ತಮ್ಮ ಗುರುಗಳನ್ನು ಭೇಟಿ ಮಾಡಲು ಹೋಗಿದ್ದ ಭಕ್ತರೊಬ್ಬರು ಕುತೂಹಲದಿಂದ, ಸ್ವಾಮಿಗಳೇ, ಪಿತೃಪಕ್ಷ ಮತ್ತು ಶ್ರಾದ್ಧದ ಸಮಯದಲ್ಲಿ ನಾವು ಕೇವಲ ಕಾಗೆಗಳಿಗೆ ಮಾತ್ರ ಆಹಾರವನ್ನು ಏಕೆ ಇಡುತ್ತೇವೆ? ಇತರೇ ಹಕ್ಕಿಗಳಿಗೇಕೆ ಇಡುವುದಿಲ್ಲ? ನಮ್ಮ ಪೂರ್ವಜರು ಕಾಗೆಗಳ ರೂಪದಲ್ಲಿ ಬಂದು ಪಿಂಡವನ್ನು ತಿನ್ನುತ್ತಾರೆ ಎಂದರೆ ನಮ್ಮ ಪೂರ್ವಜರು ಅಷ್ಟು ನಿಕೃಷ್ಟರೇ ? ಎಂದು ಪ್ರಶ್ನಿಸುತ್ತಾರೆ.
ಶಿಷ್ಯನ ಈ ಮುಗ್ಧ ಪ್ರಶ್ನೆಗೆ ಅಷ್ಟೇ ಸೌಮ್ಯ ನಗುವಿನೊಂದಿಗೆ ಉತ್ತರಿಸಿದ ಗುರುಗಳು ನಾವು ಕಾಗೆಯನ್ನು ಕಾಕ ಎಂದೂ ಕರೆಯುತ್ತೇವೆಯೇ ಹೊರತು ಇದರ ಹೊರತಾಗಿ ಬೇರೆ ಯಾವುದೇ ಪ್ರಾಣಿ ಪಕ್ಷಿಯನ್ನು ಅದರ ಧ್ವನಿಯಿಂದ ಗುರುತಿಸುವುದಿಲ್ಲ. ಬೆಕ್ಕನ್ನು ಮಿಯಾಂವ್ ಎಂದು ಕರೆಯುವುದಿಲ್ಲ ಇನ್ನು ಕಿಂವ್ ಕಿಂವ್ ಎನ್ನುವ ಗಿಳಿಯನ್ನು ಹಾಗೆ ಅದರ ಧ್ವನಿಯಾಧಾರಿತವಾಗಿ ಕರೆಯುವುದಿಲ್ಲ. ಅಂದರೆ ಧ್ವನಿಯಾಧಾರಿತವಾಗಿ ಗುರುತಿಸಲ್ಪಡುವ ಕಾಕಾ ವಿಶೇಷವಾಗಿದೆ ಎಂದರ್ಥವಲ್ಲವೇ?
ಕಪ್ಪಗಿರುವ ಕಾಗೆ ಒಂದು ಸಾಧಾರಣವಾಗಿ ಎಲ್ಲಾ ಕಡೆಯಲ್ಲಿಯೂ ಕಾಣ ಸಿಗುವ ಪಕ್ಷಿ ಮತ್ತು ಅದು ಏನು ಬೇಕಾದರೂ ತಿನ್ನುತ್ತದೆ ಎನ್ನುವ ಕಾರಣದಿಂದ ಕೀಳರಿಮೆ ತೋರಿಸುತ್ತೇವೆ. ಕಾ ಎಂದರೆ ಕಾಪಾಡು ಅಥವಾ ನಮ್ಮನ್ನು ರಕ್ಷಿಸಿ. ಎಂದರ್ಥ. ಆದ್ದರಿಂದ ನಾವು ಕಾಗೆಗೆ ಆಹಾರವನ್ನು ನೀಡುವಾಗ “ಕಾ ಕಾ” ಎಂದು ಕರೆಯುವ ಮೂಲಕ ನಮ್ಮ ಪೂರ್ವಜರನ್ನು ನಮ್ಮನ್ನು ರಕ್ಷಿಸಲು ಬನ್ನಿ ಎಂದು ಕೋರುತ್ತೇವೆ.
