ಹೆಣ್ಣು ಮಕ್ಕಳ ದಿನ

ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರವನ್ನು ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುವ ಮೂಲಕ ಆ ದಿನವನ್ನು ಕುಟುಂಬದಲ್ಲಿರುವ ಹೆಣ್ಣು ಮಕ್ಕಳಿಗೆ ಸಮರ್ಪಿಸಲಾಗಿದೆ. ವಿವಿಧ ದೇಶಗಳು ಇದನ್ನು ವಿವಿಧ ದಿನಗಳಲ್ಲಿ ಆಚರಿಸಿದರೆ, ಇದನ್ನು ನಮ್ಮ ದೇಶದಲ್ಲಿ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಕುಟುಂಬದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಯಾವುದೇ ಬೇಧವಿಲ್ಲದೇ ಹೋದರೂ, ಸಹಜವಾಗಿ ಹೆಣ್ಣುಮಕ್ಕಳ ಬಗ್ಗೆ ಮೃದುವಾದ ಧೋರಣೆ ಇರುತ್ತದೆ. ದುರಾದೃಷ್ಟವಷಾತ್ ಇತ್ತೀಚಿಗೆ ಈ ಮೃದುಧೋರಣೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಹೆಣ್ಣು ಮಕ್ಕಳು ತಾವು ಗಂಡು ಮಕ್ಕಳಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲಾ ಎಂದು ಸ್ಪರ್ಧೆಗೆ ಇಳಿದಿರುವ ಪರಿಣಾಮ ಇಂದು ಅನೇಕ ರೀತಿಯ ಅಪಸವ್ಯಗಳಿಗೆ ಕಾರಣಿಭೂತವಾಗಿರುವರಿಂದ ಈ ಕುರಿತಾಗಿ ಕೆಲವೊಂದು ಭಾವನೆಗಳನ್ನು ನಿಮ್ಮೊಂದಿಗೆ ನನ್ನ ಹಂಚಿಕೊಳ್ಳುವ ಮನಸಾಗಿದೆ

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ: | ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ | ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ ಎನ್ನುತ್ತದೆ ನಮ್ಮ ಶಾಸ್ತ್ರಗಳು. ಅಹಲ್ಯ, ದ್ರೌಪತಿ, ಕುಂತಿ, ತಾರ ಮಂಡೋದರಿಯರಂತಹ ಪತಿವ್ರತೆಯರು ಜನ್ಮಿಸಿದ ನಾಡು ನಮ್ಮ ಈ ನಾಡಿನಲ್ಲಿ ಪರಸ್ತ್ರೀಯರಿಗೆ ತಾಯಿ ಮತ್ತು ಸಹೋದರಿಯಂತಹ ಪವಿತ್ರವಾದ ಸ್ಥಾನವನ್ನು ನೀಡಿ ಗೌರವಿಸುತ್ತೇವೆ.

ಹೆಣ್ಣನ್ನು ಎಷ್ಟೇ ಪೂಜ್ಯ ಭಾವನೆಯಿಂದ ಕಂಡರೂ ಹಿಂದೂ, ಇಂದು ಮತ್ತು ಮುಂದು ಹೆಣ್ಣು ಒಂದು ಆಕರ್ಷಣೀಯ ಕೇಂದ್ರವೇ ಸರಿ. ಅದಕ್ಕಾಗಿಯೇ ಹೆಣ್ಣು ಒಂದು ಮಾಯೆ ಎಂದಿದ್ದಾರೆ. ಒಂದು ಹೆಣ್ಣಿಗಾಗಿಯೇ ರಾಮಾಯಣ ಮತ್ತು ಮಹಾಭಾರತದಲ್ಲಿ ಘನಘೋರ ಯುದ್ದಗಳು ನಡೆದಿವೆಯಾದರೂ ಇಂದಿಗೂ ಜನರು ಅದರಿಂದ ಬುದ್ಧಿ ಕಲಿಯದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಒಬ್ಬ ಯಶಸ್ವೀ ಪುರುಷನ ಹಿಂದಿನ ಶಕ್ತಿ ಹೆಣ್ಣು ಎನ್ನುವುದು ಎಷ್ಟು ಸತ್ಯವೂ ಅದೇ ರೀತಿ ಬಹುತೇಕ ಪ್ರಕರಣಗಳಲ್ಲಿ ಒಬ್ಬ ಪುರುಷನ ಸೋಲಿನ ಹಿಂದೆಯೂ ಹೆಣ್ಣಿನ ಜಾದೂ ಕೆಲಸ ಮಾಡಿರುತ್ತದೆ ಎನ್ನುವುದೂ ಅಷ್ಟೇ ಸತ್ಯವಾಗಿದೆ ಹಾಗಾಗಿ ಪುರುಷರ ಶಕ್ತಿ ಮತ್ತು ದೌರ್ಬಲ್ಯ ಎರಡೂ ಸಹಾ ಹೆಣ್ಣು ಎಂಬುದನ್ನು ಬಹುಶಃ ಯಾರೂ ಅಲ್ಲ ಗಳೆಯಲಾರರು. ಬಹುಶಃ ಪುರುಷರ ಈ ದೌರ್ಬಲ್ಯವನ್ನು ಚೆನ್ನಾಗಿ ಅರಿತಿರುವ ಹೆಣ್ಣು, ಪುರುಷರನ್ನು ತನ್ನ ಕೈವಶ ಪಡಿಸಿಕೊಂಡು ತನ್ನಿಚ್ಚೆಯಂತೆ ಆಡಿಸುವುದನ್ನು ಕರಗತ ಮಾಡಿ ಕೊಂಡಿರುವುದು ದೌರ್ಭಾಗ್ಯದ ಸಂಗತಿಯಾಗಿದೆ.  ಊರಿಗೆ ಅರಸನಾದರೂ ಮನೆಯಲ್ಲಿ ಹೆಂಡತಿಯ ಗುಲಾಮನೇ ಎನ್ನುವುದು ಜೀವನದ ಕಠು ಸತ್ಯವೇ ಸರಿ.

