ಕೆರೆ ತೊಣ್ಣೂರು/ತೊಂಡನೂರು ಕೆರೆ

ಮಂಡ್ಯಾ ಜಿಲ್ಲೆಯ ಸಕ್ಕರೆನಾಡು ಪಾಂಡವಪುರದಿಂದ ನಾಗಮಂಗಲದ ಕಡೆಗೆ ಸುಮಾರು 10 ಕಿ.ಮೀ ಗಳಷ್ಟು ದೂರ ಕ್ರಮಿಸಿದರೆ ಎಡಭಾಗದಲ್ಲಿ ತೊಂಡನೂರು ಎಂಬು ನಾಮಫಲಕ ಕಾಣಿಸುತ್ತದೆ. ನೋಡಲು ಅಷ್ಟೇನೂ ದೊಡ್ಡ ಊರಲ್ಲದಿದ್ದರೂ ಐತಿಹ್ಯವಾಗಿ ಬಹಳ ಪ್ರಮಾಖ್ಯತೆ ಪಡೆದಂತಹ ಊರಾಗಿದೆ. ಕೃಷಿ ಮತ್ತು ಹೈನು ಉದ್ಯಮ ಪ್ರಮುಖ ಉದ್ಯೋಗವಾಗಿದ್ದು ಊರಿಗೆ ಹೋಗುತ್ತಿದಂತೆಯೇ ಹಸುಗಳು ದಾರಿಗೆ ಅಡ್ಡಸಿಗುವುದಲ್ಲದೇ, ಹಾಲಿನ ಸಂಗ್ರಹದ ಕೇಂದ್ರವೂ ಧುತ್ತೆಂದು ಕಣ್ಣಿಗೆ ಬೀಳುತ್ತದೆ.

ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುಜಾಚಾರ್ಯರು, 11ನೇ ಶತಮಾನದಲ್ಲಿ ತಮಿಳು ನಾಡಿನ ಕ್ರಿಮಿಕಾಂತ ನೆಂಬ ಕ್ರೂರ ರಾಜ ಅದ್ವೈತ ಪ್ರಚಾರಕರಿಗೆ ಬಹಳವಾಗಿ ತೊಂದರೆ ಕೊಡುತ್ತಿದ್ದರಿಂದ ಮನನೊಂದು ಶಾಂತಿಧಾಮವನ್ನು ಅರಸುತ್ತಿದ್ದಾಗ, ಮತ್ತೊಬ್ಬ ಆಚಾರ್ಯರ ಆಹ್ವಾನದ ಮೇರೆಗೆ ತೊಂಡನೂರಿಗೆ ಬಂದು ಬಂದು ನೆಲಸಿದರೆಂಬ ಪ್ರತೀತಿ ಇದೆ. ಬಂದ ಕೆಲವೇ ದಿನಗಳಲ್ಲಿ ಅಲ್ಲಿನ ಜನ ಮಾನಸದ ಹೃನ್ಮನಗಳನ್ನು ಗೆದ್ದ ರಾಮಾನುಜಾಚಾರ್ಯರು, ಆ ಊರಿನಲ್ಲಿ ಅತ್ಯಂತ ಮಹೋಹರವಾದ ಮತ್ತು ವಿಶಾಲವಾದ ನಂಬಿ ನಾರಾಯಣ, ವೆಂಕಟರಮಣ, ಪಾರ್ಥಸಾರಥಿ, ವೇಣುಗೋಪಾಲ ಸ್ವಾಮಿಯ ದೇವಸ್ಥಾನವನ್ನು ಕಟ್ಟಿಸಿದ ನಂತರ ಮೇಲುಕೋಟೆಯಲ್ಲಿ ಯೋಗನರಸಿಂಹ ಸ್ವಾಮಿ ದೇವಸ್ಥಾನವನ್ನು ಕಟ್ಟಿಸುತ್ತಾರೆ.


