೇಕಾದರೂ ಪರೀಕ್ಷಿಸಿಕೊಳ್ಳಿ ಎಂದು ಹೇಳುತ್ತಾರೆ ಎಂಬು ಭಾವಿಸಿದ್ದವನಿಗೆ, ಅವರು ಹೇಳಿದ ಧಾಟಿ ಅಷ್ಟಾಗಿ ಹಿಡಿಸದೇ ಸರೀ ಸಾರ್, ಇನ್ನೊಮ್ಮೆ ಬರುತ್ತೇವೆ ಎಂದು ಹೇಳಿ ಅಂಗಡಿಯಿಂದ ಹೊರೆಬಿದ್ದೆವು. ಅಂಗಡಿಯಿಂದ ಹೊರ ಬಂದ ಕೂಡಲೇ ನಮ್ಮಾಕಿ ರೀ ಅದ್ಯಾಕ್ರೀ ಹಾಗೆ ಮಾಡಿದ್ರೀ? ನಾನು ತಾನೆ ಕೊಡಿಸ್ತಾ ಇದ್ದದ್ದು. ನಿಮ್ದೇನು ದುಡ್ಡು ಅಲ್ವಲ್ಲಾ ಅಂತಾ ಅಕ್ಕರೆಯಿಂದ ದಬಾಯಿಸಿದಳು. ದುಡ್ಡು ನನ್ನದು ನಿನ್ನದು ಅಂತಲ್ಲಾ. ನಾವು ಕೊಡುವ ಹಣಕ್ಕೆ ತಕ್ಕ ಮಾಲು ಸಿಗಬೇಕು ಎನ್ನುವುದು ನನ್ನ ಅಭಿಲಾಷೆ ಎಂದು ಮಡದಿಯನ್ನು ಸಮಾಧಾನ ಪಡಿಸಿ, ಅವರಳ ಒತ್ತಾಯಕ್ಕೆ ಮಣಿದು ಒಂದೆರಡು ದೊಡ್ಡ ದೊಡ್ಡ ಆಭರಣಗಳ ಅಂಗಡಿಗಳಿಗೆ ಎಡತಾಕಿದೆವು.

ನಾವು ಜನ್ಮ ರಾಶಿಯ ಅನುಗುಣವಾಗಿ ಹರಳನ್ನು ತೆಗೆದುಕೊಳ್ಳಲು ಬಂದಿದ್ದೇವೆ ಎಂದು ತಿಳಿದ ತಕ್ಷಣವೇ ನಮ್ಮನ್ನು ಅವರ ಅಸ್ಥಾನ ಜ್ಯೋತಿಷ್ಯರ ಬಳಿಗೆ ಕರೆದುಕೊಂಡು ಹೋಗಿ ಅವರು ಜಾತಕ ತಂದಿದ್ದೇವೆಯೇ ಎಂದು ಕೇಳಿದರು. ನಾವು ಇಲ್ಲಾ ಎಂದು ಹೇಳಿದ್ದಕ್ಕೆ, ನನ್ನ ಜನ್ಮ ದಿನಾಂಕ, ಸಮಯ ಮತ್ತು ಹುಟ್ಟಿದ ಊರನ್ನು ಕೇಳಿ ಅವರ ಕಂಪ್ಯೂಟರಿನಲ್ಲಿ ಅಳವಡಿಸಿ ಕೂಡಲೇ ಜಾತಕ ಅದರ ಜೊತೆ ನನ್ನ ರಾಶಿಗೆ ಅನುಗುಣವಾಗಿ ಹರಳುಗಳು ಅದನ್ನು ಧರಿಸುವುದರಿಂದ ಆಗುವ ಪರಿಣಾಮಗಳು ಎಲ್ಲದರ ಪ್ರಿಂಟ್ ಔಟ್ ಕೈಗಿತ್ತು. ನಮಗೆ ಬೇಕಾದ ರೀತಿಯ ಉಂಗುರವನ್ನು ಆಯ್ಕೆ ಮಾಡಲು ಮತ್ತೊಂದು ವಿಭಾಗಕ್ಕೆ ಕರೆದೊಯ್ದರು.

