ಮೋಹಕ ನಟ ನಟಿಯರೋ? ಮಾದಕ ವ್ಯಸನಿಗಳೋ?

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಬೆಂಗಳೂರಿನ ಕಲ್ಯಾಣ್ ನಗರದ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್ಮೆಂಟ್ನಿಂದ ಆಗಸ್ಟ್ 21 ರಂದು ಮಾಜಿ ಕಿರುತೆರೆ ನಟಿ ಅನಿಕಾ ಡಿ ಮತ್ತು ಅವರ ಇಬ್ಬರು ಸಹಚರರಾದ ಎಂ ಅನೂಪ್ ಮತ್ತು ಆರ್ ರವೀಂದ್ರನ್ ಅವರನ್ನು ಬಂಧಿಸಿ ಅವರಿಂದ 145 ಎಂಡಿಎಂಎ ಮಾತ್ರೆಗಳು ಮತ್ತು 2.2 ಲಕ್ಷ ರೂ.ಗಳ ಹಣವನ್ನು ವಶಪಡಿಸಿಕೊಂಡಿದ್ದಲ್ಲದೇ ಅವರ ಮಾಹಿತಿಯ ಮೇಲೆ ಇತರೇ ಹಲವಾರು ಕಡೆ ಧಾಳಿ ನಡೆಸಿ. 96 ಎಂಡಿಎಂಎ ಮತ್ತು 180 ಎಲ್ಎಸ್ಡಿ ಬ್ಲಾಟ್ಗಳನ್ನು ಮುಟ್ಟುಗೋಲು ಹಾಕಿಕೊಂಡು ನಂತರ, ದೊಡ್ಡಗುಬ್ಬಿಯಲ್ಲಿರುವ ಅನಿಖಾ ಡಿ ಅವರ ಮನೆಯಿಂದಲೂ 270 ಎಂಡಿಎಂ ಮಾತ್ರೆಗಳನ್ನು ವಶಪಡಿಸಿಕೊಂಡಿದೆ.

ತನಿಖೆಯ ಸಮಯದಲ್ಲಿ ಈ ಎಲ್ಲಾ ಮಾದಕದ್ರವ್ಯಗಳನ್ನು ಕನ್ನಡದ ಹಿರಿ ಮತ್ತು ಕಿರಿ ತೆರೆಯ ಪ್ರಮುಖ ಸಂಗೀತಗಾರರು, ನಟ, ನಟಿಯರಲ್ಲದೇ ರಾಜ್ಯದ ಉದ್ಯಮಿಗಳು ಮತ್ತು ರಾಜಕಾರಣಿಗಳ ಮಕ್ಕಳಿಗೆ ಸರಬರಾಜು ಮಾಡುತ್ತಿದ್ದರೆಂಬ ಭಯಂಕರ ವಿಷಯ ಹೊರಬಿದ್ದಿದ್ದು. ಸುಮಾರು ನಾಲ್ಕು ಪುಟಗಳಲ್ಲಿ ಬಹುತೇಕರ ಹೆಸರುಗಳನ್ನು ಬಹಿರಂಗ ಪಡಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಆರೋಪಿಗಳು ವಿದೇಶಗಳಿಂದ ಈ ಮಾದಕದ್ರವ್ಯಗಳನ್ನು ಕಳ್ಳಸಾಗಣೆ ಮಾಡಿ ಅದನ್ನು ಗುಟ್ಟಾಗಿ ನಗರದ ಖ್ಯಾತನಾಮರಿಗೆ ತಲುಪಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳ ಮೊಬೈಲಿನಲ್ಲಿರುವ ಮೊಬೈಲ್ ಸಂಖ್ಯೆಗಳಲ್ಲಿ ಬಹುತೇಕ ಖ್ಯಾತ ಕನ್ನಡ ಸಿನೆಮಾ ರಂಗದ ನಟ ನಟಿಯರು, ಪ್ರಮುಖ ಸಂಗೀತಗಾರರು ಮತ್ತು ವಿವಿಐಪಿಗಳ ಮಕ್ಕಳುಗಳಿಗೆ ಸೇರಿದ್ದಾಗಿದ್ದು ಅವರೊಡನೆ ಇರುವ ಅನೇಕ ಪೋಟೋಗಳೂ ಮೊಬೈಲಿನಲ್ಲಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.

