ಮಕ್ಕಳು ಅನ್ನದ ಜೊತೆ ಸಾರು ಮತ್ತು ಹುಳಿಯೊಂದಿಗೆ ತಿನ್ನಲು ಬೇಸರಿಕೊಳ್ಳುತ್ತಿದ್ದರೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾಗಿರುವ ಮತ್ತು ತಂಬಾ ದಿನಗಳವರೆಗೂ ಇಟ್ಟು ಕೊಂಡು ತಿನ್ನಬಹುದಾದ ತೊಗರೀಬೇಳೆ ಚಟ್ನೀಪುಡಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ತೊಗರೀಬೇಳೆ ಚಟ್ನೀಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ತೊಗರೀಬೇಳೆ – 1 ಬಟ್ಟಲು
- ಹುರಿಗಡಲೆ – 1/2 ಬಟ್ಟಲು
- ಧನಿಯ – 2 ಚಮಚ
- ಜೀರಿಗೆ – 1 ಚಮಚ
- ಅರಿಶಿನ – 1/2 ಚಮಚ
- ಕರಿಬೇವಿನ ಸೊಪ್ಪು – 1/4 ಕಪ್
- ಬೆಳ್ಳುಳ್ಳಿ 8-10 ಎಸಳುಗಳು (ಐಚ್ಛಿಕ)
- ಒಣ ಮೆಣಸಿನಕಾಯಿ ಖಾರಕ್ಕೆ ಅನುಗುಣವಾಗಿ
- ರುಚಿಗೆ ತಕ್ಕಷ್ಟು ಉಪ್ಪು
ತೊಗರೀಬೇಳೆ ಚಟ್ನೀಪುಡಿ ತಯಾರಿಸುವ ವಿಧಾನ
- ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಗಟ್ಟಿ ತಳದ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹಸೀ ಹೋಗುವವರೆಗೂ ಹುರಿಯಿರಿ.
- ಹುರಿದು ಕೊಂಡ ಮಿಶ್ರಣಕ್ಕೆ ಉಪ್ಪು ಮತ್ತು ಅರಿಶಿನ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಂಡಲ್ಲಿ ರುಚಿ ರುಚಿಯಾದ ಆರೋಗ್ಯಕರವಾದ ತೊಗರೀಬೇಳೆ ಚೆಟ್ನಿಪುಡಿ ಸವಿಯಲು ಸಿದ್ಧ.
ಇದನ್ನು ಗಾಳಿಯಾಡದಂತಹ ಬಿಗಿಯಾದ ಬಾಟಲಿನಲ್ಲಿ ಸುಮಾರು ಒಂದು ವರ್ಷದವರೆಗೂ ಇಟ್ಟುಕೊಂಡು ಸವಿಯಬಹುದಾಗಿದೆ.
ಬಿಸಿ ಬಿಸಿಯಾದ ಅನ್ನಕ್ಕೆ ತುಪ್ಪ ಮತ್ತು ಈ ಚೆಟ್ನಿಪುಡಿ ಸೇರಿಸಿ ಕಲೆಸಿಕೊಂಡು ಜೊತೆಗೆ ಹಸೀ ಈರುಳ್ಳೀ ನೆಂಚಿಕೊಂಡು ತಿನ್ನಲು ಬಲು ಮಜವಾಗಿರುತ್ತದೆ. ಅಷ್ಟೇ ಅಲ್ಲದೇ ಇದೇ ಚೆಟ್ನೀ ಪುಡಿಯೊಂದಿಗೆ ತುಪ್ಪ ಅಥವಾ ಎಳ್ಳೆಣ್ಣೆಯನ್ನು ಬೆರೆಸಿ ಅದರೊಂದಿಗೆ ಇಡ್ಲಿ, ದೋಸೆ, ಚಪಾತಿಯೊಂದಿಗೂ ಸಹಾ ನೆಂಚಿಕೊಂಡು ತಿನ್ನಬಹುದಾಗಿದೆ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ಮನದಾಳದ ಮಾತು : ತೊಗರಿಯಲ್ಲಿ 21-22% ಪ್ರೊಟೀನ್ ಇರುವ ಕಾರಣ ಇದು ಭಾರತೀಯ ಆಹಾರದಲ್ಲಿ ಬಹಳ ಮುಖ್ಯಪಾತ್ರವನ್ನು ವಹಿಸುತ್ತದೆ. ತೊಗರೀಬೇಳೆಯನ್ನು ಸಾರು, ಹುಳಿ, ತೊವ್ವೇ, ಒಬ್ಬಟ್ಟು ಹೀಗೆ ಬಹುತೇಕ ಎಲ್ಲಾ ಅಡುಗೆಗಳಲ್ಲಿಯೂ ತೊಗರೀಬೇಳೆಯನ್ನು ಬಳಸುತ್ತೇವೆ. ಎಳೆಯ ಕಾಳುಗಳಲ್ಲಿ ವಿಟಮಿನ್ “ಸಿ” ಹೆಚ್ಚಾಗಿರುವ ಕಾರಣ ಹಸಿ ಕಾಳುಗಳನ್ನೇ ಪಲ್ಯ ಅಥವಾ ಹುಸ್ಲಿಯ ರೂಪದಲ್ಲಿ ಬಳಸಬಹುದು. ಬಲಿತ ಕಾಳುಗಳಲ್ಲಿ ವಿಟಮಿನ್ ಬಿ, ಕೆ, ಇ ಜೊತೆ ಸಾಕಷ್ಟು ಕ್ಯಾಲ್ಸಿಯಂ, ಮ್ಯಾಗ್ನೀಸಿಯಂ, ಪೊಟ್ಯಾಸಿಯಂ ಮತ್ತು ರಂಜಕವು ಸಹಾ ಸಮೃದ್ಧವಾಗಿರುವ ಕಾಳುಗಳಾಗಿವೆ.
ಈ ಪಾಕ ವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳೀಧರ ಅವರಿಗೆ ತುಂಬು ಹೃದಯದ ಧನ್ಯವಾದಗಳು