ಹೆಣ್ಣಿನ ಬಗ್ಗೆ ಈ ರೀತಿ ಬರೆದಿರುವವರು ಪ್ರಾಯಶಃ ಹೆಣ್ಣಿನ ದ್ವೇಷಿಯೇ ಆಗಿರಬೇಕು ಎಂದು ಭಾವಿಸಿದಲ್ಲಿ ಖಂಡಿತವಾಗಿಯೂ ತಪ್ಪು ಕಲ್ಪನೆಯಾಗಿದ್ದು, ನಿಜಕ್ಕೂ ಹೆಣ್ಣಿನ ಮೇಲಿನ ಮಮತೆ ಮತ್ತು ಮಮಕಾರಕ್ಕಾಗಿ ಈ ರೀತಿಯ ಸಾತ್ವಿಕ ಕೋಪವಷ್ಟೇ. ಪ್ರತಿನಿತ್ಯವೂ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಲ್ಲಿ ಬಹುತೇಕ ಎಲ್ಲಾ ಮಾಧ್ಯಮಗಳಲ್ಲಿಯೂ ಪ್ರಮುಖವಾಗಿ ಮಹಿಳೆಯ ವಿರುದ್ಧದ ಪ್ರಕರಣಗಳೇ ಪ್ರಭಾವವಾಗಿ ಎದ್ದು ಕಂಡು ಬಂದಿದ್ದು ನಿಜಕ್ಕೂ ವಿಪರ್ಯಾಸ ಮತ್ತು ಶೋಚನೀಯ. ಬಹುಶಃ ಹೆಣ್ಣು ಮಕ್ಕಳು ಸಮಾಜದಲ್ಲಿ ತಮಗೆ ಸಿಗುತ್ತಿರುವ ಗೌರವನ್ನು ದುರ್ಬಳಕೆ ಮಾಡಿ ಕೊಳ್ಳುತ್ತಿದ್ದಾರಾ? ತಮ್ಮ ಎಲ್ಲೆ ಮೀರುತ್ತಿದ್ದಾರಾ? ಎನ್ನುವ ಭಾವನೆ ಕಾಡಿರುವುದಂತೂ ಸುಳಲ್ಲ.

ಕನ್ನಡ ಚಿತ್ರರಂಗದಲ್ಲಿ ಚೆಂದವಾಗಿ ಕಾಣುವ ಬಳ್ಳಿಯಂತೆ ಬಳುಕುವ ನಟಿಯರ ಕೊರತೆ ಇದೇ ಎಂದು ಕೊಳ್ಳುತ್ತಿದ್ದಂತೆಯೇ ಧುತ್ತೆಂದು ಪ್ರತ್ಯಕ್ಷಳಾದವಳೇ ರಾಗಿಣಿ ದ್ವಿವೇದಿ. ಎತ್ತರದ ಸಪೂರದ, ಸುಂದರದ ನಟಿ ಎಲ್ಲರ ರೀತಿಯಲ್ಲಿ ಕನ್ನಡ್ ಗೊತ್ತಿಲ್ಲಾ. ಎಂದು ಉಲಿಯದೇ, ಕೆಲವೇ ಕೆಲವು ದಿನಗಳಲ್ಲಿಯೇ ಕನ್ನಡವನ್ನು ಕಲಿತು ನಮ್ಮವರೇ ಆಗಿ ಹೋದಳು. ನೋಡ ನೋಡುತಿದ್ದಂತೆಯೇ ಸುದೀಪ್, ಶಿವರಾಜ್ ಕುಮಾರ್ ದರ್ಶನ್, ಸರ್ಜಾ, ಯೋಗಿ ಮುಂತಾದ ಘಟಾನುಘಟಿ ನಟರಲ್ಲದೇ ಇತ್ತೀಚಿನ ಹೊಸ ನಟರುಗಳೊಂದಿಗೆ ಅಭಿನಯಿಸಿ ಎಲ್ಲರ ಮನಗೆದ್ದ ಹುಡುಗಿಯಾಗಿದ್ದ ರಾಗಿಣಿ ದ್ವಿವೇದಿ ಮಾದಕದ್ರ್ವವ್ಯಗಳ ವ್ಯಸನಿ ಮಾತ್ರವಲ್ಲದೇ ಮಾದಕದ್ರವ್ಯಗಳನ್ನು ಸರಬರಾಜು ಮಾಡುವ ಜಾಲದಲ್ಲಿ ಸಕ್ರೀಯವಾಗಿದ್ದಾಳೆ ಎಂಬ ಬರಸಿಡಿಲು ಬಡಿಯುವಂತಹ ಸುದ್ದಿ ಹರಿದಾಡಿ ಕೆಲ ತಿಂಗಳುಗಳ ಕಾಲ ಪೋಲಿಸರ ಅತಿಥಿಯಾಗಿ ವಿಚಾರಣೆ ಇನ್ನೂ ಪ್ರಗತಿಯಲ್ಲಿದೆ.