ಬಂಧಿತ ಡ್ರಗ್ ಡೀಲರ್ ಅನಿಕಾ, ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಕನ್ನಡ ಸ್ಟಾರ್ ನಟಿಯೊಬ್ಬರು ಆಕೆಯ ಸಹಪಾಠಿಯಾಗಿದ್ದರು ಎಂಬ ಎಂಬ ವಿಚಾರ ತನಿಖೆಯ ಸಮಯದಲ್ಲಿ ಅಧಿಕಾರಿಗಳಿಗೆ ತಿಳಿದು ಬಂದಿದ್ದು, ಬಹುಶಃ ಆಕೆಯ ಮೂಲಕವೇ, ಅನಿಖಾ ಕಿರತೆರೆಯಲ್ಲಿ ಕೆಲ ಕಾಲ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ, ಎಲ್ಲರ ಸಂಪರ್ಕ ಪಡೆದುಕೊಂಡ ನಂತರ ತನ್ನ ನಟನೆಯನ್ನು ನಿಲ್ಲಿಸಿ ಮಾದಕ ವಸ್ತುಗಳನ್ನು ಎಲ್ಲರಿಗೂ ಪೂರೈಸುತ್ತಿರಬಹುದಾ? ಎಂದು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಕಾಳ್ಗಿಚ್ಚಿನಂತೆ ಹೊರ ಬೀಳಿತ್ತಿದ್ದಂತೆಯೇ. ಕ್ರೀಡಾಪಟು. ಪತ್ರಿಕೋದ್ಯಮಿ, ನಟ ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಇದರ ಕುರಿತಂತೆ ನೀಡಿರುವ ಹೇಳಿಕೆ ಮತ್ತಷ್ಟು ಆಘಾತಕಾರಿಯಾಗಿದೆ. ಸಮಾಜಕ್ಕೆ ಒಳ್ಳೆಯದಾಗಬೇಕು, ಯುವ ಜನತೆ ಮಾದಕ ಜಾಲದಲ್ಲಿ ಸಿಲುಕಬಾರದು ಎಂಬ ಕಳಕಳಿಯಿಂದಾಗಿ ತಾನು ತನಗೆ ಗೊತ್ತಿರುವ ಎಲ್ಲಾ ಮಾಹಿತಿಗಳನ್ನೂ ನೀಡಲು ಸಿದ್ದ ಎಂದು ಹೇಳಿರುವ ಅವರು, ಇದರಿಂದ ತಮ್ಮ ಮೇಲೆ ಹಲ್ಲೆಗಳಾಗುವ ಸಂಭವಿದ್ದು ಅದಕ್ಕೆ ಸೂಕ್ತ ಭಧ್ರತೆಯನ್ನೂ ಪೋಲೀಸರಲ್ಲಿ ಕೋರಿದ್ದಾರೆ.
ಗಾಂಧೀನಗರದಲ್ಲಿ ದಿಢೀರನೆ ಹೆಸರು ಮಾಡಿದ ಕೆಲ ಯುವ ನಟ, ನಟಿಯರು ಡ್ರಗ್ ಜಾಲದಲ್ಲಿ ಸಿಲುಕಿರುವುದು ತಮ್ಮ ಗಮನಕ್ಕೆ ಬಂದಿದ್ದು ಈ ಕುರಿತಂತ ಅನೇಕ ಹಿರಿಯ ನಟರು ತಮ್ಮ ಬಳಿ ಅಳಲನ್ನು ತೋಡಿಕೊಂಡಿದ್ದಾರೆ ಇದರ ಬಗ್ಗೆ ನ್ಯಾಯಯುತವಾದ ತನಿಖೆ ನಡೆದು ಇದರ ಹಿಂದೆ ಯಾರು ಇದ್ದಾರೆ ಮತ್ತು ಈ ಜಾಲದಲ್ಲಿ ಚಲಚಿತ್ರರಂಗದ ಯಾರ್ಯಾರು ಭಾಗಿಗಳಾಗಿದ್ದಾರೆ ಎಂಬುದು ಹೊರಬರಬೇಕಿದೆ ಎಂದು ಹೇಳಿದ್ದಾರೆ.

ಮುಂಬೈ ಚಿತ್ರ ಜಗತ್ತಿನಲ್ಲಿ ಅನೇಕ ನಟ, ನಟಿಯರು ಇಂತಹ ಜಾಲದಲ್ಲಿ ಸಿಲುಕಿರುವುದು ಈಗಾಗಲೇ ಜಗಜ್ಜಾಹೀರಾಗಿದ್ದು ನಮ್ಮ ಚಂದನವನ ಅದೇ ದಾರಿಯನ್ನು ಹಿಡಿಯಬಾರದು ಎಂಬ ಆಶಯದೊಂದಿಗೆ ಪೋಲೀಸರ ತನಿಖೆಗೆ ಎಲ್ಲ ರೀತಿಯಲ್ಲಿಯೂ ಸಿದ್ಧರಿರುವುದಾಗಿ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಮಂದಿ ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿದ್ದಾರೆ ಎಂಬುದು ಹೋಸಾ ವಿಷಯವೇನಲ್ಲ. ಮೂರ್ನಾಲ್ಕು ವರ್ಷಗಳ ಹಿಂದೆಯೇ ಅಶೋಕ ಪಿಲ್ಲರ್ ಬಳಿ ಬೆಳ್ಳಂಬೆಳಿಗ್ಗೆ ಖ್ಯಾತ ಮದ್ಯ ಉದ್ಯಮಿಯ ಮೊಮ್ಮಗ ಮತ್ತು ಹಲವಾರು ಕನ್ನಡ ಚಿತ್ರರಂಗದ ಉದಯೋನ್ಮುಖ ನಟರು ಮತ್ತು ಹೆಸರಾಂತ ನಟರ ಮಗನ ಕಾರ್ ಅಪಘಾತಕ್ಕೆ ಒಳಗಾದ ಸಮಯದಲ್ಲಿ ಆ ಕಾರ್ ಒಳಗೆ ಇದ್ದವರೆಲ್ಲರೂ ಮಾದಕದ್ರವ್ಯದ ನಶೆಯಲ್ಲಿದ್ದರು ಮತ್ತು ಅಲ್ಲಿ ಮಾದಕ ವಸ್ತುಗಳು ದೊರೆಕಿತ್ತು ಎಂದು ಪ್ರತ್ಯಕ್ಷದರ್ಶಿಗಳೇ ತಿಳಿಸಿದರೂ ಕಾಣದ ಕೈಗಳ ವಶೀಲೀಕರಣದಿಂದಾಗಿ ತನಿಖೆ ಹಳ್ಳ ಹಿಡಿದದ್ದನ್ನು ಇಂದ್ರಜಿತ್ ಲಂಕೇಶ್ ನೆನಪಿಸಿದ್ದಾರೆ.

ಅದೇ ರೀತಿ ಲಾಕ್ಡೌನ್ ಆರಂಭದ ವೇಳೆಯಲ್ಲಿ ನಟಿ ಶರ್ಮಿಳಾ ಮಾಂಡ್ರೆ ಅವರ ಕಾರು ಮೌಂಟ್ ಕಾರ್ಮೆಲ್ ಕಾಲೇಜ್ ಬಳಿ ತಡರಾತ್ರಿಯಲ್ಲಿ ಅಪಘಾತವಾದ ಸಮಯದಲ್ಲಿಯೂ ಕಾರಿನಲ್ಲಿ ಇದ್ದವರೆಲ್ಲರೂ ಮಾದಕ ದ್ರವ್ಯಗಳನ್ನು ಸೇವಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಆಗ ಶರ್ಮಿಳಾ ಮಾಂಡ್ರೆ ಅವರ ಜೊತೆ ಆ ಕಾರಿನಲ್ಲಿ ಇದ್ದದ್ದು ಬೆಂಗಳೂರಿನ ದೊಡ್ಡ ಡ್ರಗ್ಸ್ ಪೆಡ್ಲರ್ ಎಂಬ ಆರೋಪ ಕೇಳಿ ಬರುತ್ತಿದೆ.

ಈ ದಂಧೆ ಕೇವಲ ಮಾದಕ ದ್ರವ್ಯಕ್ಕೆ ಮಾತ್ರವೇ ಮೀಸಲಾಗಿರದೇ ಹಿರಿ ಮತ್ತು ಕಿರಿತೆರೆಯ ಉದಯೋನ್ಮುಖ ನಟಿಯರನ್ನು ಬಳಸಿಕೊಂಡು ಉದ್ಯಮಿಗಳು. ರಾಜಕಾರಣಿಗಳು ಮತ್ತು ಅವರ ಮಕ್ಕಳನ್ನು ಹನಿಟ್ರ್ಯಾಪ್ ಕೂಡಾ ಮಾಡಿದ ಆರೋಪ ಸಹ ಕೇಳಿ ಬರುತ್ತಿದೆ. ಇದಲ್ಲದೇ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ನಲ್ಲಿ ಈಗಾಗಲೇ ಸಿಕ್ಕಿ ಹಾಕಿಕೊಂಡಿರುವ ಕರ್ನಾಟಕದ ಖ್ಯಾತ ಕ್ರಿಕೆಟಿಗರ ಜೊತೆಯೂ ಇದರ ಸಂಬಂಧ ಇರಬಹುದು ಎಂಬ ಅನುಮಾನ ಬಂದಿದ್ದು ಪೋಲೀಸರ ನಿಷ್ಪಕ್ಷಪಾತ ಅನಿಕೆಯ ಮುಖಾಂತರ ತಿಳಿದು ಬರುವ ಸಾಧ್ಯತೆ ಇದೆ.

ಕೆಲ ನಟ ನಟಿಯರು ಶೂಟಿಂಗ್ ಗೆ ಬರುವಾಗಲೂ ಮಾದಕದ್ರವ್ಯ ಸೇವಿಸಿ ನೆಶೆಯಲ್ಲಿ ಇರುತ್ತಾರೆ ಇಲ್ಲವೇ, ಶೂಟಿಂಗ್ ಮುಗಿದ ನಂತರ ತಮ್ಮ ಕ್ಯಾರಾವಾನ್ಗಳಲ್ಲಿ ಕುಳಿತು ಒಟ್ಟಾಗಿಯೇ ಮಾದಕದ್ರವ್ಯಗಳನ್ನು ಸೇವಿಸುತ್ತಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಈ ನಟರು ಆಗ್ಗಾಗ್ಗೆ ತಮ್ಮ ಫಾರ್ಮ್ ಹೌಸಿನಲ್ಲಿಯೋ ಅಥವಾ ನಗರದ ಹೊರವಲಯದ ರೆಸಾರ್ಟ್ಗಳಲ್ಲಿ ರೇವ್ ಪಾರ್ಟಿ ನಡೆಸುತ್ತಾ ಅಲ್ಲಿಗೆ ಬರುವ ಅನೇಕ ನಟ ನಟಿಯರ ಕಾರ್ ಗಳಲ್ಲಿ ಬಹಳಷ್ಟು ಬಾರಿ ಮಾದಕ ವಸ್ತುಗಳು ಪತ್ತೆ ಯಾಗಿದ್ದರೂ ತಮ್ಮ ಪ್ರಭಾವ ಬಳಸಿ ಪ್ರಕರಣವನ್ನು ‌ಮುಚ್ಚಿಹಾಕಿದ್ದಾರೆ ಎನ್ನಲಾಗಿದೆ.