ಅತಿ ವಿನಯಂ ಧೂರ್ತ ಲಕ್ಷಣಂ ಎನ್ನುವಂತೆ ಆ ಆಭರಣದ ಅಂಗಡಿಯ ಅತೀ ವಿನಯತೆಯೂ ನನಗೆ ಅನುಮಾನ ತರಿಸಿ ಸುಮ್ಮನೆ ಕಾಟಾಚಾರಕ್ಕೆ ಒಂದೆರಡು ಉಂಗುರವನ್ನು ನೋಡಿ ಅದರ ಬೆಲೆ ಕೇಳಿ ಹೌರಾರಿ, ಇಲ್ಲಾ ಸದ್ಯಕ್ಕೆ ನಮ್ಮ ಅಷ್ಟೊಂದು ಹಣ ಇಲ್ಲಾ. ಹಣ ಹೊಂದಿಸಿ ಕೊಂಡು ಬರುತ್ತೇವೆ ಎಂದಾಗ, ಸರ್ ಹಣದ ಬಗ್ಗೆ ಚಿಂತೆ ಬೇಡ. ಇನ್ಸ್ಟಾಲ್ಮೆಂಟ್ ಮೂಲಕ ಕೊಡಿ. ಅದೂ ಆಗದಿದ್ದಲ್ಲಿ ಇದಕ್ಕಿಂದ ಸ್ವಲ್ಪ ಕಡಿಮೆ ಹಣದಲ್ಲಿ ಮತ್ತೊಂದು ಹರಳನ್ನು ಕೊಡುತ್ತೇವೆ ಎಂದು ದಂಬಾಲು ಬಿದ್ದರು. ಹಾಗೂ ಹೀಗೂ ಅವರನ್ನು ಸಂಬಾಳಿಸಿಕೊಂಡು ಹರಳನ್ನು ಕೊಳ್ಳದಿದ್ದಕ್ಕಾಗಿ ಅವರ ಆಸ್ಥಾನ ಜ್ಯೋತಿಷಿಗಳ ಸಲಹೆಗೆಂದು ಇನ್ನೂರೋ ಮುನ್ನೂರೋ ರೂಪಾಯಿಗಳನ್ನು ತೆತ್ತು ಆ ಅಂಗಡಿಯಿಂದ ಹೊರಬಿದ್ದೆವು.

ನೀವೊಬ್ಬರು ಅನುಮಾನ ಪಿಚಾಚಿಗಳು. ಯಾವುದನ್ನೂ ಬಡಪಟ್ಟಿ ಒಪ್ಪುವುದಿಲ್ಲ. ಲೋಕವೆಲ್ಲಾ ಒಂದು ದಾರಿ ಹಿಡಿದರೆ, ನೀವೊಬ್ಬರೇ ಮತ್ತುಂದು ದಾರಿ ಹಿಡಿಯುತ್ತೀರಿ, ನೀವು ಖಂಡಿತವಾಗಿಯೂ ಉದ್ದಾರವಾಗುವುದಿಲ್ಲ ಎಂದು ಆ ಕ್ಷಣದ ಕೋಪದಲ್ಲಿ ಹೆಂಡತಿ ಹಾಕಿದ ಶಾಪಕ್ಕೆ ಬೇಸರಿಸಿ ಕೊಳ್ಳದೇ, ಹೋಟೆಲ್ಲಿಗೆ ಹೋಗಿ ಮಸಾಲೆ ದೋಸೆ ತಿಂದು ಆರಾಮಾಗಿ ಮನೆಗೆ ಬಂದೆವು.

ಅಂದಿನಿಂದ ಇಂದಿನವರೆಗೂ ಯಾವುದೇ ರೀತಿಯ ಹರಳನ್ನು ತೆಗೆದುಕೊಳ್ಳುವ ಮನಸ್ಸು ಮಾಡಲೇ ಇಲ್ಲ. ಮಾವನವರು ಪ್ರೀತಿಯಿಂದ ಕೊಟ್ಟ ನವರತ್ನದ ಹರಳುಗಳ ಉಂಗುರವನ್ನು ಹಬ್ಬ ಹರಿದಿನಗಳು ಮತ್ತು ವಿಶೇಷ ಸಭೆ ಸಮಾರಂಭಗಳಂದು ಧರಿಸಿದರೆ, ಪಚ್ಚೆಕಲ್ಲಿನ ಉಂಗುರ ಸುಮಾರು ವರ್ಷಗಳ ವರೆಗೂ ಕೈಬೆರಳುಗಳಲ್ಲಿ ಭದ್ರವಾಗಿಯೇ ಇತ್ತು ಮತ್ತು ಜೀವನದಲ್ಲಿಯೂ ಸಂತೋಷ ತಂದಿತ್ತು.

ಕೆಲ ವರ್ಷಗಳ ಹಿಂದ ಇಷ್ಟ ಪಟ್ಟು ಕಷ್ಟ ಪಟ್ಟು ನಾಲಿಗೆ ಕಟ್ಟಿ, ದೇಹ ದಂಡಿಸಿ ಸಣ್ಣಗಾದ ಪರಿಣಾಮ ಎಲ್ಲಾ ಉಂಗರಗಳೂ ಸಡಿವಾದ ಕಾರಣ ವಾಚು, ಉಂಗುರಗಳನ್ನು ಧರಿಸುವುದನ್ನು ಬಿಟ್ಟಿದ್ದೇನೆ. ಅದರಿಂದ ಜೀವನದಲ್ಲಿ ಯಾವುದೇ ರೀತಿಯ ಏರು ಪೇರುಗಳಾಗದೇ ಎಲ್ಲವೂ ಭಗವಂತನ ಅನುಗ್ರಹದಿಂದ ನೆಮ್ಮದಿಯಾಗಿ ಅಚ್ಚುಕಟ್ಟಾಗಿ ನಡೆದುಕೊಂಡು ಹೋಗುತ್ತಿದೆ.

