ಮಾಮರವೆಲ್ಲೋ ಕೋಗಿಲೆ ಎಲ್ಲೋ, ನಾ ಕಂಡಂತೆ ಎಸ್ಪಿಬಿ

ಎಪ್ಪತರ ದಶಕದಲ್ಲಿ ನನಗೆ ಆಗಿನ್ನೂ ಬುದ್ಧಿ ಬಂದ ಸಮಯದಲ್ಲಿ ನಾನು ಬಹಳ ಕಾಲ ಗುನುಗುತ್ತಿದ್ದ ಮತ್ತು ಈಗಲೂ ನನಗೆ ನೆನಪಿನಲ್ಲಿ ಇರುವ ದೇವರಗುಡಿ ಚಿತ್ರದ ಚಿ.ಉದಯಶಂಕರ್ ಸಾಹಿತ್ಯ ರಚನೆಯ, ರಾಜನ್-ನಾಗೇಂದ್ರ ಜೋಡಿ ಸಂಗೀತ ನೀಡಿ ಶ್ರೀ ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿರುವ ಮಾಮರವೆಲ್ಲೋ ಕೋಗಿಲೆ ಎಲ್ಲೋ, ಏನೀ ಸ್ನೇಹ ಸಂಬಂಧ, ಎಲ್ಲಿಯದೋ ಈ ಅನುಬಂಧ ಹಾಡು ಇಂದಿನ ದಿನಕ್ಕೆ ನಿಜಕ್ಕೂ ಅನ್ವರ್ಥವಾಗಿದೆ.

ಜೂನ್ 4, 1946 ರಲ್ಲಿ ಆಂಧ್ರ ಪ್ರದೇಶದ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿ ತಮಿಳುನಾಡಿನ ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡಿ ಕರ್ನಾಟಕ, ಕೇರಳವಲ್ಲದೇ ಇಡೀ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಮರೆಯಾದ ಅಧ್ಭುತವಾದ ಗಾಯಕ, ನಟ, ಕಂಠದಾನ ಕಲಾವಿದ, ಸಂಗೀತ ನಿರ್ದೇಶಕ, ಚಿತ್ರ ನಿರ್ಮಾಪಕ, ಸ್ವರ ಮಾಂತ್ರಿಕ, ಶ್ರೀ ಶ್ರೀಪತಿ ಪಂಡಿತಾರಾಧ್ಯುಲ ಬಾಲ ಸುಬ್ರಹ್ಮಣ್ಯಂ ಎಲ್ಲರ ಪ್ರೀತಿಯ ಎಸ್.ಪಿ.ಬಿ, ಇನ್ನೂ ಆತ್ಮೀಯರಿಗೆ ಬಾಲು ಇಂದು ನಮ್ಮನ್ನು ಅಗಲಿರುವುದು ನಿಜಕ್ಕೂ ಸಂಗೀತಲೋಕಕ್ಕೆ ತುಂಬಲಾರದ ನಷ್ಟ ಎಂದರೂ ತಪ್ಪಾಗಲಾರದು.

ಅವರ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯವಾದ್ದರಿಂದ ನಾ ಕಂಡಂತೆ ಎಸ್ಪಿಬಿ ಅವರನ್ನು ನಿಮಗೆ ಪರಿಚಯಿಸಿ ಕೊಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.

ಚಿತ್ತೂರಿನ ಕೊನೇಟಮ್ಮಪೇಟಾ ಗ್ರಾಮದ ಎಸ್.ಪಿ.ಸಾಂಬಮೂರ್ತಿ ಮತ್ತು ಶಕುಂತಲಮ್ಮ ಎಂಬ ಸಂಪ್ರದಾಯಸ್ಥ ದಂಪತಿಗಳ ಮುದ್ದು ಮಗನಾಗಿ ಜನಿಸಿದ ಬಾಲುರವರಿಗೆ ಸಂಗೀತ ಎನ್ನುವುದು ದೈವದತ್ತವಾಗಿ ಪೂರ್ವಜನ್ಮದ ಸುಕೃತವಾಗಿ ಬಂದಿತ್ತು ಎಂದರೆ ತಪ್ಪಾಗಲಾರದು. ಅವರ ತಂದೆಯವರು ಹೆಸರಾಂತ ಹರಿಕಥಾ ವಿದ್ವಾಂಸರಾಗಿದ್ದ ಕಾರಣ ಅವರ ಜೊತೆ ಜೊತೆಯಲ್ಲಿಯೇ, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಕಲಿತರೇ ಹೊರತು, ಶಾಸ್ತ್ರೀಯವಾಗಿ ಯಾರ ಬಳಿಯಲೂ ಕಲಿದದಿದ್ದರೂ ಸಂಗೀತ ದಿಗ್ಗಜರಾಗಿ ಬೆಳೆದದ್ದು ನಿಜಕ್ಕೂ ಆಶ್ವರ್ಯಕರ.

ಓದಿನಲ್ಲಿಯೂ ಚುರುಕಾಗಿದ್ದ ಬಾಲು. ಇಂಜೀನಿಯರಿಂಗ್ ಕಲಿಯಲು ಆಗಿನ ಕಾಲದ ಮದ್ರಾಸಿಗೆ ಬಂದಾಗ ಅತ್ಯಂತ ಸುರದ್ರೂಪಿಯಾಗಿದ್ದ ಬಾಲು ಚಲನಚಿತ್ರ ನಟರಾಗಬೇಕೆಂದು ಬಯಸಿದ್ದರು. ದೇವದತ್ತವಾದ ಸುಶ್ರಾವ್ಯವಾದ ಕಂಠವನ್ನು ಹೊಂದಿದ್ದರಿಂದ ಅವರ ಗೆಳೆಯರ ಒತ್ತಾಯದ ಮೇರೆಗೆ 1966 ರಲ್ಲಿ ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ಅವರು ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ, ಶ್ರಮವಹಿಸಿದರೆ ಇಂಜಿನೀಯರಿಂಗ್ ಯಾರು ಬೇಕಾದರೂ ಮಾಡಬಹುದು ಆದರೆ ಎಲ್ಲರಿಗೂ ಈ ಶಾರೀರ ಇರುವುದಿಲ್ಲವಾದ್ದರಿಂದ, ಸಂಗೀತವೇ ತಮ್ಮ ಮುಂದಿನ ಕಾರ್ಯಕ್ಷೇತ್ರ ಎಂದು ಕೂಡಲೇ ಕಂಡು ಕೊಂಡು ಕೋದಂಡಪಾಣಿಯವರ ತೆಲುಗು ಚಿತ್ರ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಚಲಚಿತ್ರಗಳಲ್ಲಿ ಹಿನ್ನಲೆ ಗಾಯನ ಮಾಡುವ ಮೂಲಕ ತಮ್ಮ ಗಾಯನ ವೃತ್ತಿಯನ್ನಾರಂಭಿಸಿದರು.

ಶಾಸ್ತ್ರೀಯ ಸಂಗೀತವನ್ನು ಕಲಿತಿಲ್ಲದಿದ್ದ ಕಾರಣ ಆರಂಭದಲ್ಲಿ ಏಕಲವ್ಯನಂತೆ ಶ್ರೀ ಘಂಟಸಾಲ ಅವರ ಮಾನಸ ಶಿಷ್ಯರಾಗಿದ್ದ ಬಾಲು ನಂತರ ಮತ್ತೊಬ್ಬ ಮೇರು ಗಾಯಕ ಶ್ರೀ ಯೇಸುದಾಸ್ ಅವರನ್ನೂ ಸಹಾ ತಮ್ಮ ಗುರು ಎಂದೇ ಎಲ್ಲರಿಗೂ ಪರಿಚಯಿಸುತ್ತಾರೆ.

1967ರಲ್ಲಿ ಎಂ.ಆರ್. ವಿಠ್ಠಲ್ ಅವರ ನಿರ್ದೇಶನದ ಹಾಸ್ಯರತ್ನ ನರಸಿಂಹ ರಾಜು ಅವರು ಪ್ರಮುಖ ಪಾತ್ರದಲ್ಲಿದ್ದ ನಕ್ಕರೆ ಅದೇ ಸ್ವರ್ಗ ಚಿತ್ರದಲ್ಲಿ ಸಂಗೀತ ನಿರ್ದೇಶಕ ಎಂ ರಂಗರಾವ್ ಅವರ ಮೂಲಕ ಬಾಲುರವರು ಕನ್ನಡ ಚಿತ್ರರಂಗವನ್ನು ಪ್ರವೇಶಿಸುತ್ತಾರೆ.

