ನಮ್ಮ ಸನಾತನ ಧರ್ಮದಲ್ಲಿ ಮೊತ್ತ ಮೊದಲಬಾರಿಗೆ ನಮಗೆ ಅರಿವೇ ಇಲ್ಲದಂತೆಯೇ ನಮಗೆಲ್ಲಾ ಕಲಿಸುವುದೇ ದೈವ ಭಕ್ತಿ ಮತ್ತು ಗುರು ಹಿರಿಯರಿಗೆ ಗೌರವವನ್ನು ಕೊಡುವುದೇ ಆಗಿದೆ. ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯರೇ ಮೊದಲ ಗುತು ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಮನೆಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳು ಸ್ವಲ್ಪ ಅಕ್ಕ ಪಕ್ಕದಲ್ಲಿ ನೋಡಿದ್ದು ಮತ್ತು ಕೇಳಿದ್ದು ಅದಕ್ಕೆ ಅರಿವಾಗುತ್ತಿದೆ ಅಂದ ತಕ್ಷಣ ಅದಕ್ಕೆ ಪ್ರತಿಯಾಗಿ ಅದು ಕೈ ಕಾಲು ಬಡಿಯುತ್ತಲೋ ಇಲ್ಲವೇ ಕಿಸಕ್ಕನೇ ನಗುವ ಮೂಲಕ ಪ್ರತ್ಯುತ್ತರ ಕೊಡುವುದಕ್ಕೆ ಆರಂಭಿಸಿತೆಂದರೆ ಸಾಕು ಮೊತ್ತ ಮೊದಲ ಬಾರಿಗೆ ಎಲ್ಲಾ ಮಾತೆಯರೂ ಹೇಳಿಕೊಡುವುದೇ, ಮಾಮೀ ಜೋತಾ ಮಾಡು ಎಂದು ಎರಡೂ ಕೈಗಳನ್ನು ಎತ್ತಿ ದೇವರಿಗೆ ಕೈ ಮುಗಿಸುವುದು ಇಲ್ಲವೇ, ರಾಮ್ ರಾಮ್ ಸೀತಾ ರಾಮ್ ಎಂದು ಜೊರಾಗಿ ಪುಟ್ಟ ಕಂದ ತನ್ನ ಎರಡೂ ಕೈಗಳನ್ನು ಬಡಿಯುವುದನ್ನು ಕಲಿಯುವ ಜೊತೆ ಜೊತೆಯಲ್ಲಿಯೇ ದೇವರ ಭಕ್ತಿಯನ್ನು ಕಲಿತುಕೊಂಡು ಬಿಡುತ್ತದೆ.
ಇನ್ನು ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲಂತೂ ಮನೆಗೆ ಗುರು ಹಿರಿಯರು ಬಂದ ತಕ್ಷಣ ಅವರ ಕಾಲು ಮುಟ್ಟಿ ನಮಸ್ಕರಿಸುವುದು ಇಲ್ಲವೇ ದೊಡ್ಡವರಾಗಲೀ, ಚಿಕ್ಕವರಾಗಲೀ ಎದುರು ಬದಿರು ಸಿಕ್ಕಲ್ಲಿ, ಎರಡೂ ಕೈಗಳನ್ನು ಮುಗಿದು ನಮಸ್ಕಾರಾ… ಹೇಗಿದ್ದೀರೀ ಎಂದು ಅವರನ್ನು ಮಾತನಾಡಿಸಿಯೇ ಮುಂದುವರೆಯ ಬೇಕೆಂಬುದನ್ನು ನಮಗೆ ಅರಿವಿಲ್ಲದಂತೆಯೇ ಕಲಿತು ಬಿಟ್ಟಿರುತ್ತೇವೆ. ಇಂತಹ ಅತ್ಯದ್ಭುತ ಮತ್ತು ಮಹೋನ್ನತ ಸಂಸ್ಕಾರವನ್ನು ದೇಶದ ಅತ್ಯುನ್ನತ ಪದವಿಯನ್ನೇರಿದ್ದ ಇಬ್ಬರು ಮಹಾನ್ ವ್ಯಕ್ತಿಗಳು ಪರಿಸ್ಥಿತಿ ವ್ಯತಿರಿಕ್ತವಾಗಿದ್ದರೂ ಪರಸ್ಪರ ಗೌರವವನ್ನು ಅರ್ಪಿಸಿಕೊಂಡ ಈ ರೋಚಕ ಪ್ರಸಂಗವನ್ನು ಎಲ್ಲರೂ ತಿಳಿಯಲೇ ಬೇಕು.