ಅರೇ, ಕೈತುಂಬಾ ಕೆಲಸ, ಹಣ, ಪ್ರತಿಷ್ಟೆ, ಪ್ರಶಸ್ತಿ, ಪುರಸ್ಕಾರಳು ಎಲ್ಲವೂ ಇದ್ದರೂ ಹೀಗೇಕೆ ಮಾಡಿದಳು? ಎಂದು ಯೋಚಿಸಿದಲ್ಲಿ ಹೇಳುವುದು ಶಾಸ್ತ್ರ ತಿನ್ನುವುದು ಬದನೇ ಕಾಯಿ ಎನ್ನುವಂತೆ ಭಾರತೀಯ ಮೌಲ್ಯಗಳನ್ನು ಧಿಕ್ಕರಿಸಿ ಅಂಧ ಪಾಶ್ಚಾತ್ಯ ಮೋಜು ಮಸ್ತಿ ಮಾಡುವ ಸಂಸ್ಕೃತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನಗೇ ಅರಿವಿಲ್ಲದಂತೆಯೇ ಆ ಮೃತ್ಯುಕೂಪದಲ್ಲಿ ಬಿದ್ದು ಈಗ ಒದ್ದಾಡುತ್ತಿರುವುದು ಸ್ಪಪ್ಷವಾಗಿ ಗೋಚರಿಸುತ್ತದೆ

ಇನ್ನು ಕನ್ನಡ ಚಿತ್ರರಂಗಕ್ಕೆ ಬಂದ ಏಳೆಂಟು ವರ್ಷಗಳಲ್ಲಿ ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಇನ್ನೂ ತನ್ನ ಅಸ್ತಿತ್ವಕ್ಕಾಗಿ ಒದ್ದಾಡುತ್ತಿರುವ ಸಂಸ್ಕಾರವಂತ ಕುಟುಂಬದ ಹಿನ್ನೆಲೆಯ ನಟಿ ನಿವೇದಿತಾಗೆ ಗಾಂಜ ಗಿಡ, ತುಳಸೀ ಗಿಡದಷ್ಟೇ ಪವಿತ್ರವಂತೆ. ಗಾಂಜವನ್ನು ಅನೇಕ ಔಷಧಿಗಳಲ್ಲಿ ಬಳಸುವ ಕಾರಣ, ಗಾಂಜ ಬೆಳೆಯನ್ನು ಕಾನೂನು ಬದ್ಧಗೊಳಿಸಿ ಎಂದು ಓತಪ್ರೋತವಾಗಿ ತನ್ನ ನಾಲಿಗೆಯನ್ನು ಹರಿಬಿಟ್ಟಿರುವಾಗ ಆಕೆಯ ಮನೋಭಾವ ಮತ್ತು ಈ ರೀತಿಯ ಮನಸ್ಥಿತಿಗೆ ಕಾರಣ ಏನು? ಎಂಬುದನ್ನು ಅರಿತು ಸರಿ ಪಡಿಸಲೇ ಬೇಕಿದೆ.

ಒಂದು ಬಾರಿ ತುಳಸಿ ರಸ ಕುಡಿಸಿದ ಹಾಗೆ, ಈ ನಟಿಗೆ ಗಾಂಜಾ ರಸವನ್ನು ಕುಡಿಸಿ ಅದರ ನಶೆ ಮತ್ತು ದುಶ್ಪರಿಣಾಮಗಳ ಪರಿಚಯ ಮಾಡಿಸಿದಲ್ಲಿ ಬಹುಶಃ ಆಗ, ನನಗೆ ಸ್ವಲ್ಪ ತುಳಸಿ ರಸ ಕೊಡಿ ನಾನು ಬದುಕಬೇಕು ಅಂತ ಹೇಳಬಹುದೇನೋ? ದಿಢೀರ್ ಪ್ರಚಾರ ಪಡೆಯುವ ಹಪಾಹಪಿಯಲ್ಲಿ ಈ ನಟನಾ ಮಣಿಗಳ ಬೌದ್ಧಿಕ ಮಟ್ಟ ಈ ಪಾಟಿ ಕುಸಿದಿರುವುದು ನಿಜಕ್ಕೂ ಶೋಚನೀಯವೇ ಸರಿ.