ಅನೇಕ ಕಂಬಗಳಿಂದ ಕೂಡಿದ ವಿಶಾಲವಾದ ಪ್ರಾಂಗಣ ಮತ್ತು ಶುಕನಾಸಿಗಳಿಂದ ಕಂಗೊಳಿಸುವ ನಂಬೀ ನಾರಾಯಣಸ್ವಾಮಿ ದೇವಸ್ಥಾನ ಬಹಳವೇ ಆಕರ್ಷಣಿಯವಾಗಿದೆ. ಲಕ್ಷ್ಮೀ ಸಮೇತನಾದ ಶ್ರೀಮನ್ನಾರಯಣನನ್ನು ನಂಬಿ ನಂಬಿ ಕೆಟ್ಟವರಿಲ್ಲ ಎಂಬ ನಂಬಿಕೆಯ ಕಾರಣ ನಂಬಿನಾರಾಯಣ ದೇವಾಲಯ ಬಂದಿತು ಎಂದು ಹೇಳುತ್ತಾರೆ ಅಲ್ಲಿಯ ಅರ್ಚಕರು. ಸರಿಯಾದ ಉಸ್ತುವಾರಿ ಮತ್ತು ಮೇಲ್ಚಿಚಾರಣೆ ಇಲ್ಲದ ಕಾರಣ ಬಾವಲಿಗಳ ತಾಣವಾಗಿ ಮುಗ್ಗಲು ವಾಸನೆ ಬಡಿಯುತ್ತದೆ.

ಅದೇ ದೇವಸ್ಥಾನದ ಎದುರಿನಲ್ಲೇ ಇರುವ ಗೋಪಾಲಸ್ವಾಮಿಯ ದೇವಸ್ಥಾನವೂ ಇನ್ನೂ ಅದ್ವಾನವಾಗಿದ್ದು ದೇವಸ್ಥಾನವು ಪಾಳು ಬೀಳುವ ದುಸ್ಥಿತಿಯಲ್ಲಿರುವುದು ನಿಜಕ್ಕೂ ಶೋಚನೀಯವಾಗಿದೆ. ದೇವಸ್ಥಾನದ ಅವರಣದಲ್ಲಿ ತುಲಾಭಾರ ಮಂಟಪ ಮತ್ತು ಪಾಕಶಾಲೆಯಂತಹ ಇಂದು ಸ್ಥಳವಿದೆ. ಇಲ್ಲಿ 8 ಅಡಿ ಎತ್ತರ ಮತ್ತು 5 ಅಡಿ ಅಗಲವುಳ್ಳ ಭೂದೇವೀ ಸಮೇತನಾದ ಶ್ರೀ ಕೃಷ್ಣ ವಿಶ್ವರೂಪದರ್ಶನದಲ್ಲಿದ್ದಾನೆ ಎಂದೂ ಹೇಳುತ್ತಾರೆ. ದೇವಸ್ತಾನದ ಸುತ್ತಲಿನ ಪ್ರಾಂಗಣದ ಮೇಲೆ ಹೋಗಲು ಮೆಟ್ಟಿಲುಗಳು ಇದ್ದು ಅಲ್ಲಿಂದ ರಮಣೀಯವಾದ ದೃಶ್ಯವನ್ನು ನೋಡಬಹುದಾಗಿದೆ. ಈ ದೇವಸ್ಥಾನದಲ್ಲಿ ಅನೇಕ ಕನ್ನಡ ಚಲನಚಿತ್ರಗಳ ಚಿತ್ರೀಕರಣವಾಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.