ಅಂದಿನಿಂದ ಇಂದಿನ ವರೆಗೂ ಸುಮಾರು ಐವತ್ತು ವರ್ಷಗಳ ಕಾಲ ಅಕ್ಷರಶಃ ದಕ್ಷಿಣ ಭಾರತದ ಬಹುತೇಕ ನಟರುಗಳ ಶಾರೀರವಾಗಿ ಪ್ರಸಿದ್ಧಿಯನ್ನು ಪಡೆಯುತ್ತಾರೆ.

ಉಳಿದೆಲ್ಲಾ ಭಾಷೆಗಳಿಗಿಂತಲೂ ಅವರಿಗೆ ಕನ್ನಡ ಮೇಲೆ ವಿಶೇಷವಾದ ಪ್ರೀತಿಯನ್ನು ಇಟ್ಟುಕೊಂಡಿದ್ದ ಬಾಲುರವರು ನನಗೆ ಮುಂದಿನ ಜನ್ಮವೇನದರೂ ಇದ್ದಲ್ಲಿ ಅದು ಕನ್ನಡನಾಡಿನಲ್ಲಿ ಕನ್ನಡಿಗನಾಗಿ ಜನ್ಮಿಸಲು ಇಚ್ಛಿಸುತ್ತೇನೆ ಎಂದು ಅನೇಕ ಸಭೆ ಸಮಾರಂಭಗಳಲ್ಲಿ ಘಂಟಾಘೋಷವಾಗಿ ಹೇಳಿ ತಮ್ಮ ಕನ್ನಡತನವನ್ನು ಎತ್ತಿ ಮೆರೆದಿದ್ದಾರೆ.

ಬೇರಾವ ಭಾಷೆಯಲ್ಲಿಯೂ ಇರದ, ಕೇವಲ ಕನ್ನಡ ಸಾಹಿತ್ಯಲೋಕದ ಅಧ್ಬುತ ಕೊಡುಗೆಯಾದ ಭಾವಗೀತೆಗಳ ಮೇಲೆ ಅವರಿಗೆ ಅಪಾರವಾದ ಆಸ್ಥೆ ಮತ್ತು ಆಸಕ್ತಿ. ಹಾಗಾಗಿ ಚಿತ್ರಗಳಲ್ಲಿ ಉದರನಿಮಿತ್ತಕ್ಕಾಗಿ ಹಿನ್ನಲೆ ಗಾಯನವನ್ನು ಹಾಡುತ್ತಿದ್ದರೆ, ಆತ್ಮ ತೃಪ್ತಿಗಾಗಿ ಅನೇಕ ಭಾವಗೀತೆಗಳನ್ನು ಮತ್ತು ಭಕ್ತಿಗೀತೆಗಳನ್ನು ಹಾಡಿರುವುದು ಈಗ ಇತಿಹಾಸ.

ಬಾಲು, ಇಳೆಯರಾಜ ಮತ್ತು ಅವರ ಸಹೋದರ ಗಂಗೈ ಅಮರನ್ ಅವರ ಗೆಳೆತನ ನಿಜಕ್ಕೂ ಅಪರೂಪ. ನಾಟಕಗಳಲ್ಲಿ ಸಂಗೀತ ನುಡಿಸುತ್ತಿದ್ದ ಇಳೆಯರಾಜ ಮತ್ತು ಅವರ ಸಹೋದರ ಮತ್ತು ಬಾಲು ಬಹುಶಃ ಏಕ ಕಾಲದಲ್ಲಿಯೇ ಚಲನಚಿತ್ರರಂಗದ ಸಂಗೀತ ಲೋಕಕ್ಕೆ ಕಾಲಿಟ್ಟು ಅತೀ ಶೀಘ್ರದಲ್ಲಿಯೇ ಏಕವಚನದಲ್ಲಿ ಒಬ್ಬರನ್ನೊಬ್ಬರು ಕರ್ದುಕೊಳ್ಳುವಷ್ಟರ ಮಟ್ಟಿಗಿನ ಗಳಸ್ಯ ಗಂಟಸ್ಯದ ಗೆಳೆಯರಾಗಿ ಸಾವಿರಾರು ಹಾಡುಗಳ ಕೊಡುಗೆಯನ್ನು ನೀಡಿದ್ದಾರೆ.

ಕೇವಲ ತಾವೊಬ್ಬರೇ ಗಾಯಕರದರೇ ಸಾಲದು ತಮ್ಮೊಂದಿಗೆ ಹತ್ತು ಹಲವಾರು ಗಾಯಕರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಬೇಕು ಎನ್ನುವುದು ಬಾಲುರವರ ಆಸೆಯಾಗಿದ್ದ ಕಾರಣ, ಈ-ಟಿವಿ ಸಹಯೋಗದೊಂದಿಗೆ ಕನ್ನಡದಲ್ಲಿ ಎದೆ ತುಂಬಿ ಹಾಡುವೆನು ರೀತಿಯಲ್ಲಿಯೇ ತಮಿಳು ಮತ್ತು ತೆಲುಗಿನಲ್ಲಿಯೂ ಅದೇ ರೀತಿಯ ಕಾರ್ಯಕ್ರಮದ ನಿರೂಪಕರಾಗಿ ಸಹಸ್ರಾರು ಉದಯೋನ್ಮುಖ ಗಾಯಕರಿಗೆ ಅದ್ಭುತವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಲ್ಲದೇ, ಅವರ ಸಣ್ಣ ತಪ್ಪುಗಳನ್ನು ತಿದ್ದಿ ತೀಡಿ ಸಹಸ್ರಾರು ಗಾಯಕ, ಗಾಯಕಿಯರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಹೋಗಿರುವುದು ಅಭಿನಂದನಾರ್ಹ ಮತ್ತು ಅನುಕರಣಿಯವೇ ಸರಿ.

ಮಾತೃಭಾಷೆ ತೆಲುಗು ಆಗಿದ್ದರೂ, ಸಂಸ್ಕೃತ ಭಾಷೆಯ ಮೇಲೆ ಅವರಿಗಿದ್ದ ಹಿಡಿತದಿಂದಾಗಿ ಅವರು ಯಾವುದೇ ಭಾಷೆಯ ಹಾಡುಗಳನ್ನು ಹಾಡಿದರೂ ಅಪಭ್ರಂಶವಿಲ್ಲದೇ, ಸ್ಪಷ್ಟವಾಗಿ ಮತ್ತು ಸುಲಲಿತವಾಗಿ ಹಾಡುತ್ತಿದ್ದದ್ದು ವಿಶೇಷವಾದ ಸಂಗತಿ.

ಹಾಗಾಗಿಯೇ, 5 ದಶಕಗಳ ವೃತ್ತಿಜೀವನದಲ್ಲಿ, 16 ಭಾಷೆಗಳಲ್ಲಿ, 40 ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿ ಗಿನ್ನೆಸ್ ಬುಕ್ ದಾಖಲೆಯನ್ನು ಮಾಡಿರುವ ಏಕೈಕ ಗಾಯಕ ನಮ್ಮ ಪ್ರೀತಿಯ ಬಾಲು ಎನ್ನುವುದು ಹೆಮ್ಮೆಯ ವಿಷಯ.

ಮೈಕಿನ ಮುಂದೆ ನಿಂತುಬಿಟ್ಟರೆ ಅವರಷ್ಟು ವೃತ್ತಿಪರ ಗಾಯಕ ಮತ್ತೊಬ್ಬರಿಲ್ಲ. ಹಾಗಾಗಿಯೇ, ಒಂದೇ ದಿನದಲ್ಲಿ 15-20 ಹಾಡುಗಳನ್ನು ಸುಲಲಿತವಾಗಿ ಹಾಡಿರುವ ದಾಖಲೆಯೂ ಅವರದ್ದೇ ಆಗಿದೆ.

ಅವರ ಮತ್ತೊಂದು ವೈಶಿಷ್ಟ್ಯವೆಂದರೆ ಧ್ವನಿ ಅನುಕರಣೆ. ಹಾಡುವ ಮೊದಲು, ಆ ಹಾಡಿಗೆ ಆಭಿನಯಿಸುವ ಕಲಾವಿದರ ಹೆಸರು ಮತ್ತು ಚಿತ್ರದ ಸನ್ನಿವೇಶಗಳನ್ನು ತಿಳಿದುಕೊಳ್ಳುತ್ತಿದ್ದ ಬಾಲು ನಂತರಅ ಕಲಾವಿದರನ್ನು ನೆನಸಿಕೊಂಡು ಮೈಕ್ ಮುಂದೆ ನಿಂತರೇ, ಅದೇ ಕಲಾವಿದರೇ ಹಾಡುತ್ತಿದ್ದಾರೇನೋ ಎನ್ನುವಂತೆ ಹಾಡುತ್ತಿದ್ದರು.

ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್ ಅಂಬರೀಶ್, ಶ್ರೀನಾಥ್,ಶಿವರಾಜ್ ಕುಮಾರ್ ಅಲ್ಲದೇ ಎಲ್ಲರಿಗಿಂತಲೂ ಗಡಸು ಧ್ವನಿ ಮತ್ತು ವಿಶೇಷ ಮ್ಯಾನರಿಸಮ್ಮಿನ ಟೈಗರ್ ಪ್ರಭಾಕರ್ ಅವರಿಗೂ ಸಹಾ ಬಾಲು ಸುಲಲಿತವಾಗಿ ಹಾಡುತ್ತಿದ್ದದ್ದು ವಿಶೇಷ.

ತೆಲುಗಿನ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮಗ ನಾಗಾರ್ಜುನ ಮತ್ತವರ ಮೊಮ್ಮಗ ಅಕ್ಕಿನೇನಿ ನಾಗ ಚೈತನ್ಯ ಹೀಗೆ ಒಂದೇ ಕುಟುಂಬದ ಮೂರು ತಲೆಮಾರಿಗೆ ಹಾಡುಗಳನ್ನು ಹಾಡಿರುವುದು ಬಾಲು ಅವರ ಹೆಗ್ಗಳಿಕೆ.

ಇದೇ ಕಾರಣದಿಂದಾಗಿಯೇ ಅನೇಕ ಸಾಧಾರಣ ನಟರನ್ನು ಸಹಾ ಬಾಲುರವರು ತಮ್ಮ ಅದ್ಭುತ ಗಾಯನದಿಂದ ರಾತ್ರೋ ರಾತ್ರಿ ಸೂಪರ್ ಸ್ಟಾರ್ ಗಳನ್ನಾಗಿ ಮಾಡಿಬಿಟ್ಟಿದ್ದರು ಎಂದರೂ ಅತಿಶಯೋಕ್ತಿಯೇನಲ್ಲ.

ಬಾಲುರವರು ತಮ್ಮ ಚಿತ್ರದ ಹಾಡುಗಳನ್ನು ಹಾಡಿದಲ್ಲಿ ತಮ್ಮ ನಟನೆಗೆ ಹೆಚ್ಚಿನ ಸ್ಪೂರ್ತಿ ಬರುತ್ತದೆ ಎಂಬ ಕಾರಣದಿಂದಾಗಿ ದಿ.ವಿಷ್ಣುವರ್ಧನ್ ತಮ್ಮೆಲ್ಲಾ ಹಾಡುಗಳನ್ನು ಬಾಲುರವರ ಕೈಯಲ್ಲಿ ಹಾಡಿಸಬೇಕೆಂದು ನಿರ್ಮಾಪಕರಲ್ಲಿ ಒತ್ತಾಯ ಮಾಡುತ್ತಿದ್ದದ್ದು ವಿಶೇಷ.

ಕನ್ನಡ ಕುರಿತಾದ ಬಹುತೇಕ ಹಾಡುಗಳನ್ನು ಹಾಡಿರುವ ಕೀರ್ತಿಯೂ ಬಾಲುರವರದ್ದೇ. ಅದರಲ್ಲೂ ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ, ಕೇಳಿಸದೇ ಕಲ್ಲು ಕಲ್ಲಿನಲಿ, ಕನ್ನಡನುಡೀ.., ಕರ್ನಾಟಕದ ಇತಿಹಾಸದಲೀ, ಕನ್ನಡ ನಾಡಿನ ಕರಾವಳಿ, ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ, ಕನ್ನಡಮ್ಮನ ದೇವಾಲಯ, ಕನ್ನಡನಾಡಿನ ಜೀವನದೀ ಕಾವೇರೀ, ಹಾಡುಗಳು ಯಾವುದೇ ಕನ್ನಡ ಸಂಬಂಧಿತ ಕಾರ್ಯಕ್ರಮಗಳಲ್ಲಿ ಅಜರಾಮರವಾಗಿ ಮೊಳಗುತ್ತಲೇ ಇರುತ್ತವೆ.

ತಮ್ಮ ಈ ಅಧ್ಭುತ ಸಾಧನೆಗಳಿಂದಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಹುಡುಕಿ ಬಂದವು. ತೆಲುಗಿನ ಶಂಕರಾಭರಣಂ ಮತ್ತು ಸಾಗರ ಸಂಗಮ ಚಿತ್ರ, ಕನ್ನಡದ ಗಾನ ಯೋಗಿ ಪಂಚಾಕ್ಷರಿ ಗಾವಾಯಿ ಚಿತ್ರ, ಹಿಂದಿಯ ಏಕ್ ದುಜೆ ಕೇಲಿಯೇ ಚಿತ್ರವೂ ಸೇರಿದಂತೆ ಒಟ್ಟು 6 ಬಾರಿ ರಾಷ್ಟ್ರಪ್ರಶಸ್ತಿ, ಲೆಕ್ಕವಿಲ್ಲದಷ್ಟು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗಳು,25 ಬಾರಿ ನಂದಿ ಪ್ರಶಸ್ತಿಗಳು, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳಲ್ಲದೇ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ತಮ್ಮ ಆ, ದಡೂತಿ ದೇಹದಲ್ಲೂ ಒಬ್ಬ ಅಧ್ಭುತ ಕಲಾವಿದನಿದ್ದಾನೆ ಎಂಬುದನ್ನು ತಮಿಳು, ತೆಲುಗು ಮತ್ತು ಕನ್ನಡದ ಹಲವಾರು ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ತೋರಿಸಿಕೊಟ್ಟಿದ್ದಲ್ಲದೇ, ಯಾವುದೇ ಹಮ್ಮು ಬಿಮ್ಮಿಲ್ಲದೇ ಹಲವಾರು ನಟರಿಗೆ ಕಂಠದಾನವನ್ನೂ ಮಾಡಿರುವುದು ಅವರ ಹೆಗ್ಗಳಿಕೆ.

ಅಪಾರವಾದ ದೈವಿಕ ಭಕ್ತರಾಗಿದ್ದ ಬಾಲುರವರ ಪವಡಿಸೂ ಪರಮಾತ್ಮ ಶ್ರೀ ವೇಕಂಟೇಶ ಹಾಡಿನ ಮೂಲಕವೇ ಪ್ರತೀ ದಿನವೂ ತಿರುಪತಿ ಸಪ್ತಗಿರಿವಾಸನ್ನು ಮುಗಿಸುವ ಪದ್ದತಿ ಇದೆ. ಕೊಲ್ಲೂರು, ಶೃಂಗೇರಿ, ಹೊರನಾಡು ದೇವಿಯರ ನೂರಾರು ಭಕ್ತಿ ಗೀತೆಗಳನ್ನು ಹಾಡಿರುವುದಲ್ಲದೇ, ಕಾಶೀ ವಿಶ್ವನಾಥ, ಶಬರಿಮಲೈ ಶ್ರೀಅಯ್ಯಪ್ಪ, ಧರ್ಮಸ್ಥಳದ ಶ್ರೀ ಮಂಜುನಾಥ ಸ್ಚಾಮಿ ಮತ್ತು ಶಿರಡಿಯ ಗರ್ಭಗುಡಿಯಲ್ಲಿಯೇ ನಿಂತು ತಮ್ಮ ಸಂಗೀತ ಸೇವೆಯನ್ನು ಆ ಭಗವಂತನಿಗೆ ಸಮರ್ಪಿಸಿದ ಕೀರ್ತಿ ಅವದ್ದಾಗಿದೆ. ತಮ್ಮ ಹುಟ್ಟೂರಿನ ಸಮಸ್ತ ಆಸ್ತಿಯನ್ನು ಕಂಚಿ ಶ್ರೀ ಕಾಮಕೋಟಿ ‌ಮಠಕ್ಕೆ ದಾನವಾಗಿ ನೀಡಿರುವುದು ಶ್ಲಾಘನೀಯ.

ಬಾಲುರವರು ತಮ್ಮ ವೃತ್ತಿ ಜೀವನದಲ್ಲಿ ಈ ಕೆಳಗಿನವು ಅಂಖ್ಯೆ ಸಂಖ್ಯೆಗಳದರೇ, ಈ ಮೂಲಕ ಅವರು ಗೆದ್ದ ಹೃದಯಗಳ ಸಂಖ್ಯೆ ಕೋಟ್ಯಾಂತರ.

  • 16 ಭಾಷೆಗಳಲ್ಲಿ
  • ಸುಮಾರು 40000 ಹಾಡುಗಳು
  • 10 ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಣೆ
  • 26 ಚಲನಚಿತ್ರಗಳಲ್ಲಿ ಕಂಠದಾನ ಕಲಾವಿದ
  • 72 ಚಲನಚಿತ್ರಗಳಲ್ಲಿ ನಟನೆ
  • 46 ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ

ಯಾವುದೇ ಮೇರು ನಟರು ಅಗಲಿದಾಗ ಅವರ ಸ್ಮರಣಾರ್ಥದ ಸಮಾರಂಭದಲ್ಲಿ ತಪ್ಪದೇ ಭಾಗವಹಿಸಿ ಅವರ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದ ಬಾಲುವರಿಗೇ ಇಂದು ಈ ರೀತಿಯಾಗಿ ಶ್ರದ್ಧಾಂಜಲಿ ಅರ್ಪಿಸಬೇಕಾಗಿ ಬಂದಿರುವುದು ನಿಜಕ್ಕೂ ದುಃಖಕರವಾದ ವಿಷಯ

ಅದೆಷ್ಟೋ ಬಾರಿ ಅನೇಕ ಹಿರಿಯ ಸಂಗೀತ ದಿಗ್ಗಜರು ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದಾಗ ಖುದ್ದಾಗಿ ಎಲ್ಲಾ ಮಾಧ್ಯಮಗಳ ಮುಂದೆ ಬಂದು ಸಮಜಾಯಿಷಿ ನೀಡುತ್ತಿದ್ದ ಬಾಲೂರವರೇ ಇಂದು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ನಂಬಲು ಕಷ್ಟ ಸಾಧ್ಯವೇ ಸರಿ.

ಬಾಲುರವರರು ಭೌತಿಕವಾಗಿ ಇನ್ನು ಮುಂದೆ ನಮ್ಮೊಂದಿಗೆ ಇರಲಾರದಾದರೂ, ಅವರ ಹಾಡುಗಳು, ನಟನೆ ಮತ್ತು ವ್ಯಕ್ತಿತ್ವಗಳ ಮೂಲಕ ಇನ್ನು ಸಹಸ್ರಾರು ವರ್ಷಗಳು ನಮ್ಮೊಂದಿಗೆ ಖಂಡಿತವಾಗಿಯೂ ಇದ್ದೇ ಇರುತ್ತಾರೆ ಎನ್ನುವ ನಂಬಿಕೆ ನಮ್ಮೆಲ್ಲರದ್ದಾಗಿದೆ. ಬಾಲೂರವರ ಆಸೆಯಂತೆ ಅತೀ ಶೀಘ್ರದಲ್ಲಿಯೇ ಕನ್ನಡ ನಾಡಿನಲ್ಲಿ ಕನ್ನಡಿಗನಾಗಿ ಜನ್ಮವೆತ್ತಿ ಬರಲಿ ಮತ್ತು ತಾವೇ ಬಿಟ್ಟು ಹೋದ ಸಂಗೀತ ಲೋಕವನ್ನು ಮತ್ತಷ್ಟು ಪ್ರಕಾಶಮಾನ ಗೊಳಿಸಲಿ ಎನ್ನುವುದೇ ನಮ್ಮೆಲ್ಲರ ಆಸೆಯಾಗಿದೆ

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s