ಕೇವಲ ಒಂದೆರಡು ಚಿತ್ರಗಳಲ್ಲಿ ನಟಿಸಿದ ನಟ ನಟಿಯರೂ ಈ ರೀತಿಯ ವ್ಯವಹಾರದಿಂದಲೇ, ರಾತ್ರೋ ರಾತ್ರಿ ಬೆಂಜ್, ಮರ್ಸಿಡಿಸ್ ಕಾರ್ ಗಳಲ್ಲಿ ಓಡಾಡುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಇದಕ್ಕೆ ಸ್ಪಂದಿಸಿರುವ ಖ್ಯಾತ ನಿರ್ಮಾಪಕ ರಾಕ್‌ ಲೈನ್ ವೆಂಕಟೇಶ್ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಆ ರೀತಿ ಯಾರೂ ಇಲ್ಲ ಎಂದು ತಿಪ್ಪೇ ಸಾರಿಸಿದ್ದರೆ, ಗುಳಿಗೆ ಕೆನ್ನೆಯ ನಟಿ ರಚಿತಾ ರಾಮ್, ಕರ್ಮ ಅನ್ನೋದು ಇದೆಯಲ್ಲಾ ನಾವು ಬಿಟ್ಟರೂ ಅದು ನಮ್ಮನ್ನ ಬಿಡೋದಿಲ್ಲ. ನಾನ್ ತಗೋಳೋದಿಲ್ಲ.. ತಗೋಳೋರ್ ಬಗ್ಗೆ ನನಗೆ ಗೊತ್ತಿಲ್ಲ.. ನಮ್ಮ ನಮ್ಮ ಫ್ಯಾಮಿಲಿನ ನಾವೇ ನೋಡ್ಕೋಬೇಕು.. ಯಾರೂ ಸಹ ಬಂದು ನೋಡ್ಕೋಳೊಲ್ಲ.. ಅದಕ್ಕಾಗಿ ಯಾರೂ ಸಹ ಇಂತಹ ವಸ್ತುಗಳಿಗೆ ದಾಸರಾಗಬೇಡಿ.. ಆರೋಗ್ಯ ಕಾಪಾಡಿಕೊಳ್ಳಿ ಎಂದಿದ್ದಾರೆ.

ಆದರೆ ಇದಕ್ಕೆ ತದ್ವಿರುದ್ದವಾಗಿ ಶ್ರೇಷ್ಠ ಮನುಜ ಜನ್ಮ! ಅದು ನಶ್ವರ ಸತ್ಯ! ಆದರೂ ಆ ನಶ್ವರ ದೇಹ ನಶಿಸುವ ಮುನ್ನ ಸಾರ್ಥಕಪಡಿಸಿ ಬದುಕಬೇಕು. ನಶೆ ಹಿಂದೆ ಬರೀ ಸಿನಿಮಾ ಅಲ್ಲಾ, ಸಮಾಜವೇ ಆಕರ್ಷಿತ ಆಗುತ್ತಿದೆ. ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೆ ಅವರ ಹೆಜ್ಜೆ ತಪ್ಪುದಾರಿ ತುಳಿಯದು. ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೇ ನಶೆಹಾದರದ ದಾಸರು. ಉಪ್ಪು ತಿಂದವ ನೀರು ಕುಡಿಯುವ ಎಂದು ಟ್ವೀಟ್ ಮಾಡಿರುವ ಹಿರಿಯ ನಟ ಜಗ್ಗೇಶ್‌. ಒಂದು ಹಳೇ ಘಟನೆಯನ್ನೂ ಅವರು ನೆನಪು ಮಾಡಿಕೊಂಡಿದ್ದಾರೆ. ಬಲವಂತಕ್ಕೆ 2017ರಲ್ಲಿ ಒಬ್ಬ ರಾಜಕಾರಣಿಯ ಪಾರ್ಟಿಗೆ ಹೋಗಿದ್ದೆ. ಅರ್ಧ ಗಂಟೆಗೆ ಆ ಜಾಗ ಅಲ್ಲಿದ್ದವರ ಆರ್ಭಟ. ಬಂದು ಸೇರಿದ ಅರ್ಧ ಉಡುಗೆ ಸುಂದರಿಯರನ್ನು ಕಂಡು ನಾನು ನನ್ನ ಆತ್ಮೀಯ ಯುವನಟ ಹೇಳದೆ ಕೇಳದೆ ಲಿಫ್ಟು ಬಳಸದೆ 12 ಮಹಡಿ ಇಳಿದು ಓಡಿ ಬಂದಿದ್ದೆವಯ.. ಅದೇ ಕಡೆ, ಇಂದಿಗೂ ನನಗೆ ಯಾರೂ ಕರೆಮಾಡದಂತೆ ಮೊಬೈಲ್ ವರ್ಜಿಸಿದೆ. ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು’ ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

