ಅದೊಂದು ಸಂಪ್ರದಾಯಸ್ಥ ಕುಟುಂಬ. ಅದೊಂದು ದಿನ ಅ ಮನೆಯ ಸಣ್ಣ ವಯಸ್ಸಿನ ಹುಡುಗನೊಬ್ಬ ತನ್ನ ತಂದೆಯನ್ನುದ್ದೇಶಿಸಿ, ಅಪ್ಪಾ, ನಾವು ನಂಬುವ ದೇವರು ದೊಡ್ಡವರಾಗಿರುತ್ತಾರೆ? ಅವರ ಗಾತ್ರವೇನು? ಎಂದು ಮುಗ್ಧತೆಯಿಂದ ಕೇಳುತ್ತಾನೆ. ಮಗನ ಪ್ರಶ್ನೆಯಿಂದ ಕೊಂಚ ಆಶ್ವರ್ಯ ಚಕಿತನಾದ ತಂದೆ ಒಂದು ಕ್ಶಣ ಮೌನವಾಗಿ ಯೋಚಿಸಿ ಇದಕ್ಕೆ ಹೇಗೆ ಉತ್ತರಿಸುವುದು ಎಂದು ನೋಡುತ್ತಿರುವಾಗಲೇ ಆಗಸದಲ್ಲಿ ವಿಮಾನವೊಂದು ಹೋಗುತ್ತಿರುತ್ತದೆ. ಕೂಡಲೇ ಮಗೂ, ಆ ವಿಮಾನದ ಗಾತ್ರ ಎಷ್ಟು ಎಂದು ಹೇಳಬಲ್ಲೆಯಾ ಎಂದು ಪ್ರಶ್ನಿಸುತ್ತಾನೆ.
ಆಗಸದತ್ತ ದಿಟ್ಟಿಸಿ ವಿಮಾನವನ್ನು ನೋಡಿದ ಹುಡುಗ, ಅಪ್ಪಾ ವಿಮಾನ ಬಹಳ ಸಣ್ನದಾಗಿದೆ ಎಂದು ಉತ್ತರಿಸುತ್ತಾನೆ. ಹೌದು ಮಗನೇ ವಿಮಾನ ಸಣ್ಣದಾಗಿಯೇ ಕಾಣಿಸುತ್ತಿದೆ ಎಂದು ಹೇಳಿ ಅಂದು ಸಂಜೆ ತನ್ನ ಮಗನನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನಿಂತಿದ್ದ ವಿಮಾನವನ್ನು ತೋರಿಸುತ್ತಾನೆ. ಈಗ ಹೇಳು ಮಗನೇ ವಿಮಾನದ ಗಾತ್ರ ಎಷ್ಟು ಎಂದು ಕೇಳಿದಾಗ, ನಿಂತಿರುವ ವಿಮಾನವನ್ನು ಹತ್ತಿರದಿಂದ ನೋಡಿದ ಮಗ, ಅಬ್ಬಬ್ಬಾ ವಿಮಾನ ಎಷ್ಟೊಂದು ದೊಡ್ಡದಾಗಿದೆ ಎಂದು ಉದ್ಗರಿಸುತ್ತಾನೆ.
ಆಗ ತಂದೆಯು ಹೌದು ಮಗನೇ, ನೀನು ಬೆಳಗ್ಗೆ ದೇವರ ಬಗ್ಗೆ ಕೇಳಿದ ಪ್ರಶ್ನೆಗೆ ಇದೇ ಉತ್ತರ. ದೇವರ ಗಾತ್ರವು ನಮ್ಮ ಮತ್ತು ದೇವರ ನಡುವಿನ ಅಂತರವನ್ನು ಅವಲಂಭಿಸಿರುತ್ತದೆ. ದೇವರ ಬಳಿ ನಾವು ಎಷ್ಟು ಹತ್ತಿರವಾಗುತ್ತೇವೆಯೋ ಆಗ ನಮಗೆ ತ್ರಿವಿಕ್ರಮನಂತೆ ಕಾಣುತ್ತಾನೆ ಮತ್ತು ನಾವು ಅವನ ಸಾಕ್ಷಾತ್ಕಾರವನ್ನು ಪಡೆಯಬಹುದು.. ಅದೇ ರೀತಿ ನಾವು ಅವನಿಂದ ಎಷ್ಟು ದೂರ ಹೋಗುತ್ತೇವೆಯೋ, ಆಗ ದೇವರೂ ಸಹಾ ನಮ್ಮಿಂದ ಅಷ್ಟೇ ಅಪ್ರಸ್ತುತನಾಗಿ ಬಿಂದುವಾಗಿ ಕಾಣುತ್ತಾನೆ. ಹಾಗಾಗಿ ದೇವರ ಮೇಲೆ ಅಪರಿಮಿತವಾದ ನಂಬಿಕೆ ಇಡೋಣ ಮತ್ತು ಅವನ ಕೃಪೆಗೆ ಪಾತ್ರರಾಗೋಣ ಎಂದು ಹೇಳುತ್ತಾನೆ.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿರುವಂತೆ,
ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ|| ಮಾ ಕರ್ಮಫಲ ಹೇತುರ್ಭೂ || ಮಾ ತೇ ಸಂಗೋಸ್ತ್ವ ಕರ್ಮಣಿ
ನಮ್ಮ ನಮ್ಮ ಕೆಲಸಗಳನ್ನು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಾವು ಮಾಡೋಣ. ಉಳಿದದ್ದನ್ನು ಆ ಭಗವಂತನಿಗೇ ಬಿಡೋಣ.
ನಂಬಿಕೆಯೇ ದೇವರು. ಹಾಗಾಗಿ ದೇವರನ್ನು ನಂಬಿ ಕೆಟ್ಟವರು ಯಾರು ಇಲ್ಲ ಅಲ್ಲವೇ?
ಏನಂತೀರೀ?
ಆತ್ಮೀಯರೊಬ್ಬರು ಕಳುಹಿಸಿದ್ದ ಆಂಗ್ಲ ಸಂದೇಶದ ಭಾವಾನುವಾದ