ಧೈರ್ಯಂ  ಸರ್ವತ್ರ ಸಾಧನಂ

ಮುಖಪುಟದ ಮುಖಾಂತರವೇ ಪರಿಚಯವಾದ ಮೂಲತಃ ಮುಧೋಳದವರಾದರೂ ಸದ್ಯ ಕೊಪ್ಪಳದಲ್ಲಿರುವ ಶ್ರೀ ಶಿವಶರಣಪ್ಪ ಬಳಿಗಾರ್ ಅವರು ಕಳೆದ ಮೂರ್ನಾಲ್ಕು ವಾರಗಳಿಂದಲೂ ಸಾಮಾಜಿಕ ಜಾಲ ತಾಣಗಳಲ್ಲಿ ಅಷ್ಟೊಂದು ಕಾಣಸಿಗಲಿಲ್ಲ, ಎನೋ ಕೆಲಸ ಕಾರ್ಯದಲ್ಲಿ ನಿರತರಾಗಿ ಇರಬಹುದೇನೋ ಎಂದು ಕೊಂಡಿದ್ದರೆ ಇಂದು ಬೆಳಿಗ್ಗೆ ಅವರ ಮುಖಪುಟದ ಗೋಡೆಯಲ್ಲಿ ಅವರದ್ದೇ ಲೇಖನ ಓದಿ ಒಂದು ಕಡೆ ಮತ್ತೊಂದೆಡೆ ಸಂತೋಷವಾಯಿತು. ಅವರ ಬರೆದದ್ದನ್ನು ಹಾಗೆಯೇ ಇಲ್ಲಿ ಪ್ರಕಟಿಸುತ್ತಿದ್ದೇನೆ.

ಅವ್ವನಿಗೆ ಕಾಲುಸೆಪ್ಟೆಕ್ ಆದ ಕಾರಣ ಯಲಬುರ್ಗಾ ತಾಲ್ಲೂಕಿನ ಸರಕಾರಿ ಆಸ್ಪತ್ರೆಯಲ್ಲಿ 4-5 ದಿನ ಚಿಕಿತ್ಸೆ ಗಾಗಿ ಉಳಿದಿದ್ದೆ. ಪ್ರತ್ಯೇಕ ಕೊಠಡಿ ಸುರಕ್ಷತೆ ಇತ್ತಾದರೂ, ಅಲ್ಲಿಂದ ಬಂದ ನಂತರ ನನಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿತು.

ಪರೀಕ್ಷೆಗೆ ಕಾರು ತೆಗೆದುಕೊಂಡುಹೋಗಿದ್ದೆ. ಕೊರೊನಾ +ve ರಿಜಲ್ಟ್ ಕೇಳಿ ಒಂದು ಕ್ಷಣ ದಿಗ್ಮೂಢನಾದೆ. ಸಮೀಪದ ಗಿಡದ ಕೆಳಗೆ ಕುಳಿತೆ. ಕಾರು, ಹಣ, ಬಂಧು-ಮಿತ್ರರು ಎಲ್ಲರೂ ಇದ್ದಾರೆ. ಆದರೆ ಈಗ ಯಾರೂ ಇಲ್ಲ. ನಾನು ಒಬ್ಬಂಟಿ ಎಂದೆನಿಸಿತು.

ಕೋವಿಡ್ ಸೆಂಟರ್ ನ ವೈದ್ಯಕೀಯ ಸಲಹೆಗಾರರು ಬೇರೆ ತೊಂದರೆ ಇದ್ದರೆ ಇಲ್ಲಿಯೇ ಆ್ಯಡ್ಮಿಟ್ ಆಗಬಹುದು. ಇಲ್ಲವೇ ಮನೆಯಲ್ಲಿ ಅನುಕೂಲವಿದ್ದಲ್ಲಿ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯಬಹುದು ಎಂದರು.

ಇಷ್ಟರಲ್ಲಾಗಲೇ ಮನೆಗೆ ಫೋನ್ ಮಾಡಿದ್ದೆ. ‌ಮಗಳು ನಕ್ಷತ್ರ ಮನೆಗೆ ಬರಬೇಕೆಂದು ಹಟ ಹಿಡಿದಳು. ಪ್ರತ್ಯೇಕ ಕೋಣೆ ಶೌಚಾಲಯ, ಜಳಕದ ರೂಮ್, ಲಭ್ಯವಿದ್ದರಿಂದ ಮನೆಯಲ್ಲಿಯೇ ಇದ್ದರಾಯಿತೆಂದು ಊರಿಗೆ ಬಂದೆ.

ಕೋವಿಡ್ ಮನೆಯ ಚಿಕಿತ್ಸೆ ಬಹಳ ಸರಳ. ವಿಟ್ಯಾಮಿನ್ ಸಿ ಮಾತ್ರೆ ಚೀಪಲು ,ಜಿಂಕ್ ಮಾತ್ರೆ ಜ್ವರಕ್ಕೆ ಪ್ಯಾರಾಸಿಟೆಮಲ್ ಮಾತ್ರೆ ಹಾಗೂ ಅಜಿತ್ರೋ ಮೈಸಿನ್ .

ಮೊದಲು ದಿನ ಯಾವುದೇ ಬದಲಾವಣೆವಾಗಲಿಲ್ಲ.

ಎರಡನೆಯ ದಿನ ತೀವ್ರವಾದ ಅತಿಸಾರ, ಆಮಶಂಕೆ. ಅದಕ್ಕೆ ಬೇರೆ ಗುಳಿಗೆ. ಹೆಚ್ಚಿನ ನೀರಿನ ಅಂಶ ಖಾಲಿಯಾದರೆ ಕಿಡ್ನಿಗಳು ಮೊದಲು ಹಾಳಾಗುತ್ತದೆ ಎಂದು ಎಚ್ಚರಿಸಿದ ಕಾರಣ, ಎಳೆನೀರು, ORS ನಿರಂತರವಾಗಿ ತೆಗೆದುಕೊಂಡ ಕಾರಣ ಮೂರೇ ದಿನಗಳಲ್ಲಿ ನಿಯಂತ್ರಣಕ್ಕೆ ಬಂತು.

ಇಷ್ಟರಲ್ಲಾಗಲೇ ಜ್ವರದಿಂದ ವಿಟ್ಯಾಮಿನ್ ಸಿ ಮಾತ್ರೆ ಚೀಪಿ ನಾಲಿಗೆ ತನ್ನ ಸತ್ವ ಕಳೆದುಕೊಂಡಿತ್ತು. ಏನೇ ತಿಂದರೂ ರುಚಿಸುತ್ತಿಲ್ಲ. 5 ದಿನ ಮುಗಿಯುವದರೊಳಗೆ ಜ್ವರ ಕಡಿಮೆಯಾದರೂ ತಲೆ ನೋವು ಕಡಿಮೆಯಾಗದ ಕಾರಣ ನಮ್ಮ ಮನೆಯ ಹಳೇ ಚಿಕಿತ್ಸೆಯಾದ, ನೀರನ್ಬು ಚೆನ್ನಾಗಿ ಕಾಯಿಸಿ ಅದಕ್ಕೆ ಜಂಡುಬಾಮ್ ಸೇರಿಸಿ, ತಲೆಯ ಮೇಲೆ ಕಂಬಳಿ ಹೊದ್ದು ಕೊಂಡು, ಬಿಸಿ ಬಿಸಿಯಾದ ಹಬೆಯನ್ನು 3-4 ಸಾರಿ ತೆಗೆದುಕೊಂಡೆ. ಬಂದ ತಲೆ ನೋವೆಲ್ಲಾ ಮಟ್ಯಾಷ್. ಇಂದಿಗೆ 11 ದಿನಗಳಾಗಿವೆ. ಇನ್ನು 3 ದಿನಗಳು ಮನೆಯೊಳಗಿದ್ದರೆ ಹೋಂ ಕ್ವಾರಂಟೈನ್ ಮುಗಿಯುವ ಕಾರಣ ಮತ್ತೆ ಹಿಂದಿನಂತೆ ಎಲ್ಲಾ ಕೆಲಸಕಾರ್ಯಗಳಲ್ಲಿ ತೊಡಗಿ ಕೊಳ್ಳಬಹುದು