ಇದಲ್ಲದೇ ಕಾಗೆ ನಮಗೆ ಅತ್ಯುತ್ತಮ ಸ್ನೇಹಿತ ಎಂದರೆ ಆಶ್ವರ್ಯವಾಗುತ್ತದೆಯಲ್ಲವೇ? ಯಾರು ಏಳಲೀ ಬಿಡಲಿ, ಯಾವುದೇ ಸ್ವಾರ್ಥವಿಲ್ಲದೇ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಎಲ್ಲರನ್ನೂ ಕಾ..ಕಾ.. ಎನ್ನುವ ಮೂಲಕ ಎಚ್ಚರಿಸುತ್ತದೆ. ನರ ಮನುಷ್ಯರು ಆಲಸಿಗಳು ಮತ್ತು ಸುಖೀ ಪುರುಷರಾಗಿರುವುದರಿಂದ ಬಹುತೇಕ ಸಮಯಗಳಲ್ಲಿ ಸಮಯಕ್ಕೆ ಸರಿಯಾಗಿ ಎಚ್ಚರಗೊಳ್ಳದಿರಬಹುದು ಆದರೆ, ಕಾಗೆ ಮಾತ್ರಾ ಪ್ರತೀ ದಿನವೂ ಸಮಯಕ್ಕೆ ಸರಿಯಾಗಿ ಕಾ..ಕಾ.. ಎಂದು ಕರೆಯುವ ಮೂಲಕ ಎಲ್ಲರನ್ನೂ ಜಾಗೃತಗೊಳಿಸುತ್ತದೆ.
ಇನ್ನು ಕಾಗೆಗೆ ಆಹಾರ ದೊರೆತರೆ, ಅದು ಸ್ವಾರ್ಥಿಯಾಗಿ ತಾನೋಬ್ಬನೇ ತಿನ್ನದೇ, ಕಾ.. ಕಾ.. ಎಂದು ತನ್ನ ಬಂಧುಗಳನ್ನೆಲ್ಲಾ ಕರೆದು ಅವುಗಳೊಂದಿಗೆ ನಿಸ್ವಾರ್ಥವಾಗಿ ಯಾವುದೇ ಕಚ್ಚಾಟವಿಲ್ಲದೇ ಪ್ರೀತಿಯಿಂದ ಹಂಚಿ ತಿನ್ನುವ ಗುಣ, ಮನುಷ್ಯರನ್ನೂ ಒಳಗೊಂಡು ಬೇರಾವುದೇ ಜೀವಿಗಳಲ್ಲಿ ಕಾಣಿಸುವುದಿಲ್ಲ. ಹೀಗೆ ಎಲ್ಲರೂ ಹಂಚಿ ತಿನ್ನುವ ಗುಣವನ್ನು ಬೆಳೆಸಿ ಕೊಳ್ಳಬೇಕು ಎಂಬ ಪಾಠವನ್ನು ಕಲಿಸುತ್ತದೆ.
ನಮ್ಮ ಶಾಸ್ತ್ರಗಳ ಪ್ರಕಾರ ಸೂರ್ಯಾಸ್ತದ ನಂತರ ಆಹಾರವನ್ನು ಸ್ವೀಕರಿಸುವುದು ನಿಶಿದ್ಧ. ಏಕೆಂದರೆ ಸೂರ್ಯಾಸ್ತದ ನಂತರ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಎಂದು ತಿಳಿದಿದ್ದರೂ ಬಹುತೇಕರು ಅದನ್ನು ಪಾಲಿಸುವುದಿಲ್ಲ. ಆದರೆ ನಂಬಿಕೆ ಪ್ರಕಾರ ಕಾಗೆಗಳು ಮಾತ್ರ ಸೂರ್ಯಾಸ್ತದ ನಂತರ ಏನನ್ನೂ ತಿನ್ನುವುದಿಲ್ಲ ಮತ್ತು ಅದು ಮಲಗುವ ಮುನ್ನ ಕಾ.. ಕಾ.. ಎಂದು ಒಮ್ಮೆ ದೇವರಿಗೆ ಧನ್ಯವಾದ ಹೇಳಿಯೇ ವಿಶ್ರಾಂತಿ ಪಡೆಯುತ್ತದೆ.
