ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಚೆಟ್ನಿಗಳೋ, ಪಲ್ಯವೋ ಇಲ್ಲವೇ ಸಾಗು ಮಾಡುವುದು ಸಹಜ. ಅದೇ ಚೆಟ್ನಿ, ಪಲ್ಯ, ಸಾಗು ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾದ ಹೀರೇಕಾಯಿ ಹುಳಿಸೊಪ್ಪು ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಹೀರೇಕಾಯಿ ಹುಳಿಸೊಪ್ಪು ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಹೀರೇಕಾಯಿ – 1
- ಹಸಿರು ಮೆಣಸಿನಕಾಯಿ – 4-5
- ಹುಣಸೇಹಣ್ಣು – ಅರ್ಧ ನಿಂಬೇ ಗಾತ್ರದ್ದು
- ತೆಂಗಿನಕಾಯಿ ತುರಿ – 1/4 ಬಟ್ಟಲು
- ಬೆಲ್ಲ – 2 ಚಮಚ
- ಜೀರಿಗೆ – 1 ಚಮಚ
- ಅರಿಶಿನ 1/4 ಚಮಚ
- ರುಚಿಗೆ ತಕ್ಕಂತೆ ಉಪ್ಪು
ಒಗ್ಗರಣೆಗೆ
- ಸಾಸಿವೆ – 1/4 ಚಮಚ
- ಒಣ ಮೆಣಸಿನಕಾಯಿ – 2
- ಚಿಟುಕೆ ಇಂಗು
- ಕರಿಬೇವು – 4-5
- ಅಡುಗೆ ಎಣ್ಣೆ – 2 ಚಮಚ
ಹೀರೇಕಾಯಿ ಹುಳಿಸೊಪ್ಪು ತಯಾರಿಸುವ ವಿಧಾನ
- ಸಿಪ್ಪೆ ಹೆರೆದ ಹೀರೆಕಾಯಿಗಳನ್ನು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿಕೊಂಡು ಜೀರಿಗೆ ಮತ್ತು ಹಸಿರು ಮೆಣಸಿನಕಾಯಿ ಜೊತೆ ಸೇರಿಸಿ ಸ್ವಲ್ಪ ನೀರನ್ನು ಬೆರೆಸಿ ಕುಕ್ಕರಿನಲ್ಲಿ ಒಂದು ಶಿಳ್ಳೆ ಬರುವ ತನಕ ಬೇಯಿಸಿ.
- ಬೇಯಿಸಿದ ತರಕಾರಿ ತಣ್ಣಗಾದ ನಂತರ ಹುಣಸೇಹಣ್ಣು, ಬೆಲ್ಲಾ, ಉಪ್ಪು ಮತ್ತು ತೆಂಗಿನ ತುರಿ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ದಪ್ಪ ತಳದ ಬಾಣಲೆಗೆ ಎಣ್ಣೆಯನ್ನು ಹಾಕಿ ಎಣ್ಣೆ ಕಾದ ನಂತರ, ಸಾಸಿವೆ, ಇಂಗು, ಕರಿಬೇವು ಮತ್ತು ಒಣ ಮೆಣಸಿನಕಾಯಿಯ ಒಗ್ಗರಣೆ ಹಾಕಿಕೊಂಡು ರುಬ್ಬಿಕೊಂಡ ಮಿಶ್ರಣಕ್ಕೆ ಬೆರೆಸಿದಲ್ಲಿ, ರುಚಿ ರುಚಿಯಾದ ಹೀರೇಕಾಯಿ ಹುಳಿಸೊಪ್ಪು ಸಿದ್ದ
ಇದನ್ನು ಚಪಾತಿ, ದೋಸೆ, ಪರೋಟ ಅಲ್ಲದೇ, ರಾಗಿ ಮುದ್ದೆ ಮತ್ತು ಅನ್ನದೊಂದಿಗೂ ಕಲೆಸಿಕೊಂಡು ತಿನ್ನಬಹುದಾಗಿದೆ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ಮನದಾಳದ ಮಾತು : ಎಲ್ಲಾ ಕಡೆಯಲ್ಲಿಯೂ ಎಲ್ಲಾ ಸಮಯದಲ್ಲಿಯೂ ಮತ್ತು ಸುಲಭವಾಗಿ ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಹೀರೇಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ, ವಿಟಮಿನ್-ಸಿ, ಸತು, ಕಬ್ಬಿಣಾಂಶ, ರೈಬೋಫ್ಲಾವಿನ್, ಮೆಗ್ನೇಶಿಯಂ, ಥಯಾಮಿನ್ ಹೊಂದಿರುವ ತರಕಾರಿಯಾಗಿದ್ದು ಫ್ಯಾಟ್, ಕೊಲೆಸ್ಟ್ರಾಲ್ ಮತ್ತು ಕ್ಯಾಲೊರಿ ಹೊಂದಿರುವ ಕಾರಣ ತೂಕ ಇಳಿಸಿಕೊಳ್ಳಬಯಸುವವರಿಗೆ ಹೇಳಿ ಮಾಡಿಸಿದ ತರಕಾರಿಯಾಗಿದೆ. ಸಾಕಷ್ಟು ಸೆಲ್ಯುಲೋಸ್ ಮತ್ತು ನೀರಿನಂಶ ಹೊಂದಿದ್ದು, ಮಲಬದ್ಧತೆಯಿಂದ ಪೈಲ್ಸ್ ತಡೆಗಟ್ಟಲು ಸಹಹರಿಸುತ್ತದೆ. ಇನ್ನು ನಿತ್ಯ ಒಂದು ಗ್ಲಾಸ್ ಹೀರೇಕಾಯಿ ಜ್ಯೂಸ್ ಕುಡಿದರೆ ಕಾಮಾಲೆ ಕಡಿಮೆಯಾಗುತ್ತದೆ. ಮಧುಮೇಹ ರೋಗಿಗಳಿಗಳು ಹೀರೇಕಾಯಿಯನ್ನು ಹುಳಿ, ಪಲ್ಯ, ಚಟ್ನಿ ಅಥವಾ ಜ್ಯೂಸ್ ಮಾಡಿಕೊಂಡು ಹೀಗೆ ರೂಪದಲ್ಲಾದರೂ, ಸೇವಿಸಿದರೂ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ಈ ಪಾಕ ವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳೀಧರ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು