ಸಭೆ ಸಮಾರಂಭಗಳಲ್ಲಿ ಎಲೆಯ ಕೊನೆಗೆ ಅಥವಾ ಮನೆಗಳಲ್ಲಿ ಬೆಳಗಿನ ತಿಂಡಿಗೆ ನಿಂಬೇಹಣ್ಣಿನ ಚಿತ್ರಾನ್ನ ಮಾಡುವುದು ವಾಡಿಕೆ ಅದರೇ ಅದೇ ರೀತಿಯ ಚಿತ್ರಾನ್ನ ತಿಂದು ಬೇಸರವಾಗಿದ್ದಲ್ಲಿ, ಸಾಂಪ್ರದಾಯಕವಾಗಿ ಅಡುಗೆಯಾದ ಒರಳು ಕಲ್ಲು ಚಿತ್ರಾನ್ನ ಮಾಡುವುದನ್ನು ನಮ್ಮ ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿ ಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಓರಳು ಕಲ್ಲು ಚಿತ್ರಾನ್ನ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ
- ತೆಂಗಿನಕಾಯಿ ತುರಿ- 1 ಬಟ್ಟಲು
- ಜೀರಿಗೆ – 1 ಚಮಚ
- ಬೆಲ್ಲ- ಸಣ್ಣ ಗಾತ್ರ
- ಹುಣಸೇ ಹಣ್ಣು – ನಿಂಬೇ ಗಾತ್ರದ್ದು
- ಹಸೀ ಮೆಣಸಿನ ಕಾಯಿ -4-6
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಅನ್ನ – 1 ಪಾವು
ಒಗ್ಗರಣೆ ಮಾಡಿಕೊಳ್ಳಲು ಬೇಕಾಗುವ ಸಾಮಗ್ರಿಗಳು
- ಸಾಸಿವೆ – 1 ಚಮಚ
- ಕಡಲೇ ಬೇಳೆ – 1 ಚಮಚ
- ಉದ್ದಿನ ಬೇಳೆ – 1 ಚಮಚ
- ಕಡಲೇಕಾಯಿ ಬೀಜ – 2-3 ಚಮಚ
- ಒಣಮೆಣಸಿನ ಕಾಯಿ – 2-3
- ಕರೀಬೇವಿನ ಸೊಪ್ಪು – 6-8 ಎಲೆಗಳು
- ಅಡುಗೆ ಎಣ್ಣೆ – 2 ಚಮಚ
ಒರಳು ಕಲ್ಲು ಚಿತ್ರಾನ್ನ ತಯಾರಿಸುವ ವಿಧಾನ
- ಒಂದು ಪಾವು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು ಕುಕ್ಕರಿನಲ್ಲಿ ಅನ್ನ ಮಾಡಿಕೊಂಡು ಅನ್ನವನ್ನು ಆರಲು ಬಿಡಿ
- ಮೇಲೆ ತಿಳಿಸಿದ ಎಲ್ಲಾ ಪರಿಕರಗಳನ್ನು ಸಾಂಪ್ರದಾಯಕವಾದ ಒರಳುಕಲ್ಲಿ (ಈಗ ಮಿಕ್ಸಿ)ನಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಿ
- ಒಂದು ಗಟ್ಟಿ ತಳದ ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿ ಕೊಳ್ಳಿ
- ನಂತರ ಕಡಲೇ ಬೇಳೆ, ಉದ್ದಿನ ಬೇಳೆ ಮತ್ತು ಕಡಲೇ ಕಾಯಿ ಬೀಜವನ್ನು ಬಾಣಲೆಗೆ ಹಾಕಿ ಕೆಂಪಗೆ ಬರುವಂತೆ ಹುರಿದುಕೊಳ್ಳಿ
- ಈಗ ಒಣಮೆಣಸಿಕಾಯಿ ಮತ್ತು ಕರಿಬೇವನ್ನು ಹಾಕಿ ಹಸಿ ಹೋಗುವವರೆಗೂ ಹುರಿದುಕೊಳ್ಳಿ
- ಈಗ ಚಿಟುಕಿ ಇಂಗು, ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ
- ರುಬ್ಬಿಟ್ಟು ಕೊಂಡಿದ್ದ ಮಿಶ್ರಣವನ್ನು ಒಗ್ಗರಣೆಗೆ ಸೇರಿಸಿ ಮೂರ್ನಾಲ್ಕು ನಿಮಿಷಗಳಷ್ಟು ಕಾಲ ಬಾಡಿಸಿದಲ್ಲಿ ಒರಳು ಕಲ್ಲು ಚಿತ್ರಾನ್ನದ ಗೊಜ್ಜು ಸಿದ್ಧ.
- ಆರಿದ ಅನ್ನದೊಂದಿಗೆ ರುಚಿಗೆ ತಕ್ಕಷ್ಟು ಒರಳು ಕಲ್ಲು ಚಿತ್ರಾನ್ನದ ಗೊಜ್ಜನ್ನು ಬೆರೆಸಿ ಕಲಸಿದಲ್ಲಿ ರುಚಿ ರುಚಿಯದ ಸಾಂಪ್ರದಾಯಕ ಒರಳು ಕಲ್ಲು ಚಿತ್ರಾನ್ನ ಸವಿಯಲು ಸಿದ್ಧ.
ಒರಳು ಕಲ್ಲು ಚಿತ್ರಾನ್ನ ಮಾಡುವುದನ್ನು ಈ ವಿಡೀಯೋ ಮುಖಾಂತರವೂ ನೋಡಿ ಕಲಿಯಬಹುದಾಗಿದೆ.
ಇನ್ನೇಕೆ ತಡಾ, ನೋಡ್ಕೋಳ್ಳಿ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ಮನದಾಳದ ಮಾತು : ರುಬ್ಬಿಕೊಳ್ಳುವ ಸಾಮಗ್ರಿಗಳಲ್ಲಿ ಹಸೀ ಮೆಣಸಿನಕಾಯಿ ಬದಲಾಗಿ ಒಣ ಮೆಣಸಿನಕಾಯಿ ಮತ್ತು ಅದರ ಜೊತೆಗೆ ಸ್ವಲ್ಪ ಸಾಸಿವೆ ಬೆರಸಿ ರುಬ್ಬಿಕೊಂಡು ಇದೇ ವಿಧಾನವನ್ನು ಅನುಸರಿಸಿದರೆ ಕಾಯಿಸಾಸಿವೆ ಚಿತ್ರಾನ್ನವನ್ನು ತಯಾರಿಸಬಹುದಾಗಿದೆ.