ಕೊಡುಗೈ ರಾಜು

ಅದು 1998. ನನ್ನ ಮದುವೆಗಾಗಿ ಹೆಣ್ಣು ನೋಡುತ್ತಿದ್ದ ಸಮಯದಲ್ಲಿ ತಮ್ಮ ಮಗಳ ಜಾತಕವನ್ನು ಹಿಡಿದುಕೊಂಡು ಮೊತ್ತ ಮೊದಲ ಬಾರಿಗೆ ಸುಮಾರು 6 ಅಡಿಯಷ್ಟು ಎತ್ತರದ ಸುಂದರ ಮೈಕಟ್ಟಿನ ನಡು ವಯಸ್ಸಿನವರು ನಮ್ಮ ಮನೆಗೆ ಬಂದು ತಮ್ಮನ್ನು ತಾವು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಳ್ಳುತ್ತಾರೆ.

ಒಂದು ಗಂಡಿಗೆ ಒಂದು ಹೆಣ್ಣು ಎಂದು ಹುಟ್ಟಿಸುವಾಗಲೇ ಬ್ರಹ್ಮ ಬರೆದು ಕಳುಹಿಸಿರುತ್ತಾನೆ ಎಂಬಂತೆ ಜಾತಕಗಳೆಲ್ಲವೂ ಕೂಡಿ ಬಂದ ಕಾರಣ, ಅದೇ ಗುರುವಾರ ಸಂಜೆ ನನ್ನ ಜೀವನದಲ್ಲಿಯೇ ಪ್ರಪ್ರಥಮವಾಗಿ ಮತ್ತು ಅಧಿಕೃತವಾಗಿ ಹೆಣ್ಣು ನೋಡುವ ಶಾಸ್ತ್ರಕ್ಕೆ ಅವರ ಮನೆಗೆ ಹೋದಾಗ, ನಾನು ಈಗ ಮಾಡುತ್ತಿರುವ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಶನಿವಾರವೇ ಕೊನೆಯ ದಿನ. ಸೋಮವಾರದಿಂದ ನಾನು ಈಗಾಗಲೇ ನನ್ನ ಸ್ನೇಹಿತರ ಜೊತೆ ಸೇರಿ ಆರಂಭಿಸಿರುವ ಕಂಪ್ಯೂಟರ್ ಸಂಬಂಧಿತ ವ್ಯವಹಾರದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ನೇರವಾಗಿ ಹೇಳಿದಾಗ, ನಾವು ನಿಮ್ಮ ಕುಟುಂಬ, ನಿಮ್ಮ ವಿದ್ಯಾರ್ಹತೆ, ಗುಣ ಮತ್ತು ನಡತೆಯನ್ನು ನೋಡಿ ನಮ್ಮ ಮಗಳನ್ನು ನಿಮಗೆ ಕೊಡಲು ಸಿದ್ದರಾಗಿದ್ದೇವೆಯೇ ಹೊರತು ನೀವು ಮಾಡುವ ಕೆಲಸಕ್ಕಲ್ಲ. ವಿದ್ಯೆ ಇದ್ದಲ್ಲಿ ಇಂತಹ ಹತ್ತಾರು ಕೆಲಸಗಳು ಸಿಗುತ್ತದೆ. ನಿಮಗೆ ನಮ್ಮ ಮಗಳು ಇಷ್ಟವಾಗಿದ್ದಲ್ಲಿ ಸಂಬಂಧ ಮುಂದುವರೆಸೋಣ. ಇಲ್ಲದಿದ್ದಲ್ಲಿ ನಮಗೆ ಮತ್ತೊಬ್ಬ ಒಳ್ಳೆಯ ಸ್ನೇಹಿತರು ಪರಿಚಯವಾದರು ಎಂದು ಕೊಂಡು ಸ್ನೇಹಿತರಾಗಿ ಇರೋಣ ಎಂದು ಕಡ್ದಿ ಮುರಿದ ಹಾಗೆ ಹೇಳಿದ ವ್ಯಕ್ತಿಯೇ ಶ್ರೀಯುತ ರಾಜುರವರು.

ಹೀಗೆ ಒಳಗೊಂದು ಮತ್ತು ಹೊರಗೊಂದು ಮಾತನಾಡದೇ ನೇರವಾಗಿ ಮನಸ್ಸಿಗೆ ಬಂದದ್ದನ್ನು ನೇರ ದಿಟ್ಟ ಮತ್ತು ನಿರಂತರ ಎನ್ನುವಂತೆ ಮಾತನಾಡುವ ವ್ಯಕ್ತಿತ್ವದಿಂದಾಗಿಯೇ ನಮ್ಮ ಸಂಬಂಧ ಮುಂದುವರೆಸಿ, ಅವರ ಮಗಳನ್ನು ನಮ್ಮ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳುವ ಮೂಲಕ ಅವರ ಅಳಿಯನಾಗುವ ಸೌಭಾಗ್ಯ ನನ್ನದಾಗುತ್ತದೆ.

ಪೊಲೀಸ್ ಇಲಾಖೆಯ ಶಿಸ್ತು, ಸಂಯಮ ಮತ್ತು ಸಮಯಪ್ರಜ್ಞೆಯನ್ನು ಇಂದಿಗೂ ಮೈಗೂಡಿಸಿಕೊಂಡಿರುವ ನನಗೆ ಹೆಣ್ಣು ಕೊಟ್ಟ ಮಾವನವರು ನುಡಿದಂತೆ ನಡೆಯುವ ಮತ್ತು ನಡೆಯುವುದಕ್ಕಾಗುವುದನ್ನೇ ನುಡಿಯುವಂತಹ ವ್ಯಕ್ತಿ. ಯಾವುದೇ ಒಂದು ಕೆಲಸವನ್ನು ಒಪ್ಪಿಕೊಂಡಲ್ಲಿ ಅದು 100ಕ್ಕೆ 100ರಷ್ಟು ಪರಿಪೂರ್ಣವಾಗಿ ಮಾಡಲೇ ಬೇಕು ಎಂದು ಬಯಸುವ ಮತ್ತು ಮಾಡಿ ತೋರಿಸುವ ಛಾತಿಯ, ಒಂದು ರೀತಿಯ ಮಿಸ್ಟರ್ ಪರ್ಫೆಕ್ಟ್ ಎಂದರೂ ತಪ್ಪಾಗಲಾರದು.

ಅವರ ಉಳಿದೆಲ್ಲದ್ದಕ್ಕಿಂತಲೂ ಅವರಲ್ಲಿ ನನಗೆ ಇಷ್ಟವಾದ ಗುಣವೆಂದರೆ ಅವರ ಹೆಂಗರಳು ಮತ್ತು ದೈವಭಕ್ತಿ . ಯಾರಾದರೂ ಕಷ್ಟದಲ್ಲಿ ಇದ್ದಾರೆ ಎಂದು ತಿಳಿದಾ ಕ್ಷಣವೇ ಥಟ್ ಅಂತಾ ತಮ್ಮ ಕೈಲಾದ ಸಹಾಯ ಮಾಡುವುದರಲ್ಲಿ ಎತ್ತಿದ ಕೈ. ಬಲಗೈಯ್ಯಲ್ಲಿ ಕೊಟ್ಟದ್ದು ಎಡಗೈಯ್ಯಿಗೂ ಗೊತ್ತಾಗಬಾರದು ಎನ್ನುವಂತೆ ತಾನು ಮಾಡಿದ ಸಹಾಯವನ್ನು ಎಲ್ಲಿಯೂ ಎಂದೂ ಎತ್ತಿ ಆಡಿ ತೋರಿಸದ ಮತ್ತು ಅದಕ್ಕೆ ಅವರಿಂದ ಪ್ರತಿ ಸಹಾಯವನ್ನೂ ಬಯಸದ ವ್ಯಕ್ತಿ.

ಧರ್ಮಸ್ಥಳ, ತಿರುಪತಿ, ಕುಕ್ಕೇ ಸುಬ್ರಹ್ಮಣ್ಯ, ಘಾಟೀ ಸುಬ್ರಹ್ಮಣ್ಯ, ಶೃಂಗೇರಿ, ಕೊಲ್ಲೂರು, ಹೊರನಾಡು, ಗೊರವನಳ್ಳಿ ಈ ರೀತಿಯಾಗಿ ಯಾವುದೇ ದೇವಸ್ಥಾನಗಳಿಗೆ ಹೋದರೂ ಅಲ್ಲೆಲ್ಲಾ ತಮ್ಮ ಮತ್ತು ತಮ್ಮ ಕುಟುಂಬದವರ ಶಾಶ್ವತ ಪೂಜೆಗಳಿಗೆ ಪುದುವೆಟ್ಟು ಇಟ್ಟಿರುವಂತಹ ಅಪಾರ ದೈವ ಭಕ್ತರು.

ಅವರ ಜೊತೆ ಈ ಕ್ಷೇತ್ರಗಳಿಗೆ ಹೋದಾಗ, ಅವರ ಹೆಸರಿಗೆ ಅನ್ವರ್ಥದಂತೆಯೇ ಅವರಿಗೆ ದೊರೆಯುವ ರಾಜ ಮರ್ಯಾದೆಯನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದವರಿಗೇ ಗೊತ್ತು. ಎಂತಹ ಸಮಯದಲ್ಲೇ ಆಗಲೀ ಈ ಎಲ್ಲಾ ದೇವಸ್ಥಾನಗಳಲ್ಲಿಯೂ ಸರದಿಯ ಸಾಲಿನಲ್ಲಿ ನಿಲ್ಲಿಸದೇ, ನೇರವಾಗಿ, ಅಚ್ಚುಕಟ್ಟಾಗಿ ದೇವರ ದರ್ಶನ ಮಾಡಿಸಿ, ವಿವಿಐಪಿಗಳ ರೀತಿಯಲ್ಲಿ ದೇವಸ್ಥಾನದ ಪ್ರಸಾದವನ್ನು ಹಾಕಿಸುವ ಪರಿ ಬಣ್ಣಿಸಲದಳ.

1950, ಸೆಪ್ಟಂಬರ್ 21 ರಂದು ದೊಡ್ಬಬಳ್ಳಾಪುರದ ಮಧ್ಯಮವರ್ಗದ ಪೊಲೀಸ್ ಕುಟುಂಬವೊಂದರ ಕಿರಿಯ ಪುತ್ರನಾಗಿ ಜನಿಸಿದ ಶ್ರೀಯುತರಿಗೆ ಅವರ ಪೋಷಕರು ಇಟ್ಟ ಹೆಸರು ರಾಜು. ಹೆಸರಿಗೆ ತಕ್ಕಂತೆಯೇ ರಾಜನಾಗಿಯೇ ಐದು ಜನ ಅಕ್ಕಂದಿರು ಮತ್ತು ಒಬ್ಬ ಅಣ್ಣನ ಮುದ್ದಿನ ತಮ್ಮನಾಗಿ ಬೆಳೆದವರು. ಓದಿನಲ್ಲಿ ಚುರುಕಾಗಿದ್ದರೂ, ಚಿಕ್ಕ ವಯಸ್ಸಿನಲ್ಲಿಯೇ ತಂದೆಯವರನ್ನು ಕಳೆದುಕೊಂಡ ಪರಿಣಾಮ ಪಿಯೂಸಿಗೇ ತಮ್ಮ ವಿದ್ಯಾಭ್ಯಾಸ ನಿಲ್ಲಿಸಿ ದೊಡ್ಡಬಳ್ಳಾಪುರದ ಸಾಹುಕಾರರೊಬ್ಬರ ಕೈಮಗ್ಗದ ಕಾರ್ಖಾನೆಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡು ಚಿಕ್ಕವಯಸ್ಸಿನಲ್ಲಿಯೇ ಅಕ್ಕನ ಸಂಬಂಧೀಕರಾಗಿದ್ದ ಶ್ರೀಮತಿ. ಗಾಯತ್ರಿಯವರನ್ನು ಮದುವೆಯಾಗಿ ಆರತಿಗೊಬ್ಬಳು ಮಗಳು ಮಂಜುಳ ಮತ್ತು ಕೀರ್ತಿಗೊಬ್ಬ ಮಗ ಮಂಜುನಾಥರ ತಂದೆಯಾಗುತ್ತಾರೆ.

ಸಂಸಾರ ದೊಡ್ಡದಾಗುತ್ತಿದ್ದಂತೆಯೇ ಬರುತ್ತಿರುವ ಸಂಬಳ ಸಾಲದ ಕಾರಣ, ಆತ್ಮೀಯರೊಬ್ಬರ ಸಲಹೆಯಂತೆ, ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅವರ ತಂದೆಯ ಅನುಕಂಪದ ಆಧಾರಿತದ ಕೆಲಸಕ್ಕೆ ಪ್ರಯತ್ನಿಸಿ ತಂದೆಯಂತೆಯೇ ಪೊಲೀಸ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡು ಪೊಲೀಸ್ ರಾಜು ಇನ್ನು ಕೆಲವರ ಪ್ರೀತಿಯ ಪೋಲಿಸಪ್ಪಾ ಎಂದು ಕರೆಸಿಕೊಳ್ಳುತ್ತಾರೆ. ತಮ್ಮ ಮಕ್ಕಳು ತಮ್ಮ ಪೊಲೀಸ್ ಇಲಾಖೆಯನ್ನು ಎಂದೂ ದುರುಪಯೋಗ ಪಡಿಸಿಕೊಳ್ಳದಂತೆ ನೋಡಿಕೊಂಡು, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿ ಅವರವರ ಸಾಮರ್ಥ್ಯದ ಮೇರೆಗೆ ಮಗಳು ಸರ್ಕಾರೀ ಕೆಲಸ, ಮಗ ದೂರದ ಅಮೇರಿಕಾದಲ್ಲಿ ಎಂ.ಎಸ್. ಮುಗಿಸಿ ಕೈತುಂಬಾ ಸಂಬಳದ ಕೆಲಸ ಗಿಟ್ಟಿಸುವಂತೆ ಮಾಡುವುದರಲ್ಲಿ ಯಶಸ್ವಿಯನ್ನು ಕಾಣುತ್ತಾರೆ.

ಮಗಳು ಮತ್ತು ಮಗನಿಗೆ ಅನುರೂಪದ ಅಳಿಯ ಮತ್ತು ಸೊಸೆಯನ್ನು ಹುಡುಕಿ ಮದುವೆ ಮಾಡಿಸಿ, ಸೃಷ್ಟಿ, ಸಾಗರರಿಗೆ ಮುದ್ದಿನ ಅಜ್ಜನಾಗಿ ಮತ್ತು ಸಮರ್ಥನಿಗೆ ಪ್ರೀತಿಯ ತಾತನಾಗಿ ನೆಮ್ಮದಿಯಿಂದ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ಇದಿಷ್ಟು ರಾಜು ಅವರ ವ್ಯಕ್ತಿ ಪರಿಚಯವಾದರೆ ಅವರ ವ್ಯಕ್ತಿತ್ವ ಎಲೆಮರೆಕಾಯಿಯಂತಹದ್ದು. ಸಾಧಾರಣವಾಗಿ ಯಾರೇ ಆಗಲಿ ದಾನ ಅಥವಾ ಸಹಾಯ ಮಾಡಲು ಇಚ್ಚಿಸಿದಲ್ಲಿ, ತಮ್ಮ ಬಳಿ ಹೆಚ್ಚಾಗಿರುವುದನ್ನು ದಾನ ಮಾಡುವುದಾಗಲೀ ಸಹಾಯ ಮಾಡುವುದು ಸಹಜವಾದರೇ, ರಾಜು ಅವರ ವ್ಯಕ್ತಿತ್ವ ಅದಕ್ಕೆ ತದ್ವಿರುದ್ಧ. ತಮ್ಮ ಬಳಿ ಇದೆಯೋ ಇಲ್ಲವೋ ಅದನ್ನು ಯೋಚಿಸದೇ ಸಹಾಯ ಮಾಡುವ ಕೊಡುಗೈ ದಾನಿ ಎಂದರೂ ಅತಿಶಯೋಕ್ತಿಯೇನಲ್ಲ.

ಚಿಕ್ಕ ವಯಸ್ಸಿನಲ್ಲಿಯೇ ಅಪ್ಪನನ್ನು ಕಳೆದುಕೊಂಡು ಕಷ್ಟದ ಕಣ್ಣೀರಿನಲ್ಲಿಯೇ ಬೆಳೆದ ಅವರಿಗೆ ಹಣ ಮತ್ತು ಆನ್ನದ ಮಹತ್ವ ಚೆನ್ನಾಗಿ ಅರಿವಿರುವ ಕಾರಣ ತಾವು ಸೋಮವಾರ, ಗುರುವಾರ, ಶನಿವಾರ ಒಪ್ಪತ್ತು ಊಟ ಮಾಡಿದರೂ ಅವರ ಮನೆಗೆ ಹೋದವರಿಗಾಗಲೀ ಅಥವಾ ಅವರು ಜೊತೆ ಪ್ರವಾಸಕ್ಕೆ ಹೋದಾಗ ತಮ್ಮ ಜೊತೆ ಬಂದಿರುವವರಿಗೆ ಮನಸೋ ಇಚ್ಚೆ ಉಣ ಬಡಿಸಿದರೇ ಅವರಿಗೆ ಸಮಾಧಾನ. ಇಂದಿಗೂ ಅವರ ಮನೆಯಲ್ಲಿ ಕೆಲಸ ಮಾಡುವವರಿಗೆ ಬಿಸಿ ಬಿಸಿಯಾದ ತಿಂಡಿ ಕೊಟ್ಟ ಮೇಲೆಯೇ ದಂಪತಿಗಳಿಬ್ಬರೂ ನೆಮ್ಮದಿಯಾಗಿ ಊಟ ತಿಂಡಿ ಮಾಡುವುದು.

ಇನ್ನು ಅವರ ಮನೆಗೆಲಸದವಳಿಗೆ, ತೋಟದ ಮಾಲಿ, ಹಾಲಿನಂಗಡಿ, ತರಕಾರಿಯಂಗಡಿ, ದರ್ಜಿ, ಮೆಡಿಕಲ್ ಸ್ಟೋರ್ ಕಡೆಗೆ ಇಸ್ತ್ರಿಯವ ಹೀಗೇ ಅವರೊಂದಿಗೆ ವ್ಯವಹರಿಸುವವರೆಲ್ಲರಿಗೂ ಇವರೇ ಒಂದು ರೀತಿಯ ಎಟಿಎಂ. ಇನ್ನು ಸ್ವಂತ ಮಕ್ಕಳು ಮತ್ತು ಅಣ್ಣ ಅಥವಾ ಅಕ್ಕನ ಮಕ್ಕಳು ಎಂದು ಬೇಧ ಭಾವ ತೋರದೇ ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುವ ರೀತಿ ನಿಜಕ್ಕೂ ಅಭಿನಂದನಾರ್ಹವೇ ಸರಿ.

ಅವರ ಧರ್ಮ ಪತ್ನಿ ಮತ್ತು ಅವರ ಮಗಳು ಇಬ್ಬರನ್ನೂ ತಮ್ಮ ಎರಡು ಕಣ್ಗಳಂತೆ ಅತ್ಯಂತ ಜತನದಿಂದ ನೋಡಿಕೊಳ್ಳುವ ಪರಿ ಎಂತಹವರನ್ನೂ ಮೂಗಿನ ಮೇಲೆ ಬೆರಳಿಡಿಸುತ್ತದೆ. ಒಬ್ಬ ಗಂಡನಾಗಿ ಮತ್ತು ತಂದೆಯಾಗಿ, ಅವರಂತೆ ಹೆಂಡತಿಯನ್ನು ಪ್ರೀತಿಸುವ ಮತ್ತು ಅವರಂತೆ ಮಗಳನ್ನು ಮುದ್ದಿಸುವ ಬೇರೇ ವ್ಯಕ್ತಿಯನ್ನು ನಾನು ನೋಡಿಲ್ಲ. ಪ್ರತಿಯೊಂದರಲ್ಲೂ ಇಬ್ಬರಿಗೂ ಸಮಾನ ರೀತಿಯಲ್ಲಿಯೇ ನೋಡಿಕೊಳ್ಳುವ ಗುಣ ನಿಜಕ್ಕೂ ಅನುಕರಣಿಯ.

ಸಾಮಾನ್ಯವಾಗಿ ವಯಸ್ಸಾದಂತೆಲ್ಲಾ ಜನ ಹೊಸತನಕ್ಕೆ ತಮ್ಮನ್ನು ತಾವು ಅಳವಡಿಸಿಕೊಳ್ಳಲು ಇಚ್ಚಿಸುವುದಿಲ್ಲ. ಆದರೆ ನಮ್ಮ ಮಾವನವರು ಪ್ರತೀ ಕ್ಷಣವೂ ಏನಾದರೂ ಹೊಸದನ್ನು ಕಲಿತುಕೊಳ್ಳುವ ತುಡಿತದವರು. ತಮ್ಮ ಮಕ್ಕಳ ಜೊತೆ ಟೈಪಿಂಗ್ ಕಲಿತುಕೊಂಡದ್ದು ಮುಂದೆ ಅಮೇರಿಕಾದಲ್ಲಿರುವ ಮಗನೊಂದಿಗೆ ಕಂಪ್ಯೂಟರಿನ ಮೂಲಕ ನಿರಂತರ ಸಂಪರ್ಕ ಹೊಂದಲು ಸಹಕಾರಿಯಾಯಿತು. ಬಾಲ್ಯದಿಂದಲೂ ತಮ್ಮಲ್ಲಿ ಅದುಮಿಟ್ಟು ಕೊಂಡಿದ್ದ ಸಂಗೀತಾಸಕ್ತಿಯನ್ನು ನಿವೃತ್ತರಾದ ಮೇಲೆ ತಮ್ಮ ಮಕ್ಕಳ ಗುರುಗಳಿಂದ ಕಲಿತು, ಅದೇ ಗುರುಗಳೊಂದಿಗೆ ತಿರುಪತಿಯಲ್ಲಿಯೂ, ಕಛೇರಿ ನೀಡುವಂತವರಾಗುತ್ತಾರೆ ಎಂದರೆ ಅವರಲ್ಲಿರುವ ಕಲಿಕಾ ಶ್ರದ್ಧೆಯನ್ನು ತೋರಿಸುತ್ತದೆ. ಹಾಡಲು ಶುರು ಹಚ್ಚಿಕೊಂಡರೆ, ಪಕ್ಕಾ ಘಂಟಸಾಲರ ಅಪರಾವತಾರ. ಇಂದಿಗೂ ಸಹಾ, ದೇವರ ಮೇಲೆ ಹೂವು ತಪ್ಪಿದರೂ ಅವರು ವಾಕಿಂಗ್ ಆಥವಾ ಲಘು ವ್ಯಾಯಮಾವನ್ನು ತಪ್ಪಿಸುವುದಿಲ್ಲ. ಚಳಿ, ಮಳೆ, ಗಾಳಿ ಎಂದು ನೆಪವೊಡ್ಡದೇ ಎಲ್ಲೇ ಇರಲಿ, ಪ್ರತೀ ದಿನವೂ ಹತ್ತು ಸಾವಿರ ಹೆಜ್ಜೆಗಳು ಅಂದರೆ ಸರಿ ಸುಮಾರು ಏಳೆಂಟು ಕಿ.ಮೀ ದೂರವನ್ನು ದಂಪತಿಗಳಿಬ್ಬರೂ ನಡೆಯುವ ಮೂಲಕ ತಮ್ಮ ದೇಹವನ್ನು ಯಾವುದೇ ರೀತಿಯ ರೋಗ ರುಜಿನಗಳಿಲ್ಲದೇ ಕಾಪಾಡಿಕೊಂಡಿರುವುದು ಅನುಕರಣಿಯವಾದ ಸಂಗತಿಯಾಗಿದೆ.

ನೋಟು ಅಮಾನ್ಯೀಕರಣವಾದ ಮೇಲಂತೂ ಸಂಪೂರ್ಣವಾಗಿ ತಮ್ಮನ್ನು ತಾವು ಡಿಜಿಟಲ್ ಆವೃತ್ತಿಗೆ ಬದಲಾಯಿಸಿಕೊಂಡು ತಮ್ಮ ಬಹುತೇಕ ವ್ಯವಹಾರಗಳೆಲ್ಲವೂ ಮೊಬೈಲಿನಲ್ಲಿಯೇ ಮಾಡಿ ಮುಗಿಸುವ ಚತುರ. ಆರ್ಥಿಕ ವ್ಯವಹಾರಗಳಲ್ಲಿ ಅತ್ಯಂತ ಚುರುಕಾಗಿರುವ ಕಾರಣ ಅವರ ಬಳಿ ಹಣವನ್ನು ಹೇಗೆ ಉಳಿಸ ಬೇಕು ಮತ್ತು ಉಳಿಸಿದ ಹಣದಿಂದಲೇ ಹೆಚ್ಚಿನ ಹಣವನ್ನು ಹೇಗೆ ಗಳಿಸಬೇಕು ಎಂಬುದನ್ನು ಕಲಿತುಕೊಳ್ಳಬೇಕು. ಈ ಕಾರಣದಿಂದಾಗಿಯೇ, ನಾನು ಅವರ ಮಗಳನ್ನು ಮದುವೆಯಾದಾರಿಂದಲೂ ಬ್ಯಾಂಕಿನ ಮುಖವನ್ನೇ ನೋಡುವ ಪ್ರಮೇಯವೇ ಬಂದಿಲ್ಲ. ನನ್ನೆಲ್ಲಾ ಬ್ಯಾಂಕಿನ ಹಣಕಾಸಿನ ವಹಿವಾಟುಗಳು ಮತ್ತು ವ್ಯವಹಾರಗಳನ್ನು ಇದುವರೆವಿಗೂ ಅವರೇ ನಿಭಾಯಿಸುತ್ತಿದ್ದಾರೆ. ಅಕಾಲಿಕವಾಗಿ ಅಪ್ಪಾ-ಅಮ್ಮನನ್ನು ಕಳೆದುಕೊಂಡು ತಬ್ಬಲಿಯಾಗಿದ್ದ ನನಗೆ ಆ ತಬ್ಬಲಿ ತನವನ್ನು ಕಾಡದಂತೆ ನೋಡಿಕೊಂಡಿರುವ ನನ್ನ ಅತ್ತೇ ಮಾವನಿಗೆ ನಾನು ನಾನು ಸದಾಕಾಲವೂ, ಚಿರ ಋಣಿಯಾಗಿರುತ್ತೇನೆ.

ಕೆಲವು ದಿನಗಳ ಹಿಂದೇ ಹೀಗೇ ಲೋಕಾಭಿರಾಮವಾಗಿ ಹರಟುತ್ತಿದ್ದಾಗ, ನನಗೆ ವಯಸ್ಸಾಯ್ತು. ನನ್ನ ಜೀವನದಲ್ಲಿ ಎಲ್ಲವನ್ನೂ ಅನುಭವಿಸಿದ್ದೇನೆ. ಇನ್ನು ನನ್ನ ಮೊಮ್ಮಗಳ ಮದುವೆಯೊಂದಕ್ಕಾಗಿ ಕಾಯುತ್ತಿದ್ದೇನೆ ಎಂದು ಭಾವನಾತ್ಮಕವಾಗಿ ಹೇಳಿದಾಗ, ಅಯ್ಯೋ ಬಿಡ್ತು ಅನ್ನಿ. ಹಾಗೇಕೆ ಹೇಳುತ್ತೀರಿ, ನಿಮಗೆಂತಹ ವಯಸ್ಸಾಗಿದೆ. ಇನ್ನೂ ಮೊಮ್ಮಗಳು ಮತ್ತು ಇಬ್ಬರು ಮೊಮ್ಮಕ್ಕಳ ಮದುವೆಯನ್ನು ನೋಡಿಕೊಂಡು ನೆಮ್ಮದಿಂದ ಇರಿ ಎಂದಾಗ, ಇಲ್ಲಾ ಅತಿಯಾಸೆ ಪಡಬಾರದು. ಇನ್ನು ಐದು ವರ್ಷಗಳಲ್ಲಿ ಮೊಮ್ಮಗಳ ಮದುವೆಯಾಗಬಹುದು ಅಲ್ಲಿಂದ ಇನ್ನೈದು ವರ್ಷಕ್ಕೆ ಸಾಗರ್ ಅಲ್ಲಿಂದ ಐದು ವರ್ಷಕ್ಕೆ ಸಮರ್ಥ್ ಮದುವೆ. ಈಗಿನ ಸಾಂಕ್ರಾಮಿಕ ರೋಗದ ಕಾಲದಲ್ಲಿ ಇನ್ನು ಹತ್ತು ಹದಿನೈದು ವರ್ಷಗಳು ಬದುಕುವುದು ಪ್ರಯೋಗಿಕವಾಗಿ ಯೋಚಿಸುವುದು ಅಸಾಧ್ಯ. ಹಾಗಾಗಿ ಚಿಕ್ಕ ಚಿಕ್ಕ ಆಸೆಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು ಎಂದಾಗ ಅವರ ಮಾತನ್ನು ಒಪ್ಪದೇ ಇರಲಾಗಲಿಲ್ಲ.

ಇಂದು ಸೆಪ್ಟಂಬರ್ 21. ಅಂದರೆ ನಮ್ಮ ಪೂಜ್ಯ ಮಾವನವರು 70 ವರ್ಷಗಳನ್ನು ಪೂರೈಸಿ, ಭೀಮರತಿ ಶಾಂತಿಗೆ ಪಾತ್ರರಾಗಿದ್ದಾರೆ. ಇಂತಹ ಸಂಭ್ರಮದ ಕ್ಷಣಗಳನ್ನು ಬಹಳ ಅದ್ದೂರಿಯಾಗಿ ಆಚರಿಸ ಬೇಕೆಂದು ನಿರ್ಧರಿಸಿ ಅದಕ್ಕೆ ತಕ್ಕ ಎಲ್ಲಾ ಯೋಜನೆಗಳನ್ನು ಮಾಡಿಕೊಂಡಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಅದೆಲ್ಲವನ್ನೂ ಮುಂದೂಡ ಬೇಕಾದಂತಹ ಅನಿವಾರ್ಯ ಸಂದರ್ಭ ಬಂದದ್ದು ನಿಜಕ್ಕೂ ಬೇಸರದ ಸಂಗತಿಯಾಗಿದ್ದರೂ, ಖಂಡಿತವಾಗಿಯೂ ಸರಳವಾಗಿ ಮನೆಯ ಮಟ್ಟಿಗೆ ಆಚರಿಸುವ ಮೂಲಕ ಸಂಭ್ರಮಿಸಲಿದ್ದೇವೆ.

ಭಗವಂತನ ಅನುಗ್ರಹ ಮತ್ತು ನಿಮ್ಮಂತಹ ಸಜ್ಜನರ ಹಾರೈಕೆಗಳಿಂದ ನಮ್ಮ ಮಾವನವರ
70 ನೇ ವರ್ಷದ ಭೀಮರತಿ ಶಾಂತಿ
75 ವರ್ಷಕ್ಕೆ ಐಂಧ್ರಿ ಶಾಂತಿ
78-81 ವರ್ಷಕ್ಕೆ ವಿಜಯರಥಿ ಶಾಂತಿ
82-85 ವರ್ಷದ ಒಳಗೆ ಸಹಸ್ರ ಚಂದ್ರ ದರ್ಶನ ಶಾಂತಿ
85 ವರ್ಷದ ಮೇಲೆ ರೌಧ್ರಿ ಶಾಂತಿ
90 ವರ್ಷಕ್ಕೆ ಸೌರಿ ಶಾಂತಿ
95 ವರ್ಷಕ್ಕೆ ಪರಿಶಿಷ್ಟ ಶಾಂತಿ
100 ವರ್ಷಕ್ಕೆ ಶತಾಭಿಷೇಕ ಶಾಂತಿ ಮಾಡಿಕೊಳ್ಳುವಂತಾಗಿ ಸದಾಕಾಲವೂ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿರಲಿ ಎಂದು ಪ್ರಾರ್ಥಿಸೋಣ ಅಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s