ಓಣಂ ‌

ದಕ್ಷಿಣ ಭಾರತದ ಆತ್ಯಂತ ಚಿಕ್ಕ ರಾಜ್ಯವಾದ ಕೇರಳದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಆಚರಿಸುವ ಹಬ್ಬವೇ ಓಣಂ. ಈ ಹಬ್ಬವನ್ನು ಸಮಸ್ತ ಕೇರಳೀಯರು ಧರ್ಮಾತೀತವಾಗಿ ಆಚರಿಸುವ ಮೂಲಕ ಈ ಒಂದು ಹಬ್ಬದಲ್ಲಿ ಮಾತ್ರವೇ ತಲತಲಾಂತರದಿಂದಲೂ ಭಾವೈಕ್ಯತೆಯನ್ನು ಮೂಡಿಸುತ್ತಾ ಬಂದಿರುವುದು ಗಮನಾರ್ಹವಾಗಿದೆ. ಮಲಯಾಳೀ ಪಂಚಾಂಗದ ಮೊದಲ ತಿಂಗಳು ಚಿಂಗಮ್ (ಆಗಸ್ಟ್-ಸೆಪ್ಟೆಂಬರ್) ತಿಂಗಳಿನಲ್ಲಿ ಹತ್ತು ದಿನಗಳವರೆಗೆ ಬಹಳ ಸಂಭ್ರಮ ಸಡಗರದಿಂದ ಸಮಸ್ತ ಕೇರಳಿಗರೂ ತಮ್ಮ ತಮ್ಮ ಮನೆಗಳ ಮುಂದೆ ನಯನ ಮನೋಹರವಾದ ಅತ್ಯಂತ ಕ್ರಿಯಾಶೀಲತೆಯಿಂದ ಬಗೆ ಬಗೆಯ ಹೂವಿನ ರಂಗೋಲಿಗಳ ಮುಖಾಂತರ ಚಿತ್ತಾರ ಮೂಡಿಸುವುದಲ್ಲದೇ, ಬಗೆ ಬಗೆಯ ಭಕ್ಷ್ಯಗಳೊಂದಿಗೆ ಸಂಭಮಿಸುತ್ತಾ, ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು, ಕೈಕೊತ್ತಿ ಕಲಿ ನೃತ್ಯ, ಸಾಮೂಹಿಕವಾಗಿ ಹಾವಿನಾಕಾರದ ಹುಟ್ಟು ಹಾಕುವ ದೋಣಿ ಸ್ಪರ್ಧೆಗಳು ನಂತರ ಲಕ್ಷಾಂತರ ರೂಪಾಯಿಗಳ ಪಟಾಕಿಯನ್ನು ಸಿಡಿಸುವ ಮೂಲಕ ಆಚರಿಸಲಾಗುತ್ತದೆ. ನಮ್ಮಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿ ಆಚರಿಸುವ ಹಾಗೆ ಕೇರಳದಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ ಎಂದರೂ ತಪ್ಪಾಗದು.. ಸಂಕ್ರಾಂತಿ ಎಂಬ ಪದಕ್ಕೆ 27 ನಕ್ಷತ್ರಗಳ ಒಗ್ಗೂಡುವಿಕೆ ಎಂಬ ಅರ್ಥವಿದೆ. ಇನ್ನು ತಿರು ಎಂದರೆ ಶ್ರೀ ಎಂದೂ ಅದು ಭಗವಾನ್ ವಿಷ್ಣುವಿಗೆ ಸಂಬಂಧಪಟ್ಟದ್ದಾಗಿದ್ದು, ತಿರುವೋಣಂ ಎಂಬುದು ವಿಷ್ಣುವಿನ ನಕ್ಷತ್ರವಾಗಿದೆ.