ಇದರಿಂದ ನಾನು ಕಲಿತ ಪಾಠವೆಂದರೆ, ಜೀವನದಲ್ಲಿ ಕಷ್ಟ ಸುಖಃ, ನೋವು ನಲಿವು ಎಲ್ಲವೂ ಸಹಜ ಪ್ರಕ್ರಿಯೆಗಳು. ಅದನ್ನು ಒಂದು ಹರಳು ಬದಲಿಸುತ್ತದೆ ಎಂಬುದು ಮಿಥ್ಯ. ಹಾಗೆಂದ ಮಾತ್ರಕ್ಕೆ ನಾನು ಇಡೀ ಜ್ಯೋತಿಷ್ಯವನ್ನೇ ವಿರೋಧಿಸುತ್ತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಜ್ಯೋತೀಷ್ಯವನ್ನೂ ವ್ಯಾಪಾರೀಕರಣಗೊಳಿಸಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಾ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಅಭರಣ ಅಂಗಡಿಗಳ ವಿರುದ್ಧ ಸಾತ್ವಿಕ ಕೋಪವಷ್ಟೇ.

ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೇ ಎಂದು ಭಗವಂತನ ಮೇಲೆ ನಂಬಿಕೆ ಇಟ್ಟು ಇಷ್ಟ ಪಟ್ಟು ಕಷ್ಟ ಪಟ್ಟು ನಮ್ಮ ಕೆಲಸಗಳನ್ನು ಮಾಡೋಣ. ಅವನ ಅನುಗ್ರಹ ಇದ್ದರೆ ಎಲ್ಲಾ ಗ್ರಹಗಳೂ ನಮ್ಮ ಪರವಾಗಿಯೇ ಇರುತ್ತದೆ ಮತ್ತು ನಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ.

ಏನಂತೀರೀ?

2 thoughts on “ಹರಳೋ ಮರಳೋ?

 1. ಇಂಥ ಹರಳನ್ನು ಇಂಥ ರಾಶಿಯವರು ಧರಿಸಿದರೆ ಅದೃಷ್ಟ, ಜೀವನದಲ್ಲಿ ಯಶಸ್ಸು ಸಿಗುತ್ತೆ, ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿ ಆಗುತ್ತದೆ ಅಂತೆಲ್ಲ ಹೇಳುವುದು ಖಂಡಿತ ಸುಳ್ಳು. ಇದು ಒಂದು ರೀತಿಯ ವ್ಯಾಪಾರವೇ ಹೊರತು ಖಂಡಿತ ಸತ್ಯವಲ್ಲ ಎಂಬುದು ನನ್ನ ಖಚಿತ ಅಭಿಪ್ರಾಯ.
  ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ,
  ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯುಂ,
  ಸಹಿಸಿದಲ್ಲದೆ ಮುಗಿಯದದಾವ ದೆಶೆಬಂದೊಡಂ,
  ಸಹನೆ ವಜ್ರದ ಕವಚ ಮಂಕುತಿಮ್ಮ.

  ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ
  ಭವಿಷ್ಯವ ಚಿಂತಿಸದೆ ಬದುಕ ನೂಕುತಿರು,
  ವಿವರಗಳ ಜೋಡಿಸುವ ಯಜಮಾನ ಬೇರಿಹನು,
  ಸವೆಸು ಜನುಮವನ್ನು ಮಂಕುತಿಮ್ಮ.

  Liked by 1 person

 2. ನೀವು ಹೇಳುವುದು ಸರಿಯೇ. ನಂಬಿಕೆಯ ಮೇಲೆ ನಾನೂ ಒಂದು ಹರಳು ಉಂಗುರ ಸದಾ ಧರಿಸಿರುತ್ತೇನೆ. ಆದರೆ ಅದರ ನಂಬಿಕೆಯ ಮೇಲೆ ನಾನು ನಿರ್ಭರನಾಗಿಲ್ಲ. ಕೆಲಸ ನಿಮಿತ್ತ ಅಲ್ಲಲ್ಲಿ (ದೇಶಗಳು) ಸುತ್ತಾಡಿ ನಮ್ಮ ನೆಲಕ್ಕೆ ವಾಪಸ್ಸು ಬಂದಿದ್ದೇನೆ. ಜೀವನದಲ್ಲಿ ಏರು ತಗ್ಗುಗಳು ಇರುವುದೇ. ಅದನ್ನು ತಪ್ಪಿಸುವವರಾರು?

  ಹರಳು ಉಂಗುರ ಧರಿಸುವುದು ತಪ್ಪಲ್ಲ. ಧರಿಸಿರದಿದ್ದರೆ ಇನ್ನೂ ಏನು, ಎಷ್ಟು ಕಷ್ಟಗಳು ಬರುತ್ತಿದ್ದವೋ ಏನೋ ಯಾರಿಗೆ ಗೊತ್ತು ಮತ್ತು ಹೇಗೆ ಹೇಳುವುದು?!

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s