ಇನ್ನು ಹೆಣ್ಣಿಗೆ ಹೆಣ್ಣೇ ಶತ್ರು. ಒಂದು ಹೆಣ್ಣನ್ನು ಮಟ್ಟ ಹಾಕ ಬೇಕೆಂದರೆ ಅವಳ ವಿರುದ್ಧ ಮತ್ತೊಂದು ಹೆಣ್ಣನ್ನು ಎತ್ತಿಕಟ್ಟಿದರೆ ಸಾಕು. ಯಾವುದೇ ಹೆಣ್ಣು ತನ್ನ ಕಣ್ಣ ಮುಂದೆ ಮತ್ತೊಬ್ಬ ಹೆಣ್ಣು ಪ್ರವರ್ಧಮಾನಕ್ಕೆ ಬರುವುದನ್ನು ಸಹಿಸುವುದಿಲ್ಲ ಎನ್ನುವುದಕ್ಕೆ ಕೆಲ ತಿಂಗಳುಗಳ ಹಿಂದೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿರುವ ಕಿರಿಕ್ ನಟಿ ಎಂದೇ ಕುಖ್ಯಾತಿ ಹೊಂದಿರುವ ಸಂಯುಕ್ತಾ ಹೆಗಡೆ ಮತ್ತು ತನ್ನ ರಾಜಕೀಯದ ಅಸ್ಮಿತೆ ಮತ್ತು ಅಸ್ತಿತ್ವಕ್ಕಾಗಿ ಯಾರಿಗೆ ಏನು ಬೇಕಾದರೂ ಹೇಳುತ್ತೇನೆ ಎನ್ನುವ ದರ್ಪದ ಹೆಂಗಸು ಕವಿತಾ ರೆಡ್ಡಿಯ ಪ್ರಕರಣವೇ ಸಾಕ್ಷಿ. ನಿಜ ಹೇಳ ಬೇಕೆಂದರೆ, ಇವರಿಬ್ಬರ ಕ್ಷೇತ್ರಗಳು ಬೇರೆ ಬೇರೆಯದ್ದಾದರೂ, ಸ್ವಭಾವತಃ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆಯೇ ಎಂದರೂ ತಪ್ಪಾಗಲಾರದು. ಇವರಿಬ್ಬರೂ ಹೋದ ಬಂದ ಕಡೆಯೆಲ್ಲೆಲ್ಲಾ ಒಂದಾಲ್ಲಾ ಒಂದು ಸಮಸ್ಯೆಗಳನ್ನು ಹುಟ್ಟಿಹಾಕಿದರೇನೇ ಅವರಿಗೆ ತಿಂದ ಆಹಾರ ಅರಗುವುದು ಎಂದು ಕಾಣುತ್ತದೆ.

ಕೆಲ ತಿಂಗಳುಗಳ ಹಿಂದೆ ಅಗರ ಕೆರೆಯ ತಾಣದಲ್ಲಿ ಸಂಯುಕ್ತ ಮತ್ತು ಆಕೆಯ ಗೆಳತಿಯರು ಕಸರತ್ತು ಮಾಡಲು ಅನುಕೂಲವಾಗುವಂತಹ ಅರೆ ಬರೇ ಬಟ್ಟೆಗಳನ್ನು ಧರಿಸಿ ಸಾರ್ವಜನಿಕ ಸ್ಥಳದಲ್ಲಿ ವ್ಯಾಯಾಮ ಮಾಡುತ್ತಿದ್ದದ್ದು ಕೆಲವರಿಗೆ ಮುಜುಗರ ತಂದು ಈ ವಿಷಯವನ್ನು ಕವಿತಾ ರೆಡ್ಡಿಯ ಕಿವಿಗೆ ಮುಟ್ಟಿಸಿದ್ದಾರೆ. ಈ ವಯಸ್ಸಿನಲ್ಲಿಯೂ ಸಾರ್ವಜನಿಕವಾಗಿ ತುಂಡು ಚೆಡ್ಡಿ ಹಾಕಿಕೊಂಡು ಓಲಾಡುವ ಕವಿತಾ ರೆಡ್ಡಿ ನೈತಿಕ ಪೋಲೀಸ್ ಗಿರಿಗೆ ಮುಂದಾಗಿದ್ದಲ್ಲದೇ ಸಂಯುಕ್ತ ಮತ್ತವರ ಗೆಳತಿಯರ ಮೇಲೆ ದೈಹಿಕ ಹಲ್ಲೆಗೆ ಮುಂದಾದ ವೀಡಿಯೋಗಳು ಈಗ ವೈರಲ್ ಆಗಿ, ಪ್ರಕರಣ ಪೋಲೀಸ್ ಠಾಣೆಯ ಮೆಟ್ಟಿಲು ಹತ್ತಿ ನಂತರ ಪೋಲೀಸರ ಸಮ್ಮುಖದಲ್ಲಿ ಇಬ್ಬರ ನಡುವೆ ಸಂಧಾನವಾಗಿದೆ.

ನಿಜ ಹೇಳ ಬೇಕೆಂದರೆ ಇದು ಇಷ್ಟೊಂದು ದೊಡ್ಡ ಪ್ರಕರಣವಾಗ ಬೇಕಾದ ವಿಷಯವೇ ಅಲ್ಲ. ಇಬ್ಬರಿಗೂ ಪ್ರಚಾರದ ಹಪಾಹಪಿ. ನನ್ನ ದೇಹ, ನನ್ನ ಉಡುಪು, ನನ್ನಿಚ್ಚೆಯಂತೆ ಧರಿಸುತ್ತೇನೆ. ನನ್ನ ಬದುಕು ತನ್ನಿಚ್ಚೆಯಂತೆ ನಡೆಸುತ್ತೇನೆ ಎನ್ನುವ ಉದ್ಧಟತನದ ಹುಂಬತನದ ಹದಿಹರೆಯದ ಹುಡುಗಿ ಒಂದು ಕಡೆಯಾದರೇ, ಆ ಭಾಗದ ಶಾಸಕರು ನನಗೆ ಆತ್ಮೀಯರು ಜೊತೆಗೆ ತಾನೊಂದು ಪಕ್ಷದ ವಕ್ತಾರೆ. ಹಾಗಾಗಿ ತನ್ನ ಮನೆಯ ಆಸು ಪಾಸಿನಲ್ಲಿ ತಾನು ಹೇಳಿದಂತೆಯೇ ನಡೆಯಲೇ ಬೇಕು ಎನ್ನುವ ಪಾಳೇಗಾರಿಕೆಯ ಮನಸ್ಥಿತಿಯ ಹೆಂಗಸು ಮತ್ತೊಂದೆಡೆ. ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ ಟಿ.ಆರ್.ಪಿ ಹುಚ್ಚಿನಲ್ಲಿರುವ ಮಾಧ್ಯಮಗಳಿಗೆ ಇವರಿಬ್ಬರ ಪ್ರಕರಣ ಸರಕಾಗಿದ್ದದ್ದನ್ನು ಹೊರತು ಪಡಿಸಿದಲ್ಲಿ ಸಮಾಜಕ್ಕೆ ಕಿಂಚಿತ್ತೂ ಲಾಭವಿಲ್ಲದೇ, ಇವರಿಬ್ಬರ ಹುಚ್ಚುತನ ಮತ್ತು ಪ್ರತಿಷ್ಠೆಗೆ ಬಲಿಯಾದದ್ದು ನಮ್ಮ ಸಂಸ್ಕೃತಿ ಮಾತ್ರ.

.

ಇನ್ನು ನಾಲ್ಕನೆಯ ಪ್ರಕರಣ ಇನ್ನೂ ಅದ್ವಾನ. ಬ್ಯಾಂಕುಗಳು ಇರುವುದು ಜನರ ಅನುಕೂಲಕ್ಕಾಗಿಯೇ, ನಮಗೆ ಹಣದ ಅವಶ್ಯಕವಾದಾಗ, ಬ್ಯಾಂಕಿನಲ್ಲಿ ಸಾಲದ ರೂಪದಲ್ಲಿ ಹಣವನ್ನು ಪಡೆದು ನಂತರ ಅದನ್ನು ನಿಗಧಿತ ಕಂತುಗಳ ರೂಪದಲ್ಲಿ ಸರಿಯಾಗಿ ಕಟ್ಟ ಬೇಕಾದದ್ದು ನ್ಯಾಯಯುತವಾದ ಮಾರ್ಗ. ಒಮ್ಮೆ ಅನಿವಾರ್ಯ ಕಾರಣಗಳಿಂದ ಸರಿಯಾದ ಸಮಯದಲ್ಲಿ ಹಣವನ್ನು ಪಾವತಿ ಮಾಡಲಾಗದಿದ್ದಲ್ಲಿ, ಬ್ಯಾಂಕಿನವರ ಬಳಿ ಕೇಳಿಕೊಂಡರೆ, ನಾವು ನೀಡುವ ಕಾರಣ ಸೂಕ್ತವೆನಿಸಿದರೆ ಅದಕ್ಕೆ ತಕ್ಕ ಪರಿಹಾರವನ್ನು ಅವರೇ ಸೂಚಿಸುತ್ತಾರೆ. ಆದರೆ, ಬ್ಯಾಂಕಿನಿಂದ ಸಾಲವನ್ನು ಪಡೆದು ಕಾಲ ಕಾಲಕ್ಕೆ ಅದನ್ನು ಸರಿಯಾಗಿ ಪಾವತಿಸದೇ, ತೆಗೆದುಕೊಂಡ ಸಾಲವನ್ನು ವಾಪಸ್ ಕೊಡಿ ಎಂದು ಸಭ್ಯ ರೀತಿಯಲ್ಲಿಯೇ ಕೇಳಲು ಮೂರು ಜನ ಬ್ಯಾಂಕ್ ಸಿಬ್ಬಂದಿಯ ಮೇಲೆ ಮಹಿಳೆಯೊಬ್ಬಳು ಸುಖಾ ಸುಮ್ಮನೆ ಜಗಳ ಮಾಡಿರುವ ಪ್ರಕರಣ ವೈರಲ್ ಆಗಿತ್ತು.

ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗಳನ್ನು ಆಕೆಯೇ ತಳ್ಳಿ, ಎಳೆದಾಡಿದ್ದಲ್ಲದೇ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ತನ್ನ ಮೇಲೆ ಬ್ಯಾಂಕ್ ಸಿಬ್ಬಂಧಿ ಹಲ್ಲೆ ಮಾಡಿದ್ದಾರೆ ಮತ್ತು ಅತ್ಯಾಚಾರ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿ ಮಾಡುವುದಲ್ಲದೇ, ಪೋಲೀಸರಿಗೆ ದೂರು ನೀಡಿ ನಿಮ್ಮನ್ನು ಬಂಧಿಸುತ್ತೇನೆ ಎಂಬ ಬೆದರಿಕೆ ಹಾಕಿರುವುದು ವೀಡಿಯೋದಲ್ಲಿ ಸ್ಲಷ್ಟವಾಗಿ ಕಾಣಿಸುತ್ತಿದೆ. ಆಕೆಯ ದೌರ್ಜನ್ಯಕ್ಕೆ ಹೆದರಿ, ವಯಸ್ಸಿನಲ್ಲಿ ಆಕೆಗಿಂತಲೂ ಹಿರಿಯರಾದ ಬ್ಯಾಂಕ್ ಸಿಬ್ಬಂದಿಯೋರ್ವರು  ಆಕೆಯ ಕಾಲಿಗೆ ಬಿದ್ದು ನಮ್ಮನ್ನು ಬಿಟ್ಟು ಬಿಡಿ ಎಂದು ದೈನೇಸಿಯಿಂದ ಕೇಳಿಕೊಳ್ಳುತ್ತಿರುವುದು ಮತ್ತು ಆಕೆಯ ಪತಿ ಹೋಗಲೀ ಬಿಡು ಎಂದು ಹೇಳಿದರೂ, ನೀವು ಸುಮ್ಮನೆ ಒಳಗೆ ಹೋಗಿ, ನಾನು ಇವರಿಗೆ ಗ್ರಹಚಾರ ಬಿಡಿಸುತ್ತೇನೆ ಎಂಬ ದರ್ಪ ತೋರಿಸಿರುವುದು ಅಕ್ಷಮ್ಯ ಅಪರಾಧವಾಗಿರುವುದಲ್ಲದೇ ಆಕೆ ಹೆಣ್ಣು ಕುಲಕ್ಕೇ ಅವಮಾನ ಎಂದರು ತಪ್ಪಾಗದು.

ಅರೇ, ಅವರೇನು ಆಕೆಯ ಮನೆಗೆ ಭಿಕ್ಷೇ ಬೇಡಲು ಹೋಗಿರಲಿಲ್ಲ. ಭಿಕ್ಷೇ ಬೇಡಲು ಬಂದವರ ಹತ್ತಿರವೂ ಆ ರೀತಿಯಲ್ಲಿ ನಡೆದು ಕೊಳ್ಳುವುದು ಅಕ್ಷ್ಯಮ್ಯ ಅಪರಾಧ. ಆಕೆಯ ಅವಶ್ಯಕತೆಗಾಗಿ ಬ್ಯಾಂಕಿನ ಎಲ್ಲಾ ಒಪ್ಪಂದಗಳಿಗೂ ಬದ್ಧಳಾಗಿಯೇ ಸಾಲ ಪಡೆದು ಈಗ ಹಿಂದಿರುಗಿಸಲು ಈ ಪರಿಯ ಉದ್ಧಟತನವೇ? ಸಾಲವನು ಕೊಂಬಾಗ ಹಾಲೋಗರುಂಡಂತೆ. ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯ ಕೀಲು ಮುರಿಂದಂತೆ ಸರ್ವಜ್ಞ. ಹೀಗೆ ಇಂದು ನಡೆದಂತಹ ಪ್ರಕರಣವನ್ನು ಎಂದೋ ಊಹಿಸಿಯೇ ಸರ್ವಜ್ಞ ಬರೆದು ಬಿಟ್ಟಿದ್ದಾರೆ.

