ಸೂಳೆ ಕೆರೆ (ಶಾಂತಿ ಸಾಗರ)

ಅರೇ ಇದೇನಿದು? ಈ ಕೆರೆಯ ಹೆಸರು ಹೀಗಿದೆಯಲ್ಲಾ? ಇಂತಹ ವಿಲಕ್ಷಣ ಹೆಸರಿನ ಕೆರೆ ಎಲ್ಲಿದೆ ಅಂತಾ ಯೋಚಿಸುತ್ತಿದ್ದೀರಾ? ಇದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು 18 ಕಿ.ಮೀ ದೂರದಲ್ಲಿದೆ. ಈ ಕೆರೆ ನೊಡುವುದಕ್ಕೆ ಅಗಾಧವಾದ ಸಾಗರದಂತೆಯೇ ಕಾಣುತ್ತದೆ. ಸರಿ ಸುಮಾರು 4416 ಎಕರೆ ವಿಸ್ತೀರ್ಣದ ಈ ಕೆರೆ, ಚಿತ್ರದುರ್ಗ ಪಟ್ಟಣವೂ ಸೇರಿದಂತೆ ಸುಮಾರು 15 ರಿಂದ 20 ಹಳ್ಳಿಗಳ 2000 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ನಿಜ ಹೇಳಬೇಕೆಂದರ, ನೈಸರ್ಗಿಕವಾಗಿ ಈ ಪ್ರದೇಶ ಕೆರೆಯ ನಿರ್ಮಾಣಕ್ಕೆ ಸೂಕ್ತವಲ್ಲ ಎಂದು ಈಗಿನ ನೀರಾವರಿ ತಜ್ಞರು ಹೇಳುತ್ತಾರಾದರೂ, ನಮ್ಮ ಪೂರ್ವಜರು ಅತ್ಯಂತ ಚಾಣಾಕ್ಷ ತನದಿಂದ ಅಂಥ ಬೃಹತ್ ಕೆರೆಯನ್ನು ಎರಡು ಬೆಟ್ಟಗಳ ನಡುವೆ ಸುಮಾರು 950 ಅಡಿ ಉದ್ದಕ್ಕೆ ಬದುವನ್ನು ಕಟ್ಟಿ ನಡುವೆ ನೀರು ತಡೆದು ನಿಲ್ಲಿಸಲಾಗಿದೆ. ಬದುವಿನ ಒಂದು ಪಾರ್ಶ್ವ 60 ಅಡಿ, ಇನ್ನೊಂದೆಡೆ 80 ಅಡಿ ಅಗಲವಿದ್ದು ಬೆಟ್ಟಗಳ ನಡುವಿರುವ ಕೆರೆಗೆ ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಬೀಳುವ ಮಳೆ ನೀರು ಹರಿದು ಬರುವ ವ್ಯವಸ್ಥೆಯನ್ನು ಮಾಡಲಾಗಿದೆ. ಕೆರೆಯ ಉತ್ತರದಲ್ಲಿ ಸಿದ್ಧ ನಾಲೆ ಹಾಗೂ ದಕ್ಷಿಣದಲ್ಲಿ ಬಸವ ನಾಲೆ ಎಂಬ ಎರಡು ನಾಲೆಗಳಿದ್ದು ಈ ಕೆರೆಯಿಂದ ಮೂರು ತೂಬುಗಳ ಮೂಲಕ ನೀರು ಹೊರಗೆ ಹರಿದು ಹೋಗುವ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಅಗಾಧವಾದ ಕೆರೆ ತನ್ನ ಸುತ್ತಲಿನ ರುದ್ರ ರಮಣೀಯ ಪರಿಸರ, ನೀರಿನ ಸಮೃದ್ಧಿ ಮತ್ತು ತಾಂತ್ರಿಕ ನಿರ್ಮಾಣಗಳ ಮೂಲಕ ಗಮನ ಸೆಳೆಯುವುದಲ್ಲದೇ, ಏಷ್ಯಾ ಖಂಡದಲ್ಲೇ ಎರಡನೆ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಇಂತಹ ಕೆರೆಗೆ ಸೂಳೆ ಕೆರೆ ಎಂಬ ಹೆಸರು ಬರಲು ಒಂದು ಐತಿಹ್ಯ ಕಾರಣವಿದೆ.

ಈಗಿನ ಕಗತೂರು ಎಂಬ ಗ್ರಾಮ, 12ನೇ ಶತಮಾನದಲ್ಲಿ ಸ್ವರ್ಗಾವತಿ ಎಂಬ ಪಟ್ಟಣವಾಗಿದ್ದು ಅಲ್ಲಿಯ ದೊರೆ ವಿಕ್ರಮರಾಜನ ಮಗಳು ಶಾಂತವ್ವ, ಸಿದ್ದೇಶ್ವರ ಎಂಬ ಯುವಕನೊಂದಿಗೆ ಗಾಂಧರ್ವ ವಿವಾಹವಾಗುತ್ತಾಳೆ. ಆದರೆ ಸಮಾಜ ಈ ಮದುವೆಯನ್ನು ಒಪ್ಪಿಕೊಳ್ಳದೇ, ಆಕೆಯನ್ನು ವೇಶ್ಯೆ ಅಥವಾ ಸೂಳೆ ಎಂದು ಜರಿಯುತ್ತಾರೆ. ತನಗೆ ಬಂದಿರುವ ಈ ಕಳಂಕದಿಂದ ಮುಕ್ತಿಹೊಂದುವ ಸಲುವಾಗಿ ತನನ್ನು ಜರಿದ ಜನರ ಅನುಕೂಲಕ್ಕಾಗಿಯೇ, ತನ್ನ ಪತಿ ಯ ಜೊತೆ ಸೇರಿ ಈ ವಿಶಾಲವಾದ ಕೆರೆಯನ್ನು ನಿರ್ಮಿಸಿ ಅದೇ ಕೆರೆಗೆ ಹಾರವಾಗುತ್ತಾಳೆ. ತನ್ನ ಪತ್ನಿಯ ಅಗಲಿಕೆಯನ್ನು ತಾಳಲಾರದೇ, ಆಕೆಯ ಪತಿ ಸಿದ್ದೇಶ್ವರನೂ ಸಹಾ ಕೆರೆಯ ಪಕ್ಕದಲ್ಲೇ ಇರುವ ಬೆಟ್ಟದಿಂದ ಹಾರಿ ತನ್ನ ಪ್ರಾಣವನ್ನು ತ್ಯಜಿಸುತ್ತಾನೆ ಎಂಬ ಕಥೆ ಇದೆ. ಇದಕ್ಕೆ ಪುರಾವೆಯಾಗಿ ಇಂದಿಗೂ ಆ ಗುಡ್ದದ ಮೇಲೆ ಸಿದ್ದೇಶ್ವರ ದೇವಾಲಯವಿದೆ. ಪ್ರತಿ ವರ್ಷವೂ ಅಲ್ಲಿ ಅದ್ದೂರಿಯ ಸಿದ್ದೇಶ್ವರ ಜಾತ್ರೆ ನಡೆಯುತ್ತಿದ್ದು, ಶಾಂತವ್ವಳ ತವರು ಮನೆ ಕಗತೂರು ಗ್ರಾಮದವರ ಮನೆಯಿಂದಲೇ ಮಡ್ಲಕ್ಕಿ ತೆಗೆದುಕೊಂಡು ಹೋದ ನಂತರವೇ ರಥ ಯಾತ್ರೆಗೆ ಚಾಲನೆ ನೀಡಲಾಗುತ್ತದೆ.

ಇದೇ ಕಥೆಗೆ ಮತ್ತೊಂದು ಆಯಾಮವೂ ಇದ್ದು, ಊರ ಜನರ ತಿರಸ್ಕಾರದಿಂದ ನೊಂದ ಶಾಂತವ್ವ, ತನ್ನ ಮೇಲಿನ ಆರೋಪದಿಂದ ಮುಕ್ತಳಾಗಲು ಜನೋಪಕಾರಕ್ಕಾಗಿ ಒಂದು ಕೆರೆಯನ್ನು ನಿರ್ಮಿಸಲು ನಿರ್ಧರಿಸಿ ಅದಕ್ಕೆ ಪ್ರಶಸ್ತವಾದ ಜಾಗವನ್ನು ಹುಡುಕುತ್ತಿದ್ದಾಗ ಆ ಸ್ವರ್ಗಾವತಿಯಲ್ಲಿ ವೇಶ್ಯೆಯರು ವಾಸಿಸುತ್ತಿದ್ದ ಈ ಪ್ರದೇಶವ ಕೆರೆಗೆ ಸೂಕ್ತ ಎಂದು ತಿಳಿದು ಬಂದು, ಈ ಪ್ರದೇಶವನ್ನು ಬಿಟ್ಟು ಕೊಡಲು ಅಲ್ಲಿ ಬೀಡು ಬಿಟ್ಟಿದ್ದ ವೇಶ್ಯೆಯರ ಬಳಿ ಕೇಳಿಕೊಳ್ಳುತ್ತಾಳೆ. ಅದಕ್ಕೆ ಪ್ರತಿಯಾಗಿ ಈ ಕೆರೆಗೆ ಸೂಳೆಕೆರೆ ಎಂದು ನಾಮಕರಣ ಮಾಡುವುದಾದರೆ ಆ ಪ್ರದೇಶವನ್ನು ಬಿಟ್ಟುಕೊಡುವುದಾಗಿ ಅವರು ಬೇಡಿಕೆ ಇಟ್ಟಾಗ ಅದಕ್ಕೊಪ್ಪಿದ ಶಾಂತವ್ವ ಅಲ್ಲಿ ಈ ಕೆರೆಯನ್ನು ನಿರ್ಮಿಸಿ, ಒಪ್ಪಂದಂತೆ ಸೂಳೆಕೆರೆ ಎಂದು ಹೆಸರು ಇಡುತ್ತಾಳೆ ಎಂದೂ ಹೇಳಲಾಗುತ್ತದೆ.

ಕೆಲ ದಶಕಗಳ ಹಿಂದೆ ಈ ಹೆಸರು ಸಮಂಜಸವಾಗಿಲ್ಲದೇ ಜನರಲ್ಲಿ ತಪ್ಪು ಭಾವನೆ ಕಲ್ಪಿಸುತ್ತದೆ ಎಂಬ ಕಾರಣ ನೀಡಿ ಈ ಕೆರೆಯನ್ನು ಶಾಂತಿ ಸಾಗರ ಎಂದು ಪುರರ್ನಾಮಕರಣ ಮಾಡಬೇಕೆಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಚೆನ್ನಗಿರಿಯವರೇ ಆಗಿದ್ದ ಶ್ರೀ ಜೆ.ಹೆಚ್ ಪಟೇಲ್ ಅವರ ಬಳಿ ಪ್ರಸ್ತಾಪನೆ ಇಡುತ್ತಾರೆ.

ಅವರ ಪ್ರಸ್ತಾವನೆಗೆ ಒಪ್ಪದ ಪಟೇಲರು, ಇರಲಿ ಬಿಡ್ರಿ. ಸೂಳೆ ಕೆರೆ ಅನ್ನೋ ಹೆಸರೇ ಇತಿಹಾಸ ಪ್ರಸಿದ್ಧವಾಗಿದೆ. ಈಗ ಅದರ ಹೆಸರನ್ನು ಶಾಂತಿ ಸಾಗರ ಎಂದು ಬದಲಿಸಿ ಇತಿಹಾಸವನ್ನು ತಿದ್ದಲಾಗದು ಎಂದಿದ್ದರು. ಹಾಗೆಯೇ, ಮಾತನ್ನು ಮುಂದುವರೆಸಿ, ಒಬ್ಬ ಹೆಣ್ಣು ಮಗಳನ್ನು ಸೂಳೆಯ ಪಟ್ಟಕ್ಕೇರಿಸುವುದು ಯಾರು? ಈ ಸಮಾಜದ ದುರುಳ ಗಂಡಸರು ಮತ್ತು ಬಾಯಿ ಚಪಲ ಅತಿಯಾಗಿರುವ ಹೆಂಗಸರಲ್ಲವೇ? ಒಬ್ಬ ಹೆಣ್ಣಿಗೆ ಮೈ ಮಾರಿಕೊಳ್ಳುವುದನ್ನು ಅನಿವಾರ್ಯವಾಗುವಂತೆ ಮಾಡಿದ್ದು ಇದೇ ಸಮಾಜವಲ್ಲವೇ? ಈ ಸಮಾಜದ ಕಣ್ಣಲ್ಲಿ ಸೂಳೆ ಎನ್ನಿಸಿಕೊಂಡ ಆ ಹೆಣ್ಣು ಮಗಳು ಕೆರೆ ಕಟ್ಟಿಸುವ ಮೂಲಕ ಇಂದಿಗೂ ಸಹಾ ಲಕ್ಷಾಂತರ ಜನರ ನೆಮ್ಮದಿಗೆ ದಾರಿ ಮಾಡಿಕೊಟ್ಟಳು ಎಂದ್ದಲ್ಲಿ ಅದನ್ನೇಕೆ ತಪ್ಪೆಂದು ಭಾವಿಸಿ ಬದಲಿಸ ಬೇಕು? ಎಂದು ಕೇಳಿದ್ದರಂತೆ.

