ದೋಸೆ, ಇಡ್ಲಿ, ಚಪಾತಿ ಮತ್ತು ಅನ್ನದ ಜೊತೆ ಕಲೆಸಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಕಾಯಿ ಚೆಟ್ನಿ, ಹುರುಗಡಲೇ ಚೆಟ್ನಿ, ಕಡಲೇಕಾಯಿ ಚೆಟ್ನಿಗಳನ್ನು ಮಾಡುವುದು ಸಹಜ. ಆದರೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಆರೋಗ್ಯಕರವಾದ ಮತ್ತು ಮಸಾಲಯುಕ್ತ ಆಂಧ್ರ ಶೈಲಿಯ ಪುದಿನಾ ಚಟ್ನಿಯನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಆಂಧ್ರ ಶೈಲಿಯ ಪುದಿನಾ ಚಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಪುದಿನಾ – 1 ಕಪ್
- ಕಡ್ಲೆಬೇಳೆ – 4 ಚಮಚ
- ಉದ್ದಿನಬೇಳೆ – 2 ಚಮಚ
- ಜೀರಿಗೆ – 1 ಚಮಚ
- ದನಿಯಾ – 2 ಚಮಚ
- ಬ್ಯಾಡಿಗೆ ಮೆಣಸಿನಕಾಯಿ – 7 ರಿಂದ 8
- ಕೊತ್ತಂಬರಿ ಸೊಪ್ಪು – 1/2 ಬಟ್ಟಲು
- ಹುಣಸೇಹಣ್ಣು – ಅರ್ಧ ನಿಂಬೆ ಗಾತ್ರ
- ಬೆಳ್ಳುಳ್ಳಿ – 4 ಎಸಳುಗಳು
- ತೆಂಗಿನಕಾಯಿ 1/2 ಬಟ್ಟಲು
- ರುಚಿಗೆ ಅನುಗುಣವಾಗಿ ಉಪ್ಪು, ಅರಿಶಿನ ಮತ್ತು ಬೆಲ್ಲ.
ಆಂಧ್ರ ಶೈಲಿಯ ಪುದಿನಾ ಚಟ್ನಿ ತಯಾರಿಸುವ ವಿಧಾನ
- ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಅದಕ್ಕೆ ಕಡ್ಲೇಬೇಳೆ, ಉದ್ದಿನ ಬೇಳೆ, ಜೀರಿಗೆ, ದನಿಯಾ, ಬ್ಯಾಡಗೀ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ
- ಆದಾದ ನಂತರ ಬಾಣಲಿಗೆ, ಪುದೀನಾ, ಬೆಳ್ಳುಳ್ಳಿ ಮತ್ತು ಕೊತ್ತಂಬರೀ ಸೊಪ್ಪು ಸೇರಿಸಿ ಚೆನ್ನಾಗಿ ಹಸೀ ಹೋಗುವವರೆಗೂ ಬಿಡಿಸಿಕೊಂಡು ತಣ್ಣಗಾಗಲು ಬಿಡಿ.
- ಹುರಿದುಕೊಂಡ ಮಿಶ್ರಣ ತಣ್ಣಗಾದ ನಂತರ ಅದಕ್ಕೆ ಉಪ್ಪು, ಹುಣಸೇ ಹಣ್ಣು, ಬೆಲ್ಲ ಮತ್ತು ತೆಂಗಿನಕಾಯಿ ತುರಿಯನ್ನು ಸೇರಿಸಿ ನುಣ್ಣಗೆ ರುಬ್ಬಿ ಕೊಳ್ಳಿ
- ಒಂದು ಸಣ್ಣ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಕಾದ ನಂತರ, ಸಾಸಿವೆ ಮತ್ತು ಇಂಗು ಸೇರಿಸಿ ಸಿಡಿಸಿಕೊಂಡು ಅದನ್ನು ರುಬ್ಬಿದ ಮಿಶ್ರಣಕ್ಕೆ ಸೇರಿಸಿದರೆ, ರುಚಿ ರುಚಿಯಾದ ಮಸಾಲಯುಕ್ತ ಆಂದ್ರಾ ಶೈಲಿಯ ಪುದೀನಾ ಚೆಟ್ನಿ ಸಿದ್ಧ.
ಅತ್ಯಂತ ಸಾಂಪ್ರದಾಯಿಕ ಮಸಾಲೆಯುಕ್ತ ಆರೋಗ್ಯಕರ ಪುದೀನಾ ಚಟ್ನಿ ದೋಸೆ, ಚಪಾತಿ ಇಡ್ಲಿಯಲ್ಲದೇ ಅನ್ನದ ಜೊತೆಗೆ ಬಿಸಿ ಬಿಸಿ ತುಪ್ಪವನ್ನು ಸೇರಿಸಿಕೊಂಡು ಸವಿಯಲು ಮಜವಾಗಿರುತ್ತದೆ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ಮನದಾಳದ ಮಾತು : ಎಲ್ಲಾ ಕಡೆಯಲ್ಲಿಯೂ ಎಲ್ಲಾ ಸಮಯದಲ್ಲಿಯೂ ಸುಲಭವಾಗಿ ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಪುದೀನಾ ಸೊಪ್ಪಿನಲ್ಲಿ ಆಕ್ರಲಿಕ್ ಆಸಿಡ್, ಕಬ್ಬಿಣ ಸತ್ವ, ವಿಟಮಿನ್ ಎ,ಬಿ,ಸಿ ಸತ್ವಗಳು ಮತ್ತು ರಂಜಕ ಅಧಿಕವಾಗಿರುವುದರಿಂದ ಇದರ ಜ್ಯೂಸ್ ಕುಡಿಯುವುದರಿಂದ ಕೆಮ್ಮು, ನೆಗಡಿ, ಹೊಟ್ಟೆ ಉರಿ, ಅಜೀರ್ಣ ಮತ್ತು ಜಂತುಹುಳಿಗೆ ಉತ್ತಮ ಔಷಧಿಯಾಗಿದೆ. ಅಸಿಡಿಟಿಗೆ ಇದು ರಾಮಬಾಣವಾಗಿದ್ದರೆ, ಅಸ್ತಮಾ ರೋಗಿಗಳು ಈ ಸೊಪ್ಪನ್ನು ಹಸಿಯಾಗಿ ತಿಂದರೆ ಒಳ್ಳೆಯದು. ಇದು ಹಲ್ಲು ಮತ್ತು ಬಾಯಿಯ ದುರ್ಗಂಧವನ್ನು ನಿವಾರಿಸುವುದಲ್ಲದೇ, ಚರ್ಮ ಸಂಬಂಧಿತ ತುರಿಕೆ, ಕಜ್ಜಿ ಮುಂತಾದವುಗಳಿಗೆ ಪುದೀನಾ ರಸದೊಂದಿಗೆ ತುಳಸೀ ರಸ ಮತ್ತು ಅರಿಶಿನ ಸೇರಿಸಿ ಹಚ್ಚಿಕೊಳ್ಳುವ ಮೂಲಕ ನಿವಾರಿಸ ಬಹುದಾಗಿದೆ.
ಈ ಪಾಕ ವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳೀಧರ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು