ಸಾಧಾರಣವಾಗಿ ಗೆಳೆಯರ ಗಂಪಿನಲ್ಲಿ ಮಾತನಾಡುತ್ತಿರುವಾಗಲೋ ಅಥವಾ ಕಛೇರಿಗಳಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿರುವಾಗ ಅಪ್ಪಿ ತಪ್ಪಿ ಅಲ್ಲೊಬ್ಬ ಜನ್ಮತ: ಬ್ರಾಹ್ಮಣ ಒಬ್ಬ ಇದ್ದರೂ ಸಾಕು ನೀವು ಬಿಡ್ರಪ್ಪಾ ಪುಳಿಚಾರುಗಳು. ಬ್ರಾಹ್ಮಣ ಭೋಜನ ಪ್ರಿಯಃ ಎಂದು ಬ್ರಾಹ್ಮಣರು ಮಾತ್ರವೇ ಊಟ ಮಾಡುವುದು. ಮಿಕ್ಕವರೆಲ್ಲಾ ತುತ್ತಿಗೆ ಮುತ್ತಿಡುತ್ತಾರೆ ಎನ್ನುವಂತೆ ಎಲ್ಲರ ಮುಂದೆ ಕೊಂಕಾಗಿ ಆಡಿಕೊಳ್ಳುತ್ತಾ, ಆ ಜನ್ಮತಃ ಬ್ರಾಹ್ಮಣನನ್ನು ಮುಜುಗರಕ್ಕೀಡು ಮಾಡುತ್ತಾ ಅಪಹಾಸ್ಯ ಮಾಡಿ ಗೊಳ್ ಎಂದು ನಗುವುದನ್ನು ಎಲ್ಲಡೆಯಲ್ಲೂ ಕಾಣಬಹುದಾಗಿದೆ.
ಅದೇಕೋ ಏನೋ ನಮ್ಮ ಜನರಿಗೆ ಅರ್ಧಂಬರ್ಧ ತಿಳಿದುಕೊಂಡು, reading in between the lines ಎನ್ನುವಂತೆ ತಮಗೆ ಏನು ಬೇಕೋ? ಎಷ್ಟು ಬೇಕೋ? ಅಷ್ಟನ್ನು ಮಾತ್ರವೇ ಹೇಳುವುದರಲ್ಲಿಯೇ ಅದೇನೋ ಖುಷಿ. ಆ ಸಂಪೂರ್ಣ ಶ್ಲೋಕ ಈ ರೀತಿಯಾಗಿದೆ.
ಅಲಂಕಾರ ಪ್ರಿಯೋ ವಿಷ್ಣು, ಅಭಿಷೇಕ ಪ್ರಿಯಃ ಶಿವಃ |
ನಮಸ್ಕಾರ ಪ್ರಿಯಃ ಭಾನುಃ, ಬ್ರಾಹ್ಮಣ ಭೋಜನ ಪ್ರಿಯಃ ||
ಈ ಮೇಲಿನ ಶ್ಲೋಕದ ಅರ್ಥವೇನಂದರೆ, ಭಗವಾನ್ ವಿಷ್ಣುವಿಗೆ ಅಲಂಕಾರ ತುಂಬಾ ಇಷ್ಟವಾದ ಕಾರಣ, ಆತ ಅಲಂಕಾರ ಪ್ರಿಯ. ಇನ್ನು ಶಿವನಿಗೆ ಅಭಿಷೇಕವೆಂದರೆ ತುಂಬಾ ಇಷ್ಠ. ಹಾಗಾಗಿ ಆತ ಅಭಿಷೇಕ ಪ್ರಿಯ. ಸೂರ್ಯ ಎಂದ ಕೂಡಲೇ ಥಟ್ ಅಂತಾ ನೆನಪಿಗೆ ಬರುವುದೇ ಪ್ರತ್ಯಕ್ಷ ದೇವರು ಮತ್ತು ಸೂರ್ಯ ನಮಸ್ಕಾರ ಹಾಗಾಗಿ ಸೂರ್ಯ ನಮಸ್ಕಾರ ಪ್ರಿಯ. ಕಡೆಯ ವಾಕ್ಯ ಬ್ರಾಹ್ಮಣ ಭೋಜನ ಪ್ರಿಯಃ ಎಂದರೆ ಬ್ರಾಹ್ಮಣರು ಊಟ ಮಾಡಲು ಇಷ್ಟಪಡ್ತಾರೆ, ಅಂತ ಅಲ್ಲ. ಬ್ರಾಹ್ಮಣರಿಗೆ ಭೋಜನ ಮಾಡಿಸಿದರೆ ಸಕಲ ದೇವತೆಗಳೂ ತೃಪ್ತರಾಗುತ್ತಾರೆ ಎಂದರ್ಥ. ಇಲ್ಲಿ ಬ್ರಾಹ್ಮಣ ಎಂದರೆ ಬ್ರಹ್ಮತ್ವವನ್ನು ಪಾಲಿಸುವವರು ಎಂದರ್ಥವಾಗುತ್ತದೆಯೇ ಹೊರತು ಜನ್ಮತಃ ಬ್ರಾಹ್ಮಣರೆಂದಲ್ಲ.
ಈ ರೀತಿಯ ಕೊಂಕುಗಳಿಂದ ಬೇಸರಗೊಂಡ ಬ್ರಾಹ್ಮಣರೂ ಸಹಾ ಅದು ಬ್ರಾಹ್ಮಣ ಭೋಜನ ಪ್ರಿಯಃ ಎಂದಲ್ಲಾ, ಅದು ಬ್ರಾಹ್ಮಣ ಬಹುಜನ ಪ್ರಿಯಃ ಎಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಪರದಾಡುವುದೂ ಉಂಟು. ನಿಜ ಹೇಳಬೇಕೆಂದರೆ ಈ ಎರಡೂ ವಾಕ್ಯಗಳೂ ಸತ್ಯ ಎಂದರೆ ಎಲ್ಲರಿಗೂ ಆಶ್ವರ್ಯವಾಗಬಹುದು. ಬ್ರಾಹ್ಮಣರು ತಮ್ಮ ವಿದ್ಯಾ, ಬುದ್ಧಿ ಮತ್ತು ಸತ್ಚಾರಿತ್ರದಿಂದ ಬಲು ಬೇಗನೆ ತಮ್ಮ ಸುತ್ತ ಮುತ್ತಲಿನ ಜನರ ನಡುವೆ ಜನಪ್ರಿಯರಾಗಿ ಬಿಡುತ್ತಾರೆ ಎಂದರೆ ಉತ್ರ್ಪೇಕ್ಷೆಯೇನಲ್ಲ. ಹಾಗಾಗಿಯೇ ಬ್ರಾಹ್ಮಣರಿಗೆ ಮಿತ್ರರಿಗಿಂತ ಶತ್ರುಗಳೇ ಹೆಚ್ಚು ಎನ್ನುವುದೂ ಸತ್ಯ. ಮಹಾ ಬ್ರಾಹ್ಮಣ ಚಾಣುಕ್ಯನೇ ಹೇಳಿರುವಂತೆ ಉಳಿದವರು ನಿಮ್ಮ ಬಗ್ಗೆ ಹೆಚ್ಚು ಹೆಚ್ಚಾಗಿ ಮಾತಾನಾಡಿಕೊಳ್ಳುತ್ತಿದ್ದಾರೆ ಮತ್ತು ನಿಮ್ಮನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದರೆ ನೀವು ಸನ್ಮಾರ್ಗದಲ್ಲಿ ಅವರಿಗಿಂತಲೂ ಉತ್ತಮವಾಗಿ ನಡೆಯುತ್ತಿದ್ದೀರಿ ಎಂದರ್ಥ. ಹಾಗಾಗಿ ಬ್ರಾಹ್ಮಣರು ಧೃತಿಗೆಡದೆ ಧೈರ್ಯಗೆಡದೆ ಇಂತಹ ಕ್ಷುಲ್ಲಕ ಮಾತುಗಳಿಗೆ ಗಮನ ಕೊಡುವ ಅಗತ್ಯವಿಲ್ಲದೆ ಮುನ್ನಡೆಯುವುದು ಉತ್ತಮ.
ಇನ್ನು ಬ್ರಾಹ್ಮಣ ಭೋಜನ ಪ್ರಿಯಃ ಎಂಬ ವಾಕ್ಯವನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಬ್ರಾಹ್ಮಣರು ಸಂಕೋಚವೇ ಪಡಬಾರದು. ನ ಅನ್ನಾತ್ ಪರಂ ಬ್ರಹ್ಮ ಎಂಬ ಉಕ್ತಿಯ ಪ್ರಕಾರ ಅನ್ನಕ್ಕಿಂತ ಮಿಗಿಲಾದ ದೇವರಿಲ್ಲ. ಪ್ರತಿಯೊಬ್ಬ ಜೀವಿಯೂ ಬದುಕಲು ಆಹಾರ ಅತ್ಯಗತ್ಯವೇ ಹೌದು. ಹಾಗೆಂದ ಮಾತ್ರಕ್ಕೆ ಹಸಿವಾದಾಗ ಸಿಕ್ಕಿದ್ದು ಪಕ್ಕಿದ್ದನ್ನು ಹೇಗೆಂದರೆ ಹಾಗೆ, ಎಲ್ಲೆಂದರೆ ಅಲ್ಲಿ ತಿನ್ನಲು ಆಗುವುದಿಲ್ಲ. ಅದಕ್ಕೊಂದು ಸುಂದರ ರೂಪುರೇಷೆಯಿದೆ. ಅದರಲ್ಲಿ ಶುಚಿ, ರುಚಿ ಮತ್ತು ಸಂತೃಪ್ತಿಗಳಿಗೆ ಮಹತ್ವವನ್ನು ನೀಡುತ್ತದೆ. ಹಾಗಾಗಿ ಬ್ರಾಹ್ಮಣರು ಊಟವನ್ನು ಕೇವಲ ಜೀವಿಸಲು ಅವಶ್ಯಕವಾದ ಸಾಧನ ಎಂದು ತಿಳಿಯದೇ, ಅದನ್ನು ಒಂದು ಯಜ್ಞ ಎಂದೇ ಭಾವಿಸಿ ಮತ್ತು ಅದನ್ನು ಪ್ರತಿದಿನವೂ ಚಾಚೂ ತಪ್ಪದೆ ಪಾಲಿಸುತ್ತಾರೆ.
ಆಡುಗೆ ಆರಂಭವಿಸುವ ಮುನ್ನಾ ದೇವರನ್ನು ಪ್ರಾರ್ಥಿಸಿ, ಅಡುಗೆ ಮಾಡಿದ ನಂತರ ಅದನ್ನು ದೇವರಿಗೆ ನೈವೇದ್ಯ ಎಂದು ಸಮರ್ಪಿಸಿ, ಆ ನೈವೇದ್ಯವನ್ನು ಸ್ವೀಕರಿಸುವಾಗಲೂ ಅನ್ನಪೂರ್ಣೇಶ್ವರಿಯನ್ನು ನೆನದು, ನಂತರ ಊಟ ಮುಗಿದ ನಂತರವೂ ಅನ್ನದಾತಾ ಸುಖೀಃ ಭವ ಎನ್ನುತ್ತಲೇ ಕೈ ತೊಳೆಯುವ ಮೂಲಕ ಊಟಕ್ಕೆ ಮರ್ಯಾದೆ ಕೊಡುತ್ತಾರೆ.
ಪ್ರತೀ ಬಾರಿಯೂ ಉಟಕ್ಕೆ ಕೂರುವ ಮೊದಲು ಊಟ ಮಾಡುವ ಜಾಗವನ್ನು ಶುರಿರ್ಭೂತಗೊಳಿಸಿ, ಎಲೆ ಅಥವಾ ತಟ್ಟೆಯನ್ನು ಹಾಕಿದ ನಂತರ, ಎಲೆಗೆ ಎಲ್ಲಾ ಪರಿಕರಗಳೂ ಬಡಿಸಿದ ನಂತರ ಭೋಜನ ಮಂತ್ರವನ್ನು ಪಠಿಸಿ, ತನ್ನ ಊಟದ ಎಲೆಗಳಿಗೆ ಯಾವುದೇ ಕ್ರಿಮಿ ಕೀಟಗಳೂ ಪ್ರವೇಶಿಸದಿರಲಿ ಎಂದು ಪರಿಶಂಚನೆ ಮಾಡಿ ಊಟ ಮಾಡಬಹುದು ಎಂದು ಹಿರಿಯರು ಹೇಳಿದ ನಂತರವೇ ಎಲ್ಲರೊಡನೆ ಸಂತೋಷದಿಂದ ಊಟ ಮಾಡಲು ಪ್ರಾರಂಭಿಸುತ್ತಾರೆ. ಇನ್ನು ಊಟ ಮಾಡುವಾಗಲೂ ಅನಗತ್ಯ ಮಾತನಾಡದೇ, ಕೈ ಬಾಯಿಗಷ್ಟೇ ಕೆಲಸಕೊಡುತ್ತಾರೆ. ಊಟ ಮಾಡುವಾಗ ಎಲ್ಲರ ಮನಸ್ಸು ಸಂತೃಪ್ತವಾಗಿರಲಿ ಎಂದು ಯಾರದರೊಬ್ಬರು ಸುಶ್ರಾವ್ಯವಾಗಿ ಹಾಡುವುದನ್ನು ಆಲಿಸಿಕೊಂಡು ಸಂತೋಷದಿಂದ ಊಟವನ್ನು ಸಂಭ್ರಮಿಸುತ್ತಾರೆ. ಊಟ ಮಾಡುವಾಗಲೂ ತನಗೆ ಎಷ್ಟು ಬೇಕೋ ಅಷ್ಟನ್ನೇ ಬಡಿಸಿಕೊಂಡು ಒಂದು ಅಗಳೂ ಚೆಲ್ಲದೇ ಊಟವನ್ನು ಮುಗಿಸುವುದಲ್ಲದೇ, ತನಗೆ ಬೇಡವಾದ ಮೆಣಸಿನಕಾಯಿ, ಕರಿಬೇವಿನ ಎಲೆ ಇತ್ಯಾದಿಗಳನ್ನು ತನ್ನ ಎಲೆಯ ಒಂದು ಭಾಗದಲ್ಲಿಯೇ ಹಾಕುವ ಮೂಲಕ ಶುಚಿತ್ವವನ್ನು ಕಾಪಾಡುಕೊಳ್ಳುವುದಲ್ಲದೇ ತನ್ನ ಊಟವಾಯಿತು ಎಂದು ಏಳದೇ, ಸಭಾ ಗೌರವವನ್ನು ಕಾಪಾಡುತ್ತಾ, ಊಟದಲ್ಲಿ ಕುಳಿತ ಹಿರಿಯರು ಎದ್ದ ನಂತರ, ಅಕ್ಕ ಪಕ್ಕದವರನ್ನು ಏಳಬಹುದೇ ಎಂದು ಕೇಳಿಯೇ ಪಂಕ್ತಿ ಭೋಜನದಿಂದ ಏಳುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿರುತ್ತಾರೆ. ಹಾಗೆ ಏಳುವ ಮುನ್ನಾ ಅನ್ನದಾತೋ ಸುಖೀಃ ಭವ ಎಂದು ಆಹಾರವನ್ನು ಬೆಳೆದ ರೈತರಿಗೂ ಮತ್ತು ಅದನ್ನು ಶುಚಿರುಚಿಯಾಗಿ ಉಣಬಡಿಸಿದವರಿಗೆ ಧನ್ಯತಭಾವದಿಂದ ಶುಭಕೋರಿ, ಊಟದ ನಂತರ ಎಂಜಲು ಎಲೆಗಳನ್ನು ತೆಗೆದು ಗೋಮಯದಿಂದಲೋ ಅಥವಾ ಉಪ್ಪನ್ನು ಬಳಸಿಕೊಂಡು ಗೋಮೆ ಹಚ್ಚಿ ಸಾರಿಸಿ ಶುದ್ಧ ಮಾಡುವ ಪದ್ಧತಿ ಈಗಲೂ ಬಹುತೇಕ ಕಡೆಯಲ್ಲಿ ರೂಢಿಯಲ್ಲಿದೆ.
ಇನ್ನು ಉಟ ಬಡಿಸುವುದರಲ್ಲೂ ಕ್ರಮವಿದೆ. ಊಟದ ಎಲೆಯಲ್ಲಿ ಇಂತಿಂತ್ತಾ ಕಡೆಯಲ್ಲಿ ಇಂತಹದ್ದೇ ಪದಾರ್ಥಗಳನ್ನು ಬಡಿಸಬೇಕೆಂಬ ನಿಯಮವಿದೆ. ಎಲೆಯನ್ನು ತೊಳೆದು ಶುಭ್ರಗೊಳಿಸಿದ ನಂತರ ಹಸುವಿನ ತುಪ್ಪವನ್ನು ಎಲೆಗೆ ಹಾಕಿದ ನಂತರ ಎಲೆಯ ಬಲದ ತುದಿಗೆ ಪಾಯಸವನ್ನು ಬಡಿಸುವ ಮೂಲಕ ಆರಂಭಿಸಿ, ಎಲೆಯ ಎಡ ತುದಿಯಲ್ಲಿ ಉಪ್ಪು, ಉಪ್ಪಿನಕಾಯಿ, ಕೋಸಂಬರಿಗಳು, ಪಲ್ಯಗಳನ್ನು ಬಡಿಸಿ ಅದರ ಕೆಳಗೆ ಮಜ್ಜಿಗೆ ಹುಳಿ/ ತಂಬುಳಿ/ ಗೊಜ್ಜನ್ನು ಬಡಿಸುತ್ತಾರೆ. ಇನ್ನು ಎಡಭಾಗದ ತುದಿಯಲ್ಲಿ ಚಿತ್ರಾನ್ನ, ಸಂಡಿಗೆ, ಹಪ್ಪಳ ಬಡಿಸಿ, ಎಲೆಯ ಮಧ್ಯ ಭಾಗದಲ್ಲಿ ಕಲೆಸಿ ತಿನ್ನಲು ಅನುಕೂಲವಾಗುವಂತೆ ಅನ್ನ ಹಾಕಿ ಅದಕ್ಕೆ ತೊವ್ವೆ ಬಡಿಸಿದ ನಂತರ ತುಪ್ಪದ ಅಭಿಗಾರವನ್ನು ಮಾಡಿದ ನಂತರ, ತರಕಾರಿ ಹಾಕಿದ ಹುಳಿ ಅಥವಾ ಕೂಟು ಅದಾದ ನಂತರ ಸಾರು, ಅದಾದ ನಂತರ ಮಜ್ಜಿಗೆ ಹುಳಿಯನ್ನು ಯಥೇಚ್ಚವಾಗಿ ಬಡಿಸಿದ ನಂತರ ಭಕ್ಷಗಳನ್ನು ಬಡಿಸಿ ಕಡೆಯಲ್ಲಿ ಮೊಸರು ಅಥವಾ ಮಜ್ಜಿಗೆಯನ್ನು ಬಡಿಸುವ ಮೂಲಕ ಊಟವು ಸಂಪೂರ್ಣವಾಗುತ್ತದೆ. ಇನ್ನು ಕೆಲವು ಕಡೆ ತಿಂದದ್ದು ಚೆನ್ನಾಗಿ ಜೀರ್ಣವಾಗಲಿ ಎಂದು ಶುಂಠಿ ಗೊಜ್ಜನ್ನು ಮಜ್ಜಿಗೆಯ ಮುಂಚೆ ಬಡಿಸುವ ಪದ್ದತಿಯೂ ಇದೆ.
ಹೀಗೆ ಪಾಕಶಾಸ್ತ್ರದ ನಿಯಮಗಳಂತೆ, ಆರೋಗ್ಯಕರವಾದ ಸಾತ್ವಿಕ ಅಡುಗೆಗಳನ್ನು ಮಾಡಿಕೊಂಡು ತಿನ್ನುವ ಕಲೆಯನ್ನು ಬ್ರಾಹ್ಮಣರು ರೂಢಿಸಿಕೊಂಡು ಬಂದಿದ್ದಾರೆ. ಸಂತೃಪ್ತವಾದ ಊಟವಾದ ನಂತರ ಪಚನಕ್ರಿಯೆಯನ್ನು ಉತ್ತಮ ಗೊಳಿಸಲು ವಿಳ್ಳೇದಲೆ, ಅದಕ್ಕೆ ಸ್ವಲ್ಪ ಅಡಿಕೆ ಮತ್ತು ಸುಣ್ಣವನ್ನು ಬೆರೆಸಿ ಸವಿಯುವ ಮೂಲಕ ರಸಗ್ರಹಣಕ್ಕೆ ಪೂರಕವಾಗಿ ಧಾತುಪುಷ್ಟಿ ಮತ್ತು ಮೂಳೆಗಳಿಗೆ ಶಕ್ತಿಯನ್ನು ಒದಗಿಸಿ ಬಾಯಿಗೆ ಸುವಾಸನೆಯನ್ನು ತಂದುಕೊಳ್ಳುತ್ತಾರೆ.
ಯಾವುದೇ ಪೂಜಾ ಕೈಂಕರ್ಯಗಳು ಮಾಡಿದ ನಂತರ ಅಷ್ಟೈಷ್ವರ್ಯದಿಂದಲೂ ಬ್ರಾಹ್ಮಣರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಆದರೆ ಭಕ್ತಿ ಗೌರವದಿಂದ ಬ್ರಾಹ್ಮಣರನ್ನು ಊಟೋಪಚಾರದಿಂದ ಸತ್ಕರಿಸಿ ಭೋಜನಾಂತ್ಯದಲ್ಲಿ ನಮಸ್ಕರಿಸಿ ಆಶೀರ್ವಾದ ಪಡೆದರೆ ಅದು ಫಲಿಸುತ್ತದೆ. ಹೋಮಾಂತ್ಯದಲ್ಲಿ ಪೂಜಾಂತ್ಯದಲ್ಲಿ ಭೋಜನಾಂತ್ಯದಲ್ಲಿ ಬ್ರಾಹ್ಮಣರು ನುಡಿಯುವ ನುಡಿಗಳು ಸತ್ಯವಾಗುತ್ತವೆ ಫಲ ನೀಡುತ್ತವೆ ಎಂಬುದು ವೇದವಿಹಿತ..
ಹೀಗೆ ಬ್ರಾಹ್ಮಣರು ಭೋಜನವನ್ನು ಕೇವಲ ಜೀವಿಸುವುದಕ್ಕಾಗಿ ಮಾತ್ರವೇ ಸೇವಿಸದೇ, ಭೋಜನವನ್ನು ಪ್ರೀತಿಯಿಂದ ಆಹ್ವಾದಿಸುವುದರಿಂದ ಆತ ಭೋಜನ ಪ್ರಿಯನೂ ಹೌದು ಮತ್ತು ಬಹುಜನ ಪ್ರಿಯನೂ ಹೌದು.
ಇನ್ನೊಮ್ಮೆ ಯಾರಾದರೂ ಈ ರೀತಿಯಾಗಿ ಛೇಡಿಸಿದಲ್ಲಿ ಈ ಲೇಖನವನ್ನು ಅವರಿಗೆ ಉದಾಹರಣೆಯಾಗಿ ತೋರಿಸಿ, ಬ್ರಾಹ್ಮಣರಂತೆ ಕ್ರಮಬದ್ಧವಾಗಿ ಆಹಾರವನ್ನು ತಯಾರಿಸಿ ಶಿಸ್ತು ಬದ್ಧವಾಗಿ ಭೋಜನವನ್ನು ಸವಿಯಿರಿ. ಸುಖಾಸುಮ್ಮನೇ ಬ್ರಾಹ್ಮಣರನ್ನು ಅವಮಾನಿಸದಿರಿ ಎಂದು ಧೈರ್ಯವಾಗಿ ಹೇಳೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಎಲ್ಲ ಬ್ರಾಹ್ಮಣರೂ ಮತ್ತು ಬ್ರಾಹ್ಮಣೇತರರೂ ಓದಬೇಕಾದ ಕಣ್ತೆರೆಸುವ ಬರಹ.
LikeLiked by 1 person
ಹೇಳಿರೋದು ವಾಸ್ತವಿಕ ಅಲ್ವೇ? ಬಿಟ್ಟಿ ಸಿಕ್ತಾರೆ, ಏನು ಹೇಳಿದ್ರೂ ಗುರ್ ಅನ್ನೋದಿಲ್ಲಾ ಅಂತ ಕಿಚಾಯಿಸುವುದು ತಪ್ಪು ಎನ್ನುವದಷ್ಟೇ ನನ್ನ ಅನಿಸಿಕೆ
LikeLiked by 2 people