ಓಣಂ ಹಬ್ಬಕ್ಕೆ ಪುರಾದ ಐತಿಹ್ಯವೂ ಇದೆ. ಪುರಾಣ ಕಾಲದಲ್ಲಿ ಕೇರಳ ರಾಜ್ಯವನ್ನು ಮಹಾಬಲಿಯು ಆಳುತ್ತಿದ್ದು ಆತ ಬಹಳ ದಯಾಮಯನು, ಕರುಣಾಳುವೂ ಆಗಿದ್ದು, ಸದಾಕಾಲವೂ ಪ್ರಜೆಗಳಿಗೆ ಒಳ್ಳೆಯದನ್ನೇ ಮಾಡುತ್ತಿದ್ದ ಅಸುರರ ರಾಜನಾಗಿದ್ದರೂ ಅವನು ನಿರಹಂಕಾರಿಯಾಗಿದ್ದ..ಅವನನ್ನು ಹಾಗೆಯೇ ಬೆಳೆಯಲು ಬಿಟ್ಟಲ್ಲಿ, ಈ ಅಸುರನಿಂದಾಗಿ ದೇವಾನು ದೇವತೆಗಳಿಗೆ ತೊಂದರೆ ಉಂಟಾಗಬಹುದು ಎಂದು ಆತನನ್ನು ಬಲಿ ಹಾಕಲು ಭಗವಾನ್ ವಿಷ್ಣುವನ್ನು ಕೋರುತ್ತಾರೆ. ದೇವತೆಗಳ ಕೋರಿಕೆಯ ಮೇರೆಗೆ ವಿಷ್ಣುವು ವಾಮನರೂಪಿ ವಟುವಾಗಿ ಬಲಿಚಕ್ರವರ್ತಿಯು ಮಾಡುತ್ತಿದ್ದ ಯಾಗದ ಬಳಿ ಬಂದು ಭಿಕ್ಷೆಯನ್ನು ಕೇಳುತ್ತಾನೆ. ಈ ಪುಟ್ಟ ಬಾಲಕ ಇನ್ನೇನು ಕೇಳಬಹುದು ಎಂಬ ಉದ್ಧಟತನದಿಂದ ನೀನು ಬೇಡಿದ ವರವನ್ನು ಇಲ್ಲವೆನ್ನುವುದಿಲ್ಲ ಎಂದು ಬಲಿ ಹೇಳಿದ್ದನೇ ಮುಂದಾಗಿಸಿ ನನಗೆ ಕೇವಲ ಮೂರು ಪಾದ ಇಡುವಷ್ಟು ಜಾಗವನ್ನು ದಾನವಾಗಿ ಕೊಡು ಎಂದು ಕೇಳುತ್ತಾನೆ. ಕೇವಲ ಮೂರು ಪಾದಗಳ ಜಾಗವೇ ಎಂದು ಕೊಂಡು ಆಗಲೀ ಕೊಡುತ್ತೇನೆ ಎನ್ನುತ್ತಿದ್ದಂತೆಯೇ, ವಾಮನ ನೋಡ ನೋಡುತ್ತಿದ್ದಂತೆಯೇ ತ್ರಿವಿಕ್ರಮಾಕಾರಕ್ಕೆ ಬೆಳೆದು ನಿಂತು ಮೊದಲನೇ ಹೆಜ್ಜೆಯನ್ನು ಇಡೀ ಆಕಾಶಕ್ಕೂ ಎರಡನೇ ಹೆಚ್ಚೆಯನ್ನು ಸಮಸ್ಥ ಭೂಮಂಡಲದ ಮೇಲಿಟ್ಟು, ಮೂರನೇ ಹೆಜ್ಜೆ ಎಲ್ಲಿಡಲಿ? ಎಂದು ಕೇಳುತ್ತಾನೆ ವಾಮನ. ಬಂದಿರುವ ವಟು ಸಾಮಾನ್ಯನಲ್ಲವೆಂಬುದನ್ನು ಅರಿತ ಬಲಿ ಚಕ್ರವರ್ತಿಯು ದಯವಿಟ್ಟು ನನ್ನ ತಲೆಯ ಮೇಲೆ ಇಡಿ ಎಂದು ಕೇಳುತ್ತಾನೆ. ಅದರಂತೆಯೇ ವಾಮನ ಬಲಿ ಚಕ್ರವರ್ತಿಯನ್ನು ಪಾತಾಳ ಲೋಕಕ್ಕೆ ತುಳಿದು ಬಿಡುತ್ತಾನಾದರೂ, ಬಲಿ ಚಕ್ರವರ್ತಿಯ ಹೃದಯವಂತಿಕೆಗೆ ಮೆಚ್ಚಿ, ಪ್ರತೀ ವರ್ಷಕ್ಕೊಮ್ಮೆ ಭೂಮಿಗೆ ಬಂದು ತನ್ನ ಪ್ರಜೆಗಳ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಹೋಗುವಂತಹ ಅವಕಾಶವನ್ನು ವರದ ರೂಪದಲ್ಲಿ ಅನುಗ್ರಹಿಸುತ್ತಾರೆ. ಹೀಗೆ ಬಲಿ ಚಕ್ರವರ್ತಿ ಭೂಮಿಗೆ ಬರುವ ದಿನವನ್ನೇ ಓಣಂ ಹಬ್ಬವನ್ನಾಗಿ ಕೇರಳದ ಜನತೆ ವಿಜೃಂಭಣೆಯಿಂದ ಆಚರಿಸುತ್ತಾರೆ.

ಸಾಧಾರಣವಾಗಿ ಕೆಲಸದ ನಿಮಿತ್ತ ಪ್ರಪಂಚಾದ್ಯಂತ ಹರಡಿ ಹೋಗಿರುವ ಕೇರಳಿಗರು ಈ ಹಬ್ಬಕ್ಕಾಗಿ ಮಾತ್ರಾ, ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿ, ಬೆಳ್ಳಂಬೆಳಗ್ಗೆಯೇ ಶುಚಿರ್ಭೂತರಾಗಿ ಮನೆಯ ಮುಂದೆ ಹೂವಿನ ರಂಗೋಲಿಯನ್ನಿಟ್ಟು ಸಂಭ್ರಮಿಸುತ್ತಾರೆ.

ನಂತರ ಪುರುಷರು ಅಂಗಿ ಮತ್ತು ಬಿಳಿಯ ಪಂಚೆ (ಮುಂಡು) ಧರಿಸಿದರೆ, ಮಹಿಳೆಯರು ಅದೇ ತರಹದ ಮುಂಡುವಿನ ಮೇಲೊಂದು ಚಿನ್ನದ ಬಣ್ಣದ ನರಿಯತ್ತು ಎಂದು ಕರೆಯಲಾಗುವ ಮೇಲಂಗಿಯನ್ನು ತೊಡುತ್ತಾರೆ. ಇನ್ನು ಹೆಣ್ಣು ಮಕ್ಕಳು ಪಾವಡೆ ಎಂಬ ಲಂಗ ಅದರ ಮೇಲೊಂದು ಚೆಂದನೆಯ ರವಿಕೆಯನ್ನು ತೊಟ್ಟರೆ, ಇನ್ನೂ ಗಂಡು ಮಕ್ಕಳೂ ತಮ್ಮ ತಂದೆಯರಂತೆ ಪಂಚೆಯನ್ನು ಧರಿಸಿ ಸಡಗರ ಸಂಭ್ರದಿಂದ ಹಬ್ಬವನ್ನು ಆಚರಿಸುತ್ತಾರೆ.