ಈ ಎಲ್ಲಾ ಪ್ರಕರಣಗಳಲ್ಲಿಯೂ ಹೆಣ್ಣು ತನ್ನ ಎಲ್ಲೆ ಮೀರಿ ಅಸಭ್ಯತೆಯನ್ನು ತೋರಿರುವುದು ನಿಜಕ್ಕೂ ಕಳಕವಳಕಾರಿಯಾಗಿದೆ. ಹೆಣ್ಣು ಸಂಸಾರದ ಕಣ್ಣು. ಹೆಣ್ಣು ಮಗು ಕಲಿತು ತನ್ನ ಕ್ಷೇತ್ರದಲ್ಲಿ ಮುಂದುವರಿದರೆ ಅದರಿಂದ ತನ್ನ ಸಂಸಾರದಲ್ಲಷ್ಟೇ ಅಲ್ಲದೇ ದೇಶಕ್ಕೂ ಮಾದರಿಯಾಗುತ್ತಾಳೆ. ಅದಕ್ಕಾಗಿಯೇ ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ನಿಲ್ಲಿಸಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂಬ ಅಭಿಯಾನಕ್ಕೆ ಕೋಟ್ಯಾಂತರ ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ. ವಿದ್ಯೆಯ ಜೊತೆ ವಿನಯ ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಳ್ಳದೇ, ದುರಾದೃಷ್ಟವಶಾತ್ ಕೆಲವು ಹೆಂಗಳೆಯರು ಸ್ತ್ರೀ, ಕ್ಷಮಯಾ ಧರಿತ್ರೀ ಎನ್ನುವುದನ್ನೂ ಮರೆತಿರುವುದೇ ಇಂತಹ ಮುಜುಗರಕ್ಕೆ ಕಾರಣವಾಗುತ್ತಿದೆ. ನಮ್ಮ ಮನೆಯ ಹೆಣ್ಣು ಮಕ್ಕಳು ಮನೆಯಿಂದ ಹೊರೆಗೆ ಹೋಗುವಾಗ ಯಾವ ರೀತಿಯ ಉಡುಗೆ, ತೊಡುಗೆಗಳನ್ನು ತೊಟ್ಟಿದ್ದಾರೆ ಎಂಬುದನ್ನು ಸೂಕ್ಶ್ಮವಾಗಿ ಗಮನಿಸಿ, ಸಮಾಜದಲ್ಲಿ ಹೆಣ್ಣು ಮಕ್ಕಳ ಘನತೆ ಮತ್ತು ಗೌರವವನ್ನು ತಿಳಿಸಿಕೊಟ್ಟು ನಮ್ಮ ಮಕ್ಕಳಿಗೆ ಸಂಸ್ಕಾರ ಮತ್ತು ಸಂಪ್ರದಾಯವನ್ನು ಕಲಿಸಿಕೊಟ್ಟು ಮೇಲೆ ತಿಳಿಸಿದಂತೆ ಅಪಸವ್ಯಗಳು ನಡೆಯಂತೆ ನೋಡಿಕೊಳ್ಳುವುದೇ ನಿಜವಾದ ಹೆಣ್ಣು ಮಕ್ಕಳ ದಿನಾಚರಣೆಯಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

6 thoughts on “ಹೆಣ್ಣು ಮಕ್ಕಳ ದಿನ

 1. ಬಹಳ ಉತ್ತಮ ವಿಚಾರ ಹಂಚಿಕೊಂಡಿದ್ದೀರಿ.
  ಇಂತಹ ಹೆಣ್ಣು ಮಕ್ಕಳಿಂದಾಗಿ ಇಂದು ಸ್ತ್ರೀ ಜಾತಿಯೇ ಕಳಂಕಿತವಾಗುತ್ತಿದೆ ಎಂದರೆ ತಪ್ಪಾಗಲಾರದು. ಇಪ್ಪತ್ತು ವರ್ಷಗಳ ಹಿಂದಿನ ಹಾಗೂ ಇಂದಿನ ಹೆಣ್ಣು ಮಕ್ಕಳಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು. ತಂದೆ ತಾಯಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.!!!
  ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಿಕ್ಕಿರುವ ಸ್ವಾತಂತ್ರ್ಯ ಹಾಗೂ ಗೌರವವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಅರಿವು ಇಂದಿನ ಗಳಿಸುವ, ಹೆಣ್ಣು ಮಕ್ಕಳಿಗಿಲ್ಲ… ಎಂಬುದು ಸತ್ಯ.
  ಒಟ್ಟಿನಲ್ಲಿ ಸಂಸ್ಕೃತಿ ಸಂಸ್ಕಾರ ಕಲಿಯಲೇ ಇಲ್ಲ, ಪುಸ್ತಕದ ಬದನೆಕಾಯಿಗಳು. ಹಣದಿಂದಲೇ ಅಳೆಯುವ ಜಗತ್ತು ಇಂದು ನಿರ್ಮಾಣವಾಗಿದೆ. ಹೆಣ್ಣು ತನ್ನ ಹೆಣ್ತನವನ್ನು ಮರೆಯದೆ ಹೆಮ್ಮೆಯಿಂದ ಬಾಳಿದರೆ ಉತ್ತಮ ಸಮಾಜ ನಿರ್ಮಾಣವಾಗುವುದಂತೂ ಸತ್ಯ. ಬೆರಳೆಣಿಕೆಯ
  ಕ್ಯಾರೆಕ್ಟರ್ಲೆಸ್ ಹೆಣ್ಣು ಮಕ್ಕಳು ಆಚಾರ ವಿಚಾರಗಳಿಂದಾಗಿ ಪೂರಾ ಹೆಣ್ಣು.. ಸ್ತ್ರೀ..
  ಮಹಿಳೆಯರ ಜಾತಿಯನ್ನೇ ಹಾಗೆ.. ಹೀಗೆ ಎನ್ನೋದು ತಪ್ಪು.
  ಇಂದು ಮಹಿಳೆಯರ ಬಗ್ಗೆ ಮಾತಾಡುವಾಗ ಬಹಳ ಜಾಗರೂಕತೆಯಿಂದ ಇರ್ಬೇಕು ಎಂಬುದನ್ನು ನಾವು ಅರಿಯಬೇಕು. ಅಂದರೆ ಮಹಿಳೆಯರ ಒಳ್ಪಳೆಯತನದ ಕ್ಷದಲ್ಲಿ ಮಾತಾಡಿದರೆ , ತಟ್ಟನೆ ಕೆಲವೇ ಕೆಲವು ಎಲ್ಲಾ ಬಿಟ್ಟು ಬಿಟ್ಟ ಹೆಣ್ಣು ಮಕ್ಕಳ, ಮಹಿಳೆಯ ಅಥವಾ
  ಸ್ತ್ರೀ ಜಾತಿಯ ಘೋರ ಅಪರಾಧಗಳೂ ಎದ್ದು ಕಾಣುತ್ತವೆ. ಕಲಿಯುಗದಿ ಇನ್ನೇನೇನು ನೋಡಲು ಬಾಕಿ ಇದೆಯೋ ಪರಮಾತ್ಮಾ…ಎಂಬ ಉದ್ಗಾರ
  ಮನದಲ್ಲಿ ಮೂಡಿ ತಮ್ಮನ್ನೇ ಪ್ರಶ್ನಿಸುತ್ತದೆ.
  ಗ್ಲಾಮರ್ ವೈಲ್ಡ್ ಹೊಕ್ಕಿದ ನಂತರ ಅಲ್ಲಿ ಏನಾಗುವುದು, ಏನಾಗುತ್ತಿದೆ, ಏನಾಗಬಹುದು..
  ಎಂಬುದನ್ನು ಊಹಿಸಲೂ ಅಸಾಧ್ಯವಾದ ಮಾತು. ಬೇಲಿಯೇ ಹೊಲವ ಮೇದಂತೆ… ಅಲ್ಲಿ ಡ್ರಗ್ ಹೆಣ್ಣಿನ ಮುಖಾಂತರ ಮಾರಾಟ ಮಾಡಲಾಗುತ್ತದೆ. ಅವಳದಕ್ಕೆ ಹಿಂಜರಿದರೆ
  ಕೊಲೆಯೂ ಆಗುತ್ತದೆ. ಹಾಗಾಗಿ ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಇಂತಹ ಫೀಲ್ಡಿಗೆ
  ಕಳುಹಿಸುತ್ತಿರಲಿಲ್ಲ. ಈಗ ಎಲ್ಲಾ
  ಫೀಲ್ಡ್ ನಲ್ಲಿಯೂ….ಇಂತಹ ಬ್ಲಾಕ್ ಮೈಲಿಂಗ್ ಕಾಮನ್ ಆಗಿದೆ ‌ ಈ ಬ್ಲಾಕ್ ಮೈಲಿಂಗ್ ಹೆಣ್ಣು ಮಕ್ಕಳಿಗೇ ಸೀಮಿತವಾಗಿಲ್ಲ, ಗಂಡು ಮಕ್ಕಳಿಂದಲೂ ಇಂತಹ ಇದಕ್ಕಿಂತ ಕೆಟ್ಟ ಕೆಲಸಗಳನ್ನು ಮಾಡಿಸಲಾಗುತ್ತದೆ. ಎದುರಿಗೆ ಕಾಣುವುದು ಯಾರೋ ಒಬ್ಬರು ಬಲಿ ಪಶುಗಳು.
  ಹಿಂದೆ ಇದೆ ಇದರ ರ್ಯಾಕೆಟ್.
  ಶಾಲೆಯಿಂದಲೇ ಬದಲಾವಣೆ ಆಗಬೇಕಿದೆ.
  ಹೆಣ್ಣು ಮಕ್ಕಳು ತಮ್ಮ ಲಕ್ಷ್ಮಣ ರೇಖೆಯನ್ನು ತಾವಾಗಿಯೇ ಹಾಕಿಕೊಳ್ಳಬೇಕಾಗಿದೆ. ಬಹಳಷ್ಟು ಇದೆ ಈ ವಿಚಾರದಲ್ಲಿ ವಿಚಾರಗಳು.

  Liked by 1 person

  1. ಮೂಗಿಗಿಂತ ಮೂಗಿನ ನತ್ತು ಭಾರವಂತೆ ಎನ್ನುವ ಹಾಗೆ ನನ್ನ ಲೇಖನಕ್ಕಿಂತಲೂ ದೊಡ್ಡದಾದ ಪ್ರತಿಕ್ರಿಯೆ ಓದಿ ಸಂತೋಣವಾಯಿತು.

   ಸಂಸ್ಕಾರ ಶಾಲೆಯಲ್ಲಿ ಕಲಿಸಲಾಗದು. ಚಿಕ್ಕಂದಿನಿಂದಲೇ ಮನೆಯಲ್ಲಿಯೇ ತಿದ್ದಿ ತೀಡಿ ಹೇಳಿಕೊಡಬೇಕು. ಏಕೆಂದರೆ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎನ್ನುವ ‌ಗಾದೆ ಮಾತಿದೆಯಲ್ಲವೇ

   Like

 2. ಇದು ಕೇವಲ ಬೆಂಗಳೂರಿನ 4 ಮಹಿಳೆಯರ ಕಥೆ….

  ಬೇರೆಡೆ ಇನ್ನು ಎಷ್ಟೆಲ್ಲ ಅವಾಂತರಗಳು ನಡೆಯುತ್ತಿವೆಯೋ…

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s