ಪ್ರತೀ ದಿನ ಬೆಳಿಗ್ಗೆ ಎದ್ದು ಚುಮು ಚುಮು ಚಳಿಯಲ್ಲಿಯೂ 5 ಕಿ.ಮೀ ನಡೆಗೆ ಮಾಡಿದರೂ ಒಂದು ಕೆಜಿಯೂ ಇಳಿಯದಿದ್ದ ತೂಕ ಈಗ ಇದ್ದಕ್ಕಿದ್ದಂತೆಯೇ ಆರೇ ದಿನಗಳಲ್ಲಿ 5 ಕೆ. ಜಿ ಇಳಿದಿತ್ತು. ಈ ಕಾರಣದಿಂದಲಾದರೂ ತೂಕ ಇಳಿಕೆಯಾಗಿದ್ದು ಒಳ್ಳೆಯದೇ ಆಯುತೆಂದು ಅಂದುಕೊಂಡೆ.

ಕೊರೊನಾ ಬಂದಿರುವುದಕ್ಕೆ ಮೊದಲು ಆತಂಕವೆನಿಸಿದರೂ ನಂತರ ಅದನ್ನು ಎದುರಿಸುವದು ಅನಿವಾರ್ಯ ಹಾಗಾಗಿ ವೈದ್ಯರ ನೇತೃತ್ವದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಮತ್ತು ವಿಶ್ರಾಂತಿಯೇ ಮದ್ದು ಎಂಬುದು ಮನವರಿಕೆಯಾಗಿತ್ತು

ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುವಿರಾದರೇ, ಮನೆಯ ಸದಸ್ಯರಿಂದ ಅಂತರ ಕಾಪಾಡಿಕೊಳ್ಳುವದು ಒಳಿತು. ಪ್ರತ್ಯೇಕ ಕೋಣೆ, ಊಟದ ತಟ್ಟೆ, ಲೋಟ ಮತ್ತು ಸ್ವತಃ ಖುದ್ದಾಗಿ ಬಟ್ಟೆಗಳನ್ನು ಒಗೆದುಕೊಳ್ಳುವುದು ಉತ್ತಮ.

ಕೊನೆಯದಾಗಿ ತಾಯಿತಂದೆ ನಮಗೆ ಜನ್ಮ ನೀಡಿದರು ಈಗ ಎರಡನೇ ತಾಯಿಯಾಗಿ ನನಗೆ ನೋಡಿಕೊಂಡದ್ದು ನನ್ನ ಜೀವನ ಸಂಗಾತಿ.ಅವಳಿಗೆ ಋಣಿಯಾಗಿರಬೇಕು.

ಗೆಳೆಯ ಬಳಿಗಾರ್ ಅವರು ಕೋವಿಡ್ ಮಹಾಮಾರಿಗೆ ತುತ್ತಾಗಿದ್ದ ವಿಷಯ ಕೇಳಿ ಬೇಸರವಾದರೂ, ತಮ್ಮ ಧೈರ್ಯತನದಿಂದ ಮನೆಯಲ್ಲಿಯೇ ಅದಕ್ಕೆ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಾದದ್ದು ಮತ್ತು ಅವರ ಕಡೆಯ ಸಾಲು ಅಮ್ಮ ಮೊದಲ ಬಾರಿ ಜನ್ಮ ಕೊಟ್ಟರೇ ಎರಡನೆಯ ಬಾರಿ ಪುನರ್ಜನ್ಮವನ್ನು ಕೈಹಿಡಿದ ಮಡದಿ ಕೊಟ್ಟಳು ಎಂದು ಆಪ್ಯಾಯಮಾನವಾಗಿ ಹೇಳಿಕೊಂಡಿದ್ದು ಅವರ ಬಗ್ಗೆ ಇದ್ದ ಗೌರವವನ್ನು ಮತ್ತಷ್ಟೂ ಹೆಚ್ಚಿಸಿತು ಎಂದರೂ ತಪ್ಪಾಗಲಾರದು

ನಿಜ ಹೇಳ ಬೇಕೆಂದರೆ, ಪ್ರಪಂಚಾದ್ಯಂತ ಹರಡಿರುವ ಈ ಕೋವಿಡ್ ಮಹಾಮಾರಿಗೆ ಅಷ್ಟೇನು ಭಯ ಪಡುವ ಅಗತ್ಯವಿಲ್ಲ. ಹಾವಿ ಕಡಿದು, ಹಾವಿನ ವಿಷ ಏರಿ ಸಾಯುವುದಕ್ಕಿಂತಲೂ, ಹಾವು ಕಡಿದ ಭಯಕ್ಕೇ ಬಹಳಷ್ಟು ಮಂದಿ ಮರಣ ಹೊಂದುವಂತೆ, ಕರೋನಾ ವೈರಸ್ಸಿಗಿಂಗಲೂ, ಅದು ಬಂದಿರುವ ಭಯಕ್ಕೇ ಸಾಯುವವರೇ ಹೆಚ್ಚಾಗಿದ್ದಾರೆ.