ನಮಗೆಲ್ಲರಿಗೂ ತಿಳಿದಿರುವಂತೆ ರಾಮೇಶ್ವರದ ಸಾಧಾರಣ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿ, ಕೇವಲ ತಮ್ಮ ಪ್ರತಿಭೆಯಿಂದಲೇ ಜಗತ್ ವಿಖ್ಯಾತ ವಿಜ್ಞಾನಿಯಾಗಿದ್ದಲ್ಲದೇ ದೇಶದ ಅತ್ಯುನ್ನದ ಪದವಿಯಾದ ರಾಷ್ಟ್ರಪತಿಯ ಹುದ್ದೆಯನ್ನಲಂಕರಿಸಿದ್ದವರು ಡಾ.ಅಬ್ದುಲ್ ಕಲಾಂ. ಅದೇ ರೀತಿ ಸಾಧಾರಣ ಕುಟುಂಬದಿಂದ ಬಂದು ಭಾರತ ದೇಶದ ಸೇನೆಗೆ ಸ್ವಪ್ರೇರಣೆಯಿಂದ ಸೇರಿ ಕೊಂಡು ಎರಡನೇ ಮಾಹಾಯುದ್ಧವೂ ಸೇರಿದಂತೆ ಐದು ಯುದ್ಧಗಳಲ್ಲಿ ಭಾಗಿಯಾಗಿ ಅಂತಿಮವಾಗಿ ದೇಶದ ಸೇನೆಯ ಮಹಾದಂಡ ನಾಯರಾಗಿ ಅನೇಕ ಯುದ್ಧಗಳಲ್ಲಿ ದೇಶಕ್ಕೆ ಜಯವನ್ನು ದಕ್ಕಿಸಿಕೊಟ್ಟಂತಹ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಮತ್ತೊಬ್ಬ ದಿಗ್ಗಜರು. ಅವರೊಮ್ಮೆ ಅನಾರೋಗ್ಯದ ನಿಮಿತ್ತ ಕೂನೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯುತ್ತಿರುತ್ತಾರೆ. ಅದೇ ಸಮಯಕ್ಕೆ, ಅದೇ ಊರಿಗೆ ರಾಷ್ಟ್ರಪತಿಗಳಾಗಿದ್ದ ಡಾ.ಕಲಾಂ ಅವರು ಭೇಟಿ ನೀಡಿದ್ದಾಗ, ಸ್ಯಾಮ್ ಅವರ ಅನಾರೋಗ್ಯದ ವಿಷಯ ತಿಳಿದು, ತಮ್ಮ ಎಲ್ಲಾ ಶಿಷ್ಟಾಚಾರಗಳನ್ನೂ ಬದಿಗಿಟ್ಟು, ಪೂರ್ವ ನಿಗಧಿತವಾಗಿಲ್ಲದಿದ್ದರೂ ಗೌರವಯುತವಾಗಿ ಮಾಣಿಕ್ ಶಾ ಅವರನ್ನು ಭೇಟಿ ಮಾಡಿ ಅವರ ಅರೋಗ್ಯವನ್ನು ವಿಚಾರಿಸಲು ಆಸ್ಪತ್ರೆಗೆ ಬರುತ್ತಾರೆ.
