ಭೌಗೋಳಿಕವಾಗಿ ಕಲ್ಪತರುನಾಡು ತುಮಕೂರಿನ ಭಾಗವಾಗಿ, ಆ ಜಿಲ್ಲೆಯ ತುತ್ತ ತುದಿಯಲ್ಲಿ , ತುಮಕೂರಿನಿಂದ ಸುಮಾರು 70 ಕಿಮೀ ದೂರದಲ್ಲಿರುವ, ಚಿಕ್ಕನಾಯಕನ ಹಳ್ಳಿಯಿಂದ ತಿಪಟೂರಿಗೆ ಹೋಗುವ ಮಾರ್ಗದ ಮಧ್ಯದಲ್ಲಿರುವ ಹೋಬಳಿಯೇ ಶೆಟ್ಟೀಕೆರೆ. ಹತ್ತಿರ ಹತ್ತಿರ ಸಾವಿರ ಮನೆಗಳು ಇರಬಹುದಾದ ಒಂದು ರೀತಿಯ ಸ್ಥಳೀಯ ವಾಣಿಜ್ಯ ನಗರಿ. ಸಾಂಪ್ರದಾಯಿಕವಾಗಿ ಹಾಸನ ಜಿಲ್ಲೆಯ ಸೊಗಡನ್ನು ಮೈದಳೆದಿರುವ ವಾಣಿಜ್ಯವಾಗಿ ಚಿತ್ರದುರ್ಗ ಜಿಲ್ಲೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಪಟ್ಟಣವೆಂದರೂ ತಪ್ಪಾಗಲಾರದು.
ಬೆಂಗಳೂರಿನ ಕೃಷ್ಣರಾಜ ಪುರದಲ್ಲಿ ಎಲೆ ಮರಿಮಲ್ಲಪ್ಪ ಶೆಟ್ಟರು ಲೋಕ ಕಲ್ಯಾಣಕ್ಕಾಗಿ ವಿಶಾಲವಾದ ಕೆರೆಯನ್ನು ಕಟ್ಟಿಸಿದಂತೆ ಕೆಲವು ಶತಮಾನಗಳ ಹಿಂದೆ ಆ ಊರಿಗೆ ವ್ಯಾಪಾರಕ್ಕೆಂದು ಬಂದಿದ್ದ ಶೆಟ್ಟರೊಬ್ಬರು ಜನ ಹಿತಕ್ಕಾಗಿ ಕೆರೆಯನ್ನು ಕಟ್ಟಿಸಿದ ಕಾರಣ ಭರಿತ ಪ್ರಕಾಶ ಪುರಿ ಎಂಬ ಊರು ಶೆಟ್ಟೀಕೆರೆಯಾಗಿ ಬದಲಾಯಿತೆಂಬ ಪ್ರತೀತಿಯಿದೆ. ವ್ಯಾಪಾರಕ್ಕೆಂದು ಬಂದಿದ್ದ ಶೆಟ್ಟರು ಈ ರೀತಿಯಾಗಿ ಕೆರೆಯನ್ನು ಕಟ್ಟಿಸುವ ಹಿಂದೆಯೂ ಒಂದು ಸ್ವಾರಸ್ಯಕರವಾದ ಕಥೆಯಿದೆ. ಪರ ಊರಿನಿಂದ ವ್ಯಾಪಾರಕ್ಕೆಂದು ಬಂದಿದ್ದ ಶೆಟ್ಟರು, ದಿನದ ವ್ಯಾಪಾರ ಮುಗಿಸಿ ಸಂಜೆ ಅಡುಗೆ ಮಾಡುವ ಸಲುವಾಗಿ ಊರಿನ ಉತ್ತರಭಾಗದಲ್ಲಿ ಕಂಡ ಕರೀ ಕಲ್ಲೊಂದರ ಅಕ್ಕ ಪಕ್ಕ ಮತ್ತೆರಡು ಕಲ್ಲುಗಳನ್ನು ಇಟ್ಟು ಅನ್ನವನ್ನು ಮಾಡಿ, ಅನ್ನವನ್ನು ಬಡಿಸಿಕೊಳ್ಳಲು ಪಾತ್ರೆಗೆ ಕೈಹಾಕಿದಾಗ ಅನ್ನದ ಬದಲಾಗಿ ಹುಳುಗಳನ್ನು ಕಂಡು ಭಯ ಭೀತರಾಗಿ ಸ್ಥಳೀಯ ಪುರೋಹಿತರಲ್ಲಿ ವಿಚಾರಿಸಿದಾಗ, ಅವರು ಅಡುಗೆ ಮಾಡಲು ಬಳಸಿದ್ದ ಕರೀ ಕಲ್ಲು ಈಶ್ವರ ಲಿಂಗವಾಗಿದ್ದ ಕಾರಣ ಈ ರೀತಿಯ ಅಪಚಾರವಾಗಿರೆ. ಇದರ ಪಾಪ ಪರಿಹಾರಾರ್ಥವಾಗಿ ಅಲ್ಲಿ ಕೆರೆಯೊಂದನ್ನು ಕಟ್ಟಿಸುವ ಮುಖಾಂತರ ಶಾಪ ವಿಮೋಚನೆ ಗೊಳ್ಳಬಹುದು ಎಂದು ಸೂಚಿಸಿದ ಪರಿಣಾಮ ಆ ಶೆಟ್ಟರು ತಮ್ಮ ಸ್ವಂತ ಖರ್ಚಿನಲ್ಲಿ ಕೆರೆಯನ್ನು ಕಟ್ಟಿಸಲು ಮುಂದಾಗುತ್ತಾರೆ. ಇತ್ತ ವ್ಯಾಪಾರಕ್ಕೆಂದು ಹೋಗಿ ಎಷ್ಟು ದಿನಗಳಾದರೂ ಊರಿಗೆ ಮರಳಿ ಬಾರದ ಮೊಮ್ಮಗನನ್ನು ಹುಡುಕಿಕೊಂಡು ಬಂದು ಮೊಮ್ಮಗ ಕಟ್ಟಿಸುತ್ತಿದ್ದ ಕೆರೆಯಿಂದ ಪ್ರೇರೇಪಿತರಾಗಿ ಅವರೂ ಸಹಾ ಮತ್ತೊಂದು ಕೆರೆಯನ್ನು ಕಟ್ಟಿಸಿದ ಕಾರಣ ಜನಾ ಪ್ರೀತಿಯಿಂದ ಅದನ್ನು ಅಜ್ಜನ ಕೆರೆ ಎಂದು ಕರೆದರು ಹೀಗೆ ಎರಡೆರಡು ಭರ್ಜರಿ ಕರೆಗಳಿಂದಾಗಿ ಭರಿತ ಪ್ರಕಾಶ ಪುರಿ ಶೆಟ್ಟೀಕೆರೆಯಾಗಿ ಪ್ರಸಿದ್ಧವಾಯಿತು.
ಸುಮಾರು 71.83 ಎಂಸಿಎಫ್ಟಿ ನೀರನ್ನು ಸಂಗ್ರಹಿಸಬಹುದಾಗಿರುವ ಈ ಕೆರೆಯು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಕೃಷಿ ಚಟುವಟಿಕೆಗಳಿಗೆ ಆಶ್ರಯತಾಣವಾಗಿತ್ತು. ಕಾಲಾ ಕಾಲಕ್ಕೆ ಮಳೆಯೇ ಸರಿಯಾಗಿ ಬೀಳದ ಕಾರಣ ಶಾಶ್ವತ ಬರ ಪೀಡಿತ ಪ್ರದೇಶವಾಗಿ ಮಾರ್ಪಟ್ಟು ತುಂಬಿ ತುಳುಕಿ ಸಹಸ್ರಾರು ಹಕ್ಕಿಗಳಿಗೆ ಆಶ್ರಯತಾಣವಾಗಿದ್ದ ಕರೆಯಲ್ಲಿ ಹೂಳು ತೆಗೆಯದ ಕಾರಣ, ಗಿಡ ಗಂಟೆಗಳು ಬೆಳೆದು ಕ್ರಮೇಣ ಪಾಳು ಬಿದ್ದು ಹೋಗಿತ್ತು.
ಇದೇ ಮಾರ್ಜ್ ತಿಂಗಳಿನಲ್ಲಿ ಕರೋನಾ ಮಹಾಮಾರಿಯ ಅರ್ಭಟದ ಪರಿಣಾಮವಾಗಿ ಇಡೀ ವಿಶ್ವವೇ, ಲಾಕ್ಡೌನ್ ಆದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ಶೆಟ್ಟೀಕೆರೆಯ ಸಂಪ್ರದಾಯಸ್ಥರ ಮನೆಯ ಉತ್ಸಾಹೀ ತರುಣ ಪ್ರಶಾಂತ್ ತನ್ನ ಹುಟ್ಟೂರಿಗೆ ಮರಳಿ ಅಲ್ಲಿಂದಲೇ work from home ಮಾಡಲು ನಿರ್ಧರಿಸಿದ. ಊರಿನಲ್ಲಿ ಪುರಾಣ ಪ್ರಸಿದ್ಧವಾದ ಮತ್ತು ಯುಗಾದಿಯ ಮುಂಚಿನ ಫಾಲ್ಗುಣ ಮಾಸದಲ್ಲಿ ಜಾತ್ರೆ ನಡೆಯುವ ಕಾಲಭೈರವೇಶ್ವರ ಮತ್ತು ಯುಗಾದಿ ಹಬ್ಬದ ಹದಿನೈದು ದಿನಗಳ ನಂತರ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯುವ ಕೆಂಪಮ್ಮ ದೇವಿಯ ಜಾತ್ರೆಯ ದೇವಾಲಯಗಳ ಸುತ್ತ ಮುತ್ತಲು ಬೆಳೆದಿದ್ದ ಗಿಡ ಗಂಟೆಗಳನ್ನು ತನ್ನ ಸಮವಯಸ್ಕ ಮತ್ತು ಸಮಾನ ಮನಸ್ಸಿನ ಯುವಕರ ನೆರೆವಿನೊಂದಿಗೆ ಸ್ವಚ್ಚಗೊಳಿಸಿ ಸ್ಥಳೀಯ ಮನಸ್ಸನ್ನು ಸೂರೆಗೊಂಡ.
ಅದೇ ಸಮಯದಲ್ಲಿ ಶೆಟ್ಟೀಕೆರೆಯ ಪಕ್ಕದ ಊರಿನ ಸಾಸಲುಕೆರೆಗೆ ಹೇಮಾವತಿ ನದಿಯ ಕಾಲುವೆಯಿಂದ ನೀರು ಸರಾಗವಾಗಿ ಹರಿದು ಅಲ್ಲಿಂದ ಸುಮಾರು ಎರಡು ಮೂರು ವಾರಗಳಲ್ಲಿ ಶೆಟ್ಟೀಕೆರೆಗೆ ಹೇಮಾವತಿಯ ನೀರು ಬರುತ್ತದೆ ಎಂಬ ಮಾಹಿತಿ ತಿಳಿದೊಡನೆಯೇ ಮತ್ತದೇ ಗೆಳೆಯರ ಗುಂಪನ್ನು ಸೇರಿಸಿಕೊಂಡು ಹೆಗಲಿಗೊಂದು ಜೋಳಿಗೆ ತಗುಲಿಸಿಕೊಂಡು ಕೆರೆಯ ಶುದ್ದೀಕರಣಕ್ಕೆ ಇಳಿದ. ದೇವಸ್ಥಾನದ ಶುಚೀಕರಣದ ಸಮಯದಲ್ಲಿಯೇ ಆತನ ಸಂಘಟನಾ ಚತುರತೆಯನ್ನು ಅರಿತಿದ್ದ ಊರಿನ ಜನ ಸ್ವಯಂ ಪ್ರೇರಿತರಾಗಿ ಹಣವನ್ನು ದಾನ ಮಾಡಿದ ಫಲವಾಗಿ ಊರಿನ ಜನರ ಹಣದಿಂದಲೇ, ಸುಮಾರು ಹತ್ತು ಹದಿನೈದು ಜೆಸಿಬಿ, ಟಿಪ್ಪರ್ಗಳ ಸಹಾಯದಿಂದ ನೋಡ ನೋಡುತ್ತಿದ್ದಂತೆಯೇ ಗಿಡಗಂಟೆಗಳಿಂದ ಪಾಳು ಬಿದ್ದಿದ್ದ ಕೆರೆ ಸ್ವಚ್ಚವಾಗಿ ಹೇಮಾವತಿಯ ನೀರನಿಂದ ಮೈತುಂಬಿಕೊಳ್ಳಲು ಸಜ್ಜಾಗಿದೆ. ಹೇಮಾವತಿಯ ನೀರು ಶೆಟ್ಟೀಕೆರೆಯನ್ನು ತುಂಬಿದಲ್ಲಿ ಈಗಾಗಲೇ ಬರಿದಾಗಿರುವ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವುದಲ್ಲದೇ ಸತತವಾದ ಬರಗಾಲದಿಂದ ತತ್ತರಿಸಿರುವ ಸ್ಥಳೀಯರ ಕೃಷಿ ಚಟುವಟಿಕೆಗಳಿಗೆ ಗರಿ ತುಂಬುವುದಲ್ಲದೇ ಇಲ್ಲಿಂದ ಮುಂದೆ ಚಿತ್ರದುರ್ಗದ ಅನೇಕ ಕೆರೆಗಳಿಗೂ ನೀರುಣಿಸಬಲ್ಲದಾಗಿದೆ.
ಈ ಉತ್ಸಾಹೀ ತರುಣ ಪ್ರಶಾಂತನ ಕೆಲಸದ ಬಗ್ಗೆ ವೃತ್ತಪತ್ರಿಕೆಯಲ್ಲಿ ಓದಿ ತಿಳಿದಾಗ ಸುಮಾರು 30-35 ವರ್ಷಗಳ ಹಿಂದೆ ಜಮಖಂಡಿ ತಾಲ್ಲೂಕಿನ ಗ್ರಾಮಗಳ ಪಕ್ಕದಲ್ಲೇ ಕೃಷ್ಣಾ ನದಿಯ ನೀರು ಮಳೆಗಾಲದಲ್ಲಿ ಹರಿದು ವ್ಯರ್ಥವಾಗಿ ಹರಿದು ಹೋಗುತ್ತಿದ್ದದ್ದನ್ನು ಗಮನಿಸಿ, ಇಲ್ಲೊಂದು ಬ್ಯಾರೇಜ್ ನಿರ್ಮಿಸಿ ನೀರನ್ನು ತಡೆಹಿಡಿದಲ್ಲಿ ಕೃಷಿಗೆ ನಿರಂತರವಾಗಿ ನೀರನ್ನು ಬಳಸಬಹುದು ಎಂದು ನಿರ್ಧರಿಸಿ, ಸರ್ಕಾರದ ನೆರವನ್ನು ಪಡೆಯದೇ ಸ್ಥಳೀಯ ರೈತರ ಸಹಕಾರದಿಂದ ಸಂಪನ್ಮೂಲಗಳನ್ನು ಕ್ರೋಡೀಕರಿಸಿ, ರೈತರ ಶ್ರಮದಾನದ ಫಲವಾಗಿ ಚಿಕ್ಕಪಡಸಲಗಿ ಬ್ಯಾರೇಜ್ ಕಟ್ಟಿಸಿದ ಕೇಂದ್ರದ ಮಾಜಿ ಸಚಿವ ದಿ. ಸಿದ್ದು ನ್ಯಾಮಗೌಡರು ನೆನಪಿಗೆ ಬಂದರು ಎಂದರೆ ಸುಳ್ಳಲ್ಲ. ಚಿಕ್ಕಪಡಸಲಗಿಯಲ್ಲಿ ಸ್ವಂತ ಶ್ರಮದಿಂದ ಬ್ಯಾರೇಜ್ ನಿರ್ಮಿಸಿ ಆಧುನಿಕ ಭಗೀರಥ ಎಂದು ಕರೆಸಿಕೊಂಡಿದ್ದ ಸಿದ್ದು ನ್ಯಾಮಗೌಡಂತೆಯೇ ಶೆಟ್ಟೀಗೆರೆಯ ಸಂಘಟನಾ ಚತುರ ಪ್ರಶಾಂತರನ್ನೂ ಆಧುನಿಕ ಭಗೀರಥ ಎಂದರೂ ಅತಿಶಯೋಕ್ತಿಯಾಗಲಾರದು.
ಎಲ್ಲಾ ಕೆಲಸವನ್ನೂ ಸರ್ಕಾರವೇ ಮಾಡಬೇಕು ಎಂದು ಜನಪ್ರತಿನಿಧಿಯನ್ನು ತೆಗಳುತ್ತಾ ಕಾಲ ವ್ಯರ್ಥ ಮಾಡುವ ಬದಲು ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತಹ ಶ್ಲಾಘನೀಯ ಸಮಾಜಮುಖೀ ಕೆಲಸದಲ್ಲಿ ಭಾಗಿಯಾದ ಸಮಸ್ಥ ಶೆಟ್ಟೀಗೆರೆಯ ನಾಗರೀಕರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಬೇಕು. ಡಾಕ್ಟರ್ ಮಗ ಡಾಕ್ಟರ್ ಆಗಬೇಕು, ಇಂಜಿನೀಯರ್ ಮಗ ಇಂಜೀನಿಯರ್ ಆಗಬೇಕು ಆದರೆ ರೈತನ ಮಗ ಮಾತ್ರ ರೈತನಾಗಬಾರದು ಎಂಬ ಮನೋಭಾವನೆಯನ್ನು ಹೊಂದಿರುವ ಈ ಸಮಾಜದಲ್ಲಿ ಪ್ರಶಾಂತ್ ಮತ್ತವರ ಸಂಗಡಿಗರಂತಹ ಉತ್ಸಾಹೀ ಯುವಕರುಗಳು ನಾಡಿನ ಎಲ್ಲಾ ಹಳ್ಳಿ ಹಳ್ಳಿಗಳಲ್ಲಿಯೂ ಹುಟ್ಟಿಕೊಂಡಲ್ಲಿ ಭಾರತ ಮತ್ತೊಮ್ಮೆ ಕೃಷಿ ಪ್ರಧಾನವಾದ ದೇಶವಾಗುವುದರಲ್ಲಿ ಸಂದೇಹವೇ ಇಲ್ಲ. ಭೂಮಿ ತಾಯಿಯಿ ತನ್ನನ್ನು ನಂಬಿ ಆರಾಧಿಸುವವರಿಗೆ ಎಂದೂ ಕೈ ಕೊಟ್ಟ ಉದಾಹರಣೆ ಇಡೀ ವಿಶ್ವದಲ್ಲಿಯೇ ಇಲ್ಲಾ. ಜಗತ್ತೇ ಲಾಕ್ಡೌನ್ ಆಗಿ ಬಹುತೇಕ ವ್ಯವಹಾರಗಳು ನಿಶ್ಕ್ರಿಯವಾಗಿರುವಾಗ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಮುನ್ನೆಡೆಯುತ್ತಿರುವುದೇ ಕೃಷಿ ಚಟುವಟಿಕೆ ಎನ್ನುವುದನ್ನು ಮರೆಯಲಾಗದು ಅಲ್ವೇ? ಸಾಫ್ಟ್ವೇರ್ ಕೆಲಸ ಕೈತುಂಬ ಹಣವನ್ನು ಕೊಡಬಹುದಾದರೂ, ರೈತ ಶ್ರಮ ವಹಿಸಿ ಕೃಷಿ ಮಾಡಿದಲ್ಲಿ ಮಾತ್ರವೇ ಆ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳಬಹುದು ಅಲ್ಲವೇ?
ಏನಂತೀರೀ?