ಕೀಟ ನಾಶ ಮತ್ತು ಪರಿಸರದ ಹಾನಿ

ಬಹುಶಃ ಒಂದು ಹತ್ತು ವರ್ಷಗಳ ಹಿಂದೆ ಕಾರಿನಲ್ಲಿ ದೂರಪ್ರಯಾಣಿಸುವವರಿಗೆ ತಮ್ಮ ಕಾರಿನ ವಿಂಡ್ ಷೀಲ್ಡ್ ಮೇಲೆ ಧಾಳಿ ಮಾಡುತ್ತಿದ್ದ ಕೀಟಗಳ ದಾಳಿಯನ್ನು ತಡೆಯುವುದೇ ಕಷ್ಟವಾಗುತ್ತಿತ್ತು. ವೇಗವಾಗಿ ಚಾಲನೆಯಾಗುತ್ತಿರುವ ವಾಹನಗಳಿಗೆ ಸಣ್ಣ ಸಣ್ಣ ಕ್ರಿಮಿ ಕೀಟಗಳು ಅಪ್ಪಳಿಸಿ ನಾಶವಾಗುತ್ತಿದ್ದದ್ದಲ್ಲದೇ ವಾಹನದ ಗಾಜಿಗೆ ಗಟ್ಟಿಯಾಗಿ ಕಚ್ಚಿ ಕೊಂಡು ಅವುಗಳನ್ನು ತಡೆಯುವುದಾಗಲೀ, ತೊಳೆಯುವುದಾಗಲೀ ಕಷ್ಟವಾಗುತ್ತಿತ್ತು.

ಆದರೆ ಇಂದಿನ ಬಹುತೇಕ ಯುವಕರಿಗೆ ಅಂತಹ ಸಮಸ್ಯೆಯ ಅರಿವೇ ಇಲ್ಲವಾಗಿದ್ದು ಆಹ್ಲಾದಕರವಾಗಿ ದೂರಪ್ರಯಾಣ ಮಾಡುತ್ತಿದ್ದಾರೆ.. ಹಾಗಾದರೇ ಆ ಸಮಸ್ಯೆಗಳು ಹೇಗೆ ಶಾಶ್ವತವಾಗಿ ಪರಿಹಾರವಾದವೇ? ಎಂಬುದರ ಬೆನ್ನತ್ತಿ ಹೋದಲ್ಲಿ ಆಘಾತಕಾರಿಯಾದ ವಿಷಯ ಬೆಚ್ಚಿ ಬೀಳಿಸುತ್ತವೆ.

ನಮಗೆಲ್ಲರಿಗೂ ತಿಳಿದಿರುವಂತೆ ನೈಸರ್ಗಿಕವಾದ ಆಹಾರ ಸರಪಳಿಯು ಪ್ರಾಕೃತಿಕವಾಗಿದ್ದು ಅದು ಸಹಜ‌ ಪ್ರಕ್ರಿಯೆಯಾಗಿ ಪಕೃತಿಯ ಸಮತೋಲನವನ್ನು ಕಾಪಾಡಿಕೊಂಡು ಬರುತ್ತಿತ್ತು. ಅದರಿಂದ ನೈಸರ್ಗಿಕವಾಗಿ ಹೆಚ್ಚಿನ ಪರಿಣಾಮ ಬೀರುತ್ತಿರಲಿಲ್ಲ. ಯಾವಾಗ ರೈತರು ಸಾವಯವ ಕೃಷಿ ಬಿಟ್ಟು,‌ಆಧುನಿಕನಕ ಕೃಷಿ ಮತ್ತು ಹೆಚ್ಚಿನ ಇಳುವರಿಯತ್ತ ಗಮನ ಹರಿಸತೊಡಗಿದರೋ ಅಂದಿನಿಂದಲೇ ರಾಸಾಯನಿಕ ರಸ ಗೊಬ್ಬರಗಳು ಮತ್ತು ಅತ್ಯಧಿಕವಾಗಿ ಕೀಟನಾಶಕಗಳ ಬಳಕೆಯಿಂದಾಗಿ ಈ ನೈಸರ್ಗಿಕ ಕೀಟಗಳ ಜನಸಂಖ್ಯೆಯ ನಾಟಕೀಯವಾಗಿ ಕುಸಿತ ಕಂಡವು. ಕೃಷಿ ವಿಜ್ಞಾನಿಗಳೂ ಸಹಾ ಈ ರೀತಿಯ ಕೀಟ ನಾಶಕಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ ಪರಿಣಾಮ, ಕೀಟಗಳು, ಸರೀಸೃಪಗಳು ಮತ್ತು ಉಭಯಚರಗಳ ಆಹಾರ, ಮತ್ತು ಸಸ್ಯಗಳ ಪರಾಗಸ್ಪರ್ಶ ಮುಂತಾದ ಎಲ್ಲಾ ಐಹಿಕ ಪರಿಸರ ವ್ಯವಸ್ಥೆಗಳ ಮೇಲೆ ಪರಿಣಾಮ ಬೀಳುವಂತಾಯಿತು. ಈ ರೀತಿಯ ಅವನತಿ ಸ್ವಯಂಕೃತ ದುರಂತವಲ್ಲದೆ, ಈ ರೀತಿಯಾಗಿ ಪಕ್ಷಿಗಳು, ಕೀಟಗಳ ಜನಸಂಖ್ಯೆಯ ಕುಸಿತವು ಐಹಿಕ ಪರಿಸರ ವ್ಯವಸ್ಥೆಗಳ ಕುಸಿತದ ಮುನ್ಸೂಚನೆಯಾಗಿದ್ದು ಮುಂದೆ ಇದರಿಂದ ಭಾರೀ ರೀತಿಯ ಪರಿಣಾಮವನ್ನು ಎದುರಿಸಬೇಕಾಗಬಹುದು.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಮ್ಮೆಲ್ಲರ ಮನೆಗಳ ಮುಂದಿ ಚಿಂವ್, ಚಿಂವ್ ಎಂದು ಸದ್ದು ಮಾಡುತ್ತಾ ಹಾರಾಡುತ್ತಿದ್ದ ಗುಬ್ಬಚ್ಚಿಗಳು ಇಂದು ಸದ್ದಿಲ್ಲದೇ ಅವಸಾನದ ಅಂಚಿನಲ್ಲಿದೆ. ನಗರ ಪ್ರದೇಶಗಳಲ್ಲಿ ಎಗ್ಗಿಲ್ಲದೇ ಮುಗಿಲೆತ್ತರಕ್ಕೆ ಏರಿದ ಮೊಬೈಲ್ ಟವರ್ಗಳ ತರಂಗಾಂತರಗಳನ್ನು ತಡೆಯಲಾರದೇ ಬಹುತೇಕ ಗುಬ್ಬಚ್ಚಿಗಳು ಸತ್ತು ಹೋದರೆ, ಅಳಿದುಳಿದ ಗುಬ್ಬಚ್ಚಿಗಳು ಅಲ್ಲಿಲ್ಲಿ ಹಳ್ಳಿಗಾಡಿನಲ್ಲಿ ಕಾಣಬಹುದಾಗಿದೆ. ಇನ್ನು ಮಕರಂದ ಹೀರಲು ಬರುವ ಮೂಲಕ ಪರಾಗಸ್ಪರ್ಷದಲ್ಲಿ ನೆರವಾಗುತ್ತಿದ್ದ ಜೀರುಂಡೆ, ದುಂಬಿಗಳು, ಬಗೆ ಬಗೆಯ ಪಾತರಗಿತ್ತಿಗಳೂ ಸಹಾ ಕೀಟ ನಾಶಕಗಳ ಬಲಿಯಾಗುತ್ತಿವೆ. ಇನ್ನು ರೈತರ ಸ್ನೇಹಿತ ಎರೇಹುಳುಗಳ ಪಾಡೂ ಇದಕ್ಕೆ ಹೊರತಾಗಿಲ್ಲ. ಕೃಷಿ ಭೂಮಿಯಲ್ಲಿರುವ ಎರೆಹುಳಗಳು ಮಣ್ಣಿನಲ್ಲಿರುವ ಸೂಕ್ಷ್ಮಾತಿ ಸೂಕ್ಷ್ಮ ಕೀಟಗಳನ್ನು ನಾಶ ಪಡಿಸುತ್ತಿದ್ದದ್ದಲ್ಲದೇ, ಈ ಕಾರ್ಯದಲ್ಲಿ ಮಣ್ಣನ್ನು ಸಡಿಲಗೊಳಿಸುತ್ತಿತ್ತು ಮತ್ತು ಅದರ ತ್ರ್ಯಾಜ್ಯಗಳು