ಆಕೆಯ ಮಾನವೀಯತೆಯ ನಿಲುವಿಗೆ ಸರಿ ಸಮವಾಗಿ ಖಂಡಿತವಾಗಿಯೂ ಈ ಸಮಾಜ ಇಲ್ಲ. ಹೀಗಾಗಿ ಆಕೆಯನ್ನು ಸೂಳೆ ಎಂದು ಕರೆದ ಸಮಾಜದ ಮನಸ್ಸಿನಲ್ಲಿ ನಾಚಿಕೆ ಎಂಬುದು ಶಾಶ್ವತವಾಗಿ ಉಳಿಯಬೇಕು. ಸೂಳೆ ಎಂದು ಕರೆಸಿಕೊಂಡ ಆ ಹೆಣ್ಣಿನಲ್ಲಿ ಇರುವ ಮಾತೃತ್ವ ಗುಣವನ್ನು ನಾವು ಸದಾ ಕಾಲ ನೆನಪಿಸಿಕೊಳ್ಳ ಬೇಕು ಎಂಬ ಕಾರಣಕ್ಕಾಗಿ ಅದೇ ಹೆಸರು ಇರಲಿ ಎಂದಿದ್ದಲ್ಲದೇ, ಒಂದು ಪಕ್ಷ ಇಂದು ಆ ಕೆರೆಯ ಹೆಸರನ್ನು ಶಾಂತಿ ಸಾಗರ ಎಂದು ಬದಲಿಸಿದಲ್ಲಿ, ಮುಂದಿನ ಪೀಳಿಗೆಗೆ ಅದರ ಹಿನ್ನೆಲೆಯೇ ಅರ್ಥವಾಗುವುದಿಲ್ಲ ಅಲ್ಲವೇ ಎಂದು ಹೇಳಿ ಸೂಳೆಕೆರೆ ಹೆಸರನ್ನು ಬದಲಿಸಬೇಕು ಎಂಬ ಪ್ರಸ್ತಾಪನೆ ಇಟ್ಟಿದ್ದವರ ಬಾಯಿ ಮುಚ್ಚಿಸಿದ್ದರಂತೆ.

ಯಾರು ಏನೇ ಹೇಳಿದರೂ ಸೂಳೆಕೆರೆಯಂತೆ ಸಮಾಜದಲ್ಲಿ ವೇಶ್ಯೆಯರಿಗೂ ಕೆರೆಗಳಿಗೂ ಅವಿನಾಭಾವ ಸಂಬಂಧವಿರುವುದು ಇತಿಹಾಸದಲ್ಲಿ ಅನೇಕ ಉದಾಹರಣೆಗಳಿಗೆ. ಮುಸಲ್ಮಾನ ಲೂಟಿಕೋರರು ಹಳೇಬೀಡನ್ನು ನಾಶ ಪಡಿಸಿ, ಬೇಲೂರಿನತ್ತ ಕಣ್ಣು ಹಾಯಿಸಿರುವ ಸುದ್ದಿಯನ್ನು ಕೇಳಿದ ಬೇಲೂರಿನ ಕುಪ್ರಸಿದ್ಧ ವೇಶ್ಯೆಯೊಬ್ಬಳು ತನ್ನ ಸ್ವಂತ ಖರ್ಚಿನಲ್ಲಿ ಯಗಚೀ ನದಿಯ ಮರಳಿನಿಂದ ಬೇಲೂರು ಚೆನ್ನಕೇಶವ ದೇವಾಲಯವನ್ನು ಸಂಪೂರ್ಣವಾಗಿ ಮುಚ್ಚಿದ್ದ ಕಾರಣ ನಾವಿನ್ನೂ ಸುಪ್ರಸಿದ್ದ ಬೇಲೂರಿನ ಶಿಲ್ಪಕಲೆಯನ್ನು ಕಣ್ತುಂಬಿಸಿಕೊಳ್ಳುವಂತಾಗಿದೆ.