ನಂಬಿ ನಾರಾಯಣ ಸ್ವಾಮಿ ದೇವಸ್ಥಾನದಿಂದ ಸುಮಾರು ಅರ್ಧ ಮುಕ್ಕಾಲು ಕಿಮೀ ದೂರದಲ್ಲಿ ಲೋಕಕಲ್ಯಾಣಕ್ಕಾಗಿ ರಾಮಾನುಜಾಚಾರ್ಯರ ಶಿಷ್ಯರಾದ ಶ್ರೀ ನಂಬಿ ಎಂಬುವವರು ಯದುಗಿರಿ ಬೆಟ್ಟದ ಬುಡದಲ್ಲಿ ನೈಸರ್ಗಿಕವಾದ ಸುಮಾರು 2150 ಎಕರೆಗಳಷ್ಟು ವಿಸ್ತೀರ್ಣದ ವಿಶಾಲವಾದ ತೊಣ್ಣೂರು ಕೆರೆಯನ್ನು ಶ್ರೀ ರಾಮಾನುಜಚಾರ್ಯ ಅವರ ಆಶಯದಂತೆ ನಿರ್ಮಿಸುತ್ತಾರೆ.


ಕರೆಯ ಏರಿಯವರೆಗೂ ವಾಹನ ಹೋಗುವಂತಹ ಚೆಂದದ ರಸ್ತೆ ಇದ್ದು ಅಲ್ಲಿಗೆ ಹೋಗಿ ನೋಡುವವರೆಗೂ ಅಲ್ಲೊಂದು ಬೃಹತ್ತಾದ ಕೆರೆ, ಕೆರೆ ಎನ್ನುವುದಕ್ಕಿಂತಲೂ ಸಾಗರವಿದೆ ಎನ್ನುವ ಕಲ್ಪನೆಯೂ ಬಾರದಂತಿದೆ. ಎರಡು ಗುಡ್ಡಗಳ ಮಧ್ಯೆ ಕಟ್ಟೆ ಕಟ್ಟಿ ನೀರನ್ನು ಕಟ್ಟಿಹಾಕಿರುವ ಪರಿ ಇಂದಿನ ವಾಸ್ತು ಶಿಲ್ಲಿಗಳಿಗೆ ಅಚ್ಚರಿ ಮೂಡಿಸುವಂತಿದೆ. ಕೆರೆಯ ಮುಂದೆ ನಿಂತು ಕಣ್ಣು ಹಾಯಿಸಿದಷ್ಟು ದೂರವೂ ಬರೀ ನೀರನ್ನೇ ಕಾಣಬಹುದಾದ ಕಾರಣ ಇದನ್ನು ಕೆರೆ ಎನ್ನುಉವುದಕ್ಕಿಂತಲೂ ಸಾಗರ ಎಂದು ಕರೆದರೇ ಸೂಕ್ತ ಎನಿಸೀತು.ಇದೇ ಕಾರಣಕ್ಕಾಗಿಯೇ ರಾಮಾನುಜಾರ್ಯರು ಇದಕ್ಕೆ ತಿರುಮಲ ಸಾಗರ ಎಂದು ನಾಮಕರಣ ಮಾಡುತ್ತಾರೆ.1746 ನಾಸಿರ್ ಜಂಗ್ ಎಂಬ ದಖ್ಖನದ ದೊರೆ ಬೆಟ್ಟ-ಗುಡ್ಡಗಳಿಂದ ಆವರಿಸಿರುವ ಈ ಕೆರೆಯನ್ನು ಸೌಂದರ್ಯಕ್ಕೆ ಮಾರು ಹೋಗಿ ಇದನ್ನು ಮೋತಿ ತಲಾಬ್ ಅಂದರೆ ಮುತ್ತಿನ ಕೆರೆ ಎಂದು ಉದ್ಗರಿಸಿದ್ದನಂತೆ.

ಹನ್ನೊಂದನೇ ಶತಮಾನದಲ್ಲಿ ಈ ಪ್ರಾಂತ್ಯವನ್ನು ಆಳುತ್ತಿದ್ದ ಬಿಟ್ಟಿರಾಜನ ಮಗಳಿಗೆ ವಿಚಿತ್ರ ಖಾಯಿಲೆಯೊಂದು ಭಾದಿಸುತ್ತಿತ್ತು, ಎಲ್ಲಾ ವೈದ್ಯರೂ ಹಾಗು ಜೈನ ಪಂಡಿತರ ಬಳಿ ಇದಕ್ಕೆ ಪರಿಹಾರ ಸಿಗದಿದ್ದಾಗ ತೊಂಡನೂರಿನಲ್ಲಿದ್ದ ಶ್ರೀ ರಾಮಾನುಜಾಚಾರ್ಯರ ಪವಾಡಗಳ ಬಗ್ಗೆ ತಿಳಿದು, ತಮ್ಮ ಮಗಳನ್ನು ಖಾಯಿಲೆಯಿಂದ ಮುಕ್ತಗೊಳಿಸಬೇಕೆಂದು ಕೋರಿಕೊಳ್ಳುತ್ತಾನೆ. ಆಚಾರ್ಯರು ರಾಜನ ಮಗಳನ್ನು ತೊಂಡನೂರಿನ ಕೆರೆಯಲ್ಲಿ ಸ್ನಾನ ಮಾಡಿಕೊಂಡು ಮಡಿಯಲ್ಲಿ ಬರಲು ಹೇಳಿ, ಕೆರೆಯಲ್ಲಿ ಮಿಂದೆದ್ದು ಬಂದ ಕನ್ಯೆಗೆ ತಮ್ಮ ಮಂತ್ರ ದಂಡವನ್ನು ತಾಕಿಸಿದೊಡನೆಯೇ ಆಕೆಗೆ ಕ್ಷಣರ್ದದಲ್ಲೇ ಆಕೆಯನ್ನು ಭಾದಿಸುತ್ತಿದ್ದ ರೋಗ ಮಂಗಮಾಯವಾಗಿತು. ಇದರಿಂದ ಸಂತೋಷಗೊಂಡ ಬಿಟ್ಟಿರಾಜನು ಜೈನ ಮತದಿಂದ ಶ್ರೀ ವೈಷ್ಣವ ಮತ್ತಕ್ಕೆ ಮತಾಂತರವಾಗಿ ವಿಷ್ಣುವರ್ಧನನೆಂದು ಪ್ರಸಿದ್ದಿಯಾಗಿದ್ದಲ್ಲದೇ ರಾಮಾನುಜಾಚಾರ್ಯರ ಪರಮ ಭಕ್ತನಾಗುತ್ತಾನೆ. ಹೀಗೆ ತೊಂಡನೂರಿನ ಕೆರೆಯ ನೀರು ಔಷಧೀಯ ಗುಣವನ್ನು ಹೊಂದಿದೆ ಎಂದು ಜನರ ನಂಬಿಕೆಯಾಗಿದೆ.

ಸ್ಥಳೀಯರು ಹೇಳುವ ಪ್ರಕಾರ ಇದುವರೆವಿಗೂ ಈ ಕೆರೆ ಸದಾಕಾಲವೂ ತುಂಬಿ ತುಳುಕುತ್ತಾ ಸುತ್ತ ಮುತ್ತಲಿನ ಹತ್ತಾರು ಊರಿನ ಕೃಷಿಕರಿಗೆ ವರದಾನವಾಗಿದ್ದು ಇತಿಹಾಸದಲ್ಲಿ ಅದು ಎಂದೂ ಬತ್ತಿದ್ದಿಲ್ಲವಂತೆ. ಕೆಲವು ವರ್ಷಗಳ ಹಿಂದೆ ಈ ಕೆರೆಗೆ ಹೇಮಾವತಿಯ ಹಿನ್ನೀರಿನ ಸಂಪರ್ಕವನ್ನೂ ಕಲ್ಪಿಸಿದ್ದ ಮೇಲಂತೂ ನೀರಿಗೆ ಬರವೇ ಇಲ್ಲದೇ ಆ ಕೆರೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ. ಕೆರೆಯ ಏರಿಯ ಮೇಲೆ ಒಂದು ಸಣ್ಣ ಕುಟೀರವನ್ನು ಪ್ರವಾಸೋದ್ಯಮ ಇಲಾಖೆ ಕಟ್ಟಿಸಿದ್ದು ಅಲ್ಲಿಂದ ವಿಶಾಲವಾದ ಸಾಗರವನ್ನು ನೋಡಲು ಮನೋಹರವಾಗಿದೆ. ಪ್ರಧಾನಿಗಳು ಎಷ್ಟೇ ಸ್ವಚ್ಚ ಭಾರತದ ಬಗ್ಗೆ ಮಾತಾನಾಡಿದರೂ, ನಮ್ಮ ಜನರು ವಿವೇಚನೆ ಇಲ್ಲದೇ ಸಿಕ್ಕಿದ್ದು ಪಕ್ಕಿದ್ದನ್ನು ತಿಂದು, ಕುಡಿದು ಎಲ್ಲೆಂದರಲ್ಲಿ ಬಿಸಾಕಿ ಸ್ವಲ್ಪ ಮಟ್ಟಿಗಿನ ಪರಿಸರವನ್ನೂ ಹಾಳು ಮಾಡಿರುವುದು ನಿಜಕ್ಕೂ ಬೇಸರವಾದ ಸಂಗತಿಯಾಗಿದೆ ಕೆರೆಯ ನೀರು ಹೊರಬರುವ ತೂಬಿನ ಬಳಿ ಸಣ್ಣ ಸಣ್ಣ ಮಕ್ಕಳು ನೀರಿನಲ್ಲಿ ಆಟವಾಡಲು ಪ್ರಶಸ್ತವಾಗಿದೆ.

ಕೆರೆಯು ಬಹಳ ಆಳವಾಗಿರುವ ಕಾರಣ ಈಜುಗಾರಿಕೆಯನ್ನು ನಿಷೇಧಿಸಿದ್ದರೂ ಸೂಕ್ತವಾದ ರಕ್ಷಣಾ ಸಿಬ್ಬಂಧಿಇಲ್ಲದ ಕಾರಣ ಕೆಲವರು ನೀರಿನಲ್ಲಿ ಆಟವಾಡುವುದನ್ನು ಕಾಣಬಹುದಲ್ಲದೇ ಕೆಲವರು ಸಣ್ಣದಾಗಿ ಮೀನುಗಾರಿಕೆಯನ್ನೂ ಮಾಡುವುದನ್ನು ನೋಡಬಹುದಾಗಿದೆ. ಕೆಲ ವರ್ಷಗಳ ಹಿಂದೆ ಕೆರೆಯ ಕೆಳ ಭಾಗದಲ್ಲಿ ಶ್ರೀ ರಾಮಾನುಜರ ಭವ್ಯವಾದ ಮೂರ್ತಿಯನ್ನು ಸ್ಥಾಪಿಸಿದ್ದು ನೋಡಲು ನಯನ ಮನೋಹರವಾಗಿದೆ.

ಪ್ರವಾಸೋದ್ಯಮ ಇಲಾಖೆಯೂ ಜನರನ್ನು ಆಕರ್ಷಿಸುವಂತ ಪ್ರವಾಸಿ ತಾಣವನ್ನಾಗಿಸುವ ದೃಷ್ಟಿಯಿಂದ ಎರಡು ವರ್ಷದ ಹಿಂದೆ ಕಾರ್ತೀಕ ಮಾಸದ ಸಮಯದಲ್ಲಿ ಮೂರು ದಿನಗಳ ಕಾಲ ತೊಣ್ಣೂರು ಕೆರೆ ಉತ್ಸವ ನಡೆಸಿ ಕೆರೆಯ ಮಧ್ಯದಲ್ಲಿ ಉತ್ಸವದ ಸಮಯದಲ್ಲಿ ಏಕಕಾಲಕ್ಕೆ ಸುಮಾರು ಐನೂರು ಜನರು ಕುಳಿತುಕೊಳ್ಳಬಹುದಾದ ಬೃಹತ್ ವೇದಿಕೆ ಸಿದ್ಧಪಡಿಸಿ ಕೆರೆಯ ಸಮೀಪವೇ ಇರುವ ಬೆಟ್ಟಗುಡ್ಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ ಕೆರೆಗೆ ಗಂಗಾಪೂಜೆ ಮಾಡಿತ್ತು.