ಸಾವಯವ ಗೊಬ್ಬರವಾಗುತ್ತಿತ್ತು. ಆದರೆ ರೈತರುಗಳು ಹಸುಗಳ ಗೊಬ್ಬರವಾಗಲೀ, ಜೀವಾಮೃತವನ್ನಾಗಲೀ ಬಳಸದೇ ಹೆಚ್ಚಿನ ಇಳುವರಿಗಾಗಿ ರಾಸಾಯನಿಕ ಗೊಬ್ಬರ ಬಳಸುವುದಲ್ಲದೇ, ಕೀಟ ನಾಶಕ್ಕಾಗಿ ರಾಸಾಯನಿಕ ಔಷಧಿಗಳನ್ನು ಕಾಲ ಕಾಲಕ್ಕೆ ಸಿಂಪಡಿಸುವುದರಿಂದ ಗುಬ್ಬಚ್ಚಿಗಳು ಮತ್ತು ಎರೇ ಹುಳುಗಳು ನಾಶವಾಗಿ ಸಾಂಪ್ರದಾಯಕ ಕೃಷಿಗೆ ಮಾರಕವಾಗಿದ್ದು, ಈ ರೀತಿಯ ರಾಸಾಯನಿಕ ಸಿಂಪಡಣೆಯಿಂದ ಆ ಎಲ್ಲಾ ಆನಾರೋಗ್ಯಕರ ರಾಸಾಯನಿಕವು ಹಣ್ಣು, ತರಕಾರಿ ಮತ್ತು ಧಾನ್ಯಗಳ ಮುಖಾಂತರ ನೇರವಾಗಿ ಮನುಷ್ಯರ ದೇಹವನ್ನು ಸೇರಿ ಮೂವತ್ತರ ಹರೆಯಕ್ಕೇ ನಾನಾ ರೀತಿಯ ಖಾಯಿಲೆಗಳಿಗೆ ತುತ್ತಾಗಿ, ಐವತ್ತರ ವಯಸ್ಸಿಗೇ ಶಿವನ ಪಾದ ಸೇರಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ಮೊನ್ನೆ ಅರಣ್ಯ ತಜ್ಞ ಶ್ರೀ ಮಂಜುನಾಥ್ ಭಟ್ಟರ ಸಂದರ್ಶನವನ್ನು ನೋಡುತ್ತಿದ್ದಾಗ ಅವರು ನಮ್ಮ ಬೆಳೆಯ ಸುತ್ತ ಮುತ್ತ ಬೆಳೆಯುವ ಕಳೆಗಳನ್ನು ರಾಸಾಯನಿಕ ದ್ರಾವಣಗಳನ್ನು ಸಿಂಪಡಿಸುವುದಕ್ಕೆ ಬೇಸರ ವ್ಯಕ್ತ ಪಡಿಸುತ್ತಿದ್ದದ್ದು ಕೇಳಿ ಆಶ್ವರ್ಯವಾಯಿತು. ಅವರ ಪ್ರಕಾರ ಆ ಕಳೆಗಳು ಮಣ್ಣಿನಲ್ಲಿ ಗಟ್ಟಿಯಾಗಿ ನೆಲೆನಿಂತು ನೀರನ್ನು ಹೀರಿಕೊಂಡು ಮಣ್ಣಿನಲ್ಲಿ ಆರ್ದ್ರತೆಯನ್ನು ಕಾಪಾಡುತ್ತವೆ. ಆದರೆ ಇಂದಿನ ಕೃಷಿಕರು ಆ ಕಳೆಗಳನ್ನೆಲ್ಲಾ ಸಾರಾಸಗಟಾಗಿ ಕೀಳುವ ಮೂಲಕ ಸೂರ್ಯನ ಕಿರಣಗಳು ನೇರವಾಗಿ ಬೆಳೆಗಳ ಬುಡಕ್ಕೇ ಬಿದ್ದು ಬೆಳೆಗಳಿಗೆ ಹಾಯಿಸಿದ ನೀರನ್ನು ಆವಿ ಮಾಡುವ ಮೂಲಕ ನೀರನ್ನು ಬಸಿದು ಹಾಕುತ್ತದೆ ಎಂಬುದನ್ನು ಸವಿರವಾಗಿ ವಿವರಿಸಿದರು. ಇದೇ ಕಾರಣದಿಂದಾಗಿಯೇ, ನಾವು ರಾಸಾಯಾನಿಕ ಗೊಬ್ಬರಗಳನ್ನು ಹಾಕಿ ಬೆಳೆಸಿದ ಹಣ್ಣಿನ ಮರಗಳಿಗಿಂತಲೂ, ಕಾಡಿನಲ್ಲಿ ಸ್ವಾಭಾವಿಕವಾಗಿ ಮತ್ತು ನೈಸರ್ಗಿಕವಾಗಿ ಬೆಳೆದ ಹಣ್ಣುಗಳು ರುಚಿ ಮತ್ತು ಇಳುವರಿಗಳು ಇಮ್ಮಡಿಯಾಗಿರುತ್ತವೆ ಮತ್ತು ರೋಗ ಮುಕ್ತವಾಗಿರುವ ಉದಾಹರಣೆಯನ್ನು ನೀಡಿದಾಗ ಅರೇ, ಹೌದಲ್ವಾ ಎಂದು ಮೂಗಿನ ಮೇಲೆ ಬೆರಳು ಇಡುವಂತಾಯಿತು. ಹಾಗಾಗಿ ಸ್ವಲ್ಪ ಜಾಸ್ತಿ ಹಣ ಖರ್ಚಾದರೂ ಪರವಾಗಿಲ್ಲ ಎಂದು ಸಾವಯವ ಪದಾರ್ಥಗಳತ್ತ ಹರಿಸೋಣ ಚಿತ್ತ. ಅದರ ಮೂಲಕ ಆದಷ್ಟೂ ರಾಸಾಯನಿಕ ವಿಷಕಾರಿ ವಸ್ತುಗಳು ಪರೋಕ್ಷವಾಗಿ ದೇಹವನ್ನು ಸೇರುವುದನ್ನು ತಡೆಯೋಣ‌ ಮತ್ತು ಆರೋಗ್ಯ ಕಾಪಾಡಿಕೊಂಡು ನೆಮ್ಮದಿಯ‌ ಜೀವನ ನಡೆಸೋಣ.

ಏನಂತೀರೀ?

2 thoughts on “ಕೀಟ ನಾಶ ಮತ್ತು ಪರಿಸರದ ಹಾನಿ

  1. ಗುಬ್ಬಚ್ಚಿಗಳ ಅವಸಾನವಾಗಿರುವುದು ಪ್ರಮುಖವಾಗಿ ಭತ್ತ ಇತ್ಯಾದಿ ಸಾಗುವಳಿಗಳು ಕಡಿಮೆಯಾಗಿ ಅವುಗಳ ಆಹಾರ ಕೊರತೆಯುಂಟಾದುದರಿಂದ. ಇನ್ನೊಂದು ಕಾರಣ ಅವುಗಳಿಗೆ ಗೂಡು ಕಟ್ಟಲು ಹುಲ್ಲಿನ ಮನೆ ಇತ್ಯಾದಿಗಳು ಕಡಿಮೆಯಾದುದರಿಂದ. ಗುಬ್ಬಚ್ಚಿಗಳನ್ನು
    ಮಂಡಿ, ಗೋಡೌನುಗಳಂತಹ ಅಕ್ಕಿ ದಾಸ್ತಾನು ಇರುವೆಡೆಯಲ್ಲಿ ಈಗಲೂ ಕಾಣಬಹುದು. ಮೊಬೈಳು ಟವರು ಒಂದು ಹೇತು ಅಷ್ಟೆ.

    Like

  2. ಗುಬ್ಬಚ್ಚಿಗಳ ಅವಸಾನವಾಗಿರುವುದು ಪ್ರಮುಖವಾಗಿ ಭತ್ತ ಇತ್ಯಾದಿ ಸಾಗುವಳಿಗಳು ಕಡಿಮೆಯಾಗಿ ಅವುಗಳ ಆಹಾರ ಕೊರತೆಯುಂಟಾದುದರಿಂದ. ಇನ್ನೊಂದು ಕಾರಣ ಅವುಗಳಿಗೆ ಗೂಡು ಕಟ್ಟಲು ಹುಲ್ಲಿನ ಮನೆ ಇತ್ಯಾದಿಗಳು ಕಡಿಮೆಯಾದುದರಿಂದ. ಗುಬ್ಬಚ್ಚಿಗಳನ್ನು
    ಮಂಡಿ, ಗೋಡೌನುಗಳಂತಹ ಅಕ್ಕಿ ದಾಸ್ತಾನು ಇರುವೆಡೆಯಲ್ಲಿ ಈಗಲೂ ಕಾಣಬಹುದು. ಮೊಬೈಳು ಟವರು ಒಂದು ಹೇತು ಅಷ್ಟೆ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s