ಈ ರೀತಿಯ ವೈರುದ್ಯ ಹೇಳಿಕೆಯನ್ನು ಗಮನಿಸಿದರೆ ಚಂದನವನದಲ್ಲಿ ಎಲ್ಲವೂ ಸರಿಯಿಲ್ಲ. ಸರಿ ಪಡಿಸಿಕೊಳ್ಳುವ ಸಮಯ ಬಂದಿದ್ದರೂ ಅದನ್ನು ಸರಿಪಡಿಸಿಕೊಳ್ಳುವ ಮನಸ್ಥಿತಿಯಲ್ಲಿ ಹೆಚ್ಚಿನವರು ಇಲ್ಲ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ ಚಂದನವನದಲ್ಲಿ ಚಂದನದ ಘಮಲಿನ ಜೊತೆ ಚರಸ್ ಮತ್ತು ಗಾಂ‍ಜಾ ಘಮಲು ನಟ ನಟಿಯರ ಅಮಲೇರಿಸಿದೆ ಎನ್ನುವುದು ಘನ ಘೋರ ಸತ್ಯವಾಗಿದೆ.

ಈ ಕರಾಳ ದಂಧೆ ಕೇವಲ ಚಿತ್ರರಂಗ, ರಾಜಕೀಯ, ಉದ್ಯಮ ಮತ್ತು ಕ್ರೀಡಾರಂಗಕ್ಕೆ ಮಾತ್ರವೇ ಮೀಸಲಾಗಿರದೇ, ತನ್ನ ಕಬಂಧ ಬಾಹುಗಳನ್ನು ಮಧ್ಯಮ ವರ್ಗದ ಯುವಕ ಯುವತಿಯರತ್ತವೂ ಚಾಚಿ, ಬಾಳಿ ಬೆಳಗ ಬೇಕಾಗಿದ್ದವರು ಸಣ್ಣ ಸಣ್ಣ ವಯಸ್ಸಿಗೇ ಮಾದಕದ್ರವ್ಯಗಳಿಗೆ ದಾಸರಾಗಿ ಅನೈತಿಕ ಚಟುವಟಿಕೆಗಳು ಮತ್ತು ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗಿಯಾಗಿ ವಯಸ್ಸಲ್ಲದ ವಯಸ್ಸಿಗೆ ಸಾವನ್ನಪ್ಪಿ ಪೋಷಕರ ಕಣ್ಣೀರು ಕೋಡಿ ಹರಿಯುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.

ಕಬ್ಬಿಣ ಕೆಂಪಗೆ ಕಾದಿರುವಾಗಲೇ ಬಗ್ಗಿಸಬೇಕು ಎನ್ನುವಂತೆ ಈ ಸುದ್ದಿ ಹಸಿಯಾಗಿರುವಾಗಲೇ ಯಾರದೇ ವಶೀಲಿಗೆ ಒಳಗಾಗದೇ ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಮೂಲಕ ಸಮಾಜವನ್ನು ಸರಿದಾರಿಗೆ ತರಬೇಕೆಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಲ್ಲಿ ಈ ಮೂಲಕ ಕೇಳಿ ಕೊಳ್ಳೋಣ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s