ಈ ಮೂರು ದಿನಗಳ ಕಾಲ ಕನ್ನಡದ ಪ್ರಖ್ಯಾತ ಗಾಯಕರು, ಸಿನೆಮಾ ನಟ, ನಟಿಯರು, ಜಾನಪದ ಕಲಾವಿದರು ಕೆರೆಯ ನಡುವೆ ನಿರ್ಮಿಸಿರುವ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವುದರ ಮೂಲಕ, ಕಲಾ ರಸಿಕರ ಮನ ತಣಿಸಿದ್ದನ್ನು ಸ್ಥಳಿಯರೂ ಇನ್ನೂ ಮೆಲುಕು ಹಾಕುತ್ತಾರೆ. ಆ ಸಮಯದಲ್ಲಿ ಮಾತ್ರವೇ ಸ್ಪೀಡ್ ಬೋಟ್ ಮತ್ತು ಇತರೇ ಸಾಹಸ ಮಯ ಜಲಕ್ರೀಡೆಗಳನ್ನು ಆಯೋಜಿಸಿದ್ದನ್ನು ಹಾಗೆಯೇ ಮುಂದುವರೆಸಿದ್ದರೆ ಉತ್ತಮ ಪ್ರವಾಸೀ ತಾಣವಾಗಿ ಮತ್ತಷ್ಟು ಜನರನ್ನು ಆಕರ್ಷಿಸುತ್ತಿತ್ತು.

ಬೆಂಗಳೂರಿನಿಂದ ಸುಮಾರು 130 ಕಿಮೀ ದೂರದಲ್ಲಿರುವ ಈ ಪ್ರದೇಶ ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದ್ದು ಬೆಳ್ಳಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಮೇಲುಕೋಟೆಯ ಚೆಲುವ ನಾರಾಯಣನನ್ನು ದರ್ಶನ ಮಾಡಿಕೊಂಡು ಅಲ್ಲಿಯ ಪ್ರಸಿದ್ಧ ಪುಳಿಯೋಗರೇ ಮತ್ತು ಸಕ್ಕರೇ ಪೊಂಗಲ್ ತಿಂದು ಅಲ್ಲಿಂದ ಸುಮಾರು 25 ಕಿಮೀ ದೂರದ ಕೆರೆ ತೊಂಡನೂರಿಗೆ ದೇವಸ್ಥಾನಗಳನ್ನೂ ಕೆರೆಯನ್ನೂ ನೋಡಿ ಇಲ್ಲಿನ ಸೌಂದರ್ಯವನ್ನು ಆಹ್ಲಾದಿಸಿ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿನ ಕಡೆಗೆ ಮರಳಬಹುದಾಗಿದೆ.

ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ತೊಂಡನೂರಿನ ಕೆರೆಯ ಸೊಬಗನ್ನು ಸವಿದು ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರಿ ಅಲ್ವೇ?

ಏನಂತೀರೀ?

2 thoughts on “ಕೆರೆ ತೊಣ್ಣೂರು/ತೊಂಡನೂರು ಕೆರೆ

  1. ಪ್ರವಾಸಿಗರು ದಯಮಾಡಿ ಸ್ಥಳದ ಪಾವಿತ್ರತೆ ಯನ್ನು ಕಾಪಾಡಿ
    ಜೈ ಶ್ರೀ ಕೃಷ್ಣ

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s