ಹತ್ತು ದಿನಗಳ ಕಾಲ ಜರುಗುವ ಈ ವಿಶೇಷ ಉತ್ಸವದಲ್ಲಿ ಮಡಿ ಹುಡಿಗಿಂತ ಸಂಭ್ರಮ ಸಡಗರಗಳಿಗೆ, ಕೇರಳದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ಪಡೆದುಕೊಂಡಿರುತ್ತವೆ. ಓಣಂ ಉತ್ಸವಾಚರಣೆಯ ಅತ್ಯಂತ ಆಕರ್ಷಣೀಯ ಅಂಶವೆಂದರೆ ತಿರು ಓಣಂನ ದಿವಸ ತಯಾರಿಸಲಾಗುವ ಓಣಂ ಸಾದ್ಯ ಎಂಬ ಅದ್ಭುತ ತಿನಿಸು. ಇದು 9 ತರದ ಭೋಜನವಾಗಿದ್ದು, 11 ರಿಂದ 13 ಬಗೆಯ ತರಾವರಿ ಖಾದ್ಯಗಳನ್ನು ಹೊಂದಿರುತ್ತದೆ. ಬಾಳೆಯ ಎಲೆಯ ಮೇಲೆ ಬಡಿಸಲಾದ ಈ ಓಣಸಾದ್ಯವನ್ನು ಎಲ್ಲರೂ ಶ್ರದ್ಧಾ ಭಕ್ತಿಯಿಂದ ನೆಲದ ಮೇಲೇ ಕುಳಿತು ಪ್ರಸಾದ ರೂಪದಲ್ಲಿ ಈ ಭೋಜನವನ್ನು ಸವಿಯುತ್ತಾರೆ. ಎಲ್ಲದ್ದಕ್ಕಿಂತಲೂ ಸಿಹಿ ಸಿಹಿಯಾದ ಉಣ್ಣಿಯಪ್ಪಮ್ ರುಚಿಯನ್ನು ಬಣ್ಣಿಸುವುದಕ್ಕಿಂತಲೂ ಸವಿದರೇನೇ ಚಂದವೆನಿಸುತ್ತದೆ.

ಓಣಂ ಉತ್ಸವದಂದು ದೇಶಾದ್ಯಂತ ಗಮನ ಸೆಳೆಯುವ ಅಂಶವೆಂದರೆ, ವಲ್ಲಂಕಲಿ ಎನ್ನುವ ಹಾವು ರೀತಿಯ ದೋಣಿ ಪಂದ್ಯ ಮೋಡಿ. ಈ ಪಂದ್ಯವನ್ನು ಪಂಪಾ ನದಿಯಲ್ಲಿ ಪ್ರಮುಖವಾಗಿ ಆಯೋಜಿಸಲಾಗುತ್ತದಾದರೂ ಕೇರಳಾದ್ಯಂತ ಹಳ್ಳಿ ಹಳ್ಳಿಗಳಲ್ಲಿರುವ ಸಣ್ಣ ಪುಟ್ಟ ನೀರಿನಲ್ಲಿಯೂ ಕಣ್ಮನ ಸೆಳೆಯುವಂತೆ ಸಿಂಗಾರಗೊಂಡಿರುವ ದೋಣಿಗಳಲ್ಲಿ ನೂರಾರು ನಾವಿಕರು ಕುಳಿತು ಕೊಂಡು ಶಿಸ್ತಿನ ಸಿಪಾಯಿಗಳಂತೆ ಹುಟ್ಟನ್ನು ಹಾಕುತ್ತಿದ್ದರೆ, ಅವರ ಉತ್ಸಾಹವನ್ನು ಇಮ್ಮಡಿ ಗೊಳಿಸಲೆಂದೇ ಪ್ರತೀ ದೋಣಿಗಳಲ್ಲಿಯೂ ಉತ್ಸಾಹ ಭರಿತ ಘೋಷಣೆಗಳು ಮತ್ತು ತಾಳ ಮತ್ತು ಲಯಬದ್ಧವಾದ ಹಾಡುಗಳನ್ನು ಹೇಳಲೆಂದೇ ಪ್ರತ್ಯೇಕ ಇರುವ ಮಂದಿಯನ್ನು ನೋಡಲು ಸಾವಿರಾರು ಜನ ನದಿಯಂಚಿನಲ್ಲಿ ನಿಂತಿಂದು ತಮ್ಮ ತಮ್ಮ ನೆಚ್ಚಿನ ದೋಣಿಗಳೇ ಗೆಲ್ಲಲಿ ಎಂದು ಪ್ರೋತ್ಸಾಹಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಹತ್ತಾರು ದೋಣಿಗಳು, ನೂರಾರು ನಾವಿಕರುಗಳು ಭಾಗವಹಿಸುವ ಈ ಸುಂದರ ದೋಣಿ ಸ್ಪರ್ಧೆಯನ್ನು ನೋಡಲೆಂದೇ ಇತ್ತೀಚೆಗೆ ವಿಶ್ವದ ನಾನಾ ಕಡೆಯಿಂದ ಪ್ರವಾಸಿಗರು ಕೇರಳಕ್ಕೆ ಬರುತ್ತಿದ್ದಾರೆ.

