ಒರಳು ಕಲ್ಲು ಚಿತ್ರಾನ್ನ

ಸಭೆ ಸಮಾರಂಭಗಳಲ್ಲಿ ಎಲೆಯ ಕೊನೆಗೆ ಅಥವಾ ಮನೆಗಳಲ್ಲಿ ಬೆಳಗಿನ ತಿಂಡಿಗೆ ನಿಂಬೇಹಣ್ಣಿನ ಚಿತ್ರಾನ್ನ ಮಾಡುವುದು ವಾಡಿಕೆ ಅದರೇ ಅದೇ ರೀತಿಯ ಚಿತ್ರಾನ್ನ ತಿಂದು ಬೇಸರವಾಗಿದ್ದಲ್ಲಿ, ಸಾಂಪ್ರದಾಯಕವಾಗಿ ಅಡುಗೆಯಾದ ಒರಳು ಕಲ್ಲು ಚಿತ್ರಾನ್ನ ಮಾಡುವುದನ್ನು ನಮ್ಮ ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿ ಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಓರಳು ಕಲ್ಲು ಚಿತ್ರಾನ್ನ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ

  • ತೆಂಗಿನಕಾಯಿ ತುರಿ- 1 ಬಟ್ಟಲು
  • ಜೀರಿಗೆ – 1 ಚಮಚ
  • ಬೆಲ್ಲ- ಸಣ್ಣ ಗಾತ್ರ
  • ಹುಣಸೇ ಹಣ್ಣು – ನಿಂಬೇ ಗಾತ್ರದ್ದು
  • ಹಸೀ ಮೆಣಸಿನ ಕಾಯಿ -4-6
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಅನ್ನ – 1 ಪಾವು

ಒಗ್ಗರಣೆ ಮಾಡಿಕೊಳ್ಳಲು ಬೇಕಾಗುವ ಸಾಮಗ್ರಿಗಳು

  • ಸಾಸಿವೆ – 1 ಚಮಚ
  • ಕಡಲೇ ಬೇಳೆ – 1 ಚಮಚ
  • ಉದ್ದಿನ ಬೇಳೆ – 1 ಚಮಚ
  • ಕಡಲೇಕಾಯಿ ಬೀಜ – 2-3 ಚಮಚ
  • ಒಣಮೆಣಸಿನ ಕಾಯಿ – 2-3
  • ಕರೀಬೇವಿನ ಸೊಪ್ಪು – 6-8 ಎಲೆಗಳು
  • ಅಡುಗೆ ಎಣ್ಣೆ – 2 ‍ಚಮಚ

ಒರಳು ಕಲ್ಲು ಚಿತ್ರಾನ್ನ ತಯಾರಿಸುವ ವಿಧಾನ

  • ಒಂದು ಪಾವು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು ಕುಕ್ಕರಿನಲ್ಲಿ ಅನ್ನ ಮಾಡಿಕೊಂಡು ಅನ್ನವನ್ನು ಆರಲು ಬಿಡಿ
  • ಮೇಲೆ ತಿಳಿಸಿದ ಎಲ್ಲಾ ಪರಿಕರಗಳನ್ನು ಸಾಂಪ್ರದಾಯಕವಾದ ಒರಳುಕಲ್ಲಿ (ಈಗ ಮಿಕ್ಸಿ)ನಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಿ
  • ಒಂದು ಗಟ್ಟಿ ತಳದ ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿ ಕೊಳ್ಳಿ
  • ನಂತರ ಕಡಲೇ ಬೇಳೆ, ಉದ್ದಿನ ಬೇಳೆ ಮತ್ತು ಕಡಲೇ ಕಾಯಿ ಬೀಜವನ್ನು ಬಾಣಲೆಗೆ ಹಾಕಿ ಕೆಂಪಗೆ ಬರುವಂತೆ ಹುರಿದುಕೊಳ್ಳಿ
  • ಈಗ ಒಣಮೆಣಸಿಕಾಯಿ ಮತ್ತು ಕರಿಬೇವನ್ನು ಹಾಕಿ ಹಸಿ ಹೋಗುವವರೆಗೂ ಹುರಿದುಕೊಳ್ಳಿ
  • ಈಗ ಚಿಟುಕಿ ಇಂಗು, ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ
  • ರುಬ್ಬಿಟ್ಟು ಕೊಂಡಿದ್ದ ಮಿಶ್ರಣವನ್ನು ಒಗ್ಗರಣೆಗೆ ಸೇರಿಸಿ ಮೂರ್ನಾಲ್ಕು ನಿಮಿಷಗಳಷ್ಟು ಕಾಲ ಬಾಡಿಸಿದಲ್ಲಿ ಒರಳು ಕಲ್ಲು ಚಿತ್ರಾನ್ನದ ಗೊಜ್ಜು ಸಿದ್ಧ.
  • ಆರಿದ ಅನ್ನದೊಂದಿಗೆ ರುಚಿಗೆ ತಕ್ಕಷ್ಟು ಒರಳು ಕಲ್ಲು ಚಿತ್ರಾನ್ನದ ಗೊಜ್ಜನ್ನು ಬೆರೆಸಿ ಕಲಸಿದಲ್ಲಿ ರುಚಿ ರುಚಿಯದ ಸಾಂಪ್ರದಾಯಕ ಒರಳು ಕಲ್ಲು ಚಿತ್ರಾನ್ನ ಸವಿಯಲು ಸಿದ್ಧ.

ಒರಳು ಕಲ್ಲು ಚಿತ್ರಾನ್ನ ಮಾಡುವುದನ್ನು ಈ ವಿಡೀಯೋ ಮುಖಾಂತರವೂ ನೋಡಿ ಕಲಿಯಬಹುದಾಗಿದೆ.

ಇನ್ನೇಕೆ ತಡಾ, ನೋಡ್ಕೋಳ್ಳಿ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ಮನದಾಳದ ಮಾತು : ರುಬ್ಬಿಕೊಳ್ಳುವ ಸಾಮಗ್ರಿಗಳಲ್ಲಿ ಹಸೀ ಮೆಣಸಿನಕಾಯಿ ಬದಲಾಗಿ ಒಣ ಮೆಣಸಿನಕಾಯಿ ಮತ್ತು ಅದರ ಜೊತೆಗೆ ಸ್ವಲ್ಪ ಸಾಸಿವೆ ಬೆರಸಿ ರುಬ್ಬಿಕೊಂಡು ಇದೇ ವಿಧಾನವನ್ನು ಅನುಸರಿಸಿದರೆ ಕಾಯಿಸಾಸಿವೆ ಚಿತ್ರಾನ್ನವನ್ನು ತಯಾರಿಸಬಹುದಾಗಿದೆ.

Leave a comment