ಹಾಗೇ ಮಾತನ್ನು ಮುಂದುವರೆಸಿದ, ಗುರುಗಳು
ಕೇವಲ ಪಿತೃಪಕ್ಷ ಮತ್ತು ಶ್ರಾದ್ಧದ ದಿನಗಳಲ್ಲದೇ, ಪ್ರತೀ ದಿನವೂ ಕಾಗೆಗಳಿಗೆ ಆಹಾರವನ್ನು ನೀಡುವುದನ್ನು ರೂಢಿ ಮಾಡಿಕೊಳ್ಳುವುದು ಉತ್ತಮ ಅಭ್ಯಾಸ. ಈ ಮೂಲಕ ಆಹಂ ಬ್ರಹ್ಮಾಸ್ಮೀ ಎಂಬ ಅದ್ವೈತ ತತ್ವವನ್ನು ಪಾಲಿಸಿದಂತಾಗುತ್ತದೆ. ನಾವು ಇಟ್ಟ ಆಹಾರವನ್ನು ನೋಡಿ ಕಾಗೆಗೆ ಸಂತೋಷವಾಗುತ್ತದೆ ಮತ್ತು ಅದನ್ನು ತಿನ್ನುತ್ತದೆ. ಅದು ತಿನ್ನುವುದನ್ನು ನೋಡಿ, ನಮಗೂ ಸಂತೋಷವಾಗುತ್ತದೆ. ಹೀಗೆ ಒಬ್ಬರೊಬ್ಬರ ಸಂತೋಷನ್ನು ನೋಡಿ ಸಂಭ್ರಮಿಸಿಸುವ ಮೂಲಕ ಇಬ್ಬರಲ್ಲಿರುವ ಭಗವಂತನನ್ನು ಗೌರವಿಸಿದಂತಾಗುತ್ತದೆ ಎಂದು ತಿಳಿಸುತ್ತಾರೆ.
ನಿಜ ಹೇಳ ಬೇಕೆಂದರೆ ನಮ್ಮ ಋಷಿಮುನಿಗಳು ಅದ್ಭುತವಾದ ಜ್ಞಾನವನ್ನು ಹೊಂದಿದ್ದ ಕಾರಣ ಉಳಿದೆಲ್ಲಾ ಪಕ್ಷಿಗಳಿಗಿಂತಲೂ ಕಾಗೆಯಲ್ಲಿ ನಮ್ಮ ಪೂರ್ವಜರನ್ನು ಕಂಡುಕೊಂಡರು ಎನ್ನುವುದಕ್ಕೆ ಒಂದು ಸುಂದರ ಉದಾಹರಣೆಯನ್ನು ನೀಡುತ್ತಾರೆ.
ನಿಮ್ಮಲ್ಲಿ ಯಾರರೂ ಅರಳೀ ಮರ ಅಥವಾ ಆಲದ ಮರವನ್ನು ಬೆಳೆಸಿದ್ದೀರಾ? ಅಥವಾ ಅವುಗಳನ್ನು ಬೆಳೆಸುವ ವಿಧಾನ ತಿಳಿದಿದ್ದೀರಾ? ಅರಳೀಮರ ಅಥವಾ ಆಲದ ಮರದ ಬೀಜಗಳನ್ನು ಪಡೆಯಬಹುದೇ? ಎಂದು ಪ್ರಶ್ನಿಸಿ
ಇಲ್ಲ. ಖಂಡಿತವಾಗಿಯೂ ನೋಡಿರಲು ಸಾಧ್ಯವಿಲ್ಲ ಎಂಬ ಉತ್ತರವನ್ನು ತಾವೇ ನೀಡಿ ತಮ್ಮ ಮಾತನ್ನು ಮುಂದುವರೆಸಿ,
ಅರಳೀ ಅಥವಾ ಆಲದ ಮರವು ಸಸಿಯಿಂದ ಬೆಳೆಯುವುದಿಲ್ಲ. ಈ ಎರಡು ಉಪಯುಕ್ತ ಮರಗಳನ್ನು ಬೆಳೆಸಲು ಪ್ರಕೃತಿ ವಿಶೇಷವಾದ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿದೆ.
ಈ ಮರಗಳ ಹಣ್ಣುಗಳನ್ನು ಕಾಗೆಗಳು ತಿಂದು ಅದರ ಜಠರದಲ್ಲಿ ಸಂಸ್ಕರಿಸಿದ ನಂತರವೇ ಆ ಬೀಜಗಳು ಮೊಳಕೆಯೊಡೆಯುತ್ತವೆ ಮತ್ತು ಹೆಮ್ಮರವಾಗಿ ಬೆಳೆಯುತ್ತವೆ. ಹೀಗೆ ಕಾಗೆಗಳು ಈ ಮರಗಳ ಹಣ್ಣುಗಳನ್ನು ತಿಂದು ತನ್ನ ಜಠರದಲ್ಲಿ ಸಂಸ್ಕರಿಸಿದ ನಂತರ ಅದರ ಮಲ ವಿಸರ್ಜನೆಯ ಮೂಲಕ ಆ ಬೀಜಗಳು ಮರಳಿ ಮಣ್ಣನ್ನು ಸೇರಿ ಮರವಾಗಿ, ದಿನದ ಇಪ್ಪತ್ನಾಲ್ಕು ಗಂಟೆಗಳೂ ನಿರಂತರವಾಗಿ ಆಮ್ಲಜನಕವನ್ನು ಬಿಡುಗಡೆ ಮಾಡುವ ಮತ್ತು ಅನೇಕ ಔಷಧಿಗಳಿಗೆ ಉಪಯುಕ್ತವಾದ ಮರಗಳಾಗಿ ಮನುಷ್ಯರ ಪಾಲಿಗೆ ಸಹಾಯಕಾರಿಯಾಗಿದೆ,
ಹೆಚ್ಚು ಹೆಚ್ಚು ಶುದ್ಧವಾದ ಆಮ್ಲಜನಕವನ್ನು ಪಡೆಯಲು ನಮಗೆ ಈ ಮರಗಳ ಅವಶ್ಯಕತೆ ಇದೆ. ಹೀಗೆ ಈ ಎರಡೂ ಮರಗಳು ಬಾಳಿ ಬದುಕಬೇಕಾದರೆ, ಕಾಗೆಗಳ ಸಹಾಯವಿಲ್ಲದೆ ಅದು ಸಾಧ್ಯವಿಲ್ಲ. ಹಾಗಾಗಿ ಆರೋಗ್ಯಕರ ನಮ್ಮ ಹೊಸ ಪೀಳಿಗೆಯನ್ನು ಬೆಳೆಸಲು ನಮ್ಮ ಜೊತೆಗೆ ಕಾಗೆಗಳ ಅವಶ್ಯಕತೆ ಇದೆ. ಸಾವಿಲ್ಲದ ಮನೆಯಲ್ಲಿ ಸಾಸಿವೆ ಕಾಳು ತಾ ಎನ್ನುವಂತೆ ಸಾವಿಲ್ಲದ ಮನೆಯಿಲ್ಲ ಸಾವಿಲ್ಲದ ಊರಿಲ್ಲ. ಹೀಗೇ ಊರಿನಲ್ಲಿ ಪ್ರತೀ ದಿನವೂ ಒಂದಲ್ಲಾ ಒಂದು ಮನೆಯಲ್ಲಿ ಶ್ರಾಧ್ಧಗಳು ನಡದೇ ತೀರುತ್ತದೆ, ಹಾಗಾಗಿ ನಮ್ಮ ಪೂರ್ವಜರನ್ನು ಕಾಗೆಗಳಲ್ಲಿ ರೂಪದಲ್ಲಿ ನೆನಪಿಸಿಕೊಳ್ಳುವ ಮೂಲಕ ಶ್ರಾದ್ಧದ ಪಿಂಡವನ್ನು ಕಾಗೆಗಳಿಗೆ ತಿನ್ನಿಸಿ, ಪರೋಕ್ಷವಾಗಿ ಕಾಗೆಗಳ ಸಂತಾನವನ್ನು ವೃದ್ಧಿಸುವ ಮೂಲಕ ಹೆಚ್ಚು ಹೆಚ್ಚು ಅರಳೀ ಮತ್ತು ಆಲದ ಮರಗಳ ಬೆಳವಣಿಗೆಗೆ ಕಾರಣೀಭೂತವಾಗಿ,ಆ ಮೂಲಕ ವಾಯುಮಾಲಿನ್ಯವನ್ನು ಕಡಿಮೆ ಮಾಡಿ, ಶುದ್ಧವಾದ ಪರಿಸರವನ್ನು ಹೆಚ್ಚು ಮಾಡಬಹುದಾದ ಎಂತಹ ಅದ್ಭುತವಾದ ಪರಿಕಲ್ಪನೆ ನಮ್ಮ ಋಷಿ ಮುನಿಗಳದ್ದು ಅಲ್ಲವೇ? ಎಂದು ಶಿಷ್ಯನನ್ನು ಪ್ರಶ್ನಿಸುತ್ತಾರೆ.
ಬಹುಶಃ ಈ ಲೇಖನ ಓದಿನ ನಂತರ ಅರಳೀ ಮರ, ಅಥವಾ ಆಲದ ಮರ ಅಥವಾ ಕಾಗೆಯನ್ನು ನೋಡಿದ ತಕ್ಷಣ ನಮ್ಮ ಪೂರ್ವಜರು ನಮ್ಮ ಕಣ್ಣಿನ ಮುಂದೇ ಬಂದೇ ಬರುತ್ತಾರೆ ಅಲ್ವೇ?
ಈಗ ಹೇಳಿ ನಮ್ಮ ಪೂರ್ವಜರನ್ನು ಕಾಗೆಯಲ್ಲಿ ನೋಡುವುದು ನಿಕೃಷ್ಟವೇ?
ಏನಂತೀರೀ?
ಆತ್ಮೀಯರೊಬ್ಬರು ಆಂಗ್ಲ ಭಾಷೆಯಲ್ಲಿ ಕಳುಹಿಸಿದ್ದ ಲೇಖನದ ಕನ್ನಡದ ಭಾವಾನುವಾದ
Wow superb, very useful information
LikeLike