ಇನ್ನು ಯುವಕರಿಗೆಂದೇ ದೈಹಿಕ ಶ್ರಮದ ಓಣಕಲಿಕಾಲ್ ಎನ್ನುವ ಆಟವನ್ನು ತಂಡದ ರೂಪದಲ್ಲಿ ಆಡಿಸುವ ಸಂಪ್ರದಾಯವೂ ಇದೆ. ಚೆಂಡನ್ನು ಬಳಸಿ ಆಡುವ ತಳಪ್ಪಂತುಕಲಿ, ಬಿಲ್ಲಿನಾಟವಾದ ಆಮ್ಬೆಯಲ್, ಕುಟುಕುಟು, ಕಯ್ಯಮಕಲಿ ಹಾಗೂ ಅತ್ತಕಳಂ ಎಂಬುವ ಕಾಳಗದ ಆಟಗಳು ಯಾವುದೇ ಏಷ್ಯನ್ ಗೇಮ್ಸ್ ಇಲ್ಲವೇ ಓಲಂಪಿಕ್ಸ್ ಪಂದ್ಯಗಳಿಗಿಂತಲೂ ಕಡಿಮೆ ಇಲ್ಲದ ಹುರುಪಿನಲ್ಲಿ ಆಡಿಸಲಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಮಹಿಳೆಯರು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಕುರುಹಾಗಿ ಈಗಾಗಲೇ ತಿಳಿಸಿರುವಂತೆ ಓಣಂನ ಹತ್ತು ದಿನವೂ ತಮ್ಮ ಮನೆಗಳ ಮುಂದೆ ಅತ್ಯಂತ ಸುಂದರವಾಗಿ ಹೊಸ ಹೊಸ ಹೂಗಳ ಬಗೆ ಬಗೆಯ ಪೂಕ್ಕಳಂ ಎಂಬ ಪುಷ್ಪ ರಂಗವಲ್ಲಿಗಳನ್ನು ಹಾಕುವುದಲ್ಲದೇ, ಬಿಳಿಯ ಬಣ್ಣದ ಸಾಂಪ್ರದಾಯಕ ಮುಂಡನ್ನು ಧರಿಸಿ, ಕೈಕೊತ್ತಿ ಕಲಿ ಮತ್ತು ತುಂಬಿ ತುಳ್ಳಾಲ್ ಎನ್ನುವ ಅತ್ಯಂತ ಮನೋಹರವಾದ ನೃತ್ಯಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಕುಮ್ಮಟ್ಟಿಕಲಿ, ಪುಲಿಕಲಿ ತಲಕ್ ಪಂತ್ ಕಲಿ ಎಂಬ ಜಾನಪದ ನೃತ್ಯಗಳು ಇಡೀ ಉತ್ಸವದ ಮೇರು ಆಕರ್ಷಣೆಗಳಾಗಿರುತ್ತದೆ.

ಓಣಂ ಹಬ್ಬದಂದು ದೊಡ್ಡ ದೇವಸ್ಥಾನಗಳಲ್ಲಿ ಆಲಂಕೃತ ಗೊಂಡ ಆನೆಗಳ ಮೆರವಣಿಗೆ ಹೆಚ್ಚು ಜನರ ಗಮನವನ್ನು ಸೆಳೆಯುತ್ತದೆ. ನಾನಾ ರೀತಿಯ ವರ್ಣಮಯವಾಗಿ ಆನೆಗಳನ್ನು ಅಲಂಕರಿಸಿ ಅವುಗಳಿಗೆ ಬಗೆ ಬಗೆಯ ಆಭರಣಗಳನ್ನು ತೊಡಿಸಿ ಚಂಡೆಯ ನಾದದೊಂದಿಗೆ ಊರುಗಳ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯನ್ನು ಮಾಡಲಾಗುತ್ತದೆ. ರಸ್ತೆಯುದ್ದಕ್ಕೂ ನೆರೆದಿರುವ ಸಹಸ್ರಾರು ಭಕ್ತಾದಿಗಳು ಮತ್ತು ಪ್ರವಾಸಿಗಳು ಭಕ್ತಿಯಿಂದ ಆನೆಗೆ ನಮಿಸಿ ಅವುಗಳಿಗೆ ಬಗೆ ಬಗೆಯ ಹಣ್ಣು ಹಂಪಲುಗಳನ್ನು ತಿನ್ನಲು ಕೊಡುವುದನ್ನು ನೋಡಲು ರಮಣೀಯವಾಗಿರುತ್ತದೆ.

ಇನ್ನು ಕತ್ತಲಾಗುತ್ತಿದ್ದಂತೆಯೇ ದೇವಾಲಯಗಳಲ್ಲಿ ದೇವರುಗಳಿಗೆ ಮಹಾಮಂಗಳಾರತಿಯಾದ ನಂತರ ನೆರೆದಿರುವ ಸಹಸ್ರಾರು ಜನರ ಸಮ್ಮುಖದಲ್ಲಿ ಲಕ್ಷಾಂತರ ಬೆಲೆಯ ತರತರಹದ ಪಠಾಕಿಗಳು, ಸಿಡಿ ಮದ್ದುಗಳನ್ನು ಸಿಡಿಸಿ ಆಕಾಶದ ನಕ್ಷತ್ರಗಳು ಭೂಮಿಯ ಮೇಲೆಯೇ ಇದೇಯೋನೋ ಎನ್ನುವಂತೆ ಚಿತ್ತಾರವನ್ನು ಮೂಡಿಸುತ್ತಾರೆ. ಕೆಲವು ವರ್ಷಗಳ ಹಿಂದೆ ದೇವಾಲಯದಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿ ದಾಸ್ತಾನಿಗೆ ಬೆಂಕಿ ಬಿದ್ದು ಹಲವಾರು ಪ್ರಾಣಹಾನಿಯಾದ ಕಾರಣ ಹಿಂದಿನಷ್ಟು ಸಂಭ್ರಮವಿಲ್ಲದಿದ್ದರೂ ಅತ್ಯಂತ ಎಚ್ಚೆರಿಕೆಯಿಂದ ಸಾಂಪ್ರದಾಯಕ ರೀತಿಯಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವ ಮೂಲಕ ಇಡೀ ಕೇರಳ ರಾಜ್ಯದಲ್ಲಿ ಆ ಹತ್ತು ಹದಿನೈದು ದಿನ ಯಾವುದೇ ಕೋಮು ಗಲಭೆಯಿಲ್ಲದೇ ಭಾವೈಕ್ಯತೆಯಿಂದ ಸಡಗರ ಸಂಭ್ರಮದಿಂದ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಇದೇ ರೀತಿಯ ಭಾವೈಕ್ಯತೆ ವರ್ಷವಿಡೀ ಇದ್ದರೆ ಜನರಿಗೂ ನೆಮ್ಮೆದಿ ದೇಶಕ್ಕೂ ನೆಮ್ಮದಿ.

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s