ಸುಮಾರು 15 ನಿಮಿಷಗಳ ಕಾಲ ಉಭಯ ಕುಶಲೋಪರಿಯನ್ನು ವಿಚಾರಿಸಿ ಇನ್ನೇನೂ ಹೊರಡಬೇಕು ಎನ್ನುವಾಗ, ಕಲಾಂ ರವರು, ಸಾರ್, ನಿಮ್ಮ ಆರೋಗ್ಯ ಸುಧಾರಿಸಿ, ನೀವು ಚೇತರಿಸಿಕೊಳ್ಳುತ್ತಿರುವುದನ್ನು ನೋಡಿ ಸಂತೋಷವಾಯಿತು. ಇಲ್ಲಿ ನಿಮಗೆ ಯಾವುದಾದರೂ ಕುಂದುಕೊರತೆ ಇದೆಯೇ? ಇದ್ದಲ್ಲಿ ದಯವಿಟ್ಟು ತಿಳಿಸಿ. ಅದನ್ನು ಸರಿಪಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ವಿನಮ್ರವಾಗಿ ಕೇಳುತ್ತಾರೆ.
ಅದಕ್ಕೆ ಹಾಸಿಗೆಯ ಮೇಲಿಂದಲೇ ಪ್ರತ್ಯುತ್ತರಿಸಿದ ಮಾಣಿಕ್ ಶಾ ರವರು ಹೌದು ಒಂದು ಕೊರತೆ ಇದೆ ಎಂದು ಬಹಳ ದುಃಖದಿಂದ ಹೇಳುತ್ತಾರೆ. ಶಾ ರವರ ಉತ್ತರದಿಂದ ಆಘಾತಕ್ಕೊಳಗಾದ ಕಲಾಂ ಅವರು, ಆ ಕೊರತೆ ಏನೆಂದು ತಿಳಿದುಕೊಳ್ಳಬಹುದೇ ಎಂದು ಕೇಳುತ್ತಾರೆ.
ಸರ್, ನನ್ನ ಕುಂದುಕೊರತೆಯೆಂದರೆ, ನನ್ನ ಪ್ರೀತಿಯ ದೇಶದ ಅತ್ಯಂತ ಗೌರವಾನ್ವಿತ ಅಧ್ಯಕ್ಷರು ನನ್ನನ್ನು ಭೇಟಿ ಮಾಡಲು ಬಂದಾಗ ಆವರಿಗೆ ಎದ್ದು ನಮಸ್ಕರಿಸ್ಕರಿಸಲು ಸಾಧ್ಯವಾಗದೇ ಇರುವುದೇ ಒಂದು ದೊಡ್ಡ ಕೊರತೆಯಾಗಿದೆ ಎಂದು ಹೇಳುತ್ತಾರೆ.
ಶಾ ರವರ ಈ ಉತ್ತರದಿಂದ ಗಧ್ಗಧಿತರಾದ ಕಲಾಂ ರವರು ಶಾ ಅವರ ಕೈಗಳನ್ನು ಹಿಡಿದಾಗ, ಅವರಿಬ್ಬರ ಗಂಟಲು ಬಿಗಿಯಾಗಿ ಮಾತೇ ಹೊರಡದೇ, ಕಣ್ಗಳಲ್ಲಿ ಧಾರಾಕಾರವಾದ ಅಶ್ರುಧಾರೆ ಹರಿಯುತ್ತದೆ. ಅಲ್ಲಿ ಮಾತಿಲ್ಲದ ಮೌನದ ವಾತಾವರಣವಿದ್ದರೂ, ಪರಸ್ಪರ ಅವರಿಬ್ಬರ ಹ್ಟದಯಗಳು ಒಬ್ಬರಿಗೊಬ್ಬರಿಗೆ ಗೌರವವನ್ನು ಸಮರ್ಪಿಸಿಕೊಂಡಿರುತ್ತವೆ.
