ಪ್ರತೀ ದಿನ, ಅದೇ ಹುಳಿ ಸಾರು, ಪಲಾವ್ ಇಲ್ಲವೇ ಪುಳಿಯೋಗರೇ ತಿಂದು ಬೇಜಾರಾಗಿದ್ದಲ್ಲಿ , ಅನ್ನದ ಜೊತೆ ಕಲಸಿಕೊಂಡು ತಿನ್ನಬಹುದಾದ ಅತ್ಯಂತ ಆರೋಗ್ಯಕರವಾದ ಮತ್ತು ಥಟ್ ಅಂತ ಮಾಡಬಹುದಾದ ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ ಮಾಡುವುದುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ
- ನೆನಸಿದ ಕಡಲೇಬೇಳೆ – 1 ಬಟ್ಟಲು
- ಮೆಂತ್ಯ ಸೊಪ್ಪು – 1 ಕಟ್ಟು
- ಹಸಿರು ಮೆಣಸಿನಕಾಯಿ – 7 ರಿಂದ 8
- ಜೀರಿಗೆ – 1/2 ಚಮಚ
- ಶುಂಠಿ- ಸಣ್ಣ ತುಂಡು
- ಕರಿಬೇವಿನ ಸೊಪ್ಪು- 5 ರಿಂದ 6 ಎಲೆಗಳು
- ಕೊತಂಬರಿ ಸೊಪ್ಪು – ಸ್ವಲ್ಪ
- ತೆಂಗಿನ ತುರಿ – 1/2 ಬಟ್ಟಲು
- ನಿಂಬೇರಸ – 1/2 ಚಮಚ
- ಸಕ್ಕರೆ – 1/2 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು
- ಸಾಸಿವೆ – 1/2 ಚಮಚ
- ಕಡಲೇಕಾಯಿ ಬೀಜ – 4 ಚಮಚ
- ಚಿಟುಕಿ ಇಂಗು
- ಒಣ ಮೆಣಸಿನಕಾಯಿ 2-4
- ಸ್ವಲ್ಪ ಕರಿಬೇವಿನ ಸೊಪ್ಪು
ಮಟೋಡಿ ಪಲ್ಯ ತಯಾರಿಸುವ ವಿಧಾನ
- ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು, ಕಡಲೇಬೇಳೆ, ಜೀರಿಗೆ, ಶುಂಠಿ, ಕರಿಬೇವು ಮತ್ತು ತೆಂಗಿನ ತುರಿಯೊಂದಿಗೆ ಬೆರಸಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ.
- ರುಬ್ಬಿದ ಮಿಶ್ರಣವನ್ನು ಕುಕ್ಕರಿನಲ್ಲಿ ಎರಡು ಸೀಟಿಗಳು ಬರುವ ವರೆಗೂ ಬೇಯಿಸಿಕೊಳ್ಳಿ
- ಒಂದು ದಪ್ಪ ತಳದ ಬಾಣಲೆಗೆ ಎಣ್ಣೆಯನ್ನು ಹಾಕಿಕೊಂಡು, ಎಣ್ಣೆ ಕಾದ ನಂತರ ಸಾಸಿವೆ ಮತ್ತು ಇಂಗನ್ನು ಹಾಕಿ ಸಿಡಿಸಿಕೊಳ್ಳಿ. ಈಗ ಅದಕ್ಕೆ ಕರೀಬೇವು, ಒಣ ಮೆಣಸಿನಕಾಯಿ ಮತ್ತು ಕಡಲೇಕಾಯಿ ಬೀಜವನ್ನು ಹಾಕಿ ಚೆನ್ನಾಗಿ ಕೆಂಪಗೆ ಬರುವಂತೆ ಹುರಿಯಿರಿ
- ಬಾಣಲೆಯಲ್ಲಿರುವ ಒಗ್ಗರಣೆಗೆ ಬೇಯಿಸಿಕೊಂಡ ಮಿಶ್ರಣವನ್ನು ಸೇರಿಸಿ ಅದಕ್ಕೆ ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮೂರ್ನಾಲ್ಕು ನಿಮಿಷಗಳಷ್ಟು ಕಾಲ ಕುದಿಯಲು ಬಿಡಿ
- ಈಗ ಅದಕ್ಕೆ ನಿಂಬೇ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಕಲೆಸಿ ಸ್ವಲ್ಪ ಕಾಲ ಆರಲು ಬಿಟ್ಟಲ್ಲಿ, ತುಂಬಾ ಆರೋಗ್ಯಕರವಾದ ಮತ್ತು ರುಚಿ ರುಚಿಯಾದ ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ ಸಿದ್ಧ. ಇದಕ್ಕೆ ಪಟೋಲಿ ಪಲ್ಯ ಎಂದೂ ಕರೆಯಲಾಗುತ್ತದೆ.
ದೋಸೆ, ಚಪಾತಿ ಜೊತೆ ನೆಂಚಿಕೊಂಡು ತಿನ್ನ ಬಹುದಾದರೂ, ಬಿಸಿ ಬಿಸಿ ಅನ್ನದ ಜೊತೆ ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಕಲಸಿಕೊಂಡು ಮಾವಿನ ಮಿಡಿ ಉಪ್ಪಿನಕಾಯಿ ಜೊತೆ ಸವಿಯಲು ಬಲು ಮಜವಾಗಿರುತ್ತದೆ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ಮನದಾಳದ ಮಾತು : ನಮ್ಮ ಅಡುಗೆಯಲ್ಲಿ ಮೆಂತ್ಯ ಮತ್ತು ಮೆಂತ್ಯ ಸೊಪ್ಪನ್ನು ವಿಶೇಷವಾಗಿ ಬಳಸುತ್ತಾರೆ. ಮೆಂತ್ಯದ ಹಸೀ ಎಲೆ ಕಹಿ/ಒಗರು ಎನಿಸಿದರೂ ಅದರ ರುಚಿ ಮತ್ತು ಪರಿಮಳದಿಂದಾಗಿ ಎಲ್ಲರೂ ಹಸಿಯಾಗಿಯೇ ತಿನ್ನಲು ಇಷ್ಟ ಪಡುತ್ತಾರೆ.
- ಮೆಂತ್ಯ ಹಸೀ ಎಲೆಗಳು ಬಾಯಿಯ ದುರ್ಗಂಧವನ್ನು ನಿವಾರಿಸುವ ಕಾರಣ ಇದನ್ನು ನೈಸರ್ಗಿಕ ಮೌತ್ ಫ್ರೆಶ್ ನರ್ ಆಗಿ ಸಹ ಉಪಯೋಗಿಬಹುದಾಗಿದೆ
- ಮೆಂತ್ಯ ಎಲೆಗಳನ್ನು ನಿರಂತರವಾಗಿ ಸೇವಿಸುವುದರಿಂದ, ಮಧುಮೇಹ, ಮಲಬದ್ಧತೆ ಮತ್ತು ಮೂತ್ರಪಿಂಡದ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ.
- ಭೇದಿ ಮತ್ತು ಅತಿ ಸಾರದಿಂದ ಬಳಲುತ್ತಿರುವವರಿಗೆ ಕಾಲು ಚಮಚ ಮೆಂತ್ಯವನ್ನು ಅರ್ಧ ಬಟ್ಟಲು ಮೊಸರಿನೊಂದಿಗೆ ಸೇವಿಸಿದಲ್ಲಿ ಥಟ್ ಎಂದು ನಿಂತು ಹೋಗುತ್ತದೆ.
- ಶೀತ ವಾತಾವರಣದಲ್ಲಿ ಉಸಿರಾಟದ ತೊಂದರೆಗಳನ್ನು ಅನುಭವಿಸುತ್ತಿದ್ದವರಿಗೆ ಪ್ರತಿ ದಿನ ಒಣಗಿದ ಮೆಂತ್ಯ ಎಲೆಗಳಿಂದ ಮಾಡಿದ ಚಹಾ ಕುಡಿಸಿದಲ್ಲಿ, ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ.
- ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸಲುವಾಗಿಯೂ ಮೆಂತ್ಯ ಎಲೆಗಳು ಸಹಕಾರಿಯಾಗಿದೆ.
- ಟೈಪ್ 2 ಮಧುಮೇಹಕ್ಕೆ ಮೆಂತ್ಯ ಸೊಪ್ಪಿನ ಪಲ್ಯ ಅಥವಾ ತೊವ್ವೆ ಹೇಳಿಮಾಡಿಸಿದಂತಹ ಔಷಧಿಯಾಗಿದೆ.
ಈ ಪಾಕವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳಿಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು