ಮದುವೆ. ಮುಂಜಿ, ನಾಮಕರಣ ಹೀಗೆ ಯಾವುದೇ ಸಮಾರಂಭಗಳ ಉಟದಲ್ಲಿ ತೊವ್ವೆ ಬಹಳಷ್ಟು ಮಹತ್ವವನ್ನು ಪಡೆದಿರುತ್ತದೆ. ಇಂದು ಅಂತಹ ಸಾಂಪ್ರದಾಯಕವಾದ ಹೀರೇಕಾಯಿ ತೊವ್ವೆ ಮಾಡುವುದನ್ನು ನಮ್ಮ ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಹೀರೇಕಾಯಿ ತೊವ್ವೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ
- ತೊಗರೀ ಬೇಳೆ – 1 ದೊಡ್ಡ ಬಟ್ಟಲು
- ಹೆಸರು ಬೇಳೆ – 1 ಸಣ್ಣ ಬಟ್ಟಲು
- ಜೀರಿಗೆ – 1/2 ಚಮಚ
- ಹಸಿ ಮೆಣಸಿನಕಾಯಿ 4-5
- ಕತ್ತರಿಸಿದ ಮಧ್ಯಮ ಗಾತ್ರದ ಹೀರೇಕಾಯಿ – 1
- ಸಣ್ಣದಾಗಿ ಕತ್ತರಿಸಿದ ಟೋಮ್ಯಾಟೋ – 1
- ತೆಂಗಿನ ಕಾಯಿ ತುರಿ 1 ಬಟ್ಟಲು
- ಸ್ವಲ್ಪ ಕೊತ್ತಂಬರಿ ಸೊಪ್ಪು
- ತುರಿದ ಶುಂಠಿ
- ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ
- ಸಾಸಿವೆ – 1/2 ಚಮಚ
- ಚಿಟುಕಿ ಇಂಗು
- ಒಣ ಮೆಣಸಿನಕಾಯಿ 2-4
- ಸ್ವಲ್ಪ ಕರಿಬೇವಿನ ಸೊಪ್ಪು
- ತುಪ್ಪ – 1 ಚಮಚ
ಹೀರೇಕಾಯಿ ತೊವ್ವೆ ತಯಾರಿಸುವ ವಿಧಾನ
- ಸಿಪ್ಪೆ ಹೆರೆದ ಹೀರೆಕಾಯಿಗಳನ್ನು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿಕೊಂಡು, ಚೆನ್ನಾಗಿ ತೊಳೆದ ತೊಗರೀಬೇಳೆ ಮತ್ತು ಹೆಸರುಬೇಳೆ ಜೊತೆಗೆ ಚಿಟುಕಿ ಅರಿಶಿನದ ಪುಡಿಯನ್ನು ಹಾಕಿ, ಸ್ವಲ್ಪ ನೀರನ್ನು ಬೆರೆಸಿ ಕುಕ್ಕರಿನಲ್ಲಿ ಎರಡು- ಮೂರು ಶಿಳ್ಳೆ ಬರುವ ತನಕ ಬೇಯಿಸಿಕೊಳ್ಳಿ
- ಮಿಕ್ಸಿ ಜಾರಿಗೆ ತೆಂಗಿನ ತುರಿ, ಜೀರಿಗೆ, ಹಸೀಮೆಣಸಿನಕಾಯಿ ಮತ್ತು ಕೊತ್ತಂಬರೀ ಸೊಪ್ಪನ್ನು ಹಾಕಿಕೊಂಡು ಸ್ವಲ್ಪ ನೀರನ್ನು ಬೆರೆಸಿ, ನುಣ್ಣಗೆ ರುಬ್ಬಿಕೊಳ್ಳಿ.
- ದಪ್ಪ ತಳದ ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ಬೇಯಿಸಿಟ್ಟು ಕೊಂಡ ಬೇಳೆಯನ್ನು ಹಾಕಿ ಅದಕ್ಕೆ ರುಬ್ಬಿಕೊಂಡ ಮಿಶ್ರಣದ ಜೊತೆಗೆ, ಕತ್ತರಿಸಿಟ್ಟು ಕೊಂಡಿದ್ದ ಟೋಮ್ಯಾಟೋ ಅಥವಾ ಹುಣಸೇಹಣ್ಣಿನ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಹಸೀ ಹೋಗುವವರೆಗೂ ಕುದಿಸಿಕೊಳ್ಳಿ
- ಒಂದು ಸಣ್ಣ ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಅದು ಕಾದ ನಂತರ ಸಾಸಿವೆ, ಇಂಗು, ಕರಿಬೇವು ಮತ್ತು ಒಣ ಮೆಣಸಿನಕಾಯಿಯ ಒಗ್ಗರಣೆ ಹಾಕಿಕೊಂಡು ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ ಮೂರ್ನಾಲ್ಕು ನಿಮಿಷಗಳಷ್ಟು ಕುದಿಸಿದಲ್ಲಿ ರುಚಿ ರುಚಿಯಾದ ಸಾಂಪ್ರದಾಯಕವಾದ ಹೀರೇಕಾಯಿ ತೊವ್ವೆ ಸವಿಯಲು ಸಿಧ್ಧ.
ಇದನ್ನು ಚಪಾತಿ, ದೋಸೆ, ಪರೋಟ ಅಲ್ಲದೇ, ರಾಗಿ ಮುದ್ದೆ ಮತ್ತು ಅನ್ನದೊಂದಿಗೂ ಕಲೆಸಿಕೊಂಡು ತಿನ್ನಬಹುದಾಗಿದೆ.
ಹೀರೇಕಾಯಿ ತೊವ್ವೆಯನ್ನು ಈ ವಿಡೀಯೋ ಮುಖಾಂತರವೂ ನೋಡಿ ಕಲಿಯಬಹುದಾಗಿದೆ.
ಇನ್ನೇಕೆ ತಡಾ, ನೋಡ್ಕೋಳ್ಳಿ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ಮನದಾಳದ ಮಾತು : ಹೀರೇಕಾಯಿ ಬದಲಾಗಿ ಸಿಹಿ ಕುಂಬಳಕಾಯಿ ಇಲ್ಲವೇ ಪಾಲಾಕ್ ಅಥವಾ ಮೆಂತ್ಯೇ ಸೊಪ್ಪನ್ನು ಬಳಸಿಯೂ ಇದೇ ರೀತಿಯಾದ ಸಾಂಪ್ರದಾಯಕವಾದ ತೊವ್ವೆಯನ್ನು ತಯಾರಿಸಬಹುದಾಗಿದೆ.
ಹೀರೇಕಾಯಿ ಎಲ್ಲಾ ಸಮಯದಲ್ಲಿಯೂ ಮತ್ತು ಎಲ್ಲೆಡೆಯೂ ಸುಲಭವಾಗಿ ಸಿಗುತ್ತದಲ್ಲದೇ, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ, ವಿಟಮಿನ್-ಸಿ, ಸತು, ಕಬ್ಬಿಣಾಂಶ, ರೈಬೋಫ್ಲಾವಿನ್, ಮೆಗ್ನೇಶಿಯಂ, ಥಯಾಮಿನ್ ಹೊಂದಿರುವ ತರಕಾರಿಯಾಗಿದ್ದು ಫ್ಯಾಟ್, ಕೊಲೆಸ್ಟ್ರಾಲ್ ಮತ್ತು ಕ್ಯಾಲೊರಿ ಹೊಂದಿರುವ ಕಾರಣ ತೂಕ ಇಳಿಸಿಕೊಳ್ಳಬಯಸುವವರಿಗೆ ಹೇಳಿ ಮಾಡಿಸಿದ ತರಕಾರಿಯಾಗಿದೆ. ಸಾಕಷ್ಟು ಸೆಲ್ಯುಲೋಸ್ ಮತ್ತು ನೀರಿನಂಶ ಹೊಂದಿದ್ದು, ಮಲಬದ್ಧತೆಯಿಂದ ಪೈಲ್ಸ್ ತಡೆಗಟ್ಟಲು ಸಹಹರಿಸುತ್ತದೆ. ಇನ್ನು ನಿತ್ಯ ಒಂದು ಗ್ಲಾಸ್ ಹೀರೇಕಾಯಿ ಜ್ಯೂಸ್ ಕುಡಿದರೆ ಕಾಮಾಲೆ ಕಡಿಮೆಯಾಗುತ್ತದೆ. ಮಧುಮೇಹ ರೋಗಿಗಳಿಗಳು ಹೀರೇಕಾಯಿಯನ್ನು ಹುಳಿ, ಪಲ್ಯ, ಚಟ್ನಿ ಅಥವಾ ಜ್ಯೂಸ್ ಮಾಡಿಕೊಂಡು ಹೀಗೆ ರೂಪದಲ್ಲಾದರೂ, ಸೇವಿಸಿದರೂ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.