ಇಂದಿನ ಯುವಜನತೆ ಪಾಶ್ಚಾತ್ಯೀಕರಣಕ್ಕೆ ಒಳಗಾಗಿ, ದೊಡ್ಡವರು ಚಿಕ್ಕವರು ಎಂಬ ಬೇಧವಿಲ್ಲದೇ ಮೆರೆಯುತ್ತಾ, ನಮ್ಮ ದೇಶ ಮತ್ತು ಧರ್ಮ ಏನನ್ನು ಕಲಿಸಿಕೊಟ್ಟಿದೇ ಎಂದು ಹಾದಿ ಬೀದಿಗಳಲ್ಲಿ ಬೊಬ್ಬರಿಯುವರಿಗೆ, ತಾವು ಅನಾರೋಗ್ಯ ಪೀಡಿತರಾಗಿದ್ದರೂ, ತಮ್ಮನ್ನು ಕಾಣಲು ಬಂದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಎದ್ದು ನಿಂತು ಗೌರವ ಸಲ್ಲಿಸಲು ಸಾಧ್ಯವಾಗಲಿಲ್ಲವಲ್ಲ ಎಂದು ಮರುಗುವ ಮನಸ್ಥಿತಿಯನ್ನು ನಮ್ಮ ದೇಶ ಮತ್ತು ಸನಾತನ ಧರ್ಮ ಕಲಿಸಿಕೊಟ್ಟಿದೆ ಎಂಬುದನ್ನು ತಿಳಿಯಪಡಿಸಬೇಕಾಗಿದೆ.
ಇದನ್ನೇ ಯದ್ಭಾವಂ ತದ್ಭವತಿ ಎಂದು ನಮ್ಮ ಪುರಾಣಗಳಲ್ಲಿ ಹೇಳಿದರೆ, ನಮ್ಮ ಬಸವಣ್ಣನವರು ಸರಳವಾಗಿ ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಹನ್ನೆರಡನೇ ಶತಮಾನದಲ್ಲಿಯೇ ಹೇಳಿದ್ದಾರೆ. ನ್ಯೂಟನ್ನಿನ ಮೂರನೇ ನಿಯಮವೂ ಸಹಾ, ಪ್ರತಿಯೊಂದು ಕ್ರಿಯೆಗೆ, ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂದು ಹೇಳುತ್ತದೆ. ಹಾಗಿ ಗೌರವನ್ನು ಕೊಟ್ಟು ಗೌರವವನ್ನು ಪಡೆದುಕೊಳ್ಳ ಬೇಕೇ ಹೊರತು, ಗೌರವವನ್ನು ದರ್ಪದಿಂದಲೋ, ಅಧಿಕಾರದಿಂದಲೋ, ಕೇಳಿ ಅಥವಾ ಬಲವಂತದಿಂದ ಪಡೆಯಲಾಗದು ಮತ್ತು ಪಡಯಲೂ ಬಾರದು.
ಸುಮ್ಮನೇ ಬೆಕ್ಕಿಗೆ ಗಂಟೆ ಕಟ್ಟುವರು ಯಾರು ? ಎಂದು ಪ್ರಶ್ನಿಸುತ್ತಾ, ಇತರರ ಉತ್ತರಕ್ಕೆ ಕಾಯುತ್ತಾ ಕೂರದೇ, ಇಂತಹ ಸತ್ ಸಂಪ್ರದಾಯ ಮತ್ತು ಸಂಸ್ಕಾರಗಳು ನಮ್ಮ ಮನಗಳಿಂದ ಮತ್ತು ನಮ್ಮ ಮನೆಗಳಿಂದಲೇ ಆರಂಭವಾಗಲೀ ಅಲ್ವೇ?
ಏನಂತೀರೀ?
ಸಾಮಾಜಿಕ ಜಾಲತಾಣದಲ್ಲಿ ಓದಿದ ಆಂಗ್ಲ ಸಂದೇಶದ ಭಾವಾನುವಾದ