ಕೆಲ ವಾರಗಳ ಹಿಂದೆ ನಮ್ಮ ಸಂಬಂಧೀಕರೊಬ್ಬರಿಗೆ ಅಚಾನಕ್ಕಾಗಿ ಜ್ವರ ಬಂದ ಕಾರಣ, ಯಾವುದಕ್ಕೂ ಇರಲೀ ಎಂದು ಕೋವಿಡ್ ಪರೀಕ್ಷೇ ಮಾಡಿಸಿಕೊಂಡರೇ, +ve result ಬರಬೇಕೇ? ಹತ್ತಿರದ ಸರ್ಕಾರೀ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಅವರ ಸಲಹೆಯಂತೆಯೇ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ಆರಂಭದಲ್ಲಿ ನಿರ್ಧರಿಸಿದರಾದರೂ ಒಂದೆರಡು ದಿನಗಳಲ್ಲಿಯೇ ಭಯಕ್ಕೇ ಜ್ವರ ಹೆಚ್ಚಾದ ಪರಿಣಾಮವಾಗಿ ವಿಧಿಯಿಲ್ಲದೇ, ಅವರ ಮನೆಯಿಂದ ಸುಮಾರು ಇಪ್ಪತ್ತು-ಮೂವತ್ತು ಕಿಮೀ. ದೂರದಲ್ಲಿರುವ ಕೋವಿಡ್ ಕೇಂದ್ರಕ್ಕೆ ಸರ್ಕಾರಿ ಆಂಬ್ಯುಲೆನ್ಸ್ ಮಟ ಮಟ ಮಧ್ಯಾಹ್ನ ಕರೆದು ಕೊಂಡು ಹೋಗಿ ಬಿಟ್ಟರು. ಹೋಗಿದ್ದು ಊಟದ ಸಮಯವಾದರೂ ಇವರಿನ್ನೂ ದಾಖಾಲು ಮಾಡಿಸಿಕೊಂಡಿಲ್ಲವಾದ್ದರಿಂದ ಇವರಿಗೆ ಊಟವೂ ಇಲ್ಲ ಏನೂ ಇಲ್ಲ. ಇನ್ನು ಇವರ ದಾಖಲಾತಿ ಮಾಡಿಸಿಕೊಳ್ಳಲು ಕೂರಿಸಿದ್ದ ಎದುರಲ್ಲಿಯೇ ಕೋವಿಡ್ ನಿಂದ ಮೃತ ಪಟ್ಟ ಸುಮಾರು ಹತ್ತಾರು ಹೆಣಗಳನ್ನು ಸಾಲು ಸಾಲಾಗಿ ಜೋಡಿಸಿಟ್ಟಿದ್ದನ್ನು ನೋಡಿಯೇ ಇವರ ಜಂಗಾ ಬಲವೇ ಅಡಗಿ ಹೋಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಮೊದಲ ದಿನವೇ ನೋಡಿದ ಹೆಣಗಳ ರಾಶಿ ಮತ್ತು ಸುತ್ತಮುತ್ತಲಿನ ಅಪರಿಚಿತರನ್ನು ನೋಡಿ ಮೊದಲ ಎರಡ್ಮೂರು ದಿನಗಳು ಬಂದಿದ್ದ ಜ್ವರ ಇಳಿಯಲಿಲ್ಲ ಮತ್ತು ನಾಲಿಗೆಯ ರುಚಿಯೂ ಹೋಗಿದ್ದ ಕಾರಣ ಎನನ್ನೂ ತಿನ್ನದೇ ದೇಹವೂ ಸೊರಗಿ ಹೋಗಿತ್ತು. ನಂತರದ ದಿನಗಳಲ್ಲಿ ಒಬ್ಬೊಬ್ಬರೇ ಪರಿಚಯವಾಗಿ, ಅವರೆಲ್ಲರ ಧೈರ್ಯ್ ಮತ್ತು ಸಾಂತ್ವನದ ಪರಿಣಾಮವಾಗಿ ಹಾಗೂ ಹೀಗು ಜ್ವರ ತಹಬದಿಗೆ ಬಂದು ಮುಂದಿನ ಎರಡು ವಾರಗಳಲ್ಲಿ ಎಲ್ಲವೂ ಸರಿಹೋಗಿ ಮನೆಗೆ ಹೋಗಬೇಕು ಎಂದರೆ, ಚಿಕಿತ್ಸೆಯ ಉಟ್ಟು ಖರ್ಚು 35,000/- ಆಗಿದ್ದು ಸರ್ಕಾರೀ ಆಸ್ಪತ್ರೆಯ ಕಡೆಯಿಂದ ಬಂದಿದ್ದ ಕಾರಣ ಸಬ್ಸಿಡಿ ಹೋಗಿ 7500/- ರೂಗಳನ್ನು ಕಟ್ಟಿ ಎಂದಾಗ ಹೃದಯ ಬಾಯಿಗೆ ಬಂದಿತ್ತು. ಕೇವಲ ಮೂರ್ನಾಲ್ಕು ಬಟ್ಟೆಗಳು ಮತ್ತು ಮೊಬೈಲ್ ತೆಗೆದುಕೊಂಡು ಹೋಗಿದ್ದವರಿಗೆ ಅಷ್ಟೊಂದು ಹಣ ಎಲ್ಲಿಂದ ಬರಬೇಕು. ದಿನಗೂಲಿಯಂತೆ ಅಡುಗೆ ಕೆಲಸ ಮಾಡುತ್ತಿದ್ದ ಅವರಿಗೆ ಕಳೆದ ಐದಾರು ತಿಂಗಳು ಯಾವದೇ ಕೆಲಸವಿಲ್ಲದಿದ್ದ ಕಾರಣ ಅಷ್ಟೊಂದು ಹಣ ಹೊಂಚಿಸುವುದು ತುಸು ಕಷ್ಟ ಕರವೇ ಆಗಿತ್ತು.

ಅದೃಷ್ಟವಶಾತ್ ಆ ಖಾಸಗೀ ಕೋವಿಡ್ ಸೆಂಟರಿನಲ್ಲಿ ಅವರ ಅಡುಗೆ ಕಾಂಟ್ರಾಕ್ಟರ್ ಅವರ ಪರಿಚಯಸ್ತರು ಇದ್ದ ಕಾರಣ ಅವರ ಮೂಲಕ 7500/- ರೂಗಳನ್ನು ಕಟ್ಟಿ, ಅಲ್ಲಿಂದ ಯಾವುದೇ ಆಟೋ ಅಥವಾ ಕ್ಯಾಬ್ ಬಾರದಿರುವ ಕಾರಣ ಒಂದು ಕಿಮೀ ದೂರ ನಡೆದುಕೊಂಡು ಬಂದು ಆಟೋವನ್ನು ಹಿಡಿದುಕೊಂಡು ಮನೆ ಸೇರಿ ಮೂರ್ನಾಲ್ಕು ವಾರಗಳು ಮನೆಯಲ್ಲಿಯೇ ವಿಶ್ರಾಂತಿ ಪಡೆದು ಈಗ ಸರಿ ಹೋಗುತ್ತಿದ್ದಾರೆ.

ಈ ಎರಡೂ ಪ್ರಸಂಗವನ್ನು ನೋಡಿದಾಗ ಗೆಳೆಯ ಬಳಿಗಾರ್ ಅವರು ತಮ್ಮ ಆತ್ಮ ವಿಶ್ವಾಸ ಮತ್ತು ಧೈರ್ಯದಿಂದ ಬಂದ ಸಮಸ್ಯೆಗೆ ಎದೆಗುಂದದೇ ಮನೆಯಲ್ಲಿಯೇ ವೈದ್ಯರ ಸಲಹೆಯೊಂದಿಗೆ ಚಿಕಿತ್ಸೆ ಪಡೆದು ಗುಣ ಮುಖರಾಗಿರುವುದು ಅಭಿನಂದನರ್ಹ ಮತ್ತು ಅನುಕರಣೀಯವೇ ಸರಿ. ಅದಕ್ಕೇ ನಮ್ಮ ಹಿರಿಯರು ಹೇಳಿರುವುದು ಧೈರ್ಯಂ ಸರ್ವತ್ರ ಸಾಧನಂ ಅಲ್ವೇ ?

ಏನಂತೀರೀ?

2 thoughts on “ಧೈರ್ಯಂ  ಸರ್ವತ್ರ ಸಾಧನಂ

  1. ಕೊರೋನಾ ಬಗ್ಗೆ ಆರಂಭದಲ್ಲಿ ಇದ್ದ ಗಾಂಭೀರ್ಯ, ಭಯ, ಆತಂಕ ಈಗ ಮಾಯವಾಗಿರುವುದು ಆಶ್ಚರ್ಯ. ಜನ ಮಾತ್ರವಲ್ಲ ಸರ್ಕಾರಗಳೂ ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಿಪ್ತತೆಯಿಂದಿರುವುದು ಅರ್ಥವಾಗುತ್ತಿಲ್ಲ. ಮೊದಲು ಯಾಕೆ ಅಷ್ಟು ಹೆದರಿಸಿದ್ದು ಈಗ ಯಾಕೆ ಇಷ್ಟು ತಾತ್ಸಾರ ಗೊತ್ತಾಗುತ್ತಿಲ್ಲ. ಮೊದಲಿಗಿಗಿಂತಲೂ ಎರಡರಷ್ಟು ಕೊರೋನಾ ಸೋಂಕಿತರು ಹೆಚ್ಚಾಗುತ್ತಿರುವ ಅಂಕಿಅಂಶ ಬರುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್ ಡೌನ್, ಸೀಲ್ ಡೌನ್ ರದ್ದುಗೊಳಿಸಿ, ಜನರ ಓಡಾಟ, ಸಾರಿಗೆ, ರೈಲು ವ್ಯವಸ್ಥೆ ಮುಂದುವರೆಸಿ ಜನಜೀವನ ಎಂದಿನಂತೆ ಮಾಡಿರುವ ಅರ್ಥವಾದರೂ ಏನು? ಜನರ ಆರೋಗ್ಯದ ಬಗ್ಗೆ ಕಾಳಜಿ ಈಗ ಯಾಕಿಲ್ಲ? ಸರ್ಕಾರಗಳ ಉದ್ದೇಶ ಏನು ಎಂಬುದು ಯಕ್ಷಪ್ರಶ್ನೆಯಾಗಿದೆ.
    ತಾವು ತಿಳಿಸಿರುವಂತೆ ಕೊರೋ‌ನಾ ಬಗ್ಗೆ ದೊಡ್ಡ ಆತಂಕ ಸೃಷ್ಟಿಸಿ ಲಕ್ಷಾಂತರ ರೂಪಾಯಿಗಳನ್ನು ಖಾಸಗಿ ಆಸ್ಪತ್ರೆಗಳು ವಸೂಲು ಮಾಡುತ್ತಿದ್ದರೆ ಕೇವಲ ಮುನ್ನೂರು ಐನೂರು ರೂಪಾಯಿಗಳಿಗೆ ಈ ಕಾಯಿಲೆ ವಾಸಿ ಮಾಡಿಕೊಂಡವರಿದ್ದಾರೆ. ಕೊರೋನಾ ಬಗ್ಗೆ ಭಯಪಡದೆ ಧೈರ್ಯದಿಂದಿದ್ದು ಕೆಲವು ಮುನ್ನೆಚ್ಚರಿಕೆ ಕ್ರಮ ಮತ್ತು ವಿಟಮಿನ್ ಮಾತ್ರೆ ಹಾಗೂ ಪ್ಯಾರಾಸಿಟೆಮಲ್ ತೆಗೆದುಕೊಂಡು ಮನೆಯಲ್ಲೇ ವಾಸಿ ಮಾಡಿಕೊಳ್ಳಲು ಪ್ರಯತ್ನಿಸುವುದು ಸರಿಯಾದ ಮಾರ್ಗ ಅನಿಸುತ್ತದೆ.

    Liked by 1 person

Leave a comment