ಒಂದು ನೊಂದ ಜೀವಕ್ಕೇ ಮತ್ತೊಂದು ನೊಂದ ಜೀವದ ಕಷ್ಟದ ಅರಿವಾಗುತ್ತದೆ. ಸಮಾಜದಲ್ಲಿ ದೌರ್ಜನ್ಯಕ್ಕೊಳಗಾದ ಮತ್ತು ಎಲ್ಲರಿಂದಲೂ ಕೀಳಾಗಿ ನೋಡಲ್ಪಟ್ಟ ವೇಶ್ಯೆಯರು ತಮ್ಮ ಪಾಪ ಪ್ರಜ್ಞೆಯಿಂದ ಮುಕ್ತರಾಗಲು ತಮ್ಮನ್ನು ತಾವು ಈ ರೀತಿಯಾಗಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವ ಅನೇಕ ಉದಾಹರಣೆಗಳನ್ನು ಇಂದಿಗೂ ನೋಡ ಬಹುದಾಗಿದೆ. ಪರಿಸ್ಥಿತಿಯ ವಿಕೋಪದಿಂದಾಗಿ ಜಾರಿಣಿಯಾಗಿದ್ದರೂ, ನಿಜ ಜೀವನದಲ್ಲಿ ಆಕೆಯೂ ಒಂದು ಹೆಣ್ಣಲ್ಲವೇ? ಅಕೆಗೂ ಹೆಣ್ಣಿನ ಅಂತಃಕರಣ ಇರುತ್ತದಲ್ಲವೇ? ಏಕೆಂದರೆ ಎಷ್ಟಾದರೂ ಹೆಣ್ಣು ಕ್ಷಮಯಾಧರಿತ್ರಿಯಲ್ಲವೇ? ಮಾನವತೆಯ ಚರಿತ್ರೆಯಲ್ಲಿ ಕೊನೆಗೂ ಉಳಿಯುವುದು ಇಂಥವರೇ. ಆ ಕೆರೆ ಕಟ್ಟಿಸಿದ ರಾಜ ಯಾರೆಂದು ಜನರಿಗೆ ಮರೆತು ಹೋಗಬಹುದು, ಆದರೆ ಕೆರೆಯ ಹಿಂದಿರುವ ವೇಶ್ಯೆಯ ಕತೆ ಮರೆತುಹೋಗದು. ಊರಿನ ಕೊಳೆಯನ್ನು ಒಡಲಲ್ಲಿ ತುಂಬಿಕೊಂಡು ಮೇಲೆ ತಿಳಿನೀರನ್ನು ಜನರಿಗೆ ಉಣಿಸುವ ಕೆರೆಯಂತೆಯೇ, ನೋವು ದೂಷಣೆಗಳನ್ನು ನುಂಗಿಕೊಂಡು ಜನತೆಗೆ ಸುಖ ನೀಡುವ ವೇಶ್ಯೆಯರು ಜನತೆಯ ಸ್ವಾಸ್ಥ್ಯವನ್ನು ರಕ್ಷಿಸುತ್ತಿದ್ದರು ಎಂಬುದು ನಿಜವಲ್ಲವೆ

ಸದ್ಯದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ 27 ಅಡಿ ಆಳವಿರುವ ಕೆರೆ ತುಂಬಿ ತುಳುಕುತ್ತಿದ್ದರೂ ಸುಮಾರು 8-10 ಅಡಿಗಳಷ್ಟು ಹೂಳು ತುಂಬಿಕೊಂಡಿರುವ ಕಾರಣ ಕೇವಲ 12 ಅಡಿಗಳಷ್ಟು ನೀರು ಮಾತ್ರವೇ ಲಭ್ಯವಿದ್ದು ಚಿತ್ರದುರ್ಗ, ಜಗಳೂರು ಸೇರಿದಂತೆ ಚೆನ್ನಗಿರಿ ತಾಲ್ಲೂಕಿನ ಸುಮಾರು 80 ಹಳ್ಳಿಗರಿಗೆ ಇನ್ನು ಆರೆಂಟು ತಿಂಗಳುಗಳ ಕಾಲ ನೀರನ್ನು ಉಣಿಸುವುದಲ್ಲದೇ, ಮೀನುಗಾರರಿಗೂ ಜೀವನಾಧಾರವಾಗಿದೆ. ಸ್ಥಳೀಯರು ಅಲ್ಲಿಯ ಪಂಚಾಯಿತಿಯವರ ಮೇಲೆ ಒತ್ತಡ ತಂದು ಹೂಳನ್ನು ತೆಗಿಸುವ ಮೂಲಕ ಕೆರೆಯಲ್ಲಿ ವರ್ಷಪೂರ್ತಿ ಹೆಚ್ಚಿನ ನೀರನ್ನು ಸಂಗ್ರಹಿಸಿಟ್ಟು ಕೊಳ್ಳಬಹುದಾಗಿದೆ.

ಪಟೇಲರ ನಂತರ ಬಂದ ಸರ್ಕಾರ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಸೂಳೆಕೆರೆಯನ್ನು ಸರ್ಕಾರಿ ದಾಖಲೆಗಳಲ್ಲಿ ಶಾಂತಿಸಾಗರ ಎಂದು ಬದಲಾಯಿಸಿದರೂ, ಜನ ಸಾಮಾನ್ಯರ ಮನಸ್ಸಿನಲ್ಲಿ ಮತ್ತು ಆಡು ಭಾಷೆಯಲ್ಲಿ ಇಂದಿಗೂ ಮತ್ತು ಎಂದೆಂದಿಗೂ ಆ ಕೆರೆ ಸೂಳೆಕೆರೆ ಆಗಿಯೇ ಉಳಿದಿದೆ ಮತ್ತು ಉಳಿಯಲಿದೆ.

ನೀರಿನ ಕೊಳೆಯನ್ನು ಒಡಲಲ್ಲಿ ತುಂಬಿಕೊಂಡು ಮೇಲೆ ಮಾತ್ರ ತಿಳಿ ನೀರನ್ನು ಜನರಿಗೆ ಕೊಡುವ ಕೆರೆಗಳಂತೆ, ಜನರಿಂದ ದೂಷಣೆ ಮತ್ತು ಕೀಳರಿಮೆಗಳನ್ನು ನುಂಗಿಕೊಂಡು ಇಂದಿನ ಜನರಿಗೂ ಅನುಕೂಲವಾಗುವಂತಹ ಸಾಧನೆಗಳನ್ನು ಮಾಡಿಟ್ಟು ಹೋದಾ ಆ ಎಲ್ಲಾ ವೇಶ್ಯೆಯರೂ ಪ್ರಾರ್ಥಸ್ಮರಣೀಯರಾಗುತ್ತಾರೆ ಅಲ್ಲವೇ?

ಏನಂತೀರೀ?

5 thoughts on “ಸೂಳೆ ಕೆರೆ (ಶಾಂತಿ ಸಾಗರ)

  1. ಸೂಳೆ ಕೆರೆ ಬಗ್ಗೆ ಓದಿ ಬಹಳ ಖುಷಿಯಾಯಿತು. ನಾನು ಕೂಡ ಹುಟ್ಟಿ ಬೆಳೆದಿದ್ದು ಸೂಳೆಕೆರೆ ಸಮೀಪ ಇರುವ ಸಂತೇಬೆನ್ನೂರು ಎಂಬ ಊರಿನಲ್ಲಿ. ಸಾಧ್ಯವಾದರೆ ಸಂತೇಬೆನ್ನೂರಿಗೆ ಭೇಟಿ ನೀಡಿ. ಅಲ್ಲಿ ಕೂಡ ನಿಮಗೆ ಒಂದು ಕುತೂಹಲ ಹುಟ್ಟಿಸುವ ನೀರಿನ ಹೊಂಡ ಇದೆ. ಅದರ ಕಥೆಯು ಅದ್ಭುತವಾಗಿದೆ.

    Liked by 1 person

  2. ಲೇಖನ ತುಂಬಾ ಚನ್ನಾಗಿದೆ, ತುಂಬ ಉಪಯುಕ್ತ ಮಾಹಿತಿ ಯನ್ನು ಕೊಟ